ಕತೆ: ಆ ಮರ


Team Udayavani, Dec 16, 2018, 10:11 AM IST

53.jpg

ಶಾಲೆಯಲ್ಲಿ ನಡೆದ ವನಮಹೋತ್ಸವದ ದಿನ ಗಿಡ ಮರಗಳ ಅಗತ್ಯ ವಿವರಿಸಿದ ಬಳಿಕ, ಅತಿಥಿಗಳು ನನ್ನನ್ನು ಆ ಹುಡುಗಿಯ ಕೈಗೆ ಹಸ್ತಾಂತರಿಸಿದ್ದರು. ಆ ಹುಡುಗಿ ನನ್ನನ್ನು ಸಂಭ್ರಮದಿಂದ ತನ್ನ ಮನೆಗೆ ಒಯ್ದು ನನ್ನನ್ನು ನೆಡುವ ಬಗ್ಗೆ ತನ್ನ ಹೆತ್ತವರ ಬಳಿ ಮಾತನಾಡಿದಾಗ ಅವರದ್ದು ನೀರಸ ಪ್ರತಿಕ್ರಿಯೆ. “”ಯಾವ ಗಿಡನೋ ಏನೋ, ನೋಡಿದ್ರೆ ಕಾಡು ಗಿಡ ಇದ್ದಂಗಿದೆ, ಯಾಕೆ ತರೋಕೆ ಹೋದೆ? ಉಪಯೋಗ ಇಲ್ಲ ಇದು”. ಮನುಷ್ಯ, ತನಗೆ ಉಪಕಾರ ಇಲ್ಲದಿದ್ದರೆ ಯಾವ ಕೆಲಸವನ್ನೂ ಮಾಡಲಾರ ಎಂದು ಅಲ್ಲಿ ಮತ್ತೂಮ್ಮೆ ನನಗೆ ಸಾಬೀತಾಗಿತ್ತು. ಪುಟ್ಟ ಕಪ್ಪು ಬಣ್ಣದ ಪ್ಲಾಸ್ಟಿಕ್‌ ಲಕೋಟೆಯಲ್ಲಿ ಸ್ವಲ್ಪ ಮಣ್ಣಿನಲ್ಲಿ, ಪುಟ್ಟ ಸಸಿಯಾಗಿದ್ದ ನಾನು ಆ ಹುಡುಗಿಯ ಕೈಯಲ್ಲಿ ಕುಳಿತು, ಅಲ್ಲಿ ತನಗೆ ಸ್ಥಾನ ದೊರಕದಿದ್ದರೆ, ಅ ಹುಡುಗಿ ನನ್ನನ್ನು ಬಿಸುಟರೇನು ಮಾಡುವುದು ಎಂದು ಚಿಂತೆಯಲ್ಲಿದ್ದ ನನಗೆ ಆ ಹುಡುಗಿ ಹಠ ಹಿಡಿದು ಕುಳಿತಾಗ ಅವಳ ಬಗ್ಗೆ ನನಗೆ ಪ್ರೀತಿಯುಕ್ಕಿತ್ತು. 

“”ಗಿಡಗಳು ನಾವು ಉಸಿರಾಡುವ ಆಮ್ಲಜನಕ ಕೊಡುತ್ತೆ. ವಾತಾವರಣವನ್ನು ಮಾಲಿನ್ಯಗೊಳಿಸುವ  ಅನಿಲಗಳನ್ನು ಹೀರಿಕೊಳ್ಳುತ್ತದೆ. ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಆಹಾರ ಮತ್ತು ಆಶ್ರಯ ಒದಗಿಸುತ್ತದೆ. ನೆರಳು, ಹೂ, ಹಣ್ಣು ನೀಡುತ್ತದೆ”- ನಮ್ಮ ಉಪಯೋಗಗಳ ಬಗ್ಗೆ ಶಾಲೆಯಲ್ಲಿ ಹೇಳಿದ ಗಿಣಿಪಾಠವನ್ನು ಅವಳು ಒಪ್ಪಿಸಿದರೂ ಅವಳ ಉದ್ದೇಶ ಒಳಿತೇ ಇತ್ತು. ಅವಳ ಹೆತ್ತವರು ಹಿತ್ತಲಲ್ಲಿ ನನ್ನನ್ನು ನೆಡಲು ಒಪ್ಪಲೇ ಇಲ್ಲ. ಆ ಹುಡುಗಿ ಊಟ, ನೀರು ಬಿಟ್ಟು ಹಠ ಹಿಡಿದು ಕುಳಿತಾಗ ಕಡೆಗೆ ರಸ್ತೆಯ ಬದಿಯಲ್ಲಿ ಅವರ ಮನೆಯ ಕಂಪೌಂಡಿನ ಒಳಗೆ ನೆಡಲು ಅವಳ ಅಪ್ಪ, ಅನುಮತಿ ನೀಡಿದಾಗ ಆ ಹುಡುಗಿ ಸಂಭ್ರಮದಿಂದ, ಅವಳ ಪುಟ್ಟ ಕೈಗಳಿಂದ ಗುಂಡಿ ತೋಡಿ ನನಗೆ ತೊಡಿಸಿದ್ದ ಪ್ಲಾಸ್ಟಿಕ್‌ ಕವಚವನ್ನು ತೆಗೆದೆಸೆದು ನನ್ನ ಬೇರಿಗೆ ಪೆಟ್ಟಾಗದಂತೆ ಅಕ್ಕರಾಸ್ಥೆಯಿಂದ ನೆಟ್ಟು, ಮಣ್ಣು ಮುಚ್ಚಿ ನೀರೆರೆದಳು. ಪ್ರೀತಿಯಿಂದ ಸವರಿದಳು. ಅವಳ ಮುಖದಲ್ಲಿದ್ದ ಸಾರ್ಥಕತೆಗೆ ಬೆಲೆಕಟ್ಟಲಾಗದೆನಿಸಿತು. ನನ್ನಲ್ಲೂ ಬುವಿ ಸೇರಿ ಬದುಕಲು ದೊರೆತ ಅವಕಾಶಕ್ಕಾಗಿ ಸಾರ್ಥಕತೆ ಮೂಡಿತ್ತು. ಅದಕ್ಕೆ ಕಾರಣಕರ್ತಳಾದ ಅವಳಿಗೆ ಮನದಲ್ಲೇ ಕೃತಜ್ಞತೆ ಸಲ್ಲಿಸಿದೆ. 

ಅಲ್ಲಿಂದ, ಪ್ರತಿದಿನ ಅವಳು ಸೂಕ್ಷ್ಮವಾಗಿ ನನ್ನನ್ನು ಗಮನಿಸುತ್ತಿದ್ದಳು. ನನ್ನ ಬಳಿ ಮಾತನಾಡುತ್ತಿದ್ದಳು. “”ಬೇಗ ಬೇಗ ಬೆಳೀಬೇಕು… ನೀನು… ರೆಂಬೆ, ಕೊಂಬೆ, ಎಲೆ, ಹೂ. ಕೊಡಬೇಕು. ಚೆಂದ ಕಾಣಬೇಕು” ಎನ್ನುತ್ತಿದ್ದಳು. “”ಇವತ್ತು ನನ್ನ ಸ್ಕೂಲಿನಲ್ಲಿ ಏನಾಯಿತು ಗೊತ್ತಾ ನಿನಗೆ. ನನ್ನ ಫ್ರೆಂಡು ದೊಡ್ಡೋಳಾದಳಂತೆ. ಅಮ್ಮ ನನ್ಗೂ ಏನೇನೋ ಬುದ್ಧಿಮಾತು ಹೇಳ್ತಿದ್ಲು. ಹುಡ್ಗಿಯಾಗಿ ಹುಟ್ಟಿದರೆ ಇದೆಲ್ಲಾ ಅನುಭವಿಸಬೇಕಾ.  ನೀನೇ ಹೇಳು? ನನ್ಗೆ ಭಯವಾಗುತ್ತೆ”

“”ನಿನ್ಗೆ ರಸ್ತೆ ಬದಿ ಶಬ್ದಕ್ಕೆ ಕಿರಿಕಿರಿಯಾಗುತ್ತಲ್ವಾ. ನನಗೊತ್ತು. ಈ ಅಪ್ಪ-ಅಮ್ಮ ಬೇರೆ ಜಾಗನೇ ಕೊಟ್ಟಿಲ್ಲ. ನಿನ್ಗೆ . ನಾನೇನು ಮಾಡಲಿ. ಸಹಿಸಿಕೋ. ಆಯ್ತಾ?” ಅವಳು ಸ್ನೇಹಿತಳಂತೆ ನಿಷ್ಕಲ್ಮಷ ಮನದಿಂದ ನನ್ನೊಂದಿಗೆ ಪ್ರತಿಭಾವನೆಯನ್ನೂ  ಹಂಚಿಕೊಳ್ಳುತ್ತಿದ್ದಳು. ಎದ್ದೊಡನೆ ಮತ್ತು ಶಾಲೆಯಿಂದ ಮನೆಗೆ ಬಂದೊಡನೆ ಅವಳ ಮೊದಲ ಕೆಲಸವೆಂದರೆ ನನ್ನ ಬಳಿ ಬಂದು ನನ್ನ ಬೆಳವಣಿಗೆ ಗಮನಿಸುವುದು. “”ನೋಡಮ್ಮ, ನನ್ನ ಗಿಡ ಎಷ್ಟು ಬೇಗ ಬೆಳೀತಿದೆ. ಉದ್ದ ಕಾಂಡ ನೋಡು. ಇದರ ಗೆಲ್ಲು ನೋಡು” ಎಂದು ಅಪ್ಯಾಯಮಾನವಾಗಿ ನನ್ನನ್ನು ಸವರಿ ಸಂಭ್ರಮಿಸುತ್ತಿದ್ದಳು. ಆ ಪುಟ್ಟ ಹೃದಯದಲ್ಲಿ ಮಾತೃತ್ವದ ಮಮತೆಯಿತ್ತು. ಹೆಣ್ಣುಮಕ್ಕಳಲ್ಲಿ ಅವರು ಹುಟ್ಟುವಾಗಲೇ ದೈವದತ್ತವಾಗಿ ಭಗವಂತ ಆ ಭಾವವನ್ನು ತುಂಬಿರುತ್ತಾನೇನೋ!

“”ಇಡೀ ದಿನ ಆ ಗಿಡದ ಹತ್ರ ನಿಲೆºàಡಾ. ರಸ್ತೆ ಬೇರೆ. ಏನಿದೆ ಆ ಗಿಡದಲ್ಲಿ ನಿನಗೆ ಅಂಥದ್ದು? ಅತಿರೇಕವಾಯಿತು ನಿನ್ನದು. ನೀನು ಹೀಗೇ ವರ್ತಿಸುತ್ತಿದ್ದರೆ, ಆ ಕಾಡುಗಿಡ ಕಿತ್ತೆಸೆದು ಬಿಡ್ತೀನಿ ನೋಡು” ಅವಳ ಅಮ್ಮ ಬೆದರಿಸುತ್ತಿದ್ದಳು. ಆ ಹುಡುಗಿಯ ಕಂಗಳಲ್ಲಿ ಅಂಥ ಸಂದರ್ಭ ಕಲ್ಪಿಸಿಯೇ ದುಃಖದಿಂದ ಕಣ್ಣೀರು ಹರಿಸಿದ್ದಳು. ಹಾಗೆ ಮಾಡಿದ್ರೆ ನೋಡು ಮತ್ತೆ. 

ಹೀಗೆ ಆ ಹುಡುಗಿಯ ಪ್ರೀತಿಗೆ ಪಾತ್ರವಾಗಿ ನಾನು ಅಲ್ಲೇ ಬೆಳೆಯತೊಡಗಿದೆ. ಅವಳು ಎರೆಯುತ್ತಿದ್ದದ್ದು ಬರೀ ನೀರಲ್ಲ, ಪ್ರೀತಿ, ವಾತ್ಸಲ್ಯ. ಅವಳ ಬಾಂಧವ್ಯಕ್ಕೆ ಸೋತು ಅವಳ ನಿರೀಕ್ಷೆಗೂ ಮೀರಿ ಬೆಳೆಯತೊಡಗಿದೆ. ಅವಳ ಕಂಗಳಿಗೆ ಹಬ್ಬವಾದೆ. ಅವಳ  ಭಯ ಒಂದು ದಿನ ನಿಜವಾಯಿತು. ಅವಳೂ ದೊಡªವಳಾದಳು. ಅವಳೂ ಬೆಳೆದಳು. ನಮ್ಮ ದಿನಚರಿ ಹೀಗೇ ಮುಂದುವರೆಯಿತು. ಅವಳು ಬಂದು ನೀರೆರೆಯುತ್ತಿದ್ದಳು. ಮಾತನಾಡಿಸುತ್ತಿದ್ದಳು. ನಮ್ಮ ಸಂಹವನ ಹೀಗೇ ನಡೆಯಿತು. ತನ್ನ ಅಂತರಂಗವನ್ನು ನನ್ನೆದುರು ತೆರೆದಿಡುತ್ತಿದ್ದಳು. ಅವಳ ಸ್ನೇಹಿತೆಯಂತೆ ನಾನೂ ಮೌನವಾಗಿ ಅವಳು ಹೇಳಿದ್ದನ್ನು ಆಲಿಸುತ್ತಿದ್ದೆ. ಅವಳ ಸುಖ-ದುಃಖಗಳಲ್ಲಿ ನಾನೂ ಮೌನವಾಗಿ ಶಾಮೀಲಾಗುತ್ತಿದ್ದೆ. ಹೀಗೇ ದಿನಗಳು ಸರಿದು ಹೋದವು.
.
.
ಆ ಹುಡುಗಿ ಈಗ ಪ್ರಾಪ್ತ ವಯಸ್ಸಿಗೆ ಬಂದಿದ್ದಾಳೆ. ನಾನೂ ದಷ್ಟಪುಷ್ಟವಾಗಿ ಹೆಮ್ಮರವಾಗಿ ಬೆಳೆದು ನಿಂತಿದ್ದೇನೆ. ರೆಂಬೆ-ಕೊಂಬೆಗಳು ಹಬ್ಬಿ ನೆರಳು ನೀಡುವ ಮರವಾಗಿದ್ದೇನೆ. ನಾನು ಹೂ-ಹಣ್ಣು ಕೊಡದ ಕಾಡುಮರವೆಂದು, ಅದಕ್ಕಾಗಿ ಅಷ್ಟು ಬೇಗ ಬೃಹದಾಕಾರವಾಗಿ ಬೆಳೆದೆನೆಂದು ತಿಳಿದಾಗ ಅವಳ ಅಪ್ಪ ಕೊಡಲಿ ಹಿಡಿದು ನನ್ನನ್ನು ಕಡಿಯಲು ಬಂದಾಗ ಆ ಹುಡುಗಿಯೇ ಈ ಬಾರಿಯೂ ನನ್ನನ್ನು ರಕ್ಷಿಸಿದ್ದಳು. ಅದರ ಬೇರು ಹಬ್ಬಿ, ಮನೆ ಅಡಿಪಾಯ ಹಾಳು ಮಾಡಿದರೇನು ಗತಿ? ರಸ್ತೇಲಿ ಹೋಗಿ ಬರೋರಿಗೆ ನೆರಳು ನೀಡಿದರೆ ನಮಗೇನು ಲಾಭ? ಲೆಕ್ಕಾಚಾರದ ಜನವಾಗಿದ್ದ ಅವಳ ಅಪ್ಪನಿಗೆ ಆ ಹುಡುಗಿಯೇ ರಮಿಸಿ ನನ್ನನ್ನು ಬಚಾವು ಮಾಡಿದ್ದಳು. ಮನೆಗೆ ಯಾವುದೋ ರಿಪೇರಿ ಕೆಲಸ ಒದಗಿದಾಗ ಬಂದ ಕೆಲಸಗಾರರ ಬಳಿ, ಅಪ್ಪನಿಗೆ ಹೇಳಿಸಿ, ಮೇಲೇರಿದ್ದ ನನ್ನ ಬೇರುಗಳಿಗೆ ಸಮೃದ್ಧಿ ಒದಗಿಸಲು ಕಂಪೌಂಡಿಗೆ ಆತುಕೊಂಡಂತೆ ಒಂದು ಸಣ್ಣ ಕಟ್ಟೆ ಕಟ್ಟಿಸಿ ಮಣ್ಣು ತುಂಬಿಸಿದ್ದಳು. ನನ್ನ ನೆರಳಿನಡಿಯಲ್ಲಿ ಆ ಕಟ್ಟೆಯ ಮೇಲೆ ಕುಳಿತು ನನ್ನೊಂದಿಗೆ ಸಂಭಾಷಿಸುತ್ತಿದ್ದಳು. 

“”ನಿನಗೊತ್ತಾ? ನನ್ನ ಮದ್ವೆ ಮಾತುಕತೆ ನಡೀತಿದೆ ಮನೇಲಿ.  ನಾನು ಮದ್ವೆ ಆಗಿ ನಿನ್ನ ಬಿಟ್ಟು ಹೊರಟು ಹೋಗ್ತಿàನಿ. ನೀನು ಪುಟ್ಟ ಗಿಡ ಆಗಿದ್ರೆ ನಿನ್ನೂ ನನ್ನ ಜೊತೆ ಕರೆದುಕೊಂಡು ಹೋಗಬಹುದಿತ್ತು. ಆದ್ರೆ, ಏನು ಮಾಡಲಿ. ನೀನು ಈ ಪಾಟಿ ಬೆಳೆದು ಬಿಟ್ಟಿದ್ದೀಯಲ್ವಾ? ಇರಲಿ. ಆಗಾಗ, ಇಲ್ಲಿ ಬಂದಾಗ ನಿನ್ನ ಮಾತನಾಡಿಸ್ತೀನಿ. ಆಯ್ತಾ?”

“”ನನ್ನ ಮದ್ವೆ ಆಗುವ ಗಂಡು ಯಾರೋ, ಹೇಗಿದ್ದಾನೋ? ಅವನು ನನ್ನ ಭಾವನೆಗಳಿಗೆ ಬೆಲೆ ಕೊಡುವವನಾದರೆ ಸಾಕು.  ಬೇರೇನೂ ಅಪೇಕ್ಷೆ ಇಲ್ಲ ನನಗೆ. ಅವಳು ಬಿಟ್ಟು ಹೋಗುವ ಕ್ಷಣ ಬಂದರೆ ನಾನು ಹೇಗಿರಲಿ ಎನ್ನುವುದೇ ನನಗೆ ದಿಗಿಲಾಗಿತ್ತು. ಅವಳು ಈ ಹುಟ್ಟಿದ ಮನೆಯನ್ನು ಅಗಲಿ ಹೋಗಬೇಕಾದ ಅನಿವಾರ್ಯತೆ. ಅವಳು ಬಯಸಿದಂತೆ ಅವಳನ್ನು ಪ್ರೀತಿಸುವ, ಗೌರವಿಸುವ, ಅವಳ ಭಾವುಕತೆಗೆ ಸ್ಪಂದಿಸುವಂಥ ಸಹೃದಯಿ ಸಂಗಾತಿಯಾಗಿ ಸಿಗಲಿ ಎಂದೇ ನಾನೂ ಅವಳಿಗಾಗಿ ಹಾರೈಸಿದೆ. ಆ ದಿನವೂ ಬಂದಿತು. ಅವಳಿಗೊಬ್ಬ ಚೆಂದದ ವರ ಹುಡುಕಿದರು. ಅವನು ದೊಡ್ಡ ಊರಿನಲ್ಲಿ ದೊಡ್ಡ ಕೆಲಸದಲ್ಲಿದ್ದ. ಈಗ ಮದುವೆ ಆದ ಬಳಿಕ ಮನೆ ಮಾಡಿ ಗಂಡ-ಹೆಂಡತಿ ಹೊಸದಾಗಿ ಸಂಸಾರ ಹೂಡುವವರಿದ್ದರು. ಅವಳೂ ಒಪ್ಪಿದ್ದಳು. ಮನೆಯಲ್ಲಿ ಸಂಭ್ರಮ ಮನೆ ಮಾಡಿತು. ಅವಳು ಮದುವೆ ಆಗಿ ಗಂಡನ ಮನೆಗೆ ಹೋಗುತ್ತಿ¨ªಾಳೆ ಎಂದು ಖುಷಿ ಪಡಬೇಕೋ, ನನ್ನ ಜೀವದ ಭಾಗವೇ ಆದಂತಿದ್ದ ಅವಳು ದೂರ ಹೋಗುತ್ತಿ¨ªಾಳೆಂದು ವ್ಯಥೆ ಪಡಬೇಕೋ ತಿಳಿಯದಾಯಿತು. ಅಂತೂ ಮನೆಯಲ್ಲಿ ಚಪ್ಪರ ಬಿತ್ತು. ನನ್ನ ಕೊಂಬೆಗಳಿಗೆ ಹಗ್ಗ ಕಟ್ಟಿ ಮಾವಿನ ಎಲೆಯ ತೋರಣ ಕಟ್ಟಿದರು. ದಿಬ್ಬಣ ಹೊರಟಿತು. ಹೊರಡುವಾಗ ಆ ಹುಡುಗಿ ನನ್ನ ತಬ್ಬಿ ಕಣ್ಣೀರು ಹರಿಸಿ ಮದುವೆ ಮನೆಗೆ ಹೊರಟಳು. ನಾನೂ ಭಾರವಾದ ಮನಸ್ಸಿನಿಂದ ಅವಳನ್ನು ಬೀಳ್ಕೊಟ್ಟೆ.
.
.
ಆ ದಿನ ಗಂಡನ ಮನೆಯಿಂದ ಬರುವವಳಿದ್ದಳು ಆ ಹುಡುಗಿ. ಗಂಡನೊಂದಿಗೆ ಬಂದ ಹುಡುಗಿಯ ಮುಖದಲ್ಲಿ ಹರುಷದ ಕಳೆಯಿಲ್ಲ. ಬಾಡಿದ ಮುಖ. ಕಂಗಳಲ್ಲಿ ಏನೋ ಹೇಳಲಾಗದ ನೋವಿನ ನೆರಳು ನಾನು ಗುರುತಿಸಿದೆ. ಆದರೆ, ಹೆತ್ತವರಿಗೆ ಅವರನ್ನು ಸತ್ಕರಿಸುವ ಸಂಭ್ರಮವೇ ಮುಖ್ಯವಾಗಿತ್ತು. ಆ ಹುಡುಗಿ ಈ ಸಲ ಧಾವಿಸಿ ನನ್ನ ಬಳಿ ಬರಲಿಲ್ಲ. ಅವಳ ಸಾಮೀಪ್ಯಕ್ಕೆ ನಾನು ಹಾತೊರೆಯುತ್ತಿ¨ªೆ. ನನ್ನ ಪರಿವೇ ಅವಳಿಗೆ ಇದ್ದಂತಿರಲಿಲ್ಲ. ನನ್ನ ಸೆಳೆತವನ್ನೂ ಮೀರಿದ ಹೊರೆ ಅವಳ ಹೃದಯದಲ್ಲಿ ಮನೆ ಮಾಡಿರುವುದನ್ನು ನಾನು ಸುಲಭವಾಗಿ ಗ್ರಹಿಸಿದೆ. ಕಡೆಗೂ ರಾತ್ರಿ ಬಂದು ನನ್ನ ಕಟ್ಟೆಯ ಮೇಲೆ ಕುಳಿತು ಬಿಕ್ಕಳಿಸಿದಳು. ಅವಳ ಕಣ್ಣೀರು ಅವ್ಯಾಹತವಾಗಿ ಸುರಿಯುತ್ತಲೇ ಇತ್ತು. 

“”ಅಮ್ಮ, ಅಪ್ಪ, ತಂಗಿ ಎಲ್ಲರೂ ಕೇಳ್ತಾರೆ. ಹೇಗಿದ್ದೀಯಾಂತ. ಹೇಗೆ ಹೇಳಲಿ ನಾನು? ಅವನು ಮನುಷ್ಯನಲ್ಲ, ಮೃಗ ಅಂತ. ನೋಡಲು ಸಂಭಾವಿತ ಅಷ್ಟೆ. ಅವನಿಗೆ ನಾನು ಬೇಡ. ಈ ದೇಹ ಬೇಕಷ್ಟೇ” ಮುಖ ಮುಚ್ಚಿ ಬಿಕ್ಕಳಿಸುವಾಗ ಮಣ್ಣಿನಲ್ಲಿ ಬಿದ್ದ ಕಣ್ಣೀರು ಭೂಮಿ ಮೌನವಾಗಿ ಹೀರಿತ್ತು. ಎರಡು ದಿನಗಳಲ್ಲಿ ಅವಳು ಹೊರಟು ನಿಂತರೂ ಅವಳ ಮುಖದಲ್ಲಿ ಗೆಲುವೇ ಇಲ್ಲ. ಭಾರವಾದ ಹೆಜ್ಜೆಗಳಿರಿಸುತ್ತ, ಒಲ್ಲದ ಮನದಿಂದ ಅವಳು ಹೊರಟಾಗ ಅವಳನ್ನು ತಡೆದು ನಿಲ್ಲಿಸುವ ಅದಮ್ಯ ಬಯಕೆಯಾಗಿತ್ತು.

“”ಒಂದು ತಿಂಗಳೊಳಗೆ ಅವಳು ಸೂಟ್‌ಕೇಸ್‌ ಹಿಡಿದು ಮರಳಿದಳು. ನಾನು ಅವ° ಜೊತೆ ಇರಲ್ಲ. ನನೆY ಬಾಳಕ್ಕೆ ಆಗಲ್ಲ” ಹಠ ಹಿಡಿದಳು ಹುಡುಗಿ. ಮನೆಯವರ ಕಾರಣ ಕೇಳಿದರು, “”ಅವ್ನು ಕುಡೀತಾನಾ? ಹೊಡೀತಾನಾ? ಕೆಟ್ಟ ಅಭ್ಯಾಸಗಳಿವೆಯಾ?” ಎಲ್ಲಾದಕ್ಕೂ ಇವಳು ಕತ್ತು ಅಡ್ಡಡ್ಡ ಆಡಿಸಿದಳು.

“”ಮತ್ತೇನು ನಿನ್ನ ಸಮಸ್ಯೆ?” ಅವಳು ಬಾಯಿ ಬಿಟ್ಟು ಹೇಳದಾದಳು. “”ನಿನ್ಗೆ ನಾವು ಮುದ್ದು ಮಾಡಿ ಬೆಳೆಸಿ ನೀನು ಹೇಳಿದ್ದೆಲ್ಲ ಒಪ್ಪಿಕೊಂಡು ಸಲಹಿದೆವು ಅಂತ ಹೋದ ಮನೇಲಿ ಹಾಗಾಗುತ್ತಾ, ಮಗಳೇ? ನೀನೇ ಅನುಸರಿಸಿ ಬಾಳಬೇಕು ಕಣಮ್ಮ. ಮದ್ವೆ ಆಗಿ ತಿಂಗಳೊಳಗೆ ಬಂದು ಕೂತ್ರೆ ನೋಡಿದ ಜನ ಏನಂತಾರೆ?” ಅವಳು ತುಟಿ ಕಚ್ಚಿ ಹಿಡಿದು ನೋವು ನುಂಗಿದಳು. ಒಡಲು ತೆರೆದಿಡದಾದಳು. ಒತ್ತಾಯವಾಗಿ ಗಂಡನ ಮನೆಗೆ ಹೊರಡಿಸಿ ಕರೆದೊಯ್ದು ಬಿಟ್ಟು ಬಂದರು. 

ಅವಳ ಕೋಮಲ ಮನಸ್ಸಿಗೆ ಘಾಸಿಯಾಗದಿದ್ದರೆ ಅವಳಲ್ಲಿ ಸಂತೋಷದಿಂದಲೇ ಇರುತ್ತಿದ್ದಳು. ಯಾಕೆ ನೀವು ಅರ್ಥ ಮಾಡಿಕೊಳ್ಳುತ್ತಿಲ್ಲ? ಎಂದು ಅವಳ ಹೆತ್ತವರಿಗೆ ಚೀರಿ ಹೇಳಬೇಕೆನಿಸಿತ್ತು. ಅವಳ ಕೊರಗೇನು, ಕಷ್ಟವೇನು ಎಂದು ತಿಳಿದು ಉಪಚರಿಸುವುದಕ್ಕಿಂತಲೂ ಅವಳನ್ನು ಗಂಡನ ಮನೆಗೆ ಸೇರಿಸುವ ಧಾವಂತವೇ ಅವರಲ್ಲಿ ಹೆಚ್ಚಾಗಿತ್ತು. ಅವಳಿಗೂ ತನ್ನ ದಾಂಪತ್ಯ ಜೀವನದ ಬಗ್ಗೆ ಎಷ್ಟೊಂದು ಹೊಂಗನಸುಗಳಿತ್ತು. ತನ್ನ ಬಳಿ ಅದೆಲ್ಲ ಹಂಚಿಕೊಳ್ಳುತ್ತಿದ್ದವಳ ಭಾವುಕತೆಯೇ ಈಗ ಬರಡಾಗಿತ್ತು. ಅವಳ ಕನಸುಗಳು ನುಚ್ಚುನೂರಾಗಿದ್ದವು. ಮಾತನಾಡುವ ಹುಡುಗಿ ಈಗ ಮೂಕಳಾಗಿದ್ದಳು. ಅವಳನ್ನು ಹೆತ್ತವರು ಪತಿಗೃಹ ಬಿಟ್ಟು ಬಂದು ತಿಂಗಳಾಗಲಿಲ್ಲ, ಮತ್ತೆ ಅವಳು ತವರು ಮನೆಗೆ ಮರಳಿದ್ದಳು. ಹೆತ್ತವರು ಈ ಬಾರಿ ತಲೆಯ ಮೇಲೆ ಕೈ ಹೊತ್ತು ಕುಳಿತರು. ಅವಳ ಗಂಡ ಶಾಂತಮೂರ್ತಿಯಾಗಿದ್ದವನು ಈ ಸಲ ಉಗ್ರ ರೂಪ ತೋರಿಸಿದ್ದ, “”ನಿಮ್ಮ ಮಗಳಿಗೆ ಗಂಡನ ಜೊತೆ ಹೇಗಿರಬೇಕು ಅಂತ ಗೊತ್ತಿಲ್ಲ. ಅವ್ನಿಗಿನ್ನೂ ಬುದ್ಧಿ ಬಂದಿಲ್ಲ. ಎಳೇ ಮಗು ಥರ ಆಡ್ತಾಳೆ. ಅವ್ನಿಗೆ ಇಲ್ಲಿರೋಕೆ ಇಷ್ಟ ಇದ್ರೆ ಇಟ್ಕೊಳ್ಳಿ. ನೀವೇ” ಎಂದು ಗರ್ಜಿಸಿ ಹೋಗಿದ್ದ.  ಅಷ್ಟೇ ಸಾಕೆನ್ನುವಂತೆ ಅವಳಮ್ಮ ಅವಳ ಬೆನ್ನಿಗೆ ಗುದ್ದಿ, “”ಯಾಕೆ ನಮ್ಗೆ ಈ ರೀತಿ ಹೊಟ್ಟೆ ಉರಿಸ್ತೀಯಾ? ಮದ್ವೆ ಆಗಿ ಎರಡು ತಿಂಗಳೂ ಆಗಿಲ್ಲ. ಅವ° ಜೊತೆ ಹೊಂದಿಕೊಂಡು ಹೋಗಬಾರದಾ?” ಎಂದು ಅತ್ತರು. ಬುದ್ಧಿ ಹೇಳಿದರು. ಅವಳು ಎಲ್ಲದಕ್ಕೂ ಕಿವುಡಿಯಂತೆ ವರ್ತಿಸಿದಳು. ಬಂದು ನನ್ನ ಕಟ್ಟೆಯ ಮೇಲೆ ಕುಳಿತು ನೀರವವಾಗಿ ಕಂಬನಿ ಮಿಡಿದಳು. 

ಹೇಗಿದ್ದ ಹುಡುಗಿ ಹೇಗಾಗಿ ಹೋದಳು. ಮುಖ ಬಾಡಿಹೋಗಿ ಕಂಗಳಲ್ಲಿ ಶೂನ್ಯ ಭಾವವಿತ್ತು. ಅವಳು ಸುರಿಸುತ್ತಿದ್ದ ಕಂಬನಿ ಅವಳ ಮನದೊಳಗಿನ ಕ್ಲೇಷ, ಹೃದಯದ ನೋವು ಹೊರ ಹಾಕುತ್ತಿತ್ತು. “”ಇವ್ರಿಗೆ ಯಾರಿಗೂ ನನ್ನ ಕಷ್ಟ ಗೊತ್ತಿಲ್ಲ. ಅವನು ಮನುಷ್ಯನಲ್ಲ. ಪಶು. ಅವನು ನನ್ನನ್ನೂ ಪ್ರಾಣಿ ಅಂತ ತಿಳ್ಕೊಂಡಿದ್ದಾನೆ. ಅವನು ಮನೆಗೆ ಬಂದರೆ ನನಗೆ ಭಯ ಶುರುವಾಗುತ್ತೆ. ಇವರಿಗೆ ಹೇಗೆ ಹೇಳಲಿ ನಾನು?” ಒತ್ತಾಯ ಮಾಡಿ ಕಡೆಗೂ ಅವಳನ್ನು ಗಂಡನ ಮನೆಗೆ ಬಿಡುವುದೆಂದು ತೀರ್ಮಾನವಾಯಿತು. ಅವಳು ಪ್ರತಿಭಟಿಸಿದರೂ ಅದಕ್ಕೆ ಮಾನ್ಯವೇ ಇಲ್ಲದಂತಾಯಿತು. “”ನಾನು ಅಲ್ಲಿಗೆ ಹೋಗಲ್ಲ. ಅವ್ನು ನನಗೆ ಬೇಡಾ”
ಅವಳ ಹೃದಯದ ಧ್ವನಿಯನ್ನು ಅಲಿಸಲು, ಅಲ್ಲಿ ಕಿವಿಗಳೇ ಇರಲಿಲ್ಲ. 
.
.
ರಾತ್ರಿಯ ನೀರವತೆಯಲ್ಲಿ ಮನೆ ಬಾಗಿಲ ಶಬ್ದವಾದಾಗ ನಾನು ಅತ್ತ ದಿಟ್ಟಿಸಿದರೆ ಹುಡುಗಿ ಹೊರ ಬಂದಳು. ನಾಳೆ ಹೊರಡುವವಳಿಗೆ ಬೇಸರವಿರಬೇಕು. ನಿದ್ದೆ ಹತ್ತದೇ ಬಂದಿದ್ದಾಳೆ ಎಂದು ನಾನಂದುಕೊಂಡೆ. ಆದರೆ, ಅವಳ ಕೈಯಲ್ಲಿ ಒಂದು ಸೀರೆ ಇತ್ತು. ಅದೇಕೆ ತಂದಿದ್ದಾಳೆ ಎಂದು ನಾನು ಯೋಚಿಸುತ್ತಿರುವಾಗಲೇ ಅವಳು ಸರಸರನೆ ನನ್ನ ಬಳಿ ಬಂದಳು ಕಟ್ಟೆ ಹತ್ತಿದ್ದಳು. ನನ್ನ ಕೊಂಬೆಗೆ ಸೀರೆ ಸುತ್ತಿಸುವಾಗ ಅವಳ ನಿರ್ಧಾರದ ಅರಿವಾಗಿ ನಾನು ಚೀರಿದೆ. “”ಬೇಡಾ. ಈ ಹುಚ್ಚು ಕೆಲಸ ಮಾಡಬೇಡಾ. ಇದು ತಪ್ಪು ನಿರ್ಧಾರ. ದುಡುಕಬೇಡಾ. ನಿನ್ನ ನೋವು, ಮುಜುಗರ ಪಡದೇ ಹೊರಗೆ ಹಾಕು ಅಥವಾ ಪ್ರತಿಭಟಿಸು. ಇಂಥ ಕೆಲಸ ಮಾಡಿಕೊಳ್ಳಬೇಡಾ. ಹೊರಗೆ ಬದುಕಲು ನೂರಾರು ದಾರಿಗಳಿವೆ” ಅವಳು ನಿರ್ಧಾರ ಮಾಡಿ ಆಗಿತ್ತು. ಅವಳನ್ನು ತಡೆಯಲು ಅತ್ತಿತ್ತ ನೋಡಿದೆ. ರಸ್ತೆ ನಿರ್ಮಾನುಷವಾಗಿತ್ತು. ಕೊಂಬೆಗೆ ಸೀರೆ ಕಟ್ಟಿ ಮತ್ತೂಂದು ತುದಿಯಲ್ಲಿ ಉರುಳು ಹಾಕಿಕೊಂಡು ಒಂದು ಕ್ಷಣ ಗಟ್ಟಿ ಮನಸ್ಸು ಮಾಡಿದವಳೇ ಆ ಕುಣಿಕೆಗೆ ಕೊರಳೊಡ್ಡಿದಳು. ನೋಡು ನೋಡುತ್ತಿದ್ದಂತೇ ನನ್ನ ಕಣ್ಣೆದುರೇ ನನ್ನ ಮಡಿಲಲ್ಲೇ ಒದ್ದಾಡುತ್ತ ಅವಳು ಪ್ರಾಣ ಬಿಟ್ಟಿದ್ದಳು. ನನ್ನ ಸಾಕಿ ಸಲಹಿ ಪೊರೆದ ಆ ಹುಡುಗಿ ನನ್ನಲ್ಲೇ ತನ್ನ ಬದುಕಿನ ಅಂತ್ಯ ಹಾಡಿದ್ದಳು.

ಮುಂಜಾನೆ, ರಸ್ತೆಯಲ್ಲಿ ಹೋಗುತ್ತಿದ್ದವರು ಇವಳನ್ನು ಕಂಡು ಬಾಗಿಲು ತಟ್ಟಿ ಈ ಘಟನೆ ನೋಡಿದವರೇ ಮನೆಯವರಿಗೆ ತಿಳಿಸಿ ಎಚ್ಚರಿಸಿದರು. ಅಲ್ಲಿ ಆಕ್ರಂದನ ಶುರುವಾಯಿತು. ಜನ ನೆರೆಯಿತು. ಪೊಲೀಸ್‌ ಬಂದು ಮಹಜರು ನಡೆಸಿದರು. ತನ್ನ ಸಾವಿಗೆ ತಾನೇ ಕಾರಣ ಎಂದು ಚೀಟಿ ಬರೆದಿಟ್ಟಿದ್ದಳು ಹುಡುಗಿ. ಹಾಗಾಗಿ, ಅವಳ ಕತೆ ಹೊರಗೆ ಬರಲೇ ಇಲ್ಲ ಕಡೆಗೂ. ನನ್ನ ಸಮ್ಮುಖದಲ್ಲೇ ಅವಳ ಕೊನೆಯ ಯಾತ್ರೆ ಹೊರಟಿತು. ಈಗ ಕಣ್ಣೀರು ಹರಿಸುವುದಷ್ಟೇ ಕಾಯಕ ನನ್ನದು. 

“”ಈ ಗಿಡ ತಂದು ನೆಡಬೇಡಾ ಅಂತ ಸಾವಿರ ಸಲ ಬಡಿದುಕೊಂಡೆ. ಅದರಲ್ಲೇ ಕುತ್ತಿಗೆ ಕೊಟ್ಟು ಸತ್ತಳು. ಈ ಗಿಡ ಅವಳ ಜೀವ ತೆಗೆಯಲೇ ಬಂದಿತ್ತೇನೋ” ಅವಳ ಅಮ್ಮ ನನ್ನನ್ನು ಶಪಿಸಿದರು. ನನ್ನ ಶಪಿಸುವ ಬದಲು ಮಗಳ ಬಳಿ ಕುಳಿತು ಸಾವಕಾಶವಾಗಿ ಅವಳ ಸಮಸ್ಯೆ ಏನೆಂದು ಕೇಳಬಹುದಿತ್ತು. ಆದರೆ, ದುರ್ಘ‌ಟನೆ ಘಟಿಸಿ ಹೋಗಿದೆ. ಆ ಹುಡುಗಿ ಬಾರದ ಲೋಕಕ್ಕೆ ತೆರಳಿಯಾಗಿದೆ. ಅವಳೇ ಒಂದು ಕತೆಯಾಗಿದ್ದಾಳೆ!

“”ಆ ಮರ ನೋಡಿದಾಗಲೆಲ್ಲ ನನ್ನ ಮಗ್ಳು ನೇಣು ಹಾಕಿಕೊಂಡ ಚಿತ್ರ ನೆನಪಿಗೆ ಬರುತ್ತೆ  ಕಣ್ರೀ… ಬೇಡಾ ಆ ಮರ” ಆ ಹುಡುಗಿಯ ಅಮ್ಮ ಶಾಸನ ಹೊರಡಿಸಿದರು. ಅಪ್ಪನಿಗೂ ಅದೇನು ಅನ್ನಿಸಿತೋ ಕೂಡಲೇ ಫೋನ್‌ ಮಾಡಿದ. ಮರುದಿನ ಎರಡು ಜನ ಬಂದವರು, ಮೆಷೀನು ಹಿಡಿದು ತಂದಿದ್ದರು. ಉದ್ದ ವೈರಿಗೆ ವಿದ್ಯುತ್‌ ಸಂಪರ್ಕ ಏರ್ಪಡಿಸಿದವರೇ, ನನ್ನ ಕಾಂಡದ ಸುತ್ತ ಅದರ ಹರಿತವಾದ ಬ್ಲೇಡು ಆಡಿಸಿ ಛೇದಿಸಿದರು. ಈ ಸಲ ದುಃಖವಾಗಲಿಲ್ಲ. ಆ ಹುಡುಗಿಯನ್ನು ಅವಳ ಲೋಕದಲ್ಲಿ ಸಂಧಿಸುವ ಖುಷಿಯಿತ್ತು. ಅವಳ ಅಸ್ತಿತ್ವದೊಂದಿಗೆ ನನ್ನದೂ ಕೂಡ ಈ ಭೂಮಿಯ ಮೇಲೆ ಅಳಿಸಿ ಹೋಗಿತ್ತು.

ವಿವೇಕಾನಂದ ಕಾಮತ್‌

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.