ಕತೆ: ದೂರದ ಕಣ್ಣು
Team Udayavani, May 13, 2018, 6:00 AM IST
ಸರ್, ಎಲ್ಲ ರೆಡಿ ಆಗಿದೆ, ನೀವು ಇನ್ನೆರಡು ಕಡೆ ಬೇಕಾದರೆ ಕೊಟೇಶನ್ ತೊಗೊಂಡು ನೋಡಿ. ನಾನು ಕೊಟ್ಟಿರೋ ಆಫರ್‌ಗೆ ಯಾರೂ ಹಾಕಿಕೊಡಲ್ಲ . ನೀವು ಇನ್ನೊಂದು ಲಕ್ಷ ಕೊಟ್ಟರೂ ನೈಟ್ ವಿಷನ್ ಎಲ್ಲಾ ಕಡೇನೂ ಬ್ಲ್ಯಾಕ್ ಅಂಡ್ ವೈಟೇ ಕಾಣಿಸೋದು. ಮುಂದಿನ ವಾರಾನೇ ಬೇಕಿದ್ರೆ ನಿಮ್ಮೂರಿಗೆ ಹೋಗಿ ಎಲ್ಲಾ ಫಿಕ್ಸ್ ಮಾಡಿಸಿ ಬರ್ತೀನಿ, ಊರಿನ ನಿಮ್ಮ ಮನೆಯ ಕಂಪ್ಯೂಟರ್, ಟೀವಿ ನಿಮ್ಮ ಮೊಬೈಲ್ ಮತ್ತು ನಿಮ್ಮ ತಂಗಿ ಮೊಬೈಲ್ ನಾಲ್ಕಕ್ಕೂ ಆಕ್ಸೆಸ್ ಕೊಡ್ತೀನಿ, ಇದು ಹೈ ಎಂಡ್ ಲೆಟ್ ಆಗಿರೋದ್ರಿಂದ ನಿಮಗೆ ವ್ಯೂ ಒಳ್ಳೇ ಕ್ಲಾರಿಟಿ ಇರುತ್ತೆ” ಎಂದು ಬೆಂಗಳೂರಿನ ಒಬ್ಬ ಸಿಸಿ ಕ್ಯಾಮೆರಾ ಸೇಲ್ಸ… ಅಂಡ್ ಸರ್ವಿಸ್‌ನವನು ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿರುವ ರಾಘವನಿಗೆ ಫೋನ್‌ನಲ್ಲಿ ಹೇಳಿದ. ಅಂದ ಹಾಗೆ ವ್ಯಾಪಾರ ಕುದುರಿಸಲು ಇದು ನಾಲ್ಕನೆಯ ಫೋನ್ ಕಾಲ… ಆಗಿತ್ತು. ಅಲ್ಲಿಂದಲೇ, “”ಆಯ್ತು, ನನ್ನ ತಂಗಿ ಮತ್ತು ತಂದೆಯವರ ಹತ್ತಿರ ಒಂದು ಮಾತು ಕೇಳಿ ನಾನೇ ನಿಮಗೆ ಕನ್‌ಫರ್ಮ್ ಮಾಡ್ತೀನಿ” ಅಂದ ರಾಘವ.
ಹೋದವಾರ ತಮ್ಮ ಪಕ್ಕದ ಉರಿನಲ್ಲಿ ಅಡಿಕೆ ಕಣದಲ್ಲಿ ಒಣಗಿಸಿದ್ದ ಎರಡು ಲಕ್ಷ ರೂ. ಮೌಲ್ಯದ ಅಡಿಕೆ ಕಳುವಾದ ಸುದ್ದಿ ಕೇಳಿದಾಗಿನಿಂದ ರಾಘವ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಅವನ ತಂಗಿ ರಂಜಿತಾ ಇಬ್ಬರಿಗೂ ಊರಿನ ತಮ್ಮ ಮನೆಯ ಅಡಿಕೆ ಕಣದ ಬಗ್ಗೆಯೇ ಚಿಂತೆಯಾಗಿತ್ತು. ಪೇಪರಿನ ಎರಡನೆಯ ಪುಟದಲ್ಲಿ ಮಲೆನಾಡಿನ ಯಾವುದೋ ಹಳ್ಳಿಯಲ್ಲಿ ಲಕ್ಷ ಲಕ್ಷ ಮೌಲ್ಯದ ಅಡಿಕೆ ಅಥವಾ ಕಾಳು ಮೆಣಸು ಕಳವು ಎಂಬ ಸುದ್ದಿ ಓದುವಾಗೆಲ್ಲ ಮುಂದೊಂದು ದಿನ ತಮ್ಮ ಮನೆಯ ಸುದ್ದಿಯೂ ಹೀಗೆ ಬರುವಂತಾಗಬಾರದು ಎಂದು ಮುನ್ನೆಚ್ಚರಿಕೆ ವಹಿಸಿ ರಾಘವ ಬೆಂಗಳೂರಿನ ಮೂರ್ನಾಲ್ಕು ಸಿಸಿ ಕ್ಯಾಮೆರಾ ವರ್ತಕರನ್ನು ಪತ್ತೆ ಹಚ್ಚಿ ಮನೆಯಿಂದ ತುಸು ದೂರದಲ್ಲಿ ತೋಟದ ತಲೆಕಟ್ಟಿಗಿರುವ ಅಡಿಕೆ ಕಣಕ್ಕೂ ತೋಟದ ಪ್ರವೇಶ ದ್ವಾರದಲ್ಲೂ ಒಟ್ಟು ಮೂರು ಕ್ಯಾಮೆರಾಗಳನ್ನು ಫಿಕ್ಸ್ ಮಾಡಿಸಬೇಕೆಂದು ತೀರ್ಮಾನಿಸಿದ್ದ .
ಅದಕ್ಕಾಗಿ ಅಪ್ಪಅಮ್ಮನನ್ನು ಒಪ್ಪಿಸುವುದು ಅವನಿಗೆ ಸ್ವಲ್ಪ ಕಷ್ಟವಾಯಿತು. ವಯಸ್ಸಾದ ಅಪ್ಪನಿಗೆ ಇತ್ತೀಚೆಗೆ ಮಂಡಿ ನೋವು ತುಂಬಾ ಕಾಡುತ್ತಿತ್ತಾದ್ದರಿಂದ ಡಾಕ್ಟರ್, ಕಾಲುನೋವಿಗೆ ವಿಶ್ರಾಂತಿಯೊಂದೇ ಏಕೈಕ ಪರಿಹಾರ ಎಂದಿದ್ದರು. ಹಾಗಾಗಿ, ಮನೆ ಒಳಗೆ-ಹೊರಗೆ ಮಾತ್ರ ಓಡಾಡಿಕೊಂಡು ತಮ್ಮ ಕೆಲಸ ಅಷ್ಟೇ ತಾವು ಮಾಡಿಕೊಳ್ಳುವುದು ಅಪ್ಪನಿಗೆ ಅನಿವಾರ್ಯವಾಗಿತ್ತು. ಆದ್ದರಿಂದ ಕೊಟ್ಟಿಗೆ ಕೆಲಸ, ಆಳುಗಳ ಕೈಲಿ ತೋಟದ ಕೆಲಸ ಮಾಡಿಸುವುದು ಪೇಟೆಗೆ ಹೋಗಿ ದಿನನಿತ್ಯದ ಸಾಮಾನು, ಮಾತ್ರೆ ಔಷಧಿ ಕೊಂಡು ತರುವುದು ಎಲ್ಲವೂ ಅಮ್ಮ ಒಬ್ಬಳ ಹೆಗಲ ಮೇಲೇ ಬಿದ್ದಿತ್ತು. ಅವಳು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಳು. ಮೊನ್ನೆ ಕ್ಯಾಮೆರಾ ಫಿಕ್ಸ್ ಮಾಡಿಸುವ ವಿಚಾರ ಎತ್ತಿದಾಗ ಅಪ್ಪ””ಬೇಡವೇ ಬೇಡ, ಅಷ್ಟೊಂದು ಖರ್ಚು ಮಾಡಿ ಕ್ಯಾಮೆರಾ ಹಾಕಿಸುವುದು ದುಡ್ಡು ದಂಡಕ್ಕಷ್ಟೇ. ಕಳ್ಳರು ವೈರ್ ಕತ್ತರಿಸಿ ಕದಿಯಬಹುದು. ಅದರಲ್ಲಿ ಕಾಣುವ ಚಿತ್ರವೂ ಸ್ಪಷ್ಟವಾಗಿರುವುದಿಲ್ಲ, ನಾನು ನೋಡಿದ್ದೇನೆ ಒಬ್ಬರ ಮನೆಯಲ್ಲಿ, ಅಲ್ಲಿ ಓಡಿ ಹೋದದ್ದು ನಾಯಿಮರಿಯೋ, ಬೆಕ್ಕೋ ಎಂದೂ ಸ್ಪಷ್ಟವಾಗಿ ಕಾಣಿಸುವುದಿಲ್ಲ” ಎಂದರು.
ತತ್‌ಕ್ಷಣ ರಾಘವ, “”ಇಲ್ಲ ಅಪ್ಪ , ಅವರ ಮನೆಯಲ್ಲಿ ಹಾಕಿಸಿದ್ದು ಒಳ್ಳೆಯ ಗುಣಮಟ್ಟದ್ದಲ್ಲದಿರಬಹುದು. ನಾನು ತುಂಬ ವಿಚಾರಿಸಿ ಬೆಸ್ಟ್ ಕ್ವಾಲಿಟಿಯದ್ದೇ ಫೈನಲ… ಮಾಡಿದ್ದೇನೆ, ಇದರಲ್ಲಿ ನಾಯಿಮರಿಯೋ ಬೆಕ್ಕೋ ಎಂದಷ್ಟೇ ಅಲ್ಲದೇ ಅದು ಹಂಡ ಬಣ್ಣದ್ದೋ ಕಪ್ಪೋ ಕಂದೋ ಎಂದು ಬಣ್ಣವನ್ನೂ ಗುರುತಿಸಬಹುದು. ದಣಪೆಯಿಂದ ನುಸುಳಿ ಬರುವ ಹಸುಗಳೂ ಯಾರ ಮನೆಯದೆಂದು ಸುಲಭವಾಗಿ ಪತ್ತೆ ಹಚ್ಚಬಹುದು. ಹಾಗಾಗಿ, ತೋಟದ ಎಂಟ್ರ್ಯಾÕ… ದಣಪೆ ಪಕ್ಕದಲ್ಲೂ ಒಂದು ಕೆಮರಾ ಹೇಳಿದ್ದೇನೆ. ಇದೊಂದು ರೀತಿ ದೂರದ ಕಣ್ಣು, ನಾನು ರಂಜಿತಾ ಕೂಡ ನಮ್ಮ ನಮ್ಮ ಮನೆಯಿಂದಲೇ ಅಲ್ಲಿಯ ದೃಶ್ಯವನ್ನು ವೀಕ್ಷಿಸುತ್ತಿರಬಹುದು. ಮುಂದಿನ ಶನಿವಾರ ರಂಜಿತಾ ಬೆಂಗಳೂರಿನಿಂದ ಅವರನ್ನು ಕರೆದುಕೊಂಡು ಬರುತ್ತಾಳೆ” ಎಂದು ಅಪ್ಪನನ್ನು ಒಪ್ಪಿಸಿದ್ದೇ ದೊಡ್ಡ ಸಾಹಸ ಎಂದುಕೊಂಡ.
ಎಲ್ಲ ಅವರಂದುಕೊಂಡಂತೆ ಆಯಿತು. ಅಡಿಕೆ ಕಣದಲ್ಲಿದ್ದ ನಾಲ್ಕು ಲಕ್ಷ ರೂಪಾಯಿ ಮಾಲಿಗೆ ಮೂವರು ಕಾವಲುಗಾರರು ನೇಮಕವಾದರು. ಕಳೆದ ಎಂಟು ವರ್ಷಗಳ ಹಿಂದೆ ರಾಘವ ಅಮೆರಿಕಕ್ಕೆ ಹೋದಾಗಲೇ ಮನೆಗೆ ಒಂದು ಕಂಪ್ಯೂಟರ್ ಹಾಗೂ ಅದಕ್ಕೆ ಇಂಟರ್ನೆಟ್ ಕನೆಕ್ಷನ್ ಕೊಡಿಸಿದ್ದ. ಅದಕ್ಕೂ ಅವರಪ್ಪ ಬೇಡ ಎಂದು ಮೊದಲು ತಕರಾರು ತೆಗೆದಿದ್ದರು. ಆಮೇಲೆ ವಾರಕ್ಕೊಮ್ಮೆ ಮಾಡುವ ವೀಡಿಯೊ ಕಾಲ… ಅಪ್ಪ-ಅಮ್ಮ ಇಬ್ಬರಿಗೂ ಖುಷಿ ಕೊಡುವ ಸಂಗತಿಯಾಯಿತು. ಮೊಮ್ಮಕ್ಕಳ ಆಟ-ಪಾಠ ನೋಡಿ ಒಮ್ಮೊಮ್ಮೆ ಅಕ್ಕ ಪಕ್ಕದ ಮನೆಯವರನ್ನೂ ಕರೆದು ತೋರಿಸುತ್ತಿದ್ದರು. ಪ್ರತಿ ತಿಂಗಳು ಭರಿಸುತ್ತಿದ್ದ ಇಂಟರ್ನೆಟ್ ಬಿಲ್ಲು ಮತ್ತು ಮೂವತ್ತು ಸಾವಿರ ರೂಪಾಯಿ ಕೊಟ್ಟು ಹಾಕಿಸಿದ ಕಂಪ್ಯೂಟರ್ ಬಳಕೆಯಾಗುತ್ತಿದ್ದದ್ದು ನ್ಯೂಜೆರ್ಸಿಯ ಮೊಮ್ಮಕ್ಕಳೊಂದಿಗೆ ಹರಟಲು ಮತ್ತು ಬೆಂಗಳೂರಿನಲ್ಲಿರುವ ಮಗಳ ಮಕ್ಕಳು ರಜೆಗೆಂದು ಊರಿಗೆ ಬಂದಾಗ ಗೇಮ್ಸ… ಆಡಲು ಮಾತ್ರ ಆಗಿತ್ತು. ಈಗ ಅದನ್ನು ಕ್ಯಾಮೆರಾ ಬ್ಯಾಕಪ್ಪಿಗೆ ಉಪಯೋಗಿಸಿ ಸದ್ಭಳಕೆ ಮಾಡಬಹುದೆಂದು ರಾಘವನಿಗೆ ಸಂತೋಷವಾಯಿತು. ಅವರ ಮನೆಯ ಸಿಸಿ ಕ್ಯಾಮೆರಾ ಊರೆಲ್ಲಾ ಸುದ್ದಿಯಾಯಿತು. ಮನೆಗೆ ಬಂದವರಿಗೂ ರಾಘವನ ಅಪ್ಪ-ಅಮ್ಮ ಟೀವಿ ಆನ್ ಮಾಡಿ ತೋಟ, ಅಡಿಕೆ ಕಣ ಎಲ್ಲವನ್ನೂ 24 ತಾಸು ಇಲ್ಲಿಂದಲೇ ನೋಡಬಹುದು ಎಂದು ಹೆಮ್ಮೆಯಿಂದ ತೋರಿಸುತ್ತಿದ್ದರು. ಇತ್ತ ಊರಿನಲ್ಲಿ ಕ್ಯಾಮೆರಾ ಫಿಕ್ಸ್ ಮಾಡುತ್ತಿದ್ದಂತೆ ರಂಜಿತಾ, ರಾಘವ ಇಬ್ಬರೂ ತಮ್ಮ ತಮ್ಮ ಮೊಬೈಲ…ನಲ್ಲಿ ಒಂದು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಲಾಗಿನ್ ಐಡಿ ಪಾಸ್‌ವರ್ಡ್ ಕೊಟ್ಟು ತಕ್ಷಣವೇ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯಾ, ಇಲ್ಲವಾ ಎಂದು ನೋಡಿ ಎಲ್ಲವೂ ಸರಿಯಾಗಿಯೇ ಇನ್‌ಸ್ಟಾಲ… ಮಾಡಿದ್ದಾರೆ ಎಂದು ತಿಳಿದುಕೊಂಡರು. ಇಷ್ಟು ದಿನ ಆ ಕಲ್ಪನೆಯೇ ಅವನಿಗೆ ತುಂಬಾ ಖುಷಿ ಕೊಡುತ್ತಿತ್ತು. ಸಾವಿರಾರು ಮೈಲಿ ದೂರದಲ್ಲಿದ್ದುಕೊಂಡು ತನಗೆ ಯಾವಾಗ ಬೇಕೆನಿಸಿದರೂ ಮನೆಯ ತೋಟದ ಕಡೆ ಒಂದು ಸುತ್ತು ಹಾಕಿಬರಬಹುದೆಂಬುದು. ಕೆಮರಾ ಫಿಕ್ಸ್ ಮಾಡುವಾಗಲೇ ಒಮ್ಮೆ ಅದರ ಮೂತಿಯನ್ನು ಪೂರ್ತಿ ತೋಟದ ಕಡೆ ತಿರುಗಿಸಲು ಹೇಳಿ ಈ ವರ್ಷ ಅಡಿಕೆ ಮರದ ಬುಡಕ್ಕೇ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದರಿಂದ ಅಡಿಕೆ ಕೊನೆಯ ಸೈಜ್ ಹೇಗೆ ಬದಲಾಗಿದೆ ಎಂದು ಅಮ್ಮ ಫೋನಿನಲ್ಲಿ ಹೇಳಿದ್ದನ್ನು ತನ್ನ ಕಣ್ಣಾರೆ ನೋಡಿ ಆನಂದಿಸಿದ. ಹೆಂಡತಿ-ಮಕ್ಕಳಿಗೂ ಕರೆದು ತೋರಿಸಿದ.
ತಾನು ಮತ್ತು ತನ್ನ ತಂಗಿ ಇಬ್ಬರೂ ಅಪ್ಪ-ಅಮ್ಮನನ್ನು ಹತ್ತಿರ ಇದ್ದು ಯೋಗಕ್ಷೇಮ ನೋಡಿಕೊಳ್ಳಲಾಗದಿದ್ದರೂ ಇದೊಂದು ವ್ಯವಸ್ಥೆಯಿಂದಾಗಿ ಅಪ್ಪ-ಅಮ್ಮನ ಚಿಂತೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿ ಕಳ್ಳರ ಬಗೆಗಿನ ಅವರ ಆತಂಕವನ್ನು ತಿಳಿಗೊಳಿಸಿದಂತಾಯಿತು ಎಂದು ಮನಸ್ಸಿನಲ್ಲೇ ಅಂದುಕೊಂಡ. ಬೆಂಗಳೂರಿನಲ್ಲಿರುವ ರಂಜಿತಾ ಅಣ್ಣನ ಹತ್ತಿರ, “”ನಾನು ಹಗಲು ಹೊತ್ತು ಅಲ್ಲಿನ ಆಗುಹೋಗುಗಳ ಬಗ್ಗೆ ಒಂದು ಕಣ್ಣಿಟ್ಟಿರುತ್ತೇನೆ, ನೀನು ರಾತ್ರಿ ಹೊತ್ತು ಆಗಾಗ ನೋಡುತ್ತಿರು” ಎಂದಳು. ಇಲ್ಲಿನ ರಾತ್ರಿ ರಾಘವನಿಗೆ ಹಗಲಾದ್ದರಿಂದ ಅದೂ ಸುಲಭವೆನಿಸಿತು. ಅಪ್ಪ-ಅಮ್ಮ ಮಾತ್ರ ಮನೆಗೆ ಯಾರಾದರೂ ಬಂದಾಗ ಮಾತ್ರ ಟೀವಿ ಆನ್ ಮಾಡಿ ಕೆಮರಾದ ನೋಟವನ್ನು ಅವರಿಗೆ ತೋರಿಸುತ್ತಿದ್ದರು.
ಒಂದು ಮಧ್ಯಾಹ್ನ 12 ಗಂಟೆಯಷ್ಟೊತ್ತಿಗೆ ರಾಘವನ ಅಮ್ಮ ಶ್ಯಾಮಲಕ್ಕ ಯಾರೋ ನೆಂಟರು ಬರುವವರಿದ್ದಾರೆ, ಊಟಕ್ಕೆ ಎಂದು ತರಾತುರಿಯಲ್ಲಿ ಅಡುಗೆ ಮಾಡುತ್ತಿದ್ದಳು. ಲ್ಯಾಂಡ್‌ಲೈನ್ ಫೋನ್ ರಿಂಗಾಯಿತೆಂದು ಗ್ಯಾಸ್ ಸ್ಟವ್‌ನ್ನು ಸಿಮ್ಮಿಗಿಟ್ಟು ಓಡಿಬಂದಳು. ಅತ್ತ ಕಡೆಯಿಂದ ರಂಜಿತಾ, “”ಅಯ್ಯೋ ಅಮ್ಮ… ಬೇಗ ಓಡು, ಇಲ್ಲಾ ಯಾರಾದ್ರು ಆಳುಗಳು ಇದ್ರೆ ತೋಟಕ್ಕೆ ಕಳಿಸು, ಯಾರದ್ದೋ ಮನೆದು ಎರಡೂರು ದನಗಳು ಈಗಷ್ಟೇ ದಣಪೆ ಸಂದಿಯಲ್ಲಿ ನುಸುಳಿ ತೋಟದ ಕಡೆ ಓಡು¤. ನಾನು ಈಗ ಮಕ್ಕಳನ್ನ ಕರೆದುಕೊಂಡು ಎಲ್ಲೋ ಹೊರಗಡೆ ಇದ್ದೀನಿ. ಆಮೇಲೆ ಮತ್ತೆ ಫೋನ್ ಮಾಡ್ತೀನಿ” ಎಂದು ಫೋನ್ ಇಟ್ಟಳು. ಹೇಗೂ ಈಗ ಕೆಲಸದಾಳುಗಳ ಕೈಲಿ ಮೊಬೈಲ… ಇರುವುದರಿಂದ ಶ್ಯಾಮಲಕ್ಕ ತತ್‌ಕ್ಷಣ ಒಬ್ಬನಿಗೆ ಫೋನ್ ಮಾಡಿ ದನ ಓಡಿಸಲು ಹೇಳಿ ಅಡುಗೆ ಮನೆಗೆ ಓಡಿದಳು. ಬರಗಾಲದಲ್ಲೇ ಅಧಿಕ ಮಾಸವೆಂಬಂತೆ ನಾವು ಅವಸರದಲ್ಲಿರುವಾಗಲೇ ಯಾವಾಗಲೂ ಹೀಗೆ ಎಂದು ಮನಸ್ಸಿನಲ್ಲೇ ಗೊಣಗಿದಳು. ಎಲ್ಲೋ ಅರ್ಜೆಂಟ್ ಬಸ್ಸಿಗೆ ಹೊರಟಿರುವಾಗಲೇ ಅಪರೂಪಕ್ಕೊಮ್ಮೆ ಊರಿಗೆ ಭೇಟಿ ಕೊಡುವ ಶಾನುಭೋಗರು ಬಂದು ಕುಳಿತುಕೊಳ್ಳುವುದು, ಹಳೇ ದೇವಸ್ಥಾನದ ಜೀರ್ಣೋದ್ಧಾರಕ್ಕೆ ವಂತಿಕೆ ಕೇಳಲು ಬರುವ ಊರಿನ ಹಿರಿಯರು, ನಮ್ಮ ಕೇರಿಯಲ್ಲಿ ಯಾರೂ ಗರ್ಭಿಣಿಯರಿಲ್ಲ ಎಂದು ಅವರ ಪಟ್ಟಿಯಲ್ಲಿ ದಾಖಲಾಗಿದ್ದರೂ “”ಟಿ ಟಿ ಇಂಜೆಕ್ಷನ್‌ಗೆ ಯಾರಾದರೂ ಗರ್ಭಿಣಿಯರಿದ್ದಾರಾ ನಿಮ್ಮ ಮನೆಯಲ್ಲಿ?” ಎಂದು ಕೇಳುತ್ತಾ ತಂಪಾದ ಮಜ್ಜಿಗೆ ಕುಡಿದು ಹೋಗುವ ದಾದಿಯರು, ನಮಗೆ ಬಿಡುವಿದ್ದಾಗ ಬರುವುದಿಲ್ಲ ಎಂದು ಅವರನ್ನೂ ಶಪಿಸಿದಳು.
ಮತ್ತೂಂದು ದಿನ ರಾತ್ರಿ ಗಂಟೆ ಹನ್ನೊಂದಾಗಿತ್ತು, ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ನ್ಯೂಜೆರ್ಸಿಯಿಂದ ಮಗ ರಾಘವನ ಫೋನ್. ತಂಗಿಯೊಂದಿಗೂ ಚರ್ಚಿಸಿ ಸಿದ್ಧಪಡಿಸಿದ ಅವನ ಕೆಮರಾ ವೀಕ್ಷಣೆಯ ವರದಿ ಸಲ್ಲಿಸಬೇಕಾಗಿತ್ತು. ಆಳುಗಳು ಕೆಲಸದ ಮಧ್ಯೆ ಎಷ್ಟು ಬಾರಿ ವಿಶ್ರಾಂತಿಗೆಂದು ಮರದಡಿಯಲ್ಲಿ ಕೂರುತ್ತಾರೆ, ಅಡಿಕೆ ಹರಗುವಾಗ ಮತ್ತು ತುಂಬುವಾಗ ಕೆಲವು ಹೆಣ್ಣಾಳು ಮತ್ತು ಗಂಡಾಳುಗಳ ಡಿಂಗ್ ಡಿಂಗ್ ಸಮಾಚಾರಗಳು ಎಲ್ಲವನ್ನೂ ಅಮ್ಮನಿಗೆ ವಿವರಿಸಿ ಚಹಾ ವಿರಾಮ ಮತ್ತು ಮಜ್ಜಿಗೆ ವಿರಾಮಗಳನ್ನೆಲ್ಲ ಮೊಟಕುಗೊಳಿಸಬೇಕಾದ ಆವಶ್ಯಕತೆಯನ್ನೂ ವಿವರಿಸಿ ಹೇಳಿದ. ಎಲ್ಲವನ್ನೂ ಸಾವಧಾನದಿಂದ ಕೇಳಿ ಶ್ಯಾಮಲಕ್ಕ ಚುಟುಕಾಗಿ ಉತ್ತರಿಸಿದ್ದಳು. “”ತಮ್ಮಾ, ಈಗ ದಿನಕ್ಕೆ ಇನ್ನೂರು ಇನ್ನೂರೈವತ್ತು ರೂಪಾಯಿ ಕೊಟ್ರೂ ಆಳುಗಳು ಸಿಗೋದು ಕಷ್ಟ , ಇನ್ನು ನಾವು ಕಂಡೀಶನ್ ಹಾಕಿದ್ರೆ ನೀನು ರಂಜಿತಾ ಬಂದು ಅಡಿಕೆ ಹರಗಬೇಕು ಅಷ್ಟೇ” ಅಂದಳು.
ಯಾವಾಗಲೂ ತನ್ನ ಕೆಲಸಗಳಲ್ಲಿ ತೊಡಗಿಕೊಂಡು ವಾರಕ್ಕೊಮ್ಮೆ ಮೊಮ್ಮಕ್ಕಳೊಂದಿಗೆ ಹರಟುತ್ತಾ ಸದಾ ಚಟುವಟಿಕೆಯಿಂದ ಇರುತ್ತಿದ್ದ ಶ್ಯಾಮಲಕ್ಕನಿಗೆ ಈಗ “ಕ್ಯಾಮೆರದಲ್ಲೇನೋ ಕಂಡೆ’ ಎಂದು ಅಚಾನಕ್ಕಾಗಿ ಬರುತ್ತಿದ್ದ ಫೋನ್ ಕಾಲ್ ಅಷ್ಟೇನೂ ಖುಷಿಯ ಸಂಗತಿಯಾಗಿರಲಿಲ್ಲ .
ರಾಘವ ತಂಗಿಯ ಹಾಗೆ ಪ್ರತಿದಿನ ಫೋನ್ ಮಾಡಿ ಅಮ್ಮ-ಅಪ್ಪನ ತಲೆ ತಿನ್ನದಿದ್ದರೂ ದಿನಕ್ಕೆ ಐದಾರು ಬಾರಿಯಾದರೂ ಲಾಗಿನ್ ಆಗಿ ಅಡಿಕೆ ಕಣ, ತೋಟ ವೀಕ್ಷಿಸುತ್ತಿದ್ದ . ಹೆಂಡತಿ-ಮಕ್ಕಳು ನ್ಯೂಜೆರ್ಸಿಯ ಬ್ರಿಜ… ವಾಟರ್ ಕಾಮ®Õ… ಮಾಲ…ನಲ್ಲಿ ಬರೋಬ್ಬರಿ ಶಾಪಿಂಗ್ ಮಾಡುತ್ತಿದ್ದರೆ ಇವನ ಕೈ ನಿಂತಲ್ಲೇ ಜೋಬಿಗೆ ಹೋಗಿ ಮೊಬೈಲ… ತೆಗೆಯುತ್ತಿತ್ತು. ಇತ್ತೀಚಿಗೆ ಮೂರು ದಿನಗಳಿಂದ ಬೆಳಿಗ್ಗೆ ಅಲ್ಲಿನ 7.30-8 ಹೊತ್ತಿಗೆ ಒಂದು ಜೋಡಿ ತಮ್ಮ ಮನೆಯ ತೋಟದ ಗೇಟಿನಿಂದ ಒಳಹೊಕ್ಕು ಅಡಿಕೆ ಕಣದ ಮೂಲಕ ಹಾದು ತಮ್ಮ ಮನೆಯ ಪಕ್ಕದ ತೋಟದ ಕಡೆ ಸಾಗುತ್ತಿದ್ದುದನ್ನು ಸೂಕ್ಷ್ಮವಾಗಿ ಗಮನಿಸಿದ್ದ. ತಾನು ಇತ್ತೀಚಿಗೆ ಎರಡು-ಮೂರು ವರ್ಷಕ್ಕೊಮ್ಮೆ ಊರಿಗೆ ಹೋಗುವವನಾದ್ದರಿಂದ ಈಗಿನ ಹುಡುಗ-ಹುಡುಗಿಯರನ್ನು ನೋಡಿದ ತತ್‌ಕ್ಷಣ ಅವರು ಯಾರ ಮಕ್ಕಳು ಎಂದು ಸುಲಭವಾಗಿ ನೆನಪಿಗೆ ಬರುತ್ತಿರಲಿಲ್ಲ . ಅದ್ದರಿಂದ ತಂಗಿಗೆ ಫೋನ್ ಮಾಡಿ, “”ನೀನು ಪ್ರತಿದಿನ ಅದೇ ಸಮಯಕ್ಕೆ ಲಾಗಿನ್ ಆಗಿ ನೋಡು, ಅದು ಯಾರು ಎಂದು ಕನ್‌ಫರ್ಮ್ ಆದ ಮೇಲಷ್ಟೇ ಅಮ್ಮನಿಗೆ ಹೇಳ್ಳೋಣ” ಅಂದ. ತಾವು ಅಣ್ಣ-ತಂಗಿ ಮಾಡುತ್ತಿದ್ದ ಪತ್ತೇದಾರಿಕೆ ಕೆಲಸದ ಬಗ್ಗೆ ರಂಜಿತಾಳಿಗೆ ತುಂಬಾ ಹೆಮ್ಮೆ ಎನಿಸಿತು. ಅಮ್ಮ ಆ ಜೋಡಿಯ ಬಗ್ಗೆ ಯಾವತ್ತೂ ಫೋನಿನಲ್ಲಿ ಹೇಳಿದ್ದು ನೆನಪಿಗೆ ಬರಲಿಲ್ಲ ಇವಳಿಗೆ. ಹಾಗಾಗಿ ಇದು ಪೋಷಕರ ಗಮನಕ್ಕೆ ತರಲೆಬೇಕಾದ ವಿಚಾರ ಎಂದು ತನ್ನ ಗೂಢಚಾರಿಕೆ ಮುಂದುವರೆಸಿದಳು.
ರಂಜಿತಾ ವರ್ಷಕ್ಕೆರಡು ಬಾರಿ ರಜೆಗೆ ಊರಿಗೆ ಹೋಗುವವಳಾದ್ದರಿಂದ ಮೊದಲನೆಯ ಸಲವೇ ಅವಳು ಅವನು ಯಾರ ಮಗ, ಯಾರ ಮಗಳು ಎಂದು ಗುರುತಿಸಿದಳು. ಅಣ್ಣನಿಗೂ ಹೇಳಿ ಒಂದು ದಿನ ಫೋನಿನಲ್ಲೇ ತನಿಖಾ ವರದಿಯನ್ನು ಅಮ್ಮನ ಮುಂದಿಟ್ಟಳು.
ಅತ್ತಲಿಂದ ಅಮ್ಮ, “”ಅಯ್ಯೋ ತಂಗಿ, ಕೆಮರಾದಲ್ಲಿ ನೋಡಿ ನಿಂಗೆ ಇವತ್ತು ಗೊತ್ತಗಿದ್ದಾ ಆ ವಿಚಾರ? ಅವ ಮೂಲೆಮನೆ ಶಂಕರಣ್ಣನ ಮಗ, ಅವಳು ಪಟೇಲರ ಮನೆ ಸದಾಶಿವಣ್ಣನ ಮಗಳು, ಡಿಗ್ರೀ ಮಾಡಿದ ಕೂಸು, ಮಾಣಿಗೆ ಏನು ಸರಿಯಾಗಿದ್ದು ಕೆಲಸ ಇಲ್ಲ ಅಂತ ಅವಳ ಅಪ್ಪಇನ್ನು ಮದುವೆಗೆ ಒಪ್ಪಲಿಲ್ಲ , ಹಾಗಾಗಿ ಅವರ ಅಪ್ಪಒಪ್ಪೋವರೆಗೆ ಅವ್ರಿಬ್ರೂ ದಿನಾ ಸಂಜೆ ಅಪ್ಪ-ಅಮ್ಮನ ಕಣ್ಣು ತಪ್ಪಿಸಿ ಅಲ್ಲಿ ಇಲ್ಲಿ ಬ್ಯಾಣ-ಬೆಟ್ಟ ಅಂತ ಅಲೆಯುತ್ತಾ ಇರ್ತಾರೆ” ಎಂದಳು.
ಈಗೀಗ ದೂರದ ಕಣ್ಣುಗಳು ಕೇವಲ ದೂರುವ ಕಣ್ಣುಗಳಾಗಿವೆ ಎಂದು ಮನಸ್ಸಿನಲ್ಲೇ ಗೊಣಗುತ್ತ ಹಸುವಿನ ಹಾಲು ಕರೆಯುವ ಹೊತ್ತಾದ್ದರಿಂದ ಶ್ಯಾಮಲಕ್ಕ ಕೊಟ್ಟಿಗೆಗೆ ಓಡಿದಳು.
ವಿದ್ಯಾ ಹೊಸಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.