ಸಹನೆ ವಜ್ರದ ಕವಚ: ಅನುಮಾನ, ಅಪಮಾನ, ಸನ್ಮಾನ!
ಸೋತು ಗೆದ್ದವರು
Team Udayavani, Jul 7, 2024, 11:20 AM IST
ಒಬ್ಬ ರಾಜಕಾರಣಿ, ಇಬ್ಬರು ಆಟಗಾರರು- ಈ ಮೂವರನ್ನೂ ಸಮಾಜ ಅನುಮಾನಿಸಿತ್ತು. ಅಪಮಾನಿಸಿತ್ತು. ಜನ ಗೇಲಿ ಮಾಡಿದ್ದರು. ಇಷ್ಟೇ ನಿಮ್ ಲೈಫು ಎಂದು ಕೆಲವರು ಭವಿಷ್ಯವನ್ನೂ ನುಡಿದಿದ್ದರು. ಅಂಥ ಸಂದರ್ಭದಲ್ಲಿ ಈ ಮೂವರೂ ಕುಗ್ಗಲಿಲ್ಲ. ಕಂಗಾಲಾಗಲಿಲ್ಲ. ಬದಲಿಗೆ ತಾಳ್ಮೆಯಿಂದ, ದಿಟ್ಟತನದಿಂದ ಒಂದೊಂದೇ ಹೆಜ್ಜೆ ಮುಂದಿಡುತ್ತಾ ಕೊನೆಗೊಮ್ಮೆ ಗೆಲುವಿನ ನಗೆ ನಕ್ಕರು…
ಕಣ್ಣೀರನ್ನು ಪನ್ನೀರಾಗಿಸಿಕೊಂಡ ಪಾಂಡ್ಯ ಎಂಬ ಛಲಗಾರ :
ಕೆಲವೇ ತಿಂಗಳುಗಳ ಹಿಂದಿನ ಕಥೆ. ಗುಜರಾತ್ ಫ್ರಾಂಚೈಸಿ ತಂಡದ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದರು. ಅದೂ ನಾಯಕನಾಗಿ! ಇದರಿಂದಾಗಿ ಕೋಟ್ಯಾಂತರ ಅಭಿಮಾನಿಗಳ ಮೆಚ್ಚಿನವರಾಗಿದ್ದ ರೋಹಿತ್ ಶರ್ಮಾ ತಮ್ಮ ನಾಯಕನ ಪಟ್ಟವನ್ನು ಬಿಟ್ಟುಕೊಡಬೇಕಾಯಿತು. ಅಷ್ಟು ಸಾಕಾಯಿತು ಅಭಿಮಾನಿ ಲೋಕ ಕೆರಳಲು. ಮರುಕ್ಷಣದಿಂದಲೇ ಹಾರ್ದಿಕ್ ಪಾಂಡ್ಯ ಎಂಬ ಆಲ್‌ರೌಂಡರ್ ಕ್ರಿಕೆಟ್ ಪ್ರಿಯರ ಕಣ್ಣಲ್ಲಿ ಖಳನಾಯಕರಾದರು. ಅವರು ಮೈದಾನಕ್ಕಿಳಿದ ಮರುಕ್ಷಣ ಸಾವಿರಾರು ಕಂಠಗಳು ಒಟ್ಟಿಗೆ ಬೂ… ಎಂದವು. ಸಹಿಸಲಾಗದ ಗೇಲಿಗಳು, ಕಠೊರ ಮಾತಿನ ಘೋಷಣೆಗಳು ಕೂಗಲ್ಪಟ್ಟವು. ಮೀಮ್ ಪುಟಗಳು, ಯೂಟ್ಯೂಬ್ ಶಾರ್ಟ್ಸ್ ಗಳು, ರೀಲ್ಸ್ ಗಳು ದಂಡಿಯಾಗಿ ಅವರನ್ನು ಆಡಿ ಕೊಂಡವು.
ಇದರ ನೇರ ಪರಿಣಾಮ ಅವರ ತಂಡದ ಮೇಲಾಯಿತು. ಮುಂಬೈ ಇಂಡಿಯನ್ಸ್, ಸುಲಭದ ಪಂದ್ಯಗಳನ್ನೂ ಸೋತು, ಟಿ 20 ಆವೃತ್ತಿಯಿಂದ ಹೀನಾಯವಾಗಿ ನಿರ್ಗಮಿಸಿತು. ಎಲ್ಲ ಸೋಲುಗಳ ಹೊಣೆಗಾರಿಕೆ ಪಾಂಡ್ಯಾರ ತಲೆಯ ಮೇಲೆ ಬಂತು. ಅದೇ ಹೊತ್ತಿಗೆ ಅವರ ವೈಯಕ್ತಿಕ ಜೀವನದಲ್ಲೂ ಬಿರುಗಾಳಿಯೆದ್ದಿತು. ಸಮಾಜ ಅದನ್ನೂ ಆಡಿಕೊಂಡಿತು. ಸೌಜನ್ಯ, ಮಾನವೀಯತೆಯನ್ನು ಗಾಳಿಗೆ ತೂರಿದ ಹಾಸ್ಯ-ಅಪಹಾಸ್ಯಗಳು ಸೃಷ್ಟಿಯಾಗಿ ಕೋಟ್ಯಂತರ ಜನರ ಮೊಬೈಲುಗಳಿಗೆ ರವಾನೆಯಾದವು. ಒಬ್ಬ ವ್ಯಕ್ತಿ ಕುಸಿಯಲಿಕ್ಕೆ ಇನ್ನೇನು ಬೇಕು? ತಪ್ಪಿನ ಪ್ರಮಾಣ ಎಷ್ಟಿತ್ತೋ ಗೊತ್ತಿಲ್ಲ, ಆದರೆ ಶಿಕ್ಷೆಯಂತೂ ಅನಂತದಿಂದ ಗುಣಿಸಲ್ಪಟ್ಟಿತ್ತು. ಉಳಿದ ಬದುಕನ್ನು ದ್ವೇಷ, ಟೀಕೆ, ಅವಹೇಳನಗಳ ನಡುವೆಯೇ ಕಳೆಯಬೇಕಾದ ಎಲ್ಲ ಲಕ್ಷಣಗಳೂ ಗೋಚರಿಸತೊಡಗಿದವು.
ಪಾಂಡ್ಯಾ ಎನ್ನುವ ಹೋರಾಟಗಾರ ಸುಮ್ಮನೆ ಎಲ್ಲವನ್ನೂ ನೋಡಿದ. ಲಕ್ಷಾಂತರ ಕಂಠಗಳು ತನ್ನ ವಿರುದ್ಧ ಕೂಗುತ್ತಿರುವ ಘೋಷಣೆಗಳನ್ನು ಮೌನವಾಗಿ ಆಲಿಸಿ ಜೀರ್ಣಿಸಿಕೊಂಡ. ಹೊಮ್ಮುತ್ತಿರುವ ಬೈಗುಳಗಳ ಹಿನ್ನೆಲೆಯಲ್ಲಿಯೇ ಮುಖಕ್ಕೆ ಹಿಡಿದ ಕ್ಯಾಮರಾದೆದುರು ಸುಮ್ಮನೆ ಮುಗುಳ್ನಕ್ಕ. ಆತ ಅಳಲಿಲ್ಲ. ತನ್ನ ವೇದನೆ, ದುಃಖವನ್ನು ಎಲ್ಲೂ, ಯಾರೆದುರೂ ಹೇಳಲಿಲ್ಲ. ತನ್ನ ಮೇಲೆ ಎದ್ದಿರುವ ಎಲ್ಲ ಪ್ರಶ್ನೆಗಳಿಗೂ ಬದುಕು ತನಗೆ ಕೊಡುತ್ತಿರುವ ಇನ್ನೊಂದು ಅವಕಾಶದಲ್ಲೇ ಉತ್ತರಿಸಬೇಕೆಂದು ನಿರ್ಧರಿಸಿ ಮನಸ್ಸಿಟ್ಟು ಅಭ್ಯಾಸ ಮಾಡಿದ. ತುಟಿಕಚ್ಚಿ ಆಡಿದ. ತಂಡಕ್ಕೆ ತನ್ನನ್ನು ಅರ್ಪಿಸಿಕೊಂಡ. ಬದುಕೂ ಅಷ್ಟೇ ವಿಶಾಲ ಹೃದಯಿಯಾಗಿತ್ತು. ಸೋಲು-ಗೆಲುವು ಗಳು ನಿರ್ಧಾರವಾಗುವ ಫೈನಲ್ ಪಂದ್ಯದ ಕೊನೆಯ ಓವರನ್ನು ಅವನ ಕೈಗೇ ಕೊಟ್ಟಿತು. ಪಾಂಡ್ಯಾ ಎದೆಗುಂದಲಿಲ್ಲ. ಗೆಲುವಿನ ಅಂತಿಮ ಎಸೆತ ವನ್ನೂ ಎಸೆದು ಮೈದಾನದಲ್ಲಿ ಕುಸಿದು ಕುಳಿತ. ಇಷ್ಟು ದಿನ ನುಂಗಿಕೊಂಡಿದ್ದ ಕಂಬನಿಯನ್ನೆಲ್ಲ ಹೊರಹಾಕಿದ. ಅವೆಲ್ಲ ಈಗ ಪನ್ನೀರಾಗಿ ಬದಲಾಗಿದ್ದವು. ಹಾಗೆ ತುಂಬಿ ನಿಂತ ಕಣ್ಣಲ್ಲೇ ಆತ ದೇಶಕ್ಕೆ ಮರಳಿದ. ಅಲ್ಲಿ, ಇಷ್ಟುದಿನ ನಾನಾ ರೀತಿಯಲ್ಲಿ ನಿಂದಿಸಿದ್ದ ಅದೇ ಸಮಾಜವೀಗ ಅವನನ್ನು ಸ್ವಾಗತಿಸಲು ಕಾದುನಿಂತಿತ್ತು!
ತಾಳ್ಮೆಯ ದೀಪ ನಕ್ಷತ್ರದಂತೆ ಮಿನುಗಿತು…
ರಾಹುಲ್ ದ್ರಾವಿಡ್ ಅವರನ್ನು ಕ್ರಿಕೆಟ್ ಜಗತ್ತು “ಗೋಡೆ’ ಎಂದೇ ಕರೆಯುತ್ತಿತ್ತು. ಎಂಥಾ ಕುಸಿತವನ್ನಾದರೂ ತಡೆದು ನಿಲ್ಲುವ ತಾಳ್ಮೆಯ ಗೋಡೆ! ಪ್ರಮುಖ ಆಟಗಾರರು ಔಟ್ ಆಗಿ ಇನ್ನೇನು ಇಡೀ ಭಾರತ ತಂಡ ಎಂಭತ್ತೋ, ನೂರೋ ರನ್ನಿಗೆ ಆಲೌಟಾಗುತ್ತದೆ ಎಂಬಂಥ ಎಷ್ಟೋ ಕ್ಷಣಗಳಲ್ಲಿ ಆತ ನೆಲಕಚ್ಚಿ ನಿಂತು, ತಂಡವನ್ನು ಸೋಲಿನಾಳದಿಂದ ಮೇಲೆತ್ತಿ ಗೆಲುವಿನ ಹೊಸಿಲಿಗೆ ತಂದು ನಿಲ್ಲಿಸಿದ್ದರು. ಅವರದು ಹೊಡಿ ಬಡಿ ಶೈಲಿಯ ಆಟವಾಗಿರಲಿಲ್ಲ. ನಿಂತಲ್ಲೇ ನಿಶ್ಯಬ್ಧವಾಗಿಯೇ ಧನುಸ್ಸು ಮೀಟುವ ಶ್ರೀರಾಮನ ತಾಳ್ಮೆ ಅವರದಾಗಿತ್ತು. ವಿದೇಶದ, ಹೆಚ್ಚು ಪುಟಿತ ಕಾಣುವ ಸಿಡಿವೇಗದ ಬೌಲಿಂಗ್‌ನ ಕಷ್ಟಕರ ಪಿಚ್‌ಗಳಲ್ಲಿ ತಂಡಕ್ಕೆ ಬೆನ್ನೆಲುಬಾಗಿದ್ದವರೇ ಅವರು. ಸಮಯಕ್ಕೆ ತಕ್ಕ ಹಾಗೆ ಐಪಿಎಲ್‌ನಂಥ, ತನ್ನ ಶೈಲಿಗೆ ಒಗ್ಗದ ಆವೃತ್ತಿಗೂ ಹೊಂದಿಕೊಂಡು ಹಲವಾರು ಆಕ್ರಮಣಕಾರಿ ಇನ್ನಿಂಗ್ಸ್ ಗಳನ್ನು ಕಟ್ಟಿದ್ದರು. ಹತ್ತು ಸಾವಿರ ರನ್ನುಗಳೆಂಬ ಮೈಲಿಗಲ್ಲನ್ನು ಟೆಸ್ಟ್ ಹಾಗೂ ಏಕದಿನ ಎರಡರಲ್ಲೂ ದಾಟಿದ್ದರು. ನಾಯಕನಾಗಿ ಹಲವು ದಾಖಲೆಗಳನ್ನು ಮಾಡಿದ್ದರು. ತನ್ನ ಬತ್ತಳಿಕೆಯ ಕಟ್ಟಕಡೆಯ ಅಸ್ತ್ರವನ್ನೂ ತಂಡಕ್ಕಾಗಿ ಹೂಡಿಯೇ ನಿರ್ಗಮಿಸಿದರು.
ಆದರೆ ಅದೇಕೋ ಬದುಕು ಅವರ ಮೇಲೆ ಮುನಿಸಿಕೊಂಡಿತ್ತು. ಅವರ ಪ್ರಯತ್ನಕ್ಕೆ, ಆ ಕೆಚ್ಚೆದೆಗೆ ಸಿಗಬೇಕಾದ ಹೆಸರು, ಪ್ರೀತಿ ಅವರಿಗೆ ದಕ್ಕಲಿಲ್ಲ. ಅವರ ಹತ್ತು ಗೆಲುವುಗಳ ಹೆಸರನ್ನು ಒಂದು ಸೋಲು ನುಂಗಿಹಾಕಿತು. ಹೊಡಿಬಡಿ ಆಟದ ಮೆರುಗಿನ ನಡುವೆ, ಅವರ ತಾಳ್ಮೆಯ ದೀಪಗಳು ಅಷ್ಟಾಗಿ ಹೊಳೆಯದಾದವು. ಕೊನೆಗೆ 2007ರ ವಿಶ್ವಕಪ್ ಸೋಲಿನ ಕಪ್ಪು ಚುಕ್ಕೆಯೊಂದೇ ಎಲ್ಲವನ್ನೂ ಮೀರಿ ಕಾಣುತ್ತಿರುವ ದುರಾದೃಷ್ಟಕರ ಬಿಂದುವಾಗಿ ಉಳಿದುಹೋಯಿತು.
ದ್ರಾವಿಡ್ ಸೋಲೊಪ್ಪಲಿಲ್ಲ. ಕೆಲಸವಷ್ಟೇ ತನ್ನದು, ಹೆಸರು-ಖ್ಯಾತಿಗಳ ಹಂಗು ತನಗಿಲ್ಲವೆಂಬಂತೆ ಎಲ್ಲವೂ ಮುಗಿದ ಮೇಲೂ ಕಾಯಕದಲ್ಲಿ ತೊಡಗಿಕೊಂಡರು. ಭಾರತದ ಯುವ ತಂಡವನ್ನು ಮುನ್ನಡೆಸಿ ಗೆಲುವಿನ ಹೊಸಿಲು ದಾಟಿಸಿದರು. ಕೊನೆಗೆ ಮುಖ್ಯ ತಂಡಕ್ಕೆ ಕೋಚ್ ಆದರು. ಅವರ ಮಾರ್ಗದರ್ಶನದಲ್ಲಿ ತಂಡ ಹಲವಾರು ಸರಣಿಗಳನ್ನು ಗೆದ್ದಿತು. ಟೆÓr… ಚಾಂಪಿಯನ್‌ಶಿಪ್‌ನ ಫೈನಲ್ ಪ್ರವೇಶಿಸಿತು. ಏಕದಿನ ವಿಶ್ವಕಪ್‌ನಲ್ಲಿ ಎಲ್ಲರನ್ನೂ ಮಣಿಸಿ ಫೈನಲ್ ಪ್ರವೇಶಿಸಿತು. ಆದರೆ ಎರಡನ್ನೂ ಸೋತುಬಿಟ್ಟಿತು. ಇಲ್ಲಿಗೆ ಎಲ್ಲವೂ ಮುಗಿದೇ ಹೋಯಿತೆನ್ನುವಂಥ ಹತಾಶೆ. ಅದೃಷ್ಟವೊಂದು ಇಲ್ಲದೇ ಹೋದರೆ ಎಂಥ ಪ್ರಯತ್ನಗಳಿಗೂ ಬೆಲೆಯೇ ಇಲ್ಲ ಎನ್ನುವಂಥ ನಿರಾಸೆ.
ಈಗ ದ್ರಾವಿಡ್‌ರ ಕೈಯಲ್ಲಿ ಉಳಿದಿದ್ದು ಕಟ್ಟಕಡೆಯ ಅವಕಾಶ. ಅದು ಟಿ 20 ವಿಶ್ವಕಪ್! ದ್ರಾವಿಡ್ ಕಂಗೆಡಲಿಲ್ಲ. ಹಳೆಯ ತಪ್ಪುಗಳ ವಿಶ್ಲೇಷಣೆ ಮಾಡುತ್ತ ಮತ್ತೆ ರಂಗಕ್ಕಿಳಿದರು. ತಮ್ಮ ಅನುಭವವನ್ನು ತಂಡಕ್ಕೆ ಧಾರೆಯೆರೆದರು. ಪರಿಣಾಮ; ಭಾರತ ತಂಡ ಫೈನಲ್ ತಲುಪಿತು. ಆದರೆ ಅಲ್ಲೂ ಮತ್ತದೇ ಸೋಲಿನ ನೆರಳು ಅವರನ್ನು ಹಿಂಬಾಲಿಸುವ ಲಕ್ಷಣಗಳು ಗೋಚರವಾಗತೊಡಗಿದವು. ದಕ್ಷಿಣ ಆಫ್ರಿಕಾ ಗೆಲುವಿನ ಹೊಸಿಲಿಗೆ ಬಂದು ನಿಂತಿತು. ದ್ರಾವಿಡ್ ಎನ್ನುವ ದ್ರೋಣಾಚಾರ್ಯರ ಬದುಕಿನ ಕಟ್ಟಕಡೆಯ ವಿದಾಯವೂ ಸೋಲಿನ ಮೂಲಕವೇ ಆಗಲಿದೆ ಎಂಬಂತಾಯಿತು.
ಆದರೆ ಅವರ ಶಿಷ್ಯರು ಕೈಚೆಲ್ಲಲಿಲ್ಲ. ಕೊನೆಯ ಐದು ಓವರ್‌ಗಳಲ್ಲಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ವಿಜಯ ದೇವತೆಗೂ ಅಚ್ಚರಿಯಾಗುವಂತೆ ಆಡಿ ಗೆಲುವಿನ ಹೊಸಿಲು ದಾಟಿಯೇಬಿಟ್ಟರು. ಆ ಮೂಲಕ ತಮ್ಮ ಕೋಚ್ ದ್ರಾವಿಡ್‌ಗೆ ಮರೆಯಲಾಗದ ಕಾಣಿಕೆ ಕೊಟ್ಟರು. ಅವರ ಕೊಡುಗೆಯನ್ನು ಸ್ಮರಿಸಿ, ಅಪ್ಪಿಕೊಂಡು ಆನಂದಬಾಷ್ಪ ಸುರಿಸಿದರು. ಇತ್ತ, ಹಿಂದೊಮ್ಮೆ ಅವರನ್ನು ಆಡಿಕೊಂಡಿದ್ದ ಜನರೇ ಈಗ ಅಭಿಮಾನದ ಹೂಮಳೆ ಸುರಿಸಿದರು.
ಸೋಲೇ ಗೆಲುವೆಂದು ಅರಿತಾದ ಮೇಲೆ…
ರಾಹುಲ್ ಗಾಂಧಿ ಭಾರತದ ರಾಜಕೀಯವನ್ನು ಪ್ರವೇಶಿಸಿದ ಹೊತ್ತಿಗೆ ಅವರ ಗೆಲುವು ನಿಚ್ಚಳವೆಂದೇ ಹಲವರು ಭಾವಿಸಿದ್ದರು. ಆದರೆ ನಂತರ ನಡೆದಿದ್ದೇ ಬೇರೆ. ಮುಂದಿನ ಎರಡು ಚುನಾವಣೆಗಳಲ್ಲಿ ರಾಹುಲ್ ಹೀನಾಯ ಸೋಲು ಕಂಡರು. ಅದರಲ್ಲೂ 2019ರ ಚುನಾವಣೆ ಮುಗಿಯುವ ಹೊತ್ತಿಗೆ ದೇಶದಲ್ಲಿ ಕಾಂಗ್ರೆಸ್ಸಿಗೆ ಭವಿಷ್ಯವೇ ಇಲ್ಲ ಎನ್ನುವಂಥ ಸೋಲು ಅವರನ್ನು ಆಪೋಶನ ತೆಗೆದುಕೊಂಡಿತು. ಒಬ್ಬ ನಾಯಕನಾಗಿ ಜನ ಒಪ್ಪಿಕೊಳ್ಳಲಾಗದಂಥ ಇಮೇಜ್ ಅವರನ್ನು ಆವರಿಸಿಕೊಂಡಿತು. ವಿರೋಧ ಪಕ್ಷದ ನಾಯಕನ ಸ್ಥಾನವೂ ಕೈತಪ್ಪಿತ್ತು. ದೇಶದ ಜನರ ಕಣ್ಣಲ್ಲಿ ತಾನೆಂದೂ ನಾಯಕನಾಗಿ ಪ್ರತಿಷ್ಠಾಪನೆಯಾಗಲಾರೆ ಎಂಬಂಥ ಸೋಲದು. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಅಮೇಠಿಯಲ್ಲೇ ಅವರು ಸೋತಿದ್ದರು.
ಆದರೆ ರಾಹುಲ್ ಧೃತಿಗೆಡಲಿಲ್ಲ. ಪ್ರಯತ್ನಗಳನ್ನು ಕೈಬಿಡಲಿಲ್ಲ. 5 ವರ್ಷಗಳ ಕಾಲ ತಮ್ಮ ಉಳಿವು ಹಾಗೂ ಬೆಳವಣಿಗೆಗೆ ಬೇಕಾದ್ದನ್ನೆಲ್ಲ ಮಾಡಿದರು. ತಂತ್ರಗಳನ್ನು ಹೆಣೆದರು. ದೇಶದ ಉದ್ದಗಲಕ್ಕೂ ನಡೆದರು. ತನ್ನ ಕುರಿತಾದ ನಂಬಿಕೆಗಳ ಬದಲಾವಣೆಗೆ ಶ್ರಮಿಸಿದರು. ದೇಶದ ಪ್ರಜೆಗಳ ನಾಡಿಮಿಡಿತವನ್ನೂ, ಗೆಲುವಿಗೆ ಬೇಕಾದ ಸೂಕ್ಷ್ಮಅಂಶಗಳನ್ನೂ ಅರ್ಥಮಾಡಿಕೊಂಡರು. ಪ್ರತಿತಂತ್ರಗಳನ್ನು ಹೂಡಿದರು. “ಆಜ್ ಕೀ ಬಾರ್, ಚಾರ್ ಸೋ ಪಾರ್’ ಎಂಬ ಎದುರಾಳಿಯ ಆತ್ಮವಿಶ್ವಾಸದ ಘೋಷಣೆಗಳ ನಡುವೆಯೇ ದಿಟ್ಟ ಹೆಜ್ಜೆಯಿಟ್ಟರು. ಕಳೆದ ಸಲ ಕಳೆದುಕೊಂಡ ಹಲವನ್ನು ಮರಳಿ ಪಡೆದರು. ಕೊನೆಗೂ ವಿರೋಧ ಪಕ್ಷದ ನಾಯಕನಾಗಿ ಮುಗುಳ್ನಗೆ ಸೂಸಿದರು.
-ದಿನಮಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.