ಕಥಾ ಮಹಾತ್ಮೆ
ಕತೆ
Team Udayavani, Feb 9, 2020, 5:17 AM IST
ಊರಿನ ಮೂಲೆಯ, ಕೊನೆಯ ಬೀದಿಯಲ್ಲಿ ಒಬ್ಬಳು ಹೆಂಗಸು ವಾಸವಾಗಿದ್ದಳು. ಅವಳಿಗೆ ಗಂಡ-ಮಕ್ಕಳು-ಮರಿ ಅಂತ ಯಾರೂ ಇರಲಿಲ್ಲ. ಒಂಟಿಯಾಗಿದ್ದಳು. ಅವಳನ್ನು ಎಲ್ಲರೂ ಆಯಿ ಅಂತ ಕರೆಯುತ್ತಿದ್ದರು. ಆಯಿ ಸೊಗಸಾಗಿ ಕಥೆ ಹೇಳುತ್ತಿದ್ದಳು. ಅವಳು ಹೇಳುವ ಕಥೆಗಳ ಬಗ್ಗೆಯೇ ಊರಿಡೀ ಕಥೆಗಳಿದ್ದವು.
— ಯಶಸ್ವಿನಿ ಕದ್ರಿ
ಆಯಿಯಂತೆ ಕಥೆ ಹೇಳುವವರನ್ನು ಊರಲ್ಲಿ ಯಾರೂ ಕಂಡಿರಲಿಲ್ಲ. ಆಯಿ ಹುಟ್ಟುತ್ತಲೇ ಕಥೆ ಹೇಳತೊಡಗಿದಳು. ಆಯಿ ಕಥೆ ಹೇಳುತ್ತಲೇ ಬೆಳೆದಳು. ಕಥೆ ಹೇಳುವ ಭರದಲ್ಲಿ ಅವಳಿಗೆ ಮದುವೆ-ಮಕ್ಕಳು-ಇವೆಲ್ಲದರ ಬಗ್ಗೆ ಮರೆತುಹೋಗಿತ್ತು. ಜನ ಅವಳ ಕಥೆ ಕೇಳಿ ಖುಷಿ ಪಡುತಿದ್ದರು. ಆಯಿಗೊಂದು ಮದುವೆ ಮಾಡಬೇಕೆಂದು ಅವರಿಗ್ಯಾರಿಗೂ ಹೊಳೆಯಲೇ ಇಲ್ಲ. ಅವಳ ಕಥೆಯ ರಾಜಕುಮಾರಿಯರೆಲ್ಲ ಮದುವೆಯಾಗಿ ಸುಖೀಯಾಗಿದ್ದರು. ಆಯಿ ಮಾತ್ರ ಕನಸಲ್ಲಿಯೂ ಮದುವೆ ಬಗ್ಗೆ ಯೋಚಿಸಲಿಲ್ಲ.
ಕಥೆ ಹೇಳುವುದರಲ್ಲಿ ಅವಳು ಅಪ್ರತಿಮಳೆ! ಅವಳ ಕಥೆ ಕೇಳಿ ಎಣ್ಣೆಯಿರದೆ ದೀಪ ಉರಿಯುತ್ತಿತ್ತು, ಮೋಡವಿರದೆ ಮಳೆ ಬರುತ್ತಿತ್ತು, ನೀರಿರದೆ ಗಿಡ ಬದುಕುತ್ತಿತ್ತು. ಕೆಳಗಿನ ಕೇರಿ ಕುರುಡಿ ಮುದುಕಿ, ಕೊನೆಯುಸಿರೆಳೆಯುತ್ತಿದ್ದುದು, ಆಯಿಯ ಕಥೆ ಕೇಳಿ ಬದುಕಿಕೊಂಡಿತ್ತು, ನಾಯಕರ ಕಿರಿಸೊಸೆಯ ವಾಸಿಯಾಗದ ತಲೆನೋವು ಆಯಿಯ ಕಥೆ ಕೇಳಿ ಪರಾರಿಯಾಗಿತ್ತು, ಆಯಿಯ ಕಥೆ ಕೇಳುತ್ತ ಕೂತಿದ್ದ ವಿಧವೆ ಚಂದುವಿಗೆ ತನ್ನ ಗಂಡ ಸತ್ತದ್ದೇ ಮರೆತು ಹೋಗಿತ್ತು- ಅವಳು ಹಾಗೂ ಅವಳ ಕಥೆಯ ಮಹಾತ್ಮೆ ನಿಜಕ್ಕೂ ದೊಡ್ಡದು.
ಆಯಿಗೆ ಅಷ್ಟೊಂದು ಕಥೆಗಳು ಎಲ್ಲಿಂದ ಸಿಗುತ್ತಿದ್ದವು ಅನ್ನೋದೇ ಆಶ್ಚರ್ಯ! ಅದು ಅವಳ ಜೀವದ ಗುಟ್ಟು, ಅದನ್ನು ಅವಳು ಯಾರಿಗೂ ಹೇಳಿದ್ದಿಲ್ಲ. ಒಟ್ಟಿನಲ್ಲಿ ಆಯಿ “ಬಾ’ ಅಂದ್ರೆ ಕಥೆಗಳು ಬರುತ್ತಿದ್ದವು, “ಬರಬೇಡಿ’ ಅಂದರೆ ಬೇಜಾರು ಮಾಡಿ ನಿಲ್ಲುತ್ತಿದ್ದವು, “ಹೋಗಿ’ ಅಂದರೆ ಸಾಕುನಾಯಿಯ ಹಾಗೆ ಕುಯ್ಯೆಂದು ಹೋಗುತ್ತಿದ್ದವು.
“”ಆಯಿ… ಆಯಿ ಕಥೆ ಹೇಳೆ…” ಅಂತ ಅವಳ ಹಿಂದೆ ಬರುವವರ ಸಂಖ್ಯೆ ದೊಡ್ಡದಿತ್ತು.
“”ಯಾವ ಕಥೆ?”
“”ಅದೇ… ಹೋದ ಸೋಮವಾರ ಹೇಳಿದ್ಯಲ್ಲಾ… ಆ ಕಥೆ”
“”ಅಯ್ಯೊ… ಅದಕ್ಕಿಂತ ಮುಂಚಿನ ಸೋಮವಾರವೂ ನಿನಗೆ ಅದೇ ಕಥೆ ಹೇಳಿ¨ªೆನಲ್ಲಾ ಮರಿ…”
“”ಅದಕ್ಕೇನೀಗ? ಅದಕ್ಕಿಂತ ಮುಂಚಿನ ಸೋಮವಾರವೂ ಅದೇ ಕಥೆ ಹೇಳಿದ್ದೆ. ನನಗೆ ಅದೇ ಕಥೆ ಬೇಕು ಆಯಿ…”
ಮಕ್ಕಳಿಂದ ಹಿಡಿದು ಮುದುಕರವರೆಗೂ ತಮ್ಮ ವಯಸ್ಸನ್ನು ಮರೆತು ಅವಳ ಬಳಿ ಹಠ ಮಾಡುತ್ತಿದ್ದರು. ಆಯಿ ಹೇಳಿದ ಕಥೆಯನ್ನೇ ಹೇಳಿದರೂ ಕೇಳಲು ಸೊಗಸು-ಜನ ಮುಗಿಬೀಳುತ್ತಿದ್ದರು.
ಆಯಿಗೆ ಕಥೆ ಹೇಳ್ಳೋದು ಬಿಟ್ಟು ಬೇರೆ ಕೆಲಸ ಗೊತ್ತಿರಲಿಲ್ಲ. ಆದರೆ, ಜೀವನ ನಡೆಯಬೇಕಲ್ಲ! ಕೆಲಸ ಮಾಡಲು ಕೂತರೆ ಕೆಲಸದ ಚಿಂತೆಯಲ್ಲೇ ತನ್ನೊಳಗಿನ ಕಥೆಗಳೆಲ್ಲ ಸತ್ತು ಬಿಡಬಹುದು ಅಂತ ಅವಳಿಗೆ ಭಯವಾಯಿತು. ಇತ್ತ ಕಥೆ ಹೇಳಿದ ಹಾಗೂ ಆಗಬೇಕು, ಅತ್ತ ದುಡಿದ ಹಾಗೂ ಆಗಬೇಕು. ಅದಕ್ಕಾಗಿ ಅವಳು ಒಂದು ದಾರಿ ಕಂಡು ಹಿಡಿದಳು.
“”ಇನ್ನು ಮುಂದೆ ನನ್ನಿಂದ ಕಥೆ ಕೇಳಿದವರು ಒಂದಾಣೆ ಕೊಡಬೇಕು. ಹಳೆ ಕಥೆಯಾದರೆ ಅರ್ಧ ಆಣೆ, ಹೊಸ ಕಥೆಯಾದರೆ ಒಂದು ಆಣೆ- ನಾನೂ ಬದುಕಬೇಕಲ್ಲ…” ಅಂತ ಆಯಿ ಘೋಷಿಸಿದಾಗ ಎಲ್ಲರಿಗೂ ಒಮ್ಮೆ ಆಶ್ಚರ್ಯವಾಯಿತು. ಆಯಿ ಬಹಳ ಯೋಚಿಸಿ ತೆಗೆದುಕೊಂಡ ನಿರ್ಧಾರವದು. ತನಗೆ ಪುಕ್ಕಟೆಯಾಗಿ ಸಿಗುವ ಕತೆಗಳನ್ನು ಹೀಗೆ ಹಣಕ್ಕೆ ಮಾರೋದು ಸರಿಯೆ? ಅನ್ನುವ ಪ್ರಶ್ನೆ ಅವಳನ್ನು ಕಾಡಿದ್ದಿದೆ. ಪುಕ್ಕಟೆಯಾಗಿ ಸಿಗುವ ಹೂಗಳನ್ನು ಕಟ್ಟಿ, ಮಾರಿ ಹೂವಾಡಗಿತ್ತಿ ಹಣ ಮಾಡುವುದಿಲ್ಲವೆ?- ಇದೂ ಹಾಗೆಯೆ ಅಂತ ಅಂದುಕೊಂಡರಾಯಿತು.
ಆಯಿ ತಂದ ಹೊಸ ವ್ಯವಸ್ಥೆಗೆ ಊರವರು ಒಗ್ಗಿಕೊಂಡರು. ಅನವಶ್ಯಕ ಕೆಲಸಗಳಿಗೆ ಹಲವಾರು ಆಣೆಗಳನ್ನು ಖರ್ಚು ಮಾಡುತ್ತಿದ್ದರು. ಆಯಿಯ ಕಥೆಗೆ ಒಂದೆರಡಾಣೆ ಮೀಸಲಿಡುವುದು ನಷ್ಟದ ಸಂಗತಿ ಅಂತ ಅನಿಸಲಿಲ್ಲ.
ಆಯಿ ಕಥೆ ಹೇಳುತ್ತ ಸುಖವಾಗಿದ್ದಳು.
ಆಯಿಯ ಮನೆ ಕೊನೆಯ ಬೀದಿಯಲ್ಲಿ ಅಂದೆನಲ್ಲ- ಆಯಿಯದ್ದು ಒಂಟಿ ಮನೆ. ನೆರೆಹೊರೆ ಅಂತ ಯಾರೂ ಇರಲಿಲ್ಲ. ಪಕ್ಕದ ಮನೆಗೆ ಹೋಗಬೇಕಾದರೆ ಹದಿನೈದು-ಇಪ್ಪತ್ತು ನಿಮಿಷ ನಡೆಯಬೇಕಾಗಿತ್ತು. ಒಂದು ಮಳೆಗಾಲದ ಸಂಜೆ ಆಯಿ ತನ್ನ ಮನೆಯೊಳಗೆ ಕುಳಿತು, ಬರಲಾರೆನೆಂದು ಹಠ ಮಾಡುತ್ತಿದ್ದ ಕಥೆಗೆ ಗಾಳ ಹಾಕುತ್ತಿದ್ದಳು. ಅಷ್ಟರಲ್ಲಿ ಬಾಗಿಲು ಬಡಿದ ಸದ್ದು.
ಈ ಮಳೆಯಲ್ಲಿಯೂ ಕಥೆ ಕೇಳ್ಳೋ ತುರ್ತಿನಿಂದ ಬಂದವರು ಯಾರಪ್ಪಾ- ಅಂತ ಆಯಿ ಆಶ್ಚರ್ಯ ಪಡುತ್ತ ಬಾಗಿಲು ತೆರೆದರೆ, ಸುಂದರ ತರುಣಿಯೊಬ್ಬಳು ನಿಂತಿದ್ದಳು.
“”ಆಯಿ… ಕಥೆ ಕೇಳಲು ಬಂದೆ…”
“”ಈ ಬಿರುಮಳೆಯಲ್ಲಿಯೂ ಕಥೆ ಕೇಳಲು ಬಂದ್ಯಾ ತಂಗಿ… ಬಾ ಬಾ ಒಳಗೆ ಬಾ…” ಎಂದು ಆಯಿ ಒಳಗೆ ಕರೆದು ಕೂರಲು ಜಾಗ ತೋರಿಸಿದಳು. ಹೊದೆಯಲು ಬೆಚ್ಚಗೆ ಕಂಬಳಿ ಕೊಟ್ಟಳು. ಚಹಾದ ಪಾತ್ರೆ ಒಲೆಯ ಮೇಲಿಟ್ಟಳು.
“”ನೀನು ಈವರೆಗೆ ಯಾರಿಗೂ ಹೇಳಿರದ ಕಥೆ ಹೇಳಬೇಕು ಆಯಿ…”
“”ನೀನು ಕೇಳಿರದ ಕಥೆಯಾದರೆ ಹೇಳಬಹುದು- ಅದಕ್ಕೆ ಒಂದಾಣೆ. ನಾನು ಯಾರಿಗೂ ಹೇಳಿರದ ಕಥೆ ಹೇಳ್ಳೋದು ಕಷ್ಟ ತಂಗಿ, ನಾನು ಹೊಸ ಕಥೆಯನ್ನು ಹುಡುಕುತ್ತಿ¨ªಾಗಲೇ ನೀನು ಬಾಗಿಲು ಬಡಿದೆ- ನನ್ನ ಗಮನ ನಿನ್ನ ಕಡೆ ಬಂತು, ಕಥೆ ಕೈ ಜಾರಿ ಹೋಯ್ತು”.
“”ಓಹ್… ಬಹಳ ಕೆಟ್ಟದಾಯ್ತು. ನಿನ್ನ ಬಳಿ ಕಥೆ ಇಲ್ಲವೆಂದಾದ ಮೇಲೆ ನಾನಿಲ್ಲಿ ಕೂತು ಏನು ಮಾಡೋದು” ಎನ್ನುತ್ತ ಅವಳು ಏಳಲನುವಾದಳು.
ಆಯಿಗೆ ಅವಮಾನವಾಯಿತು. ಈವರೆಗೆ ಅವಳ ಬಳಿ ಬಂದವರು ಕಥೆ ಕೇಳದೆ ನಿರಾಶರಾಗಿ ಹಿಂದೆ ಹೋದದ್ದಿಲ್ಲ. ಅಲ್ಲದೆ, ಈ ಬಿರುಮಳೆಗೆ ಇವಳು ಹೋಗುವುದಾದರೂ ಹೇಗೆ?
“”ನಿಲ್ಲು ತಂಗಿ ನಿಲ್ಲು. ಒಂದು ಕಥೆಯಿದೆ…” ಎಂದು ಆಯಿ ಕೂಗಿದಳು. ಆ ತರುಣಿ ಅಚ್ಚರಿಯಿಂದ ಕುಳಿತಳು.
“”ಇದು ನನಗೆ ನನ್ನಪ್ಪನಿಂದ ಬಳುವಳಿಯಾಗಿ ಬಂದ ಕಥೆ, ಅವನಿಗೆ ಅವನ ಅಪ್ಪನಿಂದ ಬಂದದ್ದು, ಸಾಯುವ ಮುನ್ನ ನಾನು ನನ್ನ ಹಿರಿಯ ಸಂತತಿಗಷ್ಟೇ ಹೇಳಬೇಕಿತ್ತು. ನನಗೋ ಮದುವೆಯೇ ಆಗಿಲ್ಲ ನೋಡು. ಹಾಗಾಗಿ, ಕಥೆ ನನ್ನಲ್ಲೇ ಉಳಿಯಿತು. ಈಗ ನೀನು ಬಂದಿದ್ದಿ. ನಿನಗೆ ನಾನು ಯಾರಿಗೂ ಹೇಳಿರದ ಕಥೆ ಬೇಕು. ಸರಿ ಅದನ್ನು ನಾನು ನಿನಗೆ ಹೇಳುತ್ತೇನೆ. ನೀನು ನಿನ್ನ ಹಿರಿಯ ಸಂತಾನನಕಲ್ಲದೆ ಬೇರೆ ಯಾರಿಗೂ ಹೇಳಲ್ಲ ಅಂತ ಮಾತು ಕೊಡಬೇಕು”.
“”ಸರಿ ಒಪ್ಪಿದೆ…” ಎಂದು ತರುಣಿ ತನ್ನ ಹಿರಿಯ ಕಂದನನ್ನು ನೆನಪಿಸುತ್ತ ಕಂಬಳಿಯನ್ನು ಮತ್ತಷ್ಟು ಬಿಗಿಯಾಗಿ ಹೊದ್ದು ಕೂತಳು. ಒಲೆಯಲ್ಲಿ ಚಹಾ ಕುದಿಯತೊಡಗಿತ್ತು. ಆಯಿ ಎರಡು ಲೋಟಗಳಿಗೆ ಚಹಾ ಸುರಿದು, ಒಂದನ್ನು ಆ ತರುಣಿಯ ಮುಂದೆ ಇಟ್ಟಳು.
ಬಹಳ ಹಿಂದಿನ ಕಥೆ. ಕೈಲಾಸದಲ್ಲಿ ನಡೆದದ್ದು. ಶಿವ ಪಾರ್ವತಿಯರು ಕೈಲಾಸದಲ್ಲಿ ಸುಖವಾಗಿ ಸಂಸಾರ ಮಾಡಿಕೊಂಡಿದ್ದರು. ಶಿವ ತನ್ನನ್ನು ಬಿಟ್ಟು ಬೇರಾರನ್ನೂ ಪ್ರೀತಿಸಲಾರ ಎಂಬ ಜಂಭ ಪಾರ್ವತಿಗೆ. ಅದು ನಿಜವೂ ಆಗಿತ್ತು. ಅವರು ಸುತ್ತಲಿನ ಹದಿನಾಲ್ಕು ಲೋಕಗಳಿಗೂ ಆದರ್ಶ ದಂಪತಿಗಳು. ಹೆಂಡತಿಯೊಡನೆ ಕುಣಿಯಲು ಶಿವನಿಗೆ ಅಳುಕಿಲ್ಲ, ಅವಳು ಕೇಳದೆಯೇ ಅವಳಿಗೆ ತನ್ನರ್ಧ ದೇಹವನ್ನ ಕೊಟ್ಟ, ಅವಳ ಖುಷಿಗಾಗಿ ಸ್ಮಶಾನ ಬಿಟ್ಟು ಕೈಲಾಸದಲ್ಲಿ ನಿಂತ. ಅವರ ದಾಂಪತ್ಯ ನೋಡಿದ ಲೋಕ ಲೋಕಗಳೇ ಗಂಡಹೆಂಡತಿ ಎಂದರೆ
ಹೀಗಿರಬೇಕು- ಶಿವಪಾರ್ವತಿಯರ ಹಾಗೆ- ಅಂತ ಹೊಗಳುತ್ತಿತ್ತು.
ಒಮ್ಮೆ ಭಗೀರಥ ಎನ್ನುವವನಿಗೆ ಗಂಗೆಯನ್ನು ಭೂಮಿಗೆ ತರಬೇಕಾದ ಅಗತ್ಯ ಬಂತು. ಆದರೆ, ಗಂಗೆ ಭೂಮಿಗಿಳಿವ ರಭಸಕ್ಕೆ ಭೂಮಿ ಕೊಚ್ಚಿ ಹೋಗುವುದು ನಿಶ್ಚಿತ. ಹಾಗಾಗಿಯೇ ಶಿವನನ್ನು ಕುರಿತು ಭಗೀರಥ ತಪಸ್ಸು ಮಾಡಿದ. ಒಲಿದು ಬಂದ ಶಿವ, “”ಭಕ್ತಶಿರೋಮಣಿ, ಮನದ ಬಯಕೆಯೇನು ಹೇಳು!” ಅಂತಂದ. ಅದಕ್ಕೆ ಭಗೀರಥ, “”ಮಹಾದೇವ, ಗಂಗೆಯನ್ನು ಭೂಮಿಗೆ ಕರೆಸಬೇಕಾಗಿದೆ. ಅವಳು ಭೂಮಿಗೆ ಜಿಗಿಯವ ರಭಸಕ್ಕೆ ಭೂಮಿ ಕೊಚ್ಚಿ ಹೋಗುವುದಂತೆ. ನೀನೇ ಕಾಪಾಡಬೇಕು” ಎಂದ.
ಶಿವ ಉಪಾಯ ಮಾಡಿದ. ಗಂಗೆ ಜಿಗಿವ ದಾರಿಯಲ್ಲಿ ತಲೆಗೂದಲು ಬಿಚ್ಚಿಕೊಂಡು ನಿಂತ. ಗಂಗೆ ಜಂಭದಿಂದ ಜಿಗಿದಳು. ಶಿವ ಅವಳನ್ನು ಕೂದಲೊಳಗೆ ಬಂಧಿಸಿ ಜಟೆಯನ್ನು ಕಟ್ಟಿದ. ಗಂಗೆ ಸೋತಳು. ಜಟೆ ಸಡಿಲಗೊಳಿಸಿದಾಗ ಶಿವನ ಕೂದಲುಗಳ ಮೂಲಕ ಸಾವಧಾನವಾಗಿ ಬುವಿಗಿಳಿದಳು. ಶಿವ ಗಂಗೆಯನ್ನು ನೋಡಿ ಮುಗುಳು ನಕ್ಕ.
ಪಾರ್ವತಿ ಇದನ್ನೆಲ್ಲ ನೋಡುತ್ತಿದ್ದಳು. ಅವಳ ಒಳಗೆ ಸವತಿ ಮಾತ್ಸರ್ಯ ಹೊತ್ತಿ ಉರಿಯಿತು. ಹದಿಹರೆಯದ ತರುಣ-ತರುಣಿಯರಂತೆ ಪ್ರೇಮಸಾಗರದಲ್ಲಿ ಈಜಾಡುತ್ತಿದ್ದವರು ಅಸೂಯೆಯ ಕಿಚ್ಚಿಗೆ ಬಲಿಯಾದರು.
ನಂಚು ಅನ್ನೋದು ದೇವರನ್ನೇ ಬಿಟ್ಟಿಲ್ಲ ತಂಗಿ-ನಮ್ಮಂತವರ ಪಾಡೇನು?! ಪಾರ್ವತಿ ಶಿವನ ಬಳಿ ಮಾತು ಬಿಟ್ಟಳು, ಶಿವನ ಚಾಕರಿ ಬಿಟ್ಟಳು. ಶಿರದಲ್ಲಿ ಕೂತ ಗಂಗೆ ಕೆಳಗಿಳಿದು ಬರುವಂತಿಲ್ಲ. ಪಾರ್ವತಿ ಮನೆಕೆಲಸ ಮಾಡುತ್ತಿಲ್ಲ. ಶಿವ, ಪಾರ್ವತಿಯನ್ನು ಗದರಿದ. ಇದೇ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ಪಾರ್ವತಿಯೂ ಸಿಡಿದಳು.
“”ಸವತಿಯ ಬಳಿಯೇ ಎಲ್ಲ ಕೆಲಸ ಮಾಡಿಸಿಕೊಳ್ಳಿ. ಅವಳೆಂದರೆ ನಿಮಗೆ ಪ್ರೀತಿಯಲ್ಲವೆ!”
“”ಅವಳನ್ನು ಶಿರದಲ್ಲಿ ಧರಿಸಿರುವುದಷ್ಟೆ ಪಾರ್ವತಿ! ನೀನೇ ನನ್ನ ಹೃದಯ ನಿವಾಸಿನಿ”
“”ತನ್ನ ಗಂಡನ ದೇಹದಲ್ಲಿ ಮತ್ತೂಬ್ಬಳು ಹೆಣ್ಣಿರೋದನ್ನು ಯಾವ ಹೆಣ್ಣೂ ಸಹಿಸಲಾರಳು”.
“”ಜಗದ ತಾಯಿಯಾಗಿ ನೀನೇ ಏಕೆ ಇಂಥ ಅಸಂಬದ್ಧ ಮಾತನಾಡುತ್ತಿರುವೆ?”
“”ಅಸಂಬದ್ಧವೇನಿದೆ ಇದರಲ್ಲಿ? ಜಗದ ತಾಯಿಗೇನು ಹೃದಯವಿಲ್ಲವೆ? ಆ ಹರಿಗೆ ಶ್ರೀದೇವಿ-ಭೂದೇವಿ ಅಂತ ಇಬ್ಬರು ಮಡದಿಯರು. ತಮಗೂ ಆಸೆ ಹುಟ್ಟಿರೋದ್ರಲ್ಲಿ ಆಶ್ಚರ್ಯ ಏನಿಲ್ಲ!”
“”ಪಾರ್ವತಿ ಹದ್ದುಮೀರಿ ಮಾತಾಡಬೇಡ. ತಪ್ಪಾಯಿತೆಂದು ಕ್ಷಮೆ ಕೇಳು”
“”ನಿಮ್ಮ ಯೋಗಕ್ಷೇಮವನ್ನು ನಿಮ್ಮ ಮುದ್ದಿನ ಹೊಸ ಮಡದಿ ನೋಡಿಕೊಂಡಾಳು. ನಾನೊಂದು ಗಳಿಗೆಯೂ ಇಲ್ಲಿರಲಾರೆ. ಇದೋ ಹೊರಟೆ…”
ಒಂದು ದಿನವಿಡೀ ವಾಗ್ಯುದ್ಧ ಮಾಡಿ ಪಾರ್ವತಿ ಕೊನೆಗೆ ಕೈಲಾಸ ಬಿಟ್ಟು ಹೋದಳು. ಭೂಮಿ ತಲುಪಿದಳು. ದುಃಖ ಹಾಗೂ ಸಿಟ್ಟಿನಿಂದ ಬಿರಬಿರನೆ ಹೆಜ್ಜೆ ಹಾಕುತ್ತಿದ್ದಳು-ನಡೆಯುವ ರಭಸಕ್ಕೆ ಒಂದು ಗೆಜ್ಜೆ-ಮದುವೆಯ ಸಮಯದಲ್ಲಿ ಅಮ್ಮ ಕೊಟ್ಟದ್ದು-ಎÇÉೋ ಬಿತ್ತು. ಪಾರ್ವತಿ ಅದರ ಪರಿವೆಯೇ ಇಲ್ಲದೆ ಮುಂದೆ ಮುಂದೆ ನಡೆದು ಗುಹೆಯೊಳಗೆ ಸೇರಿ ತಪಸು ಪ್ರಾರಂಭಿಸಿದಳು- ತಪಸು ಮಾಡುತ್ತ ಕÇÉಾಗಿ ಹೋದಳು. ಆ ಕಲ್ಲಿನ ಒಂದು ಕಾಲಲ್ಲಿ ಮಾತ್ರಾ ಕಲ್ಲಿನ ಗೆಜ್ಜೆ ಇತ್ತು. ಒಂದು ಗೆಜ್ಜೆ ದಾರಿಯಲ್ಲಿ ಕಳಚಿ ಬಿದ್ದಿತ್ತಲ್ಲ- ಆ ಚಿನ್ನದ ಗೆಜ್ಜೆ ಆ ಊರಿನ ಮಹಾನ್ ಶಿವಭಕ್ತನೊಬ್ಬನಿಗೆ ದಾರಿಯಲ್ಲಿ ಸಿಕ್ಕಿತು.
ಅವನದನ್ನು ಪೂಜಾರಿಗೆ ತೋರಿಸಿದ. ಗುಹೆಯೊಳಗಿನ ಕಲ್ಲಿನ ದೇವಿಯ ಕಲ್ಲಿನ ಕಾಲಲ್ಲಿದ್ದ ಕಲ್ಲಿನ ಗೆಜ್ಜೆಯ ಹಾಗೆಯೇ ಇತ್ತು-ಅದನ್ನು ಮತ್ತೂಂದು ಕಾಲಿಗೆ ತೊಡಿಸಿ ಅವರೆಲ್ಲ ದೇವಿಯ ಆರಾಧನೆ ಪ್ರಾರಂಭಿಸಿದರು. ಒಂದು ಕಾಲಿಗೆ ಕಲ್ಲಿನ ಗೆಜ್ಜೆ, ಮತ್ತೂಂದು ಕಾಲಿಗೆ ಚಿನ್ನದ ಗೆಜ್ಜೆ- ವಿಚಿತ್ರ ಅನಿಸಿತು ಊರವರಿಗೆ. ದೇವಿಯ ಮಹಿಮೆಯನ್ನು ಪ್ರಶ್ನಿಸಲುಂಟೆ? ದುರ್ಗಾಪರಮೇಶ್ವರಿ ಆ ಊರಲ್ಲಿ ನಿಂತು, ತನ್ನ ದುಃಖವನ್ನು ಮರೆತು ಭಜಕರ ದುಃಖ ಕೇಳುವ ಕಲ್ಲಾದಳು.
ಇತ್ತ ಕೈಲಾಸದಲ್ಲಿ ಶಿವ ಯೋಚನೆಗೀಡಾದ. ಪಾರ್ವತಿಯಿಲ್ಲದ ಕೈಲಾಸ ಸ್ಮಶಾನವಾಯಿತು. ಕಸ ಗುಡಿಸಿಲ್ಲ, ರಂಗೋಲಿ ಹಾಕಿಲ್ಲ, ಅಡುಗೆ ಕೋಣೆಯಿಂದ ಒಗ್ಗರಣೆಯ ಪರಿಮಳ ಬರುತ್ತಿಲ್ಲ, ಬಟ್ಟೆಗಳನ್ನು ಮಡಚಿಟ್ಟಿಲ್ಲ- ಎಲ್ಲಕ್ಕಿಂತಲೂ ಮಿಗಿಲಾಗಿ ಲೋಕಕ್ಕಿನ್ನು ಆದರ್ಶ ದಂಪತಿಗಳೇ ಇಲ್ಲ! ಜಗದ ತಂದೆತಾಯಿಯರು ನಾವು-ಆದರ್ಶರಾಗಿ ಬಾಳಬೇಕಾದವರು. ನಾವೇ ಜಗಳ ಮಾಡಿಕೊಂಡೆವೆಂದು ಜನರಿಗೆ ತಿಳಿದರೆ ನಮ್ಮನ್ನು ಅಪಹಾಸ್ಯ ಮಾಡಿಯಾರು. ಹಾಗಾಗಬಾರದು. ತಾನೂ ಪಾರ್ವತಿಯೂ ಜಗಳವಾಡಿದ್ದೂ ಯಾರಿಗೂ ಗೊತ್ತಾಗಬಾರದು. ಹೀಗೆ ಯೋಚಿಸಿದ ಶಿವ ತನ್ನ ದಿವ್ಯದೃಷ್ಟಿಯಲ್ಲಿ ಅಂದು ನಡೆದದ್ದನ್ನು ನೋಡಿದ. ತಾನೂ ಪಾರ್ವತಿಯೂ ಜಗಳವಾಡುತ್ತಿದ್ದಾಗ ಒಂದು ಹುಳವೂ ಸುತ್ತಮುತ್ತಲೂ ಇಲ್ಲದ್ದು ಕಂಡಾಗ ಅವನಿಗೆ ಸಮಾಧಾನವಾಯಿತು. ಎಂದಿನಂತೆ ಗಜಚರ್ಮದ ಮೇಲೆ ಕುಳಿತು ತಪಸ್ಸಿಗಿಳಿದ.
ಆದರೆ, ಶಿವನ ಎಣಿಕೆ ತಪ್ಪಾಗಿತ್ತು. ಒಂದು ಹುಲ್ಲಿನ ಕಡ್ಡಿ ಅವರ ಮಾತುಕತೆಯನ್ನೆಲ್ಲ ಪೂರ್ತಿಯಾಗಿ ಕೇಳಿಸಿಕೊಂಡಿತ್ತು ಮತ್ತು ಎಲ್ಲವನ್ನೂ ನೆನಪಲ್ಲಿಟ್ಟುಕೊಂಡಿತ್ತು. ಅದರ ಅದೃಶ್ಯ ಶಿವನಿಗೆ ಗೊತ್ತಾಗಲಿಲ್ಲ ಅಥವಾ ಗೊತ್ತಾದರೂ ಈ ಹುಲ್ಲುಕಡ್ಡಿಯಿಂದ ಏನಾದೀತು ಎಂದುಕೊಂಡಿರಬಹುದು ನಮ್ಮ ಶಿವ. ಒಟ್ಟಿನಲ್ಲಿ ಹುಲ್ಲುಕಡ್ಡಿ ಶಿವಪಾರ್ವತಿಯರಿಗೆ ಮಾತ್ರ ತಿಳಿದಿರುವ ರಹಸ್ಯ ತನಗೂ ತಿಳಿದಿದೆಯೆಂದುಕೊಂಡು ಖುಷಿಯಾಗಿತ್ತು.
ದಿನಗಳುರುಳಿದವು. ಒಂದು ದಿನ ಯಾವುದೋ ಹುಳ ಹುಲ್ಲನ್ನು ತಿನ್ನಲು ಬಂದಿತು. ತನ್ನ ಆಯುಷ್ಯ ಮುಗಿಯಿತೆಂದು ಭಯಪಟ್ಟ ಹುಲ್ಲು ಹುಳದ ಬಳಿ, “”ಅಣ್ಣಾ… ಅಣ್ಣಾ… ನನ್ನನ್ನು ತಿನ್ನಬೇಡ. ನೀನು ಇದುವರೆಗೂ ಕೇಳಿರದ ಕಥೆ ಹೇಳೆ¤àನೆ ಕೇಳು. ಶಿವಪಾರ್ವತಿಯರು ಜಗಳವಾಡಿದ ಕಥೆ”
“”ಶಿವಪಾರ್ವತಿಯರು ಜಗಳವಾಡೋದುಂಟೆ?!” ಹುಳ ಆಶ್ಚರ್ಯದಿಂದ ಕಥೆ ಕೇಳಿತು. ಕಥೆ ಕೇಳ್ತಾ ಕೇಳ್ತಾ ಅದಕ್ಕೆ ಹುಲ್ಲನ್ನು ತಿನ್ನಬೇಕೆಂಬುದೇ ಮರೆತು ಹೋಯಿತು. ಹುಲ್ಲುಕಡ್ಡಿ ಆ ದಿನಕ್ಕೆ ಬದುಕಿತು.
ಮುಂದೊಂದು ದಿನ ಒಂದು ಕಪ್ಪೆ ಈ ಹುಳವನ್ನ ಹಿಡಿಯಲು ಬಂತು. ಹುಳ ಮರಣ ಭಯದಲ್ಲಿ, “”ಕಪ್ಪೆ ಮಾಮ ನನ್ನ ಕೊಲ್ಲಬೇಡ. ನಿನಗೊಂದು ಕಥೆ ಹೇಳೆ¤àನೆ, ಶಿವ ಪಾರ್ವತಿಯರು ಜಗಳವಾಡಿದ ಕಥೆ”. ಕಪ್ಪೆ ಕೂಡ ಆಶ್ಚರ್ಯದಿಂದ ಕಥೆ ಕೇಳಿತು. ಕಥೆ ಕೇಳ್ಳೋ ಆಶ್ಚರ್ಯದಲ್ಲಿ ಅದಕ್ಕೆ ಹುಳವನ್ನು ತಿನ್ನುವುದೇ ಮರೆತು ಹೋಯ್ತು. ಈ ಕಪ್ಪೆಯನ್ನು ಒಂದು ದಿನ ಹಾವು ಹಿಡಿದಾಗ ಅದೂ ಇದೇ ಕಥೆಯನ್ನು ಹೇಳಿ ಬದುಕಿಕೊಂಡಿತು. ಹಾವು ಆ ಕಥೆಯನ್ನು ಹದ್ದಿನ ಬಳಿ ಹೇಳಿ ಬದುಕಿಕೊಂಡಿತು.
ಹದ್ದು ಮುದಿಯಾಗಿತ್ತು. ಅದಕ್ಕೆ ಹಿಂದಿನಂತೆ ಚುರುಕಾಗಿ ಹಾರುವ ತಾಕತ್ತು ಇರಲಿಲ್ಲ. ಒಂದು ದಿನ ಅದು ಬೇಟೆಗಾರನ ಬಾಣವೊಂದಕ್ಕೆ ಸಿಲುಕಲಿ¨ªಾಗ ತಪ್ಪಿಸಲು ತಿಳಿಯದೆ, “”ಅಯ್ನಾ ಬೇಟೆಗಾರ… ನನ್ನನ್ನು ಕೊಲ್ಲಬೇಡ. ನಿನಗೊಂದು ಅಪರೂಪದ, ರಹಸ್ಯದ ಕಥೆ ಹೇಳುವೆ…” ಎಂದು ಕೂಗಿತು. ಬೇಟೆಗಾರ ಆಶ್ಚರ್ಯದಿಂದ ಬಿಲ್ಲು ಕೆಳಗಿರಿಸಿದ. ಹದ್ದು ಶಿವಪಾರ್ವತಿಯರು ಜಗಳವಾಡಿದ ಕಥೆಯನ್ನು ವಿಸ್ತಾರವಾಗಿ ಹೇಳಿತು. ಕಥೆ ಹೇಳಿದ ಸೊಬಗಿಗೆ ಮರುಳಾಗಿ ಬೇಟೆಗಾರ ಅದನ್ನು ಕೊಲ್ಲದೇ ಬಿಟ್ಟ. ಇದೇ ಬೇಟೆಗಾರ ಮುಂದೊಂದು ದಿನ ಕಾಡಿನಲ್ಲಿ ಪಯಣಿಗರನ್ನು ದೋಚಿದ ಆರೋಪಕ್ಕೆ ಗುರಿಯಾಗಿ ಸೈನಿಕರಿಂದ ಬಂಧಿತನಾದ. ರಾಜ ಅವನಿಗೆ ಮರಣದಂಡನೆ ವಿಧಿಸಿದ.
ಕೋತ್ವಾಲ ಅವನನ್ನು ನೇಣುಗಂಬದೆಡೆ ಕರೆದೊಯ್ದ. ಬೇಟೆಗಾರ ಬದುಕುವ ಕೊನೆಯ ದಾರಿಯಾಗಿ ಕೋತ್ವಾಲನಿಗೆ ಆ ಕಥೆ ಹೇಳಿದ. ಕಥೆ ಕೇಳುತ್ತ ನಿಂತ ಕೋತ್ವಾಲನಿಗೆ ಬೇಡನನ್ನು ನೇಣಿಗೇರಿಸುವುದೇ ಮರೆತು ಹೋಯಿತು. ಬೇಟೆಗಾರನನ್ನು ನೇಣುಗಂಬದ ಬಳಿಯೇ ಬಿಟ್ಟು ಅಲ್ಲಿಂದ ಹೊರಟ. ಬೇಡ ಕೋತ್ವಾಲನ ಬಳಿ ಏನೋ ಪಿಸುದನಿಯಲ್ಲಿ ಮಾತನಾಡುತ್ತಿರುವುದನ್ನೂ, ಕೋತ್ವಾಲ ನಸುನಗುತ್ತ ಅದಕ್ಕೆ ತಲೆಯಾಡಿಸುವುದನ್ನೂ ಕೋತ್ವಾಲನ ಸಹಾಯಕನೊಬ್ಬ ನೋಡುತ್ತಿದ್ದ. ಈ ಬೇಡ ಏನೋ ಜಾದೂ ಮಾಡುತ್ತಿದ್ದಾನೆಂಬುದು ಕೋತ್ವಾಲ ಅವನನ್ನು ನೇಣಿಗೇರಿಸದೆ ಹೊರಬಂದಾಗ ಹೊಳೆಯಿತು. ಸಹಾಯಕ ಕೂಡಲೇ ಒಳನುಗ್ಗಿ ಬೇಡನಿಗೆ ಮಾತನಾಡಲು ಅವಕಾಶವನ್ನೇ ಕೊಡದೆ ನೇಣಿನ ಹಗ್ಗವನ್ನೆಳೆದ. ಬೇಡನ ಕಥೆ ಅಲ್ಲಿಗೆ ಮುಗಿಯಿತು.
ಶಿವಪಾರ್ವತಿಯರ ಜಗಳದ ಕಥೆ ಲೋಕಕ್ಕೆ ಗೊತ್ತಾಗುವುದು ಸರಿಯಲ್ಲ ಎಂದುಕೊಂಡು ಕೋತ್ವಾಲ ಕಥೆಯನ್ನು ತನ್ನಲ್ಲೇ ಗುಟ್ಟು ಮಾಡಿದ. ತಾನು ಸಾಯುವ ಕಾಲಕ್ಕೆ ಕಥೆ ತನ್ನೊಳಗೇ ಸಾಯಬಾರದು ಎಂಬ ಕಾಳಜಿಯಲ್ಲಿ ಅವನು ತನ್ನ ಹಿರಿಯ ಮಗನನ್ನು ಕರೆದು ಈ ಕಥೆ ಹೇಳಿದ. ಹಿರಿಯ ಮಗ ತನ್ನ ಹಿರಿಯ ಮಗನಿಗೆ ವರ್ಗಾಯಿಸಿದ. ನನ್ನಪ್ಪನಿಗೆ ನಾನೊಬ್ಬಳೇ ಮಗಳು. ಅವನು ನನ್ನನ್ನು ಬಳಿ ಕರೆದು, “”ಆಯಿ… ನೀನು ಹೇಳುವ ಉಳಿದ ಕಥೆಗಳಂತಲ್ಲ ಇದು. ಎಂದು ಎಚ್ಚರಿಕೆ ಕೊಟ್ಟು ಈ ಕಥೆ ನನಗೆ ಹೇಳಿದ. ನನಗೇನು ಮಕ್ಕಳು ಮರಿಯೆ? ನಾನು ನಿನಗೆ ಹೇಳಿದೆ”
“”ಅಪರೂಪದ ಕಥೆಯಿದು ತಂಗಿ. ನೀನು ನನಗೆ ಎರಡಾಣೆಯಾದರೂ ಕೊಡಬೇಕು”
ತರುಣಿ ಆ ಕಥೆಯೊಳಗೆ ಇಳಿದಿದ್ದಳು. ಕಥೆ ಇಷ್ಟು ಬೇಗ ಮುಗಿಯಿತೆ ಅಂತ ಅವಳಿಗೆ ಬೇಸರವಾಯಿತು.
“”ಎಷ್ಟು ಸೊಗಸಾಗಿ ಕಥೆ ಹೇಳ್ತೀಯೆ ಆಯಿ! ನನ್ನ ಹತ್ತಿರ ನಿನಗೆ ಕೊಡಲು ಹಣವಿಲ್ಲ. ಆದರೂ ನಿನ್ನನ್ನು ನಿರಾಶೆ ಮಾಡಲ್ಲ ನಾನು” ಎಂದು ಅವಳು ತನ್ನ ಸೆರಗಿನಲ್ಲಿ ಅಡಗಿಸಿಟ್ಟಿದ್ದ ಪುಟ್ಟ ಗಂಟು ತೆಗೆದಳು.
“ಇಗೋ ನನ್ನದೊಂದು ಪುಟ್ಟ ಒಡವೆ. ನಿನಗಿರಲಿ…”
ಆಯಿಗೆ ಆಶ್ಚರ್ಯವಾಯಿತು. “”ಒಡವೆ ಗಿಡವೆ ಎಲ್ಲಾ ನನಗ್ಯಾಕೆ? ಪುಕ್ಕಟೆಯಾಗಿ ಕಥೆ ಹೇಳೆª ಅಂತಿಟ್ಕೊತೀನಿ. ತೆಗೆದುಕೊಳ್ಳವ್ವ” ಎಂದು ಆಯಿ ಅದನ್ನು ಅವಳೆದುರು ಚಾಚಿದಳು.
“”ವ್ಯಾಪಾರ ಅಂದ್ರೆ ವ್ಯಾಪಾರ! ಕೊಟ್ಟಿರೋ ನನಗೇ ಬೇಸರ ಇಲ್ಲ. ನೀನ್ಯಾಕೆ ಗುಮ್ಮಂತ ಮುಖ ಮಾಡಿದ್ದಿ. ಇಟ್ಟುಕೋ” ಎಂದೆನ್ನುತ್ತ ತರುಣಿ ಎದ್ದಳು. “”ನಾನಿನ್ನು ಹೋಗಬೇಕು. ಗಂಡ-ಮಕ್ಕಳು ಕಾಯ್ತಾ ಇದ್ದಾರೆ”.
ಆಯಿ ಮನೆಯ ಹೊರಗೆ ಕಣ್ಣು ಹಾಯಿಸಿದಳು. ಕಥೆ ಹೇಳುವ ಭರದಲ್ಲಿ ಕತ್ತಲಾದದ್ದೇ ತಿಳಿಯಲಿಲ್ಲ. ದೀಪ ಚಿಕ್ಕದಾಗಿ ಉರಿಯುತ್ತಿತ್ತು. ಹೊತ್ತು ಮುಳುಗುವ ಮೊದಲು ನೆರೆಮನೆಯಿಂದ ಎಣ್ಣೆ ತರಬೇಕೆಂದು ಮಾಡಿದ್ದಳು-ಅದೂ ಮರೆತು ಹೋಗಿತ್ತು.
“”ಕತ್ತಲೇರಿದೆ. ಈ ಕತ್ತಲೆಯಲ್ಲಿ ಹೇಗೆ ಹೋಗುತ್ತಿ?”
“”ನನಗೆ ಅಭ್ಯಾಸವಿದೆ ಆಯಿ. ನೀನು ಚಿಂತಿಸಬೇಡ. ಹೊಸ ಕಥೆಯನ್ನು ನೇಯುತ್ತ ಕುಳಿತುಕೊ. ನಾಳೆ ನನ್ನಂತಹ ಮತ್ತೂಬ್ಬಳು ಬಂದರೆ ಕಥೆ ಇಲ್ಲ ಅಂತಾಗಬಾರದಲ್ಲ!” ಎಂದು ಅವಳ ನಗುತ್ತ ಮನೆಯಿಂದ ಹೊರಟಳು.
ಆಯಿ ಅವಳು ಹೋಗುವುದನ್ನೇ ನೋಡುತ್ತ ನಿಂತಳು. ಬೀದಿಯ ಕೊನೆಯಲ್ಲಿ ಆ ತರುಣಿ ಮಾಯವಾದಳು. ಆಯಿಗೆ ನಿಜವೋ ಭ್ರಮೆಯೋ ಗೊತ್ತಾಗಿಲ್ಲ. ಆದರೂ ಅವಳಿಗೇನೋ ನಡೆಯಬಾರದ್ದು ನಡೆದಿದೆ ಅಂತ ಅನಿಸತೊಡಗಿತ್ತು. ಒಳಗೆ ಬಂದಾಗ ಬೆಳಕು ಅಸು ನೀಗಿತ್ತು. ಗಂಟಿನೊಳಗೇನಿದೆಯೆಂದು ನೋಡಲಿಕ್ಕೂ ಭಯವಾಯಿತು ಆಯಿಗೆ, ಬೆಳಗಾಗುವುದನ್ನು ಕಾಯುತ್ತಾ ಕೂತಳು.
ಬೆಳಗಾಯಿತು. ಆಯಿಗೆ ಜ್ವರ ಬಂದಿತ್ತು. ಇಡೀ ದೇಹ ನಡುಗುತ್ತಿತ್ತು. ಅವಳು ಏದುಸಿರು ಬಿಡುತ್ತ ತರುಣಿ ಕೊಟ್ಟ ಗಂಟನ್ನು ಹಿಡಿದುಕೊಂಡು ಊರಿನಲ್ಲಿದ್ದ ಗುಹೆಯ ದೇವಿಯ ಗುಡಿಯೆಡೆಗೆ ಓಡಿದಳು.
ಅಲ್ಲಿ ಆಗಲೇ ಜನ ಸೇರಿದ್ದರು. ಗುಹೆಯಲ್ಲಿದ್ದ ಕಲ್ಲಿನ ದೇವಿಯ ಕಲ್ಲಿನ ಕಾಲಿನ ಕಲ್ಲಿನ ಗೆಜ್ಜೆಯ ಅಚ್ಚು ಮಾಯವಾಗಿತ್ತು. ಮತ್ತೂಂದು ಕಾಲಲ್ಲಿ ಚಿನ್ನದ ಗೆಜ್ಜೆ ಹಾಗೆಯೇ ಇತ್ತು.
“”ಮ್… ಮ್…” ಆಯಿಗೆ ಮಾತೇ ಹೊರಡಲಿಲ್ಲ. ಆಯಿ ಕೆಳಗೆ ಬಿದ್ದಳು. ಗಂಟು ಬಿಚ್ಚಿಕೊಂಡಿತು- ಅದರಲ್ಲಿ ಈವರೆಗೆ ಯಾರೂ ಕಂಡಿರದ ಮತ್ತೂಂದು ಚಿನ್ನದ ಗೆಜ್ಜೆ ಇತ್ತು.
.
ಶಿವ ತಮ್ಮಿಬ್ಬರ ಜಗಳದ ಘಟನೆಯನ್ನು ಗುಟ್ಟು ಮಾಡುತ್ತಿದ್ದಾನೆಂದು ತಿಳಿದು ಪಾರ್ವತಿ ಮತ್ತಷ್ಟು ಸಿಟ್ಟುಗೊಂಡಳಂತೆ. “ನೀವು ಮಾಡಿದ ಗುಟ್ಟು ಕಥೆಯಾಗಿ ನನ್ನ ಕಿವಿಗೆ ಬೀಳುವವರೆಗೆ ನಾನು ಕೈಲಾಸಕ್ಕೆ ಮರಳ್ಳೋದಿಲ್ಲ’ ಅಂತ ಶಪಥ ಮಾಡಿದ್ದಳಂತೆ. ಕಥೆ ಹೇಳ್ಳೋ ವರ ಆಯಿಗೆ ಕೊಟ್ಟು ಅವಳ ಬಾಯಿಂದಲೇ ಕಥೆ ಹೇಳಿಸಿ ಕೈಲಾಸಕ್ಕೆ ತೆರಳಿದ್ದಳು ತಾಯಿ. “ದೇವರು ದೊಡ್ಡವನು’ ಅಂತ ಊರವರು ಮಾತಾಡಿಕೊಂಡರು. ದೇವರು ದೊಡ್ಡವನೋ ಕಥೆ ದೊಡ್ಡದೋ ಅಂತ ಈ ಕಥೆ ಹೇಳಿದ ನನ್ನನ್ನು ಕೇಳಿದರೆ ಕಥೆಯೇ ದೊಡ್ಡದು ಅಂತ ನಾನು ಹೇಳಿಯೇನು- ಯಾವ ಶಾಪವನ್ನಾದರೂ ಹರಿಸುವ ಶಕ್ತಿ ಕಥೆಗಿರದೆ ಮತ್ಯಾವುದಕ್ಕೆ ಇದ್ದೀತು!
ಆಯಿಯ ಕಥೆಯೂ ಅಂದಿಗೆ ಮುಗಿಯಿತು. “ಹಣಕ್ಕಾಗಿ ಆ ಮಹಾತಾಯಿಯ ಬಳಿಯೂ ಚೌಕಾಸಿಗಿಳಿದೆನಲ್ಲ’ ಎಂದು ಆಯಿ ದುಃಖದಲ್ಲಿ ಮುಳುಗಿ ಅಂದಿನಿಂದ ಕಥೆ ಹೇಳುವುದನ್ನೇ ಬಿಟ್ಟಳು, ಆಯಿ ಮೂಕಿಯಾದಳು. ಆಯಿ ಮೂಕಿಯಾದರೆ ಶಿವಪಾರ್ವತಿಯರ ಜಗಳದ ಕಥೆ, ಆಮೇಲೆ ನಡೆದ¨ªೆಲ್ಲ ಊರವರಿಗೆ, ನನಗೆ ಹೇಗೆ ಗೊತ್ತಾಯೆ¤ಂದು ನಿಮ್ಮ ಜಾಣ ಬುದ್ಧಿ ಕೇಳಬಹುದು! ಗುಟ್ಟಾಗಿ ಇಟ್ಟದ್ದು ಕಥೆ ಹೇಗಾಯ್ತು? ಬದುಕೋ ಆಸೆಯಲ್ಲಿ ಹುಲ್ಲುಕಡ್ಡಿ ಎಷ್ಟು ಹುಳಗಳ ಬಳಿ ಈ ಕಥೆ ಹೇಳಿದೆಯೋ?- ಶಿವನಿಗಾದರೂ ಗೊತ್ತೂ ಇಲ್ವೊ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.