ಕತೆ: ಕಮಲತ್ತೆಯ ಕಾಲಿನ ಪ್ರಾಬ್ಲಿಂ
Team Udayavani, Jan 27, 2019, 12:30 AM IST
ಉದ್ಯೋಗ ನಿಮಿತ್ತ ಪಟ್ಟಣದಲ್ಲಿರುವ ನಾನು ವಾರದ ಕತೆ ಕೇಳಲು ಹಳ್ಳಿಮನೆಗೆ ಫೋನಾಯಿಸುವುದು ರೂಢಿ. ಪಟ್ಟಣವಾಸಿಯಾದಂದಿನಿಂದ ಇದು ಸಾಮಾನ್ಯ ಪ್ರಕ್ರಿಯೆ. ವಾರದ ಕತೆ ಕಮಲತ್ತೆಯ ಜೊತೆ ನಡೆಯದಿದ್ದರೆ ನನಗೂ ನೆಮ್ಮದಿಯಿರುವುದಿಲ್ಲ. “”ಕಮಲತ್ತೆ , ಹೇಗಿದ್ದೀರಿ?” ಎಂದು ನಾನು ಕೇಳುವುದು, ಅವರು ಮನೆಯ ವಾರದ ವರಾತವನ್ನು ನನ್ನ ಮುಂದಿಡುವುದು ಪ್ರತಿವಾರ ತಪ್ಪದೆ ನಡೆಯುತ್ತದೆ. ಆದರೆ, ಈ ಸಲ ಹಾಗೆ ಕೇಳಿದ್ದಕ್ಕೆ ಕಮಲತ್ತೆ ಹೊಸ ವಿಚಾರವೊಂದನ್ನು ನನ್ನ ಮುಂದಿಟ್ಟರು:
“”ಹೇಗಿರುವುದು ಮಹಾರಾಯ, ಕಾಲಿನದ್ದೊದು ಪಿರಾಬುಲಮು ಸುರುವಾಗಿದೆ” ತನ್ನ ಹಳ್ಳಿಯ ಭಾಷೆಗೆ ಇಂಗ್ಲೀಷ್ ಪದ ಸೇರಿಸುವ ಕಮಲತ್ತೆಯ ಖಯಾಲಿಯಿಂದ ಪ್ರಾಬ್ಲಿಮ್ ಅಪಭ್ರಂಶಗೊಂಡು ಪಿರಾಬುಲಮ್ ಆಗಿತ್ತು. ಒಂದು ಕ್ಷಣ ನನ್ನೆದೆ ಧಸಕ್ಕೆಂದಿತು. ಕಮಲತ್ತೆಗೆ ಏನಾದರೂ ದೈಹಿಕ ಅಸೌಖ್ಯ ಪ್ರಾರಂಭವಾಯಿತು ಅಂದ್ರೆ ಅವರಿಗಿಂತ ಇಮ್ಮಡಿ ಬಾಧೆಯನ್ನು ಉಳಿದವರು ಅನುಭವಿಸಬೇಕು; ಆ ರೀತಿಯಲ್ಲಿರುತ್ತದೆ, ಅವರ ಗೋಳಾಟ ! ಸಣ್ಣ ತಲೆನೋವು ಬಂದರೂ ಸರಿ, ಪ್ರಪಂಚದ ನೋವು-ಸಿಡಿತಗಳೆಲ್ಲ ತನ್ನ ತಲೆಯೊಳಗೇ ವಕ್ಕರಿಸಿದೆಯೋ ಎಂಬಂತೆ ವರ್ತಿಸುತ್ತಾರೆ. ಮನೆಯೊಳಗೆ ಮಲಗಿದಲ್ಲಿಂದ, “ಅಯ್ಯೋ… ಅಮ್ಮಾ… ಯಪ್ಪಾ…’ ಎಂಬ ನರಳಾಟ ಫರ್ಲಾಂಗು ದೂರದ ಗೇಟಿನವರೆಗೂ ಕೇಳುತ್ತಿರುತ್ತದೆ. ಅವರ ಹಣೆಗೆ ಉಜ್ಜಿ ಉಜ್ಜಿ ಮನೆಯಲ್ಲಿರುವ ಅಮೃತಾಂಜನದ ಡಬ್ಬ ಖಾಲಿಯಾಗಿರುತ್ತದೆ. ಉಜ್ಜಿದವರ ಬೆರಳಿಗೆ ಅಯೋಡೆಕ್ಸ್ ಹುಡುಕಬೇಕಾಗುತ್ತದೆ!
ಹಿಂದೊಮ್ಮೆ ಹೀಗೆ ಕಮ್ಲತ್ತೆಗೆ ಕಾಲಿನ ಪ್ರಾಬ್ಲಿಮ್ ಶುರುವಾಗಿತ್ತು. ಅದೇನು ದೊಡ್ಡ ಆಘಾತವಲ್ಲ. ಸಣ್ಣಗೆ ಉಳುಕಿದ ಹಾಗಾಗಿತ್ತು. ಆದರೆ, ಅವರಿಗಷ್ಟೇ ಸಾಕಲ್ಲ? ಗೋಳಾಟ ಮುಗಿಲು ಮುಟ್ಟಿತು.ಇಂತಹ ಸಂದರ್ಭದಲ್ಲಿ ಆಸುಪಾಸಿನ ಲೋಕಲ್ ಎಂಬಿಬಿಎಸ್ಸುಗಳ ಮೇಲೆ ಕಮಲತ್ತೆಗೆ ನಂಬಿಕೆ ಹೊರಟುಹೋಗಿರುತ್ತದೆ. ಆದುದರಿಂದ ಆ ರೇಂಜಿನ ವೈದ್ಯರ ಉಪಚಾರಗಳೆಲ್ಲ ಉಪಯೋಗಶೂನ್ಯವಾದವು. ನಾಟಿ ವೈದ್ಯ ಕಣ್ಣಜ್ಜನ ಎಣ್ಣೆ ಲೇಪನಕ್ಕೂ ಅತ್ತೆಯ ಕಾಲುಳುಕು ಬಗ್ಗಲಿಲ್ಲ. ಮನೆಮಂದಿಯ ನೆಮ್ಮದಿ ಹಾಳಾಯಿತು. ಅವರ ಕಾಲಿನ ಆರೈಕೆಯೇ ಒಬ್ಬನ ಕೆಲಸವಾಗಿಹೋಯಿತು. ಕೊನೆಗೂ ಕಮಲತ್ತೆ “”ಆ ಶೀಟಿಯ ಹುಡುಗನಿಗಾದ್ರೂ ಫೋನ ಹಚ್ಚಿ ವಿಷಯ ತಿಳಿಸ್ರಪ್ಪ…” (“ಸಿಟಿ’ ಕಮಲತ್ತೆಯ ಇಂಗ್ಲೀಷ್‌ನಲ್ಲಿ “ಶೀಟಿ’ ಆಗಿದೆ.) ಅಂತ ಗೋಗರೆದ್ರಂತೆ. ಅವರು ತಿಳಿಸಿದ “ಶೀಟಿಯ ಹುಡುಗ’ ನಾನೇ ಆದುದರಿಂದ ವಿಷಯ ನನಗೆ ತಿಳಿಸಲಾಗಿ ತಲೆನೋವು ನನಗೂ ವರ್ಗಾಯಿಸಲ್ಪಟ್ಟಿತು. ಕಮಲತ್ತೆ ನನಗೆ ತನ್ನ ಅನಾರೋಗ್ಯದ ವಿಷಯ ತಿಳಿಸಲು ಗೋಗರೆದುದರ ಮರ್ಮ ನನಗೆ ತಿಳಿಯದೆ ಇದ್ದದ್ದೇನೂ ಅಲ್ಲ. ಪೇಟೆಯ “ಪೇಸಲಿಟ್ಟು’ (ನಿಜಪದ: ಸ್ಪೆಷಲಿಸ್ಟ್ ) ಡಾಕುತಾರ (ಡಾಕ್ಟರ್)ರಲ್ಲಿ ತೋರಿಸಿದರೆ ಸಮಸ್ಯೆ ಪರಿಹಾರವಾಗಬಹುದೆಂಬುದು ಅವರ ನಂಬಿಕೆ. ಸರಿ, ಅವರಿಗೆ ಹೊಂದುವ ಆಥೋಸ್ಪೆಷಲಿಸ್ಟ್‌ಗಳ ತಲಾಶೆಗೆ ತೊಡಗಿದ ನನಗೆ ಫಕ್ಕನೆ ನೆನಪಿಗೆ ಬಂದವ; ನನ್ನ ಬಾಲ್ಯದ ಗೆಳೆಯ, ಸದ್ರಿ ಮೂಳೆ ಶಾಸ್ತ್ರದಲ್ಲಿ ಬ್ರಹ್ಮಾಂಡ ಜ್ಞಾನ ಗಳಿಸಿದ ಮೂಳೆತಜ್ಞ ಡಾ. ವೀರೇಶ.
ವೀರೇಶನಿಗೆ ಅವನ ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಹೆಸರಿದೆ. ಹಾಗಾಗಿ, ಆತ ತುಂಬಾ ಬ್ಯುಸಿ ಮನುಷ್ಯನಾಗಿದ್ದ. ಅವನ ಭೇಟಿಗಾಗಿ ರೋಗಿಗಳು ವಾರಗಟ್ಟಲೆ ಕಾಯುವ ಪರಿಸ್ಥಿತಿಯಿತ್ತು. ನಾನು ಅವನನ್ನು ಫೋನಲ್ಲಿ ಸಂಪರ್ಕಿಸಿದಾಗ, “”ಆಯ್ತು, ಕಮಲತ್ತೆಯನ್ನು ಆದಷ್ಟು ಬೇಗ ನನ್ ಕಡೆ ಕರ್ಕೊಂಡು ಬಾ” ಅಂತ ಅವನೇ ಹೇಳಿ ನನ್ನ ಗೆಳೆತನಕ್ಕೆ ಗೌರವ ಕೊಟ್ಟ.
ಹಾಗೆ ಕಮಲತ್ತೆಯನ್ನು ವೀರೇಶನ ಕ್ಲಿನಿಕ್‌ಗೆ ರಾಜೋಪಚಾರದಿಂದ ಕರೆತರಲಾಯಿತು. ವೀರೇಶನೂ ಅಷ್ಟೆ , ಕಮಲತ್ತೆಯನ್ನು ಪರೀಕ್ಷಿಸುವ ಸಲುವಾಗಿ ತನಗೆ ಸಾವಿರಗಟ್ಟಲೆ ಸಂಪಾದನೆ ತರುವ ಎರಡು ಪ್ರಮುಖ ಸರ್ಜರಿಗಳನ್ನು ಬದಿಗೊತ್ತಿದ್ದ. “ಅಯ್ಯೋ ಅಮ್ಮಾ…’ ಎಂದು ನರಳುತ್ತ ಬೆಡ್ ಮೇಲೆ ಮಲಗಿದ ಕಮಲತ್ತೆಯನ್ನು ಕೂಲಂಕಷವಾಗಿ ಪರೀಕ್ಷಿಸಿದ ವೀರೇಶ ನನ್ನತ್ತ ಅಸಹನೆಯ ನೋಟ ಬೀರಿ, “”ಏನೂ ಇಲ್ಲ , ಸಣ್ಣಗೆ ನರ ಉಳುಕಿದ್ದಷ್ಟೆ” ಎಂದು ವರದಿ ನೀಡಿದ. ಅವನ ನೋಟದಲ್ಲಿ ಸಹಸ್ರಾರು ರೂಪಾಯಿ ಸಂಪಾದನೆಯ ಸರ್ಜರಿಗಳು ತಪ್ಪಿದ ಅಸಹನೆಯಿತ್ತು. ಕಮಲತ್ತೆಯ ಸಮಸ್ಯೆ ಜಟಿಲವಾಗಿರಬಹುದು ಎಂದುಕೊಂಡಿದ್ದ ನಾನು ಮುಖ ಮುಚ್ಚಿಕೊಳ್ಳಬೇಕಾಯಿತು. ಆದರೂ, “”ಅಲ್ಲಯ್ಯ ವೀರೇಶ, ಸ್ಕೇನಿಂಗ್ ಏನಾದ್ರೂ ಮಾಡಿಸ್ಬೇಕಾ?” ಎಂದು ನನ್ನ ಸಮಾಧಾನಕ್ಕೋ ಎಂಬಂತೆ ಕೇಳಿದೆ.
“”ಏಕೆ ಸುಮ್ನೆ ಹಣ ಖರ್ಚು ಮಾಡುತ್ತಿ? ಮನೆಗೆ ಕರೆದೊಯ್ದು ಕಡೆಂಜದ ಎಣ್ಣೆ (ಹಳ್ಳಿ ವೈದ್ಯರ ನೋವು ನಿವಾರಕ ಎಣ್ಣೆ) ಹಚ್ಚು . ಸರಿ ಹೋಗ್ತದೆ” ಎಂದ. ಹೀಗೆ ಸ್ನೇಹಿತನ ಮುಂದೆ ನನ್ನನ್ನು ಕುಬ್ಜನನ್ನಾಗಿಸಿದ ಕಮಲತ್ತೆಯ ಆರೋಗ್ಯ ಪ್ರಾಬ್ಲಿಂ ಶುರುವಾದಾಗಲೆಲ್ಲ ನನ್ನ ಎದೆ ಢವಗುಟ್ಟುತ್ತದೆ. ಅದಕ್ಕೆ ನಾನು ದೇವರೆದುರು ನಿಂತು ನನ್ನ ಆರೋಗ್ಯಕ್ಕಿಂತ ಮೊದಲು ಅವರ ಆರೋಗ್ಯ ಚೆನ್ನಾಗಿರಲೆಂದು ಬೇಡಿಕೊಳ್ಳುತ್ತೇನೆ. ಆದರೆ, ಈ ಸಲ ದೇವರು ನನ್ನ ಮೊರೆಯನ್ನು ಕೇಳಿಸಿಕೊಂಡಂತಿಲ್ಲ.
ಕಮಲತ್ತೆಗೆ ಆರೋಗ್ಯ ಹಾಳಾದರೆ ಅವರಿಗೆ ಊರಿನ ಡಾಕ್ಟರ್‌ಗಳಿಗಿಂತ “ಶೀಟಿ ಹುಡುಗ’ನಾದ ನನ್ನ ಮೇಲೆ ಹೆಚ್ಚಿನ ವಿಶ್ವಾಸ. ಇದೇ ಕಾರಣಕ್ಕೆ ವಿಷಯ ತಿಳಿದು ನಾನೇನಾದರೂ ಪ್ರತಿಕ್ರಿಯೆ ನೀಡದೆ ಸುಮ್ಮನಾದರೆ ಮನೆಯವರಿಂದ ಅಲ್ಲದೆ ಇತರ ಬಂಧುಬಳಗದವರಿಂದಲೂ ನೂರೆಂಟು ಫೋನ್ ಕರೆಗಳಿಗೆ ಕಿವಿಯಾಗಬೇಕಾಗುತ್ತದೆ. ಇದೀಗ ಕಾಲಿನ ಪ್ರಾಬ್ಲಿಂ ಬಗ್ಗೆ ಸ್ವತಃ ಕಮಲತ್ತೆಯ ಬಾಯಿಯಿಂದ ತಿಳಿದಾಯಿತು. ಏನಿದ್ದರೂ ಸುಮ್ಮನಿರುವಂತಿಲ್ಲ. ಒಮ್ಮೆ ಊರಿಗೆ ಹೋಗಿ ಅವರನ್ನು ನೋಡಿಕೊಂಡು ಬರೋಣ ಅಂತ ತೀರ್ಮಾನಿಸಿದೆ.
ಹಳ್ಳಿ ಮನೆಗೆ ಬಸ್ಸಿನಲ್ಲಿ ನಾಲ್ಕು ಗಂಟೆಗಳ ಪ್ರಯಾಣವಿದೆ. ಈ ಪ್ರಯಾಣದುದ್ದಕ್ಕೂ ಕಮಲತ್ತೆಯ ಕಾಲಿನ ಪ್ರಾಬ್ಲಿಮ್ಮೇ ನನ್ನ ತಲೆ ತುಂಬಿಕೊಂಡಿತ್ತು. ಅದರ ಪರಿಹಾರಕ್ಕೆ ಮಾಡುವುದೇನು ಎಂಬುದು ನನ್ನ ಚಿಂತೆ. ಸ್ಪೆಷಲಿಸ್ಟ್‌ನನ್ನು ಹಿಡಿದು ಮುಖ ಮುಚ್ಚಿಕೊಂಡದ್ದಾಯಿತು. ಆಯುರ್ವೇದಕ್ಕೆ ಮೊರೆ ಹೋಗುವುದೇ ? ಹೋಮಿಯೋಪತಿ ನೋಡುವುದೆ? ಅಥವಾ ಅತ್ತೆಯ ಮನಸ್ಸಿಗೆ ಧೈರ್ಯ ಬರುವ ಹಾಗೆ ಮಾಡಲು ಮನಃಶಾಸ್ತ್ರಜ್ಞನ ಹತ್ತಿರ ಕರೆದೊಯ್ಯುವುದೇ… ಹೀಗೆ ನಾನಾ ಆಲೋಚನೆಗಳಿಂದ ಊರಿನ ದಾರಿ ಸವೆದದ್ದೇ ತಿಳಿಯಲಿಲ್ಲ.
ಬಸ್ಸಿನಿಂದ ಇಳಿದು ಕಾಲುದಾರಿಯಲ್ಲಿ ನಡೆದುಬರುತ್ತಿರಬೇಕಾದರೆ ಮೊದಲಿಗೆ ಎದುರಾದವನೇ ವಾಸು. ಯತಾರ್ಥವಾಗಿ ವಾ. ಸು. ಅಂದರೆ ವಾರ್ತೆ ಸುಬ್ರಾಯ. ಊರಿನ ವಾರ್ತೆಯನ್ನು ಮೂಲೆಯಿಂದ ಮೂಲೆಗೆ ಬಿತ್ತರಿಸುವುದರಲ್ಲಿ ಈ ಸುಬ್ರಾಯ ಎತ್ತಿದ ಕೈ. ಬಿತ್ತರಿಸುವುದು ಅಂದರೆ ಅವನ ಶೈಲಿಗೆ ಈಗಿನ ಖಾಸಗಿ ಸುದ್ದಿವಾಹಿನಿಯವರೂ ನಾಚಿಕೊಳ್ಳಬೇಕು. ಇಲಿ ಹೋದ ಕಡೆ ಹುಲಿಯೇ ಹೋಯಿತೆಂದು ಕೇಳುಗರನ್ನು ನಂಬಿಸಿಬಿಡುವವ. ಇಂತಿಪ್ಪ ಸುಬ್ರಾಯನ ಹೆಸರಿನಲ್ಲಿ ಮೊದಲು, “ವಾರ್ತೆ’ ಅನ್ವರ್ಥನಾಮವಾಗಿ ಸೇರಿಕೊಂಡದ್ದು ಉತ್ಪ್ರೇಕ್ಷೆಯೇನೂ ಆಗಿರಲಿಲ್ಲ.
ಮನೆಗೆ ಹೊರಟ ನನಗೆ ವಾಸು ಎದುರಿಗೆ ಸಿಕ್ಕಿದ್ದು ಒಳ್ಳೆಯದ್ದೇ ಆಯಿತು. ಮನೆಯ ದಾರಿಯಲ್ಲೇ ಅವನು ಬರುತ್ತಿರುವ ಕಾರಣ ಖಂಡಿತವಾಗಿಯೂ ಮನೆಯ ಬ್ರೇಕಿಂಗ್ ನ್ಯೂಸ್ ಆಗಿ ಕಮಲತ್ತೆಯ ಕಾಲಿನ ಪ್ರಾಬ್ಲಿಂಗೆ ಮಸಾಲೆ ಅರೆದು ಒಪ್ಪಿಸಿಯೇ ಬಿಡುತ್ತಾನೆ ಎಂದುಕೊಂಡೆ.
“”ನಮಸ್ಕಾರ ಅಣ್ಣ , ಪೇಟೆಯಿಂದ ಬರ್ತಾ ಇದ್ದೀರಾ? ಅಲ್ಲ, ಮನೆಯವರಿಗೆ ನೀವು ಬರುವ ವಿಚಾರ ತಿಳಿದೇ ಇಲ್ವಾ? ನಾನು ಇಷ್ಟೊತ್ತು ಅಲ್ಲೇ ಇದ್ದೆ , ಏನೂ ಹೇಳಲೇ ಇಲ್ಲ” ಎಂದು ಹೇಳುತ್ತ ನನ್ನನ್ನು ಇದಿರ್ಗೊಂಡ ವಾಸು. “”ಹೌದು” ನಾನಂದೆ. ಮನೆಯ ಸಮಸ್ಯೆ ಇವನಿಗೆ ತಿಳಿದಂತಿಲ್ಲ. ನಾನಾಗಿ ಹೇಳುವುದು ಬೇಡವೆಂದುಕೊಂಡು ಔಪಚಾರಿಕವಾಗಿ ಮಾತನಾಡಿ ಅವನ್ನು ಸಾಗಹಾಕಿದೆ.
ಮನೆ ಗೇಟಿನ ಸಮೀಪಕ್ಕೆ ತಲುಪುವಾಗ ಅತ್ತೆಯ ನರಳಾಟವೇನಾದರೂ ಕೇಳುವುದೋ ಎಂಬ ಕುತೂಹಲದಿಂದ ನನ್ನ ಕಿವಿ ನೆಟ್ಟಗಾಯಿತು. ಆದರೆ, ಹಾಗೇನೂ ಕೇಳಲಿಲ್ಲ. ಬದಲಾಗಿ ಅಂಗಳಕ್ಕೆ ಪ್ರವೇಶಿಸಿದ ನನ್ನನ್ನು ಹೊರಜಗಲಿಯಲ್ಲಿ ಆರಾಮದಲ್ಲಿ ಕುಳಿತುಕೊಂಡ ಕಮಲತ್ತೆಯೇ ಸ್ವಾಗತಿಸಿದರು! ನನಗೋ ನನ್ನ ಕಣ್ಣುಗಳನ್ನೇ ನಂಬಲಾಗದ ಪರಿಸ್ಥಿತಿ. ನನ್ನನ್ನು ಕಂಡವರೇ, “”ಹಾ… ಇದ್ಯಾರೂ…. ಇಕಾ… ನಾಗವೇಣೀ ಶೀಟಿ ಹುಡುಗ ಬಂದಿದ್ದಾನೆ ನೋಡು” ಎಂದು ಕುಳಿತಲ್ಲಿಂದಲೇ ಚಿಕ್ಕಮ್ಮನಿಗೆ ನನ್ನ ಆಗಮನದ ಬಗ್ಗೆ ತಿಳಿಸುತ್ತ ಬಾಯಗಲಿಸಿ ನಕ್ಕು ಸ್ವಾಗತ ಕೋರಿದರು. ನನಗೋ ಎಲ್ಲವೂ ಆಯೋಮಯವೆನಿಸಿತು.
ಕಾಲಿನ ನೋವನ್ನು ಇಟ್ಟುಕೊಂಡ ಕಮಲತ್ತೆ ಹೀಗಿರಲು ಸಾಧ್ಯವೇ ಇಲ್ಲ ಎಂಬುದು ನಾನು ಅನುಭವ ಮುಖೇನ ತಿಳಿದುಕೊಂಡ ವಿಚಾರ. ಇದೀಗ ಅತ್ತೆಯ ಪರಿಸ್ಥಿತಿ ಬರುವಾಗ ನಾನು ನಿರೀಕ್ಷಿಸಿದಂತಿಲ್ಲ. ದೈಹಿಕವಾದ ನೋವಿನ ಯಾವುದೇ ಚಿಹ್ನೆ ಕಮಲತ್ತೆಯ ವರ್ತನೆಯಲ್ಲಿ ಕಾಣುತ್ತಿಲ್ಲ. ಅವರದ್ದೋದು ಸ್ವಭಾವವಿದೆ. ಮುಖತಃ ಮಾತನಾಡುವಾಗ ಆರೋಗ್ಯ ಹೇಗುಂಟು ಎಂದು ಅವರಲ್ಲಿ ವಿಚಾರಿಸಲು ಹೋಗುವುದು ಸ್ವಲ್ಪ ಅಪಾಯ. ಆಗ ಇವರಿಗೆ ಇಲ್ಲದ ನೋವೆಲ್ಲ ಶುರುವಾಗುವುದುಂಟು. ಆದುದರಿಂದ ನಾನಾಗಿಯೇ ಹೋಗಿ ಹೊಂಡಕ್ಕೆ ಬೀಳುವುದು ಬೇಡವೆಂದು ಸುಮ್ಮನಾದೆ.
ಕೈಕಾಲು ತೊಳೆದು ಆಸರು ಕುಡಿದು ಪ್ರಯಾಣದ ಸುಸ್ತನ್ನು ಪರಿಹರಿಸಲು ಜಗಲಿಯ ಸೋಫಾದಲ್ಲಿ ಒರಗಿಕೊಂಡೆ. ಕಮಲತ್ತೆ ಕಾಲಿನ ಪ್ರಾಬ್ಲಿಂ ಅವರ ಬದಲು ನನ್ನನ್ನು ಹಿಂಸಿಸುತ್ತಿತ್ತು. ಮನೆ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅತ್ತೆಯ ಅನಾರೋಗ್ಯವೆಂದರೆ ಹಿಂದೆಲ್ಲ ಬೆಟ್ಟ ಹೊತ್ತವರಂತೆ ವರ್ತಿಸುತ್ತಿದ್ದ ಮನೆಮಂದಿ ಈ ಸಲ ನಿರಾಳರಾಗಿದ್ದರು. ಹೀಗೆ ಎಲ್ಲವೂ ವಿಚಿತ್ರವಾಗಿ ಒಗಟಾಗಿ ಗೋಚರಿಸುತ್ತಿರುವಾಗ ಕಮಲತ್ತೆಯೇ ಹತ್ತಿರಕ್ಕೆ ಬಂದು ಕುಳಿತುಕೊಂಡರು. ತನ್ನ ಕಾಲಿನ ಪ್ರಾಬ್ಲಿಂ ಪ್ರಸ್ತಾಪ ಮಾಡಲು ಬಂದಿರಬಹುದು ಎಂಬ ನನ್ನ ಊಹೆ ಸುಳ್ಳಾಗಲಿಲ್ಲ. “”ನೀ ಬಂದಿದ್ದು ಬಾಳ ಚಲೋದಾಯ್ತು ಮಗಾ… ನಂದೊಂದು ಕಾಲಿನ ಪಿರಾಬುಲಮು ಸರಿ ಆಗಿಲ್ಲ ನೋಡು”
“”ಯಾವ ಕಾಲು ಎಡದ್ದೋ ಬಲದ್ದೋ? ಏನಾಗಿದ್ದು? ಗಾಯದ ನೋವಾ… ಉಳುಕಾ? ಅಲ್ಲತ್ತೆ ನಡೆಯುವಾಗ ಏನೂ ನೋವು ಗೊತ್ತಾಗೋದಿಲ್ವಾ?” ನಾನು ಮನಸ್ಸಿನ ಗೊಂದಲವನ್ನು ಒಮ್ಮೆಲೇ ಹೊರಗೆಡಹಿದೆ.
“”ನನ್ನ ಕಾಲು ಅಲ್ಲ ಮಗಾ” ಎಂದು ಸಾವಕಾಶದಿಂದ ಹೇಳುತ್ತ ಅತ್ತೆ ತನ್ನ ಸೊಂಟದಿಂದ ಒಂದು ಮೊಬೈಲನ್ನು ತೆಗೆದರು.
“”ಇದರ ಕಾಲು ನೋಡು. ಹಿಂದೆಲ್ಲ ಇದರ ಮೈ ನಡುಗುವಾಗ ಹಸುರು ಬಟಾಣಿ (ಬಟನ್) ಒತ್ತಿದ್ರೆ ಕಾಲು ಬಂದು ಒಳಗಿಂದ ಮಾತು ಕೇಳ್ತಾ ಇತ್ತು. ರಮೇಸ, ಹನುಮಂತು, ರೇಣುಕಾ ಎಲ್ಲರೂ ಮಾತಾಡ್ತಿದ್ರೂಂತ. ಈಗ ಅದರ ಮೈ ನಡುಗುತ್ತೆ. ಹಸುರು ಬಟಾಣಿ ಒತ್ತಿದ್ರೆ ಮಾತು ಕೇಳಲ್ಲ. ಯಾರೋ ಅಂದ್ರಪ್ಪ , ಇದರ ಕಾಲು ಸರಿಯಿಲ್ಲ ಅಂತ”
ಕಮಲತ್ತೆಯ ಈ ಕಾಲಿನ ಪ್ರಾಬ್ಲಿಂಗೆ ನನಗೆ ಅಳಬೇಕೋ ನಗಬೇಕೋ ತಿಳಿಯಲಿಲ್ಲ. ವಾಸ್ತವಾಂಶ ಏನು ಅಂತ ತಿಳಿಯಿತು ನಮ್ಮ ಚಿಕ್ಕಮ್ಮನ ಮಗ ರಮೇಶ ಮೈಸೂರಿನಲ್ಲಿರುವವ ಬರುವಾಗ ಅತ್ತೆಗೊಂದು ಮೊಬೈಲ್ ತಂದು ಅದಕ್ಕೆ ಸಿಮ್ ಎಲ್ಲ ಹೊಂದಿಸಿಕೊಟ್ಟಿದ್ದ. ಅತ್ತೆಯವರು ತಿಳಿಯದೆ ಅದನ್ನು ಒತ್ತಿ ಅದರ ಒಳಬರುವ ಕರೆ ಮ್ಯೂಟ್ ಆದುದರಿಂದ ಮಾತನಾಡುವವರ ಧ್ವನಿ ಕೇಳಿಸುತ್ತಿರಲಿಲ್ಲ. ಯಾರೋ ಅದರಲ್ಲಿ ಕಾಲ್‌ನ ಪ್ರಾಬ್ಲಿಂ ಇದೆ ಅಂದಿದ್ರು. ಅದು ಅತ್ತೆಯ ಬಾಯಿಯಿಂದ ನನ್ನ ಕಿವಿಗೆ ಬಿದ್ದು ನನ್ನಲ್ಲಿ ಒಟ್ಟು ಗೊಂದಲ ಸೃಷ್ಟಿಯಾಯಿತು.
“”ಇದರ ಕಾಲನ್ನು ಸರಿ ಮಾಡ್ತಿಯಾ ಮಗ?” ಅತ್ತೆ ಮತ್ತೆ ಕೇಳಿದರು.
ಭಾಸ್ಕರ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Photography: ಎಲ್ಲೆಲ್ಲೂ ಫೋಟೋಗ್ರಫಿ
Pune: ಪಿಜ್ಜಾ ಆರ್ಡರ್ ಮಾಡುವ ಮುನ್ನ ಎಚ್ಚರ.. ಪಿಜ್ಜಾದಲ್ಲಿತ್ತು ಚಾಕುವಿನ ತುಂಡು
Kerala: ದೇಗುಲ ಸಂಪ್ರದಾಯ ಬದಲು ಹಕ್ಕು ತಂತ್ರಿಗಳದ್ದು, ಸರ್ಕಾರದಲ್ಲ: ಕೇರಳ ಸಚಿವ
Abujhmad: ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲೀಯರ ಹತ್ಯೆ; ಓರ್ವ ಪೊಲೀಸ್ ಹುತಾತ್ಮ
Chikkamagaluru: ತಾಯಿ ಮನೆಗೆ ಬರಲಿಲ್ಲ ಎಂದು ಮಾವನ ಮೇಲೆ ಮಚ್ಚು ಬೀಸಿದ ಅಳಿಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.