ಭಾಷೆ ಬೆಳೆಸುವ ಮಹಾನುಭಾವರು
Team Udayavani, Jan 12, 2020, 5:23 AM IST
ದಕ್ಷಿಣಕನ್ನಡದ ಜನರು ಬುದ್ಧಿವಂತರೆಂದೂ ವಿದ್ಯಾವಂತರೆಂದೂ ಘಟ್ಟದ ಮೇಲಿನ ಜನರಲ್ಲಿ ಒಂದು ನಂಬಿಕೆಯುಂಟು. ದ.ಕ.ದವರದ್ದು ಸ್ವಚ್ಛವಾದ ಗ್ರಾಂಥಿಕ ಭಾಷೆ, ಕನ್ನಡ ಮಾತುಗಳನ್ನು ಪುಸ್ತಕದಲ್ಲಿ ಬರೆಯುವ ಹಾಗೆಯೇ ಮಾತನಾಡುತ್ತಾರೆ ಎಂದು ಗ್ರಾಮ್ಯ, ಸ್ಥಳೀಯ, ಆಡುಮಾತಿನಲ್ಲಿ ಮಾತನಾಡುವ ಅವರು ಹೇಳುತ್ತಾರೆ ಮತ್ತು ಅದರಿಂದಾಗಿಯೇ ದಕ್ಷಿಣಕನ್ನಡದವರ ಕನ್ನಡ ಭಾಷೆಯ ಬಗ್ಗೆ ಲೇವಡಿ ಮಾಡುವುದೂ ಇದೆ. ಕೆಲವು ಸಿನೆಮಾಗಳಲ್ಲಿ ಅದನ್ನು ಗಮನಿಸಬಹುದು.
ಘಟ್ಟದ ಮೇಲೆ ಎಷ್ಟೇ ವರ್ಷ ಬದುಕಿದ್ದರೂ ದ.ಕ.ದವರು ಮಾತನಾಡಿದ ಕೂಡಲೇ ಜನರು ಅದನ್ನು ಗುರುತಿಸಿ ಹೇಳುತ್ತಾರೆ. ಅಂತ ಹೇಳಿ, ಸ್ಥಳೀಯ ಆಡುಮಾತಿನಲ್ಲಿ ದ.ಕ.ದ ನನ್ನಂಥ ವ್ಯಕ್ತಿ ಮಾತನಾಡಲು ತೊಡಗಿದರೆ ಅವರು ಅವರ ನುಡಿಗಟ್ಟುಗಳಲ್ಲಿ ಮಾತನಾಡದೆ ಮೈಸೂರು ಕನ್ನಡದಲ್ಲಿ ಉತ್ತರಿಸುತ್ತಾರೆ. ನಾನು ಹುಬ್ಬಳ್ಳಿ-ಧಾರವಾಡದಲ್ಲಿದ್ದಾಗ ಅಲ್ಲಿಯ ಜನರು ಒಮ್ಮೆಯೂ ನನ್ನೊಡನೆ ಆ ಗಂಡುಮೆಟ್ಟಿನ ಭಾಷೆಯಲ್ಲಿ ಮಾತನಾಡಲಿಲ್ಲ. ಮಾತಿನ ನಡುವೆ ಅವರವರೊಳಗೆ ಆ ಭಾಷೆಯಲ್ಲಿ ಮಾತನಾಡುತ್ತಾರಲ್ಲದೆ ನನ್ನೊಡನೆ ಮೈಸೂರು ಕನ್ನಡದಲ್ಲಿ ಮಾತನಾಡುತ್ತಾರೆ. ಮೈಸೂರು ಕನ್ನಡವನ್ನು ಜನಪ್ರಿಯಗೊಳಿಸಿದ್ದು ನಮ್ಮ ಸಿನೆಮಾಗಳು.
ಇಂತಹ ಗ್ರಾಂಥಿಕ ಕನ್ನಡ ಭಾಷೆಯಲ್ಲಿ ಮಾತನಾಡುವ ದ. ಕ. ದವರಿಗೆ ಆ ಭಾಷೆ ಹೇಗೆ ಬಂತು? ದ. ಕ. ದಲ್ಲಿ ಮನೆಗಳಲ್ಲಿ ತುಳು, ಕೊಂಕಣಿ, ಮಲಯಾಳ, ಬ್ಯಾರಿ ಮುಂತಾದ ಭಾಷೆಗಳನ್ನು ಆಡುವವರೇ ಹೆಚ್ಚು. ಕನ್ನಡ ಮಾತನಾಡಿದರೂ ಅದು ಹವಿಗನ್ನಡ, ಕುಂದಕನ್ನಡ ಎಂಬ ಪ್ರಭೇದದಲ್ಲಿ ಮಾತನಾಡುತ್ತಿದ್ದರು. ತುಳು, ಕೊಂಕಣಿ ಭಾಷೆಗಳೂ ಸುಮಾರು ಮೂವತ್ತರಿಂದ ಐವತ್ತು ಮೈಲಿಗಳ ಅಂತರದಲ್ಲಿ ಬದಲಾಗುತ್ತವೆ. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ನರು ಒಂದೇ ಪ್ರದೇಶದಲ್ಲಿ ಕೊಂಕಣಿ ಮಾತನಾಡುತ್ತಿದ್ದರೂ ಅದರ ಉಚ್ಛಾರ ಬೇರೆ ಬೇರೆ ತೆರನದ್ದು. ಆ ಪ್ರದೇಶದಲ್ಲಿ ನೂರೈವತ್ತು ವರ್ಷಗಳ ಹಿಂದೆಯೇ ಬಾಸೆಲ್ ಮಿಶನ್‌ನವರು ಶಾಲೆಗಳನ್ನು ತೆರೆದಾಗ ಯಾವ ಭಾಷೆ ಮಾಧ್ಯಮವಾಗಿ ಇಟ್ಟುಕೊಳ್ಳಬೇಕು ಎಂದು ತಲೆಕೆಡಿಸಿಕೊಂಡಿರಬೇಕು. ಆದುದರಿಂದ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಕನ್ನಡ ಭಾಷೆಯೇ ಸೂಕ್ತ ಎಂದು ನಿರ್ಧರಿಸಿ ಕನ್ನಡವನ್ನು ಬಳಸಿದ್ದಿರಬೇಕು. ಕೊಂಕಣಿ ಮತ್ತು ತುಳು ಭಾಷೆಗಳಿಗೆ ಲಿಪಿ ಇಲ್ಲದಿದ್ದುದೂ ಕಾರಣವಾಗಿರಬಹುದು. ಬಾಸೆಲ್ ಮಿಶನ್ ಶಾಲೆಗಳಲ್ಲಿ ಕಲಿಸಲು ಬಂದ ಪಾದರಿಗಳು ಗ್ರಂಥಸ್ಥ ಕನ್ನಡವನ್ನು ಕಲಿತು ಬಂದವರಾದುದರಿಂದ ಅದನ್ನೇ ಕಲಿಸಿದರೆನ್ನಬಹುದು. ಭಾಷಾವಿಜ್ಞಾನಿಗಳ ಕೆಲವು ಸಂಶೋಧನಾತ್ಮಕ ಲೇಖನಗಳನ್ನು ಓದಿದ ನೆನಪಿನ ಮೇಲೆ ಇದನ್ನು ಹೇಳುತ್ತಿದ್ದೇನೆ.
ಆದರೆ, ಇದಕ್ಕಿಂತ ಮುಖ್ಯವಾದ ಇನ್ನೊಂದು ಕಾರಣವೂ ಇದೆ. ಒಂದು ಪ್ರದೇಶದ ಭಾಷೆಯ ಮೇಲೆ ಅಲ್ಲಿರುವ ಕಲೆ, ಸಂಸ್ಕೃತಿ, ಗಾನ, ನಾಟ್ಯ, ಮುಂತಾದುವುಗಳ ಪ್ರಭಾವ ಇದ್ದೇ ಇದೆ. ಜನಸಾಮಾನ್ಯರಿಗೆ, ಅನಕ್ಷರಸ್ಥರಿಗೆ ತಲುಪಬೇಕೆಂಬ ಉದ್ದೇಶದಿಂದ ತಮ್ಮ ಪ್ರದರ್ಶನಗಳನ್ನು ಅವರು ಸ್ಥಳೀಯ ಸಾಮಾನ್ಯ ಭಾಷೆ (common language)ಯಲ್ಲಿ ಪ್ರಸ್ತುತಪಡಿಸುತ್ತಿದ್ದರು. ದ.ಕ.ದ ಬಹುಮುಖ್ಯ ಕಲೆ ಯಕ್ಷಗಾನವೆನ್ನುವುದು ಸರ್ವವಿದಿತ. ಕಳೆದ ಶತಮಾನದ ಅರುವತ್ತರ ದಶಕದ ತನಕ ಎಲ್ಲ ಯಕ್ಷಗಾನ ಪ್ರದರ್ಶನಗಳೂ ಕನ್ನಡದಲ್ಲಿಯೇ ಇರುತ್ತಿದ್ದುವು. ಆಮೇಲೆ ಬೇರೆ ಭಾಷೆಗಳಲ್ಲಿಯೂ ಬಂದುವು, ನಿಜ.
ಸಂಗೀತ, ನಾಟ್ಯ, ಬಣ್ಣ, ಸಾಹಿತ್ಯ ಇವೆಲ್ಲ ಸೇರಿಕೊಂಡಿರುವ ಯಕ್ಷಗಾನ ಒಂದು ಸಂಪೂರ್ಣ ವಿಶಿಷ್ಟ ಕಲೆಯಲ್ಲವೆ? ಭಾಗವತರು ಹಾಡುವ ಪ್ರಸಂಗಗಳು ಎಲ್ಲರಿಗೆ ಅರ್ಥವಾಗುತ್ತಿತ್ತೋ ಇಲ್ಲವೊ? ಆದರೆ, ಗದ್ಯ ರೂಪದಲ್ಲಿ ಅದರ ಅರ್ಥ ಹೇಳುವಾಗ ಎಲ್ಲರಿಗೂ ತಿಳಿಯುತ್ತಿತ್ತು. ವೇಷಧಾರಿಗಳು ತಮ್ಮ ಪುರಾಣ ಪುಸ್ತಕಗಳ ಓದಿನಿಂದ ಪ್ರಭಾವಿತರಾಗಿ ಎಲ್ಲ ಪ್ರಯತ್ನಗಳನ್ನೂ ಹಾಕಿ ಗದ್ಯರೂಪದಲ್ಲಿ ಹೇಳಿದಾಗ ಅದರ ಶೈಲಿ, ಭಾಷೆ, ಪ್ರಾಸ ಮುಂತಾದುವುಗಳಿಂದ ಎಲ್ಲರ ಮನಸ್ಸುಗಳಿಗೂ ತಟ್ಟುತ್ತಿತ್ತು. ನಾನು ಸಣ್ಣವನಿರುವಾಗ ಗದಾಯುದ್ಧ ಪ್ರಸಂಗದಲ್ಲಿ ಬೋಳಾರ ನಾರಾಯಣ ಶೆಟ್ಟಿ ಎನ್ನುವ ಕಲಾವಿದರೊಬ್ಬರು ಭೀಮನ ಪಾತ್ರದಲ್ಲಿ ದುರ್ಯೋಧನನನ್ನು ವೈಶಂಪಾಯನ ಸರೋವರದಿಂದ ಹೊರಗೆ ಕರೆಯುವ ಮಾತುಗಳು ನನಗೀಗಲೂ ನೆನಪಿವೆ. ಮುಂದೆ ನಾನು ರನ್ನನ ಗದಾಯುದ್ಧ ಕಾವ್ಯವನ್ನು ಓದುತ್ತಿ¨ªಾಗ, ಬೋಳಾರರು ಅದನ್ನು ಅಳವಡಿಸಿಕೊಂಡ ರೀತಿಯನ್ನು ಗಮನಿಸಿ ಅವರಿಗೆ ಕೃತಜ್ಞನಾಗಿ¨ªೆ.
ಬಯಲಾಟದ ಅರ್ಥಧಾರಿಗಳು ಕುಣಿದು ಸುಸ್ತಾಗಿದ್ದಾಗ ಗದ್ಯ ರೂಪದ ಅವರ ಮಾತುಗಳು ಹೃಸ್ವವಾಗಬಹುದು. ಅಲ್ಲಿ ಕುಣಿತ ಮತ್ತು ಸಂಗೀತಕ್ಕೆ ಹೆಚ್ಚು ಆದ್ಯತೆ ಇರುವುದರಿಂದ ಅದು ಕ್ಷಮ್ಯವೂ ಹೌದು. ಆದರೂ ಅವರೆಲ್ಲ ಕಾವ್ಯಗಳನ್ನು ಓದಿ ಅವುಗಳ ಅರ್ಥವನ್ನು ಹೇಳಲು ಎಷ್ಟು ಶ್ರಮವಹಿಸುತ್ತಿದ್ದರೆನ್ನುವುದು ನನಗೆ ಅವರ ಬಗ್ಗೆ ಗೌರವವನ್ನು ಹೆಚ್ಚಿಸಿದ ವಿಚಾರವಾಗಿದೆ. ಇತ್ತೀಚೆಗೆ ನಾನು ಬಳ್ಕೂರು ಕೃಷ್ಣಯಾಜಿಯವರು- ಬಹುಶಃ ಭೀಷ್ಮನ ಪಾತ್ರದಲ್ಲಿ- “ಮಂಗಳದ ಬೆಳೆಗೆ ಇಂಗಳಿನ ಮಳೆ ಸುರಿದುದೇ ಮಹಾದೇವಾ?’ ಎಂದು ಕುಮಾರವ್ಯಾಸನ ವಾಕ್ಯ ಉಲ್ಲೇಖೀಸಿ ಕೃಷ್ಣನೊಡನೆ ಮಾತನಾಡಿದ್ದನ್ನು ಕೇಳಿ ನನಗೆ ರೋಮಾಂಚವಾಯಿತು. ಇಂಥ ನೂರಾರು ಉದಾಹರಣೆಗಳನ್ನು ಕೊಡುವುದು ಸಾಧ್ಯ. ಅರ್ಥಾತ್ ಈ ವೇಷಧಾರಿಗಳು ಎಷ್ಟೊಂದು ಹೋಮ್‌ವರ್ಕ್ ಮಾಡಿ, ನಮ್ಮ ಜನರಿಗೆ ಸುಲಭದಲ್ಲಿ ಅದನ್ನು ತಲುಪಿಸುವ ಶ್ರಮ ತೆಗೆದುಕೊಳ್ಳುತ್ತಾರಲ್ಲವೆ ಎಂದು ನನಗೆ ವಿಸ್ಮಯವಾಗುತ್ತಿತ್ತು.
ಕುಣಿಯುವ ವೇಷಧಾರಿಗಳಿಗಿಂತಲೂ ಪ್ರಖರವಾಗಿ ನಮಗೆ ಗ್ರಾಂಥಿಕ ಭಾಷೆಯನ್ನು ಕಲಿಸಿದವರು ತಾಳಮದ್ದಲೆಯ ಅರ್ಥಧಾರಿಗಳು. ಈಗಿನಂತೆ ಹಳ್ಳಿಹಳ್ಳಿಗಳಲ್ಲಿ ಪ್ರದರ್ಶನದ ಹಾಲ್‌ಗಳು ದಂಡಿಯಾಗಿ ಇಲ್ಲದ ದಿನಗಳಲ್ಲಿ ಮಳೆಗಾಲದ ಸಮಯ ಯಾರ¨ªೋ ಮನೆಯ ಹಜಾರದಲ್ಲಿ, ದೇವಸ್ಥಾನಗಳ ಪೌಳಿಗಳಲ್ಲಿ, ಇಲ್ಲವೇ ಶಾಲೆಯ ಕೋಣೆಗಳಲ್ಲಿ ಸಂಜೆಯ ಹೊತ್ತು ಕೆಲವು ಉತ್ಸಾಹಿಗಳು ಕುಳಿತು ಸ್ವ-ಸಂತೃಪ್ತಿಗಾಗಿ ತಾಳಮದ್ದಲೆ ನಡೆಸತೊಡಗಿದ್ದರು. ಕ್ರಮೇಣ ಸುತ್ತಮುತ್ತಲಿನ ಜನರು ಪುಕ್ಕಟೆಯಾಗಿ ಕೇಳಲು ಬಂದು ಕುಳಿತುಕೊಳ್ಳತೊಡಗಿದಾಗ ಇಂಥ ಕೂಟಗಳ ರಸಾಸ್ವಾದನೆಗೆ ಪ್ರೋತ್ಸಾಹ ದೊರೆಯಿತು. ಉದ್ದೇಶ ತಮ್ಮ ಮನಃತೃಪ್ತಿಯಾದರೂ ಆ ಅರ್ಥಧಾರಿಗಳು ಸಾಕಷ್ಟು ವಿದ್ಯಾವಂತರಾಗಿದ್ದು, ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಇತ್ಯಾದಿ ಕಾವ್ಯಗಳನ್ನು ಅಭ್ಯಾಸ ಮಾಡಿಕೊಂಡೇ ಅರ್ಥಕ್ಕೆ ಕೂರುತ್ತಿದ್ದರು.
ಇಂಥ ತಾಳಮದ್ದಲೆ ಕೂಟಗಳ ಜನಪ್ರಿಯತೆ ಎಷ್ಟೊಂದು ಬೆಳೆಯಿತೆಂದರೆ ಜನಸಾಮಾನ್ಯರೆನ್ನುವವರು ಕೂಡ ತಿಂಗಳುಗಟ್ಟಲೆ ಅವರ ಅರ್ಥಧಾರಿಕೆಯ ಮಾತುಗಳನ್ನು ಪೆಪ್ಪರಮಿಂಟಿನಂತೆ ಸವಿಯಲು ಆರಂಭಿಸಿದ್ದರು. ಟೆಲಿವಿಷನ್‌ನಲ್ಲಿ ರಾಮಾಯಣ- ಮಹಾಭಾರತಗಳ ಪ್ರಸಾರವಾಗುತ್ತಿದ್ದಾಗ ಮದುವೆ ಮಂಟಪಗಳಲ್ಲಿ ಕೂಡಾ ಸೆಟ್ ಹಾಕಿ ತೋರಿಸುತ್ತಿದ್ದರಲ್ಲ ! ಹಾಗೆಯೇ, ಎಲ್ಲ ಸಮಾರಂಭಗಳಲ್ಲಿ ಅವರ ಮಾತುಗಾರಿಕೆಯ ಪುನರಾವರ್ತನೆಯಾಗತೊಡಗಿತ್ತು.
ನನ್ನ ಹುಟ್ಟೂರು ಕಾಸರಗೋಡು ತಾಲೂಕಿನ ಪೆರ್ಲ ಕೂಡ ಅಂಥ ಒಂದು ಪ್ರಮುಖ ಹಳ್ಳಿಯಾಗಿದ್ದು, ಅಲ್ಲಿ ಪ್ರಸಿದ್ಧ ಅರ್ಥಧಾರಿ ಪೆರ್ಲ ಕೃಷ್ಣ ಭಟ್ಟರ ನೇತೃತ್ವದಲ್ಲಿ ತಾಳಮದ್ದಲೆಯ ಕೂಟ ಆಗಾಗ ನಡೆಯುತ್ತಿತ್ತು. ಅವರು ಸಮರ್ಥ ಆರ್ಗನೈಸರ್ ಕೂಡ. ಆ ಕೂಟಗಳಿಗೆ ಶೇಣಿ ಗೋಪಾಲಕೃಷ್ಣ ಭಟ್ಟರು, ದೇರಾಜೆ ಸೀತಾರಾಮಯ್ಯನವರು, ಮೂಡಬಿದರೆ ಕಾಂತ ರೈಗಳು- ಎಲ್ಲ ಅರ್ಥ ಹೇಳಲು ಬರುತ್ತಿದ್ದರು. ಭಾಗವತಿಕೆಗೆ ಹೇಗೂ ಹಿರಿಯ ಬಲಿಪ ನಾರಾಯಣ ಭಾಗವತರೇ ಇದ್ದರು. ಅವರ ಮನೆ ನಮ್ಮ ಮನೆಯ ಸಮೀಪವೇ ಇತ್ತು. ಆಗಿನ ಜನರಿಗೆ ಸಮಯ ತುಂಬ ಇತ್ತು. ಹಾಗಾಗಿ, ಆಗ ಇಡಿಯ ರಾತ್ರಿ ಕೂಡ ತಾಳಮದ್ದಲೆ ನಡೆಯುತ್ತಿತ್ತು ಎಂದು ನನ್ನ ನೆನಪು. ಕುರುಕ್ಷೇತ್ರ, ಭೀಷ್ಮ ಪರ್ವ, ಭೀಷ್ಮ ವಿಜಯ, ಕರ್ಣಾವಸಾನ, ಶರಸೇತು ಬಂಧನ, ಅಂಗದ ಸಂಧಾನ, ಇಂದ್ರಜಿತು ಕಾಳಗ, ಕೃಷ್ಣಾರ್ಜುನ ಕಾಳಗ… ಹೀಗೆ ಹತ್ತೈವತ್ತು ಪ್ರಸಂಗಗಳು! ಒಂದು ಹಬ್ಬದ ವಾತಾವರಣದಲ್ಲಿ ಅವೆಲ್ಲ ನಮ್ಮ ಭಾಷೆಯನ್ನು ತಿದ್ದಿದುವು.
ಶಾಸ್ತ್ರೀಯ ಸಾಹಿತ್ಯದಲ್ಲಿ ನನ್ನ ಆಸಕ್ತಿ ಬೆಳೆದಂತೆಲ್ಲ ಕುಮಾರವ್ಯಾಸ, ಜೈಮಿನಿ, ರನ್ನ ಇವರನ್ನು ಓದುವಾಗ ಚಿಕ್ಕಂದಿನಲ್ಲಿ ಕೇಳಿದ ಈ ಅರ್ಥಧಾರಿಗಳ ಮಾತುಗಳು ನನಗೆ ನೆನಪಾಗುತ್ತಿದ್ದುವು. ದುರ್ಯೋಧನನ ಬಾಯ್ದಂಬುಲಕೆ ಕೈ ಚಾಚುವರೆ? ಕಲಹದಲಿ ನಿನ್ನಡಿಯೊಳೆನ್ನಯ ತಲೆಯನೈದೆ ಸಮರ್ಪಿಸುವೆನು. ಆದರೆ ನಿನಗಳುಕೆ, ಇದು ದಿಟ ರಣಮಹೋತ್ಸವವೆನ್ನ ಮತ, ಬೇರೆ ಮತಪಥಗಳೆನಗಿಲ್ಲ ಈ ರೀತಿ ಪುಸ್ತಕದ ಭಾಷೆಯನ್ನು ನಮ್ಮ ರಕ್ತದಲ್ಲಿ ಸೇರಿಸಿದ ಮಹಾನುಭಾವರಿವರೆಲ್ಲ.
ನಾನು ಕತೆಗಳನ್ನು ಬರೆಯಲು ಆರಂಭಿಸಿ ಪತ್ರಿಕೆಗಳಿಗೆ ಕಳುಹಿಸಿದಾಗ ಅವೆಲ್ಲ ಪ್ರಕಟವಾಗುತ್ತಿದ್ದುವು. ಆಗ ಅವು ಶುದ್ಧ ಭಾಷೆಯ ಕಾರಣದಿಂದ ಪ್ರಕಟವಾಗುತ್ತಿದ್ದಿರಬೇಕಲ್ಲದೆ, ಸಾಹಿತ್ಯಿಕ ಮೌಲ್ಯಕ್ಕಾಗಿ ಅಲ್ಲ ಎಂಬ ಗುಮಾನಿಯಿರುತ್ತಿತ್ತು. ಅದಕ್ಕೆ ಮುಂದೆ ಇಂಬು ದೊರಕಿದ್ದು ಕೆಲವು ಸಂಪಾದಕ ಗೆಳೆಯರೊಡನೆ ಹರಟೆ ಹೊಡೆಯುವಾಗ, ಅವರು ತಮಗೆ ಬರುತ್ತಿದ್ದ ನೂರಾರು ಕತೆಗಳಲ್ಲಿ ಎಷ್ಟು ಕಾಗುಣಿತದ ತಪ್ಪುಗಳು ಇರುತ್ತವೆಂದರೆ ಓದಲು ಕೂಡ ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಿದ್ದ ಮಾತು.
ಒಂದು ಪ್ರದೇಶದ ಭಾಷೆಯನ್ನು ಇಷ್ಟೆಲ್ಲ ರೀತಿಯಲ್ಲಿ ಬೆಳೆಯಿಸಿದ ಈ ಕಲಾವಿದರ ಕೊಡುಗೆಗಳಿಗೆ ಸೂಕ್ತ ರೀತಿಯ ಮನ್ನಣೆ ದೊರಕಿದೆಯೆ? ಈಗಲೂ ಯಕ್ಷಗಾನ, ತಾಳಮದ್ದಲೆ ಕಲಾವಿದರಿಗೆ ಮನ್ನಣೆ ದೊರಕುವುದು ಅಭಿಮಾನಿಗಳಿಂದ ಮಾತ್ರ. ಕೇರಳದಲ್ಲಿ ಕಥಕಳಿಯೇ ಮುಂತಾದ ದೃಶ್ಯ ಕಲಾವಿದರಲ್ಲಿ ಮದ್ದಲೆ ಬಾರಿಸುವವರಿಗೂ ಪದ್ಮಶ್ರೀ ಪ್ರಶಸ್ತಿ ದೊರಕಿದೆ. ಮದ್ದಲೆ ಬಾರಿಸುವವರು ಕನಿಷ್ಠರು ಎಂದು ಈ ಮಾತು ಹೇಳುತ್ತಿಲ್ಲ. ಆದರೆ, ಕರ್ನಾಟಕದ ಯಕ್ಷಗಾನ ಕಲಾವಿದರಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗ್ಗಡೆಯವರೊಬ್ಬರಿಗೆ ಮಾತ್ರ ಪದ್ಮಶ್ರೀ ಸಿಕ್ಕಿದೆ ಬಿಟ್ಟು ಬೇರೆ ಯಾರಿಗೂ ಸಿಕ್ಕಿಲ್ಲ. ಕನಿಷ್ಠ ಮೂವತ್ತು-ನಲ್ವತ್ತು ಮಂದಿಗಾದರೂ ಸಿಕ್ಕಬೇಕಿತ್ತು. ಅಷ್ಟು ಅರ್ಹತೆ ಅವರಿಗೆ ಇದ್ದೇ ಇದೆ. ಕರ್ನಾಟಕ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಿದರೆ ಮಾತ್ರ ಪದ್ಮ ಪ್ರಶಸ್ತಿಗಳು ಲಭ್ಯವಾಗುತ್ತವೆ. ಆದರೆ, ಪ್ರಭುತ್ವದ ದೃಷ್ಟಿ ಇವರ ಮೇಲೆ ಬೀಳುತ್ತಿಲ್ಲ ಅನ್ನುವುದು ಖೇದದ ಮಾತು. ಇಷ್ಟಕ್ಕೂ ಪದ್ಮ ಪ್ರಶಸ್ತಿಯಿಂದ ಕಾಸಿನ ಫಾಯಿದೆಯಿಲ್ಲ ಎಂದು ಯಕ್ಷಗಾನ ಕಲಾವಿದರು ನಿರಾಳವಾಗಿದ್ದು ತಮ್ಮ ಭಾಷೆ ಬೆಳೆಸುವ ಕಾಯಕವನ್ನು ಮೌನವಾಗಿ ಮಾಡುತ್ತಿದ್ದಾರೆ.
ಗೋಪಾಲಕೃಷ್ಣ ಪೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.