ಕರಾವಳಿಯ ಹೂವಿನ ಕಣಿವೆ
Team Udayavani, Feb 25, 2018, 8:15 AM IST
ಶಂಖಪುಷ್ಪ, ಗಂಧವತಿ, ಆರ್ಕಿಡ್ಸ್ ಸಮೂಹ, ನಾಣಿಹೂವು, ಕಿರಣಿ ಪುಷ್ಪ, ಮಧು ಪುಷ್ಪ, ಕೆರೆಕಮಲ ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚು ಜಾತಿಯ ಹೂವಿನ ರಾಶಿಯ ಸಾಲು ಸಾಲುಗಳು ಇಲ್ಲಿ ವರಚ್ಚಾಗಿ ಬೆಳೆಯುತ್ತಿದ್ದರೆ ಇದನ್ನು ನಂಬಿಕೊಂಡು ಮಧು ಹೀರಲು ಮತ್ತು ಮರಿ ಮಾಡಲು ಬರುವ ದುಂಬಿ ಹಾಗೂ ಪಕ್ಷಿಗಳ ಸಂಖ್ಯೆ ಸರಿಸುಮಾರು ಐವತ್ತಕ್ಕೂ ಹೆಚ್ಚು. ಮಧ್ಯದಲ್ಲೊಂದು ತಿಳಿನೀರ ಕೆರೆ ಸುತ್ತ ನೆಲದಿಂದ ಹೂವಿನ ಚಾಪೆ ಹಾಸಿದಂತೆ ಹರಡಿ ಒತ್ತಾಗಿ ಬೆಳೆದು ನಿಲ್ಲುವ ತನ್ನಷ್ಟಕ್ಕೆ ಜೀವಪ್ರಬೇಧಗಳ ಬದಲಾವಣೆಯನ್ನು ಪ್ರಕೃತಿದತ್ತವಾಗಿ ಮಾಡಿಕೊಳ್ಳುವ ಪಶ್ಚಿಮ ಘಟ್ಟದ ತೇವಭರಿತ ಫಲವತ್ತಾದ ಪ್ರದೇಶವಾಗಿರುವ ಇದು ಇವತ್ತು ಕರಾವಳಿಯ ವ್ಯಾಲಿ ಆಫ್ ಪ್ಲವರ್ ಎಂದರೆ ತಪ್ಪಾಗಲಿಕ್ಕಿಲ್ಲ.
ಉತ್ತರಕನ್ನಡ ಜಿಲ್ಲೆ ಮೊದಲಿನಿಂದಲೂ ತನ್ನ ಸಹ್ಯಾದ್ರಿ ಮಡಿಲಲ್ಲಿ ಹಲವು ಜೀವ ರಾಶಿಗಳಿಗೂ ಮತ್ತು ಅನಾಮಿಕ ಸಸ್ಯ ಪ್ರಬೇಧಗಳಿಗೂ ಜನ್ಮ ನೀಡುವುದೂ ಪೋಷಿಸುವುದೂ ಮಾಡುತ್ತಲೇ ಬಂದಿದೆ. ಆದರೆ, ನಮ್ಮ ಕಣ್ಣಿಗೆ ಮತ್ತು ಮಾಹಿತಿಗೆ ದಕ್ಕಿದ್ದು ಮಾತ್ರ ಈಗಲೂ ಕೆಲವೇ ಕೆಲವು ಶೇಕಡಾವಾರು ಅಷ್ಟೆ. ಹಾಗಾಗಿಯೇ ಬಹುಶಃ ಕರಾವಳಿಯ ಹೂವಿನ ಕಣಿವೆಯೂ ನಮ್ಮ ಗಮನಕ್ಕೆ ಬಾರದೆ ಹೋಗುತ್ತಿತ್ತೇನೋ ಇಲ್ಲಿವರೆಗೂ.
ಸದ್ಯ ಜಿಲ್ಲೆಯ ಕೆಲವೇ ಬೆರಳೆಣಿಕೆಯ ಅತ್ಯುತ್ತಮ ಛಾಯಾಚಿತ್ರಗಾರರಲ್ಲಿ ಒಬ್ಬರಾಗಿರುವ ಮತ್ತು ಪಕ್ಷಿತಜ್ಞರೂ ಆಗಿರುವ ಆರ್. ಬೈಯ್ಯಣ್ಣ ಬೆಳ್ಳಂಬೆಳಗ್ಗೆ ಕೆಮರಾ ಹೊತ್ತುಕೊಂಡು ಪಕ್ಷಿಗಳ ಫೋಟೊ ಬೇಟೆಗೆ ಹೊರಟಾಗ ಮಂಜಿನ ಹನಿಗಳ ಮೇಲೆ ಆವರಿಸಿರುವ ಕೆರವಡಿಯ ಕೆರೆಯ ಆವರಣದಲ್ಲೇ ನಿಂತುಬಿಟ್ಟಿದ್ದಾರೆ. ಸಹಜವಾಗಿ ನೋಡುವಾಗ ಏನೂ ಅನ್ನಿಸದಿದ್ದ ಪ್ರಕೃತಿ ಪೊದೆಗಳ ಮಧ್ಯೆ ಕಾಲಾಡಿಸುತ್ತ ನಡೆದರೆ ಸಾಲುಸಾಲು ಗಂಧವತಿಯರ ಶಿಸ್ತಿನ ಹರವು ಎದುರಿಗೆ ಬಿಚ್ಚಿಕೊಂಡಿದೆ.
ಹೀಗೆ ಹಕ್ಕಿಗಳ ಫೋಟೊಗ್ರಫಿಗಾಗಿ ಅಲೆದಾಡುವಾಗ ಹಲವು ಅಚ್ಚರಿಯ ಇಂತಹ ಸ್ಥಳಗಳು ಕಣ್ಣಿಗೆ ಬೀಳುವುದು, ಸೆರೆಯಾಗುವುದು ಆಗುತ್ತಲೇ ಇರುತ್ತದೆ. ಆದರೆ ಪ್ರತಿಭಾಗಕ್ಕೂ ಮಾನವನ ಪ್ರವೇಶದಿಂದ ಸಹಜ ಬೆಳವಣಿಗೆಗೆ ತೊಡಕಾಗುವ ಸಾಧ್ಯತೆ ಇರುವುದರಿಂದ ಅದನ್ನು ಬಹಿರಂಗಪಡಿಸುವುದಿಲ್ಲ. ಆದರೆ, ಈ ಕೆರೆಯ ಭಾಗ ಈಗಾಗಲೇ ಸುತ್ತಲಿನ ತೋಟದ ಭಾಗಗಳಿಗೆ ಪಸರಿಸಿರುವುದರಿಂದ ಸಾಕಷ್ಟು ಮಾನವ ಸಂಪರ್ಕಕ್ಕೆ ಬಂದೂ ಸಹಜವಾಗಿಯೂ ಉಳಿದುಕೊಂಡಿದೆ. ಕಾರಣ- ವರ್ಷದುದ್ದಕ್ಕೂ ಇರುವ ನೀರಿನ ಒತ್ತಾಸೆ ಮತ್ತು ಪ್ರಾಕೃತಿಕ ಸರಪಳಿಯ ಜೀವ ವೈವಿಧ್ಯಗಳು ನಿರಂತರತೆಯನ್ನು ಕಾಯ್ದುಕೊಂಡಿದ್ದರಿಂದ ಇಂಥ ಬೆಳವಣಿಗೆ. ಆರ್ಕಿಡ್ ಪುಷ್ಪಗಳ ಸಂಕುಲನ ಸರಪಳಿಯೆ ಇಲ್ಲಿ ಕಾಣಿಸುತ್ತಿದೆ. ಹೀಗಿದ್ದ ಪರಿಸರದಲ್ಲಿ ಪ್ರಭೇದಗಳ ವಿಸ್ತರಣೆ, ಹಕ್ಕಿಗಳ, ಕೀಟಗಳ ಮತ್ತು ಸಣ್ಣ ಹುಳುಗಳ ಹುಲುಸಾದ ಚಟುವಟಿಕೆಯಿಂದ ವರ್ಷದಿಂದ ವರ್ಷಕ್ಕೆ ತಾಂತ್ರಿಕವಾಗಿ ಜೀವ ಸಂತತಿಯ ಬೆಳವಣಿಗೆ ನೈಜವಾಗಿ ಸಾಗುತ್ತದೆ. ಆದ್ದರಿಂದ, “”ಮೊದಲೆಲ್ಲ ಕೇವಲ ಬೆರಳೆಣಿಕೆಯಲ್ಲಿ ಲಭ್ಯವಾಗುತ್ತಿದ್ದ ಹಕ್ಕಿಗಳ ಗುಂಪು ಈಗ ಸಾಲುಸಾಲಾಗಿ ದಕ್ಕುತ್ತಿದೆ” ಎನ್ನುತ್ತಾರೆ ಸುಮಾರು ಮೂನ್ನೂರಕ್ಕೂ ಹೆಚ್ಚು ಹಕ್ಕಿಗಳ ಚಿತ್ರೀಕರಣ ಮಾಡಿರುವ ಛಾಯಾಗ್ರಾಹಕ ಬೈಯ್ಯಣ್ಣ.
ಹಾಗಾಗಿಯೇ ಇವತ್ತು ನಾವು ಉತ್ತರಾಖಂಡ ರಾಜ್ಯದ ಹೂವಿನ ಕಣಿವೆಯಲ್ಲಿ ಕಾಣುವ ಹಲವು ಪ್ರಭೇದಗಳ ಮತ್ತು ಅದರಂತೆ ಸಹಜ ಸಾಲಿನಲ್ಲಿ ಬೆಳವಣಿಗೆಯಾಗುವ ನೈಜ ಶಿಸ್ತಿನ ಹಸಿರು, ಕೆಂಪು, ಊದಾ ರಂಗಿನ ಹರವನ್ನು ಇಲ್ಲಿಯೂ ಕಾಣುತ್ತಿದ್ದೇವೆ. ಕಾರವಾರ ತಾಲೂಕಿನಿಂದ ಸುಮಾರು ಇಪ್ಪತ್ತು ಕಿ.ಮೀ. ದೂರ ಇರುವ ಕೆರವಡಿ ಕೆರೆಯ ಸುತ್ತ ಇರುವ ಸಹಜ ಹಸಿರು ಇವತ್ತು ಇಂಥ ಅಚ್ಚರಿಗೆ ಕಾರಣವಾಗಿದ್ದರೆ, ಜಿಲ್ಲೆಯ ಪ್ರಾಕೃತಿಕ ಸಂಪನ್ಮೂಲದ ಮಹತ್ವದ ದೃಷ್ಟಿಯಿಂದಲೂ ಕೆರವಡಿಯ ಹೂವಿನ ಕಣಿವೆ ಅಭ್ಯಾಸಯೋಗ್ಯವಾದುದು. ವರ್ಷದಲ್ಲಿ ಸರಾಸರಿ ಐದು ತಿಂಗಳು ಮಳೆಗಾಲ ಕಾಣುವ ಈ ಪರಿಸರ ಆಗೆಲ್ಲಾ ಅಪ್ಪಟ್ಟ ಮಳೆಯ ಕಾಡಾಗಿ ಬದಲಾಗುತ್ತದೆ. ಹುಲುಸಾಗಿ ಎದ್ದು ನಿಲ್ಲುವ ಹಲವು ನಿರ್ದಿಷ್ಟ ಕಾಲಾವಧಿಯ ಸಸ್ಯ ಪ್ರಭೇದಗಳು ನಂತರದಲ್ಲಿ ಕ್ರಮೇಣ ನಶಿಸುತ್ತ ಸಣ್ಣ ಬಿಸಿಲಿಗೆ ಬಾಯ್ಬಿಡುವ ಹೂವಿನ ಕಣಿವೆಗೆ ದಾರಿ ಮಾಡಿಕೊಡುತ್ತದೆ. ಸುಮಾರು ಡಿಸೆಂಬರ್‌ನಿಂದ ಫೆಬ್ರವರಿಯವರೆಗೆ ಅರಳುವ ಹಲವು ತರಹದ ಜೀವ ವೈವಿಧ್ಯದ ಬಗ್ಗೆ ವೈಜ್ಞಾನಿಕ ಅಭ್ಯಾಸ ಇನ್ನಷ್ಟೇ ನಡೆಯಬೇಕಿದೆ. ಸದ್ಯ ಹಲವು ಅಚ್ಚರಿಗೆ ಕಾರಣವಾಗುವ ಸಹ್ಯಾದ್ರಿಯ ಮಡಿಲಿಗೆ ಇದೊಂದು ಹೊಸ ಸೇರ್ಪಡೆ.
ಸಂತೋಷಕುಮಾರ ಮೆಹೆಂದಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.