ನಾಕ್ ಒಂದ್ಲಾ ನಾಕೂ…?
Team Udayavani, Dec 3, 2023, 1:15 PM IST
ನಾಲ್ಕು ಅಂದ್ರೆ ನಾಲ್ಕೇ ತಾನೇ? ಈ ಪ್ರಶ್ನೆ ತುಂಬಾ ದಿನಗಳಿಂದ ನನ್ನನ್ನು ಕಾಡುತ್ತದೆ. “ನಾಲ್ಕೊಂದ್ಲ ನಾಕು, ನಾಕೆರಡ್ಲ ಎಂಟು. ಇಷ್ಟೇ ಲೆಕ್ಕದ ನಂಟು’ ಅಂತಾ ಹಾಡು ಕೇಳಿದಾಗಲೆಲ್ಲ, ಈ ನಾಲ್ಕರ ಮಗ್ಗಿಯನ್ನೇ ಹಾಡಿಗೆ ಯಾಕೆ ತೆಗೆದುಕೊಂಡ್ರೂ ಅಂತಾ ತಲೆಕೆರೆದುಕೊಳ್ಳುವ ಹಾಗಾಗುತ್ತದೆ. ಅದರಲ್ಲೂ ಲೆಕ್ಕ ಎನ್ನುವುದು ನಾಲ್ಕು ದಿಕ್ಕಿನಿಂದ ಬಂದು ತಲೆಗೆ ಗುದ್ದಿದರೂ, ಒಳಗೆ ಹೋಗದ ವಿಷಯವನ್ನು ನಾಲ್ಕರ ಮಗ್ಗಿ ಹೇಳಿ, “ಇಷ್ಟೇ ಲೆಕ್ಕದ ನಂಟು…’ ಅಂತಾ ಹಾಡಿದ್ರೆ ಏನು ಹೇಳ್ಳೋದು ಹೇಳಿ.
ಈ ಬಾಯಿ ಮಾತಿನ ನಾಲ್ಕರ ಲೆಕ್ಕ ಮಾತ್ರ ಇದುವರೆಗೂ ಅರ್ಥ ಆಗಿಲ್ಲ. ಮೊನ್ನೆ ತಂಗಿಯ ಮನೆಗೆ ಹೋದಾಗ, “ಕುಳಿತುಕೋ ಅಕ್ಕಾ, ನಾಲ್ಕೇ ನಾಲ್ಕು ಪಾತ್ರೆ ಇದಾವೆ ತೊಳೆದಿಟ್ಟು ಬರಿ¤àನಿ’ ಎಂದಾಗ “ಸ್ವಲ್ಪ ಆದರೆ ನಾನೇ ತೊಳೆದಿಡುತ್ತೇನೆ. ನೀ ಬೇರೆ ಕೆಲಸ ನೋಡಿಕೋ…’ ಎಂದು ಬಲವಂತವಾಗಿ ಅವಳನ್ನು ಕಳಿಸಿ, ಅಡುಗೆ ಮನೆಗೆ ಹೋಗಿ ನೋಡಿದರೆ ಸಿಂಕ್ ತುಂಬಿ, ನಳದ ಮೂತಿಗೆ ಪಾತ್ರೆಗಳು ಮುತ್ತಿಕ್ಕುತ್ತಿದ್ದವು. ಇವುಗಳಿಗೆ ನಾಲ್ಕು ಪಾತ್ರೆ ಎನ್ನುತ್ತಾರಾ? ಎಂದು ತಲೆ ಚಚ್ಚಿಕೊಳ್ಳುವ ಹಾಗಿತ್ತು. ಒಪ್ಪಿಕೊಂಡ ತಪ್ಪಿಗೆ ತೊಳೆಯಲು ನಿಂತು, ಎರಡು ಟಬ್‌ಗಳು ತುಂಬಿ, ಒಂದು ಮುಟ್ಟಿದರೆ ಸಾಕು ನಾಲ್ಕು ಹೊರಗೆ ಜಿಗಿಯುವಂತಾಗಿದ್ದವು. ಆಕೆ ನಾಲ್ಕಾರು ಕೆಲಸ ಮುಗಿಸಿಕೊಂಡು, ಬಂದರೂ ನಾನಿನ್ನು ತೊಳೆಯುತ್ತಲೇ ಇದ್ದೆ ನೋಡಿ. ನಂತರ “ಏನು ಅಡುಗೆ ಮಾಡೋಣ, ಒಂದ್ನಾಲ್ಕು ಚಪಾತಿ ಉಧ್ದೋಣವೇ?’ ಎನ್ನುತ್ತ ಇಪ್ಪತ್ತು ಚಪಾತಿ ಆಗುವಷ್ಟು ಹಿಟ್ಟು ಮುಂದೆ ತಂದಿಟ್ಟಾಗ, ಇನ್ಮೆàಲೆ ನಾಲ್ಕು ಅಂದರೆ ನಾಲ್ಕು ನಾಲ್ಕು ಬಾರಿ ಯೋಚನೆ ಮಾಡಬೇಕು ಎಂದು ನಿರ್ಧರಿಸಿಬಿಟ್ಟೆ. ಊರಿಗೆ ಬರುವಾಗಲೂ ಸಹ “ಅಕ್ಕಾ, ನಾಲ್ಕು ಜೊತೆ ಬಟ್ಟೆ ಇಟ್ಕೊಂಡೇ ಬಾ, ನಾಲ್ಕು ದಿನ ಇದ್ದು ಹೋಗುವೆಯಂತೆ’ ಎಂದೇ ಕರೆ ಮಾಡಿದ್ದು. ನಾನು ಒಂದು ವಾರದ ಬಟ್ಟೆ ಇಟ್ಟುಕೊಳ್ಳುವುದು ಮರೆಯಲಿಲ್ಲ, ಆಕೆ ನನ್ನನ್ನು ವಾರಗಟ್ಟಲೆ ಬಿಡಲಿಲ್ಲ.
ಇನ್ನು ಮನೆಯಲ್ಲಿ ಅಮ್ಮಂದಿರು ತಟ್ಟೆ ತುಂಬ ಊಟ ಕಲೆಸಿಕೊಂಡು ಬಂದು “ನಾಲ್ಕೇ ನಾಲ್ಕು ತುತ್ತು ತಿನ್ನು ಪುಟ್ಟಾ..’ ಅಂತಾರಲ್ಲಾ ಅವರ ಪ್ರೀತಿಯ ಲೆಕ್ಕಕ್ಕೆ ಸಾಟಿಯುಂಟೇ! ಉಂಡ ಮೇಲೆ ನಾಲ್ಕು ಹೆಜ್ಜೆ ನಡೆಯಿರಿ ಅಂತಾ ಹೇಳ್ತಾರಲ್ಲ, ಅದು ಇನ್ನೂ ಗೋಜಲು. ಬೇಕಿದ್ದರೆ ಲೆಕ್ಕ ಹಾಕಿ ನೋಡಿ… ಆ ನಾಲ್ಕು ಹೆಜ್ಜೆ ಎಂದರೆ ನಿಂತಲ್ಲಿಂದ ಒಂದೆರಡು ಅಡಿ ಮಿಸುಕಾಡಿರುತ್ತೇವೆ ಅಷ್ಟೇ.
ಕೆಲ ಭಾಷಣಕಾರರು ಮೈಕ್ ಮುಂದೆ ನಿಂತು “ನಿಮ್ಮ ಸಮಯ ಹೆಚ್ಚಿಗೆ ತೆಗೆದುಕೊಳ್ಳುವುದಿಲ್ಲ, ನಾಲ್ಕೇ ನಾಲ್ಕು ಮಾತು ಹೇಳಿ ಮುಗಿಸಿಬಿಡ್ತೀನಿ’ ಅಂತೆಲ್ಲ ಸಮಾಧಾನ ಹೇಳಿ ಶುರುವಿಟ್ಟುಕೊಳ್ಳುವ ಮಾತು ನಾನೂರು ಸಾಲಾದರೂ ಮುಗಿಯುವ ಲಕ್ಷಣ ಕಾಣುವುದಿಲ್ಲ. ಮೈ ಮೇಲೆ ಅದ್ಯಾವ ದೇವರು ಆವಾಹನೆಯಾಗುತ್ತದೆಯೋ ಗೊತ್ತಿಲ್ಲ. ಈಗ ಮುಗಿಸುತ್ತಾರೆ ಆಗ ಮುಗಿಸುತ್ತಾರೆ ಅಂತೆಲ್ಲ ಕಾದು, ಕೊನೆಗೆ ಅವರನ್ನು ವೇದಿಕೆಯ ಮೇಲಿನಿಂದ ದರದರನೆ ಎಳೆದು ಕೆಳಗಿಳಿಸೋಣ ಎಂದುಕೊಳ್ಳುವಷ್ಟು ತಾಳ್ಮೆಗೆಡುವ ಹೊತ್ತಿಗೆ “ಇಷ್ಟು ಹೇಳಿ ನನ್ನ ಈ ನಾಲ್ಕು ಮಾತುಗಳನ್ನು ಮುಗಿಸುತ್ತೇನೆ’ ಅಂತಾರಲ್ಲ ಆಗ ನಾಲ್ಕೇಟು ಕಪಾಳಕ್ಕೆ ಬಾರಿಸೋಣ ಅಂತಾ ಅನಿಸದಿದ್ದರೆ ಕೇಳಿ. ತಮ್ಮ ತಮ್ಮ ಅಭಿಪ್ರಾಯ, ಅನಿಸಿಕೆ ಬರೆಯುವ ಎಷ್ಟೋ ಜನ ಸಹ ಹನುಮಂತನ ಬಾಲದ ಹಾಗೆ ಇಷ್ಟುದ್ದ ಬ(ಕೊ)ರೆದು ಕೊನೆಯಲ್ಲಿ “ನಾಲ್ಕು ಸಾಲಿನ ಅನಿಸಿಕೆ ಬರೆದಿದ್ದೇನೆ’ ಎನ್ನುವಾಗ ತಲೆ ತಿರುಗುವುದೊಂದೇ ಬಾಕಿ.
ಈ ನಾಲ್ಕರ ಲೆಕ್ಕ ಇಷ್ಟಕ್ಕೇ ಮುಗಿಯುವುದಿಲ್ಲ. ಚಿಕ್ಕವರಿದ್ದಾಗ ಪರೀಕ್ಷೆಯಲ್ಲಿ “ನಾಲ್ಕು ಅಂಕದ ಪ್ರಶ್ನೆ ಮತ್ತು ನಾಲ್ಕು ಸಾಲಿನಲ್ಲಿ ಉತ್ತರಿಸಿ’ ಎನ್ನುವ ಪ್ರಶ್ನೆಗಳಿಗೆ ಅದೆಷ್ಟು ಸಾಲು ಬರೆದರೆ ಪೂರ್ಣ ಅಂಕ ಕೊಡುತ್ತಾರೋ ಎನ್ನುವುದು ಸದಾ ಯಕ್ಷಪ್ರಶ್ನೆಯೇ ಆಗಿರುತ್ತಿತ್ತು. ಮನೆಯಲ್ಲಿ ಹಠ ಮಾಡಿದರೆ ಪೋಷಕರು ಶಾಲೆಗೆ ಬಂದು, “ಒಂದ್ನಾಲ್ಕು ಬುದ್ಧಿ ಮಾತು ಹೇಳಿ ಸಾರ್’ ಅಂತಲೋ, “ಸರಿಯಾಗಿ ನಾಲ್ಕು ತದುಕಿ..’ ಅಂತಲೋ ಒಟ್ಟಿನಲ್ಲಿ ಕಂಪ್ಲೇಂಟ್ ಬುಕ್ ಮಾಡಿಯೇ ಹೋಗುತ್ತಿದ್ದುದು. ಮೇಷ್ಟ್ರುಗಳೂ ಸಹ “ನಾಕು ಮಂದೀನ ನೋಡಿ ಕಲೀರಿ’ ಅಂತಲೋ “ನಾಕು ಮಂದಿ ಭೇಷ್’ ಎನ್ನುವ ಹಾಗಿರಬೇಕು ಎನ್ನುವುದಷ್ಟೇ, ಆ ನಾಲ್ಕು ಮಂದಿ ಯಾರು, ಏನು, ಎತ್ತ, ನಾಲ್ಕೇ ಮಂದಿಯಾ ಎನ್ನುವುದರ ಬಗ್ಗೆ ಸ್ವಲ್ಪವೂ ವಿವರಿಸದೆ, ಕೇವಲ ಹೆದರಿಸಿ, ಕೈಗೆ, ಕಾಲಿಗೆ ಹತ್ತಾರು ಬಾಸುಂಡೆ ಬರುವ ಹಾಗೆ ಬಾರಿಸಿ, ನಾಲ್ಕು ದಿನ ಅದೇ ವಿಷಯವನ್ನು ಕೊರೆಯುತ್ತಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, “ಕೌನ್ ಬನೇಗಾ ಕರೋಡ್ ಪತಿ’ ಯಂತಹ ಕ್ವಿಜ್ ಕಾರ್ಯಕ್ರಮಗಳಲ್ಲಿಯೂ ಸಹ ಒಂದು ಪ್ರಶ್ನೆಗಳಿಗೆ ನಾಲ್ಕು ಆಯ್ಕೆಗಳನ್ನೇ ಕೊಡುವುದು. ಆದರೂ ತಪ್ಪು ಮಾಡುವುದು ತಪ್ಪುವುದಿಲ್ಲ. ಆದರೆ ಇಲ್ಲಿ ನಾಲ್ಕು ಎಂದರೆ ನಾಲ್ಕು ಮಾತ್ರ ಎಂದು ಸಮಾಧಾನಪಡಬೇಕು.
“ನಾಲ್ಕು ಜನ ಏನಂದುಕೊಳ್ತಾರೋ…’ ಎಂದು ಸದಾ ಪೇಚಾಡುವವರನ್ನು ಕಂಡಾಗ ಲೆಕ್ಕ ತಪ್ಪಿದಂತೆನಿಸುತ್ತದೆ. “ಹೊತ್ಕೊಂಡೋಗೋಕೆ ನಾಲ್ಕು ಜನರೂ ಸಿಗಲ್ಲ’ ಎನ್ನುವ ಬೈಗುಳ ಸ್ವಲ್ಪಮಟ್ಟಿಗೆ ಒಪ್ಪಿಕೊಳ್ಳಬಹುದು. ಬೆಳಿಗ್ಗೆಯಿಂದ ಸಂಜೆಯವರೆಗೂ ಬೈಯ್ದಾಡಿ, ರಾಜಿಯಾಗುವಾಗ “ನಾಲ್ಕು ಮಾತು ಬರ್ತಾವೆ ಹೋಗ್ತಾವೆ…’ ಎಂದು ಪರಸ್ಪರ ಸಮಾಧಾನ ಪಟ್ಕೊàತಾರೆ. “ನಾಲ್ಕು ಜನಕ್ಕೆ ಊಟಕ್ಕೆ ಹೇಳಿದೀವಿ’, “ನಾಲ್ಕು ಜನರನ್ನು ಸೇರಿಸಿ ಪಂಚಾಯಿತಿ ಮಾಡಿಸ್ತೀವಿ’ ಎಂದರೆ ನಾಲ್ಕಕ್ಕಿಂತ ಹೆಚ್ಚಾಗಿ ಎಷ್ಟು ಬೇಕಾದರೂ ಅಂದಾಜಿಸಬಹುದು. ಮದುವೆಗೆ ಗಂಡು/ ಹೆಣ್ಣು ಹುಡುಕುವ ಸಮಯದಲ್ಲಿ, “ಹುಡುಗಿ ಹೇಗೆ ಅಥವಾ ಹುಡುಗನ ಸಂಬಳದ ಬಗ್ಗೆ ನಾಲ್ಕು ಜನರನ್ನು ವಿಚಾರಿಸಿ ನೊಡಿ, ತಲೆಯ ಮೇಲೆ ನಾಲ್ಕು ಅಕ್ಷತೆ ಕಾಳು ಬೇಗ ಬೀಳಲಿ’ ಎಂದು ಸಲಹೆ ಕೊಡುವವರು ಎಲ್ಲೆಡೆ ಸಿಗುತ್ತಾರೆ. ಅದ್ಯಾಕೆ ನಾಲ್ಕೇ ಜನರನ್ನು ಕೇಳಬೇಕು ಎನ್ನುವುದಕ್ಕೆ ಉತ್ತರ ಇಲ್ಲ, ಇನ್ನು ನಾಲ್ಕು ಕಾಳು ಅಕ್ಷತೆ ಅಂದರೆ ಬೆರಳ ಸಂದಿನಿಂದಲೇ ನುಸುಳಿ ಹೋಗಿರುತ್ತವೆ. ಸ್ನಾನಕ್ಕೂ ಸಹ “ನಾಲ್ಕು ಚೊಂಬು ಹೊಯೊRಂಡು ಬಾ ಹೋಗು…’ ಎಂದು ಕಳಿಸುವುದುಂಟು. ನಳ ಚಾಲೂ ಮಾಡ್ಕೊಂಡು ನಿಂತರೆ ನಾಲ್ಕು ಬಕೇಟ್ ಆದರೂ ನೀರು ಬೇಕು, ಅಂತಾದ್ದರಲ್ಲಿ ನಾಲ್ಕು ಚೊಂಬಿನಲ್ಲಿ ಸ್ನಾನ ಮಾಡುವುದುಂಟೇ ಹೇಳಿ. “ನಾಲ್ಕು ಬಿಂದಿಗೆ ನೀರು ಸಿಗುತ್ತಾ?’ ಎಂದು ಕೇಳಿ ಇದ್ದ ಬದ್ದ ನೀರನ್ನೆಲ್ಲ ಹೊತ್ತೂಯ್ಯುವರಿದ್ದಾರೆ. “ಕಡಿದರೆ ನಾಲ್ಕು ಆಳು ಆಗೋ ಹಾಗಿದೀಯಾ, ದುಡ್ಕೊಂಡು ತಿನ್ನೋಕೆ ಏನು ಬ್ಯಾನೆ?’ ಅಂತಾರಲ್ಲ, ಕತ್ತರಿಸಿದರೆ ಎಷ್ಟು ಹೋಳು ಬೇಕಾದರೂ ಆಗುವಾಗ ನಾಲ್ಕನ್ನೇ ಲೆಕ್ಕ ಹಿಡಿಯುವುದ್ಯಾಕೋ ಗೊತ್ತಾಗುವುದಿಲ್ಲಪ್ಪ.
ಬರೀ ನಾಲ್ಕಷ್ಟೇ ಅಲ್ಲ ಅದರ ಜೊತೆಗೆ ಐದು ಅಥವಾ ಆರನ್ನೂ ಎಷ್ಟೋ ಕಡೆ ಸೇರಿಸುತ್ತಾರೆ. ನಾಲ್ಕೈದು ಜನ, ನಾಲ್ಕಾರು ದಿನ, ನಾಲ್ಕಾರು ಭಾಷೆ, ನಾಲ್ಕಾರು ದೇಶ, ಅಂತೆಲ್ಲಾ ಹೇಳಿ ಮತ್ತಷ್ಟು ಗೊಂದಲ ಉಂಟುಮಾಡುತ್ತಾರೆ. ಬರೀ ನಾಲ್ಕು ಮಾತ್ರವಲ್ಲ, ಒಂದರಿಂದ ಹತ್ತರಲ್ಲಿನ ಸಂಖ್ಯೆಗಳದ್ದೆಲ್ಲಾ ಹೆಚ್ಚಾ ಕಡಿಮೆ ಇದೇ ಹಣೆಬರಹವೇ ಬಿಡಿ. ಈ ನಾಲ್ಕರ ಕಥೆ ನಾಲ್ಕು ದಿನ ಹೇಳಿದರೂ ಮುಗಿಯುವ ಹಾಗೆ ಕಾಣುವುದಿಲ್ಲ. ಸುಮ್ಮನೆ ನಾಲ್ಕು ತಾಸು ರೆಸ್ಟ್ ಮಾಡಿ ಹೋಗಿ, ನಾಲ್ಕು ದಿನ ಬಿಟ್ಟು ಸಿಗೋಣ… ಆಯ್ತಾ?
-ನಳಿನಿ ಟಿ. ಭೀಮಪ್ಪ, ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.