ಹನಿಗವನಗಳ ಡುಂಡಿ”ರಾಜ’ನಿಗೆ ಅರವತ್ತರ ಅಭಿನಂದನೆ
Team Udayavani, May 7, 2017, 3:45 AM IST
“ಕವಿಗೆ ಕವಿ ಮಣಿವ’ ಎಂಬುದೊಂದು ಉಕ್ತಿ. ಒಬ್ಬ ಕವಿಯ ಬಗ್ಗೆ ಇನ್ನೊಬ್ಬ ಕವಿ ಬರೆದ ಆತ್ಮೀಯ ಧಾಟಿಯ ಬರಹವಿದು.
ಹನಿಗವಿತೆ ಇಂದಿನ ಒಂದು ಜನಪ್ರಿಯ ಕಾವ್ಯ ಪ್ರಕಾರ. ಅದಕ್ಕೆ ಎ ಮೊಮೆಂಟ್ಸ್ ಮಾನ್ಯುಮೆಂಟ್, “ಒಂದು ಕ್ಷಣಕ್ಕಾಗಿ ನಿರ್ಮಿಸಿದ ಸ್ಮಾರಕ’ ಎಂಬ ಸಂಕ್ಷಿಪ್ತ, ಅರ್ಥಪೂರ್ಣ ವ್ಯಾಖ್ಯೆ ಇಂಗಿಷಿನಲ್ಲಿದೆ. ಕನ್ನಡದಲ್ಲಿ “ಕಾವ್ಯ ಬಿಂದು’ ಎಂದರೆ ಸರಿಯಾದೀತು. ಲೇವಡಿ ಮಾಡುವವರು “ಪುಡಿಗವನ’ ಅನ್ನುವುದೂ ಉಂಟು.
ಹಾಗೆ ನೋಡಿದರೆ, ಹನಿಗವಿತೆಗೂ ತನ್ನದೇ ಸುದೀರ್ಘ ಪರಂಪರೆಯಿದೆ. ಸಂಸ್ಕೃತದ ಸುಭಾಷಿತಗಳು, ಮುಕ್ತಕಗಳು; ಕನ್ನಡದ ತ್ರಿಪದಿಗಳು, ವಚನಗಳು; ಇಂಗ್ಲಿಷಿನ ಲಿಮೆರಿಕ್, ಎಪಿಗ್ರಂಥಗಳು; ಜಪಾನೀ ಹಾಯುಗಳು; ಇತ್ಯಾದಿ. ಕನ್ನಡದ ನವೋದಯದ ಕಾಲದಲ್ಲಿ ತೀ.ನಂ.ಶ್ರೀ., ಕುವೆಂಪು, ರಾಜರತ್ನಂ ಮುಂತಾದವರು ಹನಿಗವನಗಳ ಪ್ರತ್ಯೇಕ ಸಂಕಲನಗಳನ್ನೇ ಪ್ರಕಟಿಸಿ¨ªಾರೆ. ದಿನಕರ ದೇಸಾಯಿ, ಅಕಬರ ಅಲಿ, ವಿ.ಜಿ.ಭಟ್ಟ, ಬಿಳಿಗಿರಿ ಈ ಪ್ರಕಾರಕ್ಕೆ ಜನಪ್ರಿಯತೆ ತಂದುಕೊಟ್ಟಿ¨ªಾರೆ. ನವ್ಯದ ಗಹನ, ಗಂಭೀರ ಕಾಲದಲ್ಲಷ್ಟೇ ಹನಿಗವಿತೆ, ಇನ್ನಿತರ ಜನಪ್ರಿಯ ಕಾವ್ಯ ಪ್ರಕಾರಗಳಾದ ಭಾವಗೀತೆ, ಶಿಶುಗೀತೆ, ಸುನೀತಗಳಂತೆ, ತಾನೂ ಅವಗಣನೆಗೆ ಈಡಾಯಿತು. ನವ್ಯ, ಬಂಡಾಯ, ದಲಿತ ಚಳುವಳಿಗಳ ನಂತರ ಮತ್ತೆ ಹನಿಗವಿತೆಯ ಸುಗ್ಗಿ ಪ್ರಾರಂಭವಾಗಿದೆ.
ಇಂದು ಹನಿಗವಿತೆ ಎಂದ ಕೂಡಲೇ ಥಟ್ಟನೆ ನೆನಪಾಗುವ ಮೊದಲ ಹೆಸರು ಎಚ್. ಡುಂಡಿರಾಜ…. ತನ್ನ ಅನನ್ಯ ಪ್ರತಿಭೆಯಿಂದ, ಕಾವ್ಯ ಕೌಶಲದಿಂದ ಡುಂಡಿರಾಜ ಇಂದು ಹನಿಗವಿತೆಯ ಸಾಮ್ರಾಜ್ಯದ ಅನಭಿಷಿಕ್ತ ರಾಜನಾಗಿದ್ದಾನೆಂದರೆ ಖಂಡಿತ ಅತಿಶಯೋಕ್ತಿಯಲ್ಲ. ಹನಿಗವಿತೆಗಳನ್ನು ಸ್ಥೂಲವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು. ವಿಚಾರ ಮತ್ತು ತಾತ್ವಿಕ ಒಳನೋಟಗಳ ಕುವೆಂಪು ಮಾದರಿ ಒಂದಾದರೆ, ಇನ್ನೊಂದು ವ್ಯಂಗ್ಯ, ವಿನೋದ, ವಿಡಂಬನೆಗಳ ದಿನಕರ ದೇಸಾಯಿ ಮಾದರಿ. ಡುಂಡಿರಾಜ್ ಪ್ರಧಾನವಾಗಿ ಎರಡನೆಯ ಗುಂಪಿಗೆ ಸೇರಿದ ಹನಿಗವಿ. ಪ್ರಾಸ, ಶ್ಲೇಷೆ ಮತ್ತು ಚತುರೋಕ್ತಿ ಅವನ ಗುರಿತಪ್ಪದ ಅಸ್ತ್ರಗಳು. ಹನಿಗವಿತೆಗಳ ಕಾವ್ಯ ಭಂಡಾರಕ್ಕೆ ಅವನ ಕೊಡುಗೆ ಸಮೃದ್ಧವಷ್ಟೇ ಅಲ್ಲದೆ ಸತ್ವಪೂರ್ಣವಾದದ್ದೂ ಸಹ. ಹೀಗಾಗಿ ಅನನ್ಯ ಸಾಧಾರಣವಾದ ಅವನ ಸಾಧನೆ ನಿಜಕ್ಕೂ ಅಭಿನಂದನೀಯ.
.
ಡುಂಡಿಯನ್ನು ನಾನು ಮೊತ್ತಮೊದಲ ಬಾರಿ ಭೇಟಿಯಾದದ್ದು 1985ರಲ್ಲಿ. ಸಂದರ್ಭ- ಮಂಗಳೂರು ಆಕಾಶವಾಣಿ ಏರ್ಪಡಿಸಿದ್ದ ಒಂದು ರಾಜ್ಯಮಟ್ಟದ ಕವಿಗೋಷ್ಠಿ. ಹೊಟೇಲ್ ಕೋಣೆಯೊಂದರಲ್ಲಿ ತಂಗಿದ್ದ ನನ್ನನ್ನು ಭೇಟಿಯಾಗಲು ಡುಂಡಿ ಬೆಳಿಗ್ಗೆಯೇ ಬಂದಿದ್ದ. ನಾವು ಒಬ್ಬರನ್ನೊಬ್ಬರು ಆವರೆಗೆ ಫೋಟೊಗಳಲ್ಲಿ ಸಹ ನೋಡದೇ ಇದ್ದುದರಿಂದ, ನಮ್ಮ ಕವಿತೆಗಳ ಹಿನ್ನೆಲೆಯಲ್ಲಿ, ಪರಸ್ಪರ ನಮ್ಮದೇ ವ್ಯಕ್ತಿಚಿತ್ರಗಳನ್ನು ಕಲ್ಪಿಸಿಕೊಂಡಿದ್ದೆವು. ನನ್ನಲ್ಲಿ ಡುಂಡಿ ಒಬ್ಬ “ಪ್ಲೇಬಾಯ’ನ್ನು ನಿರೀಕ್ಷಿಸಿದ್ದರೆ, ಅವನಲ್ಲಿ ನಾನು ಒಬ್ಬ ಲಕಲಕಿಸುವ ಲವಲವಿಕೆಯ ವ್ಯಕ್ತಿಯನ್ನು ನಿರೀಕ್ಷಿಸಿದ್ದೆ. ಹೀಗಾಗಿ ಒಬ್ಬರನ್ನೊಬ್ಬರು ಪ್ರತ್ಯಕ್ಷ ಕಂಡಾಗ, ಅಷ್ಟೇನೂ ಆಕರ್ಷಕನಲ್ಲದ, ನಡುವಯಸ್ಕನೂ, ಸದ್ಗƒಹಸ್ಥನೂ ಆದ ನನ್ನನ್ನು ಕಂಡು ಅವನಿಗೂ, ಗಂಭೀರ ವದನನೂ, ಬಡಕಲಾಸಾಮಿಯೂ ಆದ ಅವನನ್ನು ಕಂಡು ನನಗೂ ನಿರಾಸೆಯಾದದ್ದು ನಿಜ. ಆದರೆ ಮಾತಿಗೆ ತೊಡಗಿದ ಕೆಲವೇ ನಿಮಿಷಗಳಲ್ಲಿ ನಾವು ಎಷ್ಟು ಆತ್ಮೀಯರಾದೆವೆಂದರೆ, ಮಂಗಳೂರನ್ನು ಬಿಟ್ಟು ನಾನು ಹಿಂತಿರುಗುವ ವೇಳೆಗೆ, (ನನಗಿಂತ ಡುಂಡಿ ಹತ್ತು ವರ್ಷಗಳಷ್ಟು ಕಿರಿಯನಾದರೂ-ಜನನ: 18/08/1956) ನಾವು ಏಕವಚನದ ಗೆಳೆಯರಾಗಿಬಿಟ್ಟೆವು. ಅಲ್ಲಿಂದಾಚೆಗೆ ನಮ್ಮ ಪತ್ರ ವ್ಯವಹಾರ ಮತ್ತು ಒಡನಾಟ ನಿರಂತರವಾಯಿತು.
ಡುಂಡಿ ಅಕಾಡೆಮಿಕ್ಕಾಗಿ ಕಾವ್ಯ, ಸಾಹಿತ್ಯ ಓದಿಕೊಂಡವನಲ್ಲ. ಅವನು ಓದಿದ್ದು ಕೃಷಿ ವಿಜ್ಞಾನವನ್ನು. ನೌಕರಿಯಲ್ಲಿರುವುದು ಕಾರ್ಪೊರೇಶನ್ ಬ್ಯಾಂಕಿನಲ್ಲಿ. ಆದರೂ ಅದೇಕೋ ಅವನಿಗೆ ಚಿಕ್ಕಂದಿನಿಂದಲೂ ಪದ್ಯ ಓದುವ, ಬರೆಯುವ ಹುಚ್ಚಿತ್ತು. ಕಾಲೇಜಿನ ವಿದ್ಯಾರ್ಥಿಯಾಗಿ¨ªಾಗ ಅವನು ತನ್ನ ಅಣ್ಣ ಶಿವರಾಮಭಟ್ಟರ ಮನೆಯಲ್ಲಿದ್ದ. ಶಿವರಾಮಭಟ್ಟರಿಗೆ ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಅವರ ಮನೆಯಲ್ಲಿ ಒಂದು ಒಳ್ಳೆಯ ಪುಸ್ತಕ ಭಂಡಾರವಿತ್ತು. ಡುಂಡಿ ತನ್ನ ಬಿಡುವಿನ ವೇಳೆಯಲ್ಲಿ ಅಲ್ಲಿದ್ದ ಪುಸ್ತಕಗಳನ್ನು ಓದಿದ. ಶಿವರಾಮಭಟ್ಟರಿಗೆ ಅನೇಕ ನವ್ಯ ಸಾಹಿತಿಗಳು ಖಾಸಾ ಗೆಳೆಯರಾಗಿದ್ದರು. ಅವರನ್ನೆಲ್ಲ ಡುಂಡಿ ಹತ್ತಿರದಿಂದ ಕಂಡ. ಅಂಥವರಲ್ಲಿ ಒಬ್ಬರಾದ ನಿಸಾರ್ ಅಹಮದ್ ಅವರ ಕವಿತೆಗಳು ಅವನಿಗೆ ತುಂಬ ಇಷ್ಟವಾದವು. ಆ ಪ್ರಭಾವದÇÉೇ ತಾನೂ ಒಂದಷ್ಟು ಕವಿತೆಗಳನ್ನು ಬರೆದ. ತಮ್ಮನ ಕವಿತೆಗಳನ್ನು ಓದಿ ಮೆಚ್ಚಿದ ಶಿವರಾಮಭಟ್ಟರು ಒಂದು ಸಂಕಲನವನ್ನೇಕೆ ಹೊರತರಬಾರದು ಎಂದು ಮುಂದಾದರು. ತಮ್ಮ ಖಾಸಾ ಮಿತ್ರ ನಿಸಾರ್ ಅಹಮದ್ ಅವರನ್ನೇ ಮುನ್ನುಡಿ ಬರೆದು ಕೊಡಲು ಕೋರಿದರು. ಡುಂಡಿಯನ್ನು ಮೊತ್ತಮೊದಲ ಬಾರಿ ಕಂಡಾಗ ನಿಸಾರ್ ಅವರು ತಮಾಷೆಯಾಗಿ ಹೇಳಿದ್ದು, “ಇವನೇನೇನ್ರೀ, ಭಟ್ರೇ, ನಿಮ್ಮ ತಮ್ಮ? ಒಳ್ಳೇ ಸೊಳ್ಳೇ ಥರ ಇದಾನಲಿÅà!’. ಆದರೂ ಡುಂಡಿಯ ಕವಿತೆಗಳನ್ನು ಓದಿ ಮೆಚ್ಚಿದ ನಿಸಾರ್ ಮುನ್ನುಡಿ ಬರೆಯಲು ಒಪ್ಪಿಕೊಂಡರು. ಕಾರಣಾಂತರಗಳಿಂದ ಅದು ಕೈಗೂಡಲಿಲ್ಲ. ಆದರೆ ತಾವು ಹೆಸರಿಸಿದ “ಸೊಳ್ಳೆ’ ಮುಂದೊಂದು ದಿನ ಕರ್ನಾಟಕದಾದ್ಯಂತ ಹಾಸ್ಯ ಹನಿಗವಿತೆಗಳ ಸಾಂಕ್ರಾಮಿಕವನ್ನು ಹರಡಲಿದೆಯೆಂದು ನಿಸಾರ್ ಅವರು ಖಂಡಿತ ನಿರೀಕ್ಷಿಸಿರಲಾರರು.
ಹಾಗೆ ನೋಡಿದರೆ, ಡುಂಡಿ ಹನಿಗವಿಯಾಗಿ ಸ್ಥಾಪಿತನಾದದ್ದು ಕೊಂಚ ಆಕಸ್ಮಿಕವಾಗಿಯೇ. ಅದರಲ್ಲಿ ನನ್ನದೂ ಕಿಂಚಿತ್ ಪಾಲಿದೆ. ಅದು ಆದದ್ದು ಹೀಗೆ: ಡುಂಡಿ 1985ರಲ್ಲಿ ನೀನಿಲ್ಲದೆ ಎಂಬ ತನ್ನ ಎರಡನೆಯ ಇಡಿಗವನಗಳ ಸಂಕಲವನ್ನು ಪ್ರಕಟಿಸುವ ಹವಣಿಕೆಯಲ್ಲಿದ್ದ. ಅದರಲ್ಲಿ ತನ್ನ ಹನಿಗವನಗಳನ್ನು ಸೇರಿಸುವ ಇರಾದೆ ಅವನಿಗಿರಲಿಲ್ಲ. ಹೀಗಾಗಿ, ನಾನು ಓದಿದ್ದ ಅವನ ಕೆಲವು ಸೊಗಸಾದ ಹನಿಗವನಗಳು ನಿರಾಶ್ರಯದಿಂದ ತಬ್ಬಲಿಗಳಾಗಿ ಬಿಡುವ ಅಪಾಯದ ಸಾಧ್ಯತೆ ನನಗೆ ಕಂಡಿತು. ಆದ್ದರಿಂದ, “ನಿನ್ನ ಹನಿಗವನಗಳದ್ದೇ ಒಂದು ಪ್ರತ್ಯೇಕ ಸಂಕಲನ ಯಾಕೆ ಹೊರತರಬಾರದು?’ ಎಂಬ ಬಿಟ್ಟಿà ಸಲಹೆಯನ್ನು ನಾನು ಅವನ ಮುಂದಿಟ್ಟೆ. “ಹೌದಲ್ಲ!’ ಎಂದು ಅವನು ಕೂಡಲೇ ಕಾರ್ಯತತ್ಪರನಾಗಿ, “ಪಾಡ್ಯ, ಬಿದಿಗೆ, ತದಿಗೆ…’ ಎಂಬ ತನ್ನ ಪ್ರಥಮ ಹನಿಗವನಗಳ ಸಂಕಲನವನ್ನು ಪ್ರಕಟಿಸಲು ಅಣಿಯಾದ. ಸಲಹೆ ಕೊಟ್ಟ ತಪ್ಪಿಗೆ, ನಾನೇ ಆ ಸಂಕಲನಕ್ಕೆ ಮುನ್ನುಡಿ ಬರೆದು ಕೊಡಬೇಕೆಂದು ಹಕ್ಕೊತ್ತಾಯ ಮಾಡಿದ. ಸ್ವಯಂಕೃತಾಪರಾಧಕ್ಕೆ ಪ್ರಾಯಶ್ಚಿತ್ತವಾಗಿ, ನಾನು ಸಂತೋಷದಿಂದಲೇ ಮುನ್ನುಡಿ ಬರೆದು ಕೊಟ್ಟೆ. ಆ ಸಂಕಲನ ಪ್ರಕಟವಾದ ನಂತರ, ಡುಂಡಿ ಹಿಂತಿರುಗಿ ನೋಡುವ ಪ್ರಮೇಯವಾಗಲಿ, ಅವಕಾಶವಾಗಲಿ ಅವನಿಗೆ ಬರಲೇ ಇಲ್ಲ. ತನ್ನ ಚುರುಕಾದ ಹನಿಗವನಗಳಿಂದ ಅವನೆಷ್ಟು ಪ್ರಸಿದ್ಧ ಮತ್ತು ಜನಪ್ರಿಯನಾದನೆಂದರೆ, ಓದುಗರ ಹಾಗೂ ಮಾಧ್ಯಮಗಳ ನಿರಂತರ ಬೇಡಿಕೆಯಿಂದಾಗಿ ಇಂದಿಗೂ ಅವನ ಹನಿಗವನಗಳ “ತುಂತುರು ಮಳೆ’ ಎಡೆಬಿಡದೆ ಸುರಿಯುತ್ತಲೇ ಇದೆ; ರಸಿಕರ ಎದೆನೆಲವನ್ನು ತೋಯಿಸುತ್ತಲೇ ಇದೆ.
ಡುಂಡಿಯ ಧ್ವನಿಪೂರ್ಣ ವಿಡಂಬನೆಗೆ ಉದಾಹರಣೆಯಾಗಿ ಅವನ ಪಾಡ್ಯ, ಬಿದಿಗೆ, ತದಿಗೆ… ಸಂಕಲನದಲ್ಲಿರುವ ಈ ಹನಿಗವಿತೆಯನ್ನು ನೋಡಬಹುದು:
ಮಹಾತ್ಮಾ, ನೀನು ಹೇಳಿದಂತೆಯೇ ಮಾಡುತ್ತೇವೆ:
ಕೆಟ್ಟದ್ದನ್ನು ಕೇಳುವುದಿಲ್ಲ, ನೋಡುವುದಿಲ್ಲ, ಆಡುವುದಿಲ್ಲ,
ಮಾಡುತ್ತೇವೆ.
(ಅಕ್ಟೋಬರ್ 2ರ ಪ್ರತಿಜ್ಞೆ…)
ಹಾಗೆಯೇ, ಡುಂಡಿಯ ರಸಿಕತೆ ಹಾಗೂ ಚಿತ್ರಕ ಶಕ್ತಿಗೆ ಈ ರಚನೆ ಒಳ್ಳೆಯ ಉದಾಹರಣೆ:
ನಾಚಿಕೊಳ್ಳುತ್ತ ಆಕೆ
ಎದೆಯ ಮೇಲಿನ ಹೊದಿಕೆ
ಕೊಂಚ ಕೊಂಚವೇ ಬದಿಗೆ
ಸರಿಸುತ್ತ ಹೋದ ಹಾಗೆ
ಪಾಡ್ಯ, ಬಿದಿಗೆ, ತದಿಗೆ…
(ಹುಣ್ಣಿಮೆ)
ಈ ಹನಿಗವನ ಬರೆದಾಗ ಡುಂಡಿ ಇನ್ನೂ ಅವಿವಾಹಿತ. ನಂತರ, ಪಾಪ, ಅವನಿಗೂ ಮದುವೆಯಾಯಿತು! ಅದರ ಬಗ್ಗೆ ಅವನದೇ ಒಂದು ಸುಪ್ರಸಿದ್ಧ ಹನಿಗ(ವಿ)ತೆ ಇದೆ:
ಇವಳು ಅಕಸ್ಮಾತ್ ಸಿಕ್ಕಳು
ನನ್ನನ್ನು ನೋಡಿ ನಕ್ಕಳು
ನಮಗೀಗ ಎರಡು ಮಕ್ಕಳು
(ಫಲ)
ಹಾಗೆ ಅಕಸ್ಮಾತ್ ಸಿಕ್ಕಾಕೆ ಭಾರತಿಯಾದರೆ, ಆ ಎರಡು ಮಕ್ಕಳು- ಸಹಜಾ ಮತ್ತು ಸಾರ್ಥಕ.
.
ಡುಂಡಿ ಹನಿಗವನ, ಇಡಿಗವನಗಳನ್ನಷ್ಟೇ ಅಲ್ಲದೆ ಹಲವು ನಾಟಕಗಳನ್ನೂ ಪ್ರಕಟಿಸಿ¨ªಾನೆ. ಅವು ಯಶಸ್ವಿ ರಂಗಪ್ರಯೋಗಗಳನ್ನು ಕಂಡಿರುವುದಲ್ಲದೆ, ಅವನಿಗೆ ಹಲವು ಬಹುಮಾನ, ಪ್ರಶಸ್ತಿಗಳನ್ನೂ ತಂದಿವೆ. ಜೊತೆಗೆ ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿಯನ್ನೂ (2006) ಗಳಿಸಿಕೊಟ್ಟಿವೆ. ಗದ್ಯದಲ್ಲೂ ಅವನು ಗಮನಾರ್ಹ ಕೃಷಿ ಮಾಡಿದ್ದಾನೆ. ಅವನ ಸೊಗಸಾದ ಲಲಿತ ಪ್ರಬಂಧಗಳ ಹಲವು ಸಂಕಲನಗಳು ಹೊರಬಂದಿವೆ. ಹಾಗೆಯೇ, ಅವನು ಅನೇಕ ಪತ್ರಿಕೆಗಳ ಜನಪ್ರಿಯ ಅಂಕಣಕಾರನಾಗಿದ್ದುದೂ ಉಂಟು. ಇಷ್ಟಾಗಿ, ಡುಂಡಿರಾಜನನ್ನು ಜನ ಇಂದಿಗೂ ನ್ಯಾಯೋಚಿತವಾಗಿ ಗುರುತಿಸುವುದು, ಗೌರವಿಸುವುದು ಅವನ “ಹನಿ ಖಜಾನೆ’ಗಾಗಿಯೇ. “ಖಜಾನೆ’ ಏಕೆಂದರೆ ಅವನ ಪ್ರಕಟಿತ ಹನಿಗವನಗಳ ಈವರೆಗಿನ ಒಟ್ಟು ಸಂಖ್ಯೆ ಸುಮಾರು 1700! ಇದೊಂದು ದಾಖಲೆ ಇದ್ದರೂ ಇದ್ದೀತು. “ಚುಟುಕು ರತ್ನ’, “ಚುಟುಕು ಸಾರ್ವಭೌಮ’ ಮುಂತಾದ ಪ್ರಶಸ್ತಿಗಳಿಂದ ಅಲಂಕೃತನಾದ ಡುಂಡಿ ಇತ್ತೀಚೆಗಷ್ಟೇ ಅಮೆರಿಕದ ಅಟ್ಲಾಂಟಾದಲ್ಲಿ ನಡೆದ “ಅಕ್ಕ’ ಸಮ್ಮೇಳನಕ್ಕೆ ಆಹ್ವಾನಿತನಾಗಿ ಹೋಗಿ, ಅಲ್ಲೂ ಸಹ ತನ್ನ “ಡುಂಡಿಮ’ವನ್ನು ಬಾರಿಸಿ ಬಂದಿದ್ದಾನೆ.
.
ಡುಂಡಿಗೆ ಹೋದ ವರ್ಷ ಆಗಸ್ಟ್ ತಿಂಗಳಿಗೇ ಅರವತ್ತು ತುಂಬಿತ್ತು. ಇದೀಗ ಬೆಂಗಳೂರಿನ ತನ್ನ ಸ್ವಂತ ಮನೆಯಲ್ಲಿ ತನ್ನ ಸಹಧರ್ಮಿಣಿ ಭಾರತಿ ಅವರೊಂದಿಗೆ ನೆಮ್ಮದಿಯ ವಿಶ್ರಾಂತ ಜೀವನ ನಡೆಸುತ್ತಿ¨ªಾನೆ. ಹಾಗೆಂದು ತನ್ನ ಸಾಹಿತ್ಯಕೃಷಿಯಿಂದ ನಿವೃತ್ತನಾಗದೆ ಈಗಲೂ ಎಡೆಬಿಡದೆ ತನ್ನ ಕಾವ್ಯದ ಫಸಲನ್ನು ತನ್ನ ಅಭಿಮಾನಿ ರಸಿಕರಿಗೆ ನೀಡುತ್ತಲೇ ಇ¨ªಾನೆ.
ಡುಂಡಿಗೆ ಅವನ ಅಭಿಮಾನಿ ಗೆಳೆಯರಾದ ನಾವೆಲ್ಲ ಸೇರಿ ಇಂದು ಸಂಜೆ ಬೆಂಗಳೂರಿನ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಒಂದು ಅರ್ಥಪೂರ್ಣ ಅಭಿನಂದನೆಯ ಸಮಾರಂಭವನ್ನು ಹಮ್ಮಿಕೊಂಡಿದ್ದೇವೆ. ಚಂದ್ರಶೇಖರ ಕಂಬಾರ, ಎಚ್.ಎಸ್. ವೆಂಕಟೇಶಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಮುಂತಾದವರು ಅದರಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಆಯೋಜನೆಯನ್ನು ಉಪಾಸನಾ ಟ್ರಸ್ಟ್ ವಹಿಸಿಕೊಂಡಿದೆ. ಡುಂಡಿಯ ಅಭಿಮಾನಿಗಳೆಲ್ಲ ಧಂಡಿಯಾಗಿ ಬನ್ನಿ, ನಮ್ಮ ಪ್ರೀತಿಯ ಹನಿಗವನ ಸಾಮ್ರಾಜ್ಯದ ರಾಜನಿಗೆ ಜೈಕಾರದ ಹಾರ ಹಾಕೋಣ.
ಬಿ. ಆರ್. ಲಕ್ಷ್ಮಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.