ಕತೆ: ಬಾರದುಳಿದವರು
Team Udayavani, Aug 13, 2017, 6:45 AM IST
ಅವಸರದಲ್ಲೇ ಬಟ್ಟೆಗಳನ್ನೆಲ್ಲ ಜೋಡಿಸಿಕೊಳ್ಳುತ್ತಿದ್ದಳು ವಿನುತಾ. ಹೊರಡಲು ಒಂದೇ ದಿನ ಬಾಕಿ ಇತ್ತು. ಮುಗಿಸಿಕೊಳ್ಳಬೇಕಾದ ಕೆಲಸಗಳು ಬಹಳಷ್ಟಿತ್ತು. ವಿನುತಾಳಿಗೆ ಇದುವರೆಗೆ ಕಾಣದ ಮಹಾನಗರಿಗೆ ಹೋಗುತ್ತಿದ್ದೇನೆನ್ನುವ ಸಂಭ್ರಮದ ಬದಲು ಇಪ್ಪತ್ತೈದು ದಿನ ಅದೂ ಗೊತ್ತುಗುರಿಯಿಲ್ಲದ ಮಾಯಾನಗರಿಯಲ್ಲಿ ಅಪರಿಚಿತರ ನಡುವೆ ಎಲ್ಲೋ ಒಂದು ಕಡೆ ಬಾಡಿಗೆ ಕೋಣೆಯಲ್ಲಿ ಉಳಿದುಕೊಳ್ಳುವ ಬಗ್ಗೆ ಆತಂಕ ಕಾಡುತ್ತಿತ್ತು. ಹಿಂದಿ ಸರಿಯಾಗಿ ಗೊತ್ತಿಲ್ಲ; ಬೇರೆ ಭಾಷೆ ಅಲ್ಲಿ ನಡೆಯುವುದಿಲ್ಲ ಅನ್ನುವ ಮಾತು ಅಲ್ಲಿಯ ಗೆಳೆಯರ ಬಳಗದಿಂದ ಕೇಳಿದ್ದಳು. ಇದ್ದುದರಲ್ಲೇ ಸಮಾಧಾನವೆಂದರೆ ಜೋಬಿಗೆ ಕಾಸುಸ್ನೇಹಿಯಾಗುವ ಅಂಧೇರಿಯಲ್ಲಿರುವ ಕ್ಯಾಥೋಲಿಕ್ ಗ್ಯಾನ್ ಆಶ್ರಮವೊಂದರಲ್ಲಿ ಬಾಡಿಗೆ ಕೋಣೆ ಗೊತ್ತು ಮಾಡಿಕೊಟ್ಟ ಬಂಧುಗಳ ವಾಸ ಅಲ್ಲೇ ಆಸುಪಾಸಿನಲ್ಲಿ ಎಂಬುದು. ಅವಳ ಹದಿನೇಳು ವರ್ಷದ ಮಗ ಧನುಷ್ ಮಾತ್ರ ಖುಷಿಯಾಗಿದ್ದ. ಅವನ ಬಟ್ಟೆಗಳಲ್ಲಿ ಯಾವುದು ಬೇಕು/ಬೇಡ ಎಂಬುದನ್ನು ನೋಡಿ ಮುತುವರ್ಜಿಯಿಂದ ತೆಗೆದುಕೊಡುತ್ತಿದ್ದ. ಆಕೆ ಇಂತಿಪ್ಪ ಹಳವಂಡಗಳಲ್ಲಿ ಮುಳುಗಿದ್ದಾಗಲೇ ಹೊರಗಿನಿಂದ ಯಾರೋ ಕರೆದದ್ದು ಕೇಳಿತು. “”ಹೋಗಿ ನೋಡೋ. ಯಾವುದಾದ್ರೂ ಬ್ರಹ್ಮಕಲಶದ ವಂತಿಗೆಯವರೊ, ಮಾರ್ಕೆಟಿಂಗ್ ಏಜಂಟುಗಳ್ಳೋ ಆಗಿದ್ರೆ ಮನೆಯಲ್ಲಿ ದೊಡ್ಡವರು ಯಾರೂ ಇಲ್ಲ ಅಂದುಬಿಡು” ಅನ್ನುವ ಮುಂಜಾಗ್ರತೆಯ ಮಾತೂ ಹೇಳಿದಳು. ನೋಡಿ ಬಂದ ಧನುಷ್, “”ಅಮ್ಮಾ, ಜೆಸಿಂತಾ ಬಾಯಿ ಮತ್ತೆ ಅವಳ ಮೊಮ್ಮಗಳು” ಅಂದ.
ಅವಳ ಮನೆ ವಿನುತಾಳ ಮನೆಯಿಂದ ನಾಲ್ಕೈದು ಮನೆಗಳಾಚೆ. ಆ ಮನೆಯಲ್ಲಿರುವುದು ಜೆಸಿಂತಾ ಬಾಯಿ, ಮತ್ತವಳ ಮೂವತ್ತೈದು ವರ್ಷದ ಮಗ, ಮೊಮ್ಮಗಳು ಏಳು ವರ್ಷದ ಮೇರಿ. ಸೊಸೆ ಇಸ್ರೇಲಿನಲ್ಲಿ ಯಾರದ್ದೂ ಮನೆಯ ಹೋಮ್ ನರ್ಸ್ ಆಗಿ ಹೋಗಿ ಮೂರು ವರ್ಷ ಆಯ್ತು ಅಂದಿದ್ದಳು. ಇಳಿವಯಸ್ಸಿನಲ್ಲಿ ಮನೆಯಂಗಳದಲ್ಲಿರುವ ತುಸುವೇ ಜಾಗದಲ್ಲಿ ಮಲ್ಲಿಗೆ ಕೃಷಿ ಮಾಡುತ್ತ, ಮೊಮ್ಮಗಳನ್ನೂ ನೋಡಿಕೊಳ್ಳುವ ಜೆಸಿಂತಾ ಬಾಯಿಯೆಂದರೆ ವಿನುತಾಗೆ ಪ್ರೀತಿ-ಗೌರವ ಎರಡೂ. ಅವಳು ತಂದು ಕೊಡುವ ಕಾಡು ಮಾವಿನ ಹಣ್ಣುಗಳನ್ನು ನೆನೆದರೇ ಬಾಯಿಯಲ್ಲಿ ಜೊಲ್ಲು ತುಂಬಿಕೊಳ್ಳಬೇಕು. ಆದರೂ ಈ ಹೊತ್ತಲ್ಲಿ ನಾಲ್ಕು ಹಿತವಾದ ಮಾತಾಡುವ ಬಿಡುವಿನ ಮನಸ್ಥಿತಿಯಲ್ಲಂತೂ ಅವಳಿರಲಿಲ್ಲ. ಹಾಗಂತ ಜೆಸಿಂತಾಬಾಯಿಗೊಂದು ಮಾತು ಹೇಳಿ ಬಂದುಬಿಟ್ಟರಾಯೆ¤ಂದು ಹೊರ ಹೋದಳು. ಜೆಸಿಂತಾಬಾಯಿ ವಿನುತಾಳನ್ನು ಕಂಡದ್ದೇ ಗಡಿಬಿಡಿಯಿಂದ ಮೊಮ್ಮಗಳು ಅಂಗೈಯಲ್ಲಿ ಮಡಿಸಿಟ್ಟುಕೊಂಡಿದ್ದ ಚೀಟಿಯನ್ನು ತೆಗೆದು ಅವಳ ಕೈಗೆ ಕೊಟ್ಟಳು. ವಿನುತಾ ಬಿಡಿಸಿ ನೋಡಿದರೆ ಅದು ಯಾವುದೋ ಫೋನ್ ನಂಬರ್. “”ಅಕ್ಕಾ, ನಿಮ್ಮಿಂದ ಒಂದು ಉಪಕಾರ ಆಗ್ಬೇಕು. ಅದು ನಂಬರ್ ನನ್ನ ಸೊಸೆಯನ್ನು ಇಸ್ರೇಲಿಗೆ ಕಳಿಸಿದ ಏಜನ್ಸಿಯವರ ಬೊಂಬಾಯಿ ನಂಬರ್. ನೀವು ಬೊಂಬಾಯಿಗೆ ಹೋಗ್ತಿದ್ದೀರಲ್ಲ. ಹೇಗಾದ್ರು ಮಾಡಿ ಒಮ್ಮೆ ಅವರ ಹತ್ತಿರ ಮಾತಾಡಿ ಇವಳ ತಾಯಿಯನ್ನ ಹಿಂದಕ್ಕೆ ಕರಿಸ್ಲಿಕ್ಕಾಗ್ತದಾ ಕೇಳಿ ಅಕ್ಕಾ”
ಜೆಸಿಂತಾ ಬಾಯಿಯ ಬೇಡಿಕೆ ಅನಿರೀಕ್ಷಿತವಾಗಿತ್ತು. ಮೇರಿಯ ನೋಟದಲ್ಲಿ ಆಸೆ, ನಿರೀಕ್ಷೆ. ಆ ಕ್ಷಣದಲ್ಲಿ ಸಾಗರದಲ್ಲಿ ತೇಲಿ ಹೋದ ತರಗೆಲೆ ಹುಡುಕಲು ಕುರುಡನ ಕೈಯಲ್ಲಿ ಹರಿಗೋಲು ಕೊಟ್ಟು ಹುಡುಕಿಕೊಡು ಅನ್ನುವಂತಾಗಿತ್ತು ವಿನುತಾಳ ಸ್ಥಿತಿ. ಇವಳಿಗೆ ಈ ಕೆಲಸ ನನಗೆ ಹೇಳಬಹುದು ಅಂತನಿಸಿದ್ದಾದರೂ ಹೇಗೆ! ವಿಸ್ಮಯದಿಂದ ಅಜ್ಜಿ-ಮೊಮ್ಮಗಳನ್ನೇ ದಿಟ್ಟಿಸಿದಳು ವಿನುತಾ. ತನ್ನ ಕರುವಿಗಾಗಿ ವಿನುತಾಳ ಮನೆಯ ಹಿತ್ತಿಲಿನ ಚಿಗುರು ಹುಲ್ಲು ಕೊಯ್ಯಲು ವಾರದಲ್ಲೆರಡು ಮೂರು ದಿನ ಸಾಯಂಕಾಲದ ಹೊತ್ತಿಗೆ ಬರುತ್ತಿದ್ದಳು ಜೆಸಿಂತಾಬಾಯಿ. ಆಗೆಲ್ಲ ಆಕೆಯ ಬದುಕಿನ ಪಡಿಪಾಟಲುಗಳಿಗೆ ವಿನುತಾ ಅಕರಾಸ್ತೆಯಿಂದ ಕಿವಿಯಾಗುತ್ತಿದ್ದಳು. ಸಾಂತ್ವನದ ಮಾತನ್ನೂ ಆಡುತ್ತಿದ್ದಳು. ಅಂತಹ ಸಂದರ್ಭದಲ್ಲೇ ಒಂದು ದಿನ ಅವಳು ಸೊಸೆಯ ಬಗ್ಗೆ ಹೇಳಿಕೊಂಡಿದ್ದು. “”ನನ್ನ ಸೊಸೆ ಕೆಲಸಕ್ಕೆ ಅಂತ ಇಸ್ರೇಲಿಗೆ ಹೋಗ್ವಾಗ ಇವಿಗೆ ಮೂರು ವರ್ಷ. ಇಲ್ಲಿ ನಾಲ್ಕು ವರ್ಷ ದುಡಿಯುವುದು ಅಲ್ಲಿ ಒಂದು ವರ್ಷ ದುಡಿಯುವುದಕ್ಕೆ ಸಮ ಅಂತ ಯಾರೋ ಹೇಳಿದರಂತ ಗಂಡ-ಹೆಂಡತಿ ಮಾತಾಡಿಕೊಳ್ತಿದ್ರು. ಸ್ವಲ್ಪ ದಿನ ಹೋಗುವುದೋ ಬೇಡ್ವೋ ಅಂತ ಚರ್ಚೆ ಆಯ್ತು. ನನ್ನ ಮಗನಿಗೆ ಕಾಸ್ರಗೋಡು ಆಸ್ಪತ್ರೆಯಲ್ಲಿ ಅಟೆಂಡರ್ ಕೆಲ್ಸ. ಸೊಸೆ ಬಾಣಂತಿ ಮೀಯಿಸ್ಲಿಕ್ಕೆ ಅಂತ ಅಲ್ಲಿ ಇಲ್ಲಿ ಹೋಗ್ತಿದು. ಇಸ್ರೇಲಿನಲ್ಲಿ ಒಳ್ಳೆ ಸಂಬಳ ಸಿಗ್ತದೆ. ಎರಡು ವರ್ಷ ಅಲ್ಲಿ ಕೆಲ್ಸ ಮಾಡಿದ್ರೆ ಒಳ್ಳೆ ಸಂಪಾದನೆ ಮಾಡಿ ಬರ್ಬಹುದು ಅಂತ ಅವರ ಲೆಕ್ಕ, ಅಲ್ಲಿ ಸೊಸೆಗೆ ಒಂದು ಮನೆಯಲ್ಲಿ ಪ್ರಾಯದವರನ್ನು ನೋಡಿಕೊಳ್ಳುವ ಕೆಲಸ ಅಂತೆ. ಹೀಗೆ ಹೋದ ಕೆಲಸಗಾರರಿಗೆ ವಾರಕ್ಕೆ ಒಂದು ರಜೆ ಅಂತೆ. ಆ ರಜೆ ದಿನ ಹೀಗೆ ಬೇರೆ ಬೇರೆ ಊರುಗಳಿಂದ ಕೆಲಸಕ್ಕೆ ಬಂದವರೆಲ್ಲ ಒಂದು ಕಡೆ ಸೇರ್ತಾರಂತೆ. ಅಲ್ಲಿ ತುಂಬ ಜನ ದೋಸ್ತಿಗಳು ಸಿಗ್ತಾರಂತೆ. ನಮ್ಮ ಮೋಳಿ ಮೊದಮೊದಲು ಈ ಸಂಗತಿ ಎಲ್ಲ ಹೇಳಿ ಪತ್ರ ಬರೀತಿದು. ಯಾವಾಗಾದೊಮ್ಮೆ ಫೋನ್ ಮಾಡಿ ಮಗಳೊಟ್ಟಿಗೆ, ಗಂಡನೊಟ್ಟಿಗೆ ಮಾತಾಡ್ತಿದು. ಆದ್ರೆ ಮತ್ತೆ ಮತ್ತೆ ಅವಳಿಂದ ಎಂತ ಸುದ್ದಿಯೂ ಇಲ್ಲ. ಫೋನೂ ಇಲ್ಲ. ದುಡ್ಡು ಮಾತ್ರ ಕಳಿಸ್ತಿದು. ಮಗಳನ್ನು ಒಳ್ಳೆಯ ಶಾಲೆಗೆ ಸೇರಿÕ ಅಂತ ಹೇಳಿದು. ಕಳೆದ ವರ್ಷ ನನ್ನ ಮಗನ ಫ್ರೆಂಡ್ ಒಬ್ಬ ಅಲ್ಲಿಗೆ ಹೋಗಿದ್ದವನು ಊರಿಗೆ ಬಂದಿದ್ದ. ನಮ್ಮ ಮೋಳಿ ಇನ್ನು ಊರಿಗೆ ಬರುವುದಿಲ್ಲಂತೆ. ಅವಳಿಗೆ ಅಲ್ಲಿ ಬೇರೆ ಒಬ್ಬ ದೋಸ್ತಿ ಇ¨ªಾನಂತೆ. ಅಲ್ಲಿಗೆ ಹೋದವರು ಕೆಲವರು ಹೀಗೇ ಯಾರ¨ªಾದರೂ ದೋಸ್ತಿ ಆದ್ರೆ ಮತ್ತೆ ಊರಿಗೆ ವಾಪಸು ಬರಲು ಒಪ್ಪುವುದಿಲ್ಲಂತೆ. ಇಂತ ಕೇಸು ಕೆಲವು ಆಗಿದೆಯಂತೆ”
ಜೆಸಿಂತಾಬಾಯಿ ಹೇಳುತ್ತ ಹೇಳುತ್ತ ಗಂಟಲು ಕಟ್ಟಿ ಬಿಕ್ಕಿದ್ದಳು. ಆಕೆ ಹೇಳಿದ್ದನ್ನ ಅರ್ಥ ಮಾಡಿಕೊಳ್ಳಲು ವಿನುತಾಗೆ ಕೆಲವು ಕ್ಷಣಗಳೇ ಬೇಕಾಯ್ತು. ಅರ್ಥ ಆದಾಗ ಬಾಯಿ ಕಟ್ಟಿಹೋಗಿತ್ತು. ಜೆಸಿಂತಾಬಾಯಿ ಬಿಕ್ಕುತ್ತಲೇ, “”ಈ ಮುದಿ ಪ್ರಾಯದಲ್ಲಿ ನಂಗೆ ಈ ಕುಞಿnಯದ್ದೇ ಚಿಂತೆ. ಅವಳಿಗೆ ಮಗಳಿಗಿಂತಲೂ ಅದೇ ಹೆಚ್ಚಾಯ್ತ?” ಎಂದು ಕನಲಿದ್ದಳು. ಯಾಕೋ ಆ ಮಾತಿನೊಳಗಿಣುಕಿದ ಭತ್ಸìನೆ ವಿನುತಾಗೆ ಅಸಹನೀಯ ಅನಿಸಿತ್ತು.
“”ಜೆಸಿಂತಾಬಾಯಿ, ನಿನ್ನ ಕಷ್ಟ, ಈ ಮಗುವಿನ ದುಃಖ ದೊಡ್ಡದು. ಅವಳಿಗೆ ಮಗುವಿನ ಮೇಲೆ ಕಾಳಜಿ ಇಲ್ಲದಿದ್ರೆ ಈಗ್ಲೂ ದುಡ್ಡು ಕಳಿಸ್ತಿರಲಿಲ್ಲ. ಅವಳ ಕಷ್ಟ ಏನಿತ್ತೂ. ಅವಳದ್ದೂ ಜೀವ ಅಲ್ವ. ನೀವು ಅನುಭವಸ್ಥರು. ಮಗುವಿನ ಮುಂದೆ ಹಾಗೆಲ್ಲ ಹೇಳ್ಬೇಡಿ. ಯಾವತ್ತಾದ್ರೂ ಬಂದಾಳು” ಅಂದುಬಿಟ್ಟಿದ್ದಳು.
ಜೆಸಿಂತಾಬಾಯಿಗೂ ಆಡಿದ ಮಾತಿಗೆ ಪಶ್ಚಾತ್ತಾಪವಾಗಿತ್ತು. ಮಗುವಿನ ತಲೆ ಸವರುತ್ತ, “”ಇದು ನಂಗೆ ಹೆಚ್ಚಲ್ಲ. ಅವಳು ಹೋಗುವಾಗ ನನ್ನ ಕೈ ಹಿಡಿದು, ಇವಳಿಗೆ ನೀವೇ ಅಮ್ಮ-ಅಜ್ಜಿ ಎಲ್ಲ ಅಂತ ಹೇಳಿ ಕಣ್ಣೀರು ಹಾಕಿದು. ಅವಳ ಕಷ್ಟ ಅರ್ಥ ಆಗ್ತದೆ ಅಕ್ಕಾ. ಹೊಟ್ಟೆಯ ಸಂಕಟಕ್ಕೆ ಎಂತದ್ದೂ ಬಂತು” ಅಂದಿದ್ದಳು. ಮುಂದಿನ ದಿನಗಳಲ್ಲಿ ಸೊಸೆಯ ಬಗ್ಗೆ ಮಾತಾಡಿದ್ದು ಕಡಿಮೆಯೇ. ಮೊಮ್ಮಗಳ ತುಂಟಾಟ-ಕೊಂಡಾಟಗಳ ಬಗ್ಗೆಯೇ ಹೇಳುತ್ತಿದ್ದಳು. ಆದರೆ, ಈಗ ಇದ್ದಕ್ಕಿದ್ದಂತೆ ಈ ಬೇಡಿಕೆ ಕೇಳಿ ಕಕ್ಕಾಬಿಕ್ಕಿಯಾಯ್ತು ವಿನುತಾಳಿಗೆ.
“”ನಿಮ್ಗೆ ಕಷ್ಟ ಆದೀತು ಅಕ್ಕ. ಆದ್ರೂ ಒಮ್ಮೆ ನೋಡಿ. ನಾನು ಮುದುಕಿ ಆದೆ. ಈ ಮಗು ಇನ್ನು ದೊಡ್ಡವಳಾಗ್ತಾಳೆ. ಇವಳ ಅಪ್ಪ ಈಗೀಗ ಆಸ್ಪತ್ರೆಯಲ್ಲೇ ಇರ್ತಾನೆ. ಮನೆಗೆ ಬರುವುದೇ ಕಮ್ಮಿ. ನಂಗೆ ರಾತ್ರಿ ನಿದ್ದೆಯೇ ಬರುವುದಿಲ್ಲ ಅಕ್ಕ” ಅಂದಳು. ವಿನುತಾ ಏನು ಹೇಳಬೇಕೊ ತಿಳಿಯದೆ ತಡವರಿಸಿದಳು. ಜೆಸಿಂತಾಬಾಯಿ, “”ನಾನು ನಮ್ಮ ನೆಂಟರ ಜೊತೆಗೆ ಅವರ ಆಫೀಸಿಗೆ ಹೋಗ್ಲಿಕ್ಕಾಗ್ತದಾ ನೋಡ್ತೇನೆ” ಅನ್ನುವ ಹುಸಿ ಭರವಸೆ ಕೊಟ್ಟು ಅವಳನ್ನು ಹೇಗೋ ಕಳುಹಿಸಿ ಉಸಿರು ದಬ್ಬಿದಳು.
ಮಂಗಳೂರು ನಿಲ್ದಾಣ ತಲುಪುವವರೆಗೂ ವಿನುತಾಳಿಗೆ ಜೆಸಿಂತಾಬಾಯಿಯ ನೆನಪಿನಿಂದ ಮ್ಲಾನತೆ ಆವರಿಸಿಕೊಂಡಿತ್ತು. ನಿಲ್ದಾಣದೊಳಗೆ ಹೊಕ್ಕಿದ್ದೇ ಅವಳ ಪ್ರಪಂಚ ಬೇರೆಯೇ ಆಯ್ತು. ಒಂದು ಕಡೆ ಮೊದಲ ವಿಮಾನ ಪ್ರಯಾಣದ ಅನುಭವ. ಜೊತೆಗೆ ಮುಂಬಯಿ ಕುರಿತಾದ ಕಲ್ಪನೆಗಳ ಮಹಾಪೂರ ಉಕ್ಕುಕ್ಕಿ ಹರಿಯಲಾರಂಬಿಸಿತ್ತು. ಹೇಗೆ ನೋಡುವುದು ಮುಂಬಯಿಯನ್ನು? ಕಾಯ್ಕಿಣಿ ಕಥೆಗಳ ಮೂಲಕವೊ… ಚಿತ್ತಾಲರ ಕಾದಂಬರಿಯ ಮೂಲಕವೊ, ವ್ಯಾಸರಾಯ ಬಲ್ಲಾಳರ ಮೂಲಕವೊ… ಅಲ್ಲ ಕಸಬ್ ಮೂಲಕವೊ… ಭೂಗತ ನಿಗೂಢಗಳ ಮೂಲಕವೊ; ತೊಂಬತ್ತೆರಡರ ದಳ್ಳುರಿಯ ಮೂಲಕವೊ, ಹೇಗೆ? ಸದ್ಯದ ಮಟ್ಟಿಗಂತೂ ಅವಳಿಗೆ ಇದಾವುದರ ಪ್ರಭಾವವಿಲ್ಲದೆ ಸಹಜವಾಗಿ ನೋಡುವ ಮನಃಸ್ಥಿತಿಯನ್ನು ಆವಾಹಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಅಷ್ಟರಮಟ್ಟಿಗೆ ಈ ಸಂಗತಿಗಳೆಲ್ಲ ಮನಸ್ಸನ್ನಾವರಿಸಿಕೊಂಡುಬಿಟ್ಟಿತ್ತು. ಪ್ರವಾಹವೆಂದರೆ ಎಲ್ಲವೂ ಒಟ್ಟೊಟ್ಟಾಗಿಯೇ ಉಕ್ಕುವುದಲ್ಲವೆ? ಉಕ್ಕಿದಂತೆಯೇ ಅದಾಗಿಯೇ ಇಳಿಯಬೇಕು. ವಿನುತಾಳ ಸ್ಥಿತಿಯೂ ಹಾಗೇ ಆಯ್ತು. ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಎಲ್ಲದರಲ್ಲು; ಎಲ್ಲರಲ್ಲು ನಿಗೂಢಗಳನ್ನೇ ಹುಡುಕುತ್ತಿತ್ತು ಮನಸ್ಸು. ವಾಸ್ತವ್ಯಕ್ಕೆ ಜಾಗ ನಿಗದಿಯಾದ್ದರಿಂದ ನೇರ ಟ್ಯಾಕ್ಸಿ ಹಿಡಿದು ವಿಳಾಸ ಹೇಳಿ ಕೂತಿದ್ದಾಯ್ತು. ಮಹಾಕಾಳೀ ಕೇವ್ಸ್ ರಸ್ತೆಯ ಬದಿಯಲ್ಲೇ ಆಳೆತ್ತರದ ಗೇಟ್ ಒಳಗೆ ಟ್ಯಾಕ್ಸಿ ನುಗ್ಗುತ್ತಿದ್ದಂತೆ ಗೇಟ್ ಕೀಪರ್ ಓಡಿ ಬಂದು ವಿಚಾರಿಸಿ ನಂತರ ಒಳಗೆ ಬಿಟ್ಟ. ಗೇಟಿನಿಂದ ಐನೂರು ಮೀಟರ್ ಒಳಗಿತ್ತು ಆಶ್ರಮದ ಕಟ್ಟಡ ಸಮುಚ್ಚಯಗಳು. ಸುಮಾರು ಇಪ್ಪತ್ತು ಎಕರೆಗೂ ಮಿಕ್ಕಿರಬಹುದಾದ ಶಿಸ್ತಿನಿಂದ ನೋಡಿಕೊಂಡ ತೋಟಗಾರಿಕೆಯ ಹಸುರು, ಗೇಟಿನಾಚೆಯ ಮುಂಬೈ ಗದ್ದಲವನ್ನು ತಡೆದುಬಿಟ್ಟಿತ್ತು. ಅವರು ರಿಸೆಪ್ಷನ್ ಕೌಂಟರ್ ಬಳಿ ನಿಂತಿದ್ದಾಗ ನಾಲ್ಕೈದು ಯುವಕರ ಹಾಗೂ ಹೆಚ್ಚು ಕಡಿಮೆ ಅಷ್ಟೇ ಸಂಖ್ಯೆಯ ಯುವತಿಯರ ದಂಡು ಅಲ್ಲಿಗೆ ಬಂತು. ಎಲ್ಲರ ಬೆನ್ನಲ್ಲು ಬ್ಯಾಕ್ ಪ್ಯಾಕ್. ಮಲೆಯಾಳ ಭಾಷೆಯ ಮಾತು. ಸಹಜ ಕುತೂಹಲದಿಂದ ವಿನುತಾಳ ಕಿವಿ ನೆಟ್ಟಗಾಯ್ತು. ಮಲೆಯಾಳ ಮಾತು ಸರಿಯಾಗಿ ಬಾರದಿದ್ದರೂ ಕೇಳಿದ್ದು ಅರ್ಥವಾಗುತ್ತಿತ್ತು. ಕಿವಿಗೆ ಬಿದ್ದ ಕೆಲವು ಮಾತುಗಳ ಮೂಲಕ ಎಂತದೋ ಟ್ರೇನಿಂಗ್, ಪರೀಕ್ಷೆ, ಇಂಟವ್ಯೂìಗಳಿಗಾಗಿ ಬಂದವರೆಂಬುದು ತಿಳಿಯಿತು. ಓಹೋ ! ಇಲ್ಲಿ ಪರೀಕ್ಷೆಗಳಿಗೆ ಬರುವವರಿಗಾಗಿಯೇ ವಾಸ್ತವ್ಯ ಕೊಡುತ್ತಾರೇನೋ ಅಂದುಕೊಳ್ಳುತ್ತ ಮಗನೊಂದಿಗೆ ನಿಗದಿಯಾದ ಕೋಣೆಯತ್ತ ನಡೆದಳು.
ಎರಡನೆಯ ಮಹಡಿಯಲ್ಲಿ ಉದ್ದದ ಕಾರಿಡಾರ್. ಎದುರು ಬದುರಾಗಿ ಏಳೆಂಟು ಕೋಣೆಗಳು. ಆಗಲೇ ಹೆಚ್ಚಿನ ಕೊಠಡಿಗಳು ತುಂಬಿದ್ದವು. ಇವರಿಗಾಗಿ ಕಾಯ್ದಿರಿಸಿದ್ದ ಕೋಣೆ ಮೆಟ್ಟಿಲ ಸಮೀಪವೇ ಇತ್ತು. ಮೆಟ್ಟಿಲ ಬದಿಯಲ್ಲಿ ಸಣ್ಣ ಹಾಲ್. ಅÇÉೊಂದು ಮೇರಿ ಮಾತೆಯ ವಿಗ್ರಹ. ಅದರ ಪಕ್ಕದಲ್ಲೇ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದಾದ ಸದಾ ನೀರು ತುಂಬಿರುವ ಅಕ್ವಾಗಾರ್ಡ್.
ವಿನುತಾಳ ಕೊಠಡಿಯ ಕಿಟಕಿಯಿಂದ ನೆಲದತ್ತ ನೋಡಿದರೆ ಕಾಣಿಸುವುದು ಹಸುರು ಹುಲ್ಲಿನ ಹಾಸು; ನಡುನಡುವೆ ತರಕಾರಿ ಗಿಡಗಳ ಸಾಲು; ನಿಗದಿತ ಅಂತರದಲ್ಲಿ ಬೇರೆ ಬೇರೆ ಬಗೆಯ ಮರಗಳು. ಅಲ್ಲಲ್ಲಿ ಗಿಡ-ಮರಗಳ ಸೇವೆ ಮಾಡುವ ಕೆಲಸದಾಳುಗಳು. ಮೇಲ್ತನಿಖೆಗಾಗಿ ಆಗೀಗ ಬರುವ ಪಾದ್ರಿಗಳು. ಒಂದೆರಡು ದಿನಗಳಲ್ಲೇ ಅಪರಿಚಿತತೆ ಮಾಯವಾಗಿತ್ತು. ಮುಂಜಾವದ ಹಿತವಾದ ಹವೆಗೆ ಕೆಳಗಿಳಿದು ಹೋಗಿ ಹುಲ್ಲು ಇಹಾಸಿನ ಮೇಲೆ ನಡೆಯುತ್ತಿದ್ದಳು. ಮುಂಬಯಿಗೆ ಬಂದು ಆಗಲೇ ಹದಿನೈದು ದಿನಗಳಾಗಿತ್ತು. ಮಗನ ಪರೀಕ್ಷೆಗಳು ಮುಗಿಯಲು ಇನ್ನು ಒಂದು ವಾರವಷ್ಟೆ ಬಾಕಿ. ಅಂಬೋಲಿಯಲ್ಲಿರುವ ಬಂಧುಗಳ ಭೇಟಿಯಾಗಬೇಕಿತ್ತು. ಸರಿ. ಇವತ್ತು ಮಧ್ಯಾಹ್ನವೇ ಹೋದರಾಯೆ¤ಂದುಕೊಂಡು ಅವರಿಗೆ ತಿಳಿಸಲು ಫೋನ್ ಎತ್ತಿಕೊಂಡಳು. ಕಾರಿಡಾರಿನಲ್ಲಿ ಇದ್ದಕ್ಕಿದ್ದಂತೆ ನಗು-ಗೌಜು ಕೇಳಲಾರಂಭಿಸಿತು. ನಿನ್ನೆ ರಾತ್ರಿ ಹನ್ನೆರಡರವರೆಗೂ ಹೊರಗಡೆ ಮಾತು-ಹಾಡು ನಗು ಕೇಳಿಸುತ್ತಿತ್ತು. ಈಗ ಮತ್ತೆ ಬೆಳಗಿನ ಜಾವವೇ ಸುರು ಮಾಡಿಬಿಟ್ಟಿದ್ದಾರೆ. ಅಲ್ಲಾ, ಇವರು ಪರೀಕ್ಷೆಗಳಿಗೆ, ಇಂಟವ್ಯೂìಗೆ ಅಂತೆಲ್ಲ ಬಂದವರಂತೆ. ಯಾವಾಗ ನೋಡಿದ್ರೂ ರೂಮಿಗೆ ಬರುವಾಗ ಹೋಗುವಾಗ ಗದ್ದಲವೆಬ್ಬಿಸಿಕೊಂಡೇ ಇರ್ತಾರೆ. ರೂಮಿನಿಂದಲೂ ಅಷ್ಟೆ , ಮೊಬೈಲ್ ಹಾಡುಗಳು; ಹರಟೆಯ ಗದ್ದಲಗಳು. ಬೆಳಗ್ಗೆ ಗುಂಪಿನಲ್ಲಿ ಹೊರಟರೆಂದರೆ ಮತ್ತೆ ಸಂಜೆಯವರೆಗೆ ಶಾಂತವಾಗಿರುತ್ತಿತ್ತು. ಕೆಲವೊಮ್ಮೆ ವಿನುತಾ ಹೊರ ಹೋಗುವ ಹೊತ್ತಿಗೆ ಅವರುಗಳ ಪೈಕಿ ಯಾರಾದರೂ ಎದುರು ಸಿಗುತ್ತಿದ್ದರು. ಮೊದಮೊದಲು ಮುಖ ಮುಖ ನೋಡಿದರೂ ಅಕಾರಣವಾದ ನಿಗೂಢ ಅನುಮಾನದಿಂದ ಅಪರಿಚಿತ ಭಾವದಲ್ಲೇ ಮುಂದುವರಿಯುತ್ತಿದ್ದಳು. ಐದಾರು ದಿನ ಕಳೆಯುತ್ತಿದ್ದಂತೆ ಅರಿವಿಲ್ಲದೆ ನಗುವಿನ ವಿನಿಮಯವಾಗಲಾರಂಭಿಸಿತ್ತು. ಪರೀಕ್ಷೆ ಇದ್ದ ದಿನ ಮಗ ಬೇಗನೇ ಹೊರಟು ಹೋದರೆ ಇವಳು ಹೊರಗೆ ಬಾಲ್ಕನಿಗೆ ನಡೆಯುತ್ತಿದ್ದಳು. ಕೆಲವೊಮ್ಮೆ ಸಂಜೆಯ ಹೊತ್ತಲ್ಲಿ ಒಬ್ಬಳೇ ಆಶ್ರಮದ ಕೈ ತೋಟದ ಹುಲ್ಲು ಹಾಸಿನ ಮೇಲೆ ನಡೆಯುತ್ತಿದ್ದಾಗ ಅವರಲ್ಲಿ ಯಾರಾದರೂ ಹುಡುಗಿಯರು ಎದುರಾದರೆ ಮಗನ ಪರೀಕ್ಷೆಯ ಬಗ್ಗೆ ಕಾಳಜಿಯಿಂದ ಕೇಳುತ್ತಿದ್ದರು. ಗುಂಪು ಬಾಗಿಲ ಬುಡದಲ್ಲೇ ನಿಂತು ಮಾತಾಡುತ್ತಿರಬೇಕು. ಬಹಳ ಜೋರಾಗಿತ್ತು ಸದ್ದು. ವಿನುತಾ ಬಾಗಿಲು ತೆರೆದು ನೋಡಬೇಕೆಂದುಕೊಳ್ಳುವಷ್ಟರಲ್ಲೇ ಬಾಗಿಲು ಬಡಿದ ಸದ್ದು. ಊರಿಗೆ ಹೊರಟು ನಿಂತ ಇಬ್ಬರು ಹುಡುಗರು “ಬಾಯ್’ ಹೇಳಲು ನಿಂತಿದ್ದರು. ಅರೆಬರೆ ಮಲೆಯಾಳದಲ್ಲೇ “”ಬಂದ ಕೆಲಸವಾಯಿತೆ?” ಕೇಳಿದಳು. “”ಇಂಟವ್ಯೂì ಫೇಲ್. ಊರಿಗೆ ಹೋಗ್ತಿದ್ದೇವೆ” ಅಂದರು.
ಮಧ್ಯಾಹ್ನ ವಿನುತಾ ಹಾಗೂ ಧನುಷ್ ಹೊರ ಹೋಗಲು ಸಿದ್ಧರಾಗಿ ಕುಡಿಯುವ ನೀರು ತುಂಬಿಸಿಕೊಳ್ಳಲೆಂದು ಅಕ್ವಾಗಾರ್ಡ್ ಬಳಿ ಬಂದಾಗ ಮತ್ತೆ ಮೂರ್‍ನಾಲ್ಕು ಜನ ಮೆಟ್ಟಿಲ ಬಳಿ ಸೇರಿದ್ದರು. ಒಬ್ಬಳು ಯುವತಿ, ಮತ್ತಿಬ್ಬರು ಯುವಕರು ಹೊರಟು ನಿಂತು ಒಬ್ಬರಿಗೊಬ್ಬರು ವಿದಾಯ ಹೇಳುತ್ತಿದ್ದರು. “ಊರಿಗೆ ಬಂದರೆ ಸಿಗೋಣ’ ಅಂದಿದ್ದು ಅರ್ಥವಾಗಿತ್ತು. ಇವರಿಗೂ “ಬಾಯ್’ ಹೇಳಿದರು.
ಅಂಬೋಲಿಯಲ್ಲಿ ಬಂಧುಗಳೊಂದಿಗೆ ಮಾರ್ಕೆಟ್ ಕಡೆ ಹೋಗಿದ್ದರಿಂದ ಸಂಜೆ ಹಿಂದಿರುಗಿ ಆಶ್ರಮಕ್ಕೆ ಬರುವಷ್ಟರಲ್ಲಿ ಸಾಕಾಗಿ ಹೋಗಿತ್ತು ವಿನುತಾಗೆ. ಕತ್ತಲಾಗಿದ್ದರೂ ಆಶ್ರಮದ ಅಂಗಳದ ಕೈ ತೋಟದಲ್ಲಿ ಬೆಳಕಿನ ವ್ಯವಸ್ಥೆ ಇತ್ತು. ಒಂದಷ್ಟು ಹೊತ್ತು ಹುಲ್ಲುಹಾಸಿನ ಮೇಲೆ ನಡೆದರೆ ಉಲ್ಲಾಸ ಸಿಗಬಹುದೆನಿಸಿದ್ದರಿಂದ ಮಗನ ಕೈಗೆ ಕೀ ಕೊಟ್ಟು ರೂಮಿಗೆ ಕಳುಹಿಸಿದಳು. ಮಾರ್ಕೆಟ್ ಓಡಾಟ ಶರೀರಕ್ಕೆ ಆಯಾಸವಾಗುವುದಕ್ಕಿಂತ ಜಾಸ್ತಿ ಮನಸಿನಲ್ಲಿ ಗದ್ದಲವೆಬ್ಬಿಸಿತ್ತು. ಫುಟ್‌ಪಾತ್ ವ್ಯಾಪಾರದಲ್ಲಿ ತೊಡಗಿದ್ದ ಏಳೆಂಟು ವರ್ಷದ ಹುಡುಗನ ಬಳಿ ಚೌಕಾಶಿ ಮಾಡುತ್ತ ಆಕೆಯ ಬಂಧುಗಳು, “”ಯಾವೂರಪ್ಪ ನಿಂದು?” ಎಂದು ಹಿಂದಿಯಲ್ಲಿ ಕೇಳಿದ್ದರು. ಆತ ಅರ್ಥವಾಗದಂತೆ ಪಿಳಿಪಿಳಿ ಕಣಿºಡುತ್ತ ಮುಖ ನೋಡಿದ್ದ. ಮತ್ತದೇ ಪ್ರಶ್ನೆ ಕೇಳಿದಾಗ “”ಮೇರೇ ಕೋ ಗಾಂವ್ ನಹೀ ಹೈ” ಅಂದಿದ್ದ. ಇವರು ಅರ್ಥವಾಗದೆ ಮತ್ತೆ ಪ್ರಶ್ನಾರ್ಥಕವಾಗಿ ನೋಡಿದಾಗ ಆತನೊಂದಿಗಿದ್ದ ಹಿರಿಯ ಈ ಹುಡುಗ, “”ಎಲ್ಲಿಂದ ಬಂದು ಸೇರಿಕೊಂಡೊ° ಗೊತ್ತಿಲ್ಲ. ಬುದ್ಧಿ ತಿಳಿವಾಗ್ಲೆ ಇದೇ ಫುಟ್‌ಪಾತ್ ಮೇಲಿ¨ªಾನೆ” ಎಂದು ಹಿಂದಿಯಲ್ಲಿ ಹೇಳಿದ್ದ. ಅವನ ಬಳಿ ಒಂದೆರಡು ಬೈರಾಸ್ ಖರೀದಿಸಿ ಅಲ್ಲಿಂದ ಹೊರಟ ಮೇಲೂ ಒಂದು ವಿಚಿತ್ರ ತಳಮಳ ಸುರುವಾಗಿತ್ತು ವಿನುತಾಗೆೆ. ಗುಳೆ ಹೋಗುವುದು ಗೊತ್ತಿದೆ. ಊರು ತೊರೆಯುವುದು ಗೊತ್ತಿದೆ. ಆದರೆ, ಊರೇ ಇಲ್ಲದಿರುವುದೆಂದರೆ…? ತನಗೋ ಉಳಿದಿರುವ ಮಗನ ಎರಡು ಪರೀಕ್ಷೆಗಳನ್ನ ಮುಗಿಸಿ ಊರಿಗೆ ಹೋಗುವ ಕಾತರ. ಹುಲ್ಲುಹಾಸಿನ ಮೇಲೆ ನಡೆಯುತ್ತಿದ್ದರೂ ಅವನ ಮುಖವೇ ಕಣ್ಣೆದುರು ಬರುತ್ತಿತ್ತು. ಇದ್ದಕ್ಕಿದ್ದಂತೆ ಮಗುವೊಂದರ ಧ್ವನಿ. “”ಎನಕ್ ಇಪ್ಪೊಳೇ ಅಮ್ಮೆ ವೇಣ…” (ನನಗೀಗಲೇ ಅಮ್ಮ ಬೇಕು) ಧ್ವನಿ ಬಂದತ್ತ ಗಮನಿಸಿದರೆ ಟ್ರೇನಿಂಗಿಗೆಂದು ಬಂದಿದ್ದವರಲ್ಲಿ ಒಬ್ಬ ಯುವತಿ ಕಲ್ಲುಬೆಂಚಿನ ಮೇಲೆ ಕುಳಿತು ಮೊಬೈಲಿನಲ್ಲಿ ಮಾತಾಡುತ್ತಿದ್ದಳು. ಸರಿಯಾಗಿ ಕೇಳಿಸುತ್ತಿಲ್ಲವೆಂದೋ ಏನೋ ಲೌಡ್ ಸ್ಪೀಕರ್ ಆನ್ ಮಾಡಿದ್ದಿರಬೇಕು. ಮಗುವಿನ ಧ್ವನಿ ಕೇಳಿಸಿತ್ತು. ಯುವತಿ ಮಗುವನ್ನು ಸಮಾಧಾನ ಪಡಿಸುವ ಧ್ವನಿಯಲ್ಲಿ, “”ಅಮ್ಮೆ ಮೋಳ್ ವೆಲಿಯ ಕೇಕ್, ಪಿನ್ನೆ ಕೊರೆ ಚಾಕ್ಲೇಟ್ ಕೊಂಡುವರ ಕೇಟ್ಟೋ. ಕರೆಯಂಡ ಮೋಳೇ. ಅಮ್ಮೆ ವರ” ಅನ್ನುತ್ತಿದ್ದುದು ಕೇಳಿ ಅಚ್ಚರಿಯಾಯ್ತು. ಅರೆ! ಇವರಲ್ಲಿ ಮಕ್ಕಳೊಂದಿಗರೂ ಇ¨ªಾರೆ. ಬಹುಶಃ ಇವರೆಲ್ಲ ಯಾವುದಾದರೂ ಬ್ಯಾಂಕ್ ಉದ್ಯೋಗಿಗಳು, ಏನೋ ಪ್ರಮೋಷನ್ ಎಕ್ಸಾಮ್ಸ್‌ಗಾಗಿ ಜೊತೆಯಾಗಿ ಬಂದವರಾಗಿರಬೇಕು ಅಂದುಕೊಂಡಳು.
ಮುಂದಿನ ಎರಡು ದಿನಗಳಲ್ಲೆ ಬೆಳಗ್ಗೆ ಲಗೇಜುಗಳೊಂದಿಗೆ ವಿನುತಾ, ಧನುಷ್ ಕೋಣೆಯಿಂದ ಹೊರ ಬಿ¨ªಾಗ ಕಾರಿಡಾರ್ ಮೂಲೆಯಲ್ಲಿರುವ ಮೇರಿ ಮಾತೆಯ ಮುಂದೆ ಇಬ್ಬರು ಯುವತಿಯರು ನಿಂತಿದ್ದರು. ಒಬ್ಟಾಕೆ ಆ ಸಂಜೆ ತನ್ನ ಮಗುವಿನೊಂದಿಗೆ ಮಾತಾಡುತ್ತಿದ್ದವಳು. ಆಗಷ್ಟೇ ತಲೆಸ್ನಾನ ಮಾಡಿದ್ದರಿಂದ ತಲೆಗೆ ಟವೆಲ್ ಬಿಗಿದುಕೊಂಡಿದ್ದರು. ಇವರು ಹೊರಟಿರುವುದನ್ನು ಗಮನಿಸಿದ ಆಕೆ ಇಬ್ಬರನ್ನೂ ಮತ್ತೆ ಮತ್ತೆ ನೋಡುತ್ತ, “”ಆಂಟಿ, ಮಗನ ಪರೀಕ್ಷೆ ಮುಗಿಯಿತಾ? ಊರಿಗೆ ಹೊರಟಿರಾ?” ಮಲೆಯಾಳದಲ್ಲಿ ಕೇಳಿದಳು.
“”ಹೂಂ” ಅಂದಳು ವಿನುತಾ. “ಆಂಟಿ’ ಅಂದಿದ್ದರಿಂದ ಕಸಿವಿಸಿಯಾಗಿ ಅವಳನ್ನೊಮ್ಮೆ ದಿಟ್ಟಿಸಿದಳು. ಇಪ್ಪತ್ತಾರರ ಆಸುಪಾಸಿನ ಯುವತಿ. ನಲ್ವತ್ತು ದಾಟಿದ ತಾನು. ಪರವಾಗಿಲ್ಲ ಅನಿಸಿತು. ಮರುಕ್ಷಣವೇ ತನ್ನ ಪೊಟ್ಟು ಮಲೆಯಾಳದಲ್ಲಿ, “”ನಿಮ್ಮ ಟ್ರೇನಿಂಗ್, ಎಕ್ಸಾಮ್ಸ್ ಎಲ್ಲ ಯಾವಾಗ ಮುಗಿಯುತ್ತದೆ? ನೀವು ಯಾವಾಗ ಊರಿಗೆ ಹೋಗ್ತಿàರಿ?” ಕೇಳಿದಳು. ಇಬ್ಬರು ಮುಖ ಮುಖ ನೋಡಿಕೊಂಡರು.
“”ನಮ್ಮ ಟ್ರೇನಿಂಗ್ ಮುಗಿದ ಮೇಲೆ ಇಂಟವ್ಯೂì ಇದೆ. ಸೆಲೆಕ್ಟ್ ಆದವರು ಇಲ್ಲಿಂದ ಸೀದಾ ಹೋಂನರ್ಸ್ ಕೆಲಸಕ್ಕೆ ಇಸ್ರೇಲಿಗೆ ಹೋಗ್ತೀವೆ” ಅಂದರು. ಅನೂಹ್ಯ ಉತ್ತರದಿಂದ ತತ್ತರಿಸಿ ಹೋದಳು ವಿನುತಾ. ಜೆಸಿಂತಾಬಾಯಿ ಮತ್ತವಳ ಮೊಮ್ಮಗಳು ಮೇರಿಯ ಮುಖ ದುತ್ತನೆ ಕಣ್ಣೆದುರು ನಿಂತಿತು.
“”ಆಂಟಿ, ನಮಗೆ ಒಳ್ಳೆಯದಾಗಲಿ ಅಂತ ದೇವರ ಹತ್ತಿರ ಪ್ರಾರ್ಥಿಸಿ ದಯವಿಟ್ಟು” ಎಂದಳೊಬ್ಬಳು.
ಯುವತಿಯ ಮಾತಿಗೆ ತಡಬಡಾಯಿಸುತ್ತ, “ಖಂಡಿತವಾಗಿ’ ಅನ್ನುತ್ತ ತಲೆ ಆಡಿಸಿದಳು ವಿನುತಾ. ಅವಳ ಕಿವಿಯಲ್ಲಿ ನಿನ್ನೆ ರಾತ್ರಿ ಆ ಯುವತಿ ಫೋನಿನಲ್ಲಿ ತನ್ನ ಮಗುವಿಗೆ, “ಅಳಬೇಡ ಮಗುವೆ. ಅಮ್ಮ ನಿನಗಾಗಿ ದೊಡ್ಡ ದೊಡ್ಡ ಕೇಕ್ ತರ್ತೇನೆ. ಅಮ್ಮ ಬರುವಾಗ ಒಳ್ಳೊಳ್ಳೆ ಮಿಠಾಯಿ ತರ್ತೇನೆ’ ಅನ್ನುತ್ತಿದ್ದ ಮಾತುಗಳು ಗುಂಯ್ ಗುಡಲಾರಂಭಿಸಿತು. ಪುಟ್ಟ ಮೇರಿಯ ನಿರೀಕ್ಷೆಯ ಕಣ್ಣುಗಳು. ಮಾರ್ಕೆಟ್ ಹುಡುಗನ ಮಾತು “ಗಾಂವ್ ನಹೀ…’ ಮತ್ತೆ ಮತ್ತೆ ಅಪ್ಪಳಿಸಿತು. ಕಾಲುಗಳು ಅವಳನ್ನು ಮೇರಿಯಮ್ಮಳ ಪ್ರತಿಮೆಯ ಸನಿಹ ಕೊಂಡೊಯ್ದಿತು. ವಿನುತಾಳ ಕಣ್ಣುಗಳು ಅಪ್ರಯತ್ನವಾಗಿ ಮೇರಿ ಮಾತೆಯ ಮುಖವನ್ನೇ ದಿಟ್ಟಿಸಲಾರಂಭಿಸಿತು. ಕಾಲು ಕೀಳಲು ಸಾಧ್ಯವಾಗದೆ ಅವಳನ್ನೇ ನೋಡುತ್ತ ನಿಂತಳು.
ಅನುಪಮಾ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.