Sunday Spcl: ಅಸಿಸ್ಟೆಂಟ್ ಡೈರೆಕ್ಟರ್
Team Udayavani, Feb 18, 2024, 11:10 AM IST
ಚಿತ್ರರಂಗದಲ್ಲಿ ಅರ್ಧ ವರ್ಷ ಅಸಿಸ್ಟೆಂಟ್ ಡೈರೆಕ್ಟರಾಗಿ ಕೆಲಸ ಮಾಡಿದ್ರೆ ಸಾಕು, ನಂತರ ಸುಲಭಕ್ಕೆ ಡೈರೆಕ್ಟರ್ ಆಗಿಬಿಡಬಹುದು ಎಂಬ ಹುಮ್ಮಸ್ಸು ಎಲ್ಲರಿಗೂ ಇರುವಂತೆ ನನಗೂ ಇತ್ತು. ಬಿ. ಎ ಓದಿ ಜವಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ನಮ್ಮೂರಿನ ವರ್ಮಾ ಒಂದು ದಿನ ಯಾರಿಗೂ ಹೇಳದೆ ಕೇಳದೆ ಬೆಂಗಳೂರಿಗೆ ತೂರಿ ಹೋಗಿದ್ದ. ಆರೇಳು ತಿಂಗಳ ನಂತರ ಕಾರಿನಲ್ಲಿ ನಾಲ್ಕು ಜನರ ಗ್ಯಾಂಗಿನೊಂದಿಗೆ ಊರಿಗೆ ಬಂದಿದ್ದ ಅವನನ್ನು ಮಾತಾಡಿಸಿದಾಗ- ವಿಷ್ಯ ಗೊತ್ತಾ ಮಂಜು? ನನ್ನ ಸಿನಿಮಾ ಮುಂದಿನ ತಿಂಗಳು ಸೆಟ್ಟೇರುತ್ತಿದೆ. ಹಳ್ಳಿ ಕಥೆ ಆದ್ದರಿಂದ ಲೊಕೇಷನ್ ನೋಡ್ಕೊಂಡು ಹೋಗೋಕೆ ಬಂದಿದೀನಿ ಕಣೋ’ ಎಂದಿದ್ದ. ಕಣ್ಣಿಗೊಂದು ಕಪ್ಪು ಫ್ರೆàಮಿನ ಕನ್ನಡಕ, ಜುಬ್ಟಾ ಪೈಜಾಮ ಹಾಕಿಕೊಂಡು ವರ್ಮ ಮಾತಾಡುತ್ತಿದ್ದ ರೀತಿ ನೋಡಿ, ಇವನು ನಿಜಕ್ಕೂ ಡೈರೆಕ್ಟರ್ ಆಗೋಗಿದ್ದಾನೆ, ಹೇಗಾದರೂ ಮಾಡಿ ಇವನ ಮನವೊಲಿಸಿ ಇವನಿರುವ ಟೀಂನಲ್ಲಿ ಕೆಲಸ ಗಿಟ್ಟಿಸಿಕೊಂಡರೆ ಸಾಕು; ನಾನೂ ಇನ್ನಾರು ತಿಂಗಳಿಗೆ ನಾಲ್ಕು ಜನ ಅಸಿಸ್ಟೆಂಟು ಡೈರೆಕ್ಟರು, ಒಬ್ಬ ಕ್ಯಾಮೆರಮನ್ ಜೊತೆ ಲೊಕೇಶನ್ ನೋಡೋಕೆ ಕಾರಿನಲ್ಲಿ ಬರಬಹುದು, ಆಮೇಲೆ ಸಿನಿಮಾ ಮೇಲೆ ಸಿನಿಮಾ ಮಾಡ್ತಾನೆ ಹೋಗಬಹುದು ಎಂದೆಲ್ಲೊ ಯೋಚಿಸಿ “ನಾನೂ ನಿನ್ನ ಜೊತೆ ಬರ್ತಿನಿ ಕಣೋ ವರ್ಮಾ, ಪ್ಲೀಸ್ ಬೇಡ ಅನ್ಬೇಡ, ನಂಗೂ ಸಿನಿಮಾ ಮಾಡೋಕೆ ಆಸೆ ಇದೆ’ ಎಂದು ಅಂಗಲಾಚಿದೆ.
ವರ್ಮಾ ತುಂಬಾ ಯೋಚಿಸಿ- “ಹತ್ತು ಸಾವಿರ ತಗೊಂಡು ರೆಡಿಯಿರು’ ಎಂದ. ಆ ಕ್ಷಣಕ್ಕೆ ವರ್ಮಾ ಎಂಬ ದೇವರು ವರ ಕೊಟ್ಟಂತೆ, ನಾನು ಭಕ್ತಿಯಿಂದ ಅವನ ಕಾಲಿಗೆ ಬೀಳುವಂತೆ ಅನ್ನಿಸಿತು. ಹತ್ತು ಸಾವಿರ ಕೂಡಿಸಲು ಓಡಿದೆ. ಅಪ್ಪ ಬೆಂಗಳೂರಿಗೆ ಕಳಿಸಲು ಸುತರಾಂ ಒಪ್ಪಲಿಲ್ಲ. ಅಮ್ಮನ ಬಳಿ ಗೋಗರೆದು ಬೇಡಿಕೊಂಡೆ. ಅಮ್ಮ ನೆರೆ ಮನೆಯವರನ್ನೆಲ್ಲಾ ಕೇಳಿದಳಂತೆ. ಅವರು ಬೆಳೆ ಕಟಾವಿಗೆ ಬಂದಿದ್ದರಿಂದ ಕೂಲಿಯಾಳುಗಳಿಗೆ ಬಟವಾಡೆಗೆ ದುಡ್ಡು ಬೇಕಾಗುತ್ತೆ, ಎಷ್ಟಿದ್ದರೂ ಕಮ್ಮಿಯೇ ಎಂದು ಹೇಳಿ ಕಳಿಸಿದರಂತೆ. ಕೊನೆಗೆ ತನ್ನ ಬಣ್ಣ ಮಾಸಿದ ಮಾಟಿ, ಕೈಬಳೆ ಅಡವಿಟ್ಟು ಹೊರಡುವ ರಾತ್ರಿಗೆ ಅಮ್ಮ ಹದಿನೈದು ಸಾವಿರ ತಂದು ಕೊಟ್ಟಿದ್ದಳು. ಅಪ್ಪ ನನ್ನನ್ನು ತಿನ್ನುವ ಹಾಗೆ ನೋಡುತ್ತಿದ್ದ.
ಇನ್ನೇನು ಬೆಂಗಳೂರು ಹತ್ತಿರವಿದೆ ಎನ್ನುವಾಗ ವರ್ಮಾ “ಹತ್ತು ಸಾವಿರ ಕೊಡು, ಮನೆಗೆ ಹೋದ ಮೇಲೆ ಕೊಡ್ತಿನಿ’ ಎಂದ. ನಾನು ಮರು ಮಾತಿಲ್ಲದೆ ದುಡ್ಡು ಕೊಟ್ಟಿದ್ದೆ. ಕಾರಿನಲ್ಲಿ ಬರುವಾಗ ಅಮ್ಮ ತುಂಬಾ ಕಾಡುತ್ತಿದ್ದಳು. ಒಂದು ದೊಡ್ಡ ಸಿನಿಮಾ ಮಾಡಿ ಬಂದ ದುಡ್ಡಿನಿಂದ ಅವಳಿಗೆ ರೇಷ್ಮೆ ಸೀರೆ, ಕಿವಿಯೋಲೆ ಕೊಡಿಸಬೇಕು ಎಂದುಕೊಂಡೆ. ಕಾರಿನಲ್ಲಿದ್ದವರೆಲ್ಲಾ ಶಾಟು, ಸೀನು, ಆಂಗೆಲ್ಲು, ಪ್ರಾಪರ್ಟಿ, ಲೆನ್ಸು ಅಂತೆಲ್ಲಾ ಜ್ಞಾನಿಗಳ ಹಾಗೆ ಮಾತಾಡುತ್ತಿದ್ದರು. ನನಗೋ ಏನೂ ತಳಬುಡ ಅರ್ಥವಾಗದೆ ಮಿಕಿಮಿಕಿ ನೋಡುತ್ತಿದ್ದೆ. ಜಾಲಹಳ್ಳಿ ಕ್ರಾಸಿನಲ್ಲಿ ತಿರುವು ತೆಗೆದುಕೊಂಡ ಕಾರು ಸಿಗ್ನಲ್ಲಿನಲ್ಲಿ ನಿಂತಿತು. ಅಲ್ಲಿಂದ ವರ್ಮಾ ತನ್ನ ರೂಮಿಗೆ ಕರೆದುಕೊಂಡು ಹೋದ. ಸಿಂಗಲ್ ಬೆಡ್ ರೂಮ್‌ನ ಆ ಚಿಕ್ಕ ರೂಮಿನಲ್ಲಿ ಆರು ಜನ ಒತ್ತಿಕೊಂಡು ಕೂತೆವು. ವರ್ಮಾ ಯಾರಿಗೋ ನಾನು ಕೊಟ್ಟಿದ್ದ ಹತ್ತು ಸಾವಿರ ರೂಪಾಯಿ ಕೊಟ್ಟು , ಇನ್ನು ಅರ್ಧ ವರ್ಷ ಬಾಡಿಗೆ ಕೇಳಬೇಡಿ ಎಂದಿದ್ದು ಕೇಳಿ ನನ್ನ ಎದೆ ಧಸಕ್ಕೆಂದಿತು.
ರಾತ್ರಿ ಊಟಕ್ಕೆ ಆರು ರೈಸ್ ಬಾತಿನ ಜೊತೆ, ಎರಡೆರಡು ಈರುಳ್ಳಿ ಬಜ್ಜಿಗಳು ಎಲ್ಲರಿಗೂ ಸಿಕ್ಕಿದ್ದವು. ನಾನು ಅಲ್ಲೇ ನಿದ್ದೆ ಹೋದೆ. ಎಲ್ಲರೂ ಅಲ್ಲಲ್ಲೇ ಒಬ್ಬರನೊಬ್ಬರು ತಬ್ಬಿಕೊಂಡು ಮಲಗಿದರು. ಬೆಳಿಗ್ಗೆ ಎದ್ದ ಕೂಡಲೇ ಶೌಚಕ್ಕೆ ಪಾಳಿ ಹಚ್ಚಿದ್ದು ನೋಡಿ ಇರುಸುಮುರುಸಾಯಿತು. “ಬೇಗ ರೆಡಿ ಆಗು, ಶೂಟಿಂಗಿಗೆ ಹೋಗಣ’ ಎಂದು ವರ್ಮಾ ಹೇಳಿದ್ದು ನನಗಲ್ಲ, ನೇರ ನನ್ನ ಕನಸಿಗೆ ಎಂದುಕೊಂಡು ಜಟಾಪಟ್ ತಯಾರಾಗಿ ನಿಂತೆ.
ನಾನು ವರ್ಮಾ ಒಂದು ಕಡೆ ಹೋದರೆ, ಉಳಿದವರು ಬೇರೆ ಬೇರೆ ಕಡೆ ಚದುರಿದರು. ಕಾರು ಈಗ ಬರುತ್ತೆ, ಆಗ ಬರುತ್ತೆ ಅಂತ ನಾನು ಕಾದಿದ್ದೇ ಬಂತು. ವರ್ಮಾನಿಗೆ ನಿನ್ನ ಕಾರೆಲ್ಲಿ ಹೋಯ್ತು ಎಂದು ಕೇಳಲು ಮನಸಾಗಲಿಲ್ಲ. ನೆನ್ನೆ ಕಾರು ತಿರುವು ತೆಗೆದುಕೊಂಡ ಜಾಗಕ್ಕೆ ನಡೆದುಕೊಂಡು ತಲುಪಿದೆವು. ವರ್ಮಾ ಅಲ್ಲೊಮ್ಮೆ ಇಲ್ಲೊಮ್ಮೆ ನಿಂತುಕೊಂಡು ಯಾರಿಗೋ- “ಲೊಕೇಷನ್ ಎಲ್ಲಿ, ಮಿನರ್ವ ಮಿಲ್ಸ್? ಆಯ್ತು ಬಂದೆ’ ಎಂದು ಮಾತಾಡುತ್ತಿದ್ದ. ಕಡೆಗೆ ಬಿಎಂಟಿಸಿ ಬಸ್ಸು ಹತ್ತಿ ನಾನೊಂದು ಕಡೆ ನಿಂತೆ. ವರ್ಮಾ ಫುಟ್‌ಬೋರ್ಡಿನ ತುದಿಯಲ್ಲಿ ನಿಂತು ಹಣೆಯನ್ನು ಕೈಯಲ್ಲಿ ಒರೆಸಿಕೊಳ್ಳುತ್ತಿದ್ದ.
ಮಿನರ್ವ ಮಿಲ್ಸ್ ತಲುಪುತ್ತಿದ್ದಂತೆ ವರ್ಮಾಗೆ ಯಾರೋ ಬಾಯಿಗೆ ಬಂದಂತೆ ಬಯ್ದು ಒಳಗೆ ಕರೆದುಕೊಂಡು ಹೋದ. ನಾನು ಸ್ಪಾಟ್‌ಲೈಟುಗಳಿಂದ ಚಿಮ್ಮುತ್ತಿದ್ದ ಬೆಳಕಿನ ಗಮ್ಯವನ್ನು ತದೇಕ ಚಿತ್ತದಿಂದ ನೋಡಿದೆ. ಹತ್ತಾರು ಕ್ಯಾಮೆರಗಳು, ಗಲಿಬಿಲಿಯಲ್ಲಿ ಓಡುವ ಜನರು, ವಾರ್ಮಪ್ ಮಾಡಿಕೊಳ್ಳುತ್ತಿದ್ದ ನಟಿಯರು, ಸ್ಟಂಟ್ ಕಲಿಸುತ್ತಿದ್ದ ಫೈಟ್ ಮಾಸ್ಟರು! ಓಹ್, ಅಲ್ಲಿದ್ದ ಲೋಕ ನನ್ನನ್ನು ಒಮ್ಮೆಲೆ ಮೂಕನನ್ನಾಗಿಸಿತು. ವರ್ಮಾ ಕೈಯ್ಯಲ್ಲೊಂದು ಪ್ಯಾಡು ಹಿಡಿದುಕೊಂಡು ಒಂದೇ ಸಮನೆ ಓಡಿ ಜಿಮ್ಮಿಜಿಪ್ಪುಗಳನ್ನು ಹೇಗೆ ಜೋಡಿಸಬೇಕು, ಸೀನ್ ಹೇಗೆ ಕವರ್, ಫೋಕಲ್ ಲೆಸ್ಟ್ ಎಷ್ಟು, ಮುಂದಿನ ಶಾಟಿನ ಹೇಗೆ ಟೇಕ್ ಆಗುತ್ತೆ ಎಂದು ಯಾರಿಗೋ ಹೇಳುತ್ತಿದ್ದ. “ಎಲ್ರಿ ಅವನು ಯೂಸ್ಲೆಸ್ ಫೆಲೋ, ಸೆಟ್ ಪ್ರಾಪರ್ಟಿ ಇನ್ನೂ ಬಂದಿಲ್ಲ, ಆರ್ಟ್ ಡೈರೆಕ್ಟರ್ ಶೆಡ್ಯುಲ್ ಚೆಂಜ್ ಮಾಡಲ್ಲ ಅಂತಿದ್ದಾರೆ’ ಎಂದು ವರ್ಮಾನನ್ನು ಹಿಗ್ಗಾಮುಗ್ಗಾ ಬೈಯ್ಯುತ್ತಿದ್ದ.
ಇವನೇ ಸಿನಿಮಾದ ಡೈರೆಕ್ಟರ್ ಆಗಿ ಯಾಕೆ ಎಲ್ಲರಿಂದ ಹೀಗೆ ಬೈಸಿಕೊಳ್ತಿದ್ದಾನೆ? ಇವನೇ ಎಲ್ಲರನ್ನೂ ತನ್ನ ಹಿಡಿತದಲ್ಲಿ ಇಟ್ಟುಕೊಂಡು ಎಲ್ಲರಿಗೂ ಕೆಲಸ ಹೇಳಬೇಕಾದವನು, ಯಾಕಿಂಗೆ ಪಿಚಕಾರಿ ಥರ ಆಡ್ತಿದ್ದಾನೆ ಎಂದು ಯೋಚಿಸಿದೆ. ಒಂದು ನಿಮಿಷದ ಮೌನದ ಬಳಿಕ ಎಲ್ಲರೂ ಡೈರೆಕ್ಟರು ಬಂದ್ರು ಎಂದು ಅಲರ್ಟ್ ಆಗಿ ನಿಂತು ಆಗಷ್ಟೇ ಬಂದ ಮತ್ತೂಬ್ಬನನ್ನು ಗೌರವಿಸಿದರು. ನನಗೆ ಕಣ್ಣು ಮಂಜಾಯಿತು. ಅಮ್ಮನ ಮಾಟಿ, ಬಳೆಗಳು ಕಣ್ಣ ಮುಂದೆ ಹಾದು ಹೋದವು.
ವರ್ಮಾ ಯಾಕೆ ನನಗೆ ಸುಳ್ಳು ಹೇಳಿದ, ಅವನಿನ್ನೂ ಡೈರೆಕ್ಟರ್ ಆಗಿಲ್ಲವೇ? ಇವನ ಜೊತೆಯಿದ್ದವರೆಲ್ಲಾ ಎಲ್ಲರೂ ಬೇರೆ ಬೇರೆ ಸಿನಿಮಾದ ಅಸಿಸ್ಟೆಂಟ್ ಡೈರೆಕ್ಟರುಗಳೇ? ಆರೇಳು ತಿಂಗಳು ತನಕ ಉಳಿಸಿಕೊಂಡ ಬಾಡಿಗೆ ಕಟ್ಟಲು ನನಗೆ ಮೋಸ ಮಾಡಿದನೇ ವರ್ಮಾ? ರಾತ್ರಿ ತಂದ ರೈಸ್ ಬಾತಿನಲ್ಲಿ ಅಮ್ಮನ ಕಣ್ಣಿರಿನ ಹನಿಗಳಿದ್ದವೇ, ಅಪ್ಪನ ಕೆಂಗಣ್ಣಿನ ನೋಟವಿತ್ತೇ, ವರ್ಮಾ ನನ್ನ ಹಣ ಯಾವಾಗ ವಾಪಸು ಕೊಡುತ್ತಾನೋ, ನಾನು ಸಹ ಆರು ತಿಂಗಳು ಕಾಯಬೇಕೋ ಏನೋ, ನನಗೆ ಮುಖ ತೋರಿಸದೆ ಈಗ ಎಲ್ಲಿ ಹೋಗಿ ಮರೆಯಾಗುತ್ತಾನೆ ಎಂದು ನೋಡಿದೆ. ಡೈರೆಕ್ಟರ್ ಬಳಿ ಹಲ್ಲು ಗಿಂಜುತ್ತಾ ಮಾತಾಡುತ್ತಾ ವರ್ಮಾ ನನ್ನನ್ನೊಮ್ಮೆ ನೋಡಿದ. ಜೀವ ತಳಮಳಿಸಿತು.
-ಶಶಿ ತರೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.