ಟಮ್ ಮತ್ತು ಕಾಮ್
Team Udayavani, Dec 24, 2017, 6:00 AM IST
ರೈತನೊಬ್ಬನ ಹೆಂಡತಿ ಹೆಣ್ಣುಮಗುವಿಗೆ ಜನ್ಮ ನೀಡಿ ತೀರಿ ಕೊಂಡಳು. ರೈತ ಮಗುವಿಗೆ ಟಮ್ ಎಂದು ಹೆಸರಿಟ್ಟ. ಮಗುವನ್ನು ಆರೈಕೆ ಮಾಡಲು ಕಷ್ಟವಾಗುತ್ತದೆಂದು ಮರು ಮದುವೆ ಮಾಡಿಕೊಂಡ. ಎರಡನೆಯ ಹೆಂಡತಿಗೆ ಕಾಮ್ ಎಂಬ ಮಗಳು ಜನಿಸಿದಳು. ಮಲತಾಯಿ ಟಮ್‌ಳಿಗೆ ತುಂಬ ಹಿಂಸೆ ನೀಡುತ್ತಿದ್ದಳು. ಒಳ್ಳೆಯ ಆಹಾರ ಕೊಡುತ್ತಿರಲಿಲ್ಲ. ಕಷ್ಟವಾದ ಕೆಲಸ ಕೊಡುತ್ತಿದ್ದಳು. ಒಂದು ಸಲ ಅವಳು ಟಮ್‌ಳೊಂದಿಗೆ ನದಿಯಿಂದ ಮೀನು ಹಿಡಿದು ತರಲು ಹೇಳಿದಳು. ಬಲೆಯನ್ನು ಕೂಡ ಕೊಡಲಿಲ್ಲ. ಕಾಮ್ ತಾನೂ ಮೀನು ಹಿಡಿಯುತ್ತೇನೆಂದು ಬಲೆ ಹಿಡಿದುಕೊಂಡು ಅವಳೊಂದಿಗೆ ಹೋಗಿ ನದಿಯಲ್ಲಿ ಬಲೆ ಬೀಸಿದಳು. ಆದರೆ ಒಂದು ಮೀನೂ ಬರಲಿಲ್ಲ. ಟಮ್ ದಿನವೂ ತನಗೆ ಚಿಕ್ಕಮ್ಮ ನೀಡುತ್ತಿದ್ದ ನುಚ್ಚಕ್ಕಿ ಅನ್ನವನ್ನು ತಿನ್ನುವ ಮೊದಲು ಬಾವಿಯಲ್ಲಿರುವ ಮೀನುಗಳನ್ನು ಕರೆದು, “ಚಿನ್ನದ ಮೀನುಗಳೇ, ಬನ್ನಿ ಬೆಳ್ಳಿಯ ಅನ್ನ ತಿನ್ನಿ’ ಎಂದು ಕರೆದು ಹಿಡಿ ತುಂಬ ಹಾಕುತ್ತಿದ್ದಳು. ಹಾರುವ ಹಕ್ಕಿಗಳನ್ನು ಬರಹೇಳಿ ಅವುಗಳಿಗೂ ಅನ್ನ ನೀಡುತ್ತಿದ್ದಳು. ಈ ಗುಣದಿಂದಾಗಿ ನದಿಯಲ್ಲಿ ರಾಶಿ ರಾಶಿ ಮೀನುಗಳು ಹಾರಿಬಂದು ಟಮ್ ಧರಿಸಿದ ಲಂಗದಲ್ಲಿ ತುಂಬಿಕೊಂಡವು. ಕ್ಷಣದಲ್ಲಿ ಬುಟ್ಟಿ ಮೀನುಗಳಿಂದ ತುಂಬಿತು.
ಅಕ್ಕ, ತಂಗಿ ಮನೆಗೆ ಹೊರಟರು. ದಾರಿಯಲ್ಲಿ ಕಾಮ್, “ಅಕ್ಕ, ನಿನ್ನ ತಲೆಗೂದಲು ತುಂಬ ಮಣ್ಣಾಗಿದೆ. ತೊಳೆದುಕೊಳ್ಳೇ’ ಎಂದಳು. ಅವಳು ತಲೆಗೆ ಸ್ನಾನ ಮಾಡುವಾಗ ಅವಳ ಬುಟ್ಟಿಯಲ್ಲಿರುವ ಮೀನುಗಳನ್ನು ತನ್ನ ಬುಟ್ಟಿಗೆ ತುಂಬಿಕೊಂಡು ಅವಸರವಸರವಾಗಿ ಮನೆಗೆ ಬಂದುಬಿಟ್ಟಳು. ಖಾಲಿ ಬುಟ್ಟಿಯೊಂದಿಗೆ ಟಮ್ ಬಂದಾಗ ಅವಳ ಚಿಕ್ಕಮ್ಮ ಚೆನ್ನಾಗಿ ಶಿಕ್ಷಿಸಿಬಿಟ್ಟಳು.
ಹೀಗಿರುವಾಗ ಆ ದೇಶದ ರಾಜಕುಮಾರ ತನಗೆ ಸುಂದರಿಯಾದ ಹೆಂಡತಿ ಬೇಕು ಎಂದು ಸ್ವತಃ ಹುಡುಕಿಕೊಂಡು ಹೊರಟ. ಟಮ್ ತನ್ನ ಅತಿಶಯ ಸೌಂದರ್ಯದಿಂದ ಅವನ ಮನ ಸೆಳೆದಳು. ಇದನ್ನರಿತ ಮಲತಾಯಿ, “ಅವಳು ಚೆಲುವೆಯಲ್ಲ, ನಿಜವಾದ ಚೆಲುವೆ ನನ್ನ ಮಗಳು. ಅವಳನ್ನು ವರಿಸಿಬಿಡು’ ಎಂದು ಹೇಳಿದಳು. ಆಗ ರಾಜಕುಮಾರ, “ಹೆಂಡತಿ ಚೆಲುವೆಯಾಗಿದ್ದರೆ ಸಾಲದು. ಬುದ್ಧಿವಂತೆಯೂ ಆಗಿರಬೇಕು. ಮೂಟೆ ತುಂಬ ರಾಗಿ ಮತ್ತು ಸಾಸಿವೆಯನ್ನು ಬೆರೆಸಿಕೊಡುತ್ತೇನೆ. ಸೂರ್ಯ ಹುಟ್ಟುವಾಗ ಆರಿಸಲು ಕುಳಿತು ಮುಳುಗುವ ಹೊತ್ತಿಗೆ ಎರಡನ್ನೂ ಬೇರೆ ಬೇರೆ ಮಾಡಬೇಕು. ಇವರಿಬ್ಬರೂ ಅರಮನೆಗೆ ಬಂದು ಈ ಕೆಲಸ ಮಾಡಿ ಮೊದಲು ಗೆದ್ದವರೇ ನನ್ನ ಹೆಂಡತಿಯಾಗಲಿ’ ಎಂದು ಹೇಳಿದ.
ಟಮ್ ಮತ್ತು ಕಾಮ್ ಅರಮನೆಗೆ ಹೋದರು. ರಾಜಕುಮಾರ ಸಾಸಿವೆ ಮತ್ತು ರಾಗಿ ಬೆರೆಸಿದ ಮೂಟೆಯನ್ನು ತಂದು ಅವರೆದುರು ಸುರುವಿದ. ಆಗ ಎಲ್ಲಿಂದಲೋ ಹಿಂಡುಹಿಂಡಾಗಿ ಹಕ್ಕಿಗಳು ಬಂದವು. ಟಮ್ ಮುಂದಿದ್ದ ರಾಶಿಯಿಂದ ಎರಡನ್ನೂ ಬೇರ್ಪಡಿಸಿ ಹೋದವು. ಅವಳು ನೀಡುತ್ತಿದ್ದ ಅನ್ನ ತಿನ್ನುತ್ತಿದ್ದ ಅವು ಹೀಗೆ ಉಪಕಾರ ತೀರಿಸಿಕೊಂಡವು. ಕಾಮ್ ಪರೀಕ್ಷೆಯಲ್ಲಿ ಸೋತುಹೋದಳು. ರಾಜಕುಮಾರ ಬಂದು ನೋಡಿದ. ಟಮ್ ತನ್ನ ಹೆಂಡತಿಯಾಗುತ್ತಾಳೆಂದು ಪ್ರಕಟಿಸಿದ. “ನಾಳೆ ಅಲಂಕೃತಳಾಗಿ ಅರಮನೆಗೆ ಬಾ. ನನ್ನ ಜೊತೆಗೆ ನಿನ್ನ ಮದುವೆ ನಡೆಯುತ್ತದೆ’ ಎಂದು ಹೇಳಿದ.
ಆದರೆ ಮರುದಿನ ಮಲತಾಯಿ ತನ್ನ ಮಗಳನ್ನೇ ವಧುವಿನಂತೆ ಸಿಂಗರಿಸಿ ಅರಮನೆಗೆ ಕರೆದೊಯ್ದಳು. ಟಮ್ ನಿತ್ಯ ಧರಿಸುವ ಉಡುಪನ್ನು ಕೂಡ ಸುಟ್ಟು ಹಾಕಿ ಮನೆಯಿಂದ ಹೊರಗೆ ಕಾಲಿಡದಂತೆ ಮಾಡಿದಳು. ಟಮ್ ದುಃಖೀಸುತ್ತ ಕುಳಿತಿದ್ದಾಗ ಒಂದು ದಿವ್ಯವಾದ ಕುದುರೆ ಅವಳ ಮನೆಗೆ ಬಂದಿತು. ಅದರ ಬೆನ್ನಿನಲ್ಲಿ ದೇವಲೋಕದ ಸ್ತ್ರೀಯರು ಧರಿಸುವಂತಹ ಉಡುಗೆಗಳು, ಒಡವೆಗಳು ಇದ್ದವು. ಅದನ್ನು ಟಮ್ ಧರಿಸಿ ಕುದುರೆಯ ಮೇಲೆ ಏರಿಕೊಂಡು ಅರಮನೆಗೆ ಹೋದಳು. ರಾಜಕುಮಾರ ಕಾಮ್ ಕಡೆಗೆ ತಲೆಯೆತ್ತಿಯೂ ನೋಡಲಿಲ್ಲ. ಟಮ್ ಜೊತೆಗೆ ಅವನ ಮದುವೆ ನೆರವೇರಿತು.
ಮಲತಾಯಿ ಸುಮ್ಮನಿರಲಿಲ್ಲ. ಟಮ್‌ಳನ್ನು ಬಳಿಗೆ ಕರೆದು, “ಮದುಮಗಳು ಕೆರೆಸ್ನಾನ ಮಾಡುವ ಸಂಪ್ರದಾಯವಿದೆ. ಉಡುಗೆಗಳನ್ನು, ಒಡವೆಗಳನ್ನು ಕಳಚಿಟ್ಟು ಬಾ ನನ್ನೊಂದಿಗೆ’ ಎಂದು ಕರೆದಳು. ಕೆರೆಯಲ್ಲಿ ಅವಳನ್ನು ಮುಳುಗಿಸಿ ಕೊಂದುಬಿಟ್ಟಳು. ಅವಳ ಒಡವೆಗಳನ್ನು ತನ್ನ ಮಗಳಿಗೆ ತೊಡಿಸಿ ರಾಜಕುಮಾರನ ಬಳಿಗೆ ಕಳುಹಿಸಿದಳು. ಆದರೆ ದೇವತೆಗಳು ಟಮ್ ಒಂದು ನೈಟಿಂಗೇಲ್ ಹಕ್ಕಿಯಾಗುವಂತೆ ಮಾಡಿ ರಾಜಕುಮಾರನ ಬಳಿಗೆ ತಂದುಬಿಟ್ಟರು. ಹಕ್ಕಿಯು ಸುಶ್ರಾವ್ಯವಾಗಿ, “ಸುಂದರವಾದ ಹುಡುಗಿ ನೀರಿನಲ್ಲಿ ಮುಳುಗಿ ಸತ್ತಳು. ಕಾಗೆ ಬಂಗಾರ ಚಿನ್ನವಲ್ಲ’ ಎಂದು ಹಾಡಿತು. ರಾಜಕುಮಾರನಿಗೆ ಮೋಸವಾಗಿರುವುದು ತಿಳಿಯಿತು. ಟಮ್ ಇಲ್ಲದ ಮೇಲೆ ಅವನಿಗೆ ರಾಜ್ಯ, ಅಧಿಕಾರ ಯಾವುದೂ ಬೇಡವಾಯಿತು. ಅವಳಿಗಾಗಿ ಪರಿತಪಿಸುತ್ತ ಮನೆಯಿಂದ ಹೊರಟ. ಕಾಡುಮೇಡುಗಳಲ್ಲಿ ಅವಳನ್ನೇ ಕರೆಯುತ್ತ ಅಲೆಯತೊಡಗಿದ.
ರಾಜಕುಮಾರನ ವಿರಹವನ್ನು ಕಂಡು ದೇವತೆಗಳಿಗೆ ಕನಿಕರವುಂಟಾಯಿತು. ಅವರು ಅವನ ಮುಂದೆ ಕಾಣಿಸಿಕೊಂಡು ಎತ್ತರವಾದ ಒಂದು ಮರವನ್ನು ತೋರಿಸಿದರು. “ಯಾರಿಗೆ ಹೆಂಡತಿಯ ಮೇಲೆ ನಿಜವಾದ ಪ್ರೇಮವಿದೆಯೋ ಅವರಿಂದ ಮಾತ್ರ ಈ ಮರದ ತುದಿಗೇರಲು ಸಾಧ್ಯ. ಅಲ್ಲಿರುವ ಕುಂಬಳಕಾಯಿಗಿಂತ ದೊಡ್ಡ ಗಾತ್ರದ ಒಂದೇ ಒಂದು ಹಣ್ಣನ್ನು ಜೋಪಾನವಾಗಿ ಕೆಳಗೆ ತರಬೇಕು. ಕೆಳಗೆ ಬಿದ್ದು ಒಡೆಯಬಾರದು. ಈ ಹಣ್ಣನ್ನು ಕುದಿಯುವ ನೀರಿಗೆ ಹಾಕಬೇಕು. ಪ್ರೀತಿ ಸತ್ಯವಾಗಿದ್ದರೆ ಪ್ರಿಯತಮೆ ದೊರೆಯುತ್ತಾಳೆ. ಪ್ರೀತಿಯಲ್ಲಿ ಕಪಟವಿದ್ದರೆ ಅಲ್ಲಿ ಕರಗಿಹೋಗುತ್ತಾಳೆ’ ಎಂದು ಹೇಳಿದರು.
ರಾಜಕುಮಾರ ಲೀಲಾಜಾಲವಾಗಿ ದೊಡ್ಡ ಮರವನ್ನು ಏರಿದ. ಭಾರವಿರುವ ಹಣ್ಣನ್ನು ಕೊಯಿದ. ಸಲೀಸಾಗಿ ತೆಗೆದುಕೊಂಡು ಕೆಳಗಿಳಿದ. ಅದನ್ನು ಅರಮನೆಗೆ ತಂದ. ದೊಡ್ಡ ಕಡಾಯಿಯಲ್ಲಿ ನೀರನ್ನು ಕುದಿಸಲು ಹೇಳಿ ಹಣ್ಣನ್ನು ಅದಕ್ಕೆ ಹಾಕಿದ. ಮಲತಾಯಿ ಕುತೂಹಲದಿಂದ, “ಅಳಿಯಂದಿರೇ, ಈ ಹಣ್ಣನ್ನು ಯಾಕೆ ಕುದಿಸುತ್ತಿದ್ದೀರಿ?’ ಎಂದು ಕೇಳಿದಳು. ರಾಜಕುಮಾರ ದೇವತೆಗಳು ಹೇಳಿದ ವಿಷಯವನ್ನು ಅವಳಿಗೆ ತಿಳಿಸಿದ. “ನನ್ನ ಪ್ರಿಯತಮೆಗೆ ನನ್ನ ಮೇಲೆ ನಿಜವಾಗಿಯೂ ಪ್ರೀತಿ ಇದ್ದರೆ ಅವಳು ಮರಳಿ ನನ್ನ ಬಳಿಗೆ ಬರುತ್ತಾಳೆ’ ಎಂದು ಹೇಳಿದ.
ಮಲತಾಯಿಗೆ ಹೊಟ್ಟೆಯುರಿ ತಾಳಲಾಗಲಿಲ್ಲ. “ನಿಜವಾದ ಪ್ರೀತಿ ಇರುವುದು ನನ್ನ ಮಗಳಿಗೆ. ಬೇಕಿದ್ದರೆ ಈ ಪರೀಕ್ಷೆಯನ್ನು ನನ್ನ ಮಗಳಿಗೂ ವಿಧಿಸಿ ನೋಡಿ’ ಎಂದು ಹೇಳಿ ಕುದಿಯುವ ನೀರಿನ ಕಡಾಯಿಗೆ ಬಲವಂತವಾಗಿ ಕಾಮ್‌ಳನ್ನು ಇಳಿಸಿದಳು. ಬೆಂಕಿಯ ಕಾವಿನಿಂದ ಕಾಮ್ ಅಲ್ಲಿಯೇ ಕರಗಿಹೋದಳು ಆದರೆ ಕುದಿಯುವ ನೀರಿನಲ್ಲಿದ್ದ ಹಣ್ಣು ನಿಧಾನವಾಗಿ ಕರಗಿತು. ಒಳಗಿದ್ದ ನೀರು ಮಂಜಿನಂತೆ ತಣ್ಣಗಾಯಿತು. ಅದರಿಂದ ಸುಂದರಿಯಾದ ಟಮ್ ಕೆಳಗಿಳಿದು ಬಂದಳು. ರಾಜಕುಮಾರ ಅವಳೊಂದಿಗೆ ಸುಖವಾಗಿದ್ದ.
– ಪರಾಶರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.