ಕತೆ: ಸಹಯಾತ್ರಿ


Team Udayavani, Mar 22, 2020, 4:37 AM IST

ಕತೆ: ಸಹಯಾತ್ರಿ

ಕಳೆದ ತಿಂಗಳು ಅಣ್ಣನ ಮಗಳು ವನಿತಾಳ ಮದುವೆಗೆಂದು ನಾನು ಕುಮಟೆಗೆ ಹೋಗಿ ಬರಬೇಕಾಯಿತು. ಮದುವೆ ಅಕಸ್ಮಾತ್‌ ನಿಶ್ಚಯವಾದ್ದರಿಂದ ಮೊದಲೇ ಟಿಕೆಟ್‌ ಬುಕ್‌ ಮಾಡುವ ಹಾಗಿರಲಿಲ್ಲ. ಕಾರ್ಯಕ್ರಮ ನಿಶ್ಚಯವಾಗುವ ಹೊತ್ತಿಗೆ ಕೊಂಕಣ ರೈಲಿನ ಎಲ್ಲ ಗಾಡಿಗಳು ಫ‌ುಲ್‌ ಆಗಿದ್ದವು. ಕೊನೆಯ ಗಳಿಗೆಯಲ್ಲಿ ಖಾಸಗಿ ಬಸ್ಸೊಂದರಲ್ಲಿ ಮಗ ಒನ್‌ಲಾೖನ್‌ ಬುಕ್‌ ಮಾಡಿಕೊಟ್ಟ.

ಮುಂಬಯಿಯ ಗೋರೆಗಾಂವ್‌ನಲ್ಲಿ ಬಸ್ಸು ಹತ್ತಿದ ನಾನು ಕಿಟಕಿ ಬದಿಯ ಖಾಲಿಯಿದ್ದ ಹದಿನಾಲ್ಕನೆಯ ನಂಬರಿನ ಸೀಟಿನಲ್ಲಿ ಯಾರು ಬರುತ್ತಾರೋ ಎಂದು ಕಾಯುತ್ತಿದ್ದೆ. ಕೆಲವೇ ಸಮಯದಲ್ಲಿ ಅಂಧೇರಿಯಿಂದ ಹತ್ತಿದ ಗೃಹಸ್ಥರೊಬ್ಬರು ಆ ಸೀಟಿಗೆ ಬಂದರು. ಬರುವಾಗಲೇ ಎಲ್ಲರ ಪರಿಚಯವಿದ್ದವರಂತೆ ಮುಗುಳು ನಗುತ್ತಿದ್ದರು. ಬಹುಶಃ ಆಗಾಗ ಇಂಥ ಪ್ರಯಾಣ ಮಾಡುವವರಿರಬೇಕು. ಅವರನ್ನು ಬಸ್ಸಿಗೆ ಹತ್ತಿಸಿಕೊಡಲು ಬಂದಿದ್ದ ಯುವಕ ಬಸ್ಸು ಬಿಡುತ್ತಲಿದ್ದಂತೆ “”ಶಿರಾಲಿ ಬಿಟ್ಟು ಬೇರೆಲ್ಲೂ ಇಳಿಯಬೇಡಿ, ಜಾಗ್ರತೆ!” ಎಂದು ಕೊಂಕಣಿಯಲ್ಲಿ ಕೂಗಿ ಹೇಳಿದ್ದ. ಬಸ್ಸಿನ ಡ್ರೈವರ ಕಂಡಕ್ಟರರ ಬಳಿಯೂ ಈ ಬಗ್ಗೆ ಅರಿಕೆ ಮಾಡಿಕೊಂಡಂತಿತ್ತು. ಸಮಯವಿದ್ದರೆ ನನ್ನ ಬಳಿಗೂ ಬಂದು ನನ್ನ ಭಾವೀ ಸಹಯಾತ್ರೆಯ ಬಗ್ಗೆ ಇಂತಹುದೇ ಬಿನ್ನಹ ಮಾಡಿಕೊಳ್ಳುತ್ತಿದ್ದನೋ ಏನೋ. ಅವನ ಕಣ್ಣುಗಳು ನನಗೆ ಅದನ್ನೇ ಅರುಹುತ್ತಿದ್ದವು. ಆದರೆ, ಬಸ್ಸು ಆರಂಭವಾಗತೊಡಗಿದ್ದರಿಂದ ಅವನು ಇಳಿಯಬೇಕಾಯಿತು.

ಪುಟ್ಟ ಬ್ಯಾಗಿನೊಂದಿಗೆ ಬಂದಿದ್ದ ಆ ಗ್ರಹಸ್ಥರು ಮಾಡಿದ ಮೊದಲ ಕೆಲಸವೆಂದರೆ, “”ನಿಮಗೆ ಬೇಕಾದರೆ ವಿಂಡೋ ಸೀಟು ತೆಗೆದುಕೊಳ್ಳಿ” ಎಂದು ನನಗೆ ಸೂಚಿಸಿದ್ದು. ನಾನು, “”ಬೇಡ, ನನಗೆ ಇಲ್ಲೇ ಸರಿಯಾಗಿದೆ” ಎಂದು ಹೇಳಿ ಅವರಿಗೆ ಒಳಗೆ ನುಸುಳಿ ತಮ್ಮ ಸೀಟಿಗೆ ಹೋಗಲು ಅನುವು ಮಾಡಿಕೊಟ್ಟೆ. ನನ್ನನ್ನು ಅಕ್ಕರೆಯಿಂದ ನಿರುಕಿಸುತ್ತ ಸುಖಾಸೀನರಾದ ಅವರು ಮಾತಿಗೆ ತೊಡಗಲು ಹೆಚ್ಚು ಸಮಯ ಬೇಕಾಗಲಿಲ್ಲ.

“”ನನ್ನ ಹೆಸರು ಗಣಪತಿ ಪೈ. ಎಲ್ಲರೂ ನನ್ನನ್ನು ಕರೆಯುವುದು “ಗಣ್ಣ ಮಾಮ’ನೆಂದು. ಶಿರಾಲಿಯಲ್ಲಿ ನನ್ನದೊಂದು ಪುಟ್ಟ ದುಖಾನಿದೆ. ನೀವು ಯಾವ ಕಡೆ? ಮಂಗಳೂರಿಗೋ?” ಎಂದು ಮಾತುಗಳ ಸರಮಾಲೆಯನ್ನೇ ಎಸೆದರು. ನಾನು, “”ಇಲ್ಲ , ನಾನು ಕುಮಟೆಯಲ್ಲಿ ಇಳಿಯುತ್ತೇನೆ” ಎಂದು ಕೊಂಕಣಿಯಲ್ಲಿ ಉತ್ತರಿಸಿದೆ. ತಮ್ಮ ಪೈಕಿಯವನೇ ಜೊತೆಗಿರುವನೆಂದು ಖುಷಿಗೊಂಡ ಗಣ್ಣಮಾಮ ಇಮ್ಮಡಿ ಉತ್ಸಾಹದಿಂದ ಮಾತು ಮುಂದುವರೆಸಿದರು. ನನ್ನ ಪುಟ್ಟ ಪರಿಚಯ ಹಾಗೂ ಪ್ರಯಾಣದ ಉದ್ದೇಶವನ್ನು ಹೇಳಿಕೊಂಡೆ. ಅಣ್ಣನ ಹೆಸರು ಕೇಳಿದೊಡನೆ, “”ಅರೇ! ಅವನು ನನ್ನ ಖಾಸಾ ದೋಸ್ತ. ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ನನಗೆ ಕಳಿಸದೇ ಇರಲಾರ. ಕುಮಟೆಗೆ ನಾನು ಮದುವೆಯ ದಿನ ಬಂದೇ ಬರುತ್ತೇನೆ” ಎಂದರು. ಗಣ್ಣಮಾಮ ಕಳೆದ ಒಂದು ತಿಂಗಳಿಂದ ಮುಂಬಯಿಯಲ್ಲಿದ್ದರು. ಅಂಧೇರಿಯ ಸಮೀಪವಿರುವ ಚಕಾಲಾದಲ್ಲಿ ಅವರ ಮಗಳ ಮನೆ. ಬಸ್ಸಿಗೆ ಹತ್ತಿಸಲು ಬಂದ ಯುವಕನು ಅವರ ಅಳಿಯನಂತೆ. ಅವರಿಲ್ಲದಾಗ ಅಂಗಡಿಯನ್ನು ಶಿರಾಲಿಯಲ್ಲಿರುವ ಅವಳ ಮಗನೇ ನೋಡಿಕೊಳ್ಳುತ್ತಾನಂತೆ.

“”ನಿಮಗೆ ಮಾಧವ ಕಾಮತರು ಗೊತ್ತಲ್ಲವೋ? ಅವರ ತಂಗಿಯ ಗಂಡನ ಷಡ್ಡಕನ ಸೊಸೆ ನಿಮ್ಮ ಅಣ್ಣನ ಹೆಂಡತಿಯ ಖಾಸಾ ತಂಗಿ. ಅವರಿಬ್ಬರ ಇನ್ನೊಬ್ಬ ತಂಗಿ ನನ್ನ ಸೋದರ ಮಾವನ ಮೂರನೇ ಸೊಸೆ” ಎಂದರು. ನನಗೆ ಮಾಧವ ಕಾಮತರೂ ಗೊತ್ತಿರಲಿಲ್ಲ , ಗಣ್ಣಮಾಮನ ಸೋದರಮಾವನೂ ಗೊತ್ತಿರಲಿಲ್ಲ. ಆದರೆ, ಹಾಗೆಂದು ಗಣ್ಣಮಾಮನಿಗೆ ಹೇಳಲು ಹೋಗಲಿಲ್ಲ. ಹೇಳಿದರೆ ಅವರು ನನ್ನನ್ನು ಸಂಬಂಧಗಳ ಇನ್ನೂ ದೊಡ್ಡ ಚಕ್ರವ್ಯೂಹದಲ್ಲಿ ಸಿಲುಕಿಸುತ್ತಿದ್ದರೋ ಏನೋ.

“”ನಮ್ಮದು ಜನರಲ್‌ ಸ್ಟೋರು ನೋಡಿ. ನಾಲ್ಕು ಜನರಿಗೆ ಉಪಯೋಗಕ್ಕೆ ಬರುವಂತೆ ಬಾಳಬೇಕೆಂಬುದಷ್ಟೇ ನನ್ನ ಅಭಿಮತ. ಮಳೆಗಾಲ ಬಂತೆಂದರೆ ನಾನು ಅಂಗಡಿಯಲ್ಲಿ ಛತ್ರಿ, ರೇನ್‌ಕೋಟು, ಕಂಬಳಿಗಳನ್ನಿಡುತ್ತೇನೆ. ರೈತಾಪಿ ಜನರಿಗೆ ಬೇಕಾದ ಕೊಡಲಿ, ಕತ್ತಿ, ಕುಠಾರಿ, ಗುರಾಣಿಗಳನ್ನಿಡುತ್ತೇನೆ. ಬಳಿಕ ಮಕ್ಕಳಿಗೆ ಬೇಕಾದ ನೋಟ್‌ಬುಕ್ಕುಗಳು, ಪೆನ್ನುಗಳು. ಈಗೀಗ ನನ್ನ ಮಗ ಮೊಬೈಲ್‌ ಕವರು, ಸಿಮ್‌ಕಾರ್ಡುಗಳನ್ನೂ ಇಡತೊಡಗಿದ್ದಾನೆ. ನಮ್ಮ ಮಹಾಮಾಯಾ ದೇವಸ್ಥಾನದಲ್ಲಿ ಏನೇ ಕಾರ್ಯಕ್ರಮವಿರಲಿ ಈ ಪ್ರಾಯದಲ್ಲೂ ನಾನು ವಾಲಿಂಟಿಯರ್‌ ಆಗಿ ಹೋಗುತ್ತೇನೆ. ಭಜನೆಯಲ್ಲಿ ಭಾಗವಹಿಸುತ್ತೇನೆ. ತೋರಣ ಕಟ್ಟುವುದು, ಬಡಿಸುವುದಕ್ಕೂ ನಾನು ತಯಾರು.

ಮರ ತನ್ನ ಹಣ್ಣನ್ನು ತಾನೇ ತಿನ್ನುವುದಿಲ್ಲ. ನದಿಯು ತನ್ನ ನೀರನ್ನು ತಾನೇ ಕುಡಿಯುವುದಿಲ್ಲ. ಪರೋಪಕಾರಾರ್ಥಮಿದಂ ಶರೀರಂ ಎಂದು ಶ್ಲೋಕವೊಂದನ್ನು ಸಹ ಉದ್ಗರಿಸಿದರು. ನಾನು ಹೊನ್ನಾವರದಲ್ಲಿ ಕಲಿತವನೆಂದು ತಿಳಿದದ್ದೇ “”ಅರೇ! ನಾನು ಸಹ ಹೊನ್ನಾವರ ಕಾಲೇಜಿನಲ್ಲಿಯೇ ಡಿಗ್ರಿ ಮುಗಿಸಿದ್ದು. ನನ್ನ ಕ್ಲಾಸ್‌ಮೇಟುಗಳೆಲ್ಲ ಕಾಲೇಜು ಮುಗಿದದ್ದೇ ಬೇರೆ ಬೇರೆ ದಿಕ್ಕಿಗೆ ಹಾರಿಹೋದರು. ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗೆ ತಲುಪಿದರು. ಉದ್ಯಮಿಗಳಾದರು. ನಾನು ಮಾತ್ರ ಮನೆ, ಅಂಗಡಿ ಅಂತ ಊರಿನಲ್ಲೇ ಮೂಲೆಗುಂಪಾದೆ. ಬರುವ ತಿಂಗಳಿನಲ್ಲಿ ನಾನು ನಮ್ಮ ಬ್ಯಾಚಿನ ಹಳೆಯ ಕ್ಲಾಸ್‌ಮೇಟ್‌ಗಳ ಪುನರ್ಮಿಲನದ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಇದ್ದೇನೆ. ನೀವು ಸಿಕ್ಕಿದ್ದು ಒಳ್ಳೆಯದಾಯಿತು. ನೀವು ಸಹ ನಮ್ಮನ್ನು ಸೇರಿಕೊಳ್ಳಿ. ದಿಲ್ಲಿಯಿಂದ ಶ್ಯಾಮಲಾ ಹೆಗಡೆ, ಹೈದರಾಬಾದಿನಿಂದ ವೆಂಕಟೇಶ ನಾಯಕಕ, ಮತ್ತೆ ಹುಬ್ಬಳ್ಳಿ, ಶಿವಮೊಗ್ಗ, ಉಡುಪಿ, ಮಂಗಳೂರಿನಿಂದ ಕೆಲವರು. ಹೀಗೆ ತುಂಬ ಜನ ಬರಲು ಒಪ್ಪಿದ್ದಾರೆ. ಶರಾವತಿ ನದಿಯಗುಂಟ ಲಾಂಚಿನಲ್ಲಿ ವಿಹರಿಸಲಿದ್ದೇವೆ. ಗೇರುಸೊಪ್ಪೆಯ ಬಸದಿ, ಜೋಗ್‌ಫಾಲ್ಸ್‌ಗಳಿಗೂ ಹೋಗುವ ವಿಚಾರವಿದೆ” ಎಂದರು. ಬಳಿಕ ತುಸು ಗುಟ್ಟಿನಲ್ಲೆಂಬಂತೆ “”ಕುಡಿಯುವ ಶೋಕಿಯುಳ್ಳವವರಿಗಾಗಿ ಗೋವಾದಿಂದ ವಿಲ್ಲಿ ಫೆರ್ನಾಂಡಿಸ್‌ ಬಾಟಲಿಗಳನ್ನು ತರುವವನಿದ್ದಾನೆ. ಎನ್‌ವಿ, ಮೀನು ತಿನ್ನುವವರಿಗಾಗಿ ವಿಶೇಷ ಅಡುಗೆಯ ವ್ಯವಸ್ಥೆ ಮಾಡಿದ್ದೇನೆ. ಡೇಟ್‌ ಫಿಕ್ಸ್‌ ಆದದ್ದೇ ಕಾಮತ್‌ ರೆಸಿಡೆನ್ಸಿಯಲ್ಲಿ ರೂಮ್‌ ಬುಕ್‌ ಮಾಡುತ್ತೇನೆ. ನಾವು ಕಲಿಯುವಾಗ ನೀವು ತುಂಬ ಜ್ಯೂನಿಯರ್‌ ಆಗಿದ್ದಿರಬಹುದು. ಅದಕ್ಕೆ ನಿಮ್ಮನ್ನು ನೋಡಿದ ನೆನಪಿಲ್ಲ. ಆದರೆ, ಯು ಆರ್‌ ಮೋಸ್ಟ್‌ ವೆಲ್‌ಕಮ್‌. ನೀವು ಬರಲೇಬೇಕು” ಮಾತಿನ ಓಘದಲ್ಲಿ ಮೈಮರೆತಿದ್ದ ಗಣ್ಣಮಾಮನ ಮೊಬೈಲ್‌ ವೈಬ್ರೇಟ್‌ ಆದಂತಿತ್ತು. ಅದನ್ನು ಬ್ಯಾಗಿನಿಂದ ಹುಡುಕಿ ಹೊರತೆಗೆದು ಕಿವಿಗೆ ಹಿಡಿದು ಎತ್ತರದ ಸ್ವರದಲ್ಲಿ ಮಾತಾಡತೊಡಗಿದರು. “”ಅರೇ! ಗೌತಮ್‌, ಈಗ ನಿನ್ನ ನೆನಪನ್ನೇ ಮಾಡುತ್ತಿದ್ದೆ. ಮುಂದಿನ ತಿಂಗಳು ಬರುತ್ತೀಯಷ್ಟೇ? ಲಾಸ್ಟ್‌ ಮಿನಿಟಿನಲ್ಲಿ ರಜೆಯಿಲ್ಲ ಅನ್ನಬೇಡ. ಕಾರ್ಯಕ್ರಮದಲ್ಲಿ ನಿನ್ನ ಉಪಸ್ಥಿತಿ ತುಂಬಾ ಮುಖ್ಯ ಮಾರಾಯಾ. ಶ್ಯಾಮಲಾ ಹೆಗಡೆ ಗಂಡನ ಜೊತೆ ಬರುತ್ತಿದ್ದಾಳೆ. ನೀನೂ ಸಕುಟುಂಬ ಬಂದುಬಿಡು… ಯಾರು? ಪಾವಸ್ಕರನೋ? ಅವನು ಹೆಂಡತಿಗೆ ತುಂಬ ಹೆದರುತ್ತಾನೆ ಮಾರಾಯ. ಅವಳ ಪರವಾನಿಗೆಯಿಲ್ಲದೆ ಎಲ್ಲೂ ಹೋಗುವುದಿಲ್ಲ. “”ನೆಟ್‌ವರ್ಕ್‌ ಪ್ರಾಬ್ಲೆಮು. ಕಟ್ಟಾಯಿತು” ಎಂದು ಮೊಬೈಲನ್ನು ಒಳಗಿಟ್ಟರು.

ಈ ಗೌತಮ್‌ ಪಂಡಿತ ನೋಡಿ, ನನ್ನ ಖಾಸಾ ದೋಸ್ತ. ಮುಂಬಯಿಯಲ್ಲಿ ಮಲ್ಟಿನ್ಯಾಶನಲ್‌ ಕಂಪೆನಿಯೊಂದರಲ್ಲಿ ಜನರಲ್‌ ಮ್ಯಾನೇಜರ್‌ ಆಗಿದ್ದಾನೆ. ಕಾಲೇಜಿನಲ್ಲಿದ್ದಾಗ ಶ್ಯಾಮಲಾ ಹೆಗಡೆಯನ್ನು ಗುಟ್ಟಾಗಿ ಪ್ರೇಮಿಸುತ್ತಿದ್ದ. ಒಮ್ಮೆ ಪ್ರೇಮಪತ್ರ ಬರೆದು ನನ್ನಿಂದ ಅವಳ ಪುಸ್ತಕದಲ್ಲಿ ಇಡಿಸಿದ. ಅವಳ ಗೆಳೆತಿಯರು ಇದನ್ನು ಕಂಡಿರಬೇಕು. ಪತ್ರದ ಕೊನೆಗೆ “ಜಿ.ಪಿ.’ ಎಂಬ ತನ್ನ ಇನಿಷಿಯಲ್‌ಗ‌ಳನ್ನು ನಮೂದಿಸಿದ್ದನಂತೆ ಪುಣ್ಯಾತ್ಮ. ದುರ್ದೈವದಿಂದ ನನ್ನ ಇನಿಷಿಯಲ್ಲುಗಳೂ ಅವೇ. ಶ್ಯಾಮಲಾ ನನ್ನನ್ನು ತರಾಟೆಗೆ ತೆಗೆದುಕೊಂಡು ಎಲ್ಲರೆದುರು ತಪರಾಕಿ ಬಾರಿಸಿಬಿಟ್ಟಳು. ನಾನು ಎಷ್ಟೇ ವಿವರಣೆ ಕೊಟ್ಟರೂ ಕೊನೆತನಕ ನಂಬಲಿಲ್ಲ.

ನಾನು, “”ಹಾಗಾದರೆ, ನೀವು ಆವಾಗಿನಿಂದಲೇ ಪರೋಪಕಾರಾರ್ಥಮಿದಂ ಶರೀರಂ ಎಂಬ ತತ್ವದಲ್ಲಿ ನಂಬಿಕೆಯಿಟ್ಟಿದ್ದೀರಿ ಎಂದಾಯಿತು, ಅಲ್ಲವೇ?” ಎಂದು ಹಾಸ್ಯದ ಚಟಾಕಿ ಹಾರಿಸಿದೆ. ಗಣ್ಣಮಾಮನ ನಗುವಿನಲ್ಲಿ ವಿಷಾದದ ಎಳೆಯೊಂದು ಇದ್ದಂತಿತ್ತು.

ಈ ನಡುವೆ ಚಹಾಕ್ಕೆ ಲೋಣಾವಳಾದ ಸಮೀಪ ಬಸ್ಸು ನಿಂತಾಗ ನಾವಿಬ್ಬರೂ ಟಾಯ್ಲೆಟ್ಟಿಗೆ ಹೋಗಿ ಬಂದು ಚಹಾ ಕುಡಿದೆವು. ಊಟಕ್ಕೆ ಮಾತ್ರ ನಾವಿಬ್ಬರೂ ಚಪಾತಿ, ಬಾಜಿ ಕಟ್ಟಿ ತಂದಿದ್ದರಿಂದ ಬಾಜಿಗಳನ್ನು ಹಂಚಿಕೊಂಡು ಬಸ್ಸಿನಲ್ಲೇ ತಿಂದೆವು. ನಾನು ತೂಕಡಿಸತೊಡಗಿದರೂ ಬಿಡದೇ ಮಾತಿಗೆಳೆಯುತ್ತಿದ್ದ ಗಣ್ಣಮಾಮನಿಗೆ ಏನಾದರೂ ಮಾನಸಿಕ ಸಮಸ್ಯೆಯಿದೆಯೇ ಎಂಬ ಸಂಶಯ ನನಗೆ ಬರಲು ಆರಂಭವಾಗಿತ್ತು.

ಮಧ್ಯರಾತ್ರಿಯ ಬಳಿಕ ಯಾಕೋ ಧಡಕ್ಕನೆ ಎಚ್ಚೆತ್ತಾಗ ವೀಡಿಯೋ ಮುಗಿದಿತ್ತು. ಬಸ್ಸನ್ನು ನೀಲಿ ಬೆಳಕೊಂದು ಆವರಿಸಿತ್ತು. ಪ್ರಯಾಣಿಕರೆಲ್ಲರೂ ನಿದ್ರೆ ಹೋಗಿದ್ದರು. ಬದಿಯಲ್ಲಿದ್ದ ಗಣ್ಣಮಾಮ ಮಾತ್ರ ಕಿಟಕಿಯಾಚೆ ದೃಷ್ಟಿ ನೆಟ್ಟು ವೇಗದಿಂದ ಹಿಂದೆ ಸರಿಯುತ್ತಿದ್ದ. ಸಾಲು ದೀಪದ ಕಂಬಗಳನ್ನು ನಿರುಕಿಸುತ್ತ ಏನನ್ನೋ ಧೇನಿಸುತ್ತಿದ್ದರು. ಅವುಗಳ ಬೆಳಕಿನ ಚೂರುಗಳು ಅವರ ಮುಖದ ಮೇಲೆ ಬಿದ್ದಾಗ ಮಾಸದ ಮುಗುಳುನಗುವಿಗೆ ಪಾಶವೀ ಅರ್ಥವೊಂದು ಕಂಡಂತಾಗಿ ಸಣ್ಣಗೆ ನಡುಗಿದೆ.

ಬೆಳಗಿನ ನಾಲ್ಕೂವರೆಯ ಸುಮಾರಿಗೆ ಬಸ್ಸು ಕುಮಟೆ ತಲುಪಿತು. ಆಗ ನೋಡಿದಾಗ ಗಣ್ಣಮಾಮ ಮಗುವಿನಂತೆ ಗಾಢನಿದ್ರೆಯಲ್ಲಿದ್ದರು. ಸದ್ದು ಮಾಡದೇ ಇಳಿಯುವಾಗ ಕಂಡಕ್ಟರನಿಗೆ “”ನನ್ನ ಪಕ್ಕದವರನ್ನು ಶಿರಾಲಿಯಲ್ಲಿ ಎಬ್ಬಿಸಿ ಇಳಿಸಲು ಮರೆಯಬೇಡಿ” ಎಂದು ಹೇಳಿ ಇಳಿದೆ.

ವನಿತಾಳ ಮದುವೆಯಲ್ಲಿ ಹೇಳಿಕೊಳ್ಳುವಂತಹ ವಿಜೃಂಭಣೆಯಾಗಲಿ, ಆಡಂಬರವಾಗಲಿ ಇರಲಿಲ್ಲ. ತನ್ನ ಸಹೋದ್ಯೋಗಿಯನ್ನೇ ಪ್ರೇಮಿಸಿ ಅಂತರ್ಜಾತೀಯ ವಿವಾಹಕ್ಕೆ ಅವಳು ಮುಂದಾಗಿದ್ದಳು. ಅತ್ತಿಗೆಗೆ ಇದರಿಂದ ಸ್ವಲ್ಪ ಬೇಸರವಿದ್ದರೂ ಅಣ್ಣ ಸಂಪೂರ್ಣವಾಗಿ ಮಗಳ ಬೆಂಬಲಕ್ಕೆ ನಿಂತಿದ್ದ. ಹೀಗಾಗಿ ಆಪ್ತ ವಲಯದವರನ್ನು ಮಾತ್ರ ಮದುವೆಗೆ ಆಮಂತ್ರಿಸಲಾಗಿತ್ತು. ಸರಳ-ಸುಂದರ ರೀತಿಯಲ್ಲಿ ವಿವಾಹ ವಿಧಿಗಳು ಮುಗಿದು ಹೋದವು. ವನಿತಾ ಗಂಡನ ಮನೆಗೆ ತೆರಳಿದಳು. ಕೊನೆಯ ಗಳಿಗೆಯಲ್ಲಿ ಸೂಚನೆ ಸಿಕ್ಕರೂ ನಾನು ತಪ್ಪದೇ ಬಂದುದರಿಂದ ಅವರಿಗೆಲ್ಲ ತುಂಬ ಖುಷಿಯಾಗಿತ್ತು.

ಗಣ್ಣಮಾಮನ ಕುರಿತು ನಾನು ಅಣ್ಣನ ಬಳಿ ಹೇಳಿದಾಗ “”ಅವನೆಲ್ಲಿ ಸಿಕ್ಕನೋ ಮಾರಾಯ ನಿನಗೆ?” ಎಂದು ಅಚ್ಚರಿ ವ್ಯಕ್ತಪಡಿಸಿದ. ನಾನು “”ಯಾಕೆ? ಅವರು ಒಳ್ಳೆಯ ಜನ ಅಲ್ಲವೇ?” ಎಂದು ಪ್ರಶ್ನಿಸಿದಾಗ “”ಹಾಗೇನೂ ಇಲ್ಲ, ನಿರುಪದ್ರವಿ ಪ್ರಾಣಿ. ಆದರೆ, ಕೆಲವು ಸಲ ಮಾತಿನಿಂದ ತಲೆಚಿಟ್ಟು ಹಿಡಿಸುತ್ತಾನೆ” ಎಂದು ಕೇಳಿದ. ಗಣ್ಣಮಾಮನಿಗೆ ವನಿತಾಳ ಮದುವೆಯ ಆಮಂತ್ರಣ ಹೋಗಿರಲಿಕ್ಕಿಲ್ಲವೆಂದು ಗ್ರಹಿಸಿದೆ. ಒಂದೊಮ್ಮೆ ಆಮಂತ್ರವಿದ್ದರೂ ಅವರು ಬರುವುದು ಸಾಧ್ಯವಿರಲಿಲ್ಲ. ಯಾಕೆಂದರೆ, ಮುಂಬಯಿಯಿಂದ ಮರಳಿದ ಮರುದಿನವೇ ಹೃದಯಸ್ತಂಭನದಿಂದ ನಿದ್ರೆಯಲ್ಲೇ ಅವರು ಕೊನೆಯುಸಿರು ಎಳೆದಿದ್ದರಂತೆ. ಶಿರಾಲಿಯಿಂದ ಯಾರೋ ಈ ಸುದ್ದಿಯನ್ನು ತಂದಿದ್ದರು. ಮುಂಬಯಿಗೆ ಮರಳುವ ಮುನ್ನ ಶಿರಾಲಿಗೆ ಹೋಗಿ ಅವರ ಸೊಸೆಯರನ್ನು ಕಾಣುವ ಇಚ್ಛೆಯನ್ನು ನಾನು ಅಣ್ಣನ ಬಳಿ ವ್ಯಕ್ತಪಡಿಸಿದೆ. ಗಣ್ಣಮಾಮನ ಸ್ನೇಹದ ಗಾಢ ಪ್ರಭಾವ ನನ್ನ ಮೇಲೆ ಇನ್ನೂ ಇದ್ದಂತಿತ್ತು.

ಶಿರಾಲಿಯಲ್ಲಿ ಗಣ್ಣಮಾಮನ ಮನೆ ಹುಡುಕುವುದು ಕಷ್ಟವೇನೂ ಆಗಲಿಲ್ಲ. ಪೇಟೆಯಲ್ಲಿ ಅಂಗಡಿಗಳ ಸಾಲಿನ ಹಿಂದೆ ಸಪೂರ ಓಣಿಯೊಂದರ ಕೊನೆಯಲ್ಲಿ , ಅವರ ಹಿತ್ತಲು ಮನೆಗಳಿದ್ದವು.
ಸಾವನ್ನು ಹೊಟ್ಟೆಯೊಳಗಿಟ್ಟುಕೊಂಡೇ ಈ ವ್ಯಕ್ತಿ ನನ್ನ ಜೊತೆ ಪಯಣಿಸಿದ್ದರೆ? ಕರಾಳರಾತ್ರಿಯಲ್ಲಿ ಕಿಟಕಿಯಾಚೆ ಹಿಂದಕ್ಕೆ ಸರಿಯುತ್ತಿದ್ದ ದೀಪದ ಕಂಬಗಳಂತೆ ಅವರ ಕೊನೆಯ ಕ್ಷಣಗಳು ಕಳೆದುಹೋಗುತ್ತಿದ್ದವೆ? ನಮ್ಮೆಲ್ಲರ ಪಾಡು ಸಹ ಇದೇ ಅಲ್ಲವೆ? ಎಂದು ನೆನೆದು ಮೈ ಜುಮ್ಮೆನಿಸಿತು. “”ನಾನು ಗಣ್ಣಮಾಮನ ಇತ್ತೀಚಿನ ಸ್ನೇಹಿತ. ಅವರು ಮುಂಬಯಿಯಿಂದ ಬರುವಾಗ ಬಸ್ಸಿನಲ್ಲಿ ಅವರ ಜೊತೆಗಿದ್ದೆ” ಎಂದು ಪರಿಚಯಿಸಿಕೊಂಡೆ. ಮುಂಬಯಿಯಿಂದ ಅವರ ಮಗಳು, ಅಳಿಯ ಬಂದಿದ್ದರು. ಅಳಿಯನಿಗೆ ನನ್ನ ಗುರುತು ಹತ್ತಿತ್ತು. ಅವರೆಲ್ಲ ಆದರದಿಂದ ನನ್ನನ್ನು ಬರಮಾಡಿಕೊಂಡರು.

ಮಗಳು ಭಾವುಕಳಾಗಿ, “”ಒಂದು ರಾತ್ರಿ ಅವರೊಂದಿಗೆ ಪ್ರಯಾಣ ಮಾಡಿದ ಒಂದೇ ಕಾರಣಕ್ಕೆ ಅವರನ್ನು ಸ್ನೇಹಿತನೆಂದು ಕಂಡು ಇಷ್ಟು ದೂರ ಬಂದಿರಿ. ಆದರೆ, ನಮ್ಮ ಹತ್ತಿರದವರೇ ಬರಲಿಲ್ಲ” ಎಂದು ಕಣ್ಣೀರು ತುಂಬಿಕೊಂಡಳು. ನಾನು, “”ಅವರ ಸ್ನೇಹಿತ ವರ್ಗ ದೊಡ್ಡದಿತ್ತಲ್ಲವೆ? ಹಳೆಯ ಸಹಪಾಠಿಗಳ “ಗೆಟ್‌ ಟುಗೆದರ್‌’ ಅವರು ಮಾಡುವವರಿದ್ದರಲ್ಲವೆ?” ಎಂದು ಕೇಳಿದೆ. “”ಅಯ್ಯೋ! ಅಪ್ಪ ಅದನ್ನೆಲ್ಲ ನಿಮ್ಮಲ್ಲಿ ಹೇಳಿದರೇ? ಸರ್‌, ಅದೆಲ್ಲ ಸುಳ್ಳು. ಅಪ್ಪನ ಕಪೋಲಕಲ್ಪಿತ ಕತೆ. ಸತ್ಯವನ್ನು ಅರಿತರೆ ನಿಮಗೆ ಆಶ್ಚರ್ಯವಾಗಬಹುದು” ಎಂದು ಬಿಸುಸುಯ್ದಳು. ಅಕ್ಕ-ತಮ್ಮ ಇಬ್ಬರೂ ಕೂಡಿ ಗಣ್ಣಮಾಮನ ಬಾಳಿನ ಇನ್ನೊಂದು ಮಗ್ಗಲನ್ನು ತೆರೆದಿಟ್ಟರು. “”ಚಹಾ ತೆಗೆದುಕೊಳ್ಳುತ್ತೀರಾ?” ಎಂದವರು ಕೇಳಿದಾಗ ಸಾವಿನ ಮನೆಯೆಂದು ಲೆಕ್ಕಿಸದೇ “ಆಗಬಹುದು’ ಎಂದು ಹೇಳಿ ಅವರು ಕೊಟ್ಟ ಚಹಾ ಮತ್ತು ಚೂಡಾ ಸೇವಿಸುತ್ತ ಅವರ ಮಾತುಗಳನ್ನು ಕೇಳಿಸಿಕೊಂಡೆ.

ಶರದ ಸೌಕೂರ

ಟಾಪ್ ನ್ಯೂಸ್

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.