ಕಥೆ: ಲೈಫ್ ಸೇವಿಂಗ್ ಮಿಷನ್
Team Udayavani, Sep 29, 2019, 5:19 AM IST
ಮೊನ್ನೆ ವಿಮಾನ ಮಂಗಳೂರು ತಲುಪುವಾಗ ರಾತ್ರಿ ಗಂಟೆ 12 ಆಗಿತ್ತು. ಏರ್‌ಪೋರ್ಟ್‌ನಲ್ಲಿ ಯಾರನ್ನೋ ಡ್ರಾಪ್ ಮಾಡಲು ಬಂದ ಸದಾನಂದ ಸಿಕ್ಕಿದ. ಯಾವಾಗಲೂ ಟ್ರಿಮ್ ಆಗಿ ಇರುತ್ತಿದ್ದ ಆತ ಗಡ್ಡ ಬಿಟ್ಟು ಮಾಸಿದ ಬಟ್ಟೆ ಹಾಕ್ಕೊಂಡು ಯಾಕೋ ತುಂಬಾ ಡಲ್ಲಾಗಿದ್ದ. “”ಯಾಕಯ್ನಾ ಹಿಂಗಿದ್ದೀಯಾ, ಎಲ್ಲಿಗ್ ಬಂತೊ ನಿನ್ ಲೈಫ್ ಸೇವಿಂಗ್ ಮಿಷನ್?” ಅಂತ ಕೇಳಿದೆ.
“”ಇನ್ಮೇಲೆ ಜೀವ ಹೋದ್ರೂ ಪ್ರಾಣ ಉಲ್ಸಕ್ಕೆ ಹೋಗೋಲ್ಲ” ಅಂದ.
“”ಯಾಕೊ ಏನಾಯ್ತು?” ಅಂದೆ.
“” ಅದೊಂದು ದೊಡ್ಡ ಕಥೆ, ಕಾರ್ ಹತ್ತು. ನಿನ್ನನ್ನು ಡ್ರಾಪ್ ಮಾಡ್ತಿನಿ” ಅಂದ. ನನ್ನ ಒತ್ತಾಯಕ್ಕೆ ದಾರಿಯಲ್ಲಿ ಕತೆ ಶುರು ಹಚ್ಕೊಂಡ.
“”ಏನಿಲ್ಲಾ, ನಾನು ಸಾಯ್ತಾ ಇರೋ ಎಷ್ಟೋ ಜನರನ್ನು ಉಳಿಸಿದೆ. ನಿಂಗೆ ಗೊತ್ತಲ್ಲ, ನಾನಿಲ್ಲದಿದ್ರೆ ಅವರು ಇವತ್ತು ಇರ್ತಾ ಇರ್ಲಿಲ್ಲ ಅಂತೆಲ್ಲಾ ಅನ್ಕೋತಿದ್ದೆ. ಆದರೆ ನಾನು ಉಳಿಸದಿದ್ದರೇನೇ ಒಳ್ಳೇದಿತ್ತು ಅಂತ ಕೆಲವೊಮ್ಮೆ ಅನ್ನಿಸ್ತಿದೆ” ಅಂತ ಕೊರಗಿದ.
ಸದಾನಂದ ನನ್ನ ಹಳೆಯ ಗೆಳೆಯ. ಕುಂದಾಪುರದಲ್ಲಿ ವಾಸ. ಪಿತ್ರಾರ್ಜಿತ ಆಸ್ತಿ ಸಾಕಷ್ಟಿದೆ. ಅವನನ್ನು “ಸದ್ದು’ ಅಂತ ಶಾರ್ಟಾಗಿ ಕರೆಯುತ್ತಿದ್ದೆ. ಹೆಸರಿಗೆ ತಕ್ಕಂತೆ ಆಗಾಗ ಸದ್ದು ಮಾಡ್ತಾನೇ ಇರ್ತಿದ್ದ. ಸುತ್ತಮುತ್ತ ಎಲ್ಲೇ ಅಪಘಾತ ಆಗ್ಲಿ , ಅವನಿಗೆ ಕರೆ ಬರುತ್ತಿತ್ತು. ಅಲ್ಲಿ ಆತ ಹಾಜರ್. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುತ್ತಿದ್ದ. ಅದರಲ್ಲೇ ಅವನಿಗೆ ದೊಡ್ಡ ಸಾಧನೆ ಮಾಡಿದೆನೆಂಬ ಸಾರ್ಥಕ್ಯದ ಭಾವ. ಅಂಥವನು ಇವತ್ತು ಬೇರೇನೇ ಹೇಳ್ಳೋದು ಕೇಳಿ ಆಶ್ಚರ್ಯ ಆಯ್ತು. “”ಏನೋ, ಯಾಕ್ ಹಿಂಗಂತೀಯಾ?” ಅಂತ ಕೇಳಿದೆ.
ಅದಕ್ಕೆ ಅವನು ಹೇಳಿದ…
ಏನಿಲ್ಲ , ನನ್ನ ಫ್ರೆಂಡ್ ಡಾಕ್ಟರ್ ಕೇಶವ ಗೊತ್ತಲ್ವಾ? ಮೊನ್ನೆ ಅವನ ಜತೆ ಒಬ್ಬರ ಮನೆಗೆ ಹೋಗಿದ್ದೆ. ಅಲ್ಲೊಬ್ಬ ನಡುವಯಸ್ಕ ಮಂಚದ ಮೇಲೆ ನರಳುತ್ತ ಮಲಗಿದ್ದ. ಆತ ನನ್ನನ್ನು ನೋಡಿದ ತಕ್ಷಣ “ಬಾಬಾ, ಬೆಬೆ’ ಅಂತ ಏನನ್ನೋ ಹೇಳ್ಳೋದಕ್ಕೆ ಪ್ರಯತ್ನ ಮಾಡ್ತಿದ್ದ. ಕೇಶವನಿಗೆ ಆಶ್ಚರ್ಯ! ಇಷ್ಟರವರೆಗೆ ಮಾತೇ ಆಡದವನು ನಿಂಗೆ ಏನೋ ಹೇಳ್ಳೋಕೆ ಪ್ರಯತ್ನಿಸ್ತಾ ಇದ್ದಾನಲ್ಲ , ನಿಂಗೆ ಗೊತ್ತಾ ಇವನು?- ಅಂತ ಕೇಳಿದ ಕೇಶವ. ಗೊತ್ತಿಲ್ಲ- ಅಂದೆ. ಆದರೆ ಇವನನ್ನು ಎಲ್ಲೊ ನೋಡಿದ್ದೇನಲ್ಲ ಅಂತನ್ನಿಸಲಾರಂಭಿಸಿತು.
ಡಾಕ್ಟರ್ ಕೇಶವ ಅವನಿಗೆ, “”ಏನ್ ಕೃಷ್ಣಾ, ಹೇಳು, ಹೇಳು” ಅಂದ.
ಅವನಿಗೆ ಮಾತೇ ಹೊರಡ್ಲಿಲ್ಲ. ಹಾಗೇ ಕತ್ತು ಪಕ್ಕಕ್ಕೆ ಹಾಕಿ ಪ್ರಾಣ ಬಿಟ್ಟ. ನಂಗೆ ಥ್ಯಾಂಕ್ಸ್ ಹೇಳುವುದಕ್ಕೋ ಅಥವಾ ಶಾಪ ಹಾಕುವುದಕ್ಕೋ ಪ್ರಯತ್ನಿಸಿ ಪ್ರಾಣ ಬಿಟ್ಟಿದ್ದ ಅಂತ ನನಗನ್ನಿಸಿ ಖೇದವೆನ್ನಿಸಿತು.
ಕೊನೆಗೂ ನೆನಪಾಯಿತು, ಹತ್ತು ವರ್ಷದ ಹಿಂದಿನ ಘಟನೆ.
ಈ ವ್ಯಕ್ತಿಗೆ ಆಗ ಇಪ್ಪತ್ತೋ, ಇಪ್ಪತ್ತೂಂದರ ಹರೆಯವಿದ್ದಿರಬೇಕು. ಪರ್ಕಳದ ಹೆದ್ದಾರಿಯಲ್ಲಿ ಬೈಕ್ ಆ್ಯಕ್ಸಿಡೆಂಟಲ್ಲಿ ರಸ್ತೆಯಲ್ಲಿ ಬಿದ್ದಿದ್ದ. ರಕ್ತ ಹರೀತಾ ಇತ್ತು. ಜನ ಗುಂಪು ಸೇರಿದ್ರು, ಯಾರೂ ಅವನ ಹತ್ತಿರ ಹೋಗೋಕೂ ರೆಡಿ ಇರಲಿಲ್ಲ- ಕೇಸು, ಕೋರ್ಟಿನ ಉಸಾಬರಿ ಯಾಕೆ ಬೇಕೂಂತ. ಅಂಥಾದ್ರಲ್ಲಿ ನಾನು ಅವನನ್ನು ಕಾರಿನಲ್ಲಿ ಎತ್ತಿ ಹಾಕಿ, ಹಾಸ್ಪಿಟಲ್‌ಗೆ ಸೇರಿಸಿದೆ. ತರೋದು ಐದು ನಿಮಿಷ ತಡವಾಗುತ್ತಿದ್ದರೂ ಅವನು ಉಳಿಯುತ್ತಿರಲಿಲ್ಲ ಅಂತ ಡಾಕ್ಟ್ರು ಹೇಳಿದಾಗ ಏನೋ ದೊಡ್ಡ ಕೆಲಸ ಮಾಡಿದ ಸಮಾಧಾನ ನನ್ನಲ್ಲಿ.
ಮನೆಗೆ ಬಂದು ಸ್ನಾನ ಮಾಡಿ ರಕ್ತಸಿಕ್ತ ಆಗಿದ್ದ ಬಟ್ಟೆ ಬದಲಾಯಿಸಿದೆ. ಆಮೇಲೆ, ಆ ಘಟನೆ ಮನಸ್ಸಿನಿಂದ ಮರೆಯಾಗಿತ್ತು.
ಹೋ ! ಈಗ ನನ್ನೆದುರು ಪ್ರಾಣ ಕಳೆದುಕೊಂಡವ ಅದೇ ವ್ಯಕ್ತಿ !
“”ಕಳೆದ ಹತ್ತು ವರ್ಷದಿಂದ ಹಾಸಿಗೆ ಹಿಡಿದೇ ಇದ್ದಾನೆ” ಎಂದರು ಅವನ ಮನೆಯವರು. ಆಗ ನನಗೆ ಸ್ಪಷ್ಟವಾಯಿತು, ಆವತ್ತು ರಸ್ತೆಯಲ್ಲಿ ಬಿದ್ದ ಇವನನ್ನೇ ಅಲ್ಲವೆ, ಆಸ್ಪತ್ರೆಗೆ ಸೇರಿಸಿದ್ದು ನಾನು !
ನನಗೆ ಬಾಯಿ ಬಾರದಾಯಿತು. ಮನಸ್ಸು ಭಾರವಾಯಿತು. ಅವನನ್ನು ಆಸ್ಪತ್ರೆಗೆ ಸೇರಿಸದೇ ಇದ್ದಿದ್ದರೆ ಇಂತಹ ನರಕಯಾತನೆ ಪಡುವುದು ತಪ್ಪುತ್ತಿತ್ತೋ ಏನೋ ! ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ದೇಹದ ಸ್ವಾಧೀನ ಕಳೆದುಕೊಂಡಿದ್ದ. ನಾನು ಅವನ ಜೀವ ಉಳಿಸಿ ಜೀವನಾನ ನರಕ ಮಾಡಿಬಿಟ್ಟೆ!
ಸದ್ದುವನ್ನು ನಾನು ಸಮಾಧಾನಿಸಿದೆ. “ನಾವೊಂದು ಅಂದುಕೊಂಡರೆ ವಿಧಿ ಬೇರೊಂದನ್ನು ಬಯಸುತ್ತಂತೆ. ಎಲ್ಲಾ ನಮ್ಮಿಂದಾನೇ ಅಂತ ಬೀಗುತ್ತೇವೆ. ಆದರೆ ಅದು ನಮ್ಮ ಅಹಂಕಾರ. ನೀನು ನಿನ್ನ ಕೆಲಸ ಮಾಡು, ಉಳಿಯೋದು ಸಾಯೋದರ ಬಗ್ಗೆ ಚಿಂತೆ ಮಾಡಬೇಡ’
ಅವನಿಗೆ ಕೊಂಚ ಸಮಾಧಾನವಾದಂತಾಯಿತು. ಅಷ್ಟರಲ್ಲಿ ನನ್ನ ಮನೆ ಬಂತು, ಅವನಿಗೆ ಯಾರದ್ದೋ ಫೋನ್ ಬಂತು. “ಬದುಕಿದ್ದಾನಲ್ಲ, ಈಗ್ಲೆ ಬಂದೆ’ ಅಂತ ನನ್ನನ್ನು ಕಾರಿನಿಂದ ಇಳಿಸಿ ದೌಡಾಯಿಸಿದ. ಬಹುಶಃ ಸದ್ದುವಿನ ಲೈಫ್ ಸೇವಿಂಗ್ ಮಿಷನ್ ಮತ್ತೆ ಶುರುಹಚ್ಚಿಕೊಂಡಿತು.
ಉದಯ ಜಾದೂಗಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.