ಸಿಪ್ಪೆಯ ಹಾರ ನಾಲ್ಕು ಮೂಸಂಬಿ
Team Udayavani, May 19, 2019, 6:00 AM IST
ಇತ್ತೀಚೆಗೆ ಸೆಕೆಗೆ ಒಂದು ರಾತ್ರಿಯೂ ಸರಿಯಾಗಿ ನಿದ್ದೆ ಮಾಡಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಕಣ್ಣು ಕೂರುತ್ತಿತ್ತು. ಇದನ್ನು ತಪ್ಪಿಸಲು ಒಂದು ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ. ಅದೆಂದರೆ, ಮಧ್ಯಾಹ್ನ ಊಟ ಆದ ಮೇಲೆ ಸ್ವಲ್ಪ ನಿದ್ದೆ ಮಾಡುವುದು. ಅಂತೂ ಒಟ್ಟು ಆರು ಗಂಟೆ ನಿದ್ದೆ ಮಾಡಬೇಕಂತೆ. ಇಲ್ಲದಿದ್ದರೆ ಬ್ರೈನ್ ಹ್ಯಾಮರೇಜ್ ಆಗುತ್ತೆ ಅಂತ ನನ್ನ ಮಿತ್ರರೊಬ್ಬರು ತಿಳಿಸಿದ್ದಾರೆ.
ಹೀಗೆ ಸ್ವಲ್ಪ ಕಣ್ಣು ಕೂರಿದ ಸಮಯ. ಕಾಲಿಂಗ್ ಬೆಲ್ ಜೋರಾಗಿ ಶಬ್ದ ಮಾಡಿತು. ಯಾರದ್ದೂ ಕಿರಿಕಿರಿ ಇರಬಾರದು ಎಂದು ಮೊಬೈಲನ್ನು ಸೈಲೆಂಟ್ ಮೋಡಲ್ಲಿ ಇಟ್ಟಿದ್ದೆ. ಆದರೆ, ಮೊಬೈಲ್‌ನಲ್ಲಿ ತಪ್ಪಿದ ಕಿರಿಕಿರಿ ಕಾಲಿಂಗ್ ಬೆಲ್ ಮುಖಾಂತರ ಬಂತು. ಶ್ರೀಮತಿಗೆ ಹೇಳಿದೆ, “”ಹೋಗಿ ನೋಡೇ, ಯಾರೆಂದು”
ಅವಳೆಂದಳು, “”ನಿಮಗೆ ಹೋಗಿ ನೋಡಲು ಆಗುವುದಿಲ್ಲವೆ? ನನಗೆ ಕೆಲಸ ಮಾಡಿ ಕೈಕಾಲೇ ಬರುವುದಿಲ್ಲ. ಪಾದಗಳಿಗೆ ಬೇರೆ ನೋವು”.
ಆದರೂ ಕುಂಟುತ್ತ ಬಾಗಿಲು ತೆರೆದು, “”ರೀ… ಒಂದು ಹದಿನೈದು ಜನ ಬಂದಿದ್ದಾರೆ. ಚಂದಾ ವಸೂಲಿಗೆ ಅಂತ ಅನಿಸುತ್ತೆ” ಎಂದಳು.
“ಎಂಥ ಗ್ರಾಚಾರ ಬಂತಪ್ಪ! ಈ ಚಂದಾ ವಸೂಲಿ ಮುಗಿಯುವಂಥದ್ದಲ್ಲ. ದೇವಸ್ಥಾನ, ಮಂದಿರ, ಗುಡಿಗಳ ಜೀರ್ಣೋದ್ಧಾರ, ಶನಿಪೂಜೆ, ಸತ್ಯನಾರಾಯಣ ಪೂಜೆ…. ಹಾಗೆ, ಹೀಗೆ ಎಂದು ಎಲ್ಲರೂ ಯಾಕಾಗಿ ಬರ್ತಾರೋ!’ ಎಂದು ವಟಗುಟ್ಟುತ್ತ ನಿಧಾನಕ್ಕೆ ಬಾಗಿಲ ಬಳಿ ಬಂದೆ.
“”ನಮಸ್ಕಾರ ಸರ್… ನಾವು ನಿಮಗೆ ತೊಂದರೆ ಕೊಡ್ತಾ ಇದ್ದೇವೆ” ಎಂದ ಒಬ್ಬ ಬುದ್ಧಿವಂತ. ಹೌದು ಅಂತ ಅನಿಸಿತು. ಆದರೆ, ಹೇಳಲಿಲ್ಲ.
“”ಹಾಗೇನಿಲ್ಲ” ಎಂದೆ. “ಬನ್ನಿ’ ಅಂತ ಹೇಳುವ ಮೊದಲೇ ಹದಿನೈದು ಜನ ಒಳ ಪ್ರವೇಶಿಸಿ,ಅಲ್ಲಿ, ಇಲ್ಲಿ, ಡೈನಿಂಗ್ ಟೇಬಲ್ ಮೇಲೆ, ಟೀಪಾಯಿ ಮೇಲೆ ವಕ್ಕರಿಸಿದರು. ನಾನು, “”ದಯವಿಟ್ಟು ಟೀಪಾಯಿ ಮೇಲೆ ಕುಳಿತುಕೊಳ್ಳಬೇಡಿ, ಕಾಲು ಗಟ್ಟಿ ಇಲ್ಲ” ಎಂದೆ.
“”ಈಗ ಮನುಷ್ಯನ ಕಾಲು ಗಟ್ಟಿ ಇದ್ದರಲ್ಲವೆ, ಟೀಪಾಯಿ ಕಾಲು ಗಟ್ಟಿ ಇರುವುದು?” ಎಂದು ಇನ್ನೊಬ್ಬ ಟೋಂಟ್ ಕೊಟ್ಟ. 84 ವರ್ಷದ ನನ್ನ, 75 ವರ್ಷದ ನನ್ನ ಹೆಂಡತಿಯ ಕಾಲನ್ನು ನೋಡಿ ಟೋಂಟ್ ಕೊಟ್ಟದ್ದು ಅನಿಸಿತು. ಏನೂ ಹೇಳಲಿಲ್ಲ.
“”ನೀವು?” ಎಂದೆ.
“”ನಾವು ಸರ್… ಈ ಊರಿನಲ್ಲಿರೋ ಸಾಹಿತ್ಯ ಸಂಘಟನೆಯ ಪದಾಧಿಕಾರಿಗಳು. ನಿಮ್ಮನ್ನು ಸನ್ಮಾನ ಮಾಡಲಿಕ್ಕೆ ಬಂದಿದ್ದೇವೆ” ಎಂದರು.
“”ಅಲ್ಲಪ್ಪ, ಇದ್ದಕ್ಕಿದ್ದಂತೆ ನನ್ನನ್ನು ಸನ್ಮಾನ ಮಾಡೋ ಮನಸ್ಸು ಯಾಕೆ ಬಂತು? ನನಗೇನೂ ಪ್ರಶಸ್ತಿ ಸಿಕ್ಕಿಲ್ಲ. ವಯಸ್ಸು 60, 75ರ ಸಂಧಿಕಾಲವೇನಲ್ಲ. ವಿನಾಕಾರಣ ನನಗೆ ಸನ್ಮಾನ ಏಕೆ?” ಎಂದೆ.
“”ನಿಮಗೆ ಬೇಡ ಸರ್. ಆದರೆ ನಮಗೆ ಬೇಕು”ಎಂದ ಇನ್ನೊಬ್ಬ. ಸರಿ… ಸರಿ… ಒಂದು ಗ್ರೂಪ್ ಫೋಟೋ ತೆಗೆದು ಪೇಪರ್‌ನಲ್ಲಿ ದೊಡ್ಡದಾಗಿ ಫೋಟೋ ಸಹಿತ ವರದಿ ಪ್ರಕಟವಾದರೆ ಇವರು ದೊಡ್ಡ ಜನ ಆಗ್ತಾರಲ್ಲ! ಅಂತ ಅನಿಸಿತು. ಆದರೆ ಹೇಳಲಿಲ್ಲ. ನಾನು ಮೀನು ಹಿಡಿಯುವ ಅವರ ಗಾಳಕ್ಕೆ ಸಿಕ್ಕ ಎರೆಹುಳ ಆಗಿದ್ದೆ.
“”ನನಗೆ ನೋಡಿ ಈ ಪ್ರಶಸ್ತಿ, ಸನ್ಮಾನ ಎಲ್ಲ ಬೇಡ. ನನ್ನ ಪಾಡಿಗೆ ಇತೇìನೆ” ಎಂದೆ. “”ಹಾಗೇನಿಲ್ಲ ಸರ್…ತಂದಿದ್ದೇವಲ್ಲ…. ಹಾಕಿ ಹೋಗ್ತೀವೆ” ಎಂದ ಇನ್ನೊಬ್ಬ.
“”ನೀವು ಇಷ್ಟು ಜನ!” ಎಂದು ಕೇಳಿದೆ ನಾನು.
“”ಅದು ಸರ್… ಈ ಬಾರಿ ನಾವು ಏನೂ ಕಾರ್ಯಕ್ರಮ ಮಾಡಿಲ್ಲ. ಸಾಹಿತ್ಯ ಕಾರ್ಯಕ್ರಮಕ್ಕೆ ಜನಾನೇ ಬರೋಲ್ಲ ಸರ್.ಅದಕ್ಕೆ ನಾವೆಲ್ಲ ಸೇರಿ ಒಂದು ಉಪಾಯ ಮಾಡಿದೆವು. ನಿಮ್ಮಂಥ ಹಿರಿಯ ಸಾಹಿತಿಗೆ ಸನ್ಮಾನ ಮಾಡುವುದು ಎಂದು. ಅದಕ್ಕೂ ಜನ ಬರೋಲ್ಲ ಸರ್. ಅದಕ್ಕಾಗಿ ನಾವು ಇನ್ನೊಂದು ಉಪಾಯ ಮಾಡಿದೆವು ಸರ್”.
“”ಏನದು?” ಎಂದೆ.
“”ಏನಿಲ್ಲ ಸರ್… ನಿಮ್ಮ ಮನೆಯಲ್ಲಿ ಒಂದು ಕವಿಗೋಷ್ಠಿ ಏರ್ಪಡಿಸಿದ್ದೇವೆ. ಇವರೆಲ್ಲ ಕವಿಗಳು. ಅವರ ಒಂದೋ ಎರಡೋ ಕವನ ಓದ್ತಾರೆ. ಕವಿಗೋಷ್ಠಿ ಇರೋದ್ರಿಂದ ಇಷ್ಟು ಜನ ಬಂದಿದ್ದಾರೆ. ನಾವೆಲ್ಲ ನಿಮ್ಮ ಹಿಂದೆ ನಿಂತು ಫೋಟೋ ತೆಗೆಸಿ ಪತ್ರಿಕೆಯಲ್ಲಿ ಹಾಕಿಸ್ತೇವೆ ಸರ್. ನಿಮಗೂ ಪ್ರಚಾರ ಸಿಕ್ಕಿದಂತಾಗುತ್ತದೆ. ಅಲ್ವಾ ಸರ್?” ಎಂದು ಕೇಳಿದ ಮತ್ತೂಬ್ಬ.
“”ನನಗೆ ಇನ್ಯಾಕಪ್ಪ ಪ್ರಚಾರ?” ಎಂದೆ.
“”ನಿಮಗೆ ಅಲ್ಲದಿದ್ದರೂ ನಮಗೆ ಬೇಕು ಸರ್. ನಾವು ಎಂಥೆಂಥಾ ಕೆಲಸ ಮಾಡುತ್ತೇವೆ ಅಂತ ರಾಜ್ಯಕ್ಕೇ ಗೊತ್ತಾಗ್ಬೇಕು” ಎಂದ ಇನ್ನೊಬ್ಬ.
ನನಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಸುಮ್ಮನೆ ಹಾಯಾಗಿ ನಿದ್ದೆ ಮಾಡುತ್ತಿದ್ದ ನನ್ನನ್ನು ಎಬ್ಬಿಸಿದ್ದಕ್ಕೆ ನನಗೆ ಸಿಟ್ಟು ಬಂದಿತ್ತು. ಈಗ ಸನ್ಮಾನದ ಕಿರಿಕಿರಿ ಬೇರೆ. ಇವರಿಗೆ ಹೆಸರು ಬರಲು, ಪತ್ರಿಕೆಯಲ್ಲಿ ಫೋಟೋ ಬರಲು ನಾನು ಬಲಿಪಶು ಆಗಬೇಕೆ? ಎಂದು ಯೋಚಿಸುವಷ್ಟರಲ್ಲಿ, ಮತ್ತೂಬ್ಬ , “”ಹೀಗೆ ಬನ್ನಿ ಸಾರ್, ಇಲ್ಲಿ ಕುಳಿತುಕೊಳ್ಳಿ” ಎಂದು ನನ್ನ ಮನೆಯಲ್ಲೇ ನನಗೆ ಡೈರೆಕ್ಷನ್ ಕೊಟ್ಟ.ಹರಕೆಯ ಕುರಿಯ ಹಾಗೆ ಅಲ್ಲಿ ಕೂತೆ. ನನಗೆ ಒಂದು ಕೆಟ್ಟ ವಾಸನೆ ಬರೋ ಮರದ ಸಿಪ್ಪೆಯ ಹಾರ (ಅವರ ಮಾತಿನಲ್ಲಿ ಗಂಧದ ಹಾರ!)ಹಾಕಿದರು. ಇನ್ನೊಬ್ಬ ಒಂದು ಶಾಲನ್ನು ನನ್ನ ಕುತ್ತಿಗೆಯ ಸುತ್ತ ಸುತ್ತಿದ.ಅದರ ಕೊನೆಯಲ್ಲಿ ಸ್ವಲ್ಪ ಕಾಫಿ ಕಲೆ ಇರುವುದು ನನ್ನ ಎಕ್ಸ್ ರೇ ಕಣ್ಣಿಗೆ ಕಾಣಿಸಿತು. ಅಂದರೆ, ನನಗೆ ಹೊದಿಸಿದ್ದು ಸೆಕೆಂಡ್ ಹ್ಯಾಂಡ್ ಶಾಲು! ಇಂಥ ಸನ್ಮಾನ ನನಗೆ ಬೇಕಿತ್ತಾ? ಅವರಲ್ಲಿ ಕೇಳಿದರೆ “”ನಿಮಗೆ ಬೇಡ, ಆದರೆ ನಮಗೆ ಬೇಕು ಸರ್” ಅಂತ ಸ್ಟೀರಿಯೋ ಟೈಪ್ ಉತ್ತರ ಸಿಗುತ್ತದೆ ಎಂದು ಸುಮ್ಮನಾದೆ. ನಾಲ್ಕು ಮೂಸುಂಬಿಯನ್ನು ಒಂದು ಹಾಳೆ ತಟ್ಟೆಯಲ್ಲಿಟ್ಟು ನನ್ನ ಮಡಿಲಲ್ಲಿಟ್ಟರು. ಅದರ ಮೇಲೆ ಓಬೀರಾಯನ ಕಾಲದ ಒಂದು ಸರಸ್ವತಿ ಫೋಟೋ ಇಟ್ಟರು. ಭರ್ಜರಿಯಾಗಿ ಒಂದು ಫೋಟೋ ತೆಗೆಸಿಕೊಂಡರು. “”ಆಯ್ತು ಸರ್… ಇನ್ನು ಒಂದು ಐದು ನಿಮಿಷ. ಕವಿಗೋಷ್ಠಿ ಮುಗಿಸಿ ಹೋಗ್ತೀವೆ” ಅಂದ್ರು.
ನನಗೆ ಮಾತಾಡಲು ನಾಲಗೆಯೇ ಇರಲಿಲ್ಲ. ನನ್ನ ಮನೆಯಲ್ಲಿ ಅವರು ಕಾರುಬಾರು ನಡೆಸುತ್ತಿದ್ದರು.
ಕವಿಗೋಷ್ಠಿ ಮುಗಿಯುತ್ತಿದ್ದಂತೆ ಹದಿನೈದು ಜನರಿಗೂ ನನ್ನ ಶ್ರೀಮತಿ ಬ್ರೂ ಕಾಫಿ, ಚಿಪ್ಸ್, ಬಾಳೆಹಣ್ಣು ತಂದು ಕೊಟ್ಟಳು. ಎಲ್ಲರೂ “ಸುರ್’ ಎಂದು ಕಾಫಿ ಹೀರಿ, “”ಸಂತೋಷ! ಆಯ್ತು ಸರ್, ನಿಮಗೂ ಸಂತೋಷ ಆಗಿರಬಹುದು ಅಂತ ಭಾವಿಸ್ತೇವೆ. ನೀವು ಬರಿಯೋದನ್ನು ಮಾತ್ರ ನಿಲ್ಲಿಸ್ಬೇಡಿ ಸರ್… ನಾವಿದ್ದೇವೆ” ಎಂದು ಹೊರಟು ಹೋದರು.
ಬಂದವರು ನನ್ನ ಹದಿನೈದು ಪುಸ್ತಕ ತಗೊಂಡಿದ್ದರೆ ನನಗೆ ಸಾವಿರದ ಐನೂರು ರೂಪಾಯಿ ಸಿಗುತ್ತಿತ್ತು. ಆದರೆ, ಅವರು ಅದನ್ನು ಮಾಡಲಿಲ್ಲ. ಅವರು ತಂದ ಸೆಕೆಂಡ್ ಹ್ಯಾಂಡ್ ಶಾಲು, ಸೆಕೆಂಡ್‌ಹ್ಯಾಂಡ್ ಸರಸ್ವತಿ ಫೋಟೋ, ನಾಳೆ ಬಿಸಾಡುವಂಥ ನಾಲ್ಕು ಮೂಸಂಬಿಗಳ ಜತೆ ನನ್ನ ಹೆಂಡತಿ ಕೊಟ್ಟ ಬ್ರೂ ಕಾಫಿ, ಚಿಪ್ಸ್, ಬಾಳೆಹಣ್ಣುಗಳ ಕ್ರಯ ಹೋಲಿಸಿದೆ. ನನಗೇ ನಷ್ಟ ಎಂದು ಗೊತ್ತಾಯಿತು. ನನ್ನಂಥ ಬಡ ಸಾಹಿತಿಗೆ ಇಂಥ ಸನ್ಮಾನದ ಕಿರಿಕಿರಿ ಬೇಡವಾಗಿತ್ತು. ಬೇಡವೇ ಬೇಡವಾಗಿತ್ತು!
ಆ ರಾತ್ರಿಯೂ ನನಗೆ ನಿದ್ದೆ ಬರಲಿಲ್ಲ. ಕಾರಣ ವಿಪರೀತ ಸೆಕೆಯಲ್ಲ. ನನಗೆ ಮಾಡಿದ ಸನ್ಮಾನ !
ಕಾಸರಗೋಡು ಅಶೋಕ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.