ದೇವರು ಹಚ್ಚಿದ ದೀಪ


Team Udayavani, Dec 22, 2019, 5:31 AM IST

cd-10

ಕ್ಷಮೆಯ ಬೆಳಕಿನಲ್ಲಿದೆ ದೇವರನ್ನು ತಲುಪುವ ಹಾದಿ. ಕ್ರಿಸ್‌ಮಸ್‌ ಸಂದರ್ಭದಲ್ಲಿ ಎಲ್ಲರ ಮನದಲ್ಲಿಯೂ ಬೆಳಕು ಮೂಡಲಿ. ಕೊಟ್ಟಷ್ಟೂ ಪಡೆಯುತ್ತೇವೆ ಎಂದು ಸಾರಿದ ದೇವರ ಮಾತು ನಿಜವಾಗಲಿ.

ಯೇಸುವಿನ ಕರ್ಮಭೂಮಿ ಜೆರುಸಲೇಮ್‌ಗೆ ಮೂರು ಬಾರಿ ಹೋಗಿದ್ದೇನೆ. ಯೇಸುವಿನ ಹೆಜ್ಜೆಗಳು ಬಿದ್ದ ಆ ಹಾದಿಯಲ್ಲಿ ನಡೆದಂತೆ, ಯೇಸುವಿನ ಕ್ಷಮೆಯ ನೆರಳಲ್ಲಿ, ಕರುಣೆಯ ಬೆಳಕಲ್ಲಿ ಎದೆಯಲ್ಲಿ ಹಬೆಯಾದ ತಳಮಳಗಳೆಲ್ಲವೂ ದ್ರವಿಸಿ ಅಗಾಧ ಶಾಂತಿಯ ಅನುಭವವಾಗಿದೆ.

ದೇವಸುತ ಜನಿಸಿದ್ದ ಬೆತ್ಲೆಹೆಮ್‌
ಇಲ್ಲೇ ಬಗಲಲ್ಲಿ, ಇಸ್ರೇಲ್‌ ಏರು ಎತ್ತರಕ್ಕೆ ಕಟ್ಟಿ ನಿಲ್ಲಿಸಿದ ಗೋಡೆಯಾಚೆಗಿರುವ “ವೆಸ್ಟ್‌ ಬ್ಯಾಂಕ್‌’ಗೆ ಒಮ್ಮೆ ಭೇಟಿ ಕೊಟ್ಟಿರುವೆ. ಪ್ಯಾಲೆಸ್ಟೆ ನ್‌ ಜನರನ್ನು ತಮ್ಮದೇ ನೆಲದಲ್ಲಿ ಬಂಧಿಗಳಾಗಿಸಿರುವ ತಾಣವದು. ಯೇಸುಸ್ವಾಮಿ ಹುಟ್ಟಿದ ಬೆತ್ಲೆಹೆಮ್‌ ಈ ವೆಸ್ಟ್‌ ಬ್ಯಾಂಕ್‌ನಲ್ಲಿದೆೆ. ಒಂದು ಕೊಟ್ಟಿಗೆಯಲ್ಲಿ ಜನಿಸಿದ್ದ ಲೋಕೋದ್ಧಾರಕ. ಯೇಸು ಹುಟ್ಟಿದ ತಾಣದಲ್ಲಿ ಇಂದು “ನೇಟಿವಿಟಿ ಚರ್ಚ್‌’ ನಿಂತಿದೆ. ಚರ್ಚಿನ ಒಳ ಹೊಕ್ಕಿದ್ದೆ. ಯೇಸು ಹುಟ್ಟಿದರು ಎಂಬ ಸ್ಥಳವನ್ನು ಒಂದು ನಕ್ಷತ್ರದ ಚಿತ್ರದಿಂದ ಅಲಂಕರಿಸಿದ್ದಾರೆ. ಬಾಗಿ ನಮಿಸಿದ್ದೆ.

ಬಾಲಯೇಸು ಬೆಳೆದದ್ದು ನಜ್ರತ್‌ನಲ್ಲಿ. ಮತ್ತೆ ದೊರೆಯುವ ಉಲ್ಲೇಖಗಳೆಲ್ಲ, ಯೇಸು ಪ್ರಬುದ್ಧರಾಗಿ ಧರ್ಮೋಪದೇಶ ನೀಡುವ ಸಮಯದ್ದು. ಒಬ್ಬೊಬ್ಬರಾಗಿ 12 ಜನ ಶಿಷ್ಯರು, ಧರ್ಮ ಪ್ರಚಾರಕರಾಗಿ ಯೇಸುವನ್ನು ಹಿಂಬಾಲಿಸಿದರು. ಇವರೊಡನೆ ಯೇಸು ಹಳ್ಳಿ ಹಳ್ಳಿಗಳಿಗೆ ಹೋದರು. ಸುವಾರ್ತೆಯನ್ನು ಸಾರಿದರು. ನೊಂದವರನ್ನು, ಕಷ್ಟದಲ್ಲಿದ್ದವರನ್ನು ಸಮಾಧಾನ ಮಾಡಿದರು. ಪ್ರೀತಿ, ಪ್ರೇಮ, ಕರುಣೆ, ಕ್ಷಮೆಯನ್ನು ಬೋಧಿಸಿದರು. ಅವರು ಹೋದಲ್ಲೆಲ್ಲ ನೂರು ಸಾವಿರ ಜನ ಅವರ ಸುತ್ತ ನೆರೆದರು. ಯೇಸುವಿನ ಮಾತುಗಳು ಅವರ ಅಂತರಂಗಕ್ಕೆ ಇಳಿದವು. “ಯೇಸು ನಮ್ಮ ದೊರೆ’ ಎಂದು ಘೋಷಿಸಿದರು.

ಯೇಸು ಎಂದರೆ “ಯಹೂದಿಗಳ ಅರಸ’ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಯೇಸು ತುಂಡು ನೆಲವನ್ನು ಹಿಂಸೆಯಿಂದ, ಆಕ್ರಮಣದಿಂದ ಗೆದ್ದು ನೆತ್ತರಿನ ನೆಲದಲ್ಲಿ ಧ್ವಜವನ್ನು ಊರಿ ಸಾರ್ವಭೌಮನಾಗಲು ಹೊರಟವರಲ್ಲ. ಪ್ರೀತಿ, ಕರುಣೆ, ಶಾಂತಿಯ ದೇವರ ಸಾಮ್ರಾಜ್ಯಕ್ಕೆ ಪ್ರವೇಶಿಸುವ ಮಾರ್ಗದರ್ಶಿ ಅವರಾಗಿದ್ದರು. ಈ ಸೂಕ್ಷ್ಮವನ್ನು ಅರಿಯುವ ಮನಸ್ಸು ಬುದ್ಧಿ ಎರಡೂ ಆಳುವ ದೊರೆಗಳಿಗಾಗಲಿ, ಪಿತೂರಿ ನಡೆಸಿದ ದೇವಾಲಯದ ಪುರೋಹಿತ ಹಾಗೂ ವ್ಯಾಪಾರಿ ವರ್ಗಕ್ಕಾಗಲಿ ಇರಲಿಲ್ಲ. ಯೇಸುವಿನ ಜನಪ್ರಿಯತೆ, ಜನರು ಅವರ‌ನ್ನು ಕೊಂಡಾಡುವ ರೀತಿ, ಆ ಮಾತುಗಳಲ್ಲಿದ್ದ ಪ್ರೀತಿ, ಅವರೆಲ್ಲ ದೇವಸುತನನ್ನು ಹಿಂಬಾಲಿಸುವ ಬಗೆ, ಇವರಲ್ಲಿ ಅಸೂಯೆಯ ಜ್ವಾಲಾಮುಖೀಯನ್ನೇ ಆಸ್ಫೋಟಿಸಿತ್ತು. ಯೇಸುವಿನ ಬದುಕಿನ ಬಹುಮುಖ್ಯ ಅಧ್ಯಾಯ, ಅವರು ಜಗತ್ತಿಗೆ ನೀಡಿ ಹೋದ ಸಂದೇಶ ನಮಗೆ ಅರಿವಾಗುವುದು ಜೆರುಸಲೇಮ್‌ನಲ್ಲಿ. ಯೇಸು ನಡೆದ ಹಾದಿಯಲ್ಲಿ ನಾನು ನಡೆಯ ಬಯಸಿದ್ದೆ.

ಜೆರುಸಲೇಮ್‌ಗೆ ಮೊದಲ ಭೇಟಿ
ಇಸವಿ 2002ರಲ್ಲಿ ಜೆರೂಸಲೇಮ್‌ಗೆ ನನ್ನ ಮೊದಲ ಭೇಟಿ. ಇಸ್ರೇಲ್‌-ಪ್ಯಾಲೆಸ್ಟೈನ್‌ ಸಂಘರ್ಷ ಪರಾಕಾಷ್ಠೆ ಮುಟ್ಟಿದ ವರ್ಷಗಳವು. ಇಸ್ರೇಲ್‌-ಪ್ಯಾಲೆಸ್ಟೆ çನ್‌ ನಡುವಿನ ಘರ್ಷಣೆ‌ ಇಂದಿಗೂ ಮುಂದುವರೆದಿದೆ. ಆದರೆ, ಅಂದು ಹಾದಿಬೀದಿಯಲ್ಲಿ ಆಸ್ಫೋಟಗಳಿದ್ದವು.

ಇಂತಹ ಸಮಯದಲ್ಲಿ ಜೆರುಸಲೇಮ್‌ಗೆ ಬಂದಾಗ ಜೆರುಸಲೇಮ್‌ನ ಪುರಾತನ ಗಲ್ಲಿಗಳು ಖಾಲಿ ಖಾಲಿ ಇದ್ದವು. ಯೇಸುವಿನ ಹಾದಿಯಲ್ಲಿ ಅಲ್ಲಿ ನಿಂತು, ಇಲ್ಲಿ ಕುಳಿತು ಚರಿತ್ರೆಯ ಪುಟಗಳಲ್ಲಿ ಕಳೆದು ಹೋಗಲು ನನಗೆ ಸಾಧ್ಯವಾಗಿತ್ತು. ಗುಡ್ಡದ ಮೇಲೆ ಯೇಸು ಶಿಲುಬೆಗೇರಿದ ಸ್ಥಳದಲ್ಲಿ ನಿಂತ ಹೋಲಿ ಸೆಪಲ್‌ಕರ್‌ ಚರ್ಚ್‌ ನಲ್ಲಿ ಬೆರಳೆಣಿಕೆಯಷ್ಟು ಸ್ಥಳೀಯರು. ಸಣ್ಣ ಗುಹೆಯೊಳಗೆ ಹೊಕ್ಕು, ಯೇಸುವಿನ ಸಮಾಧಿಯ ಎದುರು ಮೌನದಿಂದ ಕಣ್ಣು ಮುಚ್ಚಿ ಧ್ಯಾನದಲ್ಲಿ ಕುಳಿತುಕೊಳ್ಳುವಷ್ಟು ಏಕಾಂತವಿತ್ತು.
ನಂತರದ ವರ್ಷಗಳ ಭೆಟ್ಟಿಯಲ್ಲಿ ಬಂದೋಬಸ್ತು ಹೆಚ್ಚಿತ್ತು. ಪ್ರವಾಸಿಗಳು ಮುಗಿ ಬಿದ್ದು, ಹಾದಿಬೀದಿಗಳಲ್ಲಿ ಜನಸಂದಣಿ ವಿಪರೀತವಾಗಿತ್ತು.
.
ಅಗೆದಷ್ಟೂ ಇತಿಹಾಸ ತೆರೆದುಕೊಳ್ಳುತ್ತಿರುವ ತಾಣ ಜೆರುಸೆಲೇಮ್‌. ಹಾವಿನಂತೆ ತಿರುವಿ ಹರಿದ ಪುರಾತನ ಹಾದಿಯಲ್ಲಿ ನಮ್ಮ ಕಾರು ಹೊರಟಿತ್ತು. ಅಷ್ಟು ದೂರದಲ್ಲಿ ಮಹಾದ್ವಾರ ಕಾಣುತ್ತಿದ್ದಂತೆ ಇಳಿದು ನಡೆದೆವು. “ಲಯನ್ಸ್‌ ಗೇಟ್‌’ ಭವ್ಯವಾಗಿ ಎದುರು ನಿಂತಿತ್ತು. ಇದೇ ಮಹಾದ್ವಾರದಲ್ಲಿ ಯೇಸು ಪ್ರವೇಶಿಸಿದ್ದರು. ಪ್ರೀತಿ, ಕ್ಷಮೆ, ಕರುಣೆಯೇ ದೇವರಲ್ಲವೆ? ಅವುಗಳ ಅಪರವತಾರವಾದ ಯೇಸು, ದೇವ ಪುತ್ರ.

ಇಂದು ಲಯನ್ಸ್‌ ಗೇಟ್‌ ಎನ್ನುವ ಈ ಮಹಾದ್ವಾರವನ್ನು ಯೇಸುವಿನ ಜೀವಿತ ಕಾಲದಲ್ಲಿ “ಲ್ಯಾಂಬ್ಸ್ ಗೇಟ್‌’ ಎಂದು ಕರೆಯುತ್ತಿದ್ದರು. ಜೆರುಸಲೇಮ್‌ನ ಗುಡ್ಡದ ಮೇಲಿನ ದೇವಾಲಯದಲ್ಲಿ ಬಲಿ ಕೊಡಲು ಕರೆತರುತ್ತಿದ್ದ ಹರಕೆಯ ಕುರಿಗಳು ಇದೇ ದ್ವಾರದಿಂದ ಪ್ರವೇಶಿಸುತ್ತಿದ್ದವು. ಯೇಸು ನಡೆದ ಹಾದಿ ಇಲ್ಲಿಂದಲೇ ಆರಂಭವಾಗುತ್ತದೆ.

ಮಾರುಕಟ್ಟೆಯಾಗಿತ್ತು ದೇವಮಂದಿರ
ಕ್ರಿ.ಶ. 30 ಅಥವಾ 33ರ ವರ್ಷ. ಯಹೂದಿಗಳಿಗೆ ಪವಿತ್ರವಾದ “ಪಾಸ್‌ಓವರ್‌’ನ ದಿನದ ತಯಾರಿ ನಡೆದಿತ್ತು. ಯಹೂದಿಗಳಿಗೆ “ಪಾಸ್‌ಓವರ್‌’ ಸುಗ್ಗಿಯ ಹಬ್ಬ. ಬೈಬಲ್‌ನ ಹೊಸ ಒಡಂಬಡಿಕೆ ನಮಗೆ ಯೇಸು ಯಹೂದಿಗಳ ಹಬ್ಬದ ಕಾರಣಕ್ಕೆ ಜೆರೂಸಲೇಮ್‌ಗೆ ಬಂದದ್ದನ್ನು ತಿಳಿಸುತ್ತದೆ. ಯೇಸು ಕೊನೆಯ ಬಾರಿ ಜೆರುಸಲೇಮ್‌ಗೆ ಬಂದಿದ್ದರು. ದೇವಾಲಯದ ಹೊರ ಆವರಣಕ್ಕೆ ಬರುತ್ತಾರೆ, ನೋಡಿದ್ದೇನು ದೇವರ ಮನೆ ಮಾರುಕಟ್ಟೆಯಾಗಿತ್ತು. ಪರಮ ಲೋಭದ ವ್ಯಾಪಾರ‌ ಕೇಂದ್ರವಾಗಿತ್ತು. ಹಸು, ಕರು, ಕುರಿ, ಪಾರಿವಾಳಗಳ ಮಾರಾಟ.

ದೇವಾಲಯದ ಪರಿಸರದಲ್ಲಿ ಯಹೂದಿಗಳ ನಾಣ್ಯಗಳಷ್ಟೇ ಚಾಲನೆಯಲ್ಲಿ ಇದ್ದದ್ದು. ದೇವಸ್ಥಾನದಲ್ಲಿ ಪ್ರಾಣಿಗಳನ್ನು ಬಲಿ ಕೊಡಲು ದೂರದೂರದಿಂದ‌ ಜೆರುಸಲೇಮ್‌ಗೆ ಬಂದ ಭಕ್ತರು ದೇವರಿಗೆ ಅರ್ಪಿಸಲಿರುವ ಪ್ರಾಣಿಗಳನ್ನು ಕೊಳ್ಳಲು ತಮ್ಮ ದೇಶದ ಹಣವನ್ನು ಇಲ್ಲಿ ಬದಲಿಸಿ ಕೊಳ್ಳಬೇಕಿತ್ತು.
ದೇವಸ್ಥಾನದ ಅಂಗಳದಲ್ಲಿ ಕುಳಿತು, ದೇವರ ಎದುರೇ ಈ ವ್ಯಾಪಾರಿಗಳು ಅಧಿಕ ಲಾಭಕ್ಕೆ ಹಣವನ್ನು ಬದಲಿಸುತ್ತಿದ್ದರು. ಅವರು ಹೇಳಿದ್ದೇ ಬೆಲೆ. ಪರಮ ಸಹನೆಯ ಯೇಸುವಿಗೂ ಕೋಪ ಬರಿಸಿತ್ತು ದೇವರ ಹೆಸರಲ್ಲಿ ನಡೆಯುತ್ತಿದ್ದ ಈ ಅನ್ಯಾಯದ ವ್ಯವಹಾರ. “ತೊಲಗಿ ಇಲ್ಲಿಂದ ಹೊರಗೆ, ನನ್ನ ತಂದೆಯ ಮನೆಯನ್ನು ಮಾರುಕಟ್ಟೆಯಾಗಿಸಿದ್ದೀರಿ’ ಯೇಸು ಕೋಪದಿಂದ ಗುಡುಗಿದ್ದರು. ತಮ್ಮ ಲಾಭಕ್ಕೆ ಕಂಟಕವಾದ ಯೇಸುವಿನ ಮೇಲೆ ಅಲ್ಲಿಯ ಯಹೂದೀ ವ್ಯಾಪಾರಿಗಳಿಗೆ, ಮಂದಿರದ ಪುರೋಹಿತ ವರ್ಗಕ್ಕೆ ಅಸಾಧ್ಯ ಕೋಪ ಬಂದಿತ್ತು. ಅವರ ಮೇಲೆ ಹಗೆ ಸಾಧಿಸಿದರು.
.
.
ಕ್ರೌರ್ಯದ ಸಾಮ್ರಾಜ್ಯಗಳ ಕಾದಾಟಗಳ ನಡುವೆ ಯೇಸು ಬೋಧಿಸಿದರು: ಕಣ್ಣಿಗೊಂದು ಕಣ್ಣು ಕಿತ್ತುಕೊಳ್ಳಬೇಡಿ. ಹಲ್ಲಿಗೊಂದು ಹಲ್ಲು ಮುರಿಯಬೇಡಿ. ಯಾರಾದರೂ ನಿಮ್ಮ ಒಂದು ಕೆನ್ನೆಗೆ ಹೊಡೆದರೆ, ಮತ್ತೂಂದನ್ನು ತೋರಿಸಿ. ಪ್ರೀತಿಯನ್ನು, ಶಾಂತಿಯನ್ನು, ಅಹಿಂಸೆಯನ್ನು ಬೋಧಿಸಿದರು.

ಆ ದಿನ ಜೆರುಸಲೇಮ್‌ಗೆ ಬಂದ ಯೇಸು, “ಕುರಿಯ ದ್ವಾರ’ದ ಬಳಿ ಇದ್ದ ಕೊಳಕ್ಕೆ ಬಂದಿದ್ದರು. ಅಲ್ಲಿ ಸುತ್ತುವರೆದ ಐದು ಸ್ತಂಭಗಳ ಮೊಗಸಾಲೆಯಲ್ಲಿ ನರಳುತ್ತಿದ್ದ ಓರ್ವ ರೋಗಿಯನ್ನು ಸಾಂತ್ವನಗೊಳಿಸಿ, ಗುಣವಾಗಿಸಿದರೆಂದು ಬೈಬಲ್‌ ತಿಳಿಸುತ್ತದೆ.

ಇಂದು ಕುರಿಯ ಬಾಗಿಲಿನಿಂದ ನಾವು ಒಳ ಬಂದಂತೆ, ಉತVನನದ ಮೂಲಕ ತೆರೆದಿಟ್ಟ ಪುರಾತನವಾದ ಮುರಿದ ಸ್ತಂಭಗಳು ಮತ್ತು ಕೊಳದ ಪಳಿಯುಳಿಕೆಗಳು ಕಂಡವು.
ಈ ಕೊಳವಿದ್ದ ತಾಣದಿಂದಲೇ ಇಂದು, ವೀ ಡೊಲೊರೋಸಾ ಎಂದು ಕರೆಯುವ ಯೇಸುವಿನ ಕೊನೆಯ ಪಯಣದ ಹಾದಿ ಆರಂಭವಾಗುತ್ತದೆ. ಇದನ್ನು “ಶಿಲುಬೆಯ ಹಾದಿ’ ಎಂದೂ ಕರೆಯುತ್ತಾರೆ. ನಾನು ನಡೆದು ಹೊರಟದ್ದು ಈ ನೋವಿನ ಹಾದಿಯಲ್ಲಿ. ಯೇಸುವಿನ ಜೀವಿತ ಕಾಲದಲ್ಲಿ ರೋಮನ್ನರ ಆಳ್ವಿಕೆ ಇತ್ತು. ಪಿಲಾತೆ ರೋಮಿನ ಪ್ರತಿನಿಧಿ, ಜೆರುಸಲೇಮ್‌ನ ರಾಜ್ಯಪಾಲ. ಆದರೆ, ಯಹೂದಿಗಳ ವಿಚಾರಣೆಗೆ, ಯಹೂದಿ ನ್ಯಾಯಮಂಡಲಿ ಇದ್ದು, ಯಹೂದಿ ಕಾಯಿದೆಗಳ ಪ್ರಕಾರ ತೀರ್ಮಾನ ನೀಡುತ್ತಿತ್ತು. ನಂತರ ಅಪರಾಧಿಯನ್ನು ಎಳೆತಂದು ಪಿಲಾತೆಯ ಎದುರು ನಿಲ್ಲಿಸಿ ಶಿಕ್ಷೆ ವಿಧಿಸಲು ಹೇಳುವ ಕ್ರಮವಿತ್ತು.

ಶೋಕದ ಹಾದಿ
ನಡೆದಂತೆ, ಶೋಕದ ಹಾದಿಯಲ್ಲಿ ನಿಂತಿತ್ತು ಚರ್ಚ್‌ ಆಫ್ ಕಂಡೆಮ್ನೆಷನ್‌ ಅಂಡ್‌ ಇಂಪೊಸಿಷನ್‌ ಆಫ್ ಕ್ರಾಸ್‌ ಎಂದು ಕರೆಯುವ ರೋಮನ್‌ ಕ್ಯಾಥೊಲಿಕ್‌ ಚರ್ಚ್‌. ಮಂದಿರದಲ್ಲಿ ಸಭೆ ಸೇರಿದ್ದ ದೇವಾಲಯದ ಪ್ರಮುಖ ಪುರೋಹಿತನ ನೇತೃತ್ವದ ಯಹೂದಿಗಳ “ನ್ಯಾಯ ಮಂಡಲಿ’ ಯೇಸುವಿನ ವಿಚಾರಣೆಯನ್ನು ಮಾಡಿ, ಆರೋಪಗಳ ಸುರಿಮಳೆಗರೆದು ಆತನನ್ನು ರೋಮನ್‌ ಗವರ್ನರ್‌ ಪಿಲಾತೆಯ ಎದುರು ಎಳೆತಂದು ನಿಲ್ಲಿಸಿದ ತಾಣವಿದು. ಅಪರಾಧಿಯೆಂದು ತೀರ್ಮಾನಿಸಿ ತನ್ನ ಮೇಲೆ ಆರೋಪಗಳ ಸುರಿಮಳೆಯನ್ನೇ ಕ‌ರೆದರೂ ಯೇಸು ಯಾವುದಕ್ಕೂ ಉತ್ತರಿಸಲಿಲ್ಲ. ಆ ಸುಳ್ಳು ಆರೋಪಗಳಿಗೆ ಉತ್ತರಿಸುವುದರಲ್ಲಿ ಅರ್ಥವಿರಲಿಲ್ಲ. ಅಲ್ಲಿ ನೆರೆದಿದ್ದುದು ಆತನ ಮೇಲೆ ಸೇಡು ಕಾರುತ್ತ ನಿಂತ ದ್ವೇಷದ ಗುಂಪು. ಯೇಸುವಿನ ಎದೆಯಲ್ಲಿ ಇದ್ದದ್ದು ಪ್ರೀತಿ ಮಾತ್ರ. ಮಂಜೇಶ್ವರ ಗೋವಿಂದ ಪೈ ಅವರ ಆ ಅಮರ ಗೀತೆಯ ಸಾಲುಗಳು ಹೇಳುವಂತೆ- ಲೋಕದುರುಪಾಪವಂ ಹೊತ್ತ ಕುರಿಮರಿಯಂತೆ, ಗಿಡುಗಗಳ ನಡುವೆ ತೂರಿದ ಕಪೋತಕದಂತೆ, ನಿಂದಿರುವ ಮನುಜಸುತನಾ ಜಗದ್ರಕ್ಷಕನು.

ಯೇಸುವಿನ ಮೇಲಿನ ಆರೋಪವಾದರೂ ಏನು? ಜಗತ್ತು ತಪ್ಪು ಹಾದಿಯಲ್ಲಿ ನಡೆದಾಗ, ವಿಚಾರವಂತರು, ಪ್ರಗತಿಪರರು, ಪ್ರವಾದಿಗಳು ಸದಾ ಜನರನ್ನು ಜಾಗೃತಗೊಳಿಸಲು ಪ್ರಯತ್ನಿಸಿದ್ದಾರೆ. ಇಂತಹವರಿಂದ ಸಾಮಾಜಿಕ ಕ್ರಾಂತಿಯಾಗುವ ಭಯ ಆಳುವ ಅರಸರಿಗೆ ಮತ್ತು ಅವರ ಹಿಂಬಾಲಕರಿಗೆ. ತಮ್ಮ ಸಿಂಹಾಸನವನ್ನು ಕಾಪಾಡಿಕೊಳ್ಳಲು ವಿಧಿಸುವ “ಸೆಡಿಷನ್‌’- ರಾಜದ್ರೋಹದ ಆರೋಪವನ್ನು ಅಸ್ತ್ರವಾಗಿ ಬಳಸುವುದು ಇಂದು, ನಿನ್ನೆಯ ಕತೆಯಲ್ಲ. ಯೇಸುವಿನ ಮೇಲೆ ಅದೇ ಆರೋಪವನ್ನು ಹೇರಿದ್ದರು. ಬದಲಾವಣೆಯ ಹರಿಕಾರರೆಲ್ಲರ ಮೇಲೆ ಹೇರುವ ರಾಜದ್ರೋಹದ ಆರೋಪ.

ಪಿಲಾತೆ ಎದುರು ನಿಲ್ಲಿಸಿ, “ತಾನು ಯಹೂದಿಗಳ ಅರಸನೆಂದು ಹೇಳಿಕೊಳ್ಳುತ್ತಾನೆ’ ಎಂದು ದೂರಿದರು. “ಜನರನ್ನು ಪ್ರಚೋದಿಸುತ್ತಿದ್ದಾನೆ, ತಪ್ಪು ಹಾದಿಗೆ ಎಳೆದೊಯ್ಯುತ್ತಿದ್ದಾನೆ’ ಎಂದು ಘೋಷಿಸಿದರು. ಯೇಸು ಶಾಂತವಾಗಿ ಉತ್ತರಿಸಿದ್ದರು : ತನ್ನದು ದೇವರ ಸಾಮ್ರಾಜ್ಯ. ಈ ಭೂಮಿಯ ಮೇಲಿನ ತುಂಡು ಭೂಮಿಯ ಆಕಾಂಕ್ಷೆ ತನ್ನದಲ್ಲ. ಮೊದಲಿಗೆ ಪಿಲಾತೆಗೆ ಯೇಸುವಿನಲ್ಲಿ ಅಂತಹ ತಪ್ಪುಗಳೇನೂ ಕಾಣುವುದಿಲ್ಲ. ಆದರೆ, ಯಹೂದಿಗಳ ನ್ಯಾಯಮಂಡಲಿ ಅವನನ್ನಾಗಲೇ ತಪ್ಪಿತಸ್ಥನೆಂದು ಘೋಷಿಸಿ, ಮರಣ ದಂಡನೆ ವಿಧಿಸುವಂತೆ ಒತ್ತಾಯಿಸುತ್ತಿದೆ.

“ತನ್ನನ್ನು ದೇವಪುತ್ರನೆಂದು ಕರೆದುಕೊಳ್ಳುತ್ತಾನೆ’ ಪುರೋಹಿತ ವರ್ಗ ದೂರಿತು. “ನಮ್ಮ ಯಹೂದಿ ಕಾಯಿದೆಯ ಪ್ರಕಾರ ಈತ ಸಾಯಲೇ ಬೇಕು’ ಎಂದು ಒತ್ತಾಯಿಸಿತು.
.
.
“ಪಾಸ್‌ಓವರ್‌’ ಹಬ್ಬಕ್ಕೆ ಯಹೂದಿಗಳು ದೂರ ದೂರದ ದೇಶಗಳಿಂದ ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಿಲಾತೆಗೆ ಈ ಯಹೂದಿಗಳನ್ನು ಎದುರು ಹಾಕಿಕೊಳ್ಳಲು ಮನಸ್ಸಿರಲಿಲ್ಲ. ಅವರು ದಂಗೆ ಏಳುತ್ತಾರೆ ಎಂಬ ಭೀತಿಯೂ ಸೇರಿತ್ತು. ಅವರ ಕಾಯಿದೆ, ಅವರು ನಿರ್ಧರಿಸಿದ್ದಾರೆ, ಜೊತೆಗೆ ರಾಜದ್ರೋಹದ ಆರೋಪ ಬೇರೆ ಇದೆ. ಯೇಸುವಿಗೆ ಶಿಲುಬೆಗೇರಿಸುವ ಮರಣ ದಂಡನೆ ವಿಧಿಸಿದ್ದಾಯಿತು.
“ನಿಮ್ಮ ಹೃದಯ ನಿರ್ಮಲವಾಗಿದ್ದರೆ, ನೀವು ದೇವರನ್ನು ಕಾಣುತ್ತೀರಿ’- ಯೇಸು ಹೇಳಿದ್ದರು. ಯೇಸು ಬಡವರಿಗೆ ಬೆಳಕಾಗಿ ಬಂದರು, ನೊಂದವರಿಗೆ ಸಾಂತ್ವನ ನೀಡಿದರು. ತಮ್ಮ ಕರುಣೆಯ ಬೆಳಕಲ್ಲಿ ಅವರ ಬದುಕಿನ ಕತ್ತಲನ್ನು ಕಳೆದರು. “ದೀನದಲಿತರು ದೇವರ ಸಾಮ್ರಾಜ್ಯವನ್ನು ಪಡೆಯುತ್ತಾರೆ’ ಎಂದು ಯೇಸು ಸಾರಿದರು. “ಹಿಂಸೆಯಿಂದ, ಪೌರುಷದಿಂದ ಏರಿ ಹೋಗಿ ಈ ನೆಲವನ್ನು ಗೆದ್ದುಕೊಳ್ಳಲಾರಿರಿ. ಮುಂದೊಮ್ಮೆ ದುರ್ಬಲರು ಈ ಭೂಮಿಯ ಒಡೆಯರಾಗುತ್ತಾರೆ’ ಎಂದು ಘೋಷಿಸಿದರು.

ಶಿಲುಬೆ ಹೊತ್ತರು ಯೇಸು
ಕಂಡೆಮ್ನೆಷನ್‌ ಚರ್ಚಿನ ಆವರಣದಲ್ಲಿ ನಾನು ನಿಂತಿದ್ದೆ. ಇಲ್ಲಿ ವಿಲಕ್ಷಣ ಮೌನವಿತ್ತು. ಯೇಸುವನ್ನು ದರದರ ಎಳೆದು ಇಲ್ಲಿಗೆ ತಂದಿದ್ದರು, ಪಿಲಾತೆಯ ಎದುರು ನಿಲ್ಲಿಸಿದ್ದರು. ಮುಳ್ಳಿನ ಬಳ್ಳಿಯನ್ನು ಸುತ್ತಿ ಕಿರೀಟದಂತೆ ಯೇಸುವಿನ‌ ತಲೆಯ ಮೇಲೆ ಬಡಿದು, ಬಲಗೈಗೊಂದು ಬೆತ್ತವನ್ನು ಇಟ್ಟು “ಹೇಲ್‌ ಯಹೂದಿಗಳ ಮಹಾರಾಜ’ ಎಂದು ಕೊಂಕಿಸಿ ನಕ್ಕಿದ್ದರು. “ಇವ ದೇವಸುತನಂತೆ’ ಅಣಕಿಸಿದ ಉದ್ರಿಕ್ತ ಗುಂಪು ಇಲ್ಲಿತ್ತು. ಯೇಸುವಿನ ಬೆನ್ನಿನ ಮೇಲಿನ ನಿಲುವಂಗಿ ಹರಿದಿದೆ. ಚಾಟಿಯ ಏಟಿನ ಬಾಸುಂಡೆಗಳಿಂದ ನೆತ್ತರಿನ ಹನಿಗಳು ಒಸರಿವೆ.  ಯೇಸು ನೊಂದವರ ಸೇವೆಗಿಳಿದ ಸೇವಕನೂ ಹೌದು, ಕರುಣೆಯ ಸಾಮ್ರಾಜ್ಯದ ಸಾರ್ವಭೌಮನೂ ಹೌದು. ಆತನ ತಲೆಯ ಮೇಲೆ ಒತ್ತಿ ನಿಂತ ಮುಳ್ಳಿನ ಕಿರೀಟ ಯೇಸುವಿನ ಎರಡೂ ಪಾತ್ರಗಳ ಪ್ರತೀಕವಾಗಿತ್ತು.

ಇದೇ ತಾಣದಲ್ಲಿ, ಯೇಸುವಿನ ಹೆಗಲ ಮೇಲೆ ಭಾರದ ಶಿಲುಬೆಯನ್ನು ಹೊರಿಸಲಾಗುತ್ತದೆ. ಯೇಸು ನೋವನ್ನು, ಅಪಮಾನವನ್ನು ತಡೆದುಕೊಳ್ಳಲು ಸಿದ್ಧವಿದ್ದು, ತಾನೊಂದು ಉದಾಹರಣೆಯಾಗಿ ಈ ಲೋಕದ ತಪ್ಪುಗಳಿಗೆ ಕನ್ನಡಿಯಾಗ ಬಯಸುತ್ತಾರೆ. ಶಿಲುಬೆ ಹೊತ್ತ ಯೇಸು ನಡೆಯುತ್ತಾರೆ, ಈ ದುಃಖದ ಹಾದಿಯಲ್ಲಿ. ಚರ್ಚಿನಿಂದ ಹೊರಬಂದ ನಾನು, ಅದೇ ಶಿಲುಬೆಯ ಹಾದಿಯಲ್ಲಿ ನಡೆಯತೊಡಗಿದೆ. ಜೆರುಸಲೇಮ್‌ನ ಪುರಾತನ ಗಲ್ಲಿಗಳು ಇಂದಿಗೂ ಹೆಚ್ಚು ಬದಲಾಗಿಲ್ಲ.

ಗೊಲ್ಗೊಥಾ ಗುಡ್ಡದ ಮೇಲೆ
ಈ ಹಾದಿ ಏರುತ್ತಾ ಹೋಗಿ, ಹೋಲಿ ಸೆಪಲ್‌ಕರ್‌ ಚರ್ಚಿನ ವಿಶಾಲವಾದ ಅಂಗಳದಲ್ಲಿ ನನ್ನನ್ನು ನಿಲ್ಲಿಸಿತ್ತು. ಎದುರಲ್ಲಿ ಭವ್ಯವಾದ ಎರಡು ಅಂತಸ್ತಿನ ಎತ್ತರದ ಚರ್ಚ್‌ ಕಂಡಿತು.
ಚರ್ಚಿನ ಒಳಗೆ ಹೊಕ್ಕಂತೆ ಬಲಕ್ಕೆ ಮೆಟ್ಟಿಲುಗಳು ಕಂಡವು. ಗೊಲ್ಗೊಥಾದ ಎತ್ತರಕ್ಕೆ ಕರೆದೊಯ್ಯುವ ಮೆಟ್ಟಿಲುಗಳು ಇವು. ಮೆಟ್ಟಿಲೇರಿ ನಾನು ನಿಂತ ಈ ಮಹಡಿ, ಅಂದು ಕಪಾಲಸ್ಥಾನವೆಂದ ಗೊಲ್ಗೊಥಾ ಗುಡ್ಡ. ಯೇಸುವನ್ನು ಶಿಲುಬೆಯ ಮೇಲೆ ಮಲಗಿಸಿ, ಮೊಳೆ ಹೊಡೆದ ತಾಣ. ಯೇಸುಸ್ವಾಮಿ ಶಿಲುಬೆಗೇರಿಸಿದ ತಾಣ. ಮೇಲೆ ಹೊಳೆವ ದೀಪಗಳು ತೂಗಾಡಿದ್ದವು. ಕೆಳಗೆ ಗಾಜಿನ ರಕ್ಷಣಾ ಕವಚದಡಿಯಲ್ಲಿ ಗುಡ್ಡದ ಕಠಿಣ ಶಿಲೆ ಕಾಣಿಸಿತ್ತು. ಯೇಸುವಿನ ಶಿಲುಬೆ ನಿಂತ ಜಾಗವನ್ನು ಗುರುತಿಸಿದ ವೃತ್ತಾಕಾರದ ಚಿಹ್ನೆ ನಡುವಿನಲ್ಲಿತ್ತು.

ಕತ್ತೆತ್ತಿ ಶಿಲುಬೆಗೇರಿದ ಯೇಸುವಿನ ಮೂರ್ತಿಯನ್ನೇ ತದೇಕಚಿತ್ತಳಾಗಿ ಅದೆಷ್ಟೋ ಹೊತ್ತು ನಿಂತು ನೋಡಿದ್ದೆ. ತಲೆಯ ಮೇಲೆೆ ಮುಳ್ಳಿನ ಕಿರೀಟವನ್ನು ಹೊತ್ತು, ಕೈಕಾಲುಗಳಿಗೆ ಮೊಳೆ ಬಡಿದು, ಶಿಲುಬೆಯ ಮೇಲೆ ನೇತಾಡಿದಾಗಲೂ ಕ್ಷಮಿಸು ತಂದೆ ಇವರನ್ನು ಎಂದ ಸ್ಥಳದಲ್ಲಿ ನಾನು ನಿಂತಿದ್ದೆ. ಯೇಸುವಿನ ಕಾರುಣ್ಯದ ಮಳೆಯಲ್ಲಿ ತೊಯ್ದª ಅನುಭವ. ಯೇಸುವಿನ ಕ್ಷಮೆಯ ಬೆಳಕು ಇಲ್ಲಿ ಪಸರಿಸಿದಂತೆ, ನಿಶ್ಯಬ್ದ ಮೌನದಲ್ಲಿ ಅನಂತ ಶಾಂತಿಯ ಅನುಭೂತಿ.

ಯೇಸುವಿನ ಕ್ಷಮೆಯ ಬೆಳಕಲ್ಲಿ
ಯೇಸು ಅತ್ಯಂತ ಪ್ರಗತಿಪರ ವಿಚಾರಗಳನ್ನು ಬೋಧಿಸಿದರು. ದಿಟವಾದ ಧರ್ಮ ಎಲ್ಲರನ್ನೂ ಒಳಗೊಂಡು ವಿಸ್ತರಿಸುತ್ತದೆ, ಎಲ್ಲರನ್ನೂ ಅಂತರ್ಗತವಾಗಿಸಿಕೊಂಡು ಹಬ್ಬಿ ಹರಡುತ್ತದೆ. ಯಾರನ್ನೂ ಹೊರ ಹಾಕುವುದಿಲ್ಲ, ನಿರಾಕರಿಸುವುದಿಲ್ಲ ಎಂದು ನಂಬಿದವರು. ಅವರ ಬೋಧನೆ ಸಾರ್ವತ್ರಿಕವಷ್ಟೇ ಅಲ್ಲ, ಇಂದಿಗೂ ಪ್ರಸ್ತುತ. ಜಗದ ನೋವಿಗೆ ಮರುಗಿ ಪರಿಹಾರದ ಹಾದಿ ಹುಡುಕಿ ಹೊರಟ ಬುದ್ಧನಂತೆಯೇ, ಯೇಸು ಕೂಡ ನಡೆದಿದ್ದರು ಬೆಳಕಿನ ಹಾದಿಯಲ್ಲಿ.

“ನಿನ್ನ ದಾರಿಗೆ ನಿನ್ನ ಬೆಳಕನ್ನು ಒಯ್ಯಿ, ಅವರಿವರ ಬೆಳಕು ಎಲ್ಲಿಯವರೆಗೆ ಜೊತೆ ನೀಡೀತು?’ ಎಂದು ಬೋಧಿಸಿದ‌ರು.  “ನಾವು ಕೊಟ್ಟಷ್ಟೂ ಪಡೆಯುತ್ತೇವೆ’ ಎಂದರು. “ನೀವು ಇತರರಿಗೆ ತೋರಿದ ಕರುಣೆಯೇ ನಿಮ್ಮನ್ನು ಕಾಯುವುದು. ಶಾಂತಿಯನ್ನು ನೆಲೆಸಲು ಸಹಾಯ ಮಾಡುವವರೇ ದಿಟವಾದ ದೇವರ ಮಕ್ಕಳು’.  ಜಗತ್ತಿಗೆ ಯೇಸುವಿನದು ಪ್ರೀತಿಯ ಸಂದೇಶ. “ಕೊಲ್ಲಬೇಡಿ, ಕಳ್ಳತನ ಮಾಡಬೇಡಿ. ವ್ಯಭಿಚಾರ ಮಾಡಬೇಡಿ. ಸುಳ್ಳು ಸಾಕ್ಷ್ಯವ ಹೇಳಬೇಡಿ. ನಿಮ್ಮ ನೆರೆಹೊರೆಯವರೊಡನೆ ಕಲಹ ಬೇಡ, ಅವರೆಲ್ಲರನ್ನು ನಿಮ್ಮವರಂತೆ ಪ್ರೀತಿಸಿ’ ಎಂದು ಬೋಧಿಸಿದರು.

ಯೇಸುವನ್ನು ನೆನೆಯುವ ಈ ಕ್ರಿಸ್‌ಮಸ್‌ ದಿನದಂದು, ನಮ್ಮೆದೆಯಲ್ಲಿ ಬೆಳಕಾಗಲಿ. ಸ್ನೇಹ, ಪ್ರೀತಿ, ಕರುಣೆ, ಕ್ಷಮೆಯ ಝರಿ ಹರಿದು ಭೋರ್ಗರೆಯಲಿ. ಈ ಕ್ರಿಸ್‌ಮಸ್‌ ದಿನದಂದು ನಮ್ಮೆದೆಯಲ್ಲಿ ಯೇಸು ಹುಟ್ಟಿ ಬರಲಿ. ದ್ವೇಷದ ಕತ್ತಲನ್ನು ಕಳೆಯಲಿ. ಜಾತಿ, ಧರ್ಮಗಳ ಗೋಡೆ ಕೆಡವಿ ಮಂದಿರ, ಮಸೀದಿ, ಚರ್ಚುಗಳಲ್ಲಿ ಬಂಧಿಸಿಲ್ಲದ ಆ ದೇವರನ್ನು ನಮ್ಮೆದೆಯಲ್ಲಿ ಸಾಕ್ಷಾತ್ಕರಿಸಿ ಕೊಳ್ಳೋಣ.

ನೇಮಿಚಂದ್ರ

ಟಾಪ್ ನ್ಯೂಸ್

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

web

Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

9

Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್‌ ಜಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.