ಸುಬ್ಬು-ಶಾಲಿನಿ ಪ್ರಕರಣಂ-9
Team Udayavani, May 27, 2018, 7:00 AM IST
ಬುಸ್ ಬಾಸು ಬಿಶ್ವಾಸ್‌ನ ಮಗಳ ಮದುವೆ ರಿಸೆಪ್ಷನ್ನಿಗೆ ಸುಬ್ಬು ಬರುತ್ತೇನೆಂದಿದ್ದ. ಐಷಾರಾಮಿ ಚೌಲ್ಟ್ರಿಯಲ್ಲಿ ಎಲ್ಲೆಲ್ಲೂ ಜನ ! ಫ್ಯಾಕ್ಟ್ರಿ ಜನ, ಬಿಶ್ವಾಸ್ ಕಡೆ ನೆಂಟರು ಎಲ್ಲಾ ಜಮಾಯಿಸಿದ್ದರು. ಆದರೆ, ಸುಬ್ಬು ಮತ್ತು ಶಾಲಿನಿ ಅತ್ತಿಗೆ ಎಲ್ಲೂ ಕಾಣಲಿಲ್ಲ. ಆಗಲೇ ರಾತ್ರಿ ಎಂಟು ಗಂಟೆ. ವಧೂ-ವರರಿಗೆ ಶುಭಕೋರಲು ಆಗಲೇ ಅರ್ಧ ಕಿ. ಮೀ. ಉದ್ದ ಕ್ಯೂ. ವಧೂ-ವರರು ಕೇಳಿಸಿಕೊಳ್ಳದಿದ್ದರೂ ಶುಭಕೋರಿ, ಗಿಫ್ಟ್ಕೊಟ್ಟು, ಸ್ಮೈಲ್ ಕೊಟ್ಟು, ಊಟಕ್ಕೆ ಕ್ಯೂನಲ್ಲಿ ನಿಲ್ಲಬೇಕಿತ್ತು. ಈ ಎರಡೂ ಕ್ಯೂಗಳೂ ಮುಗಿಯುವಲ್ಲಿ ರಾತ್ರಿ ಹನ್ನೊಂದಾಗಬಹುದು ಅಂತನ್ನಿಸಿ ಗಾಬರಿಯಿಂದ ಕ್ಯೂನ ಕೊನೆಯಲ್ಲಿ ನಿಂತೆ.
ತಲೆಯ ಮೇಲೆ ಅತ್ತಿತ್ತ ತಿರುಗುತ್ತಿದ್ದ ವಿಡಿಯೋ ಕೆಮರಾದ ಕ್ರೇನು ಚಾಲನೆ ಮಾಡುತ್ತಿದ್ದ ಪಡ್ಡೆ ಹುಡುಗ ಹೊಸದಾಗಿ ಕೆಲಸಕ್ಕೆ ಸೇರಿದಂತಿತ್ತು. ಅವನ ಉತ್ಸಾಹಕ್ಕೆ ಯಾರ ತಲೆಬುರುಡೆ ಯಾವ ಕ್ಷಣದಲ್ಲಿ ಒಡೆಯುವುದೊ ಎಂಬ ಭಯ ಒಂದು ಕಡೆ. ದೂರ್ವಾಸನ ಅಪರಾವತಾರ ಚಡ್ಡಿದೋಸ್ತ್ ಸುಬ್ಬು ಸಿಗಲಿಲ್ಲ ಎಂಬ ಆತಂಕ ಮತ್ತೂಂದು ಕಡೆ. ಜನರ ಅನುಮಾನದ ನೋಟ ಎದುರಿಸುತ್ತ ಕ್ಯೂ ಉದ್ದಗಲ ಕಣ್ಣಾಡಿಸಿದೆ. ಇಲ್ಲ, ಸುಬ್ಬು, ಶಾಲಿನಿ ಅತ್ತಿಗೆ ಸುಳಿವೇ ಇರಲಿಲ್ಲ. ಆಶ್ಚರ್ಯ! ಬಿಶ್ವಾಸನ್ನು ಎಷ್ಟೇ ದ್ವೇಷಿಸಿದರೂ ಮದುವೆ ತಪ್ಪಿಸೋಲ್ಲ ಎಂದು ಸುಬ್ಬು ಕನ್‌ಫರ್ಮ್ ಮಾಡಿದ್ದ-ಅದೂ ಪತ್ನಿ ಸಮೇತ. ನನ್ನವಳು ಮಾತ್ರ ಖಡಕ್ಕಾಗಿ “ಬರೋಲ್ಲ’ ಎಂದಿದ್ದಳು. ನಾನು ಒಂಟಿಯಾಗಿದ್ದೆ.
ದೇವರದರ್ಶನಕ್ಕೆ ಕಾಯುವ ರೀತಿ ವಧೂವರರ ಕಾದುನಿಂತಿದ್ದೆವು. ನಮ್ಮ ಬಗ್ಗೆ ಕಿಂಚಿತ್ತೂ ಯೋಚನೆಯಿಲ್ಲದ ವಧೂವರರು ಫೋಟೋ ಶೂಟ್‌ನಲ್ಲಿ ಆನಂದಿಸುತ್ತಿದ್ದರು. ವಿಡಿಯೋದವರು, ಸ್ಟಿಲ್ ಫೋಟೋದವರು ವಧೂವರರನ್ನು ನಿರ್ದೇಶಿಸುತ್ತಿದ್ದರು. ಸಿನೆಮಾ ಹೀರೋ-ಹೀರೋಯಿನ್ನುಗಳು ಮಾಡಬಲ್ಲ, ಮಾಡಲು ಸಾಧ್ಯವಿಲ್ಲದ ವಿವಿಧ ಭಂಗಿಗಳಲ್ಲಿ ನಿಂತು, ಕೂತು, ತಬ್ಬಿ, ನೋಡುವವರನ್ನು ತಬ್ಬಿಬ್ಬು ಮಾಡುತ್ತಿದ್ದ ನವಜೋಡಿಗಳು ಚಿತ್ರೀಕರಣದಲ್ಲಿ ಶೃಂಗಾರಾನಂದದಲ್ಲಿದ್ದರು. ಮಧ್ಯೆ ಬಿಶ್ವಾಸ್ ಬಂದು ಎಲ್ಲರೆಡೆಗೆ ನಗೆ ಬೀರಿ “ಇನ್ನು ಕೆಲವೇ ನಿಮಿಷ’ ಎಂದು ಹೇಳಿ ಹೋದರು.
ಆಗಲೇ ಸುಮಾರು ಮುನ್ನೂರರಿಂದ ನಾನ್ನೂರು ಜನರಿದ್ದ ಕ್ಯೂನಲ್ಲಿ, ಮಳ್ಳರಂತೆ ನಡುವೆ ಸೇರುವವರೂ ಇದ್ದರು. ಅವರು ಬಾಸಿನ ನೆಂಟರಾಗಿದ್ದರೆೆ? ಈ ಅನುಮಾನದಿಂದ ಫ್ಯಾಕ್ಟ್ರಿ ಸಹೋದ್ಯೋಗಿಗಳು ಅವರನ್ನು ಉಗುಳ್ನಗೆಯಿಂದ ಸ್ವಾಗತಿಸುತ್ತಿದ್ದರು. “ಉಗುಳ್ನಗು’ ಎಂದರೆ ಭಯದಿಂದ ಉಗುಳು ನುಂಗುತ್ತ ನಗುವುದು! ನನ್ನ ಮುಂದೆ ಇಬ್ಬರು ಸಾಲಂಕೃತ ಹೆಂಗಸರಿಬ್ಬರು ಬಂದು ಸೇರಿದರು. ಅವರು ಬಾಸಿನ ಬಂಗಾಲಿ ಬಂಧುಗಳೆನ್ನಿಸಿ ನಾನೂ ಉಗುಳ್ನಕ್ಕೆ.
ಜೇಬಲ್ಲಿ ಮೊಬೈಲು ಅದುರಿತು. ಅರ್ಕೆಷ್ಟ್ರಾ ಗದ್ದಲದಲ್ಲಿ ರಿಂಗಾಗಿದ್ದು ಕೇಳಲಿಲ್ಲ. ಕಿವಿಗಿಟ್ಟುಕೊಂಡೆ. ಸುಬ್ಬು ದನಿ !
“”ಎಲ್ಲಿದ್ದೀಯಾ?” ಕೇಳಿದ.
“”ಕ್ಯೂನಲ್ಲಿ. ನೀನೆಲ್ಲಿ?”
“”ನಾನೂ ಕ್ಯೂನಲ್ಲಿ…”
“”ಮತ್ತೆ ಕಾಣಿಸ್ತಾನೇ ಇಲ್ಲ. ಹಿಂದಿದ್ದೀಯೋ? ಮುಂದಿದ್ದೀಯೊ?”
“”ಹಿಂದೆ”
“”ನಾನು ಮಧ್ಯ! ಬಫೆಯಲ್ಲಿ ಸಿಗು” ಎಂದು ಸುಬ್ಬು ಫೋನ್‌ಕಟ್ ಮಾಡಿದ.
ಅಂತೂ ಒಂಬತ್ತರ ಸಮಯಕ್ಕೆ ಕೊನೆಗೆ ವಧೂವರರು ವೇದಿಕೆ ಏರಿದರು. ಕ್ಯೂನಲ್ಲಿ ಸಾಗಿ ಹತ್ತಕ್ಕೆ ನಾನೂ ವೇದಿಕೆ ಏರಿದೆ. ನವ ದಂಪತಿಗೆ ಉಡುಗೊರೆ ನೀಡಿ ವಿಡಿಯೋಕ್ಕೆ ಪೋಸ್‌ಕೊಟ್ಟು ಊಟದ ಕ್ಯೂ ಸೇರಿದಾಗ ಹತ್ತೂವರೆ. ಸುಬ್ಬು ಅಲ್ಲೂ ಇರಲಿಲ್ಲ. ವಿಚಿತ್ರವೆನ್ನಿಸಿತು. ಇಷ್ಟೊಂದು ಜನರಲ್ಲಿ ಹೀಗಾಗುವುದು ಸಹಜ ಎಂದು ತಲೆಕೆಡಿಸಿಕೊಳ್ಳದೆ ಊಟ ಮುಗಿಸಿ ಮನೆ ಸೇರಿದಾಗ ಹನ್ನೊಂದೂವರೆಯಾಗಿತ್ತು.
ಮರುದಿನ ಫ್ಯಾಕ್ಟ್ರಿಯಲ್ಲಿ ಬಾಸು ಬಿಶ್ವಾಸ್ ಮಗಳ ಮದುವೆ ಬಗೆಗೆ ಅಲ್ಲಲ್ಲಿ ಮಾತುಗಳು ಕೇಳುತ್ತಿದ್ದವು.
“”ಮದುವೆಗೆ ಸುಬ್ಬು ಸಾರ್‌ಯಾಕೆ ಬರಲಿಲ್ಲ?” ಸುಬ್ಬು ಕೈಕೆಳಗೆ ಕೆಲಸ ಮಾಡುವ ಪಳನಿ ಅಸಿಸ್ಟೆಂಟು ಕೇಳಿದಾಗ ಕಸಿವಿಸಿಯಾಯಿತು.
“”ಫ್ಯಾಮಿಲಿ ಸಮೇತ ಬಂದಿದ್ರಲ್ಲ?” ಎಂದಿದ್ದಕ್ಕೆ ಅವನು ನಕ್ಕ.
“”ನಂಗೊತ್ತು ಸಾರ್. ಬಾಸ್‌ಗೂ, ಸುಬ್ಬು ಸಾರ್‌ಗೂ ಎಣ್ಣೆ ಸೀಗೇಕಾಯಿ. ಇದು ಫ್ಯಾಕ್ಟ್ರೀಗೇ ಗೊತ್ತಲ್ಲ ಸಾರ್. ಸುಮ್ನೆ ರೀಲುಬಿಡ್ಬೇಡಿ” ಎಂದು ಬಾಯಿ ಮುಚ್ಚಿಸಿದ ಫಟಿಂಗ ಪಳನಿ. ಇನ್ನೂ ನಾಲ್ಕಾರು ಜನ ಹೀಗೇ ಕೇಳಿದಾಗ ನಿಜಕ್ಕೂ ಚಿಂತೆಯಾಯಿತು. ಸುಬ್ಬು ಯಾಕೆ ಮದುವೆಯಲ್ಲಿ ಕಾಣಿಸಲಿಲ್ಲ ಎಂಬ ಯೋಚನೆ ಕಿರಿಕಿರಿಯಾಗಿ ಪರಿಪರಿಯಾಗಿ ಕಾಡಿತು. ಸುಬ್ಬು ಫ್ಯಾಕ್ಟ್ರಿಗೆ ಬಂದಿಲ್ಲ ಎನ್ನುವ ಸುದ್ದಿ ತಿಳಿಯಿತು. ಸುಬ್ಬು ಮೊಬೈಲಿಗೆ ಫೋನು ಮಾಡಿದೆ.
“”ಫ್ಯಾಕ್ಟ್ರಿಗೆ ಯಾಕೆ ಬಂದಿಲ್ಲ?”
“”ಎಲ್ಲಾ ವಿಷಯಾನೂ ನಿನಗೆ ಹೇಳ್ತೀನೀಂತ ಬರ್ಕೊಟ್ಟಿದ್ದೀನಾ?” ಸುಬ್ಬು ರೇಗಿದ. ವಿಚಿತ್ರ ಎನಿಸಿತು.
“”ಯಾಕೋ? ಏನಾಯ್ತು?” ಅವನ ಕೋಪವನ್ನು ತಣಿಸಲು ಪ್ರಯತ್ನಿಸಿದೆ.
“”ಎಡವಟ್ಟಾಯ್ತು. ತಲೆಕೆಟ್ಟೋಯ್ತು” ಸುಬ್ಬುದನಿ ಕೇಳಿದಾಗ ಅಳುತ್ತಿದ್ದಾನೆ ಎನ್ನಿಸಿತು.
“”ಇವತ್ತು ಫ್ಯಾಕ್ಟ್ರಿಗೆ ಬರ್ತಿàಯೋ ಇಲ್ಲವೋ?” ಎಂದೆ.
ಸಡನ್ನಾಗಿ ಪೋನ್ ಡಿಸ್ಕನೆಕ್ಟ್ ಮಾಡಿದ ಸುಬ್ಬು.
ಏನಾಗಿರಬಹುದೆಂಬ ಕಲ್ಪನೆ ಬರಲಿಲ್ಲ. ಎಡವಟ್ಟಾಯ್ತು, ತಲೆಕೆಟ್ಟೋಯ್ತು ಎಂದನಲ್ಲ ! ಯಾಕೆ ಹಾಗೆ ಹೇಳಿದ? ಯೋಚಿಸುತ್ತ ಸಂಜೆ ಸುಬ್ಬು ಮನೆಗೆ ಹೋಗಲು ತೀರ್ಮಾನಿಸಿ ಫ್ಯಾಕ್ಟ್ರಿ ಕೆಲಸದಲ್ಲಿ ಮುಳುಗಿದೆ.
ಸುಬ್ಬು ಮನೆ ಗೇಟು ತೆರೆಯುತ್ತಲೇ ಎಲ್ಲಿಂದಲೋ ಹಾರಿ ಬಂದ ಅವನ ನಾಯಿ ಸೀಜರ್ ಮೈಮೇಲೆ ಎಗರಿ ಬೀಳಿಸುವುದರಲ್ಲಿತ್ತು. ಸಾವರಿಸಿಕೊಂಡು ಅದನ್ನು ದೂರ ಸರಿಸಿ ಮನೆ ಪ್ರವೇಶಿಸಿದೆ.
“”ಇವತ್ತು ನಿನಗೆ ಪರಮಾನಂದವಾಗುತ್ತೆ ಬಾ!” ಎಂದಿನ ವ್ಯಂಗ್ಯದೊಂದಿಗೆ ಸುಬ್ಬು ಸ್ವಾಗತಿಸಿದ. ಸೋಫಾದಲ್ಲಿ ಮೈಚೆಲ್ಲಿ, ಟಿವಿಯಲ್ಲಿ ಕಣ್ಣಿಟ್ಟು ಹರಳೆಣ್ಣೆ ಕುಡಿದಂತಿದ್ದ ಸುಬ್ಬೂನ ದಿಟ್ಟಿಸಿದೆ.
“”ನೀವು ಮಾಡ್ಕೊಂಡ ಮೂರ್ಖತನಕ್ಕೆ ಅವರನ್ಯಾಕೆ ಬೈತೀರಾ?” ಶಾಲಿನಿ ಅತ್ತಿಗೆ ಸುಬ್ಬುವನ್ನು ಕುಟುಕಿದರು.
“”ಏನಾಯ್ತು? ಮದ್ವೆಗೆ ಬಂದಿದ್ಯೋ ಇಲ್ಲವೋ?” ಕೇಳಿದೆ.
ಆಗ ಶಾಲಿನಿಯತ್ತಿಗೆ, “”ಅಯ್ಯೋ… ನಿಮ್ಮ ಸ್ನೇಹಿತರನ್ನೇನು ಕೇಳ್ತೀರಾ? ಹೇಳ್ಳೋಕೋದ್ರೆ ಅವರ ಬಿಪಿ ರೈಸಾಗಿ ದೂರ್ವಾಸಾರಾಗಿ ಬಿಡ್ತಾರೆ, ನಾನೇ ಹೇಳ್ತೀನಿ. ನೆನ್ನೆ ಏಳೂ ನಲವತ್ತೆ„ದಕ್ಕೆ ಸರಿಯಾಗಿ ಚೌಲಿó ತಲುಪೊª. ಐದ್ವರ್ಷದ ಹಿಂದೆ ಹೋದಾಗ ಅಲ್ಲಿ ಒಂದೇ ಚೌಲಿó ಇತ್ತು. ಈಗ ಅಲ್ಲಿ ಪಕ್ಕಪಕ್ಕದಲ್ಲೇ ಇನ್ನೂ ಎರಡು ಚೌಲಿóಗಳು. ಜೊತೆಗೆ ಒಂದು ಐಷಾರಾಮಿ ಹೊಟೇಲು. ನಾವು ಹಿಂದೆ ಹೋದ ಚೌಲಿó ಸ್ವಲ್ಪ$ಕನ್‌ಫ್ಯೂಸ್ ಆಯ್ತು. ಇವರು ಇದೇ ಚೌಲಿó ಅಂತಾ ಕರ್ಕೊಂಡು ಹೋದ್ರು. ವಿಪರೀತ ಜನ. ಹೋದ ತಕ್ಷಣ ಕ್ಯೂನಲ್ಲಿ ನಿಂತುಕೊಂಡು ವೇದಿಕೆ ಮೇಲೆ ಹೋಗೋದನ್ನ ಕಾಯ್ತಾ ಇದ್ದೊ!” ಎಂದರು.
“”ಅಷ್ಟ್ರಲ್ಲೇ ನಿನ್ನ ಫೋನು ಬಂತು. ನೀನು ಕ್ಯೂನಲ್ಲಿ ಹಿಂದೆ ನಿಂತಿದ್ದೀನಿ ಅಂತ ಹೇಳಿದೆ” ಸುಬ್ಬು ಮೂಗು ತೂರಿಸಿದ.
“”ಸರಿ, ಕ್ಯೂನಲ್ಲಿ ಹಾಗೇ ಮುಂದೆ ಹೋಗುತ್ತಿದ್ದೆವು. ಸ್ಟೇಜಿಗೆ ಎತ್ತರದ ಎಂಟು ಮೆಟ್ಟಿಲು. ಇವರ ಬಾಲ್ಡಿ ಬಾಸು ಬಿಶ್ವಾಸ್ ಕಾಣಿಸಲಿಲ್ಲ. ಎಲ್ಲೋ ಬಿಜಿಯಾಗಿರಬೇಕು ಅಂದೊRಂಡೆ. ಹೆಣ್ಣಿನ ತಂದೆ ಅಂದ್ರೆ ನೂರಾರು ಕೆಲಸ ಇರುತ್ತಲ್ವ?” ಸುಬ್ಬು ವಿವರಿಸಿದ.
“”ಆಮೇಲೆ?”
ಶಾಲಿನಿಯತ್ತಿಗೆ ಮುಂದುವರಿಸಿದರು,””ಆಮೇಲೇನು? ಮೆಟ್ಟಿಲು ಹತ್ತೋವಾಗ ಜನರ ತಲೆಗಳು ಕಾಣುತ್ತಿದ್ದವಷ್ಟೆ! ಎಂಟನೆ ಮೆಟ್ಟಿಲು ಹತ್ತಿದಾಗಲೇ ಸಡನ್ನಾಗಿ ಷಾಕ್ ಆಯ್ತು”
ಶಾಲಿನಿ ಅತ್ತಿಗೆ ಮಾತು ನಿಲ್ಲಿಸಿ ಸುಬ್ಬು ಮುಖ ನೋಡಿದರು. ಏನೋ ಸಸ್ಪೆನ್ಸ್ ಇದೆ ಎನ್ನಿಸಿತು.
“”ಏನು?” ಕ್ಲೈಮಾಕ್ಸ್ ಕೇಳಲು ಅತುರಿಸಿದೆ.
“”ಹೇಳ್ಳೋವರೆಗೂ ಜೀವ ಹಿಡ್ಕೊಂಡಿರು. ಆತುರದಲ್ಲೇ ಜೀವ ಸವೆಸ್ತಿದ್ದೀಯ. ಬಾಸುಗಳು ಹೇಳ್ಳೋಕು¾ಂಚೇನೆ ಕೆಲ್ಸ ಮಾಡ್ತೀಯ.ಎಲ್ಲಾರ ಹತ್ರ ಭೇಷ್ ಅನ್ನಿಸಿಕೊಂಡು ಸಾಯ್ತಿದ್ದೀಯ. ಯಾರನ್ನಾದರೂ ಎದುರಿಸೋ ಧೈರ್ಯ ಯಾವತ್ತಾದೂ ಮಾಡಿದ್ದೀಯ?” ಕಾರಣವೇ ಇಲ್ಲದೆ ಸುಬ್ಬು ಕಿಡಿಕಾರಿದ. ಅವನ ದಶಾವತಾರ ಕಂಡಿದ್ದ ನನಗೆ ಇದು ಹೊಸದಾಗಿರಲಿಲ್ಲ.
“”ಆಮೇಲೇನಾಯ್ತು?” ಸುಬ್ಬು ಮಾತಿಗೆ ಸೊಪ್ಪು ಹಾಕದೆ ಬೆಪ್ಪನಂತೆ ಮತ್ತೆ ಕೇಳಿದೆ!
“”ಆಮೇಲಿನ್ನೇನು? ಅದು ಬೇರೆಯಾರಧ್ದೋ ಮದುವೆ! ವಧೂವರರ ಜೊತೆ ಇದ್ದವರು ಬಿಶ್ವಾಸ್ ಮತ್ತು ಅವರ ಹೆಂಡ್ತಿ ಸ್ವರೂಪರಾಣಿ ಅಲ್ಲ”
“”ಓ… ಮೈಗಾಡ್! ಮತ್ತೆ…”
ಅತ್ತಿಗೆ ಮುಂದುವರಿಸಿದರು, “”ನಮ್ಮ ಹಿಂದಿದ್ದವರು ನಮ್ಮನ್ನ ಮುಂದೆ ತಳ್ಳಿದರು. ಅಚಾನಕ್ಕಾಗಿ ನಾವು ಗೊತ್ತಿಲ್ಲದ ಹೊಸ ಜೋಡಿ ಮುಂದೆ ನಿಂತಿಧ್ದೋ”
“”ಕಾಸ್ಟ್‌ಲೀ ಗಿಫುr ಇಲೆಕ್ಟ್ರಿಕ್ ಕುಕ್ಕರ್ ಕೈಲಿತ್ತು” ಸುಬ್ಬು ಕನವರಿ ಸಿದ, “”ಅಷ್ಟು ದೊಡ್ಡ ಗಿಫ್ಟ್.
ಮುಚ್ಚಿಟ್ಟುಕ್ಕೊಳ್ಳೋಕೂ ಆಗ್ತಿರಲಿಲ್ಲ. ಅದನ್ನ ಗೊತ್ತಿಲ್ಲದ ವಧುವಿನ ಕೈಗಿಟ್ಟು, ಗೊತ್ತಿಲ್ಲದ ಹೆಣ್ಣಿನ ತಂದೆ- ತಾಯಿಗಳ ಮುಂದೆ ಪೆಚ್ಚುಪೆಚ್ಚಾಗಿ ನಕ್ಕು ಶುಭಕೋರಿ ಸ್ಟೇಜು ಕೆಳಗಿಳಿದೆವು”. ಸುಬ್ಬು ಕಣ್ಣಲ್ಲಿ ಒಂದು ಹನಿ ನೀರೂ ಕಂಡಿತು.
“”ಅಂದ್ರೆ ನೀವು ಬಿಶ್ವಾಸ್ ಮಗಳ ಮದುವೆಗೆ ಬರಲೇ ಇಲ್ಲ!”
“”ಯಾರದೋ ಮದ್ವೆಗೋಗಿ ಬಂದೊ…ಆಗ್ಲೆà ಟೈಮು ಹತ್ತಾಗಿತ್ತು. ಗಿಫೂr ಕೈಬಿಟ್ಟಿತ್ತು. ಇನ್ನು ಬಾಸ್ ಮಗಳ ಮದ್ವೆಗೆೆ ಬರಿಗೈಲಿ ಹೇಗೆ ಹೋಗೋದೂಂತ ತೆಪ್ಪಗೆ ಹಿಂದಕ್ಕೆ ಬಂದೊ” ಸುಬ್ಬೂನೇ ಕೈಮ್ಯಾಕ್ಸ್ ಹೇಳಿದ.
“”ಮತ್ತೆ ಊಟ?” ಕೇಳಿದೆ.
“”ಅಷ್ಟು ಕಾಸ್ಟ್‌ಲೀ ಗಿಫ್ಟ್ಕೊಟ್ಟು ಸುಮ್ಮನೆ ಬರೋಕಾಗುತ್ತಾ? ಚೆನ್ನಾಗಿ ಬಾರಿಸಿ ಬಂದೆ” ಸುಬ್ಬು ಹೆಮ್ಮೆಯಿಂದ ಹೇಳಿದ.
“”ನಾಚಿಕೆಯಿಲ್ಲದವರು” ಅತ್ತಿಗೆ ಬೈದರು.
“”ನಾಳೆ, ಬಿಶ್ವಾಸ್‌ನ್ನು ಹೇಗೆ ಮ್ಯಾನೇಜ್ ಮಾಡ್ತಿಯೋ?”
“”ಆ ಬಾಲ್ಡೀನ ಹೇಗಾದ್ರೂ ಮ್ಯಾನೇಜ್ ಮಾಡ್ತೀನಿ. ನಿನ್ನ ಬಾಯಿ ಮ್ಯಾನೇಜ್ ಮಾಡೋದೇ ಕಷ್ಟ . ಈ ವಿಷ್ಯ ಫ್ಯಾಕ್ಟ್ರೀಲಿ ಯಾರಿಗಾದ್ರೂ ಹೇಳಿದ್ರೆ ಹಲ್ಲುದುರಿಸಿಬಿಡ್ತೀನಿ” ಸುಬ್ಬು ಗುಡುಗಿದ. ನಾನು ನಡುಗಿದೆ.
ಎಸ್. ಜಿ. ಶಿವಶಂಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.