ಬದುಕಿನ ಸ್ಥಾಯಿಯಲ್ಲಿ ಬಸ್ಸು ಎಂಬ ಸಂಚಾರಿ ಭಾವ


Team Udayavani, Nov 17, 2019, 6:00 AM IST

nn-9

ಕನ್ನಡದ ಪ್ರಸಿದ್ಧ ಕತೆಗಾರ ಕೆ. ಸದಾಶಿವರು “ನಲ್ಲಿಯಲ್ಲಿ ನೀರು ಬಂದಿತು’ ಎಂಬ ಕತೆ ಬರೆದಿದ್ದರು. “ಹಳ್ಳಿ ಮಾರ್ಗದಲ್ಲಿ ಬಸ್ಸು ಬಂದಿತು’ ಎಂಬ ಶೀರ್ಷಿಕೆಯಲ್ಲೇನಾದರೂ ಕತೆ ಬರೆದರೆ ಅದರಲ್ಲಿ ಹಳ್ಳಿ, ಮಾರ್ಗ, ಬಸ್ಸು ಎಲ್ಲವೂ ರೂಪಕಗಳಾಗಿ ಬಿಡುತ್ತವೆ. ಹಳ್ಳಿಯಂಥ ಹಳ್ಳಿಗೆ ಆಧುನಿಕತೆ ಪ್ರವೇಶಿಸುವುದೇ ಬಸ್ಸು ಎಂಬ ವಾಹನದ ಮೂಲಕ. ಅದು, ಪಟ್ಟಣ ಮತ್ತು ಹಳ್ಳಿಯ ಅಂತರವನ್ನು ಕಡಿಮೆ ಮಾಡುತ್ತದೆ. ಇವತ್ತೀಗ ಆಧುನಿಕೋತ್ತರ ಯುಗದಲ್ಲಿ ನಿಂತಿದ್ದೇವೆ. ಮಹಾನಗರಗಳಲ್ಲಿ ಓಡಾಡುವ ಬಸ್ಸುಗಳ ಹಾರನ್‌ ಸದ್ದಿಗೆ ಕಿವಿಮುಚ್ಚಿಕೊಳ್ಳುವ ಸ್ಥಿತಿ ಇದೆ. ಬಸ್ಸು ಎಂಬುದು ಒಂದು ಸ್ವಾರಸ್ಯಕರ ಸಂಗತಿಯೇ ಅಲ್ಲ. ಆದರೆ, ಮಲೆನಾಡಿನಲ್ಲಿ, ಹಳ್ಳಿಪ್ರದೇಶಗಳಲ್ಲಿ ಇವತ್ತಿಗೂ ಬಸ್ಸು ಎಂಬುದು ಅಪರೂಪಕ್ಕೆ ಬರುವ ನೆಂಟನಂತೆ ಕುತೂಹಲವನ್ನು ಹಾಗೇ ಉಳಿಸಿಕೊಂಡಿದೆ. ಬಸ್ಸು ಎಂಬುದು ಕೇವಲ ಯಂತ್ರವಲ್ಲ , ಎಷ್ಟೊಂದು ಸಂಭ್ರಮಗಳನ್ನು ಹೊತ್ತು ಸಾಗುವ ಜೀವಂತ ವಾಹನ. ಬದುಕೇ ಒಂದು ಬಸ್ಸಿನಂತೆ. ಎಲ್ಲಿ ಹತ್ತಿದ್ದೇವೆ, ಎಲ್ಲಿ ಇಳಿಯಲಿದ್ದೇವೋ ನಮಗೆ ಖಚಿತವಿಲ್ಲ. ಕೆಲವರ ಪಾಲಿಗೆ ಬಸ್ಸೇ ಬದುಕಿನಂತೆ. ಬಸ್ಸಿಲ್ಲದೆ ಅವರ ಬದುಕಿಲ್ಲ. ಬಸ್ಸು ಎಂಬ ವಿಸ್ಮಯದ ಕುರಿತ ಈ ಲೇಖನ ಹಳ್ಳಿ ಬದುಕಿನ ಸ್ಥೂಲ ಅವಲೋಕನವೂ ಹೌದು.

ಭಾರತದ ಸಾರಿಗೆ ಇತಿಹಾಸದಲ್ಲಿ ರೈಲಿನ ನಂತರ ಅತಿ ಹೆಚ್ಚು ಜನರಿಂದ ಬಳಸಲ್ಪಡುತ್ತಿರುವ ವಾಹಿನಿಯೆಂದರೆ ಅದು ಬಸ್ಸು. ಇದು, ಮನೆಮನೆಯ ಬಾಗಿಲಿನಲ್ಲೂ ಬೈಕು, ಕಾರು, ಓಮಿನಿಗಳು ನಿಂತಿರುವ ಇಂದಿನ ಕಾಲಕ್ಕೂ ಅನ್ವಯವಾಗುವ ಸತ್ಯ. ಟಾರನ್ನೇ ಕಾಣದ ಹಳ್ಳಿಗಾಡುಗಳ ಮೂಲೆಮೂಲೆಗೂ ತಲುಪಬಲ್ಲದ್ದಾಗಿರುವುದೇ ಬಸ್ಸಿನ ಈ ಯಶಸ್ಸಿಗೆ ಕಾರಣವೆನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಪಟ್ಟಣದಲ್ಲಿ ಅಂಡಲೆಯುವ, ಸುಮಾರು ಮೂವ್ವತ್ತು-ನಲವತ್ತು ವರ್ಷದ ಯಾವುದೇ ಯಾರನ್ನಾದರೂ ನಿಲ್ಲಿಸಿ ಕೇಳಿನೋಡಿ? ಯಾವ ರಾಜ್ಯದ ಯಾವ ಹಳ್ಳಿಯಿಂದ ಬಂದವರಾದರೂ ತಮ್ಮೂರಿನ ಬಸ್ಸುಗಳ ಬಗೆಗೆ ಚಂದದ ಕಥೆಯೊಂದು ಅವರ ನೆನಪಿನ ಮಡಕೆಗಳೊಳಗೆ ಇದ್ದೇ ಇರುತ್ತದೆ. ಕಾಡು, ಬೆಟ್ಟ, ನದಿಯಾಚೆಗೆಲ್ಲೋ ಇರುವ ದೂರದ ಪಟ್ಟಣದಿಂದ ಹಾವಿನಂತೆ ಹರಿದುಬಂದಿರುವ ರಸ್ತೆಯ ಮೇಲೆ ಕೇಕೆ ಹಾಕುತ್ತ, ಅಲ್ಲಾಡುತ್ತ, ತೇಕುತ್ತ, ಏದುಸಿರು ಬಿಡುತ್ತ, ಅಲ್ಲಲ್ಲಿ ನಿಲ್ಲುತ್ತ ಪ್ರಯಾಣಿಕರನ್ನು ಹೊತ್ತು ತರುವ ಬಸ್ಸೆಂದರೆ ಪ್ರತಿಯೊಬ್ಬರಿಗೂ ಅದೊಂದು ತೆರನಾದ ಪ್ರೀತಿ. ಹೆಚ್ಚೇನೂ ಬೇಡ, ಕಾಲದ ಗಡಿಯಾರವನ್ನು ಕೇವಲ ಇಪ್ಪತ್ತು-ಇಪ್ಪತ್ತೈದು ವರ್ಷಗಳಷ್ಟು ಹಿಂದಕ್ಕೆ ತಿರುಗಿಸಿದರೂ ಸಾಕು, ಯಾವ ರೀತಿಯಲ್ಲಿ ಬಸ್ಸೆನ್ನುವ ಬಸ್ಸು “ಪ್ರೀಂಪ್ರೀಂ’ ಎಂದು ಹಾರನ್‌ ಹೊಡೆಯುತ್ತ ಜನಸಾಮಾನ್ಯರ ಮನದಂಗಳಗಳನ್ನು ಹಾದು ಹೋಗುತ್ತಿತ್ತೆನ್ನುವ ಚಿತ್ರ ನಮ್ಮ ಕಣ್ಮುಂದೆಯೇ ಗೋಚರವಾಗತೊಡಗುತ್ತದೆ. ಅದರಲ್ಲೂ ಮತಾöವ ಪ್ರಭಾವಿ ಸಾರಿಗೆ ವಾಹಿನಿಯೂ ಇಲ್ಲದ ಹಳ್ಳಿಗಳ ಪಾಲಿಗಂತೂ ಬಸ್ಸೆನ್ನುವುದು ಹೃದಯದಿಂದ ದೇಹದ ಎಲ್ಲ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಸಾಕ್ಷಾತ್‌ ನರನಾಡಿಯೇ ಆಗಿತ್ತು. ಭರೊ ಎನ್ನುತ್ತ ಹತ್ತಾರು ಏರು ದಿಣ್ಣೆಗಳ ಹತ್ತಿಳಿದು, ರಸ್ತೆಯ ತುಂಬಾ ಬಾಯೆ¤ರೆದು ನಿಂತಿರುವ ಮಿನಿ ಪಾತಾಳದಂತಹ ಹೊಂಡಗಳಲ್ಲಿ ಇನ್ನೇನು ಬಿದ್ದೇ ಹೋಯಿತೇನೋ ಎಂಬಂತೆ ವಾಲಿ, ಕೊನೆಯ ಬಿಂದುವಿನಲ್ಲಿ ಸಾವರಿಸಿಕೊಂಡು, ಸಾûಾತ್‌ ಕಂಬಳದ ಅಂಗಳವೇನೋ ಎಂಬಂತಿರುವ ಕೆಸರಿನ ಜಾರಿಕೆಯ ಜೊತೆ ಸೆಣೆಸುತ್ತ¤, ಉಸಿರಾಡುವ ಗಾಳಿಗೇ ಜಾಗವಿಲ್ಲದಷ್ಟು ರಶಾÏಗಿದ್ದರೂ ಕೊನೆಯ ನಿಲ್ದಾಣದ ಕಟ್ಟಕಡೆಯ ಪ್ರಯಾಣಿಕನನ್ನೂ ಬಿಡದೆ ಅವನ ಸಾಮಾನು-ಸರಂಜಾಮುಗಳ ಸಮೇತ ಹತ್ತಿಸಿಕೊಂಡು ಗಮ್ಯ ತಲುಪಿಸಿದ ನಂತರವೇ ಬಸ್ಸಿಗೆ ನಿದ್ರೆ ಹತ್ತುವುದು. ಬೆಳಗ್ಗೆ ಕೋಳಿಯ ಕೂಗು ಕೇಳಿ ನೂರಾರು ಹಳ್ಳಿಗರು ಎಚ್ಚರಗೊಳ್ಳುವಾಗಲೇ ಊರಿನ ಬಯಲಿನ ಮೂಲೆಯಲ್ಲೆಲ್ಲೋ ನಿಂತೇ ನಿದ್ರಿಸುತ್ತಿದ್ದ ಅದು ಎಚ್ಚರಗೊಳ್ಳುತ್ತದೆ. ಕೊರೆಯುವ ಚಳಿಗೆ ಜನರೆಲ್ಲರೂ ಬಚ್ಚಲಿನ ಒಲೆಯೆದುರು ನಿಂತು ಬಿಸಿಯಾಗುವಾಗ ಬಸ್ಸು ನಿಂತಲ್ಲೇ ಚಾಲೂ ಆಗಿ ಗುರ್‌ ಗುರ್‌ ಎನ್ನುತ್ತ ಥಂಡಿ ಹಿಡಿದ ತನ್ನ ಇಂಜಿನ್‌ಗಳನ್ನು ಬೆಚ್ಚಗಾಗಿಸಿಕೊಳ್ಳುತ್ತದೆ. ಊರ ಹೊರಗಿನ ಬಾವಿಯ ನೀರಿನಲ್ಲಿ ಸ್ನಾನ ಮಾಡಿ ಬರುವ ಡ್ರೈವರ್‌ ಹಾಗೂ ಕಂಡಕ್ಟರ್‌ಗಳು ಗಾಜಿನ ಎದುರುಗಡೆ ತಗುಲಿಸಿರುವ ದೇವರ ಫೋಟೋಗೆ ಊದುಬತ್ತಿ ಹಚ್ಚಿ ಕೈ ಮುಗಿದರೆಂದರೆ ಮುಗಿಯಿತು, ಬಸ್ಸಿನ ಪ್ರಯಾಣ ಶುರು! ಬ್ಯಾಗು ತಗುಲಿಸಿಕೊಂಡು ನಿಂತಿರುವ ಕಾಲೇಜು ಕುಮಾರ-ಕುಮಾರಿಯರು, ಹೇಳದೇ ಕೇಳದೇ ಕೆಟ್ಟು ಕುಳಿತಿರುವ ತೋಟದ ಮೋಟಾರನ್ನು ರಿಪೇರಿಗೆ ಒಯ್ಯುತ್ತಿರುವ ಬಡ ರೈತ, ಅಡಿಕೆ ಮಂಡಿ ಸಾವುಕಾರರ ಬಳಿ ಹತ್ತು ಸಾವಿರ ಹೆಚ್ಚಿಗೆ ಸಾಲ ಕೇಳಲೆಂದು ಹೊರಟಿರುವ ಹೆಗ್ಡೆàರು, ಎರಡು ದಿನದಿಂದ ಬಿಡದೆ ವಾಂತಿ ಮಾಡಿಕೊಳ್ಳುತ್ತಿರುವ ಮಗುವನ್ನು ನಗರದ ದೊಡ್ಡ ಡಾಕ್ಟರಿಗೆ ತೋರಿಸಲೆಂದು ಒಯ್ಯುತ್ತಿರುವ ಆತಂಕದ ತಾಯಿ, ಜೇಬಿನಲ್ಲಿ ತನ್ನ ಅಂಗಡಿಗೆ ಬೇಕಾದ ಸಾಮಾನುಗಳ ಪಟ್ಟಿಯನ್ನೂ, ಕಂಕುಳಲ್ಲಿ ಖಾಲಿ ಚೀಲವನ್ನೂ ಅವುಚಿಕೊಂಡಿರುವ, ಆಗಾಗ ಒಳಜೇಬಿನಲ್ಲಿನ ಹಣವನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಿರುವ ಗೂಡಂಗಡಿಯ ಬಾಬಣ್ಣ, ಸೆಂಟು, ಪೌಡರು ಬಳಿದುಕೊಂಡು ಘಮಘಮಿಸುತ್ತ ಪಟ್ಟಣದ ರಸ್ತೆರಸ್ತೆಯನ್ನೂ ಸರ್ವೇ ಮಾಡಲಿಕ್ಕೆ ತಯಾರಾಗಿ ಬಂದಿರುವ ಪಡ್ಡೆ ಹುಡುಗರು, ಎದುರಾದವರೆಲ್ಲರಿಂದ ನಮಸ್ಕಾರ ಹೇಳಿಸಿಕೊಳ್ಳುತ್ತ ಪಕ್ಕದೂರ ಶಾಲೆಗೆ ಹೊರಟು ಕಾಯುತ್ತಿರುವ ಮೇಷ್ಟರು, ಈ ಸಲದ ಚಳಿ, ಗಾಳಿ, ಮಳೆ, ಬೆಳೆಗಳ ಬಗ್ಗೆ ಘನಗಂಭೀರವಾದ ಚರ್ಚೆ ನಡೆಸುತ್ತ ನಿಂತಿರುವ ಹಿರಿಯದ್ವಯರು, ಅಜ್ಜನ ಮನೆಗೆ ಹೋಗುವ ಸಂಭ್ರಮದಲ್ಲಿ ತೇಲುತ್ತಿರುವ ದೊಗಲೆ ಚಡ್ಡಿಯ ಪೋರ ಮತ್ತು ಜರತಾರಿ ಲಂಗದ ಪೋರಿ ಹಾಗೂ ಅವರಿಬ್ಬರನ್ನೂ ನಿಭಾಯಿಸುತ್ತ ತಾನೂ ಒಳಗೊಳಗೇ ತವರಿಗೆ ಹೋಗುವ ಖುಷಿಯನ್ನು ಅನುಭವಿಸುತ್ತಿರುವ ಅಮ್ಮ… ಹೀಗೆ ಜಗದ, ಜನಜೀವನದ ವಿವಿಧ ಮಜಲುಗಳು ಬಸ್ಸಿನ ದಾರಿಯಲ್ಲಿ ಕಾದುನಿಲ್ಲುತ್ತವೆ.

ಊರಿನಿಂದ ಮರಳುವ ಬಸ್ಸುಗಳು
ಊರಿಂದ ಹೊರಡುವ ಬಸ್ಸುಗಳದೊಂದು ಚಿತ್ರವಾದರೆ, ಊರಿಗೆ ಮರಳುವ ಬಸ್ಸುಗಳದು ಇನ್ನೊಂದು ತೆರನಾದ ಸಂಭ್ರಮ. ಅವುಗಳಿಗಾಗಿ ಕಾಯುವ ಜೀವಗಳು ಹಲವು. ಇಳಿಸಂಜೆಯ ತಂಪಿನಲ್ಲಿ ಪೋರನೊಬ್ಬ ಬಣ್ಣದ ಕಾರು ತರುತ್ತೇನೆಂದು ಮಾತು ಕೊಟ್ಟು ಪೇಟೆಗೆ ಹೋಗಿರುವ ಅಪ್ಪನ ಹಾದಿ ಕಾಯುತ್ತಿದ್ದರೆ, ಅವನ ತಾಯಿ ಅವರು ತರಲಿರುವ ಹೊಸ ಅಲ್ಯೂಮಿನಿಯಂ ಪಾತ್ರೆಗೆ ಹಾಕಲು ಮಜ್ಜಿಗೆ-ಹೆಪ್ಪನ್ನು ತಯಾರಿಟ್ಟುಕೊಂಡು ಕೂತಿದ್ದಾಳೆ. ರಿಪೇರಿಯಾಗಿ ಬರಲಿರುವ ನೀರುಣಿಸುವ ಮೋಟಾರಿಗಾಗಿ ಬಾಯಾರಿದ ತೋಟ-ಗದ್ದೆಗಳು ಕಾದಿವೆ. ಹೊಸದಾಗಿ ಮದುವೆಯಾಗಿರುವ ಹುಡುಗಿ ಪಟ್ಟಣಕ್ಕೆ ಕೆಲಸಕ್ಕೆ ಹೋಗಿರುವ ಪ್ರಿಯತಮ ತನಗಾಗಿ ತರಲಿರುವ ಮಲ್ಲಿಗೆ-ಮೈಸೂರು ಪಾಕುಗಳನ್ನೂ, ಅವುಗಳ ನಡುವಿನಿಂದ ಹಾದುಬಂದು ತನ್ನನ್ನು ತಬ್ಬಲಿರುವ ಅವನ‌ನ್ನೂ ಕಾದಿದ್ದಾಳೆ. ಈ ಎಲ್ಲ ಸಂಭ್ರಮಗಳನ್ನೂ ಹೊತ್ತು ತರುವುದು ಬಸ್ಸೇ ಎಂದು ಬೇರೆ ಹೇಳಬೇಕಿಲ್ಲವಲ್ಲಾ?

ಹಬ್ಬ ಹಾಗೂ ರಜಾದಿನಗಳು ಬಂತೆಂದರೆ ಬಸ್ಸೆನ್ನುವುದು ಅಕ್ಷರಶಃ ಸಂಭ್ರಮದ ಸಾಗಣೆಕಾರನಾಗುತ್ತದೆ. ಅದೆಲ್ಲೋ ದೂರದ ಊರಿನಿಂದ ಬೆಳ್ಳಂಬೆಳಗ್ಗೆ ಬಸ್ಸು ಹತ್ತಿ ಬರಲಿರುವ ಅಜ್ಜ, ಮಾವ, ಚಿಕ್ಕಮ್ಮ, ಅತ್ತೆ, ಅವರ ಮಕ್ಕಳು ಮುಂತಾದ ಬಂಧುಬಾಂಧವರನ್ನು ಹೊತ್ತು ತರುವ ತೇರಾಗುತ್ತದೆ. ಮನೆಯಲ್ಲಿನ ಚಿಕ್ಕ ಪೋರ ಬೆಳಗ್ಗೆ ಏಳುತ್ತಿದ್ದಂತೆಯೇ ಬರಲಿರುವ ಅಜ್ಜನ ಜಪ ಆರಂಭಿಸುತ್ತಾನೆ. ಬರುವವರಿಗೆ ನಿಲ್ದಾಣದಿಂದ ಮನೆಗೆ ಬರುವ ದಾರಿ ಗೊತ್ತಿರುತ್ತದಾದರೂ ಅವರನ್ನು ಸ್ವಾಗತಿಸಲಿಕ್ಕೆ ನೇರ ನಿಲ್ದಾಣಕ್ಕೇ ಓಡುತ್ತಾನೆ ಅಥವಾ “ಅಜ್ಜ ಎಷ್ಟೊತ್ತಿಗೆ ಬರ್ತಾರೆ ಹೇಳೇ’ ಎಂದು ಮನೆಯ ತುಂಬಾ ತರಲೆ, ರಗಳೆ ಮಾಡಿಕೊಂಡು ಹಿಂಬಾಲಿಸುವ ಅವನನ್ನು ಕೆಲನಿಮಿಷಗಳ ಮಟ್ಟಿಗಾದರೂ ಸಾಗಹಾಕಲಿಕ್ಕೆಂದು ಅಮ್ಮ, “ಗಾಯಿತ್ರಿ ಬಸ್ಸಿಗೆ ಅಜ್ಜ ಬರ್ತಾರೆ. ಕರ್ಕೊಂಡಾº ಹೋಗು’ ಎಂದು ಕಳಿಸಿಬಿಡುತ್ತಾಳೆ. ಜಾರುವ ಚಡ್ಡಿಯನ್ನು ಹಿಡಿದುಕೊಂಡು, ಬರಲಿರುವ ಅಜ್ಜನ ಸ್ವಾಗತಕ್ಕಾಗಿ ನಿಲ್ದಾಣಕ್ಕೆ ಓಡಿಬಂದು ಬಸ್ಸು ಬರಲಿರುವ ದಾರಿಯನ್ನೇ ದಿಟ್ಟಿಸುತ್ತ ನಿಂತವನನ್ನು ಬಸ್ಸು ನಿಮಿಷಗಳ ಕಾಲ ಕಾಯಿಸುತ್ತದೆ. ಕಾದಷ್ಟೂ ಅವನ ಕಾತರ, ಸಂಭ್ರಮಗಳು ಹೆಚ್ಚುತ್ತವೆಂಬುದು ಅದಕ್ಕೂ ಗೊತ್ತು. ಹೀಗೆ ಕಾದು ಕಾದು ಪೆಚ್ಚುಮೋರೆ ಹಾಕಿಕೊಂಡು ಇನ್ನೇನು ಮನೆಯ ದಾರಿ ಹಿಡಿಯಬೇಕು, ಅಷ್ಟರಲ್ಲಿ, ಅದೋ ಅಲ್ಲಿ, ರಸ್ತೆಯ ದೂರದ ತಿರುವಿನ ಮರೆಯಿಂದ “ಪೀಂಪೀಂ’ ಎನ್ನುವ ಸದ್ದೊದು ಕೇಳಿಬರುತ್ತಿದೆ. ನೋಡ ನೋಡುತ್ತಿದ್ದಂತೆಯೇ ಚಿಕ್ಕ ಚುಕ್ಕೆಯೊಂದು ಕದಲುತ್ತ ಇತ್ತಲೇ ಬರತೊಡಗುತ್ತದೆ. ಬರಬರುತ್ತ ಆ ಚುಕ್ಕೆ ಚೌಕವಾಗಿ, ಆಯತವಾಗಿ, ದೊಡ್ಡ ಡಬ್ಬಿಯಾಗಿ ಕೊನೆಗೆ ವಾಲಾಡುತ್ತಾ ಬರುತ್ತಿರುವ ಬಸ್ಸಾಗಿ ಗೋಚರವಾಗತೊಡಗುತ್ತದೆ. ಈಗಾಗಲೇ ಪೋರನ ಖುಷಿ ದುಪ್ಪಟ್ಟಾಗಿದೆ. ಅಜ್ಜನೆನ್ನುವ ಅಕ್ಕರೆಯ ಜೀವವನ್ನು ಹೊತ್ತು ಕುಲುಕುತ್ತ ಬಂದು ನಿಂತ ಬಸ್ಸಿನ ಬಾಗಿಲಿನತ್ತ ಅವನು ಓಡುತ್ತಾನೆ. ಮಗಳಿಗೆ ಇಷ್ಟವಾದ ಕಾಟುಮಾವಿನ ಗೊಜ್ಜು, ಅಳಿಯನಿಗೊಂದು ಶರ್ಟು ಪೀಸು, ಮೊಮ್ಮಗನಿಗೆ ಪ್ಯಾಕೇಟಿನ ತುಂಬಾ ಮಹಾಲ್ಯಾಕ್ಟೋ ಚಾಕಲೇಟು… ಈ ದಿವ್ಯ ಉಡುಗೊರೆಗಳನ್ನು ಜೋಪಾನವಾಗಿಟ್ಟುಕೊಂಡಿರುವ ತಮ್ಮ ಕೈಚೀಲದ ಸಮೇತ ಇಳಿದ ಅಜ್ಜ ಹಾಗೂ ಅವರ ಕೈಹಿಡಿದು ಕುಣಿಕುಣಿಯುತ್ತ ನಡೆಯುತ್ತಿರುವ ಮೊಮ್ಮಗ… ಇವರಿಬ್ಬರೂ ಸಾಗಿಹೋಗುವ ಸೊಬಗನ್ನು ಕಣ್ತುಂಬ ತುಂಬಿಕೊಂಡ ಬಸ್ಸು ಖುಷಿಯಲ್ಲಿ ಕೇಕೆ ಹಾಕಿದಂತೆ ಹಾರನ್‌ ಹೊಡೆದು ಮುಂದಿನ ನಿಲ್ದಾಣದ ಮತ್ತೂಬ್ಬ ಮೊಮ್ಮಗನತ್ತ ಮುನ್ನಡೆಯುತ್ತದೆ.

ಬಸ್ಸುಗಳ ಹೆಸರುಗಳು
ಬಸ್ಸು ಅದೆಷ್ಟೋ ಹಳ್ಳಿಗಳ ಮುದ್ದಿನ ಮಗ ಅಥವಾ ಮಗಳು. ಮಂದಿ ತಮ್ಮ ಮಕ್ಕಳಿಗಿಟ್ಟಷ್ಟೇ ಚಂದದ ಹೆಸರುಗಳನ್ನು ಬಸ್ಸಿಗೂ ಇಡುತ್ತಾರೆ. ಜಯರಾಮ…, ಶ್ರೀಕಂಠ, ನೀಲಕಂಠ, ಮಲ್ಲಿಕಾರ್ಜುನ, ಗಾಯತ್ರಿ, ಕೊಡಚಾದ್ರಿ, ಹನುಮಾನ್‌, ಗಜಾನನ, ರೋಸಿ… ಅದೇ ಹೆಸರಿನಿಂದ ಬಸ್ಸು ಊರಿನ ಜನರ ಮನೆಯ, ಮನದ ಅವಿಭಾಜ್ಯ ಅಂಗವಾಗುತ್ತದೆ. ಒಂದು ದಿನ ಬಸ್ಸು ಬಾರದಿದ್ದರೆ ಆ ದಿನವಿಡೀ ಊರು ಏನನ್ನೋ ಕಳೆದುಕೊಂಡಂತೆ ಕೊರಗುತ್ತದೆ. ಸೀನಣ್ಣನ ಕಟ್ಟಿಂಗ್‌ ಶಾಪಿನ ಮರದ ಬೆಂಚಿನ ಮೇಲಿರುತ್ತಿದ್ದ ತಾಜಾ ದಿನಪತ್ರಿಕೆ ಇಂದು ಕಾಣೆಯಾಗುತ್ತದೆ. ಪಕ್ಕದೂರ ಹೈಸ್ಕೂಲಿಗೆ ಹೋಗುವ ಮಕ್ಕಳೆಲ್ಲ ನಡೆದೇ ಹೊರಡುತ್ತಾರೆ. ಹೋಗುತ್ತ ಹೋಗುತ್ತ ಬಾರದ ಬಸ್ಸಿನ ದಾರಿಯನ್ನೇ ತಿರುತಿರುಗಿ ನೋಡುತ್ತಾರೆ. ಜನರು ನಿಲ್ದಾಣದೆದುರಿನ ರಸ್ತೆಯಲ್ಲಿ ನಿಂತು ಹಣೆಯೆದುರು ಕೈಯ ಚಪ್ಪರಕಟ್ಟಿ “ಬಸ್ಸು ಬಂತಾ?’ ಎಂದು ಇಣುಕುತ್ತಾರೆ. ಹುಲ್ಲೀಸರದ ಹತ್ತಿರ ಪಂಚರ್‌ ಆಯ್ತಂತೆ, ಹೊಳೆಮಕ್ಕಿ ಏರಲ್ಲಿ ಚರಂಡಿಗೆ ಹಾರಿತಂತೆ, ಕಂಪದಸರದ ಕೆಸರಲ್ಲಿ ಹೂತುಕೂತಿದೆಯಂತೆ, ಕೈಮರದ ತಿರ್ಕಸ್ಸಲ್ಲಿ ಮರಕ್ಕೆ ಢಿಕ್ಕಿ ಹೊಡೆಯಿತಂತೆ, ಗೂಳಿಮಕ್ಕಿಯಲ್ಲಿ ಯಾರದೋ ದನ ಅಡ್ಡ ಬಂತಂತೆ… ಹೀಗೇ ಅದು ಯಾಕೆ ಬಂದಿಲ್ಲ ಎನ್ನುವುದರ ಬಗ್ಗೆ ಇನ್ನೂ ಮುಂತಾದ ಗುಸುಗುಸು ಗಾಸಿಪ್‌ಗ್ಳು ಹರಿದಾಡುತ್ತವೆ.

ತಡವಾಗಿ ಬರುವ ಬಸ್ಸುಗಳು
ಇನ್ನು ತಡವಾಗಿ ಬರುವುದು ಬಸ್ಸಿನ ಹುಟ್ಟುಗುಣಗಳಲ್ಲೊಂದು. ಎಷ್ಟೇ ಸರಿಯಾದ ಸಮಯಕ್ಕೆ ಮೊದಲ ನಿಲ್ದಾಣದಿಂದ ಹೊರಟರೂ ಅದು ಕೊನೆಯ ನಿಲ್ದಾಣ ತಲುಪುವುದು ಅರ್ಧಗಂಟೆ ತಡವಾಗಿಯೇ. ಪಾಪ, ಇದರಲ್ಲಿ ಅದರ ತಪ್ಪೇನೂ ಇಲ್ಲ. ಮಾರಿಗೆ ಒಂದರಂತಿರುವ ಪ್ರತಿಯೊಂದು ನಿಲ್ದಾಣದಲ್ಲೂ ನಿಂತು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತ ನೋಡ ನೋಡುತ್ತಲೇ ನವಮಾಸದ ತುಂಬು ಬಸುರಿಯಂತಾಗುವ ಅದು ನಿಲ್ದಾಣವೇ ಅಲ್ಲದ ಜಾಗದಲ್ಲಿ ಧುತ್ತನೆ ಪ್ರತ್ಯಕ್ಷವಾಗಿ ಕೈಚಾಚುವವರನ್ನೂ ತನ್ನೊಳಗೆ ತುಂಬಿಕೊಳ್ಳುತ್ತದೆ. ಸರಿ, ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಅಗೋ ಅಲ್ಲಿ, ದೂರದ ಕಾಡಿನ ದಾರಿಯಿಂದ ಇಬ್ಬರು ಗಂಡಸರು ಈಗಷ್ಟೇ ಓಲಂಪಿಕ್ಸ್‌ ಮುಗಿಸಿ ಬಂದ ನುರಿತ ಓಟಗಾರರಂತೆ ಓಡಿ ಬರುತ್ತಿರುವುದು ಕಾಣುತ್ತದೆ.

ಒಬ್ಬರನ್ನೊಬ್ಬರು ಮೀರಿಸುತ್ತ ಬಿರುಗಾಳಿಯಂತೆ ಧಾವಿಸಿಬರುತ್ತಿರುವ ಅವರನ್ನು ನೋಡಿ ಎರಡು ಸೀಟ್‌ ಹೆಚ್ಚಾಯಿತೆಂಬ ಖುಷಿಯಲ್ಲಿ ಕಂಡಕ್ಟರ್‌ ಸಹಾ ಸೀಟಿ ಊದಿ ಡ್ರೈವರನಿಗೆ ಕಾಯುವಂತೆ ಸೂಚನೆ ನೀಡುತ್ತಾನೆ. ಬಿಟ್ಟ ಬಾಣದಂತೆ ಓಡಿಬಂದು ಬಸ್ಸನ್ನು ಹಿಡಿದುಕೊಂಡ ಅವರು ಚಂಡಮಾರುತದಂತೆ ಏದುಸಿರು ಬಿಡುತ್ತ ಬಸ್ಸು ಹತ್ತುವವರು ತಾವಲ್ಲವೆಂದೂ, ವಯಸ್ಸಾದವರೊಬ್ಬರು ಹಿಂದೆ ಬರುತ್ತಿ¨ªಾರೆಂದೂ, ಅವರಿಗಾಗಿ ಕಾಯಬೇಕೆಂದೂ ಕೇಳಿಕೊಳ್ಳುತ್ತಾರೆ. ತಿರುಗಿ ನೋಡಿದರೆ ದೂರದಲ್ಲಿ ವಯೋವೃದ್ಧರೊಬ್ಬರು ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಬರುತ್ತಿರುವುದು ಕಾಣಿಸುತ್ತದೆ.

ಬಸ್ಸುಗಳಲ್ಲಿ ಮಕ್ಕಳ ಆದರ್ಶದ ವ್ಯಕ್ತಿಗಳು
“ದೊಡ್ಡವನಾದ ಮೇಲೆ ಏನಾಗ್ತಿಯ ಪುಟ್ಟೂ?’
“ಗುದುಚತ್ತೀ ಬಚ್ಚಿನ ಡ್ರೈವರ್‌ ಆತೀನಿ!’
ಹೀಗಂತ ಹೇಳಿ ಎದುರಿರುವವರನ್ನೆಲ್ಲ ಗೊಳ್ಳೆಂಬ ನಗೆಯಲೆಯಲ್ಲಿ ತೇಲಿಸುವ ಚಿಲ್ಟಾರಿಗಳ ಸಂಖ್ಯೆ ಅದೆಷ್ಟೋ? ನಿಜ… ಬಸ್ಸೊಂದರ ಡ್ರೈವರ್‌, ಕಂಡಕ್ಟರ್‌ ಅಥವಾ ಕ್ಲೀನರ್‌ಗಳಿಗೆ ವಿಶಿಷ್ಟ ಗೌರವವೊಂದಿದೆ. ಎಲ್ಲರಿಗಿಂತ ಹೆಚ್ಚಾಗಿ ಹಳ್ಳಿಯ ಮಕ್ಕಳ ದೃಷ್ಟಿಯಲ್ಲಿ ಅವರು ಅಘೋಷಿತ ಹೀರೋಗಳು. ಒಂದು ಕಾಲಲ್ಲಿ ಬ್ರೇಕು ಒತ್ತುತ್ತ, ಇನ್ನೊಂದರಲ್ಲಿ ಆಕ್ಸಿಲೇಟರ್‌ ತುಳಿಯುತ್ತ ಸರಸರನೆ ಸ್ಟೇರಿಂಗನ್ನು ಆ ಕಡೆ, ಈ ಕಡೆ ತಿರುಗಿಸುವ, ಅಷ್ಟು ದೊಡ್ಡ ಬಸ್ಸನ್ನು ಎಷ್ಟು ಸರಾಗವಾಗಿ ಹೊರಳಿಸಿ, ಚಲಾಯಿಸುವ ಡ್ರೈವರ್‌, “ಯಾರ್ರೀ, ಅಲ್ಲೀ ಟಿಕೇಟ್‌ ಟಿಕೇಟ…… ಹೋಗ್ರೀ.. ಒಳಗಡೆ ನಡೀರ್ರಿ…’ ಎಂದು ಆಜ್ಞಾಪಿಸುತ್ತಾ ಬಣ್ಣದ ಪುಸ್ತಕದಿಂದ ಟಿಕೇಟು ಹರಿದುಕೊಡುವ ಕಂಡಕ್ಟರ್‌ ಹಾಗೂ ಓಡುವ ಬಸ್ಸಿನ ಬಾಗಿಲಿನಲ್ಲಿ ನಿಂತು, ಬೀಸಿಬರುವ ಗಾಳಿಗೆ ತನ್ನ ಕೂದಲ ಹಾರಿಬಿಟ್ಟುಕೊಂಡು ಆರಗ, ನೊಣಬೂರ್‌, ಅರಳಸುರಳಿ, ಸೊನಲೆ, ಬಿಳ್ಳೋಡಿ, ಜಯನಗರ, ಹೊಸನಗರಾ ಎಂದು ವಿಶಿಷ್ಟ ರಾಗವೊಂದರಲ್ಲಿ ಕೂಗುವ ಕ್ಲೀನರ್‌… ಈ ಮೂವರನ್ನು ಅನುಕರಣೆ ಮಾಡದ ಹೊರತು ಊರಿನ ಯಾವೊಬ್ಬ ಪೋರನ ಬಾಲ್ಯವೂ ಸಂಪನ್ನವಾಗುವುದೇ ಇಲ್ಲ! ಅದರಲ್ಲೂ ಕಂಡಕ್ಟರ್‌ನ ಕೈಯಲ್ಲಿರುವ ಟಿಕೇಟು ಪುಸ್ತಕ ಹಾಗೂ ಅದರ ಪುಟಗಳ ನಡುವೆ ಅವಿತಿರುವ ಕಾರ್ಬನ್‌ ಚೀಟಿಗಳಂತೂ ಶಾಲಾ ಮಕ್ಕಳ ದೃಷ್ಟಿಯಲ್ಲಿ ಜಗತ್ತಿನ ಅದ್ಭುತಗಳ ಪಟ್ಟಿಗೆ ಸೇರುವಂಥ ವಸ್ತುಗಳು. ನಿರ್ವಾಹಕ ಎಸೆದು ಹೋಗುವ ಖಾಲಿಯಾದ ಟಿಕೆಟ್‌ ಪುಸ್ತಕ ಹಾಗೂ ಮಂದವಾದ ಕಾರ್ಬನ್‌ ಹಾಳೆಗಳನ್ನು ಎತ್ತಿಕೊಳ್ಳುವುದಕ್ಕೆ ಹುಡುಗರ ನಡುವೆ ನಡೆಯುವಷ್ಟು ಪೈಪೋಟಿ ಪ್ರಧಾನ ಮಂತ್ರಿಗಳ ಕುರ್ಚಿಗಾಗಿಯೂ ನಡೆಯಲಿಕ್ಕಿಲ್ಲ!

ಹೃದಯವಂತ ಬಸ್ಸುಗಳು
ಮೇಲು-ಕೀಳುಗಳನ್ನೂ, ಪುರುಷ-ಸ್ತ್ರೀ ಎಂಬ ಭೇದ-ಭಾವಗಳನ್ನೂ ಮೌನವಾಗಿಯೇ ಮೀರುವ ಬಸ್ಸು ಕೆಳಗಿನ ಕೇರಿಯ ನಾಗಿಯನ್ನೂ ಹಾಗೂ ಮೇಲಿನಮಕ್ಕಿಯ ಶಾಂತಕ್ಕನನ್ನೂ ಒಟ್ಟಿಗೇ ಕೂರಿಸಿಕೊಂಡು ಸಂತೆಗೆ ಕರೆದೊಯ್ಯುತ್ತದೆ. ಮಹಬೂಬ ಸಾಬರ ಟೊಪ್ಪಿಯೂ, ರಾಮಾಶಾಸ್ತ್ರಿಗಳ ಶಲ್ಯವೂ ಅಡ್ಡಸೀಟಿನಲ್ಲಿ ಒಟ್ಟಿಗೆ ಕುಳಿತು ಡ್ರೈವರ್‌ ಡಿಸೋಜನ ಜೊತೆ ಪಟ್ಟಾಂಗ ಹೊಡೆಯುವ ಸಾಮರಸ್ಯದ ದೃಶ್ಯ ಕಂಡುಬರುವುದು ಬಸ್ಸಿನಲ್ಲೇ. ಅಷ್ಟೇ ಅಲ್ಲ, ಒಂದು ವಾರದಿಂದ ಅದೇಕೋ ಸರಿಯಾಗಿ ಮೇವು ತಿನ್ನದೆ ಕುಗುರುತ್ತಿರುವ ಊರಿನ ಕುರಿ, ಕೋಳಿ, ಟಗರುಗಳನ್ನೆಲ್ಲ ಟಿಕೆಟ್‌ ರಹಿತವಾಗಿ ಹೊತ್ತೂಯ್ದು ಪಶುಪಾಲನಾ ಆಸ್ಪತ್ರೆಗೆ ತಲುಪಿಸಿ ಪ್ರಾಣಿದಯೆ ಮೆರೆಯುವುದೂ ಸಹಾ ಬಸ್ಸೇ. ಇಂತಿಪ್ಪ ಅದು ಒಂದರ್ಥದಲ್ಲಿ ಭೂಮಿಯಂತೆಯೇ ಸಹನಾಮಯಿ. ಕಡಲೆಕಾಯಿ ತಿಂದು ಸಿಪ್ಪೆ ಎಸೆದರೂ, ಎಲೆಡಕೆ ಉಗುಳಿ ತನ್ನ ಹೊರಮೈಯನ್ನು ಗಲೀಜು ಮಾಡಿದರೂ, ಸೀಟಿನ ಸ್ಪಂಜು ಕಿತ್ತು ಗಾಯಗೊಳಿಸಿದರೂ ಅದು ಕೋಪಿಸಿಕೊಳ್ಳುವುದಿಲ್ಲ. ತಾವೇ ಎಲೆಅಡಿಕೆ, ಪಾನ್‌ ಪರಾಗ್‌, ಗುಟ್ಕಾ ಅಗಿದು ಉಗುಳಿ ಅಂದಗೆಡಿಸಿದ ಬಸ್ಸನ್ನು ಹೊರಗಿನಿಂದ ನೋಡಿದ ಜನ “ಥೂ ಎಷ್ಟು ಗಲೀಜಾಗಿದೆ’ ಎಂದು ತಾವೇ ತೆಗಳಿ ಅವಮಾನಿಸಿದಾಗಲೂ ಅದು ಬೇಸರಗೊಳ್ಳುವುದಿಲ್ಲ. ಮಳೆಯ ಹನಿಗೋ, ಹೊಳೆಯ ನೀರಿಗೋ ತನ್ನನ್ನು ಒಡ್ಡಿಕೊಂಡು ಸ್ವತ್ಛವಾಗಿ ಮತ್ತದೇ ಪ್ರಯಾಣಿಕರ ಬಳಿಗೆ ಮರಳಿಬರುತ್ತದೆ.

ಹೀಗೆ ಸಮತೆ, ಸಹನೆ ಮೆರೆಯುವ ಬಸ್ಸಿನ ಹೃದಯ ಅಷ್ಟೇ ಗಾಢವಾಗಿ ಪ್ರೀತಿ-ಪ್ರೇಮಗಳಿಗೂ ಮಿಡಿಯುತ್ತದೆ. ಪ್ರತಿದಿನವೂ ಅದರ ಸೀಟುಗಳ ಬೆನ್ನಿನಲ್ಲಿ ನೂರಾರು ಪ್ರೀತಿಯ ಅಕ್ಷರಗಳು ಅಚ್ಚಾಗುತ್ತವೆ. ಹತಾಶ ಪ್ರೇಮಿಯೊಬ್ಬ ತಾನು ಮನದಲ್ಲೇ ಆರಾಧಿಸುತ್ತಿರುವ ಪ್ರೇಯಸಿಗೆ ಕೊನೆಗೂ ಹೇಳಲಾಗದ ಮಾತೊಂದನ್ನು ಬಸ್ಸಿನ ಸೀಟಿನ ಹಿಂಭಾಗದಲ್ಲಿ ಕೆತ್ತಿ ಹಗುರಾಗುತ್ತಿದ್ದರೆ ಅವನ ವೇದನೆಗಳನ್ನು ತನ್ನ ಹೃದಯಕ್ಕೆ ಬಸಿದುಕೊಳ್ಳುವ ಬಸ್ಸು ಹೃದಯತುಂಬಿ ಭಾರವಾಗುತ್ತದೆ. ಮುಂದೊಂದು ದಿನ ಅದೇ ಸೀಟಿನಲ್ಲಿ ಕುಳಿತ ಅವನ ಪ್ರೇಯಸಿ ಹುಡುಗಿ ಅದು ತನಗಾಗಿಯೇ ಬರೆದ ಸಾಲೆಂಬುದು ಗೊತ್ತಿಲ್ಲದೆಯೇ ಆ ಅಕ್ಷರಗಳ ಮೇಲೆ ಕೈಯಾಡಿಸಿ ಮುಗುಳ್ನಕ್ಕಾಗ ಬಸ್ಸಿನ ಗಾಜುಗಣ್ಣುಗಳ ಮೇಲೆ ಹನಿಗಳೆರಡು ಮೂಡಿ ಜಾರುತ್ತವೆ.

ವಿನಾಯಕ ಅರಳಸುರಳಿ

ಟಾಪ್ ನ್ಯೂಸ್

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

byndoor

Siddapura: ಪಾದಚಾರಿಗೆ ಪಿಕಪ್‌ ವಾಹನ ಢಿಕ್ಕಿ; ಗಂಭೀರ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

6

Bantwal: ತುಂಬೆ ಜಂಕ್ಷನ್‌; ಸರಣಿ ಅಪಘಾತ

Untitled-1

Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.