ಒಂಟಿ ಹಕ್ಕಿ: ನನ್ನ ಕಷ್ಟ, ತ್ಯಾಗ ಇವರಿಗೆ ತಿಳಿಯಲಿಲ್ವಲ್ಲಾ
Team Udayavani, Aug 20, 2023, 12:08 PM IST
ಬಸ್ ದಿಢೀರನೆ ಬ್ರೇಕ್ ಹಾಕಿದಾಗ ಸೆಕೆಗೆಂದು ಬೆವರೊರೆಸಿಕೊಳ್ಳಲು ಕೈ ಸಡಿಲಾಗಿಸಿದ್ದ ಶ್ರೀಧರ ಮುಗ್ಗರಿಸಿ ಎದುರಿನ ಹೆಂಗಸಿನ ಮೇಲೆ ಬೀಳುವಂತಾಯಿತು. ಸಾವರಿಸಿಕೊಂಡು ಸರಿಯಾಗಿ ನಿಂತಾಗ ಆಕೆ ತಿರುಗಿ ನೋಡಿ ಮುಖ ಸಿಂಡರಿಸಿ- “ಬೇಕಂತಾನೇ ಮೈಮೇಲೆ ಬೀಳ್ತಾರೆ. ವಯಸ್ಸಾದರೂ ಚಪಲಕ್ಕೇನೂ ಕಡಿಮೆ ಇಲ್ಲ. ನಾಚಿಕೆ ಇಲ್ಲದವರು!’ ಎಂದು ಸಹಸ್ರನಾಮಾರ್ಚನೆ ಮಾಡತೊಡಗಿದಳು. ಸೀಟ್ ಸಿಗದ ಕರ್ಮಕ್ಕೆ ನಿಂತುಕೊಂಡು ಪ್ರಯಾಣಿಸುತ್ತಾ ಬೇಸರದಲ್ಲಿದ್ದ ಶ್ರೀಧರ ಅವಳ ಮಾತಿನಿಂದ ಕುಸಿದೇ ಹೋದ. ಇಳಿಯಬೇಕಿದ್ದ ನಿಲ್ದಾಣ ಇನ್ನೂ ದೂರವಿದ್ದರೂ, ಮುಂದೆ ಬಸ್ ನಿಂತ ಜಾಗದಲ್ಲೇ ಇಳಿದು, ಒಂದು ರೀತಿಯ ವಿಹಲ್ವತೆಯಿಂದ ಕಾಲೆಳೆಯುತ್ತಾ ನಡೆದು ಮನೆ ಸೇರಿದ.
ಮನೆ ತಲುಪಿ ಉಸ್ಸಪ್ಪಾ ಅಂತ ಕುಳಿತರೂ ಅವನ ಮನವಿನ್ನೂ ಅಶಾಂತವಾಗಿಯೇ ತೊಳಲಾಡುತ್ತಿತ್ತು. ಎದುರಿನ ಗೋಡೆಯ ಮೇಲೆ ಗಂಧದ ಮಾಲೆಯೊಳಗೆ ನಗುತ್ತಿದ್ದ ಅಮ್ಮನ ಫೋಟೋ ನೋಡಿ ಮನ ಬಿಕ್ಕಳಿಸಿತು. ಗತಜೀವನದ ನೆನಪುಗಳು ಚಲನಚಿತ್ರದ “ರೀಲ್ಸ್’ನಂತೆ ಮುಂದೋಡತೊಡಗಿದಾಗ ಹಾಗೆಯೇ ಹಿಂದೊರಗಿ ಕಣ್ಮುಚ್ಚಿದ.
***
ಶ್ರೀಧರ, ಕೃಷ್ಣರಾಯರು ಮತ್ತು ಸುಂದರಮ್ಮನವರ ಮೊದಲ ಸಂತಾನ. ಅವರ ಹಿಂದೆ ಸಾಲಾಗಿ ಐದು ಗಂಡು ಮತ್ತು ಐದು ಹೆಣ್ಣುಮಕ್ಕಳು. ಒಟ್ಟಿಗೆ ಹದಿಮೂರು ಜನರ ತುಂಬು ಸಂಸಾರ. ಸಾಲದ್ದಕ್ಕೆ ಅವರ ಅಜ್ಜಿ ಮತ್ತು ವಿಧವೆ ಸೋದರತ್ತೆಯೂ ಅವರ ಜೊತೆಗಿದ್ದರು. ಶ್ರೀಧರ ಹತ್ತನೆ ತರಗತಿಗೆ ಬರುತ್ತಿದ್ದಂತೆ ಕೃಷ್ಣರಾಯರು ಅನಾರೋಗ್ಯದಿಂದ ತೀರಿಕೊಂಡರು. ತುಂಬು ಸಂಸಾರದ ನೊಗವೀಗ ಎಳೆಯ ಶ್ರೀಧರನ ಹೆಗಲಿಗೆ ಬಿತ್ತು. ಖರ್ಚು ಒಂದೇ ಎರಡೇ. ಮನೆಯ ಹಿರಿಯ ಹೆಂಗಸರು ಹಪ್ಪಳ, ಸಂಡಿಗೆ, ಪುಡಿಗಳನ್ನು ಮಾಡಿ ಸಂಸಾರ ತೂಗಿಸಲು ಪ್ರಯತ್ನ ಮಾಡಿದರೂ ತಲೆಗೆಳೆದರೆ ಕಾಲಿಗಿಲ್ಲ, ಕಾಲಿಗೆಳೆದರೆ ತಲೆಗಿಲ್ಲದ ಪರಿಸ್ಥಿತಿ. ಅಂತೂ ಇಂತೂ ಮೆಟ್ರಿಕ್ ಮುಗಿಸಿದ ಶ್ರೀಧರ ಟಿ.ಸಿ.ಎಚ್ ಮಾಡಿದ.
ಮುಂದೆ ಐದು ವರ್ಷ ಯಾವುದೇ ಕೆಲಸವಿರದೇ ಖಾಲಿ ಕುಳಿತಿರಬೇಕಾಯಿತು. ಬೆಳೆಯುತ್ತಿರುವ ತಂಗಿಯರು, ತಮ್ಮಂದಿರು. ಮನೆಯ ಕಷ್ಟದ ಅರಿವಿದ್ದದ್ದು ಶ್ರೀಧರನಿಗೆ ಮಾತ್ರ. ಕೊನೆಗೆ ಯಾರದೋ ಕೈ ಕಾಲು ಕಟ್ಟಿ ಒಂದು ಶಾಲೆಯಲ್ಲಿ ಶಿಕ್ಷಕನಾಗಿ ನೇಮಕವಾಯಿತು. ಬರುತ್ತಿದ್ದ ಅಲ್ಪ ಸಂಬಳದಲ್ಲೇ ಸುಂದರಮ್ಮ ಹೇಗೋ ಮನೆದೂಗಿಸಿಕೊಂಡು ಹೋಗುತ್ತಿದ್ದರು. ಕಾಸಿಗೆ ಕಾಸು ಕೂಡಿಸಿ ಅಮ್ಮನ ಬಳಿ ನೀಡುತ್ತಿದ್ದ ಶ್ರೀಧರ, ಸಂಜೆ ಮಕ್ಕಳಿಗೆ ಸಂಗೀತ ತರಗತಿಯನ್ನು ಕೂಡ ತೆಗೆದುಕೊಳ್ಳುತ್ತಿದ್ದ. ತಮ್ಮಂದಿರನ್ನು ದೂರದ ಪಟ್ಟಣಗಳಿಗೆ ಕಳುಹಿಸಿ ಚೆನ್ನಾಗಿ ಓದಿಸಿದ. ಅವರೆಲ್ಲಾ ಒಳ್ಳೆಯ ಕೆಲಸ ಹಿಡಿದಾಗ ಹಿಗ್ಗಿನಿಂದ ಕುಣಿದಾಡಿದ. ತಂಗಿಯರನ್ನೂ ಅವರ ಇಚ್ಛೆಯಂತೆ ಓದಿಸಿ ಒಳ್ಳೆಯ ಮನೆಗಳಿಗೆ ಮದುವೆ ಮಾಡಿಕೊಟ್ಟು ಜವಾಬ್ದಾರಿ ತೀರಿಸಿದ. ಇದನ್ನೆಲ್ಲಾ ಮಾಡಲು ಅವನು ಪಟ್ಟ ಪರಿಪಾಟಲು ಅವನ ತಾಯಿಗಷ್ಟೇ ಗೊತ್ತಿತ್ತು. ತಮ್ಮ ತಂಗಿಯರು ಅಣ್ಣ ಹೇಗೆ ಇಷ್ಟೆಲ್ಲಾ ನಿಭಾಯಿಸುತ್ತಿದ್ದೀಯಾ ಅಂತ ಸೊಲೆತ್ತಲಿಲ್ಲ.
ಅಷ್ಟರಲ್ಲಾಗಲೇ ಅವನಿಗೆ ಪ್ರಾಯ ಕಳೆದು 40 ವರ್ಷ ದಾಟಿತ್ತು. ತಮ್ಮಂದಿರು ಒಬ್ಬೊಬ್ಬರೇ ಮದುವೆಯ ಮಾತು ತೆಗೆದು ವಿವಾಹ ಬಂಧನಕ್ಕೆ ಒಳಗಾದರು. ಅಣ್ಣನಿಗೆ ಮದುವೆಯಾಗಿಲ್ಲ ಎಂದು ಅವರ್ಯಾರೂ ಯೋಚಿಸಲಿಲ್ಲ. ಮಕ್ಕಳು ತಮ್ಮ ಸ್ವಾರ್ಥವನ್ನು ನೋಡಿಕೊಂಡದ್ದು ಶ್ರೀಧರನ ತಾಯಿಗೆ ಬೇಸರ ತರಿಸಿದರೂ ಹೇಳುವುದು ಯಾರಲ್ಲಿ? ಮದುವೆಯಾದ ಮೇಲೆ ಅಕಸ್ಮಾತ್ ಶ್ರೀಧರ ಬದಲಾಗಿಬಿಟ್ಟರೆ ಎಂಬ ಆತಂಕವೂ ಆಕೆಗಿತ್ತು.
ಬಯಕೆಗಳು ಕೊನರುವ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ ಅರಿತು ಮನಸ್ಸು ದೃಢವಾಗಿರಿಸಿಕೊಂಡ ಶ್ರೀಧರನಿಗೆ, ತಲೆಯಲ್ಲಿ ಬೆಳ್ಳಿಗೂದಲು ಇಣುಕ ತೊಡಗಿದಾಗಲೇ ಪ್ರಾಯ ಕಳೆದದ್ದು ಗಮನಕ್ಕೆ ಬಂದಿತ್ತು. ಪ್ರಾಯ ಸಂದ ಮಗನನ್ನು ಕಂಡು ಅವನ ಒಂಟಿತನಕ್ಕೆ ಪರೋಕ್ಷವಾಗಿ ತಾನೂ ಕಾರಣವಾದೆನೆಂಬ ಪರಿತಾಪ ಶ್ರೀಧರನ ತಾಯಿಯನ್ನು ಒಳಗೊಳಗೆ ಸುಡುತ್ತಿತ್ತು.
ಒಂದೊಮ್ಮೆ ಎಲ್ಲರೂ ಹಬ್ಬವೊಂದಕ್ಕೆ ಮನೆಯಲ್ಲಿ ಸೇರಿದ್ದಾಗ ಸುಂದರಮ್ಮ ಶ್ರೀಧರನ ಮದುವೆಯ ವಿಚಾರವೆತ್ತಿದರು. “ಅಯ್ಯೋ ಹೋಗಮ್ಮಾ! ಮುದುಕನಿಗೆ ಯಾರು ಹೆಣ್ಣು ಕೊಡ್ತಾರೆ ಬಿಡು, ಈ ವಯಸ್ಸಿನಲ್ಲಿ ಮದುವೆ ಅಂದರೆ ನೋಡಿದವರು ನಕ್ಕಾರು’ – ಕೊನೆಯ ತಮ್ಮ ವ್ಯಂಗ್ಯವಾಗಿ ಅಂದದ್ದಕ್ಕೆ ಉಳಿದವರು ದನಿಗೂಡಿಸಿದ್ದನ್ನು ಮರೆಯಲ್ಲಿ ನಿಂತು ಕೇಳಿಸಿಕೊಂಡ ಶ್ರೀಧರನಿಗೆ ಪಿಚ್ಚೆನಿಸಿತು. ತಾನು ಇಷ್ಟು ವರ್ಷಗಳಲ್ಲಿ ಪಟ್ಟ ಕಷ್ಟ, ಇವರೆಲ್ಲರ ಜೀವನವನ್ನು ಚೆನ್ನಾಗಿಡಲು ಮಾಡಿದ ಕೆಲಸಗಳು, ಅದರ ಹಿಂದಿನ ಮಮತೆ, ವಾತ್ಸಲ್ಯ, ಅಣ್ಣನೆಂಬ ಆದರ ಎಲ್ಲವೂ ಮರೆತುಹೋಯಿತೇ? ಅಣ್ಣನಿಗೂ ಒಂದು ಮನಸ್ಸಿದೆ. ಅವನಿಗೂ ಆಸೆಗಳಿರುತ್ತವೆ ಎಂದು ಅರಿಯದೇ ಹೋದರಲ್ಲಾ… ತಾನು ಮಾಡಿದ ತ್ಯಾಗ ಯಾರಿಗೂ ಕಾಣದಾಯಿತಲ್ಲಾ ಎಂದು ಕಡು ವಿಷಾದವಾಯಿತು. ಅಲ್ಲಿಗೆ ಮದುವೆಯ ವಿಚಾರಕ್ಕೆ ಇತಿಶ್ರೀಯಾಯಿತು.
ಕಾಲ ಯಾರಿಗೂ ಕಾಯುವುದಿಲ್ಲ ಅಲ್ಲವೇ… ಸುಂದರಮ್ಮ ಹಾಸಿಗೆ ಹಿಡಿದರು. ಪ್ರಾಣ ಹೋಗುವ ಕೆಲ ದಿನ ಮುನ್ನ ಶ್ರೀಧರನನ್ನು ಬಳಿ ಕರೆದು ಕೈ ಹಿಡಿದುಕೊಂಡರು. “ಶ್ರೀಧರಾ… ನನ್ನ ಕ್ಷಮಿಸಿ ಬಿಡೋ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿ ಹೊರಿಸಿ ನಿನ್ನ ಇಡೀ ಬದುಕನ್ನು ಕುಟುಂಬಕ್ಕೋಸ್ಕರ ಬಳಸಿಕೊಂಡೆವು. ನಿನಗೂ ಒಂದು ಜೀವನವಿದೆ ಎಂಬ ನೆನಪೇ ಯಾರಿಗೂ ಆಗಲಿಲ್ಲ. ಈಗ ನನ್ನ ದಿನಗಳೂ ಮುಗಿಯುತ್ತಾ ಬಂದಿವೆ. ನಿನ್ನನ್ನು ಹೀಗೆ ಒಂಟಿಯಾಗಿ ಬಿಟ್ಟು ಹೋಗಲು ಮನಸ್ಸೇ ಬಾರದು. ಆದರೇನು ಮಾಡಲಿ ಹೇಳು? ಬೇರೆ ದಾರಿ ಇಲ್ಲ. ಮೇಲಿನವನು ಕರೆದಾಗ ಭೂಮಿಯ ಋಣ ಮುಗಿಸಲೇಬೇಕು. ನಿನಗೊಂದು ಮದುವೆಯಾಗಿ ಸಂಸಾರ ಎಂದಿದ್ದರೆ ನಾನು ನೆಮ್ಮದಿಯಾಗಿ ಸಾಯುತ್ತಿದ್ದೆ. ಅದಕ್ಕೆ ಕಲ್ಲು ಹಾಕಲು ನಾನೂ ಕಾರಣವಾದೆ. ನನ್ನನ್ನು ಕ್ಷಮಿಸಿಬಿಡಪ್ಪಾ…’ ಎಂದು ಕಣ್ಣೀರಿಟ್ಟಾಗ ಶ್ರೀಧರ, ಅಮ್ಮನನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅತ್ತಿದ್ದ.
ಅಮ್ಮ ತೀರಿ ಹೋಗಿ ಕಾರ್ಯಗಳೆಲ್ಲಾ ಮುಗಿದ ಅನಂತರ ಒಟ್ಟು ಸೇರಿದ ತಮ್ಮ, ತಂಗಿಯರು, ಅತ್ತಿಗೆಯರು ಮತ್ತು ಭಾವಂದಿರ ಬಳಗ ಗುಸುಪಿಸು ಮೀಟಿಂಗ್ ನಡೆಸಿತ್ತು. ಅವರ ಪ್ರತಿನಿಧಿಯಾಗಿ ಕೊನೆಯ ತಮ್ಮ ಬಂದವನೇ- “ಅಣ್ಣಾ ಊರಲ್ಲಿ ನಿನಗೆ ಮನೆ ಇದೆ. ಕೆಲಸ ಇದೆ. ಇನ್ನೇನು ಬೇಕು. ನಾವು ವರ್ಷಕ್ಕೊಂದು ಸಲ ಬಂದು ಹೋಗ್ತೀವೆ. ಆರಾಮಾಗಿರು’ ಎಂದಾಗ ಮಾತು ಮೂಕವಾಗಿತ್ತು. ಬಯಕೆಗಳು ಯಾವಾಗಲೋ ಸತ್ತು ಕೊರಡಾಗಿದ್ದ ಅವನ ಹೃದಯಕ್ಕೆ ಕೊಡಲಿಯೇಟು ಬಿದ್ದಿತ್ತು.
***
ಅಮ್ಮನ ಫೋಟೋ ನೋಡುತ್ತಾ ಕುಳಿತಿದ್ದ ಶ್ರೀಧರನ ಕಣ್ಣಂಚಿನಿಂದ ಕಂಬನಿಯೊಂದು ಜಾರಿ ನೆಲಕ್ಕೆ ಬಿದ್ದಿತ್ತು. ಎದ್ದು ಕಣ್ಣೊರೆಸಿಕೊಂಡು ಕನ್ನಡಕ ಏರಿಸಿ ರೇಡಿಯೋ ಹಾಕಿದಾಗ, “ಆ ಕರ್ಣನಂತೆ ನೀ ದಾನಿಯಾದೆ, ಇನ್ನೊಂದು ಜೀವಕೆ ಆಧಾರವಾದೆ…’ ಹಾಡು ಅಲೆಅಲೆಯಾಗಿ ಕೇಳಿಸತೊಡಗಿತು.
-ರಶ್ಮಿ ಉಳಿಯಾರು, ಬೆಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.