ಸುಬ್ಬು-ಶಾಲಿನಿ ಪ್ರಕರಣಂ-12
Team Udayavani, Jun 17, 2018, 10:45 AM IST
ಫೋನ್ ಮಾಡಿದಾಗ ಸುಬ್ಬೂ ಅವನು ಲಂಚ್‌ಗೆ ಮುಂಚೆಯೇ ಮನೆಗೆ ಹೋಗಿದ್ದು ತಿಳಿಯಿತು. ನನ್ನ ಚಡ್ಡಿ ದೋಸ್ತ್ ಸುಬ್ಬು ಯಾನೆ
ಸುಭಾಷ್ ಬೇಗನೆ ಮನೆಗೆ ಹೋಗಲು ಕಾರಣ ಏನಿರಬಹುದೆಂದು ಯೋಚಿಸಿದೆ. ಮರುಕ್ಷಣ, “ನಾಳೆ ಸಂಜೆ ಟೀಗೆ ದಂಪತಿ ಸಮೇತ ಬರಬೇಕು! ತಪ್ಪಿಸಿಕೊಂಡ್ರೆ ನಿನ್ನ ದಂತಪಂಕ್ತಿ ಉಳಿಯೋದಿಲ್ಲ’ ಎಂದು ಸುಬ್ಬು ಧಮಕಿ ಹಾಕಿದ್ದು ನೆನಪಾಯಿತು. ಸುಬ್ಬು ಮಾತಂದ್ರೆ ಒರಟು, ವ್ಯಂಗ್ಯ! ನನ್ನನ್ನು ಜನ್ಮಜನ್ಮಾಂತರದ ಶತೃ ಎಂದೇ ನಂಬಿದ್ದಾನೆ.
“”ಎಷ್ಟು ಜನರನ್ನ ಕರೆದಿದ್ದೀಯ?” ಕೇಳಿದ್ದೆ.
“”ನಾನು ನನ್ನ ಎಲ್ಲಾ ಶತ್ರುಗಳನ್ನು ಕರೆದಿದ್ದೇನೆ. ಶಾಲಿನಿ ಲೇಡೀಸ್
ಕ್ಲಬ್ ಫ್ರೆಂಡ್ಸನ್ನೂ ಕರೆದಿದ್ದಾಳೆ” ಸುಬ್ಬು ವಿವರಣೆ ಕೊಟ್ಟಿದ್ದ.
“”ನನ್ನನ್ನು ಶತ್ರುಗಳ ಲಿಸ್ಟಿಗೆ ಸೇರಿಸಿಬಿಟ್ಟಿದ್ದೀಯ?” ಗಾಬರಿಯಿಂದ ಕೇಳಿದ್ದೆ!
“”ನೀನು ಯಾವಾಗ ಮಿತ್ರನಾಗಿದ್ದೆ?” ಸುಬ್ಬು ಬಾಯಿ ಮುಚ್ಚಿಸಿದ್ದ.
ಸುಬ್ಬು ಶತ್ರು ಎಂದರೂ ಅದರ ಅರ್ಥ ಮಿತ್ರ ಎಂದೇ. ನಾವು ಮಿಡ್ಲ್ ಸ್ಕೂಲಿನಲ್ಲಿ ಓದುವಾಗ ಚಂಡಿಕತೆ ಅಂತ ಒಂದು ಪಾಠ ಇತ್ತು. ಅದರಲ್ಲಿ ಚಂಡಿ ಎನ್ನುವ ಒಬ್ಬ ಋಷಿಯ ಪತ್ನಿ, ಪತಿ ಹೇಳಿದ್ದಕ್ಕೆಲ್ಲಾ ವಿರುದ್ಧವಾಗಿ ಮಾಡುತ್ತಿದ್ದಳಂತೆ. ಆಗ ಆ ಋಷಿ ವಿರುದ್ಧವಾದುದನ್ನೇ
ಹೇಳುತ್ತಾ ತನ್ನ ಕೆಲಸಗಳನ್ನು ಮಾಡಿಸಿಕ್ಕೊಳ್ಳುತ್ತಿದ್ದನಂತೆ. ಆ ಚಂಡಿಯೇ ಈಗ ಪುನರ್ಜನ್ಮ ತಳೆದಿರಬೇಕೆಂದು ನನಗೆ ಆಗಾಗ್ಗೆ ಅನ್ನಿಸುತ್ತಿತ್ತು. ಆ ಚಂಡಿ ಹೆಣ್ಣಾಗಿದ್ದು ಈಗ ಸುಬ್ಬುವಾಗಿರಬಹುದು. ಒಳಗೆ ಸುಳಿವಾತ್ಮ ಹೆಣ್ಣೂ ಅಲ್ಲ , ಗಂಡೂ ಅಲ್ಲ ಎಂದ ಹನ್ನೆರಡನೆಯ ಶತಮಾನದ ಶಿವಶರಣೆಯೊಬ್ಬಳ ವಚನ ನೆನಪಾಗಿತ್ತು. ಮನೆಯಲ್ಲಿ ಸುಮಾರು ಮೂವತ್ತು ಜನಕ್ಕೆ ಟೀ-ಪಾರ್ಟಿ
ಇಟ್ಟುಕೊಂಡಿರುವುದರಿಂದ ಸುಬ್ಬೂಗೆ ಸಹಾಯ ಬೇಕಾಗಬಹುದು ಎಂದು ಯೋಚಿಸಿ ಸಂಜೆ ಅವನ ಮನೆಗೆ ಹೋಗಲು ನಿರ್ಧರಿಸಿದೆ.
ಸಂಜೆ ಮಾಮೂಲಿಗಿಂತ ಬೇಗನೆ ಫ್ಯಾಕ್ಟ್ರಿಯಿಂದ ಹೊರಟೆ!
ಆಗಲೇ ಬಾಸು ಫೋನಿನಲ್ಲಿ ಬುಸುಗುಟ್ಟಿತು. ಅವರಿಗೆ ಸಮಂಜಸ ಉತ್ತರ ನೀಡಿ ಫ್ಯಾಕ್ಟ್ರಿ ಗೇಟಿನ ಬಳಿ ಬಂದಾಗಲೂ ಎದೆಯಲ್ಲಿ ಅವಲಕ್ಕಿ ಭತ್ತ ಕುಟ್ಟುತ್ತಿತ್ತು. ಮತ್ತೆ ಬಾಸು ವಾಪಸು ಕರೆಯಬಹುದು ಎಂದು ಅಧೀರತೆಯಿಂದಲೇ ಗೇಟಿನ ಆಚೆ ಬಂದು ನಿಟ್ಟುಸಿರಿಟ್ಟೆ.
ಸುಬ್ಬು ಮನೆ ಬಾಗಿಲಲ್ಲಿ ನಿಂತಾಗ ವಾತಾವರಣ ಬಿಸಿಯಾಗಿರುವಂತಿತ್ತು. ಒಳಗೆ ಶಾಲಿನಿ ಅತ್ತಿಗೆ ಜೋರುದನಿಯಲ್ಲಿ ಮಾತಾಡುತ್ತಿರುವುದು ಕೇಳಿಸಿತು. ಮರುದಿನದ ಟೀಪಾರ್ಟಿ ಸಂಬಂಧ ಇರಬಹುದೆನಿಸಿ ಮನೆಯೊಳಗೆ ಕಾಲಿಟ್ಟೆ.
ತಲೆಯ ಮೇಲೆ ಕೈಹೊತ್ತು ಸೋಫಾದಲ್ಲಿ ಕೂತಿದ್ದ ಸುಬ್ಬು. ಶಾಲಿನಿ ಅತ್ತಿಗೆ ಸುಬ್ಬುವನ್ನು ಬಾಣಲೆಯಲ್ಲಿ ಹುರಿಯುತ್ತಿದ್ದರು.
“”ನನ್ನ ಮಾನ ಹೋಗ್ತಿದೆ! ನೋಡಿ ಸಂತೋಷಪಡೋಕೆ ಬಂದಿದ್ದೀಯ? ನಿನ್ನನ್ನು ಯಾರು ಕರೆಸಿದ್ದರು” ಸುಬ್ಬು ರವಕ್ಕನೆ
ರೇಗಿದ.
ಸುಬ್ಬುವಿನ ಎಂತಹ ಕಟಕಿಗೂ ಎಂದೂ ನಲುಗದ ನನ್ನ ಆತ್ಮಾಭಿಮಾನ ಒಮ್ಮೆಲೇ ಭುಗಿಲೆದ್ದಿತು. ಇಷ್ಟು ಅನ್ನಿಸಿಕೊಂಡ
ಮೇಲೆ ಇಲ್ಲೇಕಿರಬೇಕು ಎಂದು ವಾಪಸು ಹೋಗಲು ತಿರುಗಿದೆ.
“”ಇವರ ಬುದ್ಧಿ ನಿಮಗೆ ಗೊತ್ತಲ್ಲ. ಹೋಗ್ಬೇಡಿ… ಬನ್ನಿ…” ಶಾಲಿನಿ ಅತ್ತಿಗೆ ಕರೆದರು.
ಸುಬ್ಬು ಹೋಗೆನ್ನುತ್ತಿದ್ದಾನೆ. ಅತ್ತಿಗೆ ಬಾ ಎನ್ನುತ್ತಿದ್ದಾರೆ. ಏನು
ಮಾಡಲಿ? ಇತ್ತದರಿ… ಅತ್ತ ಪುಲಿ. ಗೊಂದಲದಲ್ಲಿ ಸಿಕ್ಕಿದೆ.
“”ಶಾಲಿನಿ ನನ್ನ ಮಾನ ಹರಾಜು ಮಾಡ್ತಿದ್ದಾಳೆ! ನೀನೂ ಬಿಡ್
ಮಾಡುವಿಯಂತೆ ಬಾ” ಎಂದು ಸುಬ್ಬು ಆಹ್ವಾನಿಸಿದ.
ನಾಳೆ ಟೀಗೆ ಸಿದ್ಧತೆ ಮಾಡೋದು ಬಿಟ್ಟು ಹೀಗೆ? ಕಚ್ಚಾಡ್ತಿದ್ದೀರಿ
ಎನ್ನುವುದನ್ನು ನುಂಗಿಕೊಂಡು ಧೈರ್ಯದಿಂದ ಮಾತಾಡಿದೆ. ಸುಬ್ಬು
ನನ್ನ ವಿರುದ್ಧ ಇದ್ದರೂ ಶಾಲಿನಿ ಅತ್ತಿಗೆ ನನ್ನ ಪರ ಇರೋದು ಧೈರ್ಯ
ಬಂದಿತ್ತು.
“”ನೋಡೇ, ಇವನೂ ಹೇಳ್ತಿದ್ದಾನೆ… ಯಾಕೆ ಹೀಗೆ ಅವಾಜ್ ಹಾಕ್ತಿದ್ದೀಯ. ತಪ್ಪು ಮಾಡಿದವರಿಗೆ ತಿದ್ದಿಕ್ಕೊಳ್ಳೋಕೆ ಕಾನೂನೂ
ಅವಕಾಶ ಕೊಡುತ್ತೆ. ನೀನು ಮಾತ್ರ” ಸುಬ್ಬು ಮಾತೆಳೆದ. “”ಹೌದು, ನಾನು ಅವಕಾಶ ಕೊಡೊಲ್ಲ. ಮದ್ವೆಯಾಗಿ ಇಪ್ಪತ್ತೆ„ದು
ವರ್ಷ. ಇಷ್ಟೂ ವರ್ಷ ಬೆಪ್ಪುತಕ್ಕಡಿ ಹಾಗೆ ತಪ್ಪು ಮಾಡ್ತಾನೇ ಇದ್ದೀರಾ. ಇನ್ಯಾವಾಗ ಸರಿ ಮಾಡ್ಕೊàತೀರಾ? ನೋಡಿ ಈ ಹೂವು ನೋಡಿ. ನಾಳೆ ಟೀನಲ್ಲಿ ಹೆಂಗಸರಿಗೆ ಕೊಡೋಕೆ ಹೂ ತನ್ನೀಂದ್ರೆ ಮಾರ್ಕೆಟ್ಟಿಂದ ಬಾಡಿದ ಹೂವು ತಂದಿದ್ದಾರೆ. ಇಂಜಿನಿಯರ್ ಬೇರೆ.”
ಅತ್ತಿಗೆ ಮಾತಿಗೆ ನನಗೂ ಕಸಿವಿಸಿ. ನಾನು ಕೂಡ ಇಂಜಿನಿಯರೇ. ಸುಬ್ಬು, ನಾನು ಒಟ್ಟಿಗೆ ಒಂದೇ ಕಾಲೇಜು. ಒಂದೇ ವರ್ಷ. ಹಿಂದು-ಮುಂದಲ ಬೀದೀಲಿ ಮನೆ. ಒಂದೇ ಕಾರ್ಖಾನೆ. ಪುಣ್ಯಕ್ಕೆ ಬೇರೆ ಬೇರೆ ಇಲಾಖೆಗಳ ಹೆಡ್ಡುಗಳು. ಅತ್ತಿಗೆಮಾತಿಗೆ ಉಗುಳು ನುಂಗಿದೆ.
“”ಹೂವಿನವನು ಕತ್ತಲೆ ಇರೋ ಜಾಗದಲ್ಲಿ ಇಟ್ಕೊಂಡಿದ್ದ. ನನಗೂ ಸರಿಯಾಗಿ ಕಾಣಲಿಲ್ಲ” ಸುಬ್ಬು ವಿವರಣೆ ನೀಡಿದ.
“”ನಿಮ್ಮ ಹರಿಕತೆ ಬೇಕಿಲ್ಲ. ನೋಡಿ, ಈ ಹೂವನ್ನು ಯಾರಿಗಾದ್ರೂ ಕೊಡೋಕಾಗುತ್ತಾ? ನೀವೇ ಹೇಳಿ” ಅತ್ತಿಗೆ ನೇರ ನನ್ನನ್ನೇ ಕೇಳಿದಾಗ ಹಣೆ ಬೆವರಿಟ್ಟಿತು. “ಇಲ್ಲ’ ಎಂದರೆ ಸುಬ್ಬೂನ ಕತ್ತರೀಲಿ ಸಿಕ್ಕಿಸಿದ ಹಾಗಾಗುತ್ತೆ. ಅತ್ತಿಗೆ ವಿರುದ್ಧವಾಗಿ ಮಾತಾಡುವುದೂ ಸಾಧ್ಯವಿರಲಿಲ್ಲ. ಯಾಕಾದರೂ ಇಲ್ಲಿಗೆ ಬಂದೆ? ನನ್ನನ್ನು ಶಪಿಸಿಕೊಂಡೆ. “”ಸರಿ, ಎಷ್ಟು ಕೊಟ್ರಿ ಕಸದಂತಿರೋ ಹೂವಿಗೆ?” ಅತ್ತಿಗೆ
ಗದರಿಸಿದರು. “”ಮಾರಿಗೆ ಎಂಬತ್ತು” “”ಬಡ್ಕೊàಬೇಕು. ಅದೇನು ಫ್ಯಾಕ್ಟ್ರೀಲಿ ಕೆಲಸ ಮಾಡ್ತೀರೋ? ಆ ಫ್ಯಾಕ್ಟ್ರಿ ಅದು ಹೇಗೆ ಲಾಭ ಮಾಡ್ತಿದೆಯೋ ದೇವರಿಗೇ ಗೊತ್ತು” “”ನಾಳೆ ಟೀ ಎಷ್ಟೊತ್ತಿಗೆ?” ಮಾತು ಬದಲಿಸಲು ಪ್ರಯತ್ನಿಸಿದೆ.
“”ಏಳಕ್ಕೆ ಕ್ಯಾಟರಿಂಗಿನವರು ಬರ್ತಿನೀಂದಿದ್ದಾರೆ”
“”ನಾಳೆ ಬೆಳಿಗ್ಗೆ ಎಂಟಕ್ಕೇ ನಾನೂ ಸುಬ್ಬೂ ಹೋಗಿ ಹೂವು ತರ್ತಿವಿ”
“”ನಿಮ್ಮ ಫ್ರೆಂಡ್‌ನ ಮಾರ್ಕೆಟ್ಟಿಗೆ ಕರ್ಕೊಂಡು ಹೋದ್ರೆ ಇಲ್ಯಾರು ಕೆಲಸ ಮಾಡೋರು? ನನ್ನ ಹೆಣ ಬಿಧ್ದೋಗುತ್ತೆ”
ಶಾಲಿನಿ ಅತ್ತಿಗೆಯ ಮಾತೆಂದರೆ ಜೋಗಜಲಪಾತದ ರಭಸ.
“”ನನ್ನನ್ನ ಹಂಗಿಸೋ ಬದಲು ನೀನೂ ಬಂದಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ”
ಸುಬ್ಬು ಕನಲಿದ.
“”ಎಲ್ಲಾ ನಾನೇ ಮಾಡ್ತಿದ್ರೆ ನೀವು ಕ್ಲಬ್ಬಲ್ಲಿ ಎಣ್ಣೆ ಹೊಡ್ಕೊಂಡು ಕೂತ್ಕೊàತೀರಾ. ಸ್ವಲ್ಪ ಮೈಬಗ್ಗಿಸಲಿ ಅಂದ್ರೆ ಹೀಗೆ ಅಧ್ವಾನ ಮಾಡ್ಕೊಂಡು ಬರ್ತಿರಿ. ನಮ್ಮಪ್ಪಎಂತಾ ತಪ್ಪು ಮಾಡಿ ನಿಮಗೆ ಕಟ್ಟಿಬಿಟ್ಟ” ಅತ್ತಿಗೆ ಕಣ್ಣಲ್ಲಿ ನೀರು ಪುಳಕ್ಕೆಂದಿತು.
ದಂಪತಿಗಳ ಜಗಳದ ನಡುವೆ ಸಿಕ್ಕಿಕೊಂಡೆನಲ್ಲ ಎಂದು ಪೇಚಾಡಿದೆ. ಸುಬ್ಬೂ ಪರವಹಿಸಲಾಗದೆ, ಅತ್ತಿಗೆಯ ಸಿಡಿಗುಂಡಿನ ಮಾತುಗಳಿಗೆ ಕಿವಿಗೊಡಲಾಗದೆ ಒದ್ದಾಡಿದೆ.
“”ಅಚಾನಕ್ ಟೀ ಇಟ್ಕೊಂಡಿದ್ದೀರಲ್ಲ ಏನು ವಿಶೇಷ?” ಮಾತು ಬದಲಿಸಿ ಜಗಳಕ್ಕೆ ಮಂಗಳ ಹಾಡುವ ಪ್ರಯತ್ನ ಮಾಡಿದೆ.
“”ವಿಶೇಷ ಅಲ್ಲ… ಸಶೇಷ…!”
“”ಸಶೇಷ ಅಂದರೆ?” ಅರ್ಥವಾಗದೆ ಕೇಳಿದೆ.
“”ಎಂಥಾ ಲೇಖಕನೋ ನೀನು? ಸಶೇಷ ಅಂದರೆ ಗೊತ್ತಿಲ್ಲವೆ? ಹತ್ತಿಪ್ಪತ್ತು ವರ್ಷಗಳ ಹಿಂದೆ ಮ್ಯಾಗಜೀನುಗಳಲ್ಲಿ ಬರ್ತಿದ್ದ ಧಾರಾವಾಹಿಗಳ ಕೊನೆಯಲ್ಲಿ ಸಶೇಷ ಎಂದು ಬ್ರಾಕೆಟ್ಟಿಲ್ಲಿ ಮುದ್ರಿಸುತ್ತಿದ್ದರು”
ಸುಬ್ಬು ನಿಖರವಾದ ವಿವರಣೆಗೆ ಬೆರಗಾದೆ.
“”ಇನ್ನೂ ಅರ್ಥವಾಗಲಿಲ್ವೆ? ಯಾವುದಾದ್ರೂ, ಎಂದಾದ್ರೂ ನಿನಗೆ
ಸುಲಭಕ್ಕೆ ಅರ್ಥವಾಗಿತ್ತಾ? ಸಶೇಷ ಅಂದರೆ ಸದ್ಯಕ್ಕೆ ವಿರಾಮ ಮತ್ತೆ
ಮುಂದುವರಿಯುತ್ತದೆ ಎಂದು”
ಸುಬ್ಬು ಕಟಕಿಗೆ ಬೇಜಾರಾಗಲಿಲ್ಲ. ಆದರೆ ಯಾವುದಕ್ಕೆ ಸಶೇಷ?
ಸುಬ್ಬು ಏನು ಹೇಳ್ತಿದ್ದಾನೆ? ಅರ್ಥಮಾಡಿಕ್ಕೊಳ್ಳಲು ಹೆಣಗಿದೆ.
“”ಅದ್ಸರಿ ಯಾವುದಕ್ಕೆ ಸಶೇಷ?” ತಲೆಕೆರೆದುಕ್ಕೊಳ್ಳುತ್ತ ಕೇಳಿದೆ.
“”ನೀವು ಕಚ್ಚಾಡ್ತಿರಿ… ಕಾ ತರ್ತಿನಿ” ಅತ್ತಿಗೆ ನಿರ್ಗಮಿಸಿದರು.
ಅತ್ತಿಗೆ ನಿರ್ಗಮನದಿಂದ ಸುಬ್ಬು ಇನ್ನೂ ಸ್ಟ್ರಾಂಗ್‌ಆದಂತೆ ಕಂಡ.
“”ಸಶೇಷ… ಬಾಸಿನ ಬುಸ್ಸಾಟಕ್ಕೆ. ಪ್ರತಿ ತಿಂಗಳೂ ಬಂದು
ಬೊಮ್ಮಡಿ ಹೊಡಿಯೋ ಎಂಡಿ ಮೀಟಿಂಗುಗಳಿಗೆ. ಪಳನಿಯ ಪುಂಗಿಗೆ.
ನೀನು ಬಾಸುಗಳಿಗೆ ಹಚ್ಚೋ ಬೆಣ್ಣೆಗೆ..ಕ್ಯಾಂಟೀನಿನ ಕೆಟ್ಟ ಊಟಕ್ಕೆ”
ಸುಬ್ಬು ಮಾತಿಗೆ ದಿಗ್ಭ್ರಮೆಗೊಂಡೆ. ಏನಿದು? ಏನು
ಹೇಳುತ್ತಿದ್ದಾನೆ? ಸಶೇಷ… ಎಲ್ಲಕ್ಕೂ? ಅಂದ್ರೇನು? ಸುಬ್ಬು
ಮುಂದೆ ಸದಾ ಗೆಲ್ಲುತ್ತಿದ್ದ ನಾನು ಈಗ ಸೋಲುತಿದ್ದೆ. ಏನೊಂದೂ ಅರ್ಥವಾಗಲಿಲ್ಲ.
ಸುಬ್ಬು ಮಾತಿಗೆ ತಲೆಕೆಟ್ಟು ಹೋಯಿತು.
ಅತ್ತಿಗೆ ಕಾ ತಂದಿದ್ದಕ್ಕೆ ಟಿವಿ ಚಾನೆಲ್‌ಗಳ ವರದಿಗಾರರ ರೀತಿ ಬಿರುಮಳೆಯಂತೆ ಪುಲ್‌ಸ್ಟಾಪ್, ಕೊಮಾಗಳಿಲ್ಲದ ಸುಬ್ಬು ವಿವರಣೆ
ಚಕ್ಕನೆ ನಿಂತಿತು. ಸುಬ್ಬು ಸ್ತಬ್ದನಾದ.
“”ಏನೋ ಭಾರೀ ಮಾತು ನಡೀತಿತ್ತು?” ಅತ್ತಿಗೆ ಕೊಂಕಿಗೆ ಸುಬ್ಬು
ಮಂಕಾದ.
“”ಏನಿಲ್ಲ… ಏನಿಲ್ಲ… ಹೀಗೇ ಸುಮ್ಮನೆ. ಇವನ್ನ ಟೀ ಯಾತಕ್ಕೆ
ಇಟ್ಕೊಂಡಿದ್ದೀವಿ ಗೆಸ್ ಮಾಡೂಂತ ಹೇಳ್ತಿದ್ದೆ” ಸುಬ್ಬು ಹುಳ್ಳಗೆ ನಕ್ಕ.
“”ನಿಮ್ಮ ಫ್ರೆಂಡು, ನಿಮ್ಮ ತರಾ ಪೆದ್ದಲ್ಲಾ… ಗೆಸ್ ಮಾಡೇಮಾಡ್ತಾರೆ
ನೋಡ್ತಿರಿ”
ಅತ್ತಿಗೆ ಮಾತಿಗೆ ಹಣೆ ಬೆವರಿಟ್ಟಿತು. ಮಿದುಳು ಬ್ಲ್ಯಾಂಕಾಗಿತ್ತು.
ಕಾಕಪ್ಪು ತೆಗೆದುಕೊಂಡು ಪೂರಾ ಬಸಿದುಕೊಂಡೆ. ಅದೇನಾದರೂ
ಯೋಚಿಸಲು ಸಹಾಯ ಮಾಡೀತು ಎಂದು. ಅತ್ತಿಗೆಯ ವೆರಿವೆರಿ
ಸ್ಟ್ರಾಂಗ್ ಕಾ ಕೆಲಸ ಮಾಡಿತು. ಕಳೆದ ತಿಂಗಳು ದಂಪತಿಯ ಪುತ್ರಿ
ಪಿಂಕಿ ಸಂಸಾರ ಸಮೇತ ಬಂದಿದ್ದು ನೆನಪಾಯಿತು. ಆಕೆ ಮುಂದಿನ
ತಿಂಗಳು ಅಪ್ಪ-ಅಮ್ಮನ್ನ ಕೆನಡಾಗೆ ಕರೆಸಿಕೊತ್ತಿದ್ದೀನಿ ಎಂದಿದ್ದು ಖಾಲಿ
ತಲೆಯಲ್ಲಿ ಸಿಡಿಲಂತೆ ಬಡಿಯಿತು. ಬದುಕಿದೆ. ಮಾನ ಉಳಿಯಿತು
ಎಂದುಕೊಂಡೆ.
“”ಯಾವತ್ತು ಕೆನಡಾ ಫ್ಲೈಟು? ಸುಬ್ಬು ಸಶೇಷ ಇದೇ ಅಲ್ವೇ?” ಆತ್ಮ
ವಿಶ್ವಾಸದಿಂದ ಕೆನೆದೆ!
“”ನೋಡಿ, ಯಾವಾಗ್ಲೂ ಅವರನ್ನ ಕುಟುಕ್ತೀರಲ್ಲಾ? ಹೇಗೆ ಗೆಸ್
ಮಾಡಿದ್ರು ನೋಡಿ?”
ಅತ್ತಿಗೆ ಮುಖದಲ್ಲಿ ಅಚಾನಕ್ ಮಂತ್ರಿ ಪದವಿ ಪಡೆದ ಎಮ್ಮೆಲ್ಲೆ
ನಗುವಿತ್ತು.
“”ಯಾವಾಗ ವಾಪಸ್ಸಾಗೋದು?” ನಾನು ಕೇಳಿದೆ.
ಸುಬ್ಬು ಚಂದಮಾಮದ ಬೇತಾಳನಂತೆ ಮೌನ ವಹಿಸಿದ.
(ಮುಕ್ತಾಯ )
ಎಸ್. ಜಿ. ಶಿವಶಂಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.