ಭೃಂಗದ ಬೆನ್ನೇರಿ ಬಂತು


Team Udayavani, Oct 8, 2017, 1:09 PM IST

08-18.jpg

ಅದು ಹೀಗಾಯ್ತು-
ಮೊನ್ನೆ ಒಂದು ಪುಸ್ತಕದ ಅಂಗಡಿಯ ಬೆನ್ನತ್ತಿ ಒರಿಸ್ಸಾಗೆ ಹೋದ ಕಥೆ ಹೇಳುತ್ತಿದ್ದೆನಲ್ಲಾ ಆಗ ಏಕಾಏಕಿ “ದುಂಬಿಗೆ ಮಕರಂದ ಯಾವ ಜಾಗದ, ಯಾವ  ಹೂವಿನ, ಯಾವ ಮೂಲೆಯಲ್ಲಿ ಅಡಗಿರುತ್ತದೆ ಎನ್ನುವುದು ಗೊತ್ತಾಗುವುದಿಲ್ಲವೇ…’ ಎಂದು ಬರೆದುಬಿಟ್ಟೆ. ಆದರೆ ಮರುಕ್ಷಣ ನನ್ನ ಬೆರಳು ನನ್ನ ಕೆನ್ನೆಯ ಮೇಲೆ ಹೋಗಿ ಕೂತಿತ್ತು. ಹೌದು ಬರೆದದ್ದೇನೋ ಬರೆದೆ. ಆದರೆ, ದುಂಬಿಗೆ ಮಕರಂದ ಯಾವ ಜಾಗದ ಯಾವ ಹೂವಿನಲ್ಲಿ ಯಾವ ಮೂಲೆಯಲ್ಲಿ ಇರುತ್ತದೆ ಎನ್ನುವುದು ಹೇಗೆ ಗೊತ್ತಾಗುತ್ತದೆ ಎನ್ನುವ ವಿಷಯ ತಲೆ ಕೊರೆಯಲಾರಂಭಿಸಿತು. 

ಹಾಗೆ ನೋಡಿದರೆ, ಜೇನ್ನೊಣ ನನಗೆ ಅಪರಿಚಿತ ಏನಲ್ಲ. ಜೇನು ಕೇಳುವವರ ಹಿಂದೆ, ಜೇನು ನೊಣಗಳ ಹಿಂದೆ, ಜೇನಿನ ಪಾಠ ಮಾಡುವ ಪ್ರೊಫೆಸರ್‌ಗಳ ಹಿಂದೆ, ಜೇನಿನ ಅಧ್ಯಯನ ಮಾಡುವ ಸಂಶೋಧಕರ ಜೊತೆ ಸಾಕಷ್ಟು ಕಾಲ ಕಳೆದಿದ್ದೇನೆ. ಅದಕ್ಕೆ ಕಾರಣ, ನಾವು ಇದ್ದ ಮನೆಯ ಎದುರೇ ಕೃಷಿ ವಿಶ್ವವಿದ್ಯಾಲಯವಿದ್ದದ್ದು ಹಾಗೂ ನನ್ನ ಅಣ್ಣ ಕೃಷಿ ಅಧ್ಯಯನ ಮಾಡುತ್ತ ಇದ್ದದ್ದು. 

ಒಮ್ಮೆ ಹೀಗಾಯ್ತು. ನಮ್ಮ ಮನೆಯ ಪಕ್ಕ ಕಟ್ಟಡ ಕಟ್ಟಲು ಸಾಕಷ್ಟು ಲೋಡ್‌ ಕಲ್ಲು ಬಂದು ಬಿತ್ತು. ಪಾಪ ಏನಾಯಿತೋ ಏನೋ ಅಲ್ಲಿ ಕಲ್ಲು ಬಂದು ಬಿತ್ತೇ ಹೊರತು ಕಟ್ಟಡ ಏಳುವ ಯಾವ ಲಕ್ಷಣವೂ ಕಾಣಲಿಲ್ಲ. ಹಾಗಾಗಿ, ನಮಗೆ ಅದೇ ಆಟದ ತಾಣ, ಅಪ್ಪ-ಅಮ್ಮನಿಗೆ ಏನೆಂದರೆ ಏನೂ ಕೈಗೆ ಸಿಗದಂತೆ ಮುಚ್ಚಿಡುವ ಸೇಫ್ ಲಾಕರ್‌, ಜೀರುಂಡೆಗೆ ದಾರ ಕಟ್ಟಿ ಹಾರಿಸಿ ನಂತರ ಅದನ್ನು ಸೇರಿಸಲು ಇದ್ದ ಗೂಡು… ಹೀಗೆ ಏನೇನೋ ಆಗಿ ಬದಲಾಗಿಬಿಟ್ಟಿತ್ತು. ಅಂತಹ ಕಲ್ಲುಗಳ ರಾಶಿಯ ಮಧ್ಯೆ ಒಂದು ದಿನ  ಜೇನ್ನೊಣಗಳು “ಜುಂಯ್‌’ ಎಂದು ಶಬ್ದ ಮಾಡುತ್ತ ಹಾರುತ್ತಿದೆ. ಅದರ ಆವೇಶ ಎಷ್ಟಿತ್ತು ಎಂದರೆ, ಹತ್ತಿರ ಹೋದರೆ ಕೊಂದೇ ಸಿದ್ಧ ಎನ್ನುವಂತೆ. ಒಂದು ಹೊಸ ನೆಲವನ್ನು ಆಕ್ರಮಿಸಿದ ಸೇನೆ ಅದನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಮುನ್ಸೂಚನೆ ಕೊಡುವಂತೆ. 

ಅಲ್ಲಿಂದ ಶುರುವಾಯ್ತು ನಮ್ಮ ಜೇನು ಅಧ್ಯಯನ. ಪ್ರತೀದಿನ ಆ ಕಲ್ಲಿನ ರಾಶಿಗಳ ನಡುವಿನಿಂದ ಜೇನ್ನೊಣಗಳು ಎದ್ದು ಹೊರಗೆ ಹಾರುವುದೂ, ಮತ್ತೆ ಗೂಡು ಸೇರುವುದೂ, ಕಮ್ಮನೆ ಪರಿಮಳ ಬರುವುದೂ ಹೀಗೆಯೇ. ಹೀಗೆ ಇವೆಲ್ಲವನ್ನು ನೋಡುತ್ತಿದ್ದ ಅಣ್ಣ ಒಂದು ದಿನ ತಮ್ಮ ಗೆಳೆಯ ಪ್ರೊಫೆಸರ್‌ ಜೊತೆ ಕಾರ್ಯಾಚರಣೆಗೆ ಇಳಿದೇಬಿಟ್ಟರು. ಮುಖಕ್ಕೆ ಟವಲ್‌ ಕಟ್ಟಿಕೊಂಡು ಅಂಗೈ ಮುಚ್ಚುವ ಶರ್ಟ್‌ ಧರಿಸಿ ಏನೇನೋ ಟ್ರಿಕ್‌ ಬಳಸಿ ಜೇನುಗೂಡಿಗೆ ಕೈ ಹಾಕಿಯೇ ಬಿಟ್ಟರು. ಓಹ್‌ ! ಎಷ್ಟೊಂದು ಜೇನು. ಆದರೆ ಆ ಪ್ರೊಫೆಸರ್‌ ಆ ಜೇನು ನೆಕ್ಕಿ ನೋಡುವ ಮನಸ್ಸೂ ಮಾಡುತ್ತಿಲ್ಲ. ಬದಲಿಗೆ ಅವರ ಗಮನವೆಲ್ಲ ಅದೊಂದೇ ಜೇನ್ನೊಣದ ಮೇಲೆ. ಅದು ರಾಣಿ ಜೇನು. ಅವರು ರಾಣಿ ಜೇನಿನ ಬೆನ್ನತ್ತಿ ಬಂದಿದ್ದರು. ಕೊನೆಗೂ ಅದು ಸಿಕ್ಕೇಬಿಟ್ಟಿತು. ಅವರು ಅದನ್ನು ಒಂದು ಬೆಂಕಿ ಪೊಟ್ಟಣದಲ್ಲಿ ಕೂಡಿಟ್ಟು ಆರಾಮು ಮಾತುಕತೆಗೆ ಇಳಿದರು. ನಾವು ಇತ್ತ ಜೇನು ನೆಕ್ಕಿ ಅವರ ಪಕ್ಕ ಹಾಜರಾದವರೇ ಅಲ್ಲಿದ್ದ ಬೆಂಕಿಪೊಟ್ಟಣ ಎಗರಿಸಿಕೊಂಡು ಬಂದು ಸದ್ದು ಮಾಡದಂತೆ ತೆರೆದೆವು. ಅಷ್ಟೇ! ಅದಕ್ಕೆ ಕಾಯುತ್ತ ಕೂತಿದ್ದಂತೆ ಆ ರಾಣಿ ಜೇನು ಹಾರಿಹೋಗಿಯೇ ಬಿಟ್ಟಿತು. 

ಆ ಪ್ರೊಫೆಸರ್‌ ಮುಖದಲ್ಲಿ ಮಡುಗಟ್ಟಿ ಹೋದ ಆ ನಿರಾಸೆಯನ್ನು ನನ್ನ ಮನದಿಂದ ಅಂದಿನಿಂದ ಇಂದಿನವರೆಗೂ ಹೊರ ಓಡಿಸಲು ಆಗಿಲ್ಲ. ಹಾಗಾಗಿ, ಅಂದಿನಿಂದ ಇಂದಿನವರೆಗೂ ಜೇನಿಗಿಂತ ಜೇನ್ನೊಣವೇ ನನ್ನನ್ನು ಆಕ್ರಮಿಸಿಬಿಟ್ಟಿದೆ. ಇನ್ನೂ ಶಾಲೆಗೆ ಹೋಗುತ್ತಿದ್ದ ಆ ಕಾಲದಿಂದ ಇಂದಿನವರೆಗೂ ನನ್ನ ತಲೆಯಲ್ಲಿ ಆ ಜೇನ್ನೊಣದ ಮೊರೆತ. ಮಂಗಳೂರಿಗೆ ಹೋಗಿ ಇಳಿದಾಗಲಂತೂ ನನಗೆ ಜೇನಿನ ಅಜ್ಜ ಎಂದೇ ಹೆಸರಾಗಿದ್ದ ಪೈಲೂರು ಲಕ್ಷ್ಮೀನಾರಾಯಣ ರಾಯರು ಸಿಕ್ಕಿ ಹೋದರು. ಅವರು ಆ ಕಡಲ ನಗರಿಗೂ, ಪಶ್ಚಿಮ ಘಟ್ಟದವರಿಗೂ ಜೇನಿನ ಹುಚ್ಚು ಹಿಡಿಸಿದವರು. ಹಾಗಾಗಿ, ನಾನು ಅವರ ಹಿಂದೆ ಸಾಕಷ್ಟು ಬಾರಿ ಜೇನು ಪಾಠ ಕೇಳುತ್ತ ಸುತ್ತಿದೆ. ಅಷ್ಟೇ ಅಲ್ಲ ಅವರ ಮನೆಯ ಬಾಗಿಲಲ್ಲಿ ಕೂತು ಜೇನು ಪೆಟ್ಟಿಗೆ, ಜೇನು ಬೇಧ, ಜೇನಿನ ಪೆಟ್ಟಿಗೆ ಎಲ್ಲಿಡಬೇಕು, ಅದರೊಳಗಿನ ಮೇಣ ಏನು ಮಾಡಬೇಕು ಎನ್ನುವುದೆಲ್ಲ ತಲೆಯೊಳಗೆ ಕೂರಿಸಿಕೊಳ್ಳುತ್ತ ಹೋದೆ. 

ಈ ಮಧ್ಯೆ ಜೋಗದ ಹಾದಿಯಲ್ಲಿರುವ  ತಲವಾಟದ ರಾಘವೇಂದ್ರ ಶರ್ಮ ತಮ್ಮ ಮಾಂತ್ರಿಕ ಶೈಲಿಯಲ್ಲಿ ಒಂದು ಜೇನಿನ ಹಿಂದೆ ಪುಸ್ತಕ ಬರೆದದ್ದೂ ಅಲ್ಲದೆ ಜೇನು ಗೂಡನ್ನು ಹೊತ್ತೂಯ್ದು ನಗರದಿಂದ ನದಿ ಈಜಲು, ಬೆಟ್ಟ ಹತ್ತಲು ಬರುತ್ತಿದ್ದ ಮಕ್ಕಳಿಗೆ ಹೊನ್ನೆಮರಡುವಿನಲ್ಲಿ ಪಾಠ ಮಾಡುತ್ತ ಇದ್ದರು. ಹೀಗಿರುವಾಗಲೇ ಒಂದು ದಿನ ನಾನು ರಾಮಚಂದ್ರ ದೇವ ಬರೆದದ್ದನ್ನು ಓದಿದ್ದು. “”ಚಿಟ್ಟೆಗಳು ಎಲ್ಲಾ ಸಸ್ಯಗಳ ಮೇಲೂ ಹೋಗಿ ಕೂರುವುದಿಲ್ಲ. ಒಂದೊಂದು ಪ್ರಭೇದದ ಚಿಟ್ಟೆಗೆ ಅದರದ್ದೇ ಆದ ಸಸ್ಯಗಳ ಆಯ್ಕೆ ಇರುತ್ತದೆ ಅಂತ ಹೇಳುತ್ತಾ ಒಂದು ನೆನಪಿಡಿ ನಾವು ನಡೆಸುತ್ತಿರುವ ಪರಿಸರ ನಾಶದಿಂದಾಗಿ ಈ ಸಸ್ಯಗಳು ನಾಶವಾಗುತ್ತ ಹೋದರೆ ಬರೀ ಸಸ್ಯಗಳಲ್ಲ ಅದನ್ನೇ ಅವಲಂಬಿಸಿರುವ ಚಿಟ್ಟೆ ಸಂತತಿಯೂ ನಾಶವಾಗಿ ಹೋಗುತ್ತದೆ” ಎಂದಿದ್ದರು.

ಹೌದಲ್ಲ… ಎನ್ನಿಸಿ ಅರೆಕ್ಷಣ ಕಂಪಿಸಿದ್ದೆ. ಆದರೆ ಈಗ ಅದೇ ರೀತಿ ಮತ್ತೂಮ್ಮೆ ಕಂಪಿಸುವ ಕಾಲ ಬಂದುಬಿಟ್ಟಿತ್ತು. ಒರಿಸ್ಸಾದ ಪುಸ್ತಕದಂಗಡಿಯ ಕಥೆ ಹೇಳುತ್ತ ದುಂಬಿಯ ಬೆನ್ನಟ್ಟಿದ ನಾನು ಇದ್ದ ಪುಸ್ತಕಗಳೆಲ್ಲದರ ಮೊರೆ ಹೋದೆ. ಗೂಗಲ್‌ನಲ್ಲಿ ಜಾಲಾಟ ನಡೆಸಿದೆ. ಹತ್ತುಹಲವು ಮಂದಿಗೆ ಫೋನಾಯಿಸಿದೆ. ಈ-ಮೇಲ್‌ಗ‌ಳು ಈ ಕಡೆಯಿಂದ ಆ ಕಡೆಗೆ, ಆ ಕಡೆಯಿಂದ ಈ ಕಡೆಗೆ ಪಿಂಗ್‌ಪಾಂಗ್‌ ಬಾಲ್‌ನಂತೆ ಅಡ್ಡಾಡಿದವು. ಗಂಟೆಗಳ ಲೆಕ್ಕ ಬಿಡಿ, ದಿನಗಳು ಉರುಳಿದವು. ಸಿಕ್ಕ ಮಾಹಿತಿ ಕೈನಲ್ಲಿ ಹಿಡಿದು ನಾನು ನಿಜಕ್ಕೂ ಮಾತಿಲ್ಲದವನಾಗಿದ್ದೆ.

ಕುಂಬಳಕಾಯಿ, ಸೌತೆ ಕಾಯಿ, ಕಲ್ಲಂಗಡಿ  ಹಣ್ಣು, ನಿಂಬೆಹಣ್ಣು, ದ್ರಾಕ್ಷಿ, ಟೊಮೇಟೊ, ಬದನೇಕಾಯಿ, ಈರುಳ್ಳಿ, ಎಲೆಕೋಸು, ಹೂಕೋಸು, ಸೂರ್ಯಕಾಂತಿ, ಸೇಬು, ಸೀಬೆಕಾಯಿ, ಹುರುಳಿಕಾಯಿ, ಕ್ಯಾರೆಟ್‌, ಕಾಫಿ, ತೆಂಗಿನಕಾಯಿ, ಮಾವಿನಹಣ್ಣು, ಹುಣಿಸೇಹಣ್ಣು, ಹತ್ತಿ, ಗೋಡಂಬಿ, ಬಾದಾಮಿ… ಎಲ್ಲಕ್ಕೂ ಜೇನ್ನೊಣಗಳ ನಂಟಿತ್ತು. ಜಗತ್ತಿನ ಪ್ರತೀ ಊಟದ ತಟ್ಟೆಯಲ್ಲೂ ಜೇನ್ನೊಣಗಳ ಹೆಜ್ಜೆಗುರುತಿತ್ತು. ನಾವು ತಿನ್ನುವ ಹಣ್ಣು, ತರಕಾರಿ, ಸೊಪ್ಪು ಈ ಎಲ್ಲವೂ ತಮ್ಮ ಹುಟ್ಟಿಗೆ ಜೇನ್ನೊಣಗಳ ಸ್ಮರಣೆ ಮಾಡುತ್ತಿದ್ದವು. ದುಂಬಿ ಮಾತ್ರವೇ ಪರಾಗ ಸ್ಪರ್ಶ ಮಾಡುವುದಿಲ್ಲ ಆದರೆ, ನೆನಪಿಡಿ ಈ ಜಗತ್ತಿನ ಮೂರನೇ ಒಂದು ಭಾಗದ ಆಹಾರ ಹುಟ್ಟಬೇಕಾದರೆ ಅದಕ್ಕೆ ದುಂಬಿಯ ಪರಾಗ ಸ್ಪರ್ಶವೇ ಆಗಬೇಕು. ಅದರಲ್ಲೂ ಈ ಜಗತ್ತಿನ ಶೇ. 90 ಸಸ್ಯಗಳಿಗೆ ದುಂಬಿ ಇಲ್ಲದೆ ಉಳಿಗಾಲವಿಲ್ಲ. 130 ರೀತಿಯ ಹಣ್ಣುಗಳು ಹಾಗೂ ತರಕಾರಿಗಳು ಉಸಿರಾಡುತ್ತಿರುವುದೇ ದುಂಬಿಗಳ ಸ್ಪರ್ಶದಿಂದ. ಅಮೆರಿಕ ಒಂದರಲ್ಲೇ ದುಂಬಿಗಳು 40 ಬಿಲಿಯನ್‌ ಡಾಲರ್‌ ಕೃಷಿ ಉತ್ಪನ್ನಕ್ಕೆ ಕಾರಣ. ಇನ್ನೊಂದು ವಿಸ್ಮಯ ಎಂದರೆ, ದುಂಬಿಗಳು ಮಾತ್ರವೇ ಇನ್ನೊಂದು ಜೀವವನ್ನು ತಿನ್ನದೇ ಬದುಕುವುದು.

ಒಂದು ಜೇನುಗೂಡಲ್ಲಿ 80 ಸಾವಿರ ಜೇನ್ನೊಣಗಳಿರುತ್ತವೆ. ಒಂದು ದಿನದಲ್ಲಿ ಇವು ಮುತ್ತಿಕ್ಕುವ ಹೂಗಳ ಸಂಖ್ಯೆಯೇ 300 ಮಿಲಿಯನ್‌. ಪ್ರತೀವರ್ಷ ಒಂದು ಗೂಡಿನಲ್ಲಿ 88 ಪೌಂಡ್‌ ಜೇನು ಸಂಗ್ರಹವಾಗುತ್ತದೆ. ನನಗೋ ಆ ಚಿಟ್ಟೆಗಳದ್ದೇ ನೆನಪು. ಇಷ್ಟೊಂದೆಲ್ಲ ಸಸ್ಯಗಳು ಚಿಟ್ಟೆಗಳ ಉಳಿವಿಗೆ ಕಾರಣವಾಗಿದ್ದರೆ, ಇಲ್ಲಿ ಇಷ್ಟೆಲ್ಲ ದುಂಬಿಗಳು ನಮ್ಮ ಆಹಾರದ ಬಟ್ಟಲನ್ನು ಉಳಿಸುತ್ತಿದ್ದವು. ಆಕಸ್ಮಾತ್‌ ಈ ದುಂಬಿಗಳು ಇಲ್ಲವಾಗಿಬಿಟ್ಟರೆ… ಎನಿಸಿತು. ಆಗಲೇ ಅಲ್ಬರ್ಟ್‌ ಐನ್‌ಸ್ಟೈನ್‌ ನನ್ನ ಕೈಗೆಟುಕಿದ್ದು. ಆ ಕಾಲಕ್ಕೇ ಈ ಬಗ್ಗೆ ಚಿಂತಿತನಾಗಿದ್ದ ಐನ್‌ಸ್ಟೈನ್‌ “ಅಕಸ್ಮಾತ್‌ ದುಂಬಿಗಳೇನಾದರೂ ಈ ಜಗತ್ತಿನಿಂದ ಅಳಿದು ಹೋದರೆ ಮನುಷ್ಯನಿಗೆ ಉಳಿಗಾಲವಿರುವುದು ಕೇವಲ ನಾಲ್ಕು ವರ್ಷ ಮಾತ್ರ’ ಎಂದು ಹೇಳಿಬಿಟ್ಟಿದ್ದ. 

ಇದರಿಂದಾಗಿ ಏನಾಗಿಬಿಟ್ಟಿದೆಯಪ್ಪಾ ಈ ದುಂಬಿಗಳ ಕಥೆ ಎಂದು ಹುಡುಕಿದೆ. ಪಕ್ಕಾ ಅದು ಜೇನುಹುಟ್ಟಿಗೇ ಕೈ ಹಾಕಿದಂತಾಗಿ ಹೋಯಿತು. ಈ ಜಗತ್ತು ರಾಸಾಯನಿಕಗಳ ಸುರಿಹೊಂಡ ಆಗುತ್ತಿರುವುದು ಮೊದಲು ಗೊತ್ತಾಗಿರುವುದೇ ಈ ದುಂಬಿಗಳಿಗೆ. ಜಗತ್ತಿನ ಎಲ್ಲೆಲ್ಲಿ ನೋಡಿದರೂ ಜೇನುಗೂಡುಗಳಲ್ಲಿ ಜೇನ್ನೊಣಗಳೇ ನಾಪತ್ತೆ. ರಾಣಿ ಹಾಗೂ ಮರಿಜೇನು ಬಿಟ್ಟರೆ ಮತ್ತೇನಿಲ್ಲ ಎನ್ನುವ ಶೋಕದ ವಾತಾವರಣ. ಒಂದು ಜೇನ್ನೊಣ ಎಲ್ಲಿಯಾದರೂ ಅಲುಗಾಡದೆ ಬಿದ್ದಿದೆ ಎಂದರೆ ಅದು ಸತ್ತಿದೆ ಎಂದು ಅರ್ಥವಲ್ಲ. ಅದು ತನ್ನ ಶಕ್ತಿಗೂ ಮೀರಿ ಪರಾಗವನ್ನು ಗೂಡಿನತ್ತ ಹೊತ್ತೂಯ್ಯುತ್ತಿದೆ ಎಂದು ಅರ್ಥ, ಅದು ಶಕ್ತಿಗೂ ಮೀರಿ ಪರಾಗ ಹೊತ್ತಿದೆ ಎಂದರೆ ಅದು ತನ್ನ ಶಕ್ತಿಮೀರಿ ಪರಾಗಸ್ಪರ್ಶ ಮಾಡಿದೆ ಎಂದರ್ಥ. ಅದು ಶಕ್ತಿಮೀರಿ ಪರಾಗಸ್ಪರ್ಶ ಮಾಡಿದೆ ಎಂದರೆ ನಮ್ಮ ಊಟದ ಬಟ್ಟಲಿನಲ್ಲಿ ಸಾಕಷ್ಟು ತರಕಾರಿ, ಸೊಪ್ಪಿನ ಸಾರು ಇದೆ. ಊಟದ ನಂತರ ತಿನ್ನಲು ಸಾಕಷ್ಟು ಹಣ್ಣುಗಳಿವೆ. ಅಷ್ಟೇ ಅಲ್ಲ ಅವು ನಮ್ಮ ಹಲವು ಕಾಯಿಲೆಗಳನ್ನು ದೂರ ತಳ್ಳುತ್ತಿವೆ ಎಂದೇ ಅರ್ಥ.

ಶಿವಾನಂದ ಕಳವೆಯವರ ಮೋನೋಕಲ್ಚರ್‌ ಮಹಾಯಾನ ತಿರುವಿ ಹಾಕುತ್ತಿದ್ದೆ. ನಮ್ಮ ಪಶ್ಚಿಮ ಘಟ್ಟಗಳು, ನಮ್ಮ ನಾಡಿನ ಅರಣ್ಯಕ್ಕೆ ಹಿಡಿದಿರುವ ಏಕರೂಪದ ಹುಚ್ಚನ್ನು ಪುಸ್ತಕ ಬಿಚ್ಚಿಟ್ಟಿತ್ತು. ಈ ಮೋನೋಕಲ್ಚರ್‌ ಹುಚ್ಚೇ ದುಂಬಿಗಳಿಗೂ ಕುತ್ತು ತಂದಿವೆ. ಅಷ್ಟೇ ಅಲ್ಲ, ಪ್ರತೀವರ್ಷ ಜಗತ್ತಿನಾದ್ಯಂತ ಈ ಭೂಮಿಗೆ ನಾವು ಸುರಿಯುತ್ತಿರುವುದು ಏನಿಲ್ಲವೆಂದರೂ 2.5 ಬಿಲಿಯನ್‌ ಕೆ.ಜಿ. ರಾಸಾಯನಿಕಗಳನ್ನು. ಈ ರಾಸಾಯನಿಕದಿಂದಾಗಿ ಬಂಜೆತನ, ಕ್ಯಾನ್ಸರ್‌, ಹಾರ್ಮೋನ್‌ಗಳ ವ್ಯತ್ಯಾಸ, ವಂಶವಾಹಿನಿಯಲ್ಲೇ ವ್ಯತ್ಯಾಸ-  ಹೀಗೆ 27 ಮಹಾ ಕಾಯಿಲೆಗಳು ಬರುತ್ತವೆ ಎಂದು ಸಂಶೋಧಕರು ಪಟ್ಟಿ ಮಾಡಿ¨ªಾರೆ. ಮೂರು ಸಾವಿರ ವರ್ಷ ಇಟ್ಟರೂ ಕೆಡದ ವಸ್ತು ಜೇನು ಎನ್ನುತ್ತಾರೆ. ಕ್ಯಾನ್ಸರ್‌, ಏಡ್ಸ್‌ನಿಂದ ದೂರ ಇರಲೂ ದುಂಬಿಗಳು ಬೇಕು. ಸ್ವರ್ಗ ಅಥವಾ ನರಕ ನಿಮ್ಮ ಆಯ್ಕೆ ಯಾವುದು ಎಂದರೆ ನರಕದತ್ತಲೇ ವಾಲುತ್ತಿದ್ದೇವೆ. ಮಾರಕ ರೋಗಗಳಿಂದ ಮುಕ್ತವಾಗಿಸುವ ದುಂಬಿಗಳನ್ನು ಕೊಂದು ನಾವು ರೋಗಗಳ ಬಾಣಲೆಗೆ ಬೀಳುತ್ತಿದ್ದೇವೆ. 

ಇಂಗ್ಲೆಂಡ್‌ನ‌ಲ್ಲಿ ಒಂದು ನಂಬಿಕೆ ಇದೆ. ಮನೆಯ ಮುಖ್ಯಸ್ಥರು ಸತ್ತರೆ, ಹೋಗಿ ಜೇನ್ನೊಣಗಳಿಗೆ ಆ ಸುದ್ದಿ ಮುಟ್ಟಿಸಿ ಬರಬೇಕು ಎಂದು. ಜೇನು ಗೂಡಿರುವ ಕಡೆ ಹೋಗಿ ಮನೆಯವರ, “ನಮ್ಮ ಮನೆಯಲ್ಲಿ ಸಾವಾಗಿದೆ. ದುಃಖೀಸು ಜೇನ್ನೊಣವೇ’ ಎಂದು ಅರುಹಿ ಬರುತ್ತಾರೆ. ಹಾಗೆ ಸುದ್ದಿ ತಿಳಿಸದಿದ್ದರೆ ಜೇನ್ನೊಣಗಳು ತಾವು ಈ ಕುಟುಂಬದವರಲ್ಲ ಎನ್ನುವ ಚಿಂತೆಯಲ್ಲೇ ಅವರನ್ನು ತೊರೆದು ಹೋಗಿಬಿಡುತ್ತವೆ ಎನ್ನುವ ನಂಬಿಕೆ!ಒಂದು ಕಾಲದಲ್ಲಿ ಜೇನ್ನೊಣಗಳು ಹಾಗೂ ಜನರ ನಡುವಿನ ಸಂಬಂಧ ಹಾಗಿತ್ತು. ಭೃಂಗದ ಬೆನ್ನೇರಿ ಬಂದ ಕಲ್ಪನಾ ವಿಲಾಸವನ್ನು ವಿವರಿಸಿದ ಬೇಂದ್ರೆ  ನೆನಪಾದರು.

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ 
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ
 
ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ

ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ… ಎನ್ನುವ ಸಾಲಿಗಿಂತ ಮುಂದೆ ಹೋಗಲಾಗಲಿಲ್ಲ. ದುಂಬಿಗಳ ಸ್ಪರ್ಶವನ್ನು ನಾವ್ಯಾರೂ ಔಟ್‌ಸೋರ್ಸ್‌ ಮಾಡಲು ಸಾಧ್ಯವಿಲ್ಲ ಅಲ್ಲವೆ?

ಜಿ. ಎನ್‌. ಮೋಹನ್‌

ಟಾಪ್ ನ್ಯೂಸ್

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kasaragod: ಟ್ಯಾಂಕರ್‌ ಲಾರಿಯಿಂದ ರಸ್ತೆಗೆ ಹರಿದ ಎಣ್ಣೆ

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Untitled-1

Kasaragod Crime News: ಬೈಕ್‌ ಕಳವು; ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.