ಕತೆ: ಸಿಂಹಸ್ಥ ಮೇಳ
Team Udayavani, Apr 8, 2018, 7:00 AM IST
ಇಂದೋರ್‌ನಿಂದ ಮುಂಬೈ, ಮುಂಬೈಯಿಂದ ಮಂಗಳೂರು, ಮಂಗಳೂರಿಂದ ಮತ್ತೂಂದು ತಾಸು ನಮ್ಮೂರು ತಲುಪುವುದಕ್ಕೆ.ಅಬ್ಬಬ್ಟಾ… ಮನೆ ಸೇರುವಾಗ ಜೀವ ಹೆಣವಾಗಿ ಹೋಗಿತ್ತು. ಅಮ್ಮ ಬಾಗಿಲು ತೆರೆದದ್ದೇ ತಡ, ಬ್ಯಾಗೇಜ್‌ಗಳನ್ನೆಲ್ಲ ಮೂಲೆಗೆಸೆದು ಹಾಕಿದ್ದ ಬಟ್ಟೆಯಲ್ಲೇ ಹಾಸಿಗೆಯ ಮೇಲುರುಳಿದೆ. “”ಬಿದ್ದಾಯ್ತಾ, ಮೊದಲು ಕೈಕಾಲು ತೊಳೆದುಕೊಳ್ಳಬಾರದಾ” ಅಪ್ಪ ಹೇಳುತ್ತಲೇ ಇದ್ದರು. “”ಪಪ್ಪಾ, ಐದೇ ಐದು ನಿಮಿಷ” ಎಂದು ಅಲ್ಲೇ ಕಣ್ಣು ಮುಚ್ಚಿದವಳು ಕನಸಿನ ಲೋಕಕ್ಕೆ ಪಯಣ ಬೆಳೆಸಿದೆ.
ಮರುದಿನ ಸೋಮವಾರ. ಎಂದಿನಂತೆ ಯೂನಿವರ್ಸಿಟಿ ತಲುಪಿದೆ. ಡಿಪಾರ್ಟ್‌ಮೆಂಟ್ ತಲುಪಿದ ಮೇಲೆ ಮತ್ತೆಲ್ಲ ಮಾಮೂಲಿನಂತೆ. ಗೈಡ್ ಬರುವಿಕೆಗಾಗಿ ಕಾಯುತ್ತ, ಕಂಪ್ಯೂಟರ್ ಓಪನ್ ಮಾಡಿದೆ. ಇ-ಪೇಪರ್ ಓದುತ್ತ ಕುಳಿತವಳಿಗೆ ಹೊತ್ತು ಹೋದದ್ದೇ ಗೊತ್ತಾಗಲಿಲ್ಲ. ನನ್ನ ಬಲಭಾಗದಲ್ಲಿ ಒಮ್ಮೆಲೇ “ಟಂಕ್’ ಅಂತ ಶಬ್ದ ಕೇಳಿಸಿತು. ಅದು ಕಾರ್ತಿಕ್ ಜೋರಾಗಿ ಥರ್ಮಾಸ್‌ನಂತಿರುವ ನೀರಿನ ದೊಡ್ಡ ಬಾಟಿಯನ್ನು ಕೆಳಗಿಟ್ಟ ಸದ್ದು ! “”ಇಂಥ ಹೊಸ ಬಾಟಿ ನಿನ್ನ ಹತ್ತಿರವಷ್ಟೇ ಇದೆ ಎನ್ನೋ ಕಾರಣಕ್ಕಾಗಿ ಅಷ್ಟು ಜೋರಾಗಿ ಕುಕ್ಕಬೇಡ, ಮಹಾರಾಯ. ಟೇಬಲ್ ಮೇಲಿನ ಗಾಜು ಪುಡಿಪುಡಿಯಾದೀತು!” ಎನ್ನುತ್ತ ನಕ್ಕೆ. ಅದಕ್ಕಾತ ಪೆಚ್ಚುಮೋರೆ ಹಾಕಬೇಕೆ? ನಾನಾಡುತ್ತಿದ್ದ ಸಣ್ಣ ಸಣ್ಣ ಜೋಕ್‌ಗೂ ತನ್ನ ಕ್ಲಿಪ್ ಬೇಲಿಯ ಹಿಂದಿರುವ ಹಲ್ಲುಗಳನ್ನು ತೋರಿಸಿ ನಗುತ್ತಿದ್ದ ಆತನ ದುಂಡಗಿನ ಮುಖದಲ್ಲಿ ಇಂದು ಮಂದಹಾಸವೇ ಮಂಗಮಾಯವಾಗಿತ್ತು.
“”ನಾನು ಮೊನ್ನೆ ಉಜ್ಜಯಿನಿಗೆ ಹೋಗುವ ಹಿಂದಿನ ದಿನದವರೆಗೂ ಸರಿಯಾಗಿಯೇ ಇದ್ದೆಯಲ್ವೋ. ಅಷ್ಟು ಬೇಗ ಅದೇನಾಯಿತೋ?” ಅದಕ್ಕವನ ಮುಖ ಇನ್ನಷ್ಟು ಕಪ್ಪಾಯಿತು. ಯಾಕೋ ಹವಾಮಾನ ಹೊರಗಿನಂತೆ ಒಳಗೂ ಗರಂ ಆಗಿದೆ ಅಂತ ಗೊತ್ತಾಯಿತು. ಎಪ್ರಿಲ್ ತಿಂಗಳು ಬೇರೆ ! ಎದುರಿಗಿದ್ದ ಶೆಲ್ಫ್ನಿಂದ ಯಾವುದೋ ಪುಸ್ತಕ ತೆಗೆದು ಅದರ ನಡುವಿನಲ್ಲಿ ಮುಖ ಹುದುಗಿಸಿಕೊಂಡ ಪಾಪದ ಮಾಣಿ. ನನಗಿಂತ ಮೂರು ವರ್ಷ ಕಿರಿಯವ. ನಾಲ್ಕು ತಿಂಗಳ ಹಿಂದಷ್ಟೇ ಸಂಶೋಧನೆಗೆಂದು ನಮ್ಮಲ್ಲಿಗೆ ಬಂದು ಸೇರಿಕೊಂಡಿದ್ದಾನೆ. ನಮ್ಮ ಸರ್‌ಗೆ ಆಪ್ಯಾಯಮಾನ ಶಿಷ್ಯ. ಅಂದ ಹಾಗೆ ಗಂಟೆ ಹತ್ತೂವರೆ ದಾಟಿತ್ತು. ಸರ್ ಬಂದಿರಲೇಬೇಕು, ಎಂದುಕೊಂಡು ಅವರ ಕ್ಯಾಬಿನ್ ಕಡೆಗೆ ಹೆಜ್ಜೆಹಾಕಿದೆ. ಈಗಿನ ಕಾಲದ ಹುಡುಗರಿದ್ದಾರಲ್ಲ, ಬರೀ ತಮಾಷೆ. ಸೀರಿಯಸ್‌ನೆಸ್ ಲವಲೇಶವೂ ಇಲ್ಲ. ಇವಕ್ಕೆಲ್ಲ ಇನ್ನೂ ಮೆಚೂರಿಟಿಯಿಲ್ಲ. “”ಓಕೆ… ಓಕೆ… ಐ ವಿಲ್ ಹ್ಯಾಂಡಲ್… ಸರ್” ಭಾರೀ ಸೀರಿಯಸ್ ಆಗಿ ಯಾರ ಜೊತೆಗೋ ಫೋನ್‌ನಲ್ಲಿ ಮಾತಾಡ್ತಾ ಇದ್ದರು. ಹಿಂದಿರುಗಿ ಹೋಗಲೋ ಕದ್ದು ಆಲಿಸಲೋ. ಛೆ! ನಾನು ಬಂದಿರೋದು ಅವರಿಗೆ ತಿಳಿಯಬೇಕೇ! “”ಪ್ರತೀಕ್ಷಾ ಒಳಗಡೆ ಬನ್ನಿ” ಎಂದವರು, “”ಹಾಗೋ ಮತ್ತೆ ಮಾತಾಡ್ತೇನೆ” ಎಂದು ಮೊಬೈಲ್ ಮಡಚಿಟ್ಟರು.
ಸೇವ್ ಪ್ಯಾಕೆಟ್ ಅವರ ಟೇಬಲ್ ಮೇಲಿಡುತ್ತ, “”ಸರ್, ನಿಮಗೋಸ್ಕರ ತಂದಿದ್ದೇನೆ. ಅಲ್ಲಿಯ ಈ ನಮಕೀನ್ ತುಂಬ ಫೇಮಸ್, ತುಂಬ ಟೇಸ್ಟೀ ಸರ್” ಎಂದೆ. “ಥ್ಯಾಂಕ್ಯೂ’ ಮುಖದಲ್ಲಿ ಕಿರುನಗೆ ಬೀರುತ್ತ, “”ಅಂದ ಹಾಗೆ ಹೇಗಿತ್ತು ಉಜ್ಜಯಿನಿಯ ಸಿಂಹಸ್ಥ ಕುಂಭ ಮೇಳ? ನೀವು ಬಿಡಿ, ಅಂಥ ರಶ್ ಇರುವಲ್ಲಿ ಯಾರಾದರೂ ಹೋಗ್ತಾರಾ? ಜನ ಮರುಳ್ಳೋ, ಜಾತ್ರೆ ಮರುಳ್ಳೋ ಹೆಚ್ಚಿನ ಹಿಂದಿ ಫಿಲ್ಮ್ಗಳಲ್ಲಿ ನೋಡ್ತೇವಲ್ಲ, ಅವಳಿ ಮಕ್ಕಳಲ್ಲಿ ಒಬ್ಬ ಕಳೆದು ಹೋಗೋದೇ ಈ ಕುಂಭ ಕೇ ಮೇಲೇ ಮೇಂ… ನೀವು ಹೋದವರೆಲ್ಲ ಸರಿಯಾಗಿ ಬಂದಿದ್ದೀರಿ ತಾನೆ? ದಿಸ್ ಈಸ್ ಟೂ ಮಚ್…” ಎನ್ನುತ್ತ ಸರ್ ಸೀಲಿಂಗ್‌ಗೆ ತಗಲಿ ಹಿಂದಿರುಗಿ ಬರುವಷ್ಟು ನಕ್ಕರು. ಅಬ್ಟಾ ಎನಿಸಿತು. “”ಎಲ್ಲಾ ಚೆನ್ನಾಗಿತ್ತು ಸರ್” ಎಂದು ಸುಮ್ಮನಾದೆ. ನಾನು ಅಲ್ಲಿಗೆ ಹೋದುದರ ನಿಜವಾದ ಉದ್ದೇಶವೇನಾದರೂ ಸರ್‌ಗೆ ಗೊತ್ತಾದರೆ ನನ್ನ ಗ್ರಹಚಾರ ಬಿಡಿಸಿಬಿಟ್ಟಾರು, ಎಂಬ ಅಳುಕು ಕೂಡ ಮನಸ್ಸಿನ ಮೂಲೆಯಲ್ಲಿ ಮನೆಮಾಡಿಕೊಂಡಿತ್ತು. ಅಂದಿನ ದಿನ ನಾನು ಮಾಡಬೇಕಾಗಿದ್ದ ಕೆಲಸದ ಬಗ್ಗೆ ಚರ್ಚಿಸಿ ಕ್ಯಾಬಿನ್‌ನಿಂದ ಹೊರಬಂದೆ.
ನಾನು ನನ್ನ ಸ್ವಸ್ಥಾನಕ್ಕೆ ಮರಳುವಷ್ಟರಲ್ಲಿ ರಾಜಿ ಮತ್ತು ಶುಭ ಇಬ್ಬರೂ ಕೇಕೇ ಹಾಕಿ ನಗುತ್ತಿರುವುದು ಕಾರಿಡಾರ್‌ನಲ್ಲಿ ಕೇಳಿಸುತ್ತಿತ್ತು. ನನ್ನ ಅಪ್ಪಣೆಯಿಲ್ಲದೆ, ನನ್ನ ಬ್ಯಾಗ್‌ನಿಂದ ಜಿಲೇಬಿ ಪೊಟ್ಟಣವನ್ನು ತೆರೆದು ಸುಖಾನಂದದಿಂದ ಸವಿಯುತ್ತಿರುವ ಚಿತ್ರ ಕೋಣೆಯ ಹೊರಗಡೆಯಿಂದಲೇ ಕಾಣಿಸಿತು.
ಬಿಬಿಸಿ ಎಂದೇ ಕರೆಯಲ್ಪಡುವ ರಾಜಿ ಅಲಿಯಾಸ್ ರಾಜೇಶ್ವರಿ ತಣ್ಣೀರುಬಾವಿ ನನ್ನೊಂದಿಗೆ ಪಿಎಚ್.ಡಿ.ಗೆ ಸೇರಿಕೊಂಡ ವಿದ್ಯಾರ್ಥಿನಿ. ನನ್ನನ್ನು ಕಂಡವಳೇ ಜಿಲೇಬಿ ಮೆಲ್ಲುತ್ತಲೇ ಹೇಳಿದಳು, “”ಜಿಲೇಬಿ ಸಖತ್ತಾಗಿದೆ. ಇಷ್ಟೇನಾ ಅಥವಾ ಕಬೋರ್ಡ್ ಒಳಗಡೆ ಎಲ್ಲಾದರೂ ಅಡಗಿಸಿಟ್ಟಿದ್ದು ಇದೆಯಾ? ಇದ್ದರೆ ತೆಗೆದುಬಿಡಮ್ಮಾ… ಒಟ್ಟಿಗೇ ಸವಿದುಬಿಡ್ತೇವೆ” ಅವಳಿಗೆ ಉತ್ತರಿಸುವಷ್ಟರಲ್ಲಿ ಮಧ್ಯೆ ನುಸುಳಿಬಂದ ಶುಭಾಳ ಪ್ರಶ್ನೆ , “”ಹೇಗಿತ್ತೇ ಅಲ್ಲೆಲ್ಲ…?” ಅಲ್ಲೇನೂ ಇಲ್ಲ ಎಂಬಂತೆ ರಾಜಿಗೆ ಎರಡೂ ಕೈಗಳಿಂದ ಸನ್ನೆ ಮಾಡಿದೆ. ಶುಭಾಳತ್ತ ತಿರುಗಿದವಳು ನೇರವಾಗಿ ಹೋದದ್ದು ಅಖಾಡಾದಲ್ಲಿ ಕಂಡ ಸಾಧುಗಳ ಗುಂಪಿಗೆ ! “”ಏನು ಹೇಳಲಿ ಶುಭ? ಅಲ್ಲಿಯೂ ಕಂಡೆ ಸೆಲ್ಫಿ ಗೀಳು! ಕೆಲವು ಬಾಬಾಗಳ ಕೈಯಲ್ಲಿ ಲ್ಯಾಪ್ ಟಾಪ್, ನಂಬಿಕೆ ಬರೋದಿಲ್ಲ ಅಲ್ವಾ? ಮತ್ತೆ ಕೆಲವು ಬಾಬಾಗಳ ಮೈಮೇಲೆ ಕೇಜಿಗಟ್ಟಲೆ ರುದ್ರಾಕ್ಷಿ ಮಾಲೆ. ಮೋಟುಬಟ್ಟೆ ಬಾಬಾಗಳ ಮೈಕೈ ವಿಭೂತಿಮಯ. ಎಲ್ಲೂ ಕಾಣದ ಕಿನ್ನರ ಅಖಾಡಾ ಕ್ಷಿಪ್ರಾ ನದಿಯ ದಡದ ಮೇಲೆ ಬೀಡುಬಿಟ್ಟಿತ್ತು. ನಿಲ್ಲು, ತೋರಿಸ್ತೇನೆ, ನನ್ನ ಮೊಬೈಲ್‌ನಲ್ಲಿ ಕೆಲವು ಫೋಟೊಗಳಿವೆ. ನನ್ನ ತಮ್ಮ ಪ್ರಜ್ವಲ್ ಕೂದಲೆಲ್ಲ ಜಡೆಗಟ್ಟಿದ ಒಬ್ಬರು ಬಾಬಾರ ಜೊತೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದಾನೆ. ಅಮ್ಮ ಬೈತಾ ಇದ್ದರು, ಹೋಗು ನೀನು ಅವರ ಜೊತೆಗೆ, ಹಿಂದಿರುಗಿ ಬರಬೇಡ, ಅಂತ… ಅದಕ್ಕೆ ಅವನೇನಂದ ಗೊತ್ತಾ, ಒಳ್ಳೆಯದಾಯ್ತು, ಹೋಮ್‌ವರ್ಕ್ ಮಾಡೋದು ತಪ್ಪುತ್ತದೆ!”
“”ಏಯ್… ಏನೇ ರಾಜಿ, ಎಲ್ಲಾ ನೀನೇ ಮುಕ್ಕುತಾ ಇದ್ದಿಯಲ್ಲೆ. ಕಾರ್ತಿಕ್‌ಗೂ ಜಿಲೇಬಿ ಕೊಡು” ಖಾಲಿಯಾಗುತ್ತಲಿದ್ದ ಡಬ್ಬವನ್ನೆತ್ತಿಕೊಂಡು ನಾನೇ ಹೋಗಿ ಅವನೆದುರು ಹಿಡಿದೆ. ಆತನೋ, ತಿನ್ನಲೋ ಬೇಡವೋ ಎಂಬಂತೆ ಒಂದು ತುಂಡಾದ ಜಿಲೇಬಿಯನ್ನು ಬಾಯಿಗಿರಿಸಿಕೊಂಡು ಕೈತೊಳೆಯುವ ನೆಪದಲ್ಲಿ ಹೊರನಡೆದವನು ಎಷ್ಟು ಹೊತ್ತಾದರೂ ಹಿಂದಿರುಗಲಿಲ್ಲ.
“”ನಾನು ನಿನ್ನೆಯಿಂದ ನೋಡ್ತಾ ಇದ್ದೇನೆ, ನಮ್ಮ ಕಾರ್ತಿ ಯಾಕೋ ಒಂಥರಾ ಇದ್ದಾನೆ” ಶುಭಾಳ ಮಾತುಗಳಲ್ಲಿ ಸ್ನೇಹದ ಒರತೆಯಿತ್ತು¤. “”ಗೈಡ್ ಜೊತೆ ಏನೋ ಕಿರಿಕ್ ಮಾಡಿಕೊಂಡಿರಬೇಕು. ಮತ್ತಿನ್ನೇನು” ಎಂದು ಹೇಳಿ ರಾಜಿ ಮುಖ ಸಿಂಡರಿಸಿದಳು. ಕಾರ್ತಿಕ್ ಯಾವುದೋ ತೊಂದರೆಯಲ್ಲಿದ್ದಾನೆ. ಅವನ ಸಮಸ್ಯೆ ನಾವಂದುಕೊಂಡಷ್ಟು ಸರಳವಾಗಿಲ್ಲ. ಹೇಗಾದರೂ ಈ ನಮ್ಮ ಹುಡುಗನ ಬಾಯಿ ಬಿಡಿಸಲೇಬೇಕು ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿ, ರಾಜಿ-ಶುಭಾರು ಸಂಜೆ ಚಾಟ್ ತಿನ್ನಲು ಎಷ್ಟೇ ಕರೆದರೂ ಹೋಗದೆ, ಕೋಣೆಯಲ್ಲೇ ಕಾದು ಕುಳಿತೆ.
ನಾನೆಣಿಸಿದಂತೆ ಕಾರ್ತಿಕ್ ಒಂದು ಸಂಶೋಧನ ಪತ್ರದ ಕರಡು ತಿದ್ದುವುದರಲ್ಲಿ ವ್ಯಸ್ತವಾಗಿದ್ದ. ಸರ್ ಬಹುಶಃ ಅರ್ಜೆಂಟಾಗಿ ಮಾಡಿಕೊಡಲು ಹೇಳಿರಬೇಕು. “”ಯಾಕೋ ಕಾರ್ತಿಕ್ ನಾನು ಊರು ಬಿಡುವಾಗ ನಿನ್ನಲ್ಲಿದ್ದ ಎನರ್ಜಿ ಹಿಂದಿರುಗಿ ಬರುವಷ್ಟರಲ್ಲಿ ಪಾತಾಳಕ್ಕೆ ಕುಸಿದ ಹಾಗಿದೆ. ಏನಾಯೊ¤à ಮಾಣಿ?” ಎಂದೆ. ಅದೆಲ್ಲಿ ಹುದುಗಿತ್ತೋ ಆ ದುಃಖ ಕಣ್ಣಿಂದ ಒಂದೇ ಸವನೆ ಪಟಪಟ ಉದುರಲಾರಂಭಿಸಿತು. ಕರವಸ್ತ್ರದಿಂದ ಒಮ್ಮೆಲೆ ಎರಡೂ ಕಣ್ಣುಗಳನ್ನು ಒತ್ತಿ ಹಿಡಿದುಕೊಂಡ. ಹುಡುಗ ಅಳುವುದನ್ನು ನೋಡಬೇಕಾಯ್ತಲ್ಲ ಎಂಬ ವ್ಯಥೆ ಒಂದು ಕಡೆಯಾದರೆ, ಒಳಗಡೆ ಕಟ್ಟಿಕೊಂಡಿದ್ದ ವೇದನೆಯ ಗೂಡು ಒಡೆದು ಮನಸ್ಸನ್ನು ಹಗುರಗೊಳಿಸುವ ಕಾರ್ಯ ಮಾಡಿದೆನಲ್ಲ ಎಂಬ ಸಾರ್ಥಕ್ಯವೂ ಇನ್ನೊಂದೆಡೆಯಿತ್ತು. ಇದು ತುಂಬ ಗಂಭೀರವಾದ ವಿಷಯವಿರಬಹುದೆಂದು ಮನವರಿಕೆಯಾಗುತ್ತಿದ್ದಂತೆ ಕುರ್ಚಿಯನ್ನು ಅವನ ಹತ್ತಿರಕ್ಕೆ ತೆಗೆದುಕೊಂಡು ಹೋಗಿ ಕುಳಿತೆ. “”ಏನಿಲ್ಲ ಪ್ರತೀಕ್ಷಕ್ಕಾ, ಏನಿಲ್ಲ” ಎಂದವನು ನಿಧಾನವಾಗಿ ಬಾಯಿಬಿಡಲು ಶುರು ಮಾಡಿದ.
“”ಮೊದಲೇ ನಿಮ್ಮಲ್ಲಿ ಹೆಣ್ಣು ಸಿಗೋದಿಲ್ಲ. ಅದರಲ್ಲೂ ನಿನಗೆ ಹೆಣ್ಣು ಸಿಗೋದು ಭಾರೀ ಕಷ್ಟ ಮಹಾರಾಯ. ನಿನಗೆ ಲವ್ ಮಾಡೋ ಟ್ಯಾಲೆಂಟ್ ಬೇರೆ ಇಲ್ಲ. ಕೆಲವು ದಿನಗಳಿಂದ ಬಯೋಕೆಮಿಸ್ಟ್ರಿಯ ಶ್ರೀಕಾಂತ್ ಮತ್ತು ಸದಾನಂದ ನನ್ನ ಕಾಲು ಎಳೀತಾ ಇದ್ದರು. ಮನೆಯಲ್ಲಿ ಅಮ್ಮ ಬೇರೆ ಹೇಳ್ತಾ ಇದ್ದಳು, ಜಾತಿ ಯಾವುದಾದರೂ ಅಡ್ಡಿಯಿಲ್ಲ ಮಾಣಿ, ಸಸ್ಯಾಹಾರಿ ಆಗಿದ್ದರೆ ಸಾಕು. ಅದೂ ಅಲ್ಲ, ಇಲ್ಲಿಗೆ ಬಂದ ಮೇಲೆ ಸಸ್ಯಾಹಾರ ರೂಢಿಸಿಕೊಂಡರೂ ಸಾಕು. ಈ ಹಳ್ಳಿಕೊಂಪೆ ನೋಡಿದರಂತೂ ಇಲ್ಲಿಗೆ ಯಾರೂ ಬರುವ ಲಕ್ಷಣ ಇಲ್ಲ. ಬಹಳ ಮುಖ್ಯವಾಗಿ ಅವರಿಬ್ಬರಿಗೆ ಪಾಠ ಕಲಿಸಬೇಕು ಅಂತ ಒಂದು ಮೆಟ್ರಿಮೋನಿಯಲ್ಸ್‌ನಲ್ಲಿ ಹಣ ತೆತ್ತು ರಿಜಿಸ್ಟರ್ ಮಾಡಿಸಿದೆ. ಫೋಟೊ ಹಾಕದೆ ಬೇರೆ ಎಲ್ಲ ವಿಷಯ ಸರಿಯಾಗಿ ನಮೂದಿಸಿದ್ದೆ”. ಇದನ್ನು ಕೇಳಿ ನನಗೆ ನಗು ಬಂತು. “”ನಿನಗ್ಯಾಕೋ ಮಾಣಿ, ಇಷ್ಟು ಬೇಗ ಮದುವೆ? ನಿನ್ನ ಹೊಟ್ಟೆ ಹೊರಕೊಳ್ಳುವುದೇ ಕಷ್ಟದಲ್ಲಿ, ಅಂಥದರಲ್ಲಿ ಬೆಟ್ಟ ಹತ್ತುವವನು ಬೆನ್ನಿಗೆ ಬಂಡೆ ಕಟ್ಟಿಕೊಂಡು ಹೋದ ಎನ್ನುವ ಹಾಗೆ, ಅವಳ ಹೊಟ್ಟೆ ಅದು ಹ್ಯಾಗೆ ಹೊರಿತೀಯೋ?” ಕಾರ್ತಿಕ್ ಉರಿದುಹೋದ. “”ಇದೇ… ಇದೇ ಮಾತನ್ನು, ಹೀಗೇ ಹೇಳಿ ಸರ್ ನನಗೆ ಉಗಿದು ಉಪ್ಪಿನಕಾಯಿ ಹಾಕಿದ್ರು. ಏನೇ ಆದರೂ ರಾಜಿ ಅಕ್ಕನಿಗೆ ಈ ವಿಷಯ ಗೊತ್ತಾಗಬಾರದು. ಆ ಬೊಂಬಾಯಿಯಂಥ ಬಾಯಿಗೆ ಬಿದ್ದರೆ ನನ್ನ ಕತೆ ಕೈಲಾಸ! ಹರಿದ ಸಾಣಿಗೆಯಲ್ಲಿ ಹರಿವೆ ಬೀಜ ಎತ್ತಿಕೊಂಡು ಹೋಗುವ ಹಾಗೆ ಊರಿಡಿ ನನ್ನನ್ನು ಫೇಮಸ್ ಮಾಡಿಬಿಡ್ತಾಳೆ”.
“”ಅಲ್ವೋ, ಹೋಗಿ, ಹೋಗಿ ನೀನು ಸರ್‌ಗೆ ಯಾಕೆ ಹೇಳಲಿಕ್ಕೆ ಹೋದೆ? ಅವರಿಗೆ ಎ-ಟು-ಝಡ್ ಎಲ್ಲಾ ಹೇಳಲೇಬೇಕು ಅಂತ ಕರಾರು ಮಾಡಿಕೊಂಡಿದ್ದಿಯಾ?”
“”ಅಯ್ಯೋ, ನಾನೆಲ್ಲಿ ಹೇಳಿದೆ? ಯಾವಳ್ಳೋ ಒಬ್ಬ ಹುಡುಗಿಯ ಅಣ್ಣ ಫೋನ್ ಮಾಡಿ ಅವರ ಕಿವಿ ಕಚ್ಚಿದ್ದಾನೆ”.
“”ಹುಡುಗಿ! ಯಾವ ಹುಡುಗಿ?” ನಾನು ಅವಾಕ್ಕಾಗಿ ಪ್ರಶ್ನೆ ಕೇಳಿ ಕಾತರತೆಯಿಂದ ಅವನ ಉತ್ತರಕ್ಕಾಗಿ ಕಾದೆ.
“”ನನ್ನ ಮ್ಯಾಟ್ರಿ ಪ್ರೊಫಾಯಿಲ್ ನೋಡಿ, ಯಾವುದೋ ಸೀಮೆಗಿಲ್ಲದ ಅಣ್ಣ ತನ್ನ ತಂಗಿಯ ವಿಷಯ ಮಾತಾಡೋದಕ್ಕೆ ಮೊನ್ನೆ ನನಗೆ ಫೋನ್ ಮಾಡಿದ್ದ. ನಿಜ ಹೇಳಬೇಕು ಅಂದ್ರೆ, ನಾನು ಯಾವುದೇ ಕಾಲ್‌ನ ನಿರೀಕ್ಷೆಯಲ್ಲಿರಲಿಲ್ಲ. ಫೋನ್ ಬಂದಾಗ ಏನು ಉತ್ತರ ಕೊಡಬೇಕು ಅಂತ ತಡವರಿಸಿದೆ. ಈಗ ಮದುವೆಯಾಗೋದಕ್ಕೆ ಇಂಟರೆಸ್ಟ್ ಇಲ್ಲ. ಒಂದು ವರ್ಷದ ನಂತರ ನೋಡೋಣ” ಅಂದೆ. “”ಇಂಟರೆಸ್ಟ್ ಇಲ್ಲ ಅಂದರೆ ಯಾಕೆ ಪ್ರೊಫಾಯಿಲ್ ಹಾಕ್ತೀರಾ? ನಾವು ಸೀರಿಯಸ್ಸಾಗಿ ನಮ್ಮ ಹುಡುಗಿಗೆ ಹುಡುಗನನ್ನು ಹುಡುಕ್ತಾ ಇರ್ತೇವೆ. ಡೀಸೆಂಟ್ ಆಗಿ ಡಿಲೀಟ್ ಮಾಡಿ ನಿಮ್ಮ ಪ್ರೊಫಾಯಿಲ್, ಇಲ್ಲದೆ ಹೋದರೆ ಪರಿಣಾಮ ನೆಟ್ಟಗಾಗಿರೋದಿಲ್ಲ. ಹುಷಾರ್!” ಆ ಏರುದನಿಯಲ್ಲೇ “”ನೀವು ಯಾವ ಡಿಪಾರ್ಟಮೆಂಟ್?” ಅಂತ ಕೇಳಿದ. ನಾನು ಹೇಳಿಬಿಟ್ಟೆ. ಫೋನ್ ಕಟ್ ಮಾಡಿದ. ಸ್ವಲ್ಪ$ಭಯ ಆದರೂ ಗಟಗಟ ಅಂತ ನೀರು ಕುಡಿದು ತಣ್ಣಗಾಗಿದ್ದೆ. ಮಾರನೆಯ ದಿನಾನೇ ಸರ್ ಕರೆದರು. ನನ್ನ ದುರದೃಷ್ಟಕ್ಕೆ ಆ ಫೋನ್ ಮಾಡಿದವನು ಸರ್‌ಗೆ ಹತ್ತಿರದ ಸಂಬಂಧಿಯಂತೆ. ನನ್ನ ಬಗ್ಗೆ ವಿಚಾರಿಸಲಿಕ್ಕಾಗಿ ಸರ್‌ಗೆ ಫೋನ್ ಮಾಡಿದ್ದನಂತೆ. ಸರ್ ಅವನ ಹತ್ತಿರ ನನ್ನ ಪರವಾಗಿಯೇ ಮಾತಾಡಿದ್ದಾರೆ. ವಿಷಯ ದೊಡ್ಡದು ಮಾಡುವುದು ಬೇಡ. ಅವನಿನ್ನೂ ಚಿಕ್ಕವನು. ತನ್ನ ಕಾಲಮೇಲೆ ನಿಂತಿಲ್ಲ. ನಾನು ಬುದ್ಧಿ ಹೇಳೆ¤àನೆ. ಇದೇ ಸ್ಪೀಡಲ್ಲಿ ಹೋದರೆ, ಅವನ ಪಿಎಚ್.ಡಿ ಮುಗಿಯೋದಕ್ಕೆ ಇನ್ನೂ ಮೂರು ವರ್ಷಗಳು ಬಾಕಿ ಇವೆ. ಏನೋ ತಪ್ಪಿ$ಅವನ ಪ್ರೊಫಾಯಿಲ್ ಅಲ್ಲಿಗೆ ಬಂದಿರಬೇಕು ಎಂದೆಲ್ಲ ಹೇಳಿ ಅವರನ್ನೇನೋ ಸುಮ್ಮನಾಗಿಸಿದವರು ನನಗೆ ಮಾತ್ರ ಎಗ್ಗಾ-ಮುಗ್ಗಾ ಬೈದಿದ್ದಾರೆ. ಎಲ್ಲಾದರೂ ನಿನ್ನ ದಾರಿ ನೀನು ನೋಡಿಕೋ. ನನಗೆ ಬೇಡ ನಿನ್ನಂಥ ವಿದ್ಯಾರ್ಥಿ ಅಂತ ಎಲ್ಲರೆದುರು ಹೇಳಿಬಿಡ್ತಾರೇನೋ ಎಂದು ಅಂದುಕೊಂಡಿದ್ದೆ. ಅಷ್ಟು ಹೊತ್ತಿಗೆ ಯಾರೋ ಬಂದರು. ಈ ಬಡಜೀವ ಅದ್ಹೇಗೋ ಬದುಕುಳಿಯಿತು. ಆಗ ಆದ ಕೈಕಾಲು ನಡುಕ ಈಗಲೂ ಇದೆ”.
ಕಾರ್ತಿಕ್‌ನ ಕತೆ ಕೇಳಿ ನಾನು ಕಣ್ಣು ಪಿಳಿಪಿಳಿ ಮಾಡಿದೆನಾದರೂ ಎದೆಯೊಳಗೆಲ್ಲೋ ಎದ್ದ ಚಳಿಯಿಂದಾಗಿ ಮೈಯಲ್ಲಿ ನಡುಕವುಂಟಾಯಿತು. ನನ್ನ ವಿಷಯ ಗೊತ್ತಾದಲ್ಲಿ ಸರ್ ಪ್ರತಿಕ್ರಿಯೆ ಹೇಗಿರಬಹುದು ಎಂದು ಯೋಚಿಸಿಯೇ ಭಯವಾಯಿತು. ಪಿಎಚ್.ಡಿ. ಮುಗಿಯುವವರೆಗೂ ಮದುವೆ-ಗಿದುವೆಯ ಡಿಸ್ಟ್ರಾಕ್ಷನ್ ಇರಲೇಬಾರದು ಎಂಬ ಒಪ್ಪಂದದ ಮೇಲೆಯೇ ಸರ್ ನನಗಿಲ್ಲಿ ದೀಕ್ಷೆ ಕೊಡಿಸಲು ತಯಾರಾಗಿದ್ದು. ನಾನು ನಿಜವಾಗಿಯೂ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಸಿಂಹಸ್ಥ ಕುಂಭಮೇಳದಲ್ಲಿ ಭಾಗವಹಿಸಲು ಉಜ್ಜಯಿನಿಗೆ ಹೋದುದಲ್ಲ ; ಬದಲಾಗಿ ನನ್ನ ತೀರಾ ಖಾಸಗಿಯಾದ ಕೌಟುಂಬಿಕ ಕಾರ್ಯಕ್ರಮಕ್ಕಾಗಿ ಹೋದದ್ದು ಎಂಬುದು ಅವರಿಗೆ ತಿಳಿದರೆ!
ಕಳೆದ ಬಾರಿ ನಮ್ಮಲ್ಲಿಯ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ವಾಡಿಕೆಯಂತೆ ಹುಡುಗನ ಕಡೆಯವರು ಪೂರ್ವಭಾವಿಯಾಗಿ ನಮ್ಮಲ್ಲಿಗೆ ಬಂದಿದ್ದರು. ಕಾಕತಾಳೀಯವೋ ಎಂಬಂತೆ ಅಲ್ಲಿ ಕುಂಭಮೇಳ ನಡೆಯುವಾಗ ನಾವು ಅವರಲ್ಲಿಗೆ ಹೋಗಬೇಕಾಗಿ ಬಂತು. ನಾನಲ್ಲಿಗೆ ಹೋದ ಉದ್ದೇಶ ಗುರುಗ್ರಹವು ಸಿಂಹರಾಶಿಯಲ್ಲಿ ಬಂದಾಗ ನಡೆಯುವ ಮಹಾಪರ್ವದ ವೀಕ್ಷಣೆ ಮಾಡಿ ಧನ್ಯಳಾಗಲಿಕ್ಕಲ್ಲ ; ಹೊರತಾಗಿ ಸಿಂಹರಾಶಿ ಸಂಭೂತ ಅಂಕಿತ್ ಶರ್ಮಾರ ಮನೆ ಮತ್ತು ಮನೆಯವರನ್ನು ಹತ್ತಿರದಿಂದ ನೋಡಲು ಹೋದದ್ದು ಎಂಬುದು ಗೊತ್ತಾದರೆ!
ಅಬ್ಟಾ ! ಈ ಕಲಿಕೆಯಲ್ಲಿ ವಿವಾಹವೆಂಬುದು ಕುಟುಂಬದವರೆಲ್ಲ ಕೂಡಿ ಸಂಭ್ರಮಿಸುವ ಸಮಾರಂಭವಾಗಿರದೆ ನಮ್ಮನ್ನೆಲ್ಲ ಕಾಡುವ ಸಾರ್ವತ್ರಿಕ ಸಮಸ್ಯೆಯಾಗಿಬಿಟ್ಟಿದೆ. ಹೇಳುತ್ತ ಹೋದರೆ, ಶುಭಾಳ ಸಮಸ್ಯೆಯೊಂದು ರೀತಿಯದು. ರಾಜಿಯದು ಮತ್ತೂಂದು ರೀತಿಯದು. ನನಗೆ ಕಂಕಣಬಲ ಕೂಡಿಬಂದಿದೆ ಎಂಬ ಕಾರಣಕ್ಕಾಗಿಯೇ ನಾನು ಅಂಕಿತ್‌ರೊಂದಿಗೆ ಚಾಟಿಂಗ್ ಮಾಡುತ್ತಿರುವುದು. ಅಪ್ಪ, ಅಮ್ಮ, ತಮ್ಮರೊಂದಿಗೆ ಉಜ್ಜಯಿನಿಯಲ್ಲಿರುವ ಅವರ ಮನೆಗೂ ಹೋಗಿಬಂದಿದ್ದು. ಇಷ್ಟು ಮುಂದುವರಿದ ನಮ್ಮ ವಿಷಯದ ಬಗ್ಗೆ ಸರ್‌ಗೆ ಹೇಗೆ ಹೇಳಲಪ್ಪಾ? ಒಳಗೊಳಗೇ ಚಡಪಡಿಸುವ ಸರದಿ ಈಗ ನನ್ನದಾಗಿತ್ತು. ಕಾರ್ತಿಕ್‌ಗಾದ ಮಹಾಮಂಗಳಾರತಿಯ ನೆನಪು ತುಸು ಮಾಸುವವರೆಗೆ ಕಾದರಾಯಿತೆಂದು ಸುಮ್ಮನಿರಬೇಕಷ್ಟೆ !
ನಮ್ರತಾ ಭಂಡಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.