Subhas Chandra Bose: ನೇತಾಜಿ; ಎಂದಿಗೂ ಮುಗಿಯದ ಆಕರ್ಷಣೆ
Team Udayavani, Jan 21, 2024, 5:29 PM IST
ಹಿಂಬಾಲಕರ ಬದಲಿಗೆ ಸ್ಥಳೀಯ ನಾಯಕರನ್ನು ಗುರುತಿಸಿ ಬೆಳೆಸಿದ್ದು, ಜಾತಿ ಧರ್ಮಗಳ, ಹೆಸರಲ್ಲಿ ನಡೆಯುತ್ತಿದ್ದ ಕಿತ್ತಾಟ, ವಿಭಜನೆಗಳಿಗೆ ಅಂತ್ಯ ಹಾಡಿ, ಎಲ್ಲರನ್ನೂ ಒಂದೇ ಸೂರಿನಡಿ ತಂದು, ತ್ರಿವರ್ಣವೇ ಜಾತಿ, ದೇಶವೇ ಧರ್ಮ ಎಂಬ ಸಂದೇಶದೊಂದಿಗೆ, ಸದ್ದಿಲ್ಲದೆ ಹೊಸತೊಂದು ಕ್ರಾಂತಿ ಉಂಟುಮಾಡಿದ್ದು ನೇತಾಜಿಯವರ ಹೆಗ್ಗಳಿಕೆ. ಅವರು ಕಟ್ಟಿದ “ಆಜೌದ್ ಹಿಂದ್ ಫೌಜ್’ನಲ್ಲಿ ಜಾತಿ ಧರ್ಮಗಳಿರಲಿಲ್ಲ. ಇದ್ದಿದ್ದೊಂದೇ ದೇಶಪ್ರೇಮ. ಅಮರ ಸೇನಾನಿ ಎಂದೇ ಹೆಸರಾದ ಅವರು, ಭಾರತೀಯರ ಪಾಲಿಗೆ ಇಂದಿಗೂ ಮುಗಿಯದ ಆಕರ್ಷಣೆಯಾಗಿಯೇ ಉಳಿದಿರಲು ಕಾರಣವೇನು ಎಂಬ ಕುತೂಹಲದ ಪ್ರಶ್ನೆಗೆ ಇಲ್ಲಿ ಉತ್ತರವಿದೆ…
ಸ್ವಾತಂತ್ರ್ಯ ಸಿಗೋದಿಲ್ಲ ನಾವೇ ಅದನ್ನು ಪಡೆದುಕೊಳ್ಳಬೇಕು!!
ಮನೆಯೇ ಹೊತ್ತಿ ಉರಿಯುತ್ತಿರುವಾಗ, ಎಲ್ಲಿಂದಲೋ ಬಂದವನೊಬ್ಬ ಬಾಯಾರಿಕೆ ಎಂದರೆ, ಅಂತಹಾ ಪರಿಸ್ಥಿತಿಯಲ್ಲೂ ಆತನಿಗೆ ಕೂರಿಸಿ, ಶರಬತ್ತು ಮಾಡಿಕೊಡೋಕೆ ರೆಡಿಯಾಗಿಬಿಡೋ ದೃಶ್ಯವೊಂದು ಹೇಗಿರುತ್ತೋ, ಯಥಾವತ್ತು ಇಂತಹದ್ದೇ ಸನ್ನಿವೇಶವೊಂದು ನಡೆದಿತ್ತು ಅವತ್ತೂ.
ಎರಡನೇ ವಿಶ್ವಯುದ್ಧದ ಕಾವು ಉತ್ತುಂಗದಲ್ಲಿದ್ದ ಕಾಲವದು. ಜರ್ಮನಿ ಹಾಗೂ ಜಪಾನ್ ದೇಶಗಳಂತೂ ಅಕ್ಷರಶಃ ಯುದ್ಧದ ಕುಲುಮೆಯೊಳಗೆ ಕುದಿಯುತ್ತಿದ್ದ ನಿಗಿನಿಗಿ ಕೆಂಡ. ಹೀಗಿದ್ದೂ ಒಬ್ಬ ವಿದೇಶಿ ನಾಗರೀಕನೊಬ್ಬನ್ನು ಆತ ಹೇಳಿದ ಜಾಗಕ್ಕೆ ತಲುಪಿಸಲು, ಅರ್ಧ ಪ್ರಪಂಚವನ್ನೇ ಸುತ್ತುಬಳಸಿ,
ಶತ್ರುನೌಕೆಗಳಿಂದ ಸುತ್ತುವರೆದಿರುವ ದುರ್ಗಮ ಹಾದಿಯಲ್ಲಿ ತಿಂಗಳುಗಳ ಕಾಲದ ಪ್ರಯಾಣಕ್ಕೆ ತಮಗೆ ಅತ್ಯಗತ್ಯವಾಗಿರೋ ಜಲಾಂತರ್ಗಾಮಿ ಯುದ್ಧನೌಕೆ ಹಾಗೂ ಸೈನಿಕರ ತಂಡವನ್ನೇ ಜಂಟಿಯಾಗಿ ಕಳಿಸಿಕೊಟ್ಟಿದ್ದವು. ಆಗಿನ ಅತೀ ಬಲಿಷ್ಟ ದೇಶಗಳಾದ ಜರ್ಮನಿ ಹಾಗೂ ಜಪಾನ್ ಮೇಲೆಯೇ ಇಂಥದ್ದೊಂದು ಪ್ರಭಾವ ಬೀರಿದ್ದ ವಿದೇಶಿ ನಾಗರೀಕನೇ ನೇತಾಜಿ ಸುಭಾಷ್ ಚಂದ್ರ ಬೋಸ್.
ನೇತಾಜಿಯ ಹೋರಾಟಗಳಷ್ಟೇ ಅಲ್ಲ, ಅವರ ಇಡೀ ಬದುಕೇ ಆದರ್ಶಮಯ. ಬಾಲ್ಯದಲ್ಲೇ ವಿವೇಕಾನಂದ, ಪರಮಹಂಸರಿಂದ ಪ್ರಭಾವಿತರಾಗಿ, ವೇದ ಉಪನಿಷತ್‌ನಂಥ ಗ್ರಂಥಗಳನ್ನೂ ಅರೆದು ಕುಡಿದು ಬಿಟ್ಟಿದ್ದರು. ಕೇವಲ ಓದಲಿಲ್ಲ, ಪ್ರತಿಯೊಂದನ್ನೂ ತನ್ನ ಬದುಕಿನುದ್ದಕ್ಕೂ ಅಳವಡಿಸಿಕೊಳ್ಳುತ್ತಾ ಸಾಗಿದ್ದರು.
ಬಾಲ್ಯದಲ್ಲೇ ಹೋರಾಟದ ಕಿಚ್ಚು:
ಭಾರತ ದೇಶವನ್ನು ಅವಹೇಳನ ಮಾಡುತ್ತಾ, ಭಾರತೀಯ ವಿದ್ಯಾರ್ಥಿಗಳನ್ನು ವಿನಾಕಾರಣ ಥಳಿಸುತ್ತಿದ್ದ ತನ್ನ ಕಾಲೇಜಿನ ಬ್ರಿಟಿಷ್ ಪ್ರೊಫೇಸರ್‌ಗೆà ಹಿಗ್ಗಾಮುಗ್ಗಾ ಥಳಿಸಿಬಿಟ್ಟಿದ್ದರು ನೇತಾಜಿ. ಆಗಿನ್ನೂ ಸುಭಾಷರಿಗೆ ಹದಿನಾರರ ಹರೆಯ.
ಅದು 1941ರ ಸಮಯ. ಬ್ರಿಟಿಷರ ಬಂಧಿಯಾಗಿ ಕುಳಿತುಬಿಟ್ರೆ, ತನ್ನ ಹೋರಾಟದ ಕನಸು ಕನಸಾಗಿಯೇ ಉಳಿದುಬಿಡುತ್ತದೆ ಅನ್ನೋ ಕಾರಣಕ್ಕೆ, ಅದೊಂದು ದಿನ ತನ್ನ ಕಾವಲಿಗಿದ್ದ ಪೊಲೀಸರಿಗೂ, ಊರ ತುಂಬಾ ಪಹರೆಯ ಲ್ಲಿದ್ದ ಸೈನಿಕರಿಗೂ ಚಳ್ಳೆಹಣ್ಣು ತಿನ್ನಿಸಿ, ಗೃಹಬಂಧನದಿಂದಲೇ ವಿದೇಶಕ್ಕೆ ಪರಾರಿ ಯಾದರು ಸುಭಾಷ್. ನೇತಾಜಿ ಮನೆಯೊಳಗಿಲ್ಲ ಅನ್ನೋ ವಿಚಾರ ಬ್ರಿಟಿಷರಿಗೆ ಗೊತ್ತಾಗಿದ್ದೇ ಪರಾರಿಯಾದ ಹನ್ನೊಂದನೇ ದಿನ.
ತಂತ್ರಗಳಲ್ಲಷ್ಟೇ ಅಲ್ಲ, ತಂತ್ರಜ್ಞಾನದಲ್ಲೂ ಎತ್ತಿದ ಕೈ
ಭಾರತದಲ್ಲಿ ಸಂವಹನದ ಕೊರತೆಯಿಂದಾಗಿ ಹೋರಾಟಗಳು ಕಾವು ಕಳೆದುಕೊಂಡು ಬಿಡುತ್ತಿದ್ದವು. ಹಾಗಾಗಿ ನೇತಾಜಿ “ಆಜಾದ್ ಹಿಂದ್ ಫೌಜ್’ ರಚನೆಯ ಸಂದರ್ಭದಲ್ಲಿ ಮೊದಲು ಮಾಡಿದ ಕೆಲಸವೇ “ಆಜಾದ್ ಹಿಂದ್ ರೇಡಿಯೋ’ ನೇತಾಜಿಯ ದೂರದರ್ಶಿತ್ವಕ್ಕೊಂದು ಅದ್ಭುತ ನಿದರ್ಶನವಿದು. ಇದರಿಂದಾಗಿ, ದೇಶಾದ್ಯಂತದ ಹೋರಾಟಗಾರರನ್ನೆಲ್ಲಾ ಏಕಕಾಲಕ್ಕೆ ತಲುಪುವ ಸಂವಹನ ವ್ಯವಸ್ಥೆಯೊಂದನ್ನು ಅಲ್ಲೆಲ್ಲೋ ಜರ್ಮನಿಯಲ್ಲೇ ಕುಳಿತು ಸೃಷ್ಟಿಸಿಬಿಟ್ಟಿದ್ದರು.
ಹಿಂಬಾಲಕರನ್ನಲ್ಲ, ನಾಯಕರನ್ನು ಸೃಷ್ಟಿಸಿದ್ದರು:
ನಮ್ಮಲ್ಲಿ ಸ್ಥಳೀಯ ಹೋರಾಟಗಾರರು ಮೇಲಿನಿಂದ ಬರೋ ಅದೇಶಗಳಿಗೆ ಕಾಯುವುದರಲ್ಲೇ ಅರ್ಧ ಆಯಸ್ಸು ಕಳೆದುಬಿಡುತ್ತಿತ್ತು. ಹಾಗಾಗಿ ನೇತಾಜಿ ಕೆಳಗಿನ ಹಂತದಿಂದಲೇ ನಾಯಕರನ್ನು ಸೃಷ್ಟಿಸುತ್ತಾ ಸಾಗಿದರು. ಇದರಿಂದಾಗಿ ನೇತಾಜಿಯ ಅನುಪಸ್ಥಿತಿಯಲ್ಲೂ ಯುದ್ಧತಂತ್ರಗಳೆಲ್ಲಾ ಕರಾರುವಕ್ಕಾಗಿ ಕಾರ್ಯರೂಪಕ್ಕೆ ಬರೋದಕ್ಕೆ ಸ್ಥಳೀಯವಾಗಿಯೇ ನಿರ್ಧಾರ ತೆಗೆದುಕೊಳ್ಳೋ ಸಾಮರ್ಥ್ಯವಿದ್ದ ನಾಯಕತ್ವ ಕಾರಣವಾಯ್ತು. ಹಾಗಾಗಿಯೇ ಕರ್ನಲ್ ಶೌಕತ್ ಅಲಿ ಮಲಿಕ್, ಶಾಹ್ ನವಾಜ್ ಖಾನ್ ಹಾಗೂ ಇತರ ನಾಯಕರ ಐಎನ್‌ಎ ಪಡೆ ಕೊಹಿಮಾ, ಟಮು, ಉಕ್ರೂಲ್, ಚರಚಂದಪುರ, ಇಂಫಾಲ ಸೇರಿದಂತೆ, ಬ್ರಿಟಿಷರ ಭದ್ರಕೋಟೆಯೆಂದೇ ಕರೆಸಿಕೊಳ್ಳುತ್ತಿದ್ದ ಮೊಯಿರಾಂಗ್ ಕಾಂಗ್ಲಾ ಪ್ರದೇಶವನ್ನೂ ಸ್ವತಂತ್ರ ಗೊಳಿಸಿ, ಮೊದಲ ಬಾರಿಗೆ ರಾಜ್ಯವೊಂದು ಸಂಪೂರ್ಣ ಸ್ವತಂತ್ರಗೊಂಡು ಭಾರತದ ನೆಲದಲ್ಲಿ ಪ್ರಪ್ರಥಮ ಬಾರಿಗೆ ತ್ರಿವರ್ಣ ಧ್ವಜ ಹಾರಿಸುವಂತಾಗಿದ್ದು.
ಜಾತಿ ಧರ್ಮಗಳಲ್ಲ, ದೇಶ ಮೊದಲು
ಹೋರಾಡುತ್ತಿದ್ದುದು ದೇಶದ ಸ್ವಾತಂತ್ರ್ಯಕ್ಕಾಗಿಯೇ ಆದರೂ, ಬಹುತೇಕ ಹೋರಾಟಗಾರರು ತಮ್ಮದೇ ಜಾತಿ-ಧರ್ಮಗಳ ಗುಂಪುಗಳಲ್ಲಿಯೇ ತೊಡಗಿಸಿಕೊಂಡಿದ್ದ ಕಾರಣ, ಸಾಮರಸ್ಯದ ಕೊರತೆಯಿಂದಾಗಿ ಹೋರಾಟಗಳೂ ತೀವ್ರತೆ ಕಳೆದು ಕೊಳ್ಳುತ್ತಿದ್ದವು. ಇದನ್ನೂ ಬಗೆಹರಿಸುವ ಕೆಲಸ ಮಾಡಿದ್ದು ನೇತಾಜಿ. ಜಾತಿ-ಧರ್ಮಗಳ ವಿಭಜನೆಗಳಿಗೆ ಅಂತ್ಯ ಹಾಡಿ, ಜೈ ಹಿಂದ್ ಘೋಷದೊಂದಿಗೆ ಎಲ್ಲರನ್ನೂ ಒಂದೇ ಸೂರಿನಡಿ ತಂದು, ಸದ್ದಿಲ್ಲದೆ ಹೊಸತೊಂದು ಕ್ರಾಂತಿಯನ್ನೇ ಮಾಡಿಬಿಟ್ಟಿದ್ದರು. “ಆಜೌದ್ ಹಿಂದ್ ಫೌಜ್’ನಲ್ಲಿ ಜಾತಿ ಧರ್ಮಗಳಿರಲಿಲ್ಲ, ಇದ್ದಿದ್ದೊಂದೇ ದೇಶಪ್ರೇಮ.
ಮಹಾಮೇಧಾವಿ:
ನೇತಾಜಿಯ ಚಿಂತನಾಲಹರಿ ಅಗಾಧವಾಗಿತ್ತು. ಹೋರಾಟಕ್ಕಿಳಿದ ಕೆಲವೇ ದಿನಗಳಲ್ಲಿ ಇಲ್ಲಿನ ಆಳ- ಅಗಲಗಳನ್ನು ಅರಿತುಬಿಟ್ಟಿದ್ದರು. ಕೋಣನ ಮುಂದೆ ಕಿನ್ನರಿ ಬಾರಿಸೋ ದ್ರಿಂದಲ್ಲ, ಅದಕ್ಕೆ ಛಡಿಯೇಟು ಕೊಡೋದ್ರಿಂದಷ್ಟೇ ಮಂಡಿಯೂ ರಿಸೋಕೆ ಸಾಧ್ಯ. ಸರಿಯಾದ ದಿಕ್ಕಿನಲ್ಲಿ ಮುಂದಡಿಯಿಟ್ಟಲ್ಲಿ ಬ್ರಿಟಿಷರನ್ನು ಭಾರತಾಂಬೆಯೆದುರು ಮಂಡಿಯೂರಿಸೋದು ದೊಡ್ಡ ವಿಚಾರವೇನಲ್ಲ ಎಂಬುದು ಅವರಿಗೆ ಮನವರಿಕೆಯಾಗಿತ್ತು. ಹಾಗಾಗಿಯೇ ಹೋರಾಟದ ಹೊಸ ಆಯಾಮಗಳತ್ತ ಮುಖ ಮಾಡಿದರು.
ಎಲ್ಲರಿಗೂ ಭಾರತವನ್ನು ಸ್ವತಂತ್ರಗೊಳಿಸುವುದೊಂದೇ ಗುರಿಯಾಗಿದ್ದ ಕಾಲದಲ್ಲಿಯೇ, ಸ್ವಾತಂತ್ರಾÂ ನಂತರದ ಭಾರತದ ಬಗ್ಗೆ ಚಿಂತನೆ ನಡೆಸಿದ್ದು ನೇತಾಜಿ. ವಿಜ್ಞಾನ, ಶಿಕ್ಷಣ ಸ್ವಾವಲಂಬನೆಗಳ ಮುಖಾಂತರ ಹೇಗಿರಬೇಕು ನವ ಭಾರತ ಎಂದು ನೀಲನಕ್ಷೆಯನ್ನೂ ಸಿದ್ಧಪಡಿಸಿಟ್ಟಿದ್ದ ದೂರದರ್ಶಿ ನೇತಾಜಿ.
ನೇತಾಜಿ ಚಪ್ಪಾಳೆಗಳಿಗಾಗಿ ಭಾಷಣ ಮಾಡುತ್ತಿರಲಿಲ್ಲ. ಅವರ ಪ್ರತಿ ಮಾತೂ ಕೃತಿಗಳಾಗುತ್ತಿದ್ದವು. ಪ್ರತಿಯೊಂದನ್ನೂ ಪ್ರಾಯೋಗಿಕವಾಗಿಯೂ ಸಾಧಿಸಿ ತೋರಿಸುತ್ತಿದ್ದ ವ್ಯಕ್ತಿತ್ವ ಅವರದು. ಹಾಗಾಗಿಯೇ ನೇತಾಜಿಯ ಚಿಂತನೆಗಳು ಇಂದಿಗೂ ಪ್ರಸ್ತುತ ಅನ್ನಿಸಿಕೊಳ್ಳುತ್ತವೆ.
ಅಮರತ್ವ ಪಡೆದ ಸಿದ್ಧಿಪುರುಷ:
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪುಟಗಳಲ್ಲಷ್ಟೇ ಅಲ್ಲ, ನೇತಾಜಿಯ ಬದುಕಿನ ಅಧ್ಯಾಯವೂ ತೀರಾ ಚಿಕ್ಕದು. ಅಂತಹ ಚಿಕ್ಕ ಅವಧಿಯಲ್ಲೇ ತನ್ನ ಚಾಣಾಕ್ಷಮತಿಯಿಂದಾಗಿ ಇನ್ನಿಲ್ಲದಂತೆ ಬ್ರಿಟಿಷರ ನಿದ್ದೆಗೆಡಿಸಿಬಿಟ್ಟಿದ್ದರು. ನೇತಾಜಿ ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ. ಭಗತ್ ಸಿಂಗ್, ಸುಖದೇವ್, ಆಜಾದ್‌ದರಂಥವರ ರೋಷ. ಗಾಂಧೀಜಿಯ ತಾಳ್ಮೆ, ಸಾವರ್ಕರ್ ಚಾಣಾಕ್ಷತೆ ಹಾಗೂ ವಿವೇಕಾನಂದರ ಪ್ರಬುದ್ಧತೆಗಳ ಎರಕಹೊಯ್ದಂತಿದ್ದ ವ್ಯಕ್ತಿತ್ವ ಅವರದಾಗಿತ್ತು.
ಸ್ವಾತಂತ್ರ್ಯ ಪೂರ್ವ ಭಾರತದ ವಿಶ್ವನಾಯಕ:
ಭಾರತದೊಳಗೆ ಹೋರಾಟಗಳಾಗುತ್ತಿದ್ದವೇ ಹೊರತು, ವಿದೇಶಗಳ ಸಹಾಯ ಪಡೆದು ಹೊರಗಿನಿಂದಲೂ ಒತ್ತಡ ತಂತ್ರಗಳನ್ನು ಹೇರಬಹುದೆಂಬ ಆಲೋಚನೆಯನ್ನು ಆವರೆಗೆ ಯಾರೂ ಮಾಡಿರಲಿಲ್ಲ. ಶಾಂತಿಯಿಂದಲೇ ಕುಳಿತಲ್ಲೇ ಕಲ್ಲನ್ನೂ ಕರಗಿಸಬಹುದು ಎಂದು ಹೆಚ್ಚಿನವರು ನಂಬಿದ್ದ ಕಾಲಘಟ್ಟವದು. ಬ್ರಿಟಿಷರ ನೆರಳಲ್ಲಿದ್ದುಕೊಂಡೇ ಮಾಡುವ ಹೋರಾಟಗಳಿಂದ ಸಮಯ ವ್ಯರ್ಥ. ಇತರ ದೇಶಗಳನ್ನೂ ಜೊತೆ ಸೇರಿಸಿಕೊಂಡು ಹೊರಗಿನಿಂದಲೂ ಹೋರಾಟ ತೀವ್ರಗೊಳಿಸಿದಾಗಷ್ಟೇ ಪರಿಣಾಮಗಳೂ ತೀವ್ರವಾಗಿರುತ್ತವೆ ಎಂದು ನಂಬಿದ್ದ ನೇತಾಜಿ, ಕೆಲವೇ ಸಮಯದಲ್ಲಿ ಜರ್ಮನಿ, ಜಪಾನ್, ಸೋವಿಯತ್ ಒಕ್ಕೂಟ, ಆಸ್ಟ್ರಿಯಾ, ನಾರ್ಥ್ ಆಫ್ರಿಕಾ, ಮಲೇಶಿಯಾ, ಸಿಂಗಾಪೂರ್, ಬರ್ಮಾ ಸೇರಿದಂತೆ ಆಗ್ನೇಯ ಏಷ್ಯಾ ದೇಶಗಳ ಸ್ನೇಹವನ್ನೂ ಸಂಪಾದಿಸುವಲ್ಲಿ ಯಶಸ್ವಿಯಾಗಿಬಿಟ್ಟಿದ್ದರು.
ಹಾಗಾಗಿಯೇ ಭಾರತದ ಮೇಲೆ ಆಸ್ಥೆಯಿರದ ಹಿಟ್ಲರನೂ ನೇತಾಜಿಯ ಬೆಂಬಲಕ್ಕೆ ನಿಲ್ಲುತ್ತಾನೆ. ಜಪಾನ್ ತಾನು ಗೆದ್ದ ಸಿಂಗಾಪುರವನ್ನೇ ನೇತಾಜಿಯ ಮಡಿಲಿಗಿಟ್ಟುಬಿಡುತ್ತದೆ. ಇಂತಹ ಸ್ನೇಹಗಳಿಂದಲೇ ಅಂಡಮಾನ್ ನಿಕೋಬಾರ್ ಹಾಗೂ ಮಣಿಪುರವನ್ನು ಸ್ವತಂತ್ರಗೊಳಿಸಲು ಸಾಧ್ಯವಾಗಿದ್ದು.
ಸ್ವಾತಂತ್ರ್ಯ ಸಂಗ್ರಾಮದ ಸೂಪರ್ ಹೀರೋ:
ನೇತಾಜಿಯ ಬದುಕೇ ರಸವತ್ತಾದ ಸಿನಿಮಾ ಕಥೆ. ಬದುಕಿನ ಪ್ರತಿಯೊಂದು ಹೆಜ್ಜೆಯೂ ರಣರೋಚಕ. ಒಂದೊಂದು ಘಟನೆಗಳೂ ಮೈನವಿರೇಳಿಸೋ ಕಥಾಗುತ್ಛ. ಹಾಗಾಗಿಯೇ ಇಂದಿಗೂ ನೇತಾಜಿಯೆಂದರೆ ಎಂದೂ ಮುಗಿಯದ ಆಕರ್ಷಣೆ.
ನೇತಾಜಿಯ ಕೆಲವು ಘೋಷವಾಕ್ಯಗಳು:
ಜೈ ಹಿಂದ್.
ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ.
ಸ್ವಾತಂತ್ರ್ಯ ಸಿಗೋದಿಲ್ಲ. ನಾವೇ ಅದನ್ನು ಪಡೆದುಕೊಳ್ಳಬೇಕು.
ದೇಶಕ್ಕಾಗಿ ಸಾಯೋದು ಸುಲಭ, ದೇಶಕ್ಕಾಗಿಯೇ ಬದುಕುವುದು ಕಷ್ಟ.
ಚರ್ಚೆಗಳಿಂದಲೇ ಚರಿತ್ರೆಯನ್ನು ಬದಲಾಯಿಸುವುದು ಅಸಾಧ್ಯ.
ದೇಶಪ್ರೇಮವನ್ನು ನಮ್ಮ ಮಾತುಗಳಿಂದಲ್ಲ, ಕಾರ್ಯದಿಂದ ಸಾಬೀತುಪಡಿಸಬೇಕು.
ನಮ್ಮ ಸಾವು, ಭಾರತವನ್ನು ಜೀವಂತವಾಗಿ ಉಳಿಸುವಂತಾಗಬೇಕು, ಆಗಲೇ ಸಾವಿಗೂ ಸಾರ್ಥಕತೆ.
ಬದುಕಿನ ಘಟ್ಟಗಳು:
ಜನನ : 23-01-1897
ತಂದೆ : ಜಾನಕಿನಾಥ್ ಬೋಸ್
ತಾಯಿ : ಪ್ರಭಾವತಿ ಬೋಸ್
ವಿದ್ಯಾಭ್ಯಾಸ
1902 1909 : ಬಿಎಂಪಿ ಯುರೋಪಿಯನ್ ಸ್ಕೂಲ…. ಕಟಕ್.
1909 1912 :
ರೇವೇನ್ಶಾ ಸ್ಕೂಲ್ ಕಟಕ್.
1912 1916 :
ಪ್ರಸಿಡೆನ್ಸಿ ಕಾಲೇಜ್. ಕೊಲ್ಕತ್ತಾ
1917 1919 :
ಸ್ಕಾಟಿಷ್ ಚರ್ಚ್ ಸ್ಕೂಲ್ ಕೊಲ್ಕತ್ತಾ
1919 1921 : ಎನ್‌ಸಿಎಸ್ ಬೋರ್ಡ್ ಯೂನಿವರ್ಸಿಟಿ ಕೇಂಬ್ರಿಡ್ಜ್
ಸ್ವಾತಂತ್ರ್ಯ ಸಂಗ್ರಾಮದ
ಕೆಲ ಘಟ್ಟಗಳು
1921 : ಭಾರತದ ಸ್ವಾತಂತ್ರ್ಯ
ಸಂಗ್ರಾಮಕ್ಕೆ ಪ್ರವೇಶ.
1922 : ಸ್ವರಾಜ್ ಪತ್ರಿಕೆಯ ಸ್ಥಾಪನೆ.
1923 : ಫಾರ್ವರ್ಡ್ ಇಂಗ್ಲೀಷ್ ಪತ್ರಿಕೆಯ ಸಾರಥ್ಯ.
1923 : ಆಲ್ ಇಂಡಿಯಾ ಯೂಥ್ ಕಾಂಗ್ರೆಸ್ ಅಧ್ಯಕ್ಷ.
1930 : ಕೊಲ್ಕತ್ತಾ ನಗರದ ಮೇಯರ್.
1931 : ಯೂರೋಪ್ ಪ್ರವಾಸ, ಕಮ್ಯೂ ನಿಸ್ಟ್ ನಾಯಕ ಮುಸೊಲಿನಿ ಭೇಟಿ.
1935 : ಆಲ್ ಇಂಡಿಯಾ ಫಾರ್ವರ್ಡ್ ಎಂಬ ಕೃತಿ ರಚನೆ ( ಭಾರತದಲ್ಲಿ ಈ ಪುಸ್ತಕವನ್ನು ಬ್ರಿಟಿಷರು ನಿಷೇಧಿಸಿದ್ದರು)
1938 : ಅಖೀಲ ಭಾರತ ಕಾಂಗ್ರೆಸ್ ಅಧ್ಯಕ್ಷ
1939 : ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್(ಎಐಎಫ್ಬಿ) ಪಕ್ಷ ಸ್ಥಾಪನೆ
1921 ರಿಂದ 1941ರ ನಡುವೆ
11 ಬಾರಿ ಜೈಲು ಶಿಕ್ಷೆ.
1941 : ಜರ್ಮನಿಗೆ ಮಹಾ ಪಲಾಯನ.
1942 : ಆಜಾದ್ ಹಿಂದ್ ಫೌಜ್ ರೇಡಿಯೋ ಸ್ಥಾಪನೆ.
1943 : ಆಜೌದ್ ಹಿಂದ್ ಫೌಜ್ ಸ್ಥಾಪನೆ. ಅಂಡಮಾನ್ ನಿಕೋಬಾರ್ ದ್ವೀಪಗಳು ಬ್ರಿಟಿಷರ ತೆಕ್ಕಿಯಿಂದ ಸ್ವತಂತ್ರ.
1944 : ಮಣಿಪುರ ರಾಜ್ಯವೂ ಸ್ವತಂತ್ರವಾಗಿ ಭಾರತದ ನೆಲದಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಲಾಯ್ತು.
ಮರಣ : 18-08-1945 (ತೈವಾನ್).
-ಸುಧೀರ್ ಸಾಗರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.