ಸಾವಿನ ಅಪಾರಸಾಗರದಲ್ಲಿ
Team Udayavani, Jul 1, 2018, 6:00 AM IST
ಕಾವ್ಯವು ಜನ್ಮ ಸಾಫಲ್ಯದ ದಾರಿ ಎಂದು ಗೋಪಾಲಕೃಷ್ಣ ಅಡಿಗರು ನಂಬಿದ್ದರು. ನನಗೆ ತಿಳಿದಂತೆ ಕನ್ನಡ ಸಾಹಿತ್ಯದ ಹಿಂದಣ ತಲೆಮಾರಿನಲ್ಲಿ ಮಾಸ್ತಿ, ಬೇಂದ್ರೆ ಮತ್ತು ಕುವೆಂಪು ಕೂಡ ಹೀಗೆ ತಿಳಿದಿದ್ದರು. ಸಾಫಲ್ಯದ ದಾರಿ ಪ್ರಯೋಗಗಳಿಲ್ಲದೆ ಸಫಲವಾಗುವುದಿಲ್ಲ. ಕಾಡ ಮೂಲಕವೆ ಪಥ ಆಗಸಕ್ಕೆ- ಅಡಿಗರ ಭೂಮಿಗೀತದ ಸಾಲು ಇದು. ಕಾಡಿನಲ್ಲಿ ದಾರಿ ಉಂಟೇನು? ದಾರಿ ಮಾಡಿಕೊಂಡು ನಡೆಯಬೇಕು. ಮಾಡಿದ್ದೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದಾರಿಯೇ ಆಗುವ, ಹೀಗಾಗುವುದು ಅನುಕೂಲವೋ ಪ್ರತಿಕೂಲವೋ ತಿಳಿಯದ ವಿಲಕ್ಷಣತೆ. ಅಲ್ಲದೆ ವಿಲಕ್ಷಣತೆ ಇಲ್ಲಿಗೇ ಮುಗಿಯುವುದಿಲ್ಲ. ಕಾಡಿನ ನಡುವೆ ದಾರಿಮಾಡಿಕೊಂಡು ಆಗಸವನ್ನು ಸೇರಿ ನಕ್ಷತ್ರಗಳನ್ನು ಕೂಡುವ ಪ್ರಯೋಗವಿದು! ಕಾಡ ಮೂಲಕವೆ ಪಥ ಆಗಸಕ್ಕೆ. ಅಂದರೆ ದಾರಿ ಮತ್ತು ಗುರಿಗಳ ಸಿದ್ಧ ಮಾದರಿಯನ್ನು ನಿರಾಕರಿಸಿ, ಸಿದ್ಧ ಮಾದರಿಗೆ ಹೊಂದಿಕೊಂಡು ನಮಗೆ ಅಭ್ಯಾಸವಾಗಿ ಹೋದ ತರ್ಕಬದ್ಧತೆಯನ್ನೂ ನಿರಾಕರಿಸಿ ಹೊಚ್ಚ ಹೊಸ ಪ್ರಯೋಗಕ್ಕೆ, ಅನುಭವಕ್ಕೆ ಎದುರಾಗುವ ಮಾದರಿ ಇದು. ಇಲ್ಲಿ ದಾರಿ ಎಂದರೆ ಕಾಡು; ಗುರಿ ಎಂದರೆ ಆಗಸ! ಆಗಸದ ತಾರೆಗಳ ಮಿನುಗು ಬೆಳಕು ಭೂಮಿಯ ಮೇಲೆ ಎಲ್ಲೆಲ್ಲೂ ಬೀಳುವುದಾದರೂ, ಬೆಳಕು ಬಿದ್ದಲ್ಲೆಲ್ಲ ಯಾವುದೊಂದು ದಾರಿ ಕಾಣಬಹುದಾದರೂ ಇದರಿಂದ ದಾರಿ-ಗುರಿಗಳ ಸಂಕೀರ್ಣತೆ ಏನೂ ಕಡಿಮೆಯಾಗುವುದಿಲ್ಲ. ಹೊಸದಾಗಿ; ಬೇರೆಯೇ ಒಂದು ವಿನ್ಯಾಸದಲ್ಲಿ ಮನಸ್ಸು-ಮೆದುಳು ಚಿಂತಿಸಲು ಪ್ರೇರಣೆ ಇಲ್ಲಿದೆ. ಅಂಥ ಪ್ರೇರಣೆಯನ್ನು ಭಾಷೆಯ ಈ ರೀತಿಯ ಬಳಕೆಯ ಮೂಲಕವೇ ಮಾಡಬೇಕಷ್ಟೆ. ಅಡಿಗರ ಕವಿತೆಗಳಲ್ಲಿ ದಾರಿಬಿಡುವ, ದಾರಿಹಿಡಿವ ಚಿಂತನೆ ಮತ್ತೆ ಮತ್ತೆ ಬರುತ್ತಲೇ ಇರುತ್ತದೆ. ಈ ಸಾಲು ನೋಡಿ: ಹೆದ್ದಾರಿ ಬಿಟ್ಟು ಹೆದ್ದಾರಿ ಹಿಡಿವ ಉತ್ಪಾತ – ವರ್ಧಮಾನದ ವರಾತ. ಇದು “ವರ್ಧಮಾನ’ ಕವಿತೆಯದು. ಇರುವುದೊಂದೇ ಹೆದ್ದಾರಿಯಲ್ಲ. ಹಿಡಿದದ್ದೆಲ್ಲ ಹೆದ್ದಾರಿಯಾಗಬಹುದು. ಆಗದೆಯೂ ಇರಬಹುದು. ಆದರೂ ಮೂಲತಃ ಕಾಡು ಮತ್ತು ಆಗಸಗಳ- ಭೂಮ್ಯಾಕಾಶಗಳ- ಸಂಬಂಧದ ಸಂಕೀರ್ಣತೆಯೇ ಹೊಸ ಪ್ರಯೋಗಗಳಿಗೆ ಆಹ್ವಾನ ಕೊಡುವಂಥದು ಎಂಬ ಅರಿವು ಅಡಿಗರ ಕಾವ್ಯದಲ್ಲಿ ದಟ್ಟವಾಗಿದೆ. ಭೂಮಿಗೀತದ ಈ ಸಾಲುಗಳನ್ನು ನೋಡಿ: ಕೆಸರಲ್ಲಿ ಹುಗಿದ ಕಾಲನ್ನು ಕೀಳುವುದೆಷ್ಟು ಕಷ್ಟ – ಅಷ್ಟೇ ಕಷ್ಟ ಆಕಾಶ ಪಂಜರದ ಹೊನ್ನ ಸರಿಗೆಯ ನಡುವೆ ನಡೆವ ಹಗರಣ ಕೂಡ.
“ಆಕಾಶ ಪಂಜರ’ ಎನ್ನುವ ಪದ ಗಮನಿಸಿ. ಇದು ಹೊಸಮಾತು. ಬದುಕಿನ ಕಷ್ಟಗಳು- ಕೆಸರಲ್ಲಿ ಕಾಲು ಹುಗಿದಂಥ ಕಷ್ಟಗಳು. ಎಲ್ಲರಿಗೆ ಅರ್ಥವಾಗುವಂಥವು. ಈ ಕಷ್ಟಗಳಿಂದ ಪಾರಾಗಲೆಂಬಂತೆ ಕಲ್ಪನಾಶೀಲತೆಗೆ ಮೊರೆ ಹೋದರೆ- ಈ ಕಲ್ಪನಾಶೀಲತೆಯ ಕಾರಣದಿಂದಲೇ ಸ್ವರ್ಗ-ನರಕ- ಪುಣ್ಯ-ಪಾಪ-ಸಾವು-ಜನ್ಮ-ಪುನರ್ಜನ್ಮ-ದೇವರು ಇತ್ಯಾದಿ ಭಾವನಾತ್ಮಕ ಸರಕುಗಳು ಕಾಣಿಸಿಕೊಳ್ಳುವವು. ಇವೆಲ್ಲ ತಪ್ಪೆಂದಲ್ಲ-ಸರಿ ಎಂದಲ್ಲ. ಆದರೆ, ಕಲ್ಪನಾಶೀಲ ಮನಸ್ಸಿನ ಕಷ್ಟಗಳು ಬೇರೆಯೇ ಇವೆ. ನೆಲದ ಮೇಲಿನ ವಾಸ್ತವವನ್ನೇ ಅವಾಸ್ತವವೆಂದು ಕಲ್ಪನೆ ಕಾಣಿಸಬಲ್ಲುದು. ಹಾಗೆ ಕಾಣಿಸಿ, ಕಲ್ಪನೆ ಹೇಗೂ ಕಲ್ಪನೆಯೇ ಆಗಿ, ವಾಸ್ತವವೂ ಕಲ್ಪನೆಯಂತಾಗಿಬಿಟ್ಟರೆ ಅದು ಪುರಾಣ ಪ್ರಸಿದ್ಧವಾದ ತ್ರಿಶಂಕು ಸ್ವರ್ಗವೇ ಸೈ! ಇದು ತಲೆಕೆಳಗಾದ ಸ್ಥಿತಿ. “ತೊಗಲು ಬಾವಲಿ’ ಸ್ಥಿತಿ.
ಇದು “ಆಕಾಶ ಪಂಜರ’! ನಿಜ. ಹಾಗೆಂದು ಪೂರ್ತಾ ಮಣ್ಣು ಹುಳುವಾಗಿಯೇ ಇರೋಣವೇ? ಅದು ಸಾಧ್ಯವೆ? ಅದೇ ನಿಜವೇ? ನಿಜವಲ್ಲ ಎನ್ನುತ್ತದೆ ಭೂಮಿಗೀತ.
ಮಣ್ಣು, ಪೂರಾ ಮಣ್ಣು ಬೊಂಬೆಯಾಗಿದ್ದರದು ಒಂದು ತೆರ;
ಈ ಬೊಂಬೆಯಲ್ಲು ಉಸುರಿನ ತಂತ್ರ;
ತಂತ್ರದಾಚೆಗೆ ಶುದ್ಧ ಬೆಳಕು ಮಂತ್ರ – ಪಿತೂರಿ
ಹೆಜ್ಜೆ ಮೂಡದ ಹಾದಿ ಗಾಳಿಬೀದಿ
ಇದು ಜೀವಂತ ಬೊಂಬೆ! ಉಸಿರಾಡುತ್ತಿದೆ! ಅಂದರೆ ಇಲ್ಲೇನೋ ನಡೆದಿದೆ! “ಆಕಾಶ ಪಂಜರ’ಕ್ಕೆ ಹೊಂದಿಕೊಳ್ಳುವಂತೆ “ಮಂತ್ರ – ಫಿತೂರಿ’ ಎಂಬ ಮಾತು ಬಂದಿದೆ ಕವಿತೆಯಲ್ಲಿ. ಅಲ್ಲಮನ “ಸಂಚಿನ ನೋಟ’ ಎಂಬ ಪ್ರಯೋಗ ನೆನಪಾಗುತ್ತದೆ. ಇದೇನೋ ಸಂಚಿನಂತೆಯೂ ಇದೆ! ಏಕೆಂದರೆ ಈ ಹಾದಿಯಲ್ಲಿ ಹೆಜ್ಜೆಗಳೇ ಮೂಡುವುದಿಲ್ಲ! ಆದರೂ ಹಾದಿಯಂತೂ ಇದೆ. ಅದು ಗಾಳಿ ಬೀದಿ.
ಕೆಸರಲ್ಲಿ ಹುಗಿದ ಕಾಲನ್ನು ಕಿತ್ತು ಕಿತ್ತು ನಡೆಯಬೇಕಾದ ಮನುಷ್ಯನೇ ಗಾಳಿ ಬೀದಿಯಲ್ಲೂ ನಡೆಯಬೇಕಾಗಿದೆ. ಹೆಜ್ಜೆಗುರುತು ಮೂಡದಂತೆ. ಇದು ಮೈ-ಮನಗಳ ತಿಕ್ಕಾಟ. ಕಿತ್ತಾಟ. ಜಡತೆ-ಜೀವಂತಿಕೆಗಳ ತಿಕ್ಕಾಟ ಈ ಎರಡೂ ಒಂದಾಗಲಾರವೆ?
ಇದು ನೋಡು, ಇದು ಕಷ್ಟ: ಧೂಳು ಧೂಳಿಗೆ ಸೇರಿ
ಗಾಳಿ ಗಾಳಿಗೆ ಕೂಡಿ ಬೆಂಕಿ ಬೆಂಕಿಯ ಕೂಡಿ
ಗಾಳಿಯಲ್ಲುಲುಹು ಆಕಾಶದಲ್ಲಾಕಾಶ ಬೆರೆತುಹೋದರೆ ಇದಕ್ಕೇನು ಧಾಡಿ?
ಏನೊ ಉಳಿವುದು ಮತ್ತೆ: ಒಂದು ವಿದ್ಯುತ್ತಂತಿ
ತಾರೆ ನೀಹಾರಿಕೆಗಳಾಚೆಯೆ ಸಮಾಚಾರ
ಪಾತಾಳ ದಾಳದಿಂದೆದ್ದು ಬರುವ ವಿಕಾರ
ಒಂದನೊಂದಕೆ ಕೂಡಿಸಾಡಿಸುವ ಕುಣಿಸುವ ಚಮತ್ಕಾರ
ಒಂದಾಗಲಾರವೆ? ಎಂದರೆ ಒಂದಾಗಬಹುದು. ಧೂಳು ಧೂಳಿಗೆ ಗಾಳಿ ಗಾಳಿಗೆ ಬೆರೆಯಬಹುದು. ಆದರೆ, ಆಕಾಶ-ಪಾತಾಳ ಒಂದಾಗಬಹುದೆ? ತಾರೆ-ನೀಹಾರಿಕೆಗಳಾಚೆಯ ಬೆಳಕಿನ ಸಮಾಚಾರವೂ ಆಳದ ಕತ್ತಲೆಯ ವಿಕಾರಗಳೂ ಒಂದಾಗಬಹುದೆ? ಕಾಡಿನ ದಾರಿಯ ಮೂಲಕ ಆಗಸ ಸೇರಬಹುದೆ?
“ಭೂಮಿಗೀತ’ದ ತುಂಬ ಈ ತಿಕ್ಕಾಟದ ಚಿತ್ರಗಳಿವೆ. ಸಾಫಲ್ಯದ ದಾರಿಯನ್ನೂ ತಾನೇ ಕಂಡುಕೊಳ್ಳಬೇಕಾಗಿದೆ. ಎಲ್ಲವನ್ನೂ ನೆಚ್ಚುವ, ಯಾವುದನ್ನೂ ನೆಚ್ಚಿಕೊಳ್ಳಲಾಗದ, ನುಡಿಯನ್ನು ನಂಬುವ- ನಂಬಲಾಗದ, ತನ್ನ ಸಂಕಲ್ಪವೆಂದು ಬಗೆದದ್ದೂ ಯಾರದೋ ಇಚ್ಛೆಯಾಗಿರಬಹುದಾದ ಸ್ಥಿತಿಯನ್ನೂ ಎದುರಿಸಬೇಕಾದ, ಕೊಚ್ಚಿ ಹೋಗುತ್ತಿರುವ ಹೊತ್ತಿನಲ್ಲೂ ಇರುವ ತನ್ನ ಸೂಕ್ಷ್ಮ ಎಚ್ಚರವೊಂದೇ ತನ್ನ ಸೊತ್ತು ಎನ್ನುವ ರೀತಿಯ ಪ್ರಯೋಗವನ್ನು ಮಾಡುತ್ತಲೇ ಹೋಗುವ ಕಾವ್ಯೋದ್ಯೋಗವಿದು- ಅಡಿಗರದು.
ಕಾವ್ಯವು ಜನ್ಮಸಾಫಲ್ಯದ ದಾರಿಯಾದರೆ ಅದು ಸಾವನ್ನು ಎದುರಿಸುವ- ಬಗೆಯುವ ರೀತಿಯೂ ಮುಖ್ಯವಾಗಲೇಬೇಕು. ಸಾವು “ಆಕಾಶಪಂಜರ’ವಂತೂ ಅಲ್ಲ. ಏಕೆಂದರೆ, ಸಾವು – ವಾಸ್ತವದ ಮೇಲೆ ಕಲ್ಪನೆಯ ಸವಾರಿಯಲ್ಲ. ಸಾವೊಂದು ನಿಶ್ಚಿತ ವಾಸ್ತವ. ಸಾವೊಂದು ಗಡುವು. ಅದೊಂದು ದೂರದಿಂದ ನಮ್ಮನ್ನು ಆವರಿಸುತ್ತ ಹತ್ತಿರ ಬರುತ್ತಲೇ ಇರುವ ಇದ್ದಕ್ಕಿದ್ದಂತೆ ನಮ್ಮನ್ನೆತ್ತಿಕೊಳ್ಳ ಬಯಸುವ ಅಜ್ಞಾತ ಕೈ. ಸಾವೊಂದು ಹೇಳಿ ಬರಲಾರದ ಆದರೆ ಬಂದೇ ಬರುವ ನೇರ ನಡೆಗಿಂತ ಹೊಂಚು ಹಾಕುವುದೇ ಇಷ್ಟವಾಗಿರುವ, ನಾವೂ ಅದನ್ನು ಹೊಂಚುತ್ತಲೇ ಇರಬೇಕೆನ್ನುವ ಹೊಂಚುಗಣ್ಣಿನ ಖಯಾಲಿ. ಅಡಿಗರ ಉತ್ತರಕಾಲೀನ ಕವಿತೆಗಳಲ್ಲಿ ಸಾವಿನ ಚಿಂತನೆ ಸಹಜವಾಗಿ ಗಾಢವಾಗಿದೆ. “ಬದುಕು’ ಎನ್ನುವ ಈ ಕವಿತೆಯನ್ನು ನೋಡಿ. ಸಾವಿನ ಅಪಾರಸಾಗರದಲ್ಲಿ/ಬದುಕಿನ ಅಗಣಿತ ಗುಳ್ಳೆಗಳು ರಿಂಗಣ ಕುಣಿವವು ಕಾಮನ ಬಿಲ್ಲಿನ/ರಂಗು ಮೆರೆದು ಮೈಗರೆಯುವವು.
ಸಾವು ಕಡಲಿನಷ್ಟು ನಿಜ ಎನ್ನುತ್ತಿದ್ದಾರೆ. ಪಡುಗಡಲ ಕಿನಾರೆಯಲ್ಲಿ ಬೆಳೆದ ಮಗು-ಕವಿ ಅಡಿಗ- “ಸಾವಿನ ಅಪಾರ ಸಾಗರ’ ಎನ್ನುತ್ತಿದ್ದಾರೆ! ಕಡಲು ತನ್ನ ಅ-ಪಾರತೆಯಿಂದಲೇ ಸಾವಿಗೆ ಸಂಕೇತವಾಗಿದೆ; ಬದುಕಿಗಲ್ಲ. ಇದು ವಿಶೇಷ. ಬದುಕು-ಅಗಣಿತ. ಸಾವು ಒಂದೇ. ಅಗಣಿತವಾದರೂ ಗುಳ್ಳೆ-ಗುಳ್ಳೆಯಲ್ಲಿ ಬೆರೆಯಲಾರದು. ಅದು ನೀರಿನಲ್ಲೇ ಬೆರೆಯಬೇಕು. ಅಗಣಿತ ಬದುಕು ಒಂದೇ ಆದ ಸಾವಿನಲ್ಲಿ ಬೆರೆಯಬೇಕು.
ಇನ್ನೊಂದು ಕವಿತೆ, ಗೊತ್ತಿಲ್ಲ ಗೊತ್ತಿಲ್ಲ ಎಂಬುದೊಂದೇ ಇಲ್ಲಿ | ಈ ಭವದ ಅನುಭವದ ಮಥಿತ ಮಾತು ಎನ್ನುತ್ತದೆ. ಗೊತ್ತಿಲ್ಲ -ಗೊತ್ತಿಲ್ಲ ಎಂದು ತನಗೆ ತಾನೇ ಹೇಳಿಕೊಳ್ಳುವ ಈ ಪಿಸುಮಾತು ಬದುಕಿನ ತರ್ಕಾತೀತತೆಯನ್ನು ಸೂಚಿಸುತ್ತ ಸಾವನ್ನು ನಿರೀಕ್ಷಿಸುವ ಮಾತು! ಗೊತ್ತಿಲ್ಲ ಎಂಬ ಅವಸ್ಥೆಯ ಇನ್ನೊಂದು ಮೈ ಎಂದರೆ ಅದು ವಿಸ್ಮಯವನ್ನು ಅನುಭವಿಸಬಲ್ಲ ಯೋಗ್ಯತೆ! ಗೊತ್ತಿದೆ ಎಂದುಕೊಂಡವರಿಗೆ ಯಾವ ವಿಸ್ಮಯವೂ ಇಲ್ಲ. ವಿಸ್ಮಯವು ಬದುಕಿಗಿಂತ ಹೆಚ್ಚು ಸಾವಿಗೆ ಹೊಂದಿಕೊಂಡ ಭಾವ.
ತಮ್ಮ ಉತ್ತರಕಾಲೀನ ಕವಿತೆಗಳಲ್ಲಿ ಅಡಿಗರು ಭಾವಗೀತೆಯ ಪ್ರಕಾರಕ್ಕೆ ಮತ್ತೆ ಹಿಂದಿರುಗಿದರು ಎಂಬಂತೆ ಕಾಣಿಸುತ್ತದೆ. ಆದರೆ, ಇದು ಅರ್ಧಸತ್ಯ. ನಿಜ. ತಮ್ಮ ತಂದೆಯ ಕುರಿತು, ತಮ್ಮ ಮನೆಯ ಪ್ರೀತಿಯೆ ಸಾಕು- ಬೆಕ್ಕು ನಾಯಿಗಳ ಕುರಿತು ಬರೆದ ಕವಿತೆಗಳು ರಸಾದ್ರìವಾಗಿವೆ. ತೀರ್ಥರೂಪರಿಗೆ ಕವಿತೆಯ ಕೊನೆಯ ಈ ಸಾಲುಗಳನ್ನು ನೋಡಿ:
ನೀವಂದದ್ದು ಈಗಲೂ ನೆನಪುಂಟು: “”ಗೋಪಾಲ,
ಇಲ್ಲೆ ಹುಟ್ಟಿದ್ದು ಬೆಳೆದದ್ದಿಲ್ಲೆ, ಎಲ್ಲ ಪಿತೃಗಳ ಹಾಗೆ
ನಾನು ಕೂಡ. ಇಲ್ಲೆ ಕೊನೆಗಾಣುವುದು ನನಗೆ ಧರ್ಮ”.
ಈಗ ಹೇಳುತ್ತೇನೆ-“”ಅಪ್ಪಯ್ಯ ಕೇಳಿ, ಕೇಳಿ
ನಾನೆ ಬರಲಿದ್ದೇನೆ ನಿಮ್ಮ ಕಡೆಗೆ
ಅದಕ್ಕೆಲ್ಲ ಸಿದ್ಧತೆಯ ನಡೆಸುತ್ತಲಿದ್ದೇನೆ.
ಎಲ್ಲವೂ ಮುಗಿಯುವುದು ಇಷ್ಟರಲ್ಲೇ.
ಎಲ್ಲೆ ಇದ್ದರು ನೀವು ನಿಮ್ಮ ಸಹವಾಸವೇ
ಗುರಿ ನನಗೆ. ಸೆಳೆದುಕೊಳ್ಳಿರಿ ನಿಮ್ಮ ತೆಕ್ಕೆಗೆ ನನ್ನ,
ಅದೇನೆ ಅಂತಿಮದ ಹಕ್ಕೆ ನನಗೆ”
ಅಡಿಗರು ಬೇಂದ್ರೆಯವರಂತೆ ಮಾತೃಚ್ಛಾಯೆಯವರಲ್ಲ, ಪಿತೃಚ್ಛಾಯೆಯವರು. ತಮ್ಮ ತಾಯಿಯ ಬಗ್ಗೆ ಒಂದು ಸಾಲು ಬಿಟ್ಟು ಬೇರೇನೂ ಹೇಳಿದಂತಿಲ್ಲ. ಅವರ ಕವಿತೆಯಲ್ಲೂ ಈ ಪಿತೃಪ್ರಧಾನ ನಡೆ ಕಾಣಿಸುತ್ತದೆ. “ನನ್ನ ನುಡಿ’ಯನ್ನು ಪಡೆಯುವ ಹಂಬಲ ತಾಯ್ನುಡಿಯ ಹಂಬಲಕ್ಕಿಂತ ಭಿನ್ನವಾದದ್ದು. ಅದಿರಲಿ. ತಮ್ಮ ಪ್ರೀತಿಯಲ್ಲಿ ಬೆಕ್ಕು ಅಗಲಿದಾಗ ಬರೆದ ಈ ಸಾಲುಗಳು: ಬೆಕ್ಕಿನ ಹೆಸರು ನರಸಿಂಗ: ಇಂದಿಗೂ ಕಾಯುತ್ತೇನೆ ನಿನ್ನ ನರಸಿಂಗ, ಎಂದಾದರೂ ಬಂದು ಕೂಡುತ್ತೇನೆ ನಿನ್ನ, ನೀನು ಕೂಡಾ ಕಾಯುತ್ತೀಯೆ ನಾನು ಬಲ್ಲೆ, ಹೃದಯ ಹೃದಯದ ಮಾತು ನೀನು ಬಲ್ಲೆ. ಈ ಸಾಲುಗಳು “ತೀರ್ಥರೂಪರಿಗೆ’ ಕವಿತೆಯನ್ನು ಮತ್ತೆ ನೆನಪಿಸುತ್ತದೆ.
ವಿರಹವು ಸಾವಿನ ಹೊಳಹನ್ನು ನೀಡಬಲ್ಲುದು. ನೀಡಿ, ಒಂದು ಬಗೆಯ ಉತ್ತರವನ್ನೂ ಕೊಡಬಲ್ಲುದು. ಅದೆಂದರೆ ಸಾವು; ಅಗಲಿದ ಆಪ್ತರೊಂದಿಗೆ ನಮ್ಮನ್ನೂ ಮತ್ತೆ ಕೂಡಿಸಬಲ್ಲುದೆಂಬ ಉತ್ತರ. ಇವೆಲ್ಲ ಭಾವಗೀತೆಯ ಅಂತರಂಗ ಪ್ರಪಂಚಕ್ಕೆ ಹೊಂದಿಕೊಂಡೇ ಇವೆ.
ಅಡಿಗರು ಸಾವಿನ ಬಗ್ಗೆ ನೇರವಾಗಿ ಬರೆದ ಕವಿತೆ – “ದ್ವಂದ್ವ ದಿಗ್ಬಂಧ’. ಇದು ಅಡಿಗರು ಬರೆದ ಕೊನೆಯ ಪದ್ಯ. ಕವಿಯ ಚರಮಶ್ಲೋಕ. ಕವಿ ತಮ್ಮ ಸಾವಿನ ಏಳುದಿನಗಳ ಮುನ್ನ ಬರೆದ ಕವಿತೆ ಇದು. ಈ ಕವಿತೆ ಮಾತ್ರ- ಆಶ್ಚರ್ಯ ಉಂಟುಮಾಡುವಂತೆ- ನವ್ಯ ಕವಿತೆಯೇ ಆಗಿದೆ. ಆಶ್ಚರ್ಯವೇಕೆಂದರೆ- ಕವಿ; ಸಾವಿನ ಅಂಚಿನಲ್ಲಿದ್ದರು. ಸನಿಹದಲ್ಲೆ ಸುಳಿಯುತ್ತಿತ್ತು ಸಾವು. ಇದು ಕವಿಗೂ ತಿಳಿದಿತ್ತು. ಮೈ-ಮನಸ್ಸು ಮೆತ್ತಗಾಗಿತ್ತು. ಮೆತ್ತಗಾದಾಗ ಆಧಾರಕ್ಕಾಗಿ ಆತುಕೊಳ್ಳುವ ದೇವರು- ಭಕ್ತಿ-ಅಧ್ಯಾತ್ಮ ಇತ್ಯಾದಿ ಭಾವ-ಸಾಮಗ್ರಿಗಳ ಪರಿಚಯವೂ ಕವಿಗೆ ಇತ್ತು. ಹೊಸ ಕವಿತೆಯ ನವ್ಯ ಪಥದಲ್ಲಿ ನಡೆಯುತ್ತ ಈ ಭಾವಸಾಮಗ್ರಿಗಳನ್ನೆಲ್ಲ ಅವರು ಪ್ರಶ್ನಿಸಿದ್ದರು. ಸಂದೇಹಿಸಿದ್ದರು. ತನ್ನ ಅನುಭವವನ್ನಲ್ಲದೆ ಇನ್ನಾವುದನ್ನು ನೆಚ್ಚಲಿ? ಎಂದು ಆರ್ತವಾಗಿ ಕೇಳಿದ್ದರು. ಯಾವುದನ್ನೋ ನೆಚ್ಚಿ ಈ ಬದುಕು ಹುಸಿಯಾಗಬೇಕೆ? ಎಂದು ಕೇಳಿದ್ದರು. ಈಗ ಸಾವಿನ ಸನಿಹದಲ್ಲಿ ಈ ಎಲ್ಲ ನಿಲುವುಗಳ ಅಗ್ನಿಪರೀಕ್ಷೆಯಾಗಲೇಬೇಕು.
(ಮುಂದಿನ ರವಿವಾರ
ಈ ಸರಣಿಯ ಕೊನೆಯ ಬರಹ)
ಲಕ್ಷ್ಮೀಶ ತೋಳ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.