ರೈಲಿನಲ್ಲಿ ಕಲಿತ ಪಾಠ
Team Udayavani, Apr 2, 2017, 3:50 AM IST
ಕಾರು ಕೊಂಡಂದಿನಿಂದ ಬಸ್ಸು -ರೈಲುಗಳಲ್ಲಿ ಓಡಾಡುವುದೇ ತಪ್ಪಿ ಹೋಗಿದೆ. ಮಕ್ಕಳಂತೂ ಬಸ್ಸು -ರೈಲು ಹತ್ತಿದ್ದೇ ಇಲ್ಲ. ಬಸ್ಸು ‰ರೈಲುಗಳಲ್ಲಿ ಓಡಾಡುವ ಜನರ ಕಷ್ಟವನ್ನು ಮಕ್ಕಳಿಗೆ ಪರಿಚಯ ಮಾಡಿಕೊಡುವುದು ಆವಶ್ಯಕ ಎಂದುಕೊಂಡೆ.
ಬೆಂಗಳೂರಿನ ಕೆ.ಆರ್. ಪುರಂನಲ್ಲಿರುವ ನಾದಿನಿ ಮನೆಗೆ ಹೋಗಿ, ಒಂದೆರಡು ದಿನ ಇದ್ದು ಬರೋಣ ಎಂದುಕೊಂಡು ಲಗೇಜ್ ಪ್ಯಾಕ್ ಮಾಡಿಕೊಂಡೆ. ಹಿಂದಿನ ದಿನವೇ ಮಕ್ಕಳಿಬ್ಬರಿಗೆ “”ಬೆಳಿಗ್ಗೆ ಬೇಗ ಏಳಬೇಕು, ಅತ್ತೆ ಮನೆಗೆ ರೈಲಿನಲ್ಲೇ ಹೋಗೋಣ” ಎಂದೆ. ಮಕ್ಕಳಿಗೆ ಎಲ್ಲಿಲ್ಲದ ಆನಂದ.
ಮಗ ಸುಮಂತ ತನ್ನ ತಮ್ಮನಿಗೆ ಹೇಳುತ್ತಿದ್ದ, “ರೈಲಿನಲ್ಲಿ ಮಜಾ ಇರುತ್ತೆ… ಕಾರಿನ ಹಾಗೆ ಒಂದೇ ಕಡೆ ಕೂತ್ಕೊ ಬೇಕಾಗಿಲ್ಲ; ಕುಣಿದಾಡಬಹುದು. ತಿನ್ನಕ್ಕೆ ತಿಂಡಿಗಳನ್ನು ಮಾರ್ಕೊಂಡು ಬರ್ತಾರಂತೆ. ಹಾಗಂತ ನನ್ನ ಗೆಳೆಯ ಆನಂದ ಒಂದಾರಿ ಹೇಳಿದ ನೆನಪು” ಅವನ ಮಾತನ್ನು ಶಮಂತ ಆಸಕ್ತಿಯಿಂದ ಕೇಳುತ್ತಿದ್ದ.
ಮಾರನೆಯ ದಿನ ನಾನು ಮಕ್ಕಳೊಡನೆ ಬೇಗ ಎದ್ದು ಸಿದ್ಧವಾಗಿ ಬೆಂಗಳೂರಿನ ಉಗಿಬಂಡಿ ಹತ್ತಿದೆ. ಬೋಗಿಯೊಳಕ್ಕೆ ಮಕ್ಕಳನ್ನು ಹತ್ತಿಸುವುದೇ ತ್ರಾಸವಾಯಿತು. ಸೀಟು ಹಿಡಿಯುವುದು ಇನ್ನೂ ಕಷ್ಟವಾಯಿತು. ತುಂಬಾ ರಶ್ ಇತ್ತು. “”ನಾಳೆ, ನಾಡಿದ್ದು ರಜೆ ಇದೆ.ಹಾಗಾಗಿ ಬಹಳ ಜನರು ಪ್ರಯಾಣ ಮಾಡ್ತಿದ್ದಾರೆ” ಅಂದುಕೊಂಡೆ. ಹಾಗೂ ಹೀಗೂ ಸಂಭಾಳಿಸಿ ಜಾಗ ಹಿಡಿದುಕೊಂಡೆ. ಮಕ್ಕಳಿಗೆ ನನ್ನ ಎದುರಿನ ಸೀಟು ದೊರಕಿತು. ರೈಲು “ಕೂ…’ ಎನ್ನುತ್ತ ಹೊರಟಿತು. ಈಗ ಮಕ್ಕಳೊಡನೆ ಮಾತನಾಡಲು ಶುರು ಮಾಡಿದೆ.
“”ಮಕ್ಕಳೇ, ರೈಲು ಕ್ರಮಿಸುವ ಹಾದಿಯನ್ನು ಹೇಳುತ್ತೇನೆ. ಮೊದಲು ಪಾಂಡವಪುರ, ನಂತರ ಮಂಡ್ಯ , ಹನಕೆರೆ, ಮದ್ದೂರು, ಶೆಟ್ಟಿಹಳ್ಳಿ, ರಾಮನಗರ, ಬಿಡದಿ, ಹೆಜ್ಜಾಲ, ಕೆಂಗೇರಿ ದಾಟಿ ಬೆಂಗಳೂರು ತಲುಪುತ್ತದೆ” ಮಕ್ಕಳು ನನ್ನ ಮಾತುಗಳನ್ನು ಆಸಕ್ತಿಯಿಂದ ಕೇಳುತ್ತಿರಲಿಲ್ಲ.ರೈಲುಗಾಡಿ ಹತ್ತಿದ್ದೇ ಅವರಿಗೆ ಖುಷಿಯ ವಿಚಾರ ಆಗಿತ್ತು.
ನನಗೋ ಪಕ್ಕದಲ್ಲಿ ಯಾರೋ ಅಜ್ಜಿ ಕುಳಿತಿದ್ದಾಳೆ. ಎಲೆ, ಅಡಿಕೆ, ತಂಬಾಕು ಅಗಿಯುತ್ತಿದ್ದಾಳೆ. ಥೂ… ಎಂದು ಕಿಟಕಿಯಾಚೆ ಉಗಿಯುತ್ತಿದ್ದಾಳೆ. ಅವಳ ಉಗುಳು ಗಾಳಿಗೆ ಹಾರಿ ನನ್ನ ಮೇಲೆ ಬೀಳದಿದ್ದರೆ ಸಾಕು ಅನ್ನಿಸಿತು. ಮಕ್ಕಳ ಪಕ್ಕದಲ್ಲಿ ಯಾರೋ ಗಂಡಸು ಕುಳಿತಿದ್ದಾನೆ. ಮಕ್ಕಳನ್ನು ಏನೇನೋ ಪ್ರಶ್ನೆ ಕೇಳುತ್ತಿದ್ದಾನೆ. ಚೆನ್ನಾಗಿ ಕುಡಿದಿದ್ದಾನೆ ಅಂತ ಕಾಣುತ್ತೆ.ಕುಡಿತದ ಗಬ್ಬು ವಾಸನೆ ನನಗೆ ವಾಕರಿಕೆ ತರಿಸುತ್ತಿತ್ತು. ಮೂಗು ಮುಚ್ಚಿಕೊಂಡು ಕಿಟಕಿಯ ಕಡೆಗೆ ತಿರುಗಿದೆ.
ಅಷ್ಟರಲ್ಲಿ “ಚುರುಮುರಿ… ಚುರುಮುರಿ ‘ ಎನ್ನುತ್ತ ಚುರುಮುರಿ ಮಾರುವವನು ಬಂದ. ಮಕ್ಕಳು ಚುರುಮುರಿ ಕೊಡಿಸುವಂತೆ ಹಠ ಹಿಡಿದರು. ನನಗೋ ಚುರುಮುರಿ ಮಾರುವವನ ಬಟ್ಟೆ ನೋಡಿಯೇ ಬೇಸರವಾಗಿತ್ತು. ಅವನ ಬಟ್ಟೆ ಅಷ್ಟು ಕೊಳಕಾಗಿತ್ತು. ಮಕ್ಕಳ ಹಠ ಜಾಸ್ತಿ ಆಯಿತು. ಮಕ್ಕಳು ಅಳುತ್ತಿದ್ದಾರೆ. “ಕೊಡಿಸಿಬಿಡಬಾರದೇ?’ ಎಂದಿತು ಪಕ್ಕದ ಅಜ್ಜಿ. ಏನೂ ಮಾಡಲಾಗದೇ ಚುರುಮುರಿ ಕೊಡಿಸಿದೆ. ಹುಡುಗರು ಖುಷಿಯಾಗಿ ತಿಂದು ಮುಗಿಸಿದರು. ಅಷ್ಟರಲ್ಲಿ ಕಡ್ಲೆಕಾಯಿಯವನು ಬಂದ. ಅದನ್ನೂ ಕೊಡಿಸಿದೆ.
ನಾವು ಕುಳಿತಿದ್ದ ಬೋಗಿಯ ಪಕ್ಕದಲ್ಲೇ ಪಾಯಿಖಾನೆ ಇದ್ದುದರಿಂದ ಅಲ್ಲಿಯ ಗಬ್ಬು ವಾಸನೆ ಕುಳಿತಲ್ಲಿಗೂ ಬರುತ್ತಿತ್ತು. ಸುಮಂತ, “”ಅಮ್ಮಾ… ಕೆಟ್ಟ ವಾಸನೆ ಬರುತ್ತಿದೆ” ಅಂದ. “”ಸುಮ್ಮನೆ ಬಾಯಿ ಮುಚ್ಚಿ ಕೊಂಡು ಕೂತ್ಕೊ” ಅಂದೆ. ಇಲ್ಲಿ ಐದು ತರದ ವಾಸನೆಗಳು ಮಿಶ್ರವಾಗಿವೆ. ಒಗೆಯದ ಬಟ್ಟೆಯ ವಾಸನೆ, ಬೆವರಿನ ವಾಸನೆ, ಧೂಮಪಾನದ ವಾಸನೆ, ಶೌಚಾಲಯದ ವಾಸನೆ, ಯಾವುದೋ ಕೆಟ್ಟ ಸೆಂಟಿನ ವಾಸನೆ… ಹೀಗೆ ನಾನಾ ವಿಧ ! ಮೂಗು ಮುಚ್ಚಿಕೊಂಡು ಕಿಟಕಿಯ ಕಡೆಗೆ ತಿರುಗಿ ಕುಳಿತುಕೊಳ್ಳಬೇಕಷ್ಟೆ.
ರೈಲು ಮಂಡ್ಯ ದಾಟಿತು. ಆಗ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಹೋಗುವ ಐದಾರು ಹೆಂಗಸರು ನಮ್ಮ ಬೋಗಿಯೊಳಕ್ಕೆ ಬಂದರು.ಎರಡು-ಮೂರು ಸೀಟುಗಳೂ ಖಾಲಿ ಆಗಿದ್ದವು. ಅವರು ಅಲ್ಲೇ ಜಾಗ ಮಾಡಿಕೊಂಡು ಕುಳಿತರು. ಒಬ್ಟಾಕೆ ಡಬ್ಬಿ ಮುಚ್ಚಳ ತೆಗೆದು ತಿಂಡಿ ತಿನ್ನತೊಡಗಿದಳು. ಮತ್ತೂಬ್ಬಳು ತನ್ನ ಬ್ಯಾಗಿನಿಂದ ಬಾಚಣಿಗೆ ತೆಗೆದು ತಲೆ ಬಾಚಿಕೊಳ್ಳಲಾರಂಭಿಸಿದಳು. ಆ ಇಬ್ಬರು ಹೆಂಗಸರು ಗುಸುಗುಸು ಮಾತನಾಡಿಕೊಳ್ಳುತ್ತ ನಗುತ್ತಿದ್ದರು.
ಮನಸ್ಸು ಪಿಚ್ಚೆನ್ನಿಸಿತು. ಅವರು ಎಷ್ಟು ಆನಂದವಾಗಿದ್ದಾರೆ! ನಾನು ರೈಲು ಹತ್ತಿದಾಗಿನಿಂದ ನೇತ್ಯಾತ್ಮಕವಾಗಿಯೇ ಆಲೋಚಿಸುತ್ತಿದ್ದೇನೆ.ಆದರೆ ದಿನಾ ರೈಲಿನಲ್ಲಿಯೇ ಓಡಾಡುವ ಅವರು ಜೀವನವನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡು, ಇರುವ ನೂರೆಂಟು ತಾಪತ್ರಯಗಳ ನಡುವೆ ತಮಗಿರುವ ಹಾಸ್ಯಪ್ರಜ್ಞೆಯನ್ನೂ ಮರೆತಿಲ್ಲ. ಸಮಯಕ್ಕೆ ತಕ್ಕಂತಹ ಹೊಂದಾಣೆಕೆ ಮಾಡಿಕೊಳ್ಳುವುದೇ ಜೀವನವಲ್ಲವೆ, ಅನ್ನಿಸಿತು.
ರೈಲು “ಕೂ’ ಎಂದು ಕೂಗುತ್ತ ಬೆಂಗಳೂರಿನ ಕೆ.ಆರ್. ಪುರಂ ತಲುಪಿತು. ಎರಡು ಲಗೇಜ್‌ಗಳನ್ನು ಇಳಿಸಲು ಆ ಗಾರ್ಮೆಂಟ್ಸ್ ಹುಡುಗಿ ಸಹಾಯ ಮಾಡಿದಳು. ಅವಳಿಗೆ “ಥ್ಯಾಂಕ್ಸ್’ ಅಂದೆ, ಲಗೇಜ್ ಇಳಿಸಿಕೊಟ್ಟಿದ್ದಕ್ಕಲ್ಲ ; ಸನ್ನಿವೇಶಗಳನ್ನು ಹಗುರವಾಗಿ ತೆಗೆದುಕೊಳ್ಳುವ ಪಾಠ ಹೇಳಿಕೊಟ್ಟಿದ್ದಕ್ಕೆ.
ಮಕ್ಕಳನ್ನು ಕೇಳಿದೆ, “ಇನ್ನೊಮ್ಮೆ ರೈಲಿನಲ್ಲಿ ಬರೋಣವಾ…’ ಅಂತ.ಮಕ್ಕಳು ಖುಷಿಯಾಗಿ “ಆಯ್ತು ಅಮ್ಮಾ’ ಅಂದರು !
ಎಂ. ಎಸ್. ಲಾವಣ್ಯ ಲಕ್ಷ್ಮೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.