ಕತೆ: ಕೆಪ್ಪು ಜೋಗ
Team Udayavani, Nov 18, 2018, 6:00 AM IST
ಎಲ್ಲದಕ್ಕೂ ಹೇಳಿಸಿಕೊಂಡು ಹೇಳಿಸಿಕೊಂಡು ಮನಸ್ಸು ಜಡ್ಡುಗಟ್ಟಿದಂತಾಗಿತ್ತು ಗಣೇಶನಿಗೆ. ಎಷ್ಟು ಹೇಳಿದರೂ ಹೇಳಿಸಿಕೊಳ್ಳಬೇಕು, ಏನು ಹೇಳಿದರೂ ಹೇಳಿಸಿಕೊಳ್ಳಬೇಕು, ಏನು ಮಾಡಿದರೂ ಅದರಲ್ಲಿ ಏನಾದರೂ ಒಂದು ಹುಡುಕಿ ಬೈಯುತ್ತಾರೆ. ಗಿರಾಕಿ ಬಂದು ತಿಂಡಿ ತಿಂದು ಚಾ ಆರ್ಡರ್ ಮಾಡಿದ್ದಾರೆ, ಅದೂ ಆಗಲಿ ಪ್ಲೇಟು, ಲೋಟ ಎಲ್ಲ ಒಟ್ಟಿಗೇ ತೆಗೆದರಾಯಿತು ಎಂದು ಸ್ವಲ್ಪ ತಡೆದರೆ, “”ಏ ಕತ್ತ್ಮೊಕದವನೆ, ಆ ಟೇಬಲ್ ಕ್ಲೀನ್ ಮಾಡ್ಬೇಕು ಎಂದು ಗೊತ್ತಾಗುವುದಿಲ್ಲವಾ?” ಮ್ಯಾನೇಜರನ ಆರ್ಭಟ. ಉತ್ತರ ಕೊಟ್ಟರೆ ಮತ್ತಿಷ್ಟು. ಕೊನೆಗೆ, “”ಬಿಟ್ಟು ಹೋಗು, ಲೆಕ್ಕಾಚಾರ ಮಾಡ್ತೆ”
ಅಲ್ಲದಿದ್ದರೆ, ಹತ್ತು ಗಂಟೆಯಾಗಿದೆ. ಬೆಳಿಗ್ಗೆ ಎದ್ದು ಬಂದಾಗ ಕುಡಿದ ಒಂದು ಕಪ್ ಚಾ ಬಿಟ್ಟರೆ ಹೊಟ್ಟೆಗೆ ಏನೂ ಬಿದ್ದಿಲ್ಲ. ವಡೆ, ಬೋಂಡ ಎಲ್ಲಾ ಗೋಪುರವಾಗಿ ಕನ್ನಡಿ ಕಪಾಟಿನಲ್ಲಿ ನಗುತ್ತಿವೆ. ಎಲ್ಲಾದರೂ ಒಂದು ತೆಗೆದು ಬಾಯಿಗೆ ಒಗೆಯುವಾ ನೋಡಿದರೆ ಮ್ಯಾನೇಜರರ ಹದ್ದಿನ ಕಣ್ಣು. ಜೊತೆಗೆ ಸಪ್ಲಾಯರರ ಕಣ್ಣು. ಅವರಿಗೂ ಬೈಸಿಕೊಳ್ಳುವುದೇನು ತಪ್ಪಿದ್ದಲ್ಲ. ಆದರೆ, ಟೈಪು ಸ್ವಲ್ಪ ಬೇರೆ. ಆದರೂ ಅವರಿಗೆ ತಾನು ಸಪ್ಲಾಯರ್ ಎನ್ನುವ ಒಂದು ಸಣ್ಣ ಸೊಕ್ಕು! ಒಂದಿನ ಒಬ್ಬ ಕ್ಲೀನ್ ಮಾಡುವವನ ಮೇಲೆ ಹೀಗೇ ಹೇಳಿಲ್ಲವೇ, “ನೋಡಿ ಅವನು ಸರಿಯಾಗಿ ಒರೆಸುವುದಿಲ್ಲ, ಅಲ್ಲಲ್ಲಿ ಹಾಗೇ ಇರುತ್ತದೆ. ಗಿರಾಕಿಗಳು ಬಂದಾಗ ಕೇಳುವುದು ನಮ್ಮನ್ನು….’ ಎಂದು.
ಅದೇ ದಿನ ಸಂಜೆ ಅವನು ಕೈಚೀಲ ಹಿಡಿದುಕೊಂಡು ಹೊರಡಬೇಕಾಯಿತು. ಈಗ ಇಲ್ಲೇ ಹತ್ತಿರದ ಹೊಟೇಲು ಸೇರಿದ್ದಾನಂತೆ. ಗಣೇಶನಿಗೆ ರಾಶಿ ಅಲ್ಲದಿದ್ದರೂ ಸುಮಾರು ದೋಸ್ತಿಯಾಗಿತ್ತು. ಇಬ್ಬರೂ ಸಣ್ಣ ಬಕೇಟು, ತುಂಡು ಹಿಡದು ಬೆಳಿಗ್ಗೆ ಸುರು ಮಾಡುತ್ತಿದ್ದವರಲ್ಲವೆ? ನಂತರ ರಾತ್ರಿ ಊಟ ಮಾಡಿ ಮಲಗುವುದೂ ಒಂದೇ ಬದಿಗೇ, ಕರಿಕರಿಯಾದ ಕಮಟು ಹಿಡಿದ ಕಿಚನ್ ರೂಮಿನಲ್ಲಿ. ಗೋಣಿ ಚೀಲ, ಚಾಪೆ, ಚಾದರ. ಗಣೇಶನಿಗೆ ಊರಲ್ಲಿ ಹಾಗೆ ಸುಮಾರು ಇದ್ದರೂ ಅವನು ಕಳೆದದ್ದು ಹೀಗೇ. ಎಲ್ಲಾ ಲೇಪು ಹಾಕಿಕೊಂಡರೂ ಅವನು ಮಾತ್ರ ಕಂಬಳಿ ಮೇಲೇ ಮಲಗುತ್ತಿದ್ದ. ಮುಂದೆ ಇಂಥ ಪರಿಸ್ಥಿತಿ ಬಂದರೆ ಎದುರಿಸುವುದು ಸುಲಭವಾಗಲಿ ಎಂಬ ಸಣ್ಣ ಯೋಚನೆ ಇದ್ದಂಗೆ ಇತ್ತು. ಒಮ್ಮೆ ಹಾಗೇ ಆಯಿತು, ಹತ್ತಿರದ ಜಾತ್ರೆ ಮುಗಿಸಿಕೊಂಡು ರಾತ್ರಿ ಅಲ್ಲೇ ಹತ್ತಿರವಿದ್ದ ಒಬ್ಬರ ಮನೆಗೆ ಗಣೇಶನ ಚಿಕ್ಕಪ್ಪ, ಅವನು, ಚಿಕ್ಕಪ್ಪನ ಮಗ ಹೋಗಿದ್ದರು. ರಾತ್ರಿ ಊಟಗೀಟ ಎಲ್ಲಾ ಮುಗಿದ ಮೇಲೆ ಅವರು ಕವಳ ಹಾಕಿ ಸುದ್ದಿ ಹೇಳಲು ಸುರು ಮಾಡಿದರು. ನಮ್ಮ ಹತ್ತಿರ, “”ಮಕ್ಕಳೆ ನಿಂಗೊಕ್ಕೆ ವರ್ಕ ಬತ್ತನೊ, ತಡೀರಿ ಹಾಸಿಗೆ ಬಿಚ್c ಕೊಡ್ತೆ” ಎಂದರು. ಕೋಣೆಗೆ ಹೋಗಿ ಹಾಸಿಗೆ ಸಾಮಗ್ರಿ ತಂದರು. ಕಂಬಳಿ, ಚಾದರ, ಲೋಡು. ಗಣೇಶ ಬಿದ್ದುಕೊಂಡ. ಚಿಕ್ಕಪ್ಪನ ಮಗ, “”ನನಗೆ ಇದು ಆಗ್ತಿದೆ” ಎಂದು ಹಠ ಹಿಡಿದ. ಅವನ ಸಂಭಾಳಿಸಲು ನೋಡಿದರು. ಆದರೆ, ಅವನು ಕೇಳಲಿಲ್ಲ. ಕಡೆಗೆ ಅವರು ಪಾಪ, ಆಚೆ ಮನೆಗೆಲ್ಲೋ ಹೋಗಿ ಲೇಪು ತಂದರು. ಹೀಗಾಗಿ, ಅವನಿಗೆ ಇದು ರಾಶಿ ಕಷ್ಟ ಎನಿಸಲಿಲ್ಲ. ಕೆಲವು ಅಭ್ಯಾಸವಿದೆ, ಕೆಲವು ಕಲ್ಪಿಸಿ ಅನುಭವಿಸಿದ್ದಾನೆ!
ಒಂದೊಂದು ದಿವಸ ಅವನ ಕ್ಲೀನಿಂಗ್ ಗೆಳೆಯ, “”ಇವತ್ತು ಸೆಕೆಂಡ್ ಶೋ ಸಿನೆಮಾಕ್ಕೆ ಹೋಗೊÌ” ಹೇಳುತ್ತಿದ್ದ. ಆಗ ಗಣೇಶನಿಗೆ ಖುಷಿಯೋ ಖುಷಿ! ಮಧ್ಯಾಹ್ನದಿಂದಲೇ ಸಿನೆಮಾ ಕುಣಿಯಲು ಸುರುವಾಗುತ್ತಿತ್ತು. ಒಂದು ರೀತಿಯಲ್ಲಿ ಇಲ್ಲಿಗೆ ಬಂದಿದ್ದು ಸಾರ್ಥಕವಾಯಿತು ಎಂದು ಅನಿಸುವುದು ಇಂಥ ಸಮಯದಲ್ಲಿ ಮಾತ್ರ. ಊರಲ್ಲಿದ್ದಾಗ ಸಿನೆಮಾಕ್ಕೆ ಬಂದಿದ್ದಿದೆ. ವರ್ಷದಲ್ಲಿ ಒಂದು ಸಲ, ತಪ್ಪಿದರೆ ಎರಡು ಸಲ ಪೇಟೆಗೆ ಬರುವುದು. ಆ ದಿನವೇ ಸರ್ಕಸ್ ಇದ್ದರೆ ಸರ್ಕಸ್ಸು, ನಾಟಕ, ಸಿನೆಮಾ ನೋಡುವುದು. ಮಾರನೆಯ ದಿನ ಲಾಂಚ್ ಹತ್ತಿ ವಾಪಸ್. ನಂತರ ವರ್ಷಗಟ್ಟಲೆ ದೋಸ್ತರ ಹತ್ತಿರ ಸಿನೆಮಾದ ಕತೆ ಹೇಳುವುದು. ಅವರಲ್ಲಿ ಅನೇಕರು ಒಂದೂ ನೋಡದವರು ಇದ್ದರು. ಹೀಗಾಗಿ, ಸಿನೆಮಾಕ್ಕೆ ಹೋಗಲು ನಿರ್ಧರಿಸಿದ್ದು ಖುಷಿಯಾಗಿತ್ತು. ಸರಿ, ರಾತ್ರೆ ಇಬ್ಬರೂ ಜಲ್ದಿ ಜಲ್ದಿ ಎಲ್ಲ ಮುಗಿಸಿ ಮ್ಯಾನೇಜರರ ಹತ್ತಿರ ನಡುಗುವ ಸಣ್ಣ ದನಿಯಲ್ಲಿ ಕೇಳಿದಾಗ, “ಹು`ಂ…’ ಎಂದು ಗಡತರ ದನಿಯಲ್ಲಿ ಹೇಳಿ ಇಪ್ಪತ್ತು ರೂಪಾಯಿಯೇನೊ ತೆಗೆದು ಕೊಡುತ್ತಿದ್ದರು. ಹೆಚ್ಚಾಗಿ ಟಾಕೀಸಿಗೆ ಹೋಗುವಲ್ಲಿಯವರೆಗೆ ಸಿನೆಮಾ ಸುರುವಾಗಿರುತ್ತಿತ್ತು. ಎರಡು ಟಿಕೆಟ್ ತೆಗೆದುಕೊಂಡು ಮುಂದೆ ಹೋಗಿ ಕುಳಿತುಕೊಳ್ಳುವುದು. ಮಧ್ಯ ವಿರಾಮಕ್ಕೆ ಬಿಟ್ಟಾಗ ಗೆಳೆಯ ಹೋಗಿ ಶೇಂಗಾ ಕೊಟ್ಟೆ ತರುತ್ತಿದ್ದ. ಅದನ್ನು ತಿನ್ನುತ್ತ ನೋಡುವುದು. ಎರಡು-ಮೂರು ತಾಸು ಎಲ್ಲಿದ್ದೇವೆ ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಮುಗಿದ ಮೇಲೆ ಗೆಳೆಯನೇ ಗಣೇಶನ ಕೈ ಹಿಡಿದುಕೊಂಡು ಕರೆದುಕೊಂಡು ಬರುವುದು. ಗಣೇಶನಿಗೆ ಪೇಟೆಯಲ್ಲಿ, ಅದೂ ರಾತ್ರಿಯಲ್ಲಿ ಎಲ್ಲಿ ಹೋಗುತ್ತಿದ್ದೇನೆ, ಹೇಗೆ ಹೋಗುತ್ತಿದ್ದೇನೆ ಎನ್ನುವುದು ಅಂತ ಪಾರೇ ಹರಿಯುವುದಿಲ್ಲ. ಮಂಕಾದ ರಸ್ತೆ ದೀಪದಲ್ಲಿ ಬರುವಾಗ ಕನಸಲ್ಲಿ ಬರುತ್ತಿರುವ ಹಾಗೆ ಆಗುತ್ತಿತ್ತು. ಮನಸಿನಲ್ಲಿ ಇನ್ನೂ ಸಿನೆಮಾ ಮುಗಿಯುತ್ತಿರಲಿಲ್ಲ!
ನಂತರ ಹೊಟೇಲಿಗೆ ಹೋಗಿ ಕಿಟಕಿ ಗಂಡಿಯಲ್ಲಿ, “ರಾಮಣ್ಣ ರಾಮಣ್ಣ’ ಎಂದು ಪಿಸು ದನಿಯಲ್ಲಿ ಅಡಿಗೆಯವನನ್ನು ಎಬ್ಬಿಸುವುದು. ಅವನು ಸುಮಾರು ಹೊತ್ತಾದ ಮೇಲೆ, “”ಸಾಯರೊ ನೀವು, ನಿದ್ರೆ ಹಾಳ್ ಮಾಡ್ತೀರಿ” ಎಂದು ಗೊಣಗುತ್ತ ಟರ್‌ನೆ ಷಟರ್ ಅರ್ಧ ಎಳೆದು ಒಳಗೆ ಕರೆದುಕೊಳ್ಳುತ್ತಿದ್ದ. ಹೋಗಿ ಬಿದ್ದುಕೊಳ್ಳುವುದೊಂದೇ ಗೊತ್ತಿರುತ್ತಿತ್ತು. ಬೆಳಿಗ್ಗೆ ಮ್ಯಾನೇಜರ್ ಒದ್ದಾಗಲೇ ಎಚ್ಚರಾಗುವುದು! “”ಏಳರೊ ಏಳರೊ ಬಡ್ಡಿಮಕ್ಕಳಾ, ಇಲ್ಲೆಂಥ ಮಜಾ ಹೊಡೆಯಲು ಬಂದದ್ದಾ, ಟೇಬಲ್ಲು ಖುರ್ಚಿ ಹಾಕಿ ಬಿರಬಿರಿನೆ…” ಆಗ ಗಡಬಡಿಸಿ ಎದ್ದು, ನಮ್ಮ ಕನಸನ್ನೂ ಹಾಸಿಗೆ ಪಿಂಡಿಯನ್ನು ಕಟ್ಟಿ ಮೂಲೆಗೆ ಒಗೆದು ರೆಡಿಯಾಗುವುದು. ಅವರಿಗೆ ಈಗೀಗ ಪದಗಳು ಪದಗಳಾಗಿ ಉಳಿದಿಲ್ಲ. ಹೊಳೆಯಲ್ಲಿ ಮಳೆ ಹೊಯ್ದಂತೆ. ಹೀಗೇ ತಿಳಿಯದಿದ್ದರೆ ಒಂದು ಕ್ಷಣವೂ ಇಲ್ಲಿರಲು ಆಗುವುದಿಲ್ಲ.
ಗಣೇಶನ ಊರಲ್ಲಿ ಮಳೆಗಾಲದ ವೇಳೆ ಎದುರು ಕಾಣುವ ಗುಡ್ಡವೊಂದರಲ್ಲಿ ಇರುವ ಜಲಪಾತವೊಂದು ಕಾಣುತ್ತಿತ್ತು. ಅದನ್ನು ಕೆಪ್ ಜೋಗ ಎಂದು ಕರೆಯುತ್ತಿದ್ದರು. ಅದಕ್ಕಿಂತ ಹಿಂದೆ ಜಗತ್‌ಪ್ರಸಿದ್ಧವಾದ ಜೋಗ ಜಲಪಾತವಿದೆ. ಅಲ್ಲಿ ಬೀಳುವ ಶಬ್ದದ ಎದುರು ಈ ಜಲಪಾತದ ಶಬ್ದವೇ ಕೇಳುವುದಿಲ್ಲ. ಜೊತೆಗೆ, ಅವನ ಊರಿನಿಂದ ಸುಮಾರು ದೂರದಲ್ಲಿ ಇತ್ತು. ಬಹುಶಃ ಅದಕ್ಕಾಗಿಯೇ ಇದನ್ನು “ಕೆಪ್ಪು’ ಎಂದು ಹೇಳಿರಬಹುದು. ಒಮ್ಮೊಮ್ಮೆ ಗಣೇಶನಿಗೆ ತಾನೂ ಹಾಗೇ ಎಂದು ಅನಿಸುತ್ತಿತ್ತು.
ಅಂಥ ಸಹೋದ್ಯೋಗಿ ಈಗ ಬೇರೆ ಹೊಟೇಲಿನಲ್ಲಿ ಇದ್ದಾನಂತೆ. ಗಣೇಶನಿಗೆ ಹೀಗೇ ಹೋಗಿ ಮಾತಾಡಿಸಿಕೊಂಡು ಬರೋಣವೆಂದರೂ ಆಗುತ್ತಿಲ್ಲ. ಯಾವಾಗ ಹೋಗುವುದು? ಇಡೀ ದಿನವೇನು ರಷ್ ಇರುವುದಿಲ್ಲ. ಅದರೂ ಹೋಗಲು ಬಿಡುವುದಿಲ್ಲ. ಇನ್ನು ರಾತ್ರಿ, ಊಟ ಮಾಡಿ ಟೇಬಲ್ ಮೇಲೆ ಕುರ್ಚಿ ಇಟ್ಟು, ಸೋಪ್ ನೀರು ಹಾಕಿ ತೊಳೆದು, ಒರೆಸಿ ಹೋಗುವಾಗ ಒಂಬತ್ತು-ಹತ್ತು ಗಂಟೆ ಯಾಗುತ್ತದೆ. ಜೊತೆಗೆ, ಬಿದ್ದುಕೊಂಡರೆ ಸಾಕು ಕಾಣುತ್ತದೆ. ಹೀಗಾಗಿ, ಗಣೇಶನಿಗೆ ದಿನದಿಂದ ದಿನಕ್ಕೆ ಆ ಗೆಳೆಯನ ನೆನಪು ಬಳಸುತ್ತಿರುವ ಸಾಬೂನುವಿನ ಹಾಗೆ ಕರಗುತ್ತಿದೆ !
ಎಲ್ಲ ಬಿಟ್ಟು ಹೋಗೋಣವೆಂದರೆ ಎಲ್ಲಿಗೆ ಹೋಗುವುದು? ಅವನಿಗೂ ಒಂದು ಊರಿತ್ತು, ಮನೆಯಿತ್ತು. ಆದರೆ, ಅಲ್ಲಿ ಚಿಕ್ಕಪ್ಪನಿದ್ದ. ಅಲ್ಲಿಯ ಗಣೇಶನ ಪರಿಸ್ಥಿತಿ ರಾಶಿ ಬೇರೆಯೇನೂ ಇರಲಿಲ್ಲ. ಅವನು ಬುದ್ಧಿ ಬರುವುದರ ಮೊದಲೇ ಅಪ್ಪ-ಅಮ್ಮನನ್ನು ಕಳೆದುಕೊಂಡವ. ಆದರೂ ಅಂಥ ಅನಾಥ ಭಾವವೇನೂ ಅವನಿಗೆ ಉಂಟಾಗಲಿಲ್ಲ. ಚಿಕ್ಕಮ್ಮ ಅವರ ಮಕ್ಕಳು ಅವನನ್ನು ಬೇರೆಯಾಗೇನೂ ನೋಡಲಿಲ್ಲ. ಎಲ್ಲರ ಜೊತೆಗೆ ಪಾಟಿಚೀಲ, ಪಟ್ಟಿ, ಪುಸ್ತಕವೆಲ್ಲ ತರುತ್ತಿದ್ದರು. ಆದರೆ, ಕಲಿಯಲು ಅಷ್ಟು ಹುಷಾರ್ ಇರಲಿಲ್ಲ. ಹಾಗೂಹೀಗೂ ಪಾಸಾಗುತ್ತಿದ್ದ. ಅದೆಲ್ಲಕ್ಕಿಂತ ಚಿಕ್ಕಪ್ಪನ ಭಯ. ಅವನು ಅನೇಕ ಹಾಟಾವಳಿಗಳನ್ನು ಹಚ್ಚಿಕೊಂಡವ. ರಾಜಕೀಯ, ಯಕ್ಷಗಾನ ಇತ್ಯಾದಿ. ಯಾವಾಗಲೂ ಮೈ ಉರಿವ ಕೋಪದಲ್ಲಿ ಮನೆಗೆ ಬರುವುದು. ಆಗ ಅವನ ಕಣ್ಣು, ಮುಖವೆಲ್ಲ ನೋಡಿದರೇ ಸುಟ್ಟು ಬೂದಿ ಮಾಡುವ ಹಾಗೆ ಕಾಣುತ್ತಿತ್ತು! ಬರುವಾಗ ದಾರಿಯಲ್ಲಿ ನಾಲ್ಕಾರು ಅಡಿಕೆ, ಗೇರುಬೀಜ ಏನಾದರೂ ಬಿದ್ದದ್ದು ಕಣ್ಣಿಗೆ ಬಿದ್ದರೆ ಸಾಕು, “”ಖಾಸಾ ಬದ್ರದವರು, ತೋಟಕ್ಕೆ ಹೋಗಿ ಅಡಿಕೆ ಸೋಗೆ ಹೆಕ್ಕಲು ಆಗುವುದಿಲ್ಲ. ಆ ಕಮಿ¤ರ ಮಕ್ಕಳ ನೋಡಿ ಕಲೀರಿ, ಬೆಳಗಾದ ಕೂಡಲೇ ಅಂಗಡಿಗೆ ಬಂದು ಕುಳಿತುಕೊಳ್ಳುತ್ತಾರೆ. ನಮ್ಮನೆಯಲ್ಲೂ ಇದ್ದಾರೆ ದಂಡಪಿಂಡದವರು” ಎನ್ನುತ್ತಿದ್ದ. ಅದಾವುದೂ ಸಿಗದಿದ್ದರೆ, “”ಕನ್ಯ ಎಂಥ ಮಾಡª? ನಾರಣ ಕೊಡಿಬಳ್ಳಿ ಕಟ್ಟಿದನಾ? ನಿಂಗೋಕ್ಕೆ ಎಂಥ ಗುತ್ತಿರ್ತು, ತೋಟಕ್ಕೆ ಹೋದರೆ ಅಲ್ದಾ ಗುತ್ತಾಪ್ದು, ಮನೇಲಿ ಕೂತ್ಕಂಡು ರೇಡಿಯೋ ಕೇಳುವುದು, ಮೂರು ಗುಟ್ಟ ಹಿಡಿದು ಕ್ರಿಕೇಟ್ ಆಡಲು ಹೋಪ್ದು. ಅದರಲ್ಲಾದರೂ ಏನಾದರೂ ಸಾಧನೆ ಮಾಡುವವರಾ” ಹೀಗೇ ಮುಂದುವರಿಯುತ್ತದೆ.
ಮತ್ತೂಮ್ಮೆ ಚಿಕ್ಕಮ್ಮ ಚಿಕ್ಕಪ್ಪ ಪೇಟೆಯಿಂದ ಬಂದ ಟೈಮ್‌ನಲ್ಲಿ “”ಕುಡುಲೆ ಎಂಥ ಕೊಡಲಿ?” (ಕುಡಿಯಲು ಏನು ಕೊಡಲಿ?)ಎಂದು ಕೇಳಿದಾಗ, “”ಸರಾಯಿ ಕೊಡ್ತಯಾ… ಸಾಕಾಗಿ ಬಂದಾಗ ಕೇಳುವ ಪದ್ಧತಿಯಾ ಇದು” ಎಂದು ದಬಾಯಿಸಿದ್ದ. ನಂತರ ಅವಳು ಹೀಗೇ ಬಂದಾಗ ಹೇಗೆ, ಏನು ಕೇಳಬೇಕೆಂದು ಗೊತ್ತಾಗದೇ ಸುಮ್ಮನಾಗಿದ್ದಾಗ, “”ಮನೆಗೆ ಬಂದವನಿಗೆ ಆಸರಿಗೆ ಬೇಕೊ” ಎಂದು ಕೇಳುವ ಬುದ್ಧೀನೂ ಇಲ್ಲ ಎಂದೂ ಹೇಳಿದ್ದ.
ಚಿಕ್ಕಪ್ಪ ನಗುವುದು, ಹಗುರಾಗುವುದು ಅವನ ದೋಸ್ತರು ಬಂದಾಗ ಮಾತ್ರ. ಅಲ್ಲಿಯೂ ಕೆಲವು ಸಲ, ಅವರ ಎದುರಿಗೇ ಮಕ್ಕಳ ಮಾನ ತೆಗೆಯುತ್ತಿದ್ದ. ಹೀಗಾಗಿ, ಮಾತನಾಡದಿರುವುದು, ಹೇಳಿದ್ದು ಕೇಳಿ ಸುಮ್ಮನಿರುವುದು ಗಣೇಶನಿಗೆ ಮಾತ್ರವಲ್ಲ, ಆ ಮನೆಯ ಎಲ್ಲರಿಗೆ ಮೈಗೊಂಡು ಹೋಗಿತ್ತು. ಅದು ಈಗ ಅವನ ಜೀವನದಲ್ಲಿ ಈ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಊಹಿಸಿರಲಿಲ್ಲ. ಆದರೂ ಆಗಾಗ, ನನ್ನ ಇಡೀ ಜೀವನವೂ ಇದೇ ಕತೆಯಾಯಿತೇ ಎಂಬ ಬೇಜಾರೂ ಆಗುತ್ತಿತ್ತು.
ಇಲ್ಲ ಇಲ್ಲ, ಇದರಿಂದ ಬಿಡಿಸಿಕೊಳ್ಳಬೇಕು, ಮುರುಟಿ ಮುರುಟಿ ನಿಶ್ಚೇಷ್ಟಿತನಾಗುವುದರ ಮೊದಲು ಇದರಿಂದ ತಪ್ಪಿಸಿಕೊಳ್ಳಬೇಕು ಎಂದು ಒಂದು ದಿನ ಬೆಳಿಗ್ಗೆ ಗಟ್ಟಿ ಮನಸು ಮಾಡಿ, ಯಾವುದೋ ಬಸ್ಸು ಹಿಡಿದು ಇಲ್ಲಿಗೆ ಬಂದ. ಬಸ್‌ಸ್ಟ್ಯಾಂಡಲ್ಲಿ ಇಳಿದು ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದೇ ಆಚೆ ಈಚೆ ಮಿಕಮಿಕ ನೋಡುತ್ತಿದ್ದಾಗ, ಎದುರು ಹೊಟೇಲ್ ಸವಿತಾ ಎಂಬ ಬೋರ್ಡ್ ಕಾಣಿಸಿತು. ಅಷ್ಟೇನೂ ದೊಡ್ಡ ಹೊಟೇಲ್ ಅಲ್ಲ. ಒಳಗೆ ಹೋಗಿ, ಏನು ಕೇಳಬೇಕು ಗೊತ್ತಾಗದೇ ಪೆಕರುಪೆಕರಾಗಿ, “”ಏನಾದರು ಕೆಲಸ ಕೊಡ್ಡೀರಾ?” ಎಂದು ಕೇಳಿದ. ಮ್ಯಾನೇಜರ್ ಹೀ..ಗೆ ಮಾಡಿ ನೋಡಿ, “”ಏನು ಮಾಡ್ತೀ? ಸಪ್ಲಾಯರ್ ಆದರೆ ಇಲ್ಲ. ಕ್ಲೀನರ್ ಆದರೆ ಇರು” ಎಂದ. ಪಗಾರು-ಗಿಗಾರು ಏನೂ ಕೇಳಲಿಲ್ಲ. ಉಳಿಯಲು, ಊಟಕ್ಕೆ ಜಾಗ ಸಿಕ್ಕರೆ ಸಾಕು ಎಂದಿತ್ತು.
ಮೊದಮೊದಲು ಒಂದು ಮಜಾ ಅನಿಸಿತು, ಚಿಕ್ಕಪ್ಪ ಬರುವುದಿಲ್ಲವಲ್ಲ ಎಂದು. ಎದುರು ರಸ್ತೆ, ಅದರಾಚೆ ಬಸ್‌ಸ್ಟ್ಯಾಂಡ್, ಸ್ವಲ್ಪ ಕೆಳಗೆ ಹೋದರೆ ಅಂಗಡಿ, ಸಿನೆಮಾ ಥಿಯೇಟರ್. ಆದರೆ, ಇದಾವುದೂ ತನಗಿಲ್ಲ ಎಂಬುದು ಬಂದ ಕೆಲವೇ ದಿನಗಳಲ್ಲಿ ಗೊತ್ತಾಗಿತ್ತು. ಒಮ್ಮೆ ಸುಮ್ಮನೆ ನೋಡುತ್ತ ನಿಂತಾಗ-
“”ಏ ಕತ್ತೆ ಅಲ್ಲೆಂತ ಕರಡಿ ಕುಣಿಯುತ್ತದೆಯಾ” ಎಂಬ ಗುಡುಗು ಮೊಳಗಿತ್ತು. ಅವನು, ಹೀಗೇ ಬಾಯಿ ಮುಚ್ಚಿಕೊಂಡು ಕುಳಿತರೆ ಜೋರಾಗುತ್ತದೆ ಇವರದು ಎಂದು ಬಾಯಿ ತೆರೆಯಬೇಕು ಎನ್ನುವಾಗ, ಮೊನ್ನೆ ಮೊನ್ನೆ ಒಬ್ಬ ಸಪ್ಲಾಯರನಿಗೆ ಆಗಿದ್ದು ಗಣೇಶನಿಗೆ ಎದುರು ಬರುತ್ತದೆ. ಮ್ಯಾನೇಜರ್ ಏನೊ ಉಲ್ಟಾ ಹೇಳಿದಾಗ, “ಏನು ಹೇಳ್ತೀರಿ ನೀವು…’ ಎಂದು ಜೋರಾಗಿ ಬಾಯಿ ಮಾಡುತ್ತ ಮುಂದೆ ಹೋದ. ಕೆಲವು ಗಿರಾಕಿಗಳೂ ಇದ್ದರು. ಮ್ಯಾನೇಜರನಿಗೆ ಇನ್‌ಸಲ್ಟ್ ಆಯಿತು. ಕೂಡಲೇ ಗಂಟುಮೂಟೆ ಕಟ್ಟಬೇಕಾಯಿತು. ಅವನು ಧಾಡಿ ಇದ್ದ. ಅವನಿಗೆ ಎಲ್ಲಿ ಹೋದರೂ ಬದುಕಬಲ್ಲೆ ಎಂಬ ಧೈರ್ಯ ಇದೆ. ಗಣೇಶನಿಗೆ ಅದಿಲ್ಲ. ಒಂದು ಮಾತು ಯಾರಿಗಾದರೂ ಹೇಳಿದರೂ ಮನಸಲ್ಲಿ ಕೊರೆಯುತ್ತಿರುತ್ತದೆ. ಸರಿ ಮಾತು ಆಡಿದರೂ ನಾ ಎಲ್ಲಿ ತಪ್ಪು ಹೇಳಿದೆನೇನೊ ಎಂಬ ಅನುಮಾನ. ಅದರೆ, ಈ ಮ್ಯಾನೇಜರರು ಇಡೀ ದಿನ ಹೇಳ್ತಿತಾರಲ್ಲ, ಅವರಿಗೆ ಏನೂ ಅನಿಸುವುದೇ ಇಲ್ಲವೇನು ಎಂದು ಅವನಿಗೆ ಯೋಚನೆ ಬರುತ್ತದೆ.
ಊರಲ್ಲಾಗಿದ್ದರೆ ಚಿಕ್ಕಪ್ಪ ಪೇಟೆಗೋ ಎಲ್ಲಿಗೋ ಹೋದಾಗಲಾದರೂ ನಿರಾಳವಾಗಿ ಇರಬಹುದಿತ್ತು. ಅವನು ಬೆಳಿಗ್ಗೆ ಮಿಂದು, ಚಹಾ ಕುಡಿದು, ಲುಂಗಿ ಉಟ್ಟಿಕೊಳ್ಳುತ್ತ ಹೋಗಲು ರೆಡಿ ಆಗುವಾಗಲೇ ಖುಷಿಯ ವರೆತೆಗಳು ಕಾಣಿಸಿಕೊಳ್ಳುತ್ತಿದ್ದವು. ಆಳುಗಳಿಗೆ ಏನೇನೊ ಕೆಲಸ ಹೇಳುತ್ತ ದಣಪೆ ದಾಟಿದಾಗ ಮಗುಚಿಕೊಳ್ಳುವ ಸ್ವಾತಂತ್ರ್ಯ. ಇನ್ನು, ದೊಡ್ಡದಾಗಿ ಮಾತಾಡಬಹುದು, ರೇಡಿಯೋ ಕೇಳಬಹುದು, ಕ್ರಿಕೆಟ್ ಆಡಲು ಹೋಗಬಹುದು, ರಾತ್ರೆ ಬಾರದಿದ್ದರೆ ಮನೆ ಆಳಿನ ಜೊತೆಗೆ ಮಾಳ ಕಾಯಲೂ ಹೋಗಬಹುದು. ಮಾಳ ಕಾಯುವವರ ಜೊತೆಗೆ ಹೋಗುವುದು ಅವನಿಗೆ ಎಲ್ಲಿಲ್ಲದ ಆನಂದ. ಮಾಳ ಕಾಯುವುದೆಂದರೆ ಹೊಲದಲ್ಲಿಯೇ ಒಂದು ಗುಡಿಸಲು ಕಟ್ಟಿ ರಾತ್ರಿ ಕಾಯುವುದು. ಕಬ್ಬೊ ಭತ್ತವೊ ಬೆಳೆಯುತ್ತಿದ್ದಂತೆ ಅದರ ಮಧ್ಯದಲ್ಲಿ ನಾಲ್ಕು ಕಂಬ ಹುಗಿದು, ಮೇಲೆ ಹಗರದಬ್ಬೆ ಹಾಕಿ ಕಟ್ಟುತ್ತಿದ್ದರು. ಮೇಲೆ ರೌಂಡಾದ ಮಾಡು. ರಾತ್ರಿ ಊಟವಾದ ಕೂಡಲೆ ಮನೆ ಆಳಿನ ಜೊತೆಗೆ ಕಂಬಳಿ, ಚಾದರ ತೆಗೆದುಕೊಂಡು ಹೊರಡುವುದು. ರಾತ್ರಿ, ಕತ್ತಲೆಯು ಬಗೆಬಗೆಯ ಮಾತನಾಡುತ್ತಿತ್ತು. ಹೇಗೆ ಬೇಕಾದರೂ ಕೂಗು, ಏನು ಬೇಕಾದರೂ ಹಾಡು. ಊರಿನ ಪೊಟರೆ ಪೊಟರೆಯಲ್ಲಿ ನಡೆದ, ನಡೆಯುತ್ತಿರುವ ರಮ್ಯ ಕತೆಗಳು ಆ ರಾತ್ರಿಯನ್ನು ರಂಜಿಸುತ್ತಿದ್ದವು. ಹೀಗೇ ಒಮ್ಮೆ ಹೋಗಿ ಬೆಳಿಗ್ಗೆ ಎದ್ದು ಮನೆಗೆ ಬಂದು ನೋಡಿದರೆ ಚಿಕ್ಕಪ್ಪ ಬಂದಿದ್ದ. ಗಣೇಶನಿಗೆ ನಂತರ ಏನಾಯಿತು ಎಂದು ಹೇಳುವುದು ಬೇಡ.
“”ಅರೆ! ನೀ ಇಲ್ಲೆ ಇದ್ಯನೊ, ಎಲ್ಲೆಲ್ಲೊ ನಿನ್ನ ಹುಡುಕಿ ಸೋತರು. ಏಳು ಮನೆಗೆ ಹೋಪೋ” ಎನ್ನುತ್ತ ಪಕ್ಕದ ಮನೆಯ ವಿಷ್ಣು ಬಂದ. ಗಣೇಶನಿಗೆ ಏನು ಮಾಡಬೇಕು ಗೊತ್ತಾಗಲಿಲ್ಲ. ವಿಷ್ಣು ಸ್ವಲ್ಪ ಆತ್ಮೀಯ. ಇವನಿಗಿಂತ ದೊಡ್ಡವ. ಯಾವಾಗಲೂ ಎಲ್ಲೆಲ್ಲೊ ತಿರುಗುತ್ತಿರುವವ. ಅವನ ಕತೆ ದೊಡ್ಡದಿದೆ, ಇಲ್ಲಿ ಬೇಡ ಅದು.
“”ಮ್ಯಾನೇಜರರೆ ಇವನು ನಮ್ಮೂರ ಹುಡುಗ. ಏನೋ ಸಣ್ಣ ಬ್ಯಾಜಾರ ಮಾಡಿಕೊಂಡು ಬಂದಿದ್ದಾನೆ. ಇವನ ಕರ್ಕೊಂಡು ಹೋಗ್ತೀನೆ” ಎನ್ನುತ್ತ, “”ತಮ್ಮಾ , ನಿನ್ನ ಚೀಲ ಎಲ್ಲಾ ತಕೊ” ಎಂದ. ಗಣೇಶ ಮ್ಯನೇಜರರ ಮುಖ ನೋಡಿದ. ಅವರು, “”ಹೋಗು ಹೋಗು ಮತ್ತೇನ ಮಾಡ್ತೆ” ಎಂದರು.
ಊರಿಗೆ ಹೋಗಲು ಪೂರ್ತಿ ಮನಸ್ಸಿರಲಿಲ್ಲ. ಜೊತೆಗೆ, ಇಲ್ಲಿ ಇಷ್ಟು ದಿನಗಳಿದ್ದು ಒಂದು ನಮೂನೆ ಆಪ್ತವೂ ಆದಂತಿತ್ತು. ಹೊರಬಂದು ತಿರುಗಿ ನೋಡಿದಾಗ ಮಸುಮಸುಕಾದ ಹೊಟೇಲ್ ಬೋರ್ಡು ಕಣ್ಣಿಗೆ ಬಿತ್ತು. “ಊಟ ಆಗಿದೆಯೇನೋ ಮಾಣಿ…’ ಎಂದು ಮ್ಯಾನೇಜರ್ ಕೇಳಿದ, ಇಷ್ಟು ದಿನ ಕಿವಿಗೆ ಬೀಳದ ದನಿಯಲ್ಲಿ. ಬಹುಶಃ ನನ್ನವರು ಜೊತೆಯಲ್ಲಿ ಇದ್ದಾರೆ ಎಂದೂ ಇರಬಹುದು.
ಸ್ವಲ್ಪ ದೂರ ಬಂದ ಮೇಲೆ ವಿಷ್ಣುವಿನ ಹತ್ತಿರ,
“”ಚಿಕ್ಕಪ್ಪ…?” ಎಂದು ಗೊಣಗಿದ.
“”ಅದೆಲ್ಲಾ ದೊಡ್ಡ ಕತೆ, ಕಡೆಗೆ ಹೇಳ್ತೆ, ಬಾ” ಎಂದ ಅವನು.
ಗಣೇಶ ಅರ್ಧ ಓಡುತ್ತ ಅರ್ಧ ನಡೆಯುತ್ತ ಅವನನ್ನು ಹಿಂಬಾಲಿಸಿದ.
ರಾಜು ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.