ಸುಬ್ಬು-ಶಾಲಿನಿ ಪ್ರಕರಣಂ-8
Team Udayavani, May 20, 2018, 9:39 AM IST
ಸಂಜೆ ಏಳು ಗಂಟೆಯಾದರೂ ಸುಬ್ಬು ಕಾರ್ಖಾನೆಯಲ್ಲೇ ಇದ್ದಾನೆ ಎನ್ನುವುದು ಕೇಳಿ ಅಚ್ಚರಿಯಾಯಿತು. ಸುಬ್ಬು ಎಂದೂ ಐದು ಗಂಟೆಯ ಮೇಲೆ ಕಾರ್ಖಾನೆಯಲ್ಲಿ ಇದ್ದುದೇ ಇಲ್ಲ. ಬೆಳಿಗ್ಗೆ ಹತ್ತಕ್ಕೆ ಮುಂಚೆ ಬಂದಿದ್ದೂ ಇಲ್ಲ. ಅಂಥವನು ಎಂಟಕ್ಕೇ ಬರುತ್ತಿದ್ದಾನಂತೆ. ಅಂತೆಕಂತೆಗಳನ್ನು ನಂಬದೆ ಫೋನಾಯಿಸಿದೆ.
“”ಏನೋ ಇದು ಆಶ್ಚರ್ಯ? ಆರು ಗಂಟೆಯಾಗಿದೆ ಇನ್ನೂ ಫ್ಯಾಕ್ಟ್ರೀಲೇ ಇದ್ದೀಯ?” ಅಚ್ಚರಿ ವ್ಯಕ್ತಪಡಿಸಿದೆ.
“”ಅದನ್ನ ಕೇಳ್ಳೋಕೆ ನೀನು ಯಾರು ದೊಣ್ಣೆ ನಾಯಕ? ಅಲ್ಲೇನು
ಕಡಿದು ಕಟ್ಟೆ ಹಾಕ್ತಿದ್ದೀಯ? ಬಾ ಟೀ ತರಿಸಿದ್ದೀನಿ”
ನೇರಮಾತು ಸುಬ್ಬುಗೆ ಬರುವುದೇ ಇಲ್ಲ. ವ್ಯಂಗ್ಯ, ಕುಹಕ ಅವನ ಸ್ಟೈಲು.
ನಾನೂ ಸುಬ್ಬು ಒಂದು ದೊಡ್ಡ ಕಾರ್ಖಾನೆಯಲ್ಲಿ ಇಂಜಿನಿಯರುಗಳು. ಒಂದೇ ಬೀದಿ, ಒಂದೇ ಸ್ಕೂಲು, ಒಂದೇ ಇಂಜಿನಿಯರಿಂಗ್ ಕಾಲೇಜು. ಒಂದೇ ಕಾರ್ಖಾನೆ. ಪುಣ್ಯಕ್ಕೆ ಬೇರೆ ಬೇರೆ ಇಲಾಖೆಗಳು.
“”ಏನೋ ಇದು ವಿಚಿತ್ರ? ಬೆಳಿಗ್ಗೆ ಎಂಟಕ್ಕೇ ಬರ್ತಿದ್ದೀಯಂತೆ? ಏಳಾದ್ರೂ ಮನೇಗೇ ಹೋಗ್ತಿಲ್ಲವಂತೆ” ಸುಬ್ಬುನ ಚೇಂಬರಿನಲ್ಲಿ ಟೀ
ಗುಟುಕರಿಸುತ್ತ ಕೇಳಿದೆ.
“”ನಿನಗೇನನ್ನಿಸುತ್ತೆ? ನಿನ್ನ ಬುದ್ಧಿಯನ್ನು ಉಪಯೋಗಿಸಿ ಹೇಳು.
ಇಡೀ ಫ್ಯಾಕ್ಟ್ರಿಯೆಲ್ಲಾ ನಿನ್ನ ಹೊಗಳುತ್ತೆ. ಎಲ್ಲವನ್ನೂ ಮುಂಚೇನೇ ಗ್ರಹಿಸ್ತೀಯಂತೆ? ಹಾಗಾದರೆ, ಈಗ ಹೇಳು ನನ್ನ ಈ ಬದಲಾವಣೆಗೆ ಏನು ಕಾರಣವಿರಬಹುದು?”
ಸುಬ್ಬು ಇಕ್ಕಟ್ಟಿಗೆ ಸಿಕ್ಕಿಸಲು ಪ್ರಯತ್ನಿಸಿದ. ಅವನ ವರಸೆಗೆ ಗಾಬರಿಯಾಗದೆ ನಿಧಾನಕ್ಕೆ ಯೋಚಿಸಿದೆ.
ಇದನ್ನ ಎಂತಾ ದಡ್ಡ ಬೇಕಾದ್ರೂ ಹೇಳ್ತಾನೆ”
“”ಶಾಲಿನಿಯತ್ತಿಗೆ ಜೊತೆ ಜಗಳ ಆಡಿದ್ದೀಯ?”
ನನ್ನ ಮಾತಿಗೆ ಸುಬ್ಬುನ ಮುಖ ವೋಲ್ಟೆಜು ಡ್ರಾಪ್ ಆದ ಬಲ್ಬಿನಂತೆ ಮಂಕಾಯಿತು.
“”ಎಷ್ಟು ದಿನ ಆಯ್ತು?”
“”ಇವತ್ತಿಗೆ ಐದನೆಯ ದಿವಸ”
“”ಕಾರಣ?”
“”ಉಪ್ಪಿಟ್ಟು”
“”ಏನು?” ನಂಬಲಾರದೆ ಕೇಳಿದೆ.
“”ಸೋಮವಾರ ಉಪ್ಪಿಟ್ಟಿನಿಂದ ಜಗಳ ಶುರುವಾಯ್ತು”
“”ಸರಿ ಅದೇನು ನೆಟ್ಟಗೆ ಹೇಳು. ಹೀಗೆ ತುಂಡು ತುಂಡಾಗಿ
ಹೇಳಿದರೆ ಹೇಗೆ ಅರ್ಥವಾಗಬೇಕು?”
“”ನಿನಗೆ ಯಾವತ್ತು ಬೇಗ ಅರ್ಥವಾಗಿತ್ತು ಹೇಳು.
ಸೋಮವಾರ ಬೆಳಿಗ್ಗೆ ತಿಂಡಿಗೆ ಶಾಲಿನಿ ಉಪ್ಪಿಟ್ಟು ಮಾಡಿದ್ದಳು”
“”ಅಷ್ಟಕ್ಕೇ ಜಗಳವಾ?”
“”ಹಿಂದಿನ ದಿನಾನೂ ಉಪ್ಪಿಟ್ಟು ಮಾಡಿದ್ದಳು”
“”ಒಂದಿಷ್ಟು ಅಡೆjಸ್ಟ್ ಮಾಡಿಕೊಂಡಿದ್ದರಾಗಿತ್ತು”
“”ಆದ್ರೆ ಶನಿವಾರಾನೂ ಉಪ್ಪಿಟ್ಟೇ ಮಾಡಿದ್ದಳು”
ಸುಬ್ಬು ವಿಹ್ವಲನಾಗಿ ನುಡಿದ. ಆಗಷ್ಟೇ ನನಗೆ ಸಮಸ್ಯೆಯ ಸ್ವರೂಪ ಅರ್ಥವಾಗಿದ್ದು! “”ಯಾರು ತಾನೇ ಒಂದೇ ಸಮನೆ ಮೂರು ದಿನ ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು ತಿಂದಾರು?”
“”ನಿನ್ನ ಮಕ್ಕಳು? ಪವನ ಮತ್ತು ಪಿಂಕಿ?”
“”ಪವನ ನನಗೆ ಎನ್‌ಸಿಸಿ ಇದೆ, ಅಲ್ಲೇ ತಿಂಡಿ ಕೊಡ್ತಾರೇಂತ ಹೋಗ್ತಿದ್ದಾನೆ, ಪಿಂಕಿ ನನ್ನ ಫ್ರೆಂಡ್ಸ್ ಮನೇಲಿ ಬ್ರೇಕ್‌ಫಾಸ್ಟ್‌ಗೆ ಕರೆದಿದ್ದಾರೆ ಅಂತ ಹೋಗ್ತಿದ್ದಾಳೆ”
“”ಜಾಣರು! ಅದ್ಸರಿ, ಅತ್ತಿಗೆ ಮೂರು ದಿವಸ ಒಂದೇ ಸಮನೆ ಉಪ್ಪಿಟ್ಟು ಮಾಡಿದ್ದು ಯಾಕೇಂತ?”
ಪರಿಸ್ಥಿತಿ ವಿಚಿತ್ರವಾಗಿತ್ತು.
“”ನಿಮ್ಮ ಪತಿ ನಿಮ್ಮನ್ನು ಪ್ರೀತಿಸುತ್ತಾರೋ ಇಲ್ಲವೋ ಎಂದು ತಿಳಿಯೋಕೆ ಈ ಮೆಥಡ್ ಅಂತೆ. ಇದನ್ನ ಶಾಲಿನಿಗೆ ಲೇಡೀಸ್ ಕ್ಲಬ್ಬಿನಲ್ಲಿ
ಹೇಳಿಕೊಟ್ಟರಂತೆ”
ಸುಬ್ಬು ಮಾತು ಕೇಳಿ ಮೂಕನಾದೆ. ಸದ್ಯ ನನ್ನವಳು ಒಂದು ತಿಂಗಳಿಂದ ಕ್ಲಬ್ಬಿಗೆ ಹೋಗಿರಲಿಲ್ಲ. ಹೋಗಿದ್ದರೆ ನನಗೆ ಕೂಡ ಇದೇ ಗತಿಯಾಗುತ್ತಿತ್ತು ಎನಿಸಿ ಒಳಗೊಳಗೇ ಬೆವರಿದೆ.
“”ಸರಿ ಮುಂದೇನು?”
“”ಇವತ್ತೇನೋ ಹೇಗೋ ಉಪ್ಪಿಟ್ಟು ತಿಂದು ಬಂದೆ. ನಾಳೆ ಖಂಡಿತ ತಿನ್ನಲಾರೆ. ತಿನ್ನದಿದ್ದರೆ ನನ್ನ ಪತಿ ನನ್ನನ್ನು ಪ್ರೀತಿಸೋದಿಲ್ಲಾಂತ ಶಾಲಿನಿ ಡಿಕ್ಲೇರ್
ಮಾಡ್ತಾಳೆ. ಲೇಡೀಸ್ ಕ್ಲಬ್ ಸದಸ್ಯರೆಲ್ಲ ಹೆಂಡತಿಯರನ್ನು ಪ್ರೀತಿಸದವರಿಗೆ ಶಿಕ್ಷೆ ಕೊಡ್ತಾರಂತೆ!”
“”ಶಿಕ್ಷೆ? ಏನಂತೆ?”
“”ಕೇವಲ ನೂರು ಗ್ರಾಂ ತೂಕದ ಕಾಸಿನ ಸರ ಕೊಡಿಸಿ ತಪ್ಪೊಪ್ಪಿಕೋಬೇಕಂತೆ”
“”ಕೊಡಿಸದಿದ್ದರೆ?”
“”ಆಜೀವ ಪರ್ಯಂತ ಉಪ್ಪಿಟ್ಟೇ ಗತಿ” ಸುಬ್ಬು ಕೊರಗಿದ.
ಪರಿಸ್ಥಿತಿಯ ಗಂಭೀರತೆಗೆ ಗಾಬರಿಯಾಯಿತು.
“”ಇದನ್ನ ಹೇಗೆ ನಿಭಾಯಿಸ್ತೀಯ?”
“”ನೀನೇ ಏನಾದ್ರೂ ಒಂದು ಉಪಾಯ ಮಾಡೋ? ದಿನಾ
ಉಪ್ಪಿಟ್ಟು ತಿನ್ನಲಾರೆ; ಅವಳಿಗೆ ಕಾಸಿನಸರ ಕೊಡಿಸಲಾರೆ!”
“”ನನ್ನ ಹಂಗಿಸ್ತೀಯ, ಮೂದಲಿಸ್ತೀಯ ಮತ್ತೆ ನನ್ನ ಸಲಹೇನೇ ಕೇಳ್ತೀಯ”
ಸಿಕ್ಕ ಅವಕಾಶ ಉಪಯೋಗಿಸಿಕೊಂಡೆ.
“”ನೀನೇನು ಬೃಹಸ್ಪತಿ ಅಲ್ಲ. ಅಪ್ಪಿತಪ್ಪಿ ನಿನ್ನ ಪ್ಲಾನುಗಳು ವರ್ಕ್ ಅಗ್ತವೆ ಅದಕ್ಕೇ ಕೇಳಿದೆ. ವåತ್ತೆ ನೀನು ಇಪ್ಪತ್ತು ಸಾವಿರ ಸಾಲ ಕೇಳಿದ್ದು ನೆನಪಿದೆಯಾ?”
ಸುಬ್ಬು ಧಮಕಿಗೆ ನಾನು ತಲೆಬಾಗಲೇಬೇಕಾಯಿತು. ಸುಬ್ಬು ನನ್ನ ಆರ್ಥಿಕ ಮುಗ್ಗಟ್ಟಿನ ಆಪದ್ಭಾಂಧವ!
“”ಆಯ್ತು ಯೋಚಿಸ್ತೇನೆ. ಒಂದ್ಗಂಟೆ ಟೈಮು ಕೊಡು”
“”ಸರಿ, ಅಲ್ಲೀವರೆಗೂ ನೀನು ಮನೆಗೆ ಹೋಗಕೂಡದು.
ನಿನ್ನ ದರಿದ್ರ ಪ್ಲಾನೊಂದು ಕೊಟ್ಟೇ ಮನೆಗೆ ಹೋಗಬೇಕು” ಸುಬ್ಬು ಎಚ್ಚರಿಸಿದ.
ಸುಬ್ಬು ಯಶಸ್ವಿಯಾಗಿ ತನ್ನ ತಲೆನೋವನ್ನು ನನಗೆ ವರ್ಗಾಯಿಸಿ ನಿಶ್ಚಿಂತನಾಗಿದ್ದ. ಸುಬ್ಬುವನ್ನು ಉಪ್ಪಿಟ್ಟು ಮತ್ತು ಕಾಸಿನ ಸರದಿಂದ ಬಚಾವು ಮಾಡಬೇಕಾಗಿತ್ತು. ಅದು ಹೇಗೆ ಸಾಧ್ಯವಾಗಬಹುದೆಂದು ಯೋಚಿಸತೊಡಗಿದೆ. ಸಮಯ ಹೋದದ್ದೇ ತಿಳಿಯಲಿಲ್ಲ. ಫೋನು ರಿಂಗಾಯಿತು. ಅದು ಸುಬ್ಬೂನೇ. ಅವನ ಸ್ವಭಾವವೇ ಹೀಗೇ. ಉಡದಂತೆ ಹಿಡಿದುಬಿಡುವ ಗುಣ!
“”ಐಡಿಯಾ ಬಂತಾ?”
“”ಬಂತು” ಸುಳ್ಳು ಸರಾಗವಾಗಿ ಮಾತನಾಡೋ ಬಾಯಿಂದ ಬಂತು! ನಿಜಕ್ಕೂ ಏನೊಂದು ಹೊಳೆಯದೆ ಹಣ್ಣಾಗಿದ್ದೆ. ಐದು ನಿಮಿಷದಲ್ಲಿ ಸುಬ್ಬು ನನ್ನ ಮುಂದೆ ಕೂತಿದ್ದ.
“”ಲೇಡೀಸ್ ಕ್ಲಬ್ ಪ್ರಸಿಡೆಂಟು ನಮ್ಮ ಜಿಎಮ್ಮು ಬಿಶ್ವಾಸ್ ಮಿಸೆಸ್ಸು
ಅಲ್ವಾ?”
“”ಹೌದು. ಅದರಿಂದೇನು ಪ್ರಯೋಜ°?”
“”ಪ್ರಯೋಜನ ಇದೆ. ಜಮ್ಮುವಿನಲ್ಲಿ ನಮ್ಮ ಹೊಸಾ ಪ್ರಾಡಕುr ಒಂದು ಸಾವಿರ ಗಂಟೆ ಕೆಲಸ ಮಾಡಿದೆ. ಅದರ ಸೆಲೆಬರೇಶನ್ನಿಗೆ ಬಿಶ್ವಾಸಿಗೆ ಇನ್ವಿಟೇಷನ್ ಕಳಿಸೋದಕ್ಕೆ ಏರ್ಪಾಡು ಮಾಡ್ತೀನಿ”
“”ಬಿಶ್ವಾಸ್ ಹೋದ್ರೆ ನಮ್ಮ ಮನೆ ಉಪ್ಪಿಟ್ಟಿನ ಪ್ರಾಬ್ಲಿಮ್ ಎಲ್ಲಾ ಸಾಲ್ವ ಆಗುತ್ತೆ. ಎಕರಪೆಕರಾಗಿ ಮಾತಾಡ್ತೀಯ”
“”ಬಿಶ್ವಾಸ್ ಒಬ್ಬನೇ ಹೋಗೊಲ್ಲ. ಜೊತೆಗೆ ಹೆಂಡತೀನೂ ಕರ್ಕೊಂಡು ಹೋಗ್ತಾನೆ. ಲೇಡೀಸ್ ಕ್ಲಬ್ ಪ್ರಸಿಡೆಂಟೇ ಇಲ್ಲದಿದ್ರೆ ಕಾಸಿನ ಸರದ ವಿಷಯ ಬಿದ್ದೇ ಹೋಗುತ್ತಲ್ಲಾ?”
“”ಆಕೆ ವಾಪಸು ಬಂದಾಗ?”
“”ಬಿಶ್ವಾಸ್ ಬರೋದ್ರಲ್ಲಿ ಹದಿನೈದು ದಿವಸ ಆಗಿರುತ್ತೆ?”
“”ಜಮ್ಮುವಿಗೆ ಫ್ಲೈಟ್‌ನಲ್ಲಿ ಹೋಗೋಕೆ ಒಂದು ದಿವಸ, ಅಲ್ಲೊಂದು ದಿವಸ, ವಾಪಸು ಬರೋಕೆ ಒಂದು ದಿವಸ. ಇಂಥ ತೋಪು ಐಡಿಯಾ ಕೊಡೋಕೆ ನೀನೇ ಬೇಕಾ?”
“”ಜಮ್ಮುವಿಗೆ ಹೋದರೆ, ಕಲಕತ್ತಾಗೆ ಹೋಗದೆ ಬರ್ತಾನ? ಎಲ್ಲಾ ಮುಗಿಸಿ ಬರೋದಕ್ಕೆ ಹದಿನೈದು ದಿನಗಳಾದ್ರೂ ಆಗಿರುತ್ತೆ. ಅಷ್ಟರಲ್ಲಿ ಉಪಿಟ್ಟಿನ ವಿಷಯ ಮರ್ತುಹೋಗಿರುತ್ತೆ. ಮಿಸೆಸ್ ಬಿಶ್ವಾಸ್‌ಗೆ ಹುಚ್ಚು ಮರೆವು. ತಮ್ಮ ಹೆಸ್ರನ್ನೇ ಅವ್ರು ಮರ್ತಿರ್ತಾರಂತೆ.” ತತ್‌ಕ್ಷಣಕ್ಕೆ ಹೊಳೆದದ್ದನ್ನ ಹೇಳಿದೆ. ಸಾವಧಾನವಾಗಿ ಕೇಳಿದ ಸುಬ್ಬು.
“”ಸರಿ, ಮನೇಲಿ ಉಪ್ಪಿಟ್ಟಿನ ವಿಷಯ?” “”ಅದಕ್ಕೂ ಐಡಿಯಾ ಇದೆ. ದಿನಾ ನಿನಗೆ ಉಪ್ಪಿಟ್ಟು ಮಾಡಿಕೊಡೋ ಅತ್ತಿಗೆ ತಾವೇನು ತಿನ್ತಾರೆ?”
“”ಅವಳು ಬೇರೆ ಮಾಡ್ಕೊàತಾಳೆ”
“”ಹಾಗಾದ್ರೆ, ಬೆಳಿಗ್ಗೆ ನೀನೊಬ್ಬನೇ ತಿಂಡೀಗೆ ಕೂರಬೇಡ. ಅತ್ತಿಗೇನೂ ಕರಿ. ಪ್ರೀತಿ ಅಂದ್ರೆ ಒನ್ ಸೈಡೆಡ್ ಅಲ್ಲ , ನೀನೂ ನನ್ನ ಜೊತೆ ತಿಂದರೇನೇ ಪರಸ್ಪರ ಪ್ರೀತಿಸ್ತಿದ್ದೀವಿ ಅಂತ ಅರ್ಥ ಅಂತ ಜೊತೇಲಿ ಕೂರಿಸಿಕೊಂಡು ಉಪ್ಪಿಟ್ಟೇ ತಿನ್ನೋ ಹಾಗೆ ಮಾಡು. ಮೂರು ದಿನದಲ್ಲಿ ಈ ಪ್ರಾಬ್ಲಿಮ್ ಸಾಲ್ವ ಆಗುತ್ತೆ” ದೇವರ ದಯೆ! ಎಲ್ಲಾ ನಾನು ಅಂದುಕೊಂಡಂತೆಯೇ ಅಯಿತು.
ಮಾರನೆಯ ದಿನ ಬಿಶ್ವಾಸ್ ಮೀಟಿಂಗ್ ಕರೆದು ತಾನು ಜಮ್ಮುವಿಗೆ ಹೋಗೋ ವಿಷಯ ತಿಳಿಸಿ ಅವರ ಗೈರಿನಲ್ಲಿ ಪ್ರೊಡಕ್ಷನ್ನು ಮತ್ತು ಕ್ವಾಲಿಟಿ ಮೈನ್‌ಟೈನ್ ಮಾಡಬೇಕೆಂದು ಹೇಳಿ ಮಧ್ಯಾಹ್ನವೇ ಹೊರಟರು. ಸುಬ್ಬು ಆ ಮೀಟಿಂಗಿನಲ್ಲೇ ಬಲಗೈ ಹೆಬ್ಬೆರಳನ್ನು ಮೇಲಕ್ಕೆತ್ತಿ ನನ್ನತ್ತ ನಗೆ ಬೀರಿದ್ದ.
ಎರಡು ದಿನ ನನಗೆ ಕೆಲಸದ ಹೊರೆ ಹೆಚ್ಚಿತ್ತು. ಸುಬ್ಬೂ ಉಸಾಬರಿಯೂ ಇರಲಿಲ್ಲ. ನನ್ನ ಕೆಲಸದಲ್ಲಿ ನಾನು ಮುಳುಗಿದ್ದೆ. ಮೂರನೆಯ ದಿನ ಬೆಳ್ಳಂಬೆಳಿಗ್ಗೆ ಅಂದರೆ ಫ್ಯಾಕ್ಟ್ರಿ ಶುರುವಾದ ಅರ್ಧ ಗಂಟೆಯಲ್ಲೇ ಸುಬ್ಬು ಡಿಪಾರ್ಟ್‌ಮೆಂಟಿಗೆ ಬಂದು “”ಇವತ್ತು ಬೆಳಿಗ್ಗೆ ಬ್ರೇಕ್‌ಫಾಸ್ಟ್ ಏನು ಗೊತ್ತಾ?” ಎಂದು ಕೇಳಿದ.
“”ನನಗೆ ಹೇಗೋ ಗೊತ್ತಾಗುತ್ತೆ?”
“”ಬಿಸಿಬೇಳೆ ಬಾತ್!”
ಅವನ ಮುಖದಲ್ಲಿ ನಗು, ಜೀವನದಲ್ಲಿ ಮೊದಲ ಸಲ ಸೆಂಚುರಿ ಹೊಡದ ಕ್ರಿಕೆಟ್ ದಾಂಡಿಗನ ಥರ ಇತ್ತು. ತತ್‌ಕ್ಷಣ ಉಪ್ಪಿಟ್ಟಿನ ವಿಷಯ ನೆನಪಾಯಿತು.
“”ನೋಡಿದೆಯಾ? ನಾನೆಷ್ಟು ಬ್ರಿಲಿಯಂಟು?” ಕೊಚ್ಚಿಕೊಂಡೆ.
“”ಸ್ಕೋಪ್ ತಗೋಬೇಡ. ಅಪರೂಪಕ್ಕೆ ನಿನ್ನ ತೋಪು ಐಡಿಯಾ ವರ್ಕ್ ಆಗಿದೆ ಅಷ್ಟೆ” ಎಂದು ಸುಬ್ಬು ಬಿರಬಿರನೆ ನಡೆದುಹೋದ.
ಎಸ್. ಜಿ. ಶಿವಶಂಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.