ಕತೆ: ಅವತಾರ
Team Udayavani, Mar 8, 2020, 5:51 AM IST
ದಿಲ್ಲಿಯ ಓಲ್ಡ್ ರಾಜಿಂದರ್ ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿಯ ನನ್ನ ರೂಮ್‌ನ ಬಾಲ್ಕನಿಗೆ ಬಂದು ಕುಳಿತಿದ್ದೇನೆ. ಏಳು ಗಂಟೆ ಆಗಿದೆ. ಇಲ್ಲಿಯ ಬೀದಿಗಳಿಗೆ ಇನ್ನೂ ಬೆಳಗಾಗಿಲ್ಲ. ಆಗುವುದಾದರೂ ಹೇಗೆ? ಅದು ಕೂಡ ನನ್ನಂತೆ ಎರಡು ಸ್ವೆಟರ್ ಹಾಕಿಕೊಂಡು, ಕಿವಿ ಮುಚ್ಚುವಂತೆ ಮಫ್ಲರ್ ಸುತ್ತಿಕೊಂಡು ಮಂಜಿನ ಹೊದಿಕೆಯೊಳಗಿಂದ ಮುಖ ಹೊರಕ್ಕೆ ಚಾಚಲು ಪ್ರಯತ್ನಿಸುತ್ತಿದೆ. ನಾನು ಎಂದಿನಂತೆ ಸಮಯಕ್ಕೆ ಸರಿಯಾಗಿ ಎದ್ದು ಶೋಭಾ ಮಾಯಿ ಕಳಿಸಿದ ಬಿಸಿಬಿಸಿ ಚಹಾದ ಗುಟುಕನ್ನು ಹೀರುತ್ತ ಸುರೇಶ್‌ರ ಕಾಲ್‌ಗಾಗಿ ಕಾಯುತ್ತಿದ್ದೇನೆ. ಅನುಕೂಲಕರ ಹವಾಮಾನದ ನನ್ನೂರು, ನಮ್ಮ ಮನೆ, ಗಂಡ, ಮಗ, ಅತ್ತೆ… ಎಲ್ಲರನ್ನೂ ಬಿಟ್ಟು ವಿಪರೀತ ಹವಾಮಾನದ ದೆಹಲಿಗೆ ಬಂದಿದ್ದಕ್ಕೆ ಕೆಲವೊಮ್ಮೆ ನನ್ನ ಮೇಲೆ ನನಗೇ ಕೋಪ ಬರುತ್ತದೆ. ಆದರೇನು ಮಾಡುವುದು? ನನ್ನ ವೃತ್ತಿ ಬದುಕಿಗೆ ಬೇಕಾದ ಸಿದ್ಧತೆ-ಮುಂದಾಲೋಚನೆಗಳನ್ನು ನಾನೇ ಮಾಡಿಕೊಳ್ಳದೆ, ಅನ್ಯರಿಂದ ನಿರೀಕ್ಷಿಸುವುದು ಸಾಧ್ಯವೆ - ಅದೂ ಈ ಸ್ಪರ್ಧಾತ್ಮಕ ಯುಗದಲ್ಲಿ!
ಚಹಾದ ಒಂದೊಂದು ಗುಟುಕಿನ ಜೊತೆಗೂ ಎಷ್ಟೊಂದು ನೆನಪುಗಳು! ಒಂದೆಡೆ ಪ್ರೊಮೋಷನ್ ತೆಗೆದುಕೊಂಡರೆ ಕಡ್ಡಾಯವಾಗಿ ಉತ್ತರಭಾರತದ ಕಡೆ ಹೋಗಲೇಬೇಕು ಎಂದು ಒತ್ತಡ ಹಾಕಿದ ಮೆನೇಜ್‌ಮೆಂಟ್. “ಇನ್ನೊಂದೆಡೆ ಖಂಡಿತವಾಗಿ ಹೋಗ್ತೀನೆ ಸರ್. ನಾನು ಯಾರಿಗೂ ಕಡಿಮೆಯಿಲ್ಲ’ ಎಂಬ ನನ್ನ ಹಮ್ಮು. ಅದರದೇ ಮುಂದುವರಿದ ರೂಪ ಎಂಬಂತೆ, ಮನೆಗೆ ಬಂದಾಗ, “ಪ್ರೊಮೋಷನ್ ಬೇಕು, ಟ್ರಾನ್ಸ್‌ಫರ್ ಬೇಡ ಎಂದರೆ ಹೇಗೆ?’ ಸುರೇಶ್‌ರ ಎದುರು ನಿಖರವಾದ ನನ್ನ ವಾದ. “ನಿನಗೆ ಈ ಮನೆ-ಕುಟುಂಬ ಮಕ್ಕಳು-ಗಂಡ ಎಲ್ಲ ಯಾಕೆ ಬೇಕಿತ್ತು. ಆಫೀಸನ್ನೇ ಫುಲ್‌ಟೈಮ್ ರೂಮೋ, ಪಿಜಿಯೋ ಮಾಡಿಕೊಳ್ಳಬಹುದಿತ್ತಲ್ಲ’- ಸುರೇಶ್‌ರಿಂದ ಅದೆಷ್ಟೋ ಸಾರಿ ಹೀಗೆ ಹೇಳಿಸಿಕೊಂಡಿದ್ದೂ ಇದೆ. ಇವತ್ತೂ ಸುರೇಶ್ ಹಾಗೇ ಹೇಳಬಹುದು ಎಂದುಕೊಂಡೆ. ಯಾಕೋ ತುಂಬಾ ಸಮಾಧಾನಿಯಂತೆ ಮಾತಿಗಿಳಿದರಾದರೂ, ಮತ್ತೆ ತಮ್ಮೊಳಗಿನ ಅಸಮಾಧಾನವನ್ನು ತಡೆದುಕೊಳ್ಳುವುದು ಅವರಿಗೆ ಸಾಧ್ಯವಾಗಲಿಲ್ಲ. “”ನೋಡು ಸೌಮ್ಯಾ, ಡೆಲ್ಲಿ ಅಂದರೆ ಏನ್ ತಮಾಷೆ ಅಂದುಕೊಂಡಿದ್ದೀಯಾ? ನಿನಗೆ ಹಿಂದಿ ಬೇರೆ ಸರಿಯಾಗಿ ಬರೋದಿಲ್ಲ. ನಮ್ಮ ಮಗ ಇನ್ನೂ ಮೂರನೆಯ ಕ್ಲಾಸ್‌ನಲ್ಲಿ ಓದುದ್ದಾನೆ. ಇವನು ನಿನ್ನನ್ನು ಬಿಟ್ಟು ಇರ್ತಾನಾ? ಇಂಟರ್‌ವ್ಯೂಗೆ ಹೋಗೋದೇ ಬೇಡ ಅಂದಿದ್ದಕ್ಕೆ, ಇಂಟರ್‌ವ್ಯೂಗೆ ಹೋಗಿಬಿಟ್ಟರೆ ಪ್ರೊಮೋಷನ್ ಆಗಿಬಿಟ್ಟಂತಾ ಅಂತ ನನ್ನ ಹತ್ರಾನೇ ಧಿಮಾಕ್ ಮಾಡಿದ್ದೆ. ನನ್ನದೋ ಸರಕಾರಿ ಕೆಲಸ. ಈ ಕೆಲಸ ಸಿಗಲಿಕ್ಕೆ ನಾನೆಷ್ಟು ಒದ್ದಾಟ ಮಾಡಿದ್ದೇನೆ ಅಂತ ನಿನಗೂ ಚೆನ್ನಾಗಿ ಗೊತ್ತಿದೆ. ಇದ್ದ ನನ್ನ ಕೆಲಸ ಬಿಟ್ಟು ಪಟಾಲಂ ಕಟ್ಟಿಕೊಂಡು ನಿನ್ನ ಬೆನ್ನು ಹತ್ತೋದು ನನಗಂತೂ ಸಾಧ್ಯವಿಲ್ಲ. ನಾನು ಡೆಲ್ಲಿಗೆ ಬಂದರೆ ಮಣ್ಣು ಮುಕ್ಕಬೇಕಷ್ಟೆ” ಅವರ ಕಿರಿಕಿರಿಗೆಲ್ಲ ಆದಷ್ಟು ಸಮಾಧಾನ ತಂದುಕೊಂಡು ಉತ್ತರಿಸಿದ್ದೆ.
“”ನೋಡಿ, ಸೋನು ನನಗಿಂತಲೂ ನಿಮ್ಮ ತಾಯಿಯನ್ನೇ ಹೆಚ್ಚು ಹಚ್ಚಿಕೊಂಡಿದ್ದಾನೆ. ಅವರ ಜೊತೆಯಲ್ಲೇ ಕಥೆ ಕೇಳ್ತಾ ಮಲಗೋದು. ಟ್ಯೂಷನ್‌ಗೆ ಪಕ್ಕದಮನೆ ಮಮತಾಮಯಿ ಆಂಟಿ ಇದ್ದಾಳೆ. ಬರೇ ಮೂರು ವರ್ಷ ತಾನೆ? ದಿಲ್ಲಿಯೇನು ವಿದೇಶದಲ್ಲಿದೆಯಾ? ಆಗಾಗ ನಾನೂ ಬರ್ತೇನೆ. ನೀವೂ ಬರಬಹುದು. ಮತ್ತೆ ನಮ್ಮೂರಿಗೇ ಟ್ರಾನ್ಸ್ ಫರ್ ಕೊಡ್ತೇವೆ ಅಂತ ಪ್ರಾಮಿಸ್ ಮಾಡಿದ್ದಾರೆ.”
ಇಷ್ಟಾದರೂ ಸುರೇಶ್‌ರಿಗೆ ಸಮಾಧಾನವಾದಂತೆ ಕಾಣಲಿಲ್ಲ. “”ನೋಡಿ, ಓಲ್ಡ್ ರಾಜಿಂದರ್ ನಗರದಲ್ಲಿ ಪಪ್ಪನ ಪರಿಚಯದ ಜನಾರ್ದನ ನಾಯಕ್ ಎಂಬವರ ಮನೆಯಿದೆ. ಅವರ ಹೆಂಡತಿ ಶೋಭಾಮಾಯಿ ಅಂತ. ಅವರು ಅಲ್ಲೇ ಕೇಟರಿಂಗ್ ಬಿಜಿನೆಸ್ ಮಾಡಿಕೊಂಡಿದ್ದಾರೆ. ನಮ್ಮಲ್ಲಿಂದ ಟ್ರಾನ್ಸ್‌ಫರ್ ಆಗಿ ಹೋದವರಿಗೆಲ್ಲ ಅವರು ಅನ್ನಪೂರ್ಣೇಶ್ವರಿ. ನಾನೂ ಮೊನ್ನೆ ಫೋನ್ ಮಾಡಿ ಅವರನ್ನು ಮಾತಾಡಿಸಿದ್ದೇನೆ. ಇರೋದಕ್ಕೆ ಎಲ್ಲ ವ್ಯವಸ್ಥೆ ಮಾಡ್ತೇನೆ ಅಂತ ಅವರ ಆಶ್ವಾಸನೆಯೂ ಸಿಕ್ಕಿದೆ”.
ದಿಲ್ಲಿಯಲ್ಲಿ ಮಾಯಿ ನನಗೆ ನನ್ನಮ್ಮನೇ ಮತ್ತೆ ಮತ್ತೆ ನೆನಪಾಗುವಷ್ಟು ಚೆನ್ನಾಗಿ ನೋಡಿಕೊಳ್ತಾ ಇದ್ದರು. ಅವರ ಅಡಿಗೆಯೂ ಹಾಗೆ, ಯಾವ ಅಡ್ಡ ಪರಿಣಾಮವೂ ಇಲ್ಲದ್ದು! ಆದರೆ, ಹೊರಗಿನ ಪರಿಸರದ ಬಗ್ಗೆ ಹೇಳುವುದಾದರೆ, ದಿಲ್ಲಿ ಯಾವತ್ತಿದ್ದರೂ ದಿಲ್ಲಿಯೇ. ಇಂಗ್ಲಿಷ್ ಗೊತ್ತಿದ್ದರೆ ಎಲ್ಲಿಯೂ ಬದುಕುಳಿಯಬಹುದು, ಜಗತ್ತನ್ನೇ ಆಳಬಹುದು, ಎನ್ನುವ ನನ್ನ ಉಡಾಫೆಯನ್ನು ಹುಸಿಮಾಡಿತು. ಒಮ್ಮೆ ಆಟೋದವನು, “ಪಚ್ಚೀಸ್ ಹುವಾ ಹೈ ಮೇಡಂ’ ಅಂದಾಗ, “ಪಚ್ಚೀಸ್-ಪಚಾಸ್’ನ ಗೊಂದಲದಲ್ಲಿದ್ದ ನಾನು, “ನಿಮಗೆ ನಾನು ಪಚಾಸ್ ಅಷ್ಟೇ ಕೊಡೋದು’ ಎಂದು ಅವನನ್ನು ತಬ್ಬಿಬ್ಟಾಗಿಸಿದ್ದೂ ಇದೆ. ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ.
ನಮ್ಮ ಆಫೀಸ್ ಇರೋದು ನೆಹರೂ ಪ್ಲೇಸ್‌ನಲ್ಲಿ. ಅದು ಓಲ್ಡ್ ರಾಜಿಂದರ್ ನಗರದಿಂದ ತುಂಬಾ ದೂರ. ಎರಡೆರಡು ಬಸ್ಸು ಹಿಡಿಯಬೇಕು. ನನಗೆ ತೊಂದರೆಯಾಗಬಾರದೆಂದು ದಿಲ್ಲಿಗೆ ಬಂದ ಮರುದಿನವೇ ಮಾಯಿ ನನಗೆ ಅದೇ ಅಪಾರ್ಟ್ ಮೆಂಟ್‌ನಲ್ಲಿರುವ ಕಾಮತ್ ಮತ್ತು ಬಾಯರಿಯವರ ಪರಿಚಯ ಮಾಡಿಕೊಟ್ಟರು. ಆರಂಭದ ಕೆಲವು ದಿನಗಳಲ್ಲಿ ಓಡಾಟಕ್ಕೆ ನನಗೆ ಕಾಮತರ ಸಹಾಯ ಬೇಕೆಂಬುದು ಮಾಯಿಯವರಿಗೆ ತಿಳಿದಿತ್ತು. ಶ್ರೀನಿವಾಸ ಕಾಮತರೆಂದರು, “”ಮೊದಲಿಗೆ ಬಸ್ ಹಿಡಿದು ಇಲ್ಲಿಂದ ದಫ¤ರ್‌ಗೆ ಹೋಗಬೇಕು. ದಫ¤ರ್ ಟರ್ಮಿನಲ್‌ನಿಂದ ಮತ್ತೂಂದು ಬಸ್ ಹತ್ತಿಕೊಂಡು ನೆಹರೂ ಪ್ಲೇಸ್‌ಗೆ ಹೋಗಬೇಕು. ದಫ¤ರ್‌ನಲ್ಲೇ ನಮ್ಮ ಬ್ಯಾಂಕ್ ಇರೋದ್ರಿಂದ ಅಲ್ಲಿಯವರೆಗೆ ನಾನು ಜೊತೆಗಿರ್ತೇನೆ. ಆಮೇಲೆ ನೀವು ನೆಹರೂ ಪ್ಲೇಸ್‌ಗೆ ಹೋಗಬಹುದು. ನಾನು ಕಂಡಕ್ಟರ್‌ಗೆ ಹೇಳ್ತೇನೆ. ಒಂದೆರಡು ದಿನ ಅಷ್ಟೆ. ದಿಲ್ಲಿಯ ಜನರು ತುಂಬಾ ಸ್ನೇಹಜೀವಿಗಳು. ನೋಡ್ತಾ ಇರಿ, ನಿಮಗಿದು ಪರವೂರು ಅನ್ನೋ ಭಾವನೆಯೇ ಉಳಿಯೋದಿಲ್ಲ”. ಹೌದು, ಕೆಲವೇ ದಿನಗಳಲ್ಲಿ ಕಾಮತರ ಮಾತು ಶತಃಸಿದ್ಧವಾಗಿದೆ.
ಬೆಳಗಿನ ಚಹಾ ಕುಡಿದು, ಇನ್ನೇನು ಉಪಹಾರವೂ ಬರುವ ಹೊತ್ತಾಯಿತು, ಅಂತೂ ಎದ್ದಾಗಿನಿಂದ ಕಾಯುತ್ತಿದ್ದ ಸುರೇಶ್‌ರ ಕಾಲ್ ಬಂತು. ನಾನೇ ಮಾಡಬಹುದಿತ್ತು. ಆದರೆ, ನನ್ನ ಯೋಚನಾ ಲಹರಿಯಲ್ಲಿ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಎಂದಿನಂತೆ ಉಭಯ ಕುಶಲೋಪರಿಯ ಜೊತೆಗೆ ಒಂದಿಷ್ಟು ಹಿತವಾದ ಮಾತುಗಳು, ಎಂದಿನಂತೆ ಅತ್ತೆಯವರ ಆಶೀರ್ವಾದದ ಆಪ್ಯಾಯಮಾನ ನುಡಿಗಳು, “”ಸೌಮ್ಯಾ, ನೀನೇನೂ ಬೇಜಾರು ಮಾಡಿಕೊಳ್ಳಬೇಡ. ಸೋನು ಚೆನ್ನಾಗಿದ್ದಾನೆ. ಸಂಡೆ ಅಲ್ವಾ. ಇನ್ನೂ ಏಳುವ ಲಕ್ಷಣ ಕಾಣಿಸ್ತಾ ಇಲ್ಲ. ಮಲಗಲಿ ಅಂತ ಬಿಟ್ಟಿದ್ದೇವೆ.” ಅವರ ಮಾತುಗಳು ಆಗ ತಾನೇ ಹೀರಿದ ಬಿಸಿಬಿಸಿ ಚಹಾಕ್ಕಿಂತಲೂ ಬೆಚ್ಚಗನಿಸಿತು. ಮೊಬೈಲ್ ಕೆಳಗಿಡುತ್ತಿದ್ದಂತೆ ನೆನಪುಗಳು ಮತ್ತೆ ಮರುಕಳಿಸಿದವು.
ಮೊದಲ ದಿನ ದಫ¤ರ್ ಟರ್ಮಿನಲ್‌ನಲ್ಲಿ ಬಸ್ ಇಳಿದು ನಾಲ್ಕು ಹೆಜ್ಜೆ ಇಡುತ್ತಿದ್ದಂತೆ ಮಂಗವೊಂದು ನನ್ನನ್ನೇ ಅಟ್ಟಿಸಿಕೊಂಡು ಬಂದ ಹಾಗಾಯಿತು. ಭಯಭೀತಳಾಗಿ ಬ್ಯಾಗನ್ನು ಗಟ್ಟಿಯಾಗಿ ಹಿಡಿದುಕೊಂಡು ಕಣ್ಣುಮುಚ್ಚಿಕೊಂಡಿದ್ದೆ. ದೊಡ್ಡಮ್ಮನ ಮಗಳು ಗಿರಿಜಕ್ಕನ ಮನೆಗೆ ಹೋದಾಗ ಅವರ ವಠಾರದಲ್ಲಿರುವ ಮನೆಯೊಂದರಲ್ಲಿ ಕಂಡ ಮಾರುತಿ ಪ್ರತಾಪ ಕಣ್ಣಿಗೆ ಕಟ್ಟಿದಂತಾಯಿತು. ಮಂಗವೊಂದು ನಿರ್ಭಯವಾಗಿ ಅಡಿಗೆಕೋಣೆಗೆ ಹೋಗಿ ಫ್ರಿಡ್ಜ್ ಬಾಗಿಲು ತೆರೆದು ಹಾಲು ಕುಡಿದು, ಮೊಸರು ಚೆಲ್ಲಿ ಟೇಬಲ್ ಮೇಲಿಟ್ಟ ಬಾಳೆಹಣ್ಣುಗಳನ್ನು ಎತ್ತಿಕೊಂಡು ಹೋಯಿತು. ಸ್ವಲ್ಪ ಹೊತ್ತು ಅಸಹಾಯಕಳಾಗಿ ನಿಂತ ಆ ಹೆಂಗಸು ಹೊರ ಜಗುಲಿಯ ಮೂಲೆಯಲ್ಲಿ ಕುಳಿತು ಮಗ್ಗಿ ಬಾಯಿಪಾಠ ಮಾಡುತ್ತಿದ್ದ ಮಗಳ ಜುಟ್ಟ ಹಿಡಿದೆಳೆದು ಬೆನ್ನಿಗೆ ರಪರಪ ಅಂತ ನಾಲ್ಕು ಬಾರಿಸಿದಳು. ನಾನು ಗಿರಿಜಕ್ಕನ ಮುಖ ನೋಡಿದೆ. ಮಧ್ಯಾಹ್ನದ ಹೊತ್ತಿಗೆ ಬಾಗಿಲು ತೆರೆದು ಇಡುವ ಹಾಗೇ ಇಲ್ಲ. ಹೆದರಿಸಿದರೆ ನಮ್ಮನ್ನೇ ಅಟ್ಟಿಸಿಕೊಂಡು ಬರ್ತದೆ. ಇದೊಂದು ಮಂಗ ಹೀಗೆ… ಎಂದು ಆ ಮಂಗನ ಉಪಟಳದ ಒಂದೊಂದೇ ಕತೆ ಹೇಳತೊಡಗಿದ್ದಳು.
ಕಾಮತ್‌ರು ನಗುತ್ತ ಮೇಡಂ, “”ಇಲ್ಲಿ ಮಂಗಗಳು ಸಾಕಷ್ಟಿವೆ. ಆದರೆ, ಅವು ಯಾವುವೂ ಇಲ್ಲಿಗೆ ಬರೋದಿಲ್ಲ. ಈ ಭಜರಂಗಿ ನಿಮ್ಮ ಬ್ಯಾಗ್‌ನಲ್ಲಿ ಕಾಣಿಸ್ತಾ ಇರುವ ಬಾಳೆಹಣ್ಣು ಕಂಡು ಓಡಿಬಂದಿದೆ. ನೋಡಿ ಆ ಆಲದಮರದ ಮೇಲೆ ಲೆಕ್ಕವಿಲ್ಲದಷ್ಟು ಮಂಗಗಳಿವೆಯಲ್ವಾ, ಅವುಗಳಿಗೆ ಹೋಲಿಸಿದರೆ, ಈ ಭಜರಂಗಿ ಬಹಳ ಪಾಪದವನು. ಓ ಅಲ್ಲೊಂದು ಚಿಕ್ಕ ಹನುಮಾನ್ ಮಂದಿರ ಕಾಣಿಸ್ತಾ ಇದೆಯಲ್ವಾ, ಅಲ್ಲಿ ಇರ್ತಾನೆ. ದೇವರಿಗೆ ಕೈಮುಗಿದು ಪ್ರದಕ್ಷಿಣೆ ಹಾಕುವವರು ಈ ಹನುಮಾನಜೀಗೂ ಭಕ್ತಿಪೂರ್ವಕವಾಗಿ ತಲೆಬಾಗಿ ಹೋಗುವುದನ್ನು ನಾನೇ ಕಂಡಿದ್ದೇನೆ. ಹಾಗಂತ ಆ ಮಂಗಗಳ ಸಹವಾಸ ಇವನಿಗಿಲ್ಲ.”
ದಿಲ್ಲಿಯಲ್ಲಿ ಕೋತಿಗಳು ಇರಲಿಕ್ಕಿಲ್ಲ, ಕೋತಿಗಳಿರುವುದು ನಮ್ಮೂರಲ್ಲಿ ಮಾತ್ರ ಎಂದುಕೊಂಡಿದ್ದೆ. ಅದಕ್ಕೇ ಹೇಳ್ಳೋದು ದೇಶ ಸುತ್ತಬೇಕು, ಕೋಶ ಓದಬೇಕು, ಅನ್ನೋದು ಸುಳ್ಳಲ್ಲ. ಇಂದು ಗಿರಿಜಕ್ಕನ ಪಕ್ಕದ ಮನೆಯಲ್ಲಿ ಅಂದು ನಡೆದ ಘಟನೆಯನ್ನು ನೆನಪು ಮಾಡಿಕೊಂಡಾಗ ಭಜರಂಗಿ ಬೇರೆಯೇ ಆಗಿ ಕಂಡ. ನನಗಾಗಿ ಇಟ್ಟುಕೊಂಡ ಬಾಳೆಹಣ್ಣನ್ನು ಅದರ ಕೈಗಿತ್ತು ಮುಂದೆ ನಡೆದೆ. ಅದೂ ಅದರ ಪಾಡಿಗೆ ಹೋಯಿತು. ನೆಹರೂ ಪ್ಲೇಸ್‌ಗೆ ಹೋಗುವ ಬಸ್ ಹತ್ತಿದೆ. ಕಾಮತರು ಕಂಡಕ್ಟರ್ ಜೊತೆ ಮಾತಾಡಿ ಎಲ್ಲ ವ್ಯವಸ್ಥೆ ಮಾಡಿಕೊಟ್ಟರು. ಅದರಿಂದಾಗಿ ಅಪರಿಚಿತ ಪ್ರದೇಶದಲ್ಲಿ ಎಲ್ಲಿ ಇಳಿಯುವುದಪ್ಪ ಎಂಬ ತಲೆಬಿಸಿ ತಪ್ಪಿತು.
ಮರಕೋತಿ ಆಡುತ್ತ ಜೀಕುತ್ತಿರುವ ಮಂಗಗಳನ್ನು ಪ್ರತಿದಿನವೂ ದೂರದಿಂದ ನೋಡುತ್ತಿದ್ದೆ. ಆದರೆ, ಬಾಳೆಹಣ್ಣಿಗಾಗಿ ಬೆನ್ನಟ್ಟಿದ ಭಜರಂಗಿ ನನಗೆ ಹತ್ತಿರವಾಗಿದ್ದ. ನನ್ನೊಡನೆ ನಿತ್ಯ ಸಂಚಾರಿಗಳಾಗಿರುವ ಮುಗುಳುನಗುವ ಹಲವು ಮುಖಗಳನ್ನು ಅಲ್ಲಿ ದಿನವೂ ಕಾಣುತ್ತಿದ್ದೆ. ಒಂದು ದಿನವಂತೂ ಮಹಾನುಭಾವನೊಬ್ಬ ಒಂದು ಟೆಂಪೋ ತುಂಬ ಬಾಳೆಹಣ್ಣು ತಂದು ಆ ಮಂಗಗಳಿಗೆಲ್ಲ ತಿನ್ನಲು ಪ್ರೇರೇಪಿಸುತ್ತಿದ್ದ. ಮೊದಮೊದಲು ಸಂದೇಹದಿಂದ, ಗುಮಾನಿಯಿಂದ ಕೆಳಗಿಳಿದು ಬಂದ ಮಂಗಗಳು ಮತ್ತೆ ಎಲ್ಲಿಲ್ಲದ ಧೈರ್ಯದಿಂದ ಔತಣಕ್ಕೆ ಬಂದದ್ದಂತೂ ನನ್ನ ಪಾಲಿಗೆ ಅವಿಸ್ಮರಣೀಯ. ಈ ಭಜರಂಗಿಯನ್ನು ಆ ಮಂಗಗಳು ತಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತಿರಲಿಲ್ಲವೋ ಅಥವಾ ಆ ಮಂಗಗಳು ತಮ್ಮ ಪಾಡಿಗೆ ತಾವು ಇರುತ್ತಿದ್ದವೋ, ನನಗಂತೂ ತಿಳಿದಿರಲಿಲ್ಲ. ಆ ಕ್ಷಣ ಭಜರಂಗಿ ಬಾಯಲ್ಲೊಂದು, ಎರಡೂ ಕೈಗಳಲ್ಲಿ ಒಂದೊಂದು ಹಿಡಿದು ನಮ್ಮನೆಲ್ಲ ನೋಡಿಯೂ ನೋಡದಂತೆ ಹೋದ ಅವನ ಫೋಟೋ ಈಗಲೂ ನನ್ನ ಮೊಬೈಲ್‌ನಲ್ಲಿ ಹಾಗೇ ಇದೆ.
ಬಸ್ ಹೊರಡುತ್ತಿದ್ದಂತೆ ಮನಸ್ಸು ನಮ್ಮೂರಿನ ದಾಸಪ್ಪನವರ ರೈಸ್‌ಮಿಲ್ ಕಡೆಗೆ ಹೋಯಿತು. ಮಿಲ್ ಒಳಗಡೆಯ ಗೋದಾಮಿನಲ್ಲಂತೂ ಮಂಗಗಳಿಗಾಗಿಯೇ ತೆರೆದಿಟ್ಟ ಅಕ್ಕಿಮೂಟೆಗಳು. ಎಗ್ಗುಮುಗ್ಗಿಲ್ಲದೆ ಒಳ -ಹೊರಗೆ ಸುತ್ತಾಡುವ ಮಂಗಗಳು. ಎಷ್ಟು ಬೇಕಾದರೂ ತಿನ್ನಬಹುದು ಎಷ್ಟು ಬೇಕಾದರೂ ಚೆಲ್ಲಬಹುದು. ಕೆಲಸದವರ್ಯಾರೂ ಏನನ್ನೂ ಹೇಳುವಂತಿಲ್ಲ. ಯಾರಾದರೂ ದಾಸಪ್ಪನವರನ್ನು ಕೇಳಿದರೆ, ಅವರ ಉತ್ತರವಿಷ್ಟೇ- “ಈ ಆಂಜನೇಯ ದೇವರ ಕೃಪೆಯಿಂದಾಗಿಯೇ ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದು. ನಮ್ಮ ಮಕ್ಕಳಿಗೂ ಈ ಸಂಪ್ರದಾಯವನ್ನು ಮುಂದುವರಿಸಲಿಕ್ಕೆ ಹೇಳಿದ್ದೇನೆ…’
ನಮ್ಮ ಅಪ್ಪಯ್ಯ ಕೂಡ ಹೇಳ್ತಾ ಇದ್ದರು, ಗದ್ದೆ ಕೊಯ್ಲು ಆದ ಮೇಲೆ ಈ ದಾಸಪ್ಪನವರ ಅಮ್ಮ ಅವರಿವರ ಗದ್ದೆಯಲ್ಲಿ ಬಿದ್ದ ಭತ್ತ ಗೋರಿಕೊಂಡು ಬಂದು ಮಗನನ್ನು ಸಾಕಿದ್ದಳಂತೆ. “ಮೇಡಂ, ನೆಹರೂ ಪ್ಲೇಸ್…’ ಕಂಡಕ್ಟರ್ ಧ್ವನಿ, ನನ್ನ ಯೋಚನಾ ಲಹರಿಗೆ ಬ್ರೇಕ್ ಹಾಕಿತು.
ನನ್ನ ಮೊಬೈಲ್‌ನಲ್ಲಿದ್ದ ಆ ಫೋಟೊವನ್ನು ಮತ್ತೂಮ್ಮೆ ನೋಡಲು ಹೋದಾಗ ಸಿಕ್ಕಿದ್ದು, ಬಣ್ಣದ ಭಜರಂಗಿಯ ಮತ್ತೂಂದು ಮೋಹಕ ಭಂಗಿ. ಅದನ್ನು ಸೋನುಗೆ ಕಳಿಸುವಾಗ ನಾನದಕ್ಕೆ ಕೊಟ್ಟ ಶೀರ್ಷಿಕೆ- ಕಲರಫುಲ್ ಹೋಲಿ ವಿಥ್ ಭಜರಂಗಿ. ಅದನ್ನು ಅವನೂ ತುಂಬ ಇಷ್ಟಪಟ್ಟಿದ್ದನಂತೆ. ದಿಲ್ಲಿಯ ಹೋಳಿಯ ಸಡಗರವನ್ನು ಮರೆಯಲು ಸಾಧ್ಯವೇ? ಮೈತುಂಬ ಬಣ್ಣ ಎರಚುತ್ತಾರೇನೋ ಎಂದು ಹೆದರಿದ್ದ ನನಗೆ, ನನ್ನ ಸಹೋದ್ಯೋಗಿಗಳು ಹತ್ತಿರ ಬಂದಾಗ ಆದ ನಡುಕ ಅಷ್ಟಿಷ್ಟಲ್ಲ, ಆದರೆ ಅಲ್ಲಿ ಆದದ್ದೇ ಬೇರೆ. ಅವರೆಲ್ಲರ ನಡುವೆ ಕೈತ್ವಾಸ್ ಸರ್ ಒಬ್ಬರು ಮುಂದೆ ಬಂದು ಬೆರಳ ತುದಿಯಿಂದ ನನ್ನ ಹಣೆಯಮೇಲೆ ಒಂದು ಬೊಟ್ಟು ಗುಲಾಲು ಹಚ್ಚಿ ಹೋದರು. ಆಫೀಸಿನಿಂದ ಹಿಂದಿರುಗಿ ಬರುವಾಗಲೂ ದಾರಿಯಲ್ಲಿ ಸಿಗುವ ಪರಿಚಿತರಲ್ಲಿ ಯಾರಾದರೂ ಬಣ್ಣ ಹಾಕಿಬಿಡುತ್ತಾರೇನೋ ಎಂದು ಮತ್ತದೇ ರೀತಿಯ ಭಯ ಕಾಡಿತ್ತಾದರೂ, ಮನೆಗೆ ಹೋಗುತ್ತಿದ್ದೆನಲ್ಲ ಎಂಬ ಸಮಾಧಾನವೂ ಇತ್ತು. ನನ್ನ ಪಾಲಿಗೆ ಅಂತಹ ಪರಿಸ್ಥಿತಿ ಒದಗಿ ಬರಲಿಲ್ಲ, ಆ ಮಾತು ಬೇರೆ.
ನನ್ನ ಮೊಬೈಲ್‌ನಲ್ಲಿ ಸೆರೆಹಿಡಿದ ಈ ದೃಶ್ಯ! ಹಣೆಯ ಮೇಲೆ ದೊಡ್ಡ ತಿಲಕ, ಮೈತುಂಬ ಕಾಮನಬಿಲ್ಲಿನಲ್ಲಿರುವ ಬಣ್ಣಗಳನ್ನೂ ಮೀರಿಸುವ ಬಣ್ಣಗಳನ್ನು ಹಚ್ಚಿಸಿಕೊಂಡು, ಆಜ್ ತೋ ಹೋಲಿ ಹೈ ಎಂಬಂತೆ ಗುಡಿಯ ಅಕ್ಕಪಕ್ಕ ನಿಂತಿದ್ದವರೊಂದಿಗೆ ಪೋಸ್ ಕೊಟ್ಟ ಭಜರಂಗಿಯನ್ನು ಕಂಡು ನಗು ತಡೆಯಲಾಗಲಿಲ್ಲ.
ಈಗಷ್ಟೇ ನಡೆದ ಘಟನೆಯೋ ಎಂಬಂತೆ ಮತ್ತೂಮ್ಮೆ ಜೋರಾಗಿ ನಕ್ಕುಬಿಟ್ಟೆ! ಹೀಗೆ ನಗು ಬರುವುದಕ್ಕೆ ಬೇರೆ ಕಾರಣವೂ ಇದೆ. ಉಳಿದ ದಿನಗಳಲ್ಲೆಲ್ಲ ಅಡ್ಡ ಟೋಪಿ ಧರಿಸಿಕೊಂಡು ಬಲು ವಿಚಿತ್ರವಾಗಿ ಕಾಣುವ ನಮ್ಮ ಆಫೀಸ್ ಅಟೆಂಡರ್ ಕಾಲಿಚರಣ್ ಹೋಳಿಯ ಬಣ್ಣದಲ್ಲಿ ಥೇಟ್ ಭಜರಂಗಿಯ ಇನ್ನೊಬ್ಬ ಭಾಯಿಯ ಹಾಗೇ ಕಾಣುತ್ತಿದ್ದ. ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ. ಆಫೀಸ್‌ನಲ್ಲಿ ಅವನು ಮಾಡುವ ಕಪಿಚೇಷ್ಟೆಗೆ ಹೆಚ್ಚಿನವರಿಂದ ಉಗಿಸಿಕೊಳ್ಳುವವನು, ಹತ್ತು ಬಾರಿ ಹೇಳಿದರೂ ಒಂದು ಫೈಲ್ ತಂದು ಟೇಬಲ್ ಮೇಲೆ ಇಡದವನು, ಇನ್ನೇನು ನಾವೇ ಹೋಗಿ ತರಬೇಕೆನ್ನುವಷ್ಟರಲ್ಲಿ ರಪಕ್ ಅಂತ ತಂದು ಟೇಬಲ್ ಮೇಲೆ ಕುಕ್ಕುವವನು, ಹೋಳಿಹಬ್ಬದ ಸ್ಪೆಷಲ್ ಅಂತ ಅಗರವಾಲ್ ಸ್ವೀಟ್ಸ್ ತಂದು ಪ್ರೀತಿಯಿಂದ ನಮಗೆಲ್ಲ ಹಂಚಿದ್ದ. ಅಷ್ಟೇ ಅಲ್ಲ, ಈ ಮೇಡಂರಿಗೆ ಮಾತ್ರ ಬಣ್ಣ ಹಚ್ಚಬೇಡಿ. ಅವರಿಗೆ ಅಲರ್ಜಿಯಾಗ್ತದೆ… ಎಂದು ಬಂದವರಿಗೆಲ್ಲ ಹೇಳಿದ್ದನ್ನು ಮರೆಯಲಿಕ್ಕುಂಟಾ?
ದಫ¤ರ್ ನಾರ್ಥ್ಬ್ಲಾಕ್‌ನಲ್ಲಿದೆ. ಗೃಹ ಮಂತ್ರಾಲಯವೂ ಅಲ್ಲೇ ಇದೆ. ಅಲ್ಲಿರುವ ಮಂಗಗಳ ಹಾವಳಿ ಆ ಮಂತ್ರಾಲಯವನ್ನೂ ಬಿಟ್ಟಿರಲಿಲ್ಲ. ಒಂದೆರಡು ಮಂಗಗಳು ಒಂದು ದಿನ ರ್ಯಾಕ್ ಮೇಲೆ ಹಾರಿ, ಅಲ್ಲಿಯ ಕಡತಗಳನ್ನೆಲ್ಲ ಕೆಡವಿದ್ದು ಪತ್ರಿಕೆಯ ಪ್ರಧಾನ ಸುದ್ದಿಯಾಗಿತ್ತು. ಆಕಸ್ಮಿಕವಾಗಿ ಬಾಯರಿಯವರಿಗೆ ದಫ¤ರದ ಕಡೆಗೆ ಬರುವುದಕ್ಕಿತ್ತಂತೆ. ರಜಾದಿನವಾಗಿದ್ದರಿಂದ ಪರಿಚಿತರೊಬ್ಬರನ್ನು ಕಾಣಲು ಅಲ್ಲಿಗೆ ಹೋಗಿದ್ದರಂತೆ. ಬಸ್ ಇಳಿಯುತ್ತದ್ದಂತೆ ಕಂಡ ದೃಶ್ಯದಿಂದ ಅವರು ಬಸವಳಿದು ಬೀಳುವುದೊಂದೇ ಬಾಕಿಯಂತೆ. ದಿಲ್ಲಿ ಆಡಳಿತ ಅಲ್ಲಿರುವ ನೂರಾರು ಮಂಗಗಳನ್ನು ಆ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸುವ ಆದೇಶ ಹೊರಡಿಸಿತ್ತಂತೆ. ಆ ಮಂಗಗಳ ಕಿರುಚಾಟ, ದೊಡ್ಡ ದೊಡ್ಡ ಬಲೆಗಳಿಂದ ತಪ್ಪಿಸಿಕೊಳ್ಳಲು ಅವುಗಳು ಮಾಡುತ್ತಿದ್ದ ಪ್ರಯತ್ನ, ಆಗ ಅದಕ್ಕೆ ಬೀಳುತ್ತಿದ್ದ ಏಟು… ಅಬ್ಬಬ್ಟಾ, ನನ್ನಿಂದ ನೋಡಲಿಕ್ಕಾಗಲಿಲ್ಲ… ಎಂದು ಬಾಯರಿಯವರು ಕಣ್ಣಿಗೆ ಕಟ್ಟುವಂತೆ ವಿವರಿಸತೊಡಗಿದರು. ನಾನು ಒಮ್ಮೆಲೆ ಭಜರಂಗಿಯ ಬಗ್ಗೆ ಕೇಳಿದೆ. ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು. ಮಾರನೆಯ ದಿನ ಯಥಾಪ್ರಕಾರ ಆಫೀಸಿಗೆ ಹೋಗುವಾಗ ಸುತ್ತೆಲ್ಲ ಕಣ್ಣು ಹಾಯಿಸಿದೆ. ಆದರವನು ಅಲ್ಲೆಲ್ಲೂ ಕಾಣಿಸಲಿಲ್ಲ. ಅವನಿಗಾಗಿ ತಂದ ಬಾಳೆಹಣ್ಣು ಹಾಗೆಯೇ ಉಳಿಯಿತು. ಹೇಗೋ ಆಫೀಸ್ ತಲುಪಿದೆ. ಅಂದಿನ ಕೆಲಸಪೂರ್ತಿ ಮಾಡಲಾಗದೆ ಒ¨ªಾಡಿದೆ. ಸಂಜೆ ಮತ್ತದೇ ದಾರಿಯಿಂದ ಹಿಂದಿರುಗಿ ಬರುವಾಗ ಮೈಯೆಲ್ಲ ಕಣ್ಣಾಗಿಸಿಕೊಂಡು ಹುಡುಕಿದೆ. ಆದರೆ, ಅವನು ಎಲ್ಲೆಲ್ಲೂ ಕಾಣಿಸಲಿಲ್ಲ. ಬಹುಶಃ ಅವನನ್ನೂ ಎತ್ತಿಕೊಂಡು ಹೋಗಿರಬೇಕು. ಬಾಯರಿಯವರು ಹೇಳಿದ್ದು ನೆನಪಾಗಿ ಅವನನ್ನು ಹುಡುಕುವುದು ವ್ಯರ್ಥವೆಂದು ತೀರ್ಮಾನಿಸಿದೆ. ಜನಸಂದಣಿಯ ನಡುವೆ ಎಲ್ಲೋ ಅವನನ್ನು ಕಂಡ ಹಾಗೆ ಆಯಿತು. ಛೆ! ಅದು ನನ್ನ ಭ್ರಮೆಯೆಂದು ಮಾಮೂಲಾಗಿ ಬರುವ ಬಸ್ ಹತ್ತಿ ಕುಳಿತೆ. ಸಂಜೆ ಯಾವುದರಲ್ಲೂ ಆಸಕ್ತಿಯಿಲ್ಲದವರಂತೆ ಸುಮ್ಮನಿ¨ªೆ. ರಾತ್ರಿಯೂ ಅಷ್ಟೆ , ನಿದ್ರೆ ಬಾರದೆ ಹೊರಳಾಡಿದೆ. ಸೋನುವನ್ನು ಬಿಟ್ಟುಬಂದಾಗ ಪಟ್ಟ ಮನದಾಳದ ವ್ಯಥೆ ಮತ್ತೆ ಮರುಕಳಿಸಿದಂತಾಯ್ತು.
ಮರುದಿನ ನಾನು ಮತ್ತು ಕಾಮತರು ಹೊರಗಡೆ ಬರುವ ಸಮಯ ಒಂದೇ ಆಗಿತ್ತು. ಸ್ವಲ್ಪ ದೂರ ಬರುವಷ್ಟರಲ್ಲಿ ನನ್ನ ಬುತ್ತಿಚೀಲ ಕಂಡವರೆ, ಇವತ್ತು ಭಜರಂಗಿಗೆ ಬಾಳೆಹಣ್ಣು ತೆಗೆದುಕೊಳ್ಳಲಿಲ್ವಾ? ಎಂದು ಕೇಳಿದರು. ಗಾಯದ ಮೇಲೆ ಬರೆಯಿಟ್ಟಂಥ ಅವರ ಅಪಹಾಸ್ಯದ ಮಾತುಗಳನ್ನು ಕೇಳಿ ಬೇಸರವಾಯಿತಾದರೂ ನುಂಗಿಕೊಂಡು, “ಈಗ ಮಂಗಗಳು ಅಲ್ಲಿ ಇಲ್ಲವಲ್ಲಾ’ ಎಂದೆ. ಅದಕ್ಕವರ ಉತ್ತರ ನನ್ನನ್ನು ಪಕ್ಕದಲ್ಲಿದ್ದ ಅಂಗಡಿಯಲ್ಲಿ ನೇತುಹಾಕಿದ ಬಾಳೆಗೊನೆ ಕಡೆಗೆ ಹೊರಳುವಂತೆ ಮಾಡಿತು. ಮಂಗಗಳನ್ನೆಲ್ಲ ಸ್ಥಳಾಂತರಿಸಿದ್ದು ನಿಜ, ಆದರೆ ಭಜರಂಗಿಯೊಂದನ್ನು ಬಿಟ್ಟು!
“ಆಂ?!’ ಅರಿವಿಲ್ಲದೆ ಹೊರಬಂದ ಉದ್ಗಾರವಿದು. ನನ್ನ ಕಡೆ ಗಮನಕೊಡದೆ ಅವರು ತಮ್ಮ ಮಾತುಗಳನ್ನು ಮುಂದುವರಿಸಿದರು, ನೋಡಿ, ಅವನು ಆ ಏರಿಯಾದವರಿಗೆಲ್ಲ ಹನುಮಾನ್‌ಜಿà ಅವತಾರ. ಅವನನ್ನು ಬಿಟ್ಟಿರಲಿಕ್ಕೆ ಅಲ್ಲಿರುವ ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿಯೇ ಆ ದೇವಸ್ಥಾನದ ಕಮಿಟಿಯವರು ಎರಡು ದಿನ ಅವನನ್ನು ಅಡಗಿಸಿಟ್ಟುಕೊಂಡು, ಆಮೇಲೆ ಅಧಿಕಾರಿಗಳಿಗೆ ಅರ್ಜಿ ಕೊಟ್ಟು, ಅವರಿಗೆ ದುಂಬಾಲುಬಿದ್ದು ಅವನನ್ನು ಉಳಿಸಿಕೊಂಡಿದ್ದಾರಂತೆ.
ದಫ¤ರ್‌ನಲ್ಲಿ ಬಸ್ ಇಳಿದವಳೇ ಕೈಯಲ್ಲಿ ಬಾಳೆಹಣ್ಣು ಹಿಡಿದು ಸುತ್ತೆಲ್ಲ ಕಣ್ಣು ಹಾಯಿಸಿದೆ. ಅನತಿದೂರದ ಗುಡಿಯ ಗಂಟೆನಾದ ಕೇಳಿ ಅತ್ತ ಹೊರಳಿದೆ. ಹೋಗಿ ದೇವರಿಗೆ ಕೈಮುಗಿದು ಬರೋಣವೆಂದು ಅಲ್ಲಿಯವರೆಗೆ ಹೋದೆ. ಹನುಮಂತನ ಅವತಾರವೆಂಬಂತೆ ಭಕ್ತರ ನಡುವೆ ಅವನು ವಿರಾಜಮಾನನಾಗಿದ್ದ. ನನ್ನನ್ನು ಕಂಡೊಡನೆ ಪುಟ್ಟ ಮಗುವಿನಂತೆ ಬಾಳೆಹಣ್ಣಿಗಾಗಿ ಕೈಚಾಚಿದ. ನೆಹರೂ ಪ್ಲೇಸ್‌ಗೆ ಹೋಗುವ ದೈನಂದಿನ ನನ್ನ ಬಸ್ ಹೊರಡುವುದರಲ್ಲಿತ್ತು. ಬಾಳೆಹಣ್ಣನ್ನು ಅವನ ಕೈಯೊಳಗಿಟ್ಟು ಓಡೋಡಿ ಬಂದು ಬಸ್ ಹತ್ತಿದೆ. ಕಿಟಕಿಯ ಪಕ್ಕದಲ್ಲಿಯೇ ಸೀಟ್ ಸಿಕ್ಕಿತು. ಕೈಯೊಳಗೇತಕೆ ಬಾಯೊಳಗಿಟ್ಟರೆ… ಎಂಬಂತೆ ಕಿಟಕಿಯ ಕಿಂಡಿಯಿಂದಲೇ ಹಣ್ಣಿನ ಸಿಪ್ಪೆ ಸುಲಿಯುತ್ತಿದ್ದ ಭಜರಂಗಿಯನ್ನು ನೋಡುತ್ತಿದ್ದಂತೆ ಸೋನುವೇ ಅಲ್ಲಿ ನಿಂತಿರುವಂತೆ ಕಾಣಿಸಿತು. ಇತ್ತ ಟಾಟಾ ಮಾಡಲೆಂದು ಕೈ ಎತ್ತುವುದಕ್ಕೂ ಅತ್ತ ಕಂಡಕ್ಟರ್ ಟಿಕೆಟ್ ಹಿಡಿದು ಕೈ ಚಾಚುವುದಕ್ಕೂ ಸರಿಯಾಯ್ತು.
ನಮ್ರತಾ ಬಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.