ಮಹಾಬದುಕು ಮಹಾಕಾವ್ಯ
Team Udayavani, Jul 8, 2018, 6:00 AM IST
ಇಲ್ಲಿಯವರೆಗೆ…
ಶಾಂತಜ್ಜಿ ದೀಪ ತಂದಿರಿಸಿ ಹೋಯಿತು. ಕತ್ತಲು ಕವಿದಿದೆಯೆಂದು, ಆಗ ಅರಿವಾಯಿತು ದೀಪದ ಧ್ಯಾನ ಮಾಡಲಾರಂಭಿಸಿದರು. ದೀಪವು, ನಾಲ್ಕು ಗೋಡೆಗಳ ನಡುವೆ ಉರಿದಂತೆ ನೆಟ್ಟಗೆ ಉರಿಯುತ್ತಿತ್ತು. ಇದ್ದಕ್ಕಿದ್ದಂತೆ, ಕತ್ತಲೆಯಗರ್ಭ ಸೀಳಿಕೊಂಡು, ಹುಳುವೊಂದು ಹಾರಿಬಂದು ದೀಪಕ್ಕೆರಗಿ ರೆಕ್ಕೆ ಸುಟ್ಟಿಕೊಂಡು ನೆಲಕ್ಕೊರಗಿತು.
“”ಒಳಗೇ ಕುಳಿತುಕೊಳ್ಳೋಣ ಬನ್ನಿ. ದೀಪದಾಕರ್ಷಣೆಗೆ ಬಿದ್ದು ಸಾಯುವ ಹುಳುಗಳನ್ನು ನೋಡಲಾರೆ ನಾನು” ಎಂದು ಗೊಣಗುತ್ತ ವಾಲ್ಮೀಕಿಗಳು ಮೇಲೆದ್ದರು. ಎದ್ದು, ದೀಪ ಕೈಗೆತ್ತಿಕೊಂಡು, ಮತ್ತೂಂದು ಕೈಯನ್ನು ಬ್ರಹ್ಮರ್ಷಿಗಳತ್ತ ಚಾಚಿದರು, ಮೇಲೇಳಲಿ ಎಂದು.
ರಾಮಾಯಣದ ರಚನೆ. ಅದು ಆರಂಭವಾದಂದಿನಿಂದ ಇಡೀ ಆಶ್ರಮವೇ ರಚನಾತ್ಮಕವಾಗಿಬಿಟ್ಟಿದೆ. ಭಾರದ್ವಾಜನ ಮುಂದಾಳತ್ವದಲ್ಲಿ ಗಮಕಿಗಳ ಗುಂಪೊಂದು ಸಿದ್ಧವಾಗಿದೆ. ಗುಂಪಿಗೆ ಗಮಕದಿಂದಾಗಿಯೇ ಪ್ರತಿಷ್ಠೆ ಲಭಿಸಿದೆ. ಹಾಗಾಗಿ, ಲವಕುಶರೂ ಸಹ ಹಠಮಾಡಿ ಗುಂಪಿನ ಸದಸ್ಯರಾಗಿದ್ದಾರೆ. ತೊದಲು ನುಡಿಯುತ್ತಿದ್ದಾರೆ. ಅದೇ ಅವರ ಶಾಲೆಯೂ ಆಗಿದೆ. ಒಂಟಿಯಾಗಿ ಕುಳಿತು ಮರಳ ಮೇಲೆ ಬೆರಳಾಡಿಸಿ ಅಕ್ಷರ ಕಲಿಯಬೇಕಾದ ತೊಂದರೆ, ತಾತ್ಕಾಲಿಕವಾಗಿಯಾದರೂ ಸರಿ, ತಪ್ಪಿತೆಂಬ ಖುಷಿ ಅವರಿಗೆ.
ಗಮಕಿಗಳೇ ಲಿಪಿಕಾರರೂ ಆಗಿದ್ದಾರೆ. ಬೆಳಗಿನ ವೇಳೆ ಹೊಸ ವಚನಗಳ ಕಲಿಕೆಯಾಗುತ್ತದೆ. ಅನಂತರ ಬಾಯಿಪಾಠವಾಗುತ್ತದೆ. ಮಧ್ಯಾಹ್ನದ ಮೇಲೆ, ಚೂಪು ಲೋಹದ ಬಳಪ ಬಳಸಿ, ತಾಳೆಗರಿಗಳ ಮೇಲೆ ಗೀರಿ ಗೀರಿ ಮೂಡಿಸುತ್ತಾರೆ ವಟುಗಳು, ಅಕ್ಷರಗಳ ಮೋಡಿ. ವಾಲ್ಮೀಕಿಗಳದ್ದು ಕಟ್ಟುನಿಟ್ಟಿನ ದಿನಚರಿ. ಬೆಳಗಿನ ಜಾವ ಅವರು ತಮಸಾನದಿಯಲ್ಲಿ ಮಿಂದು ಮಡಿಯಾಗಿ ಬಂದರೆಂದರೆ, ಯಾಗಶಾಲೆಯಲ್ಲಿ ಗಮಕಿಗಳ ಗುಂಪು ಸಿದ್ಧವಾಗಿ ಕುಳಿತಿರುತ್ತದೆ. ಹಿಂದಲ ದಿನ ಹೊಸದಾಗಿ ಸಂಯೋಜಿಸಿದ ವಚನಗಳನ್ನು ಒಂದೊಂದಾಗಿ ವಾಚಿಸಿ ಕಲಿಸುತ್ತಾರೆ, ಅವರು ವಟುಗಳಿಗೆ.
ಅನಂತರ, ಕಿವಿ ತೆರೆದುಕೊಂಡು, ಕಣ್ಣು ಮುಚ್ಚಿಕೊಂಡು, ಕುಳಿತು ಕೇಳಿಸಿಕೊಳ್ಳುತ್ತಿದ್ದರು. ಗಮಕಿಗಳು ಹಾಡುತ್ತಿದ್ದರೆ ಅವರಿಗೆ ತಿಳಿದುಬಿಡುತ್ತದೆ ಕಾವ್ಯದ ತಪ್ಪು$ಒಪ್ಪುಗಳು. ಹಾಡಾಗಲೆಂದೇ ಎಲ್ಲಿ ವ್ಯರ್ಥ ಹೆಣಗುತ್ತಿದೆ ಕಾವ್ಯ, ಎಲ್ಲಿ ಅರ್ಥವನ್ನು ಜಗ್ಗಾಡುತ್ತಿದೆ ಕಾವ್ಯ, ಎಲ್ಲಿ ಅನಗತ್ಯವಾಗಿ ಸಾಲನ್ನು ಒಡೆಯಲಾಗುತ್ತಿದೆ, ಅಥವಾ ಒಡೆದದ್ದು ಒಂದಾಗದೆ ಎಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತಿದೆ, ಇತ್ಯಾದಿ ಎಲ್ಲವೂ ತಿಳಿದುಬಿಡುತ್ತದೆ. “ನಿಲ್ಲಿ ! ಮೊಸರಿನಲ್ಲೊಂದು ಕಲ್ಲು ಬಂದಂತಿದೆ ಇಲ್ಲಿ! ಇದನ್ನು ತೆಗೆದುಬಿಡಿ, ಈ ಶಬ್ದ ಸೇರಿಸಿ’ ಅನ್ನುತ್ತಾರೆ. ಅಥವಾ “ಈ ಪದಗುತ್ಛ ಸೇರಿಸಿರಿ’ ಅನ್ನುತ್ತಾರೆ. ಅಥವಾ “ಈ ಅಲಂಕಾರ ಅತಿಅಲಂಕೃತವಾಗಿಬಿಟ್ಟಿದೆ, ಬದಲು ಮಾಡಿ’ ಅನ್ನುತ್ತಾರೆ. ಹೀಗೆ ಸಿದ್ಧವಾಗುತ್ತಿದೆ ರಾಮಾಯಣ ಮಹಾಕಾವ್ಯ.
ವಾಲ್ಮೀಕಿಗಳಿಗೆ ಕಾವ್ಯ ಗೊತ್ತಿದೆ, ಆದರೆ ರಚನೆ ಹೊಸತು. ತಾನೊಬ್ಬ ಮಹಾಕವಿ ಎಂಬ ಗರ್ವ ಅವರಲ್ಲಿಲ್ಲ. ಕವಿತೆ ಕೇವಲ ತಲೆಯಲ್ಲಿ ಮೂಡಿದರೆ ಸಾಲದು ಕಿವಿಗಳಲ್ಲಿ ಕೂರಬೇಕು ಎಂಬ ನಂಬಿಕೆಯಿದೆ ಅವರಿಗೆ. ಗಮಕಿಗಳ ಬಾಯಿಂದ ಕೂಡ, ಕೆಲವೊಮ್ಮೆ, ಪರ್ಯಾಯ ಶಬ್ದಗಳ ಸೂಚನೆ ಬರುತ್ತಿದ್ದುದುಂಟು. ಸಂತೋಷದಿಂದ ಸ್ವೀಕರಿಸುತ್ತಾರೆ ಅವರು. ಹಾಗಾಗಿ, ತಾವೂ ಭಾಗವಹಿಸುತ್ತಿದ್ದೇವೆ ಈ ಮಹಾಯಜ್ಞದಲ್ಲಿ ಎಂಬ ತೃಪ್ತಿಯಿದೆ ಗಮಕಿಗಳಿಗೆ. ಗಮಕಿಗಳಿಗೇ ಏನು, ಇಡೀ ಆಶ್ರಮಕ್ಕೆ ಅನ್ನಿಸಿದೆ, ತಾವೂ ಭಾಗವಹಿಸಿದ್ದೇವೆ, ರಾಮಾಯಣದ ರಚನೆಯಲ್ಲಿ ಎಂದು. ಈ ಎಲ್ಲ ಕಾರಣಗಳಿಗಾಗಿ ಸರಳತೆಯೇ ವಾಲ್ಮೀಕಿಗಳ ಕಾವ್ಯದ ಹೆಗ್ಗಳಿಕೆ.
ಇಲ್ಲಿಂದಾಚೆಗೆ, ಕಾವ್ಯವು ಭಾರದ್ವಾಜನ ಉಸ್ತುವಾರಿಯಲ್ಲಿ ಕಂಠಪಾಠವಾಗುತ್ತದೆ. ಭಾರದ್ವಾಜ ಶಿಸ್ತಿನ ಸಿಪಾಯಿ. ಎಲ್ಲಿಯವರೆಗೆ ಕಾವ್ಯ ರಚಿತವಾಗಿದೆಯೋ ಅಲ್ಲಿಯವರೆಗೆ, ಪ್ರತಿದಿನ, ಕಾವ್ಯದ ಇಡೀ ಕಾಂಡವನ್ನು ಒಮ್ಮೆ ಹೇಳಿಸುತ್ತಾನೆ. ಅಪರೂಪಕ್ಕೊಮ್ಮೆ, ಆಗಲೂ ಮೊಸರಿನೊಳಗಿನ ಕಲ್ಲುಗಳು ಸಿಕ್ಕುವುದುಂಟು.
ಹೀಗೆ, ವರ್ಷಗಳೇ ಕಳೆದವು ಮಹಾಕಾವ್ಯ ಮೂಡಿ ಮುನ್ನೆಲೆಗೆ ಬರಲಿಕ್ಕೆ. ಲವಕುಶರು, ಬಾಲಲೀಲೆ ನಡೆಸುತ್ತಿದ್ದವರು, ಗಮಕಿಗಳ ಗುಂಪಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದವರು ಈಗ, ರಾಮಾಯಣದೊಟ್ಟೊಟ್ಟಿಗೆ ಎತ್ತರಕ್ಕೆ ಬೆಳೆದಿದ್ದಾರೆ. ತಾವೂ ಉತ್ತಮ ಗಮಕಿಗಳೇ ಆಗಿದ್ದಾರೆ. ಅವರಿಗೀಗ ಹನ್ನೆರಡು ವರ್ಷ. ದನಿ ಇನ್ನೂ ಒಡೆದಿಲ್ಲ. ಹಾಗಾಗಿ, ಸಹಜವಾಗಿಯೇ ಗಮಕಿಗಳ ಗುಂಪಿನ ಪ್ರಮುಖ ಗಾಯಕರಾಗಿದ್ದಾರೆ ಅವರು.
ನಿಜದಲ್ಲಿ ನಡೆದ ಘಟನೆ ರಾಮಾಯಣ. ಅದನ್ನು ಹೀಗೆ, ಹಾಡುಮಾಡಿ ಹೊಗಳುವುದು, ಹಾಡಿದ್ದು ಕಿವಿಯಿಂದ ಕಿವಿಗೆ ದಾಟಿ ಹೃದಯಗಳನ್ನು ಮೀಟಿ ಜನಾಂಗೀಯ ನೆನಪಾಗಿ ವಿಸ್ತಾರಗೊಳ್ಳುವುದು, ಎಲ್ಲವೂ ಒಂದು ರೋಮಾಂಚಕಾರಿ ಅನುಭವ ಅನ್ನಿಸಿದೆ ವಾಲ್ಮೀಕಿಗಳಿಗೆ. ರಚನೆ ಸರಾಗವಾಗಿ ನಡೆದಾಗ ಅವರು ಹುಮ್ಮಸ್ಸಿನಿಂದ ಇರುತ್ತಾರೆ ಎಲ್ಲರೊಟ್ಟಿಗೆ ಬೆರೆಯುತ್ತಾರೆ. ಕೆಲವೊಮ್ಮೆ ರಚನೆ ಗಂಟಲಿನ ಗಾಳವಾಗುತ್ತದೆ. ವಾಲ್ಮೀಕಿಗಳನ್ನು ಜಗ್ಗಾಡಿಸಿ ಪ್ರಾಣ ಹಿಂಡುತ್ತದೆ ಅದು. ಆಗೆಲ್ಲ, ತಾನು ರಚಿಸಿದ್ದನ್ನು ಗಮಕಿಗಳು ಹಾಡುತ್ತಿದ್ದರೆ “ಥೂ!… ಛಿ!’ ಅನ್ನಿಸಿಬಿಡುತ್ತದೆ. “ನಾನು ಹೊಸೆದೆನೇ ಈ ನೀರಸ ಕಗ್ಗವನ್ನು’ ಎಂದೆನ್ನಿಸಿಬಿಡುತ್ತದೆ. “ಕವಿಯಿರಲಿ, ಬಿಲ್ಲುಬಾಣ ಹಿಡಿಯಲ್ಲಿಕ್ಕೂ ಅರ್ಹನಲ್ಲದ ಅಯೋಗ್ಯ ಬೇಡ ತಾನು. ಮುದಿಗೂಬೆ ! ತನ್ನಿಂದ ಯಾವ ಪುರುಷಾರ್ಥವೂ ಸಾಧ್ಯವಿಲ್ಲ!’ ಎಂದೆನ್ನಿಸಿ, ಸಿಡುಕತೊಡಗುತ್ತಾರೆ ಅವರು. ಆಗ, ಇಡೀ ಆಶ್ರಮ ಕಂಗಾಲಾಗಿಬಿಡುತ್ತದೆ. ಎಂಥಧ್ದೋ ಒಂದು ಕಾರಣ ಬೇಕಿರುತ್ತದೆ ವಾಲ್ಮೀಕಿಗಳ ಹತಾಶೆ ಹೊರ ಸಿಡಿಯಲಿಕ್ಕೆ. ಆಶ್ರಮದ ಶಿಸ್ತು ಅಡುಗೆಯ ವ್ಯವಸ್ಥೆ ಮಕ್ಕಳ ಶಿಕ್ಷಣ ಏನೂ ಆದೀತು ಆಶ್ರಮವಾಸಿಗಳ ಮೇಲೆ ಹರಿಹಾಯಲಿಕ್ಕೆ. ಮೊದಲ ಪ್ರಸವದಲ್ಲಿ ಹೆಣ್ಣಿಗೆ ಹೆರಿಗೆ ನೋವು ಅರಿವಾಗುವಂತೆ, ಕ್ರಮೇಣ, ಎರಡೂ ಪಕ್ಷಗಳಿಗೆ ಅರಿವಾಯಿತು. ಸೃಜನಶೀಲತೆಯ ಸಂಕಟವಿದು ಎಂದು ಅಂತೂ ಇಂತೂ ಕೊನೆಗೊಂದುದಿನ-ಸಂಕಟದ ಸರಕಾದರೇನಂತೆ, ಮುದ್ದಾದ ಮಗುವಿನಂತೆ ಹೊರಬಂತು ಒಳಿತಿನ ಈ ಕಾವ್ಯ.
“”ಗುರುಗಳೇ”
“”ಏನಾಗಬೇಕಿತ್ತು?”
“”ಇತರರೂ ಕೇಳುತ್ತಿದ್ದಾರೆ ತಾವೂ ಕೇಳಿಸಿಕೊಳ್ಳಬೇಕೆಂದು, ಕಾವ್ಯವನ್ನು”
“”ಇತರರೆಂದರೆ?”
“”ಇತರೆ ಆಶ್ರಮಗಳವರು, ಹತ್ತಿರದ ಗ್ರಾಮಗಳವರು”
“”ಹೇಗೆ ಕೇಳಿಸುತ್ತೀಯ?”
“”ಹೋಗಿ ಹಾಡಿಬಂದರಾಯಿತು!”
“”ಬೇರೆಯ ಕೆಲಸವಿಲ್ಲವೇನು ನಿನಗೆ?”
ಸಿಡುಕಿದರು. ವಾಲ್ಮೀಕಿಗಳು.
“”ಇದೂ ಕೆಲಸವೇ ತಾನೆ?”
“”ನಿನ್ನ ಅಧ್ಯಯನ ಈಗಾಗಲೇ ಹಿಂದೆ ಬಿದ್ದಿದೆ”
“”ಗೊತ್ತು ನನಗೆ!… ನಾನಲ್ಲ ಖಾಯಂ ವ್ಯವಸ್ಥೆ”
“”ಮತ್ತೆ?”
ಲವಕುಶರು ಸಿದ್ಧರಾಗಿದ್ದಾರೆ!… ಮಕ್ಕಳಿಗೆ ತರಬೇತಿಯೂ ಆದಂತಾಯಿತು
“”ಆದರೆ ಮಕ್ಕಳವರು!”
ಭಾರದ್ವಾಜ ನಕ್ಕು ಬಿಟ್ಟ.
“”ಹನ್ನೆರಡು ವರ್ಷ ಗುರುಗಳೇ! ಅವರೂ ಹಾಡಬೇಕಂತೆ”
ವಾಲ್ಮೀಕಿಗಳು ಉತ್ತರಿಸಲಿಲ್ಲ,
“”ಹಟಹಿಡಿದಿದ್ದಾರೆ ಅವರು!” ಆಗಲೂ ಉತ್ತರಿಸಲಿಲ್ಲ.
“”ದನಿಯೂ ಒಡೆದಿಲ್ಲ, ಕಂಠ ಚೆನ್ನಾಗಿದೆ!”
“”ಜೊತೆಗೆ ಇನ್ನಾರಾದರೂ ದೊಡ್ಡವರನ್ನು ಕಳುಹಿಸು”
“”ಸದ್ಯಕ್ಕೆ ನಾನೇ ಹೋಗಿಬರುತ್ತೇನೆ, ಒಂದೆರಡು ಬಾರಿ”
“”ನಿನ್ನಿಷ್ಟ!”
ಹೀಗೆ, ರಾಮ-ಸೀತೆಯರ ಮಕ್ಕಳ ಮೂಲಕ ಹರಡಿತು ರಾಮಾಯಣದ ಕಂಪು, ಜಗತ್ತಿನಾದ್ಯಂತ!
.
.
ಇದೆಂತಹ ವಿಚಿತ್ರ ಹೇಳಿ! ತಂದೆರಾಮ, ರಾಜ್ಯದ ಭಾರ ಹೊತ್ತು ನಿಂತಿದ್ದರೆ, ತಾಯಿಸೀತೆ, ಒಂಟಿತನದ ಭಾರ ಹೊತ್ತು ಪಾತಾಳಸೇರಿದ್ದರೆ, ಮಕ್ಕಳು, ಐದುಕಾಂಡ ಐದುನೂರು ಸರ್ಗ ಇಪ್ಪತ್ತನಾಲ್ಕು ಸಾವಿರ ವಚನಗಳಲ್ಲಿ ತಂದೆ-ತಾಯಿಯರ ಜೀವನಗಾಥೆಯ ಭಾರವನ್ನು ಲೀಲಾಜಾಲವಾಗಿ ಹೊತ್ತು ತಿರುಗುತ್ತಿದ್ದಾರೆ, ಆಶ್ರಮದಿಂದ ಆಶ್ರಮಕ್ಕೆ, ಊರಿಂದ ಊರಿಗೆ. ನೀವನ್ನಬಹುದು, ತಂದೆತಾಯಿಗಳು ಹೊತ್ತಿರುವುದು ವಾಸ್ತವಿಕ ಭಾರವನ್ನು, ಮಕ್ಕಳು ಹೊತ್ತಿರುವುದು ಕಾವ್ಯದ ಭಾರವನ್ನು, ಅದೊಂದು ಲೀಲೆ ಎಂದು. ಲೀಲೆಯೋ ಮತ್ತೂಂದೋ, ಅಂತೂ ಲವಕುಶರು ತುಂಬ ಸಮರ್ಥವಾಗಿ ನಿರ್ವಹಿಸಿದ್ದಾರೆ ರಾಮಲೀಲೆಯನ್ನು.
ಮಕ್ಕಳು ಮಹಾಕಾವ್ಯವನ್ನು ವಾಚಿಸುತ್ತಿದ್ದರೆ ಕೇಳುಗರು ಅತ್ತು ಕರೆದು ಸುಖೀಸುತ್ತಿದ್ದರು. ಕಾವ್ಯವನ್ನು ಕೇಳಿಸಿದ ಸುಖಕ್ಕಾಗಿ ಹಾಡಿಹರಸುತ್ತಿದ್ದರು.. ಇತರರು ಬಿಡಿ, ಸ್ವತಃ ವಾಲ್ಮೀಕಿಗಳೇ, ಲವಕುಶರ ಬಾಯಿಯಿಂದ ಕಾವ್ಯ ಹೊರಬೀಳುವುದೇ ತಡ, ಬಳಬಳ ಕಣ್ಣೀರು ಸುರಿಸುತ್ತಾರೆ. ಮುಜುಗರದಿಂದ ಮುಖತಿರುಗಿಸಿ ಕುಳಿತುಬಿಡುತ್ತಾರೆ. “ಸುಟ್ಟಿತು ನನ್ನ ಕಾವ್ಯಪ್ರತಿಭೆ… ಬದುಕು ಹೀಗಿರಬೇಕೆ…ಬದುಕು ಹೀಗಿರಬೇಕೆ’ ಎಂದು ಮತ್ತೆ ಮತ್ತೆ ನಿಡುಸುಯ್ಯುತ್ತಾರೆ.
ಇತರೆ ಆಶ್ರಮಗಳ ಇತರೆ ಮುನಿಜನರು ಸಹ ಕಾವ್ಯವಾಚನ ಕೇಳಿ ಭಾವುಕರಾಗುತ್ತಾರೆ. “ಆಹಾ! ಈ ಮಕ್ಕಳ ಗಾಯನ ಅದೆಷ್ಟು ಮಧುರ! ಇವರ ಆಂಗಿಕ ಅದೆಷ್ಟು ಪರಿಶುದ್ಧೆ ! ವಾಚಿಕ ಅದೆಷ್ಟು ಸ್ವತ್ಛ ! ಎಂದೋ ನಡೆದುಹೋದ ಘಟನೆಯಿದು-ನಾವು ಕೇಳಿಬಲ್ಲ ಘಟನೆ. ಈಗಷ್ಟೇ ನಡೆದಂತೆ ಕಣ್ಣಿಗೆ ಕಟ್ಟಿಸುತ್ತಾರಲ್ಲ ಈ ಪೋರರು’ ಎಂದು ಉದ್ಗರಿಸುತ್ತಾರೆ. ಮಕ್ಕಳಿಗೇನಾದರೂ ಉಡುಗೊರೆ ಕೊಡಬೇಕು ಅನ್ನಿಸುತ್ತದೆ ಅವರಿಗೆ. ಅತ್ತಿತ್ತ ತಡಕಾಡುತ್ತಾರೆ. ಎಲ್ಲ ತೊರೆದು ಬಂದ ಸನ್ಯಾಸಿಗಳವರು. ಏನು ತಾನೆ ಕೊಟ್ಟಾರು?
ಉಟ್ಟ ವಸ್ತ್ರವನ್ನೇ ಎತ್ತಿ ಕೊಟ್ಟುಬಿಡುತ್ತಾರೆ ಅಥವಾ ಗೆಡ್ಡೆಗೆಣಸು. ಅಥವಾ ಶಂಕು, ಅಥವಾ ಗಜ್ಜುಗ ! ಗೆಡ್ಡೆ ಗೆಣಸೆಂಬುದು ಭೂರಿ ಭೋಜನವೋ ಎಂಬಂತೆ ಮಕ್ಕಳಿಗೆ ಉಣಿಸುತ್ತಾರೆ ಅಥವಾ ತಾವು ಕುಳಿತುಕೊಳ್ಳುವ ಕೃಷ್ಣಾಜಿನ, ನೀರಿಗೆಂದು ಬಳಸುವ ಕಮಂಡಲ, ಕೋಲು, ಕಟ್ಟಿಗೆ, ಏನು ಸಿಕ್ಕರೆ ಅದನ್ನೆ ಎತ್ತಿ ಆಶೀರ್ವದಿಸಿ ಕೊಟ್ಟುಬಿಡುತ್ತಾರೆ.
“ನನ್ನಲ್ಲಿರುವುದು ಇಷ್ಟೇ ಮಗು, ಇದನ್ನೆ ಕೋ!’
ಒಬ್ಬ ತನ್ನ ಜನಿವಾರವನ್ನೇ ಎತ್ತಿ ಕೊಟ್ಟುಬಿಟ್ಟನಂತೆ, ಮತ್ತೂಬ್ಬ ಕೌಪೀನ. ಮಕ್ಕಳು ಆಶ್ರಮಕ್ಕೆ ಮರಳಿ ಬಂದು ಇಂತಹ ಕತೆಗಳನ್ನು ಹೇಳುತ್ತಿದ್ದರೆ, ಭಾರದ್ವಾಜ ಬಿದ್ದು ಬಿದ್ದು ನಗುತ್ತಾನೆ.
ಒಳ್ಳೆಯದೇ ಆಯಿತು ಬಿಡು… ಅವುಗಳಿಂದ ಆಗಬಹುದಾದ ಲೋಕಕಲ್ಯಾಣ ಅಷ್ಟರಲ್ಲಿಯೇ ಇದೆ.
ಮರೆಯಲ್ಲಿ ನಿಂತು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿರುವ ಶಾಂತಜ್ಜಿ, ಬಾಯಿಗೆ ಸೆರಗು ಮುಚ್ಚಿಕೊಂಡು ಮುಸಿ ಮುಸಿ ನಗುತ್ತದೆ. “ಥೂ! ಥೂ! ರಾಮಾಯಣದ ಹುಚ್ಚು!’ ಎಂದು ಅಜ್ಜಿ ಸಂಭ್ರಮಿಸುತ್ತದೆ.
ಪ್ರಸನ್ನ ಹೆಗ್ಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.