ತೋಳ ಕಲಿಸಿದ ಪಾಠ

ಫಿನ್ಲಂಡ್‌ ದೇಶದ ಕತೆ

Team Udayavani, Jul 21, 2019, 5:07 AM IST

THOLA

ಮಿಕ್ಕೊ ಎಂಬ ನರಿ ಇತ್ತು. ಅದಕ್ಕೆ ಸ್ವಲ್ಪವೂ ಶ್ರಮಪಡದೆ ಹೊಟ್ಟೆ ತುಂಬ ಉಣ್ಣುವುದು ಮಾತ್ರ ಗೊತ್ತಿತ್ತು. ದುಡಿಯುವುದೆಂದರೆ ಎಂದಿಗೂ ಆಗದು. ಕಾಡಿನಲ್ಲಿರುವ ಎಲ್ಲ ಪ್ರಾಣಿಗಳನ್ನೂ ಮೋಸಪಡಿಸಿದ ಬಳಿಕ ಯಾರೂ ಅದನ್ನು ನಂಬಲಾಗದ ಸ್ಥಿತಿ ತಲೆದೋರಿತು. ಕಡೆಗೆ ಉಳಿದದ್ದು ಒಂದು ಕರಡಿ. ಅದನ್ನೂ ಮೋಸದ ಬಲೆಗೆ ಸಿಲುಕಿಸಬೇಕೆಂದು ನಿರ್ಧರಿಸಿ, ಹುಡುಕಿಕೊಂಡು ಹೋಯಿತು. ಕರಡಿ ಕಷ್ಟಪಟ್ಟು ಮರ ಹತ್ತಿ ಜೇನು ಇಳಿಸಿ ಮನೆಗೆ ತರುತ್ತ ಇತ್ತು. ನರಿ ಅದನ್ನು ಕರೆದು, “”ದೇವರು ಪ್ರತ್ಯಕ್ಷನಾಗಿ ಹೇಳಿದ ಒಂದು ಭಯಾನಕವಾದ ಸುದ್ದಿಯನ್ನು ಕೇಳಿದೆಯಾ? ಅಬ್ಬಬ್ಬ , ನನಗೆ ಅದನ್ನು ಕೇಳುವಾಗಲೇ ಭಯದಿಂದ ಮೈಯೆಲ್ಲ ನಡುಗುತ್ತದೆ” ಎಂದು ಹೇಳಿತು. “ಹೌದೆ? ದೇವರು ಅಂತಹ ಭಯವಾಗುವ ವಿಷಯ ಏನು ಹೇಳಿದ?” ಎಂದು ಕೇಳಿತು ಕರಡಿ.

“ನಾಳೆಯಿಂದ ನಾವು ಯಾರೂ ಬೇರೆಯವರ ವಸ್ತುಗಳನ್ನು ತಂದು ತಿನ್ನಬಾರದಂತೆ. ಸ್ವತಃ ಕಷ್ಟಪಟ್ಟು ಬೆಳೆದ ತರಕಾರಿಯನ್ನು ಮಾತ್ರ ನಾನು ತಿನ್ನಬಹುದು. ನೀನೂ ಅಷ್ಟೇ ಬೇಕಾದಂತೆ ಮರವೇರಿ ಜೇನು ಇಳಿಸಿ ತಿನ್ನಬಾರದು. ಹಲಸಿನ ಹಣ್ಣು ಕದಿಯಬಾರದು. ಏನಿದ್ದರೂ ಕಾಡಿನಲ್ಲಿ ಜಾಗ ಬೇಕಾದಷ್ಟಿದೆ. ಕಷ್ಟ ಬಂದು ಸಾಗುವಳಿ ಮಾಡಿದರೆ ದೇವರು ಒಳ್ಳೆಯ ಪ್ರತಿಫ‌ಲ ಕೊಡುತ್ತಾನಂತೆ. ಇನ್ನೊಬ್ಬರ ಶ್ರಮವನ್ನು ತಮ್ಮದಾಗಿಸಿಕೊಂಡವರಿಗೆ ಕಠಿಣವಾದ ಶಿಕ್ಷೆ ಕಾದಿದೆಯಂತೆ” ಎಂದು ನರಿ ಹೇಳಿತು.

ಕರಡಿಗೆ ಭಯವಾಯಿತು. “ನರಿಯಣ್ಣ, ನನಗೆ ನಿಜವಾಗಿಯೂ ಇಷ್ಟರ ತನಕ ದುಡಿಯುವುದು ಹೇಗೆ ಅಂತ ಗೊತ್ತಿಲ್ಲ. ಹೀಗೆಯೇ ಶ್ರಮವಿಲ್ಲದೆ ಯಾರದೋ ಮರದ ಹಣ್ಣು, ಜೇನು ತಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಇನ್ನು ಹಾಗಿರಬಾರದು ಅಂತಾದರೆ ಬೇರೆ ಏನು ಮಾಡುವುದು, ನನಗೇನಾದರೂ ಸಹಾಯ ಮಾಡಲು ನಿನ್ನಿಂದ ಸಾಧ್ಯವೆ?” ಎಂದು ಕೇಳಿತು.

“ಅಯ್ಯೋ ದೇವರೇ, ಸಹಾಯ ಮಾಡುವುದಿಲ್ಲವೆಂದು ನಾನು ಹೇಳುವುದುಂಟೆ? ಪರೋಪಕಾರದ ಉದ್ದೇಶದಿಂದಲೇ ದೇವರು ನನ್ನನ್ನು ಭೂಮಿಗೆ ಕಳುಹಿಸಿದ. ನಿನಗೆ ಇಷ್ಟವಾದರೆ ಖಾಲಿ ಜಾಗದಲ್ಲಿ ಬಾರ್ಲಿಯ ವ್ಯವಸಾಯ ಮಾಡಬಹುದು. ಬಾರ್ಲಿ ತುಂಬ ರುಚಿಕರವಾದ ಧಾನ್ಯ. ನಿನಗೆ ಒಬ್ಬನಿಗೇ ಕಷ್ಟವಾಗುವುದಾದರೆ ನಾವಿಬ್ಬರೂ ಸೇರಿ ಬೆಳೆದು ಧಾನ್ಯವನ್ನು ಸಮನಾಗಿ ಹಂಚಿಕೊಳ್ಳಬಹುದು” ಎಂದು ಮಿಕ್ಕೊ ಸಲಹೆ ನೀಡಿತು.

“ಬಾರ್ಲಿ ಬೆಳೆಯೋಣ. ವ್ಯವಸಾಯ ಮಾಡಲು ನೀನು ಯಾವ ರೀತಿಯಲ್ಲಿ ಸಹಕಾರ ಕೊಡುತ್ತೀ?” ಎಂದು ಕರಡಿ ಪ್ರಶ್ನಿಸಿತು. “ನೋಡು, ಕೆಲಸ ಅಂದರೆ ಇಬ್ಬರಿಗೂ ಸಮಾನವಾಗಿರಬೇಕು. ನಾನು ಹೊಲ ಉಳಲು ಎತ್ತುಗಳು, ನೊಗ, ನೇಗಿಲು ಎಲ್ಲಿ ಉಂಟು ಅಂತ ಹೇಳುತ್ತೇನೆ, ನೀನು ಅದನ್ನೆಲ್ಲ ಅಲ್ಲಿಂದ ಕದ್ದು ತರಬೇಕು. ಹೊಲ ನೀನು ಉಳುವಾಗ ನಾನು ಬದುವಿನಲ್ಲಿ ಕುಳಿತುಕೊಂಡು ಮಾರ್ಗದರ್ಶನ ಮಾಡುತ್ತೇನೆ. ಆಮೇಲೂ ಬಿತ್ತನೆ ನೀನು ಮಾಡುವುದು, ಎಲ್ಲಿಗೆ ಸರಿಯಾಗಿ ಬೀಜ ಬಿದ್ದಿಲ್ಲವೆಂದು ನಾನು ನೋಡುವುದು. ಹಾಗೆಯೇ ಹಗಲು ನಾನು ಮಲಗುವುದು, ನೀನು ಬೆಳೆ ಕಾಯುವುದು. ರಾತ್ರೆ ನೀನು ಬೆಳೆ ಕಾಯುವುದು, ನಾನು ಮಲಗುವುದು ಈ ರೀತಿಯಲ್ಲಿ ಸಹಕಾರ ಪದ್ಧತಿಯಿಂದ ವ್ಯವಸಾಯ ಮಾಡಬಹುದು” ಎಂದಿತು ನರಿ. ಅದು ಹೇಳುವ ಮಾತುಗಳಲ್ಲಿ ಏನೂ ಮೋಸವಿಲ್ಲವೆಂದೇ ಭಾವಿಸಿದ ಕರಡಿ ಎಲ್ಲವನ್ನೂ ಒಪ್ಪಿಕೊಂಡಿತು.
ಹೀಗೆ ಕರಡಿ ತುಂಬ ಕಷ್ಟಪಟ್ಟು ಬಿತ್ತಿದ ಪೈರು ಹುಲುಸಾಗಿ ಬೆಳೆಯಿತು. ಕಾಳುಗಳು ಒಣಗಿದಾಗ ಕರಡಿ ಬಂದು ನರಿಗೆ ಈ ವಿಷಯ ತಿಳಿಸಿ, “ಒಬ್ಬನಿಗೇ ಕೊಯ್ಲು ಮಾಡಲು ಕಷ್ಟವಾಗಬಹುದು. ನೀನು ಕೂಡ ಸಹಾಯಕ್ಕೆ ಬರಬೇಕು” ಎಂದು ಕರೆಯಿತು. “”ನಾನು ಇಲ್ಲವೆನ್ನುತ್ತೇನೆಯೇ? ನಮ್ಮಿಬ್ಬರ ಶ್ರಮದ ಫ‌ಲವಾಗಿ ಬಂದಿರುವ ಬೆಳೆಯನ್ನು ಕೊಯ್ಯಬೇಕು. ಹುಲ್ಲಿನಿಂದ ಕಾಳು ಬೇರ್ಪಡಿಸಬೇಕು. ಗಿರಣಿಗೆ ತೆಗೆದುಕೊಂಡು ಹೋಗಿ ಹಿಟ್ಟು ಮಾಡಿಸಬೇಕು. ಎಲ್ಲವನ್ನೂ ಜೊತೆಯಾಗಿ ಮಾಡೋಣ” ಎಂದು ಮಿಕ್ಕೊ ಹೇಳಿತು. ಕರಡಿ ಪೈರು ಕೊಯ್ಯಲು ಎರಡು ಕತ್ತಿ ತಂದಿತು. “”ಬಾ, ಕೊಯ್ಲಿಗೆ ಈಗಲೇ ಆರಂಭ ಮಾಡಬೇಕು” ಎಂದು ಕರೆಯಿತು. ನರಿ, “”ಕೊಯ್ಲು ಮಾಡುವಾಗ ಕೆಲವೊಮ್ಮ ಇಡೀ ಆಕಾಶ ಕಳಚಿ ಬೀಳುವುದುಂಟು. ನಾನು ಹೊಲದಿಂದ ಮೇಲ್ಗಡೆಯಲ್ಲಿ ಮಲಗಿಕೊಂಡು ಅದು ಕೆಳಗೆ ಬೀಳದಂತೆ ತಡೆಯುತ್ತೇನೆ” ಎಂದಿತು.

ಕರಡಿ ನರಿಯ ಮಾತನ್ನು ನಂಬಿ ತಾನೇ ಕಷ್ಟಪಟ್ಟು ಕೆಲಸ ಮಾಡಿತು. ಕಾಳುಗಳನ್ನು ಗಾಳಿಗೆ ತೂರಿ ಜಳ್ಳು ಮತ್ತು ಗಟ್ಟಿ ಕಾಳು ಬೇರ್ಪಡಿಸಿತು. ನರಿಯನ್ನು ಕರೆದು, “ಅಣ್ಣಯ್ಯ, ಈಗ ಕಾಳುಗಳನ್ನು ಸಮನಾಗಿ ಹಂಚಿಕೊಳ್ಳೋಣವೆ?” ಕೇಳಿತು. “ಎಲ್ಲಾದರೂ ಉಂಟೇ? ನಾನು ಹೆಚ್ಚು ಕಷ್ಟಪಟ್ಟಿದ್ದರೂ ಹಿರಿಯನಾದ ನಿನಗೆ ಆಹಾರ ಹೆಚ್ಚು ಬೇಕು. ಆದಕಾರಣ ಈ ಎರಡು ರಾಶಿಗಳಲ್ಲಿ ದೊಡ್ಡದು ನಿನಗೇ ಇರಲಿ. ಸಣ್ಣದು ನನಗಿರಲಿ” ಎಂದು ನರಿ ಔದಾರ್ಯ ತೋರಿಸಿತು. ದೊಡ್ಡ ರಾಶಿ ಬರೇ ಜೊಳ್ಳು, ಸಣ್ಣ ರಾಶಿಯಲ್ಲಿರುವುದು ಗಟ್ಟಿಕಾಳು ಎಂದು ತಿಳಿಯದೆ ಕರಡಿ ಒಪ್ಪಿಕೊಂಡಿತು.
ನರಿ ಮತ್ತು ಕರಡಿ ತಮ್ಮ ಪಾಲಿನ ಧಾನ್ಯವನ್ನು ಹಿಟ್ಟು ಮಾಡಿಸಲು ಗಿರಣಿಗೆ ತೆಗೆದುಕೊಂಡು ಹೋದವು. ಕರಡಿಯ ಧಾನ್ಯವನ್ನು ಯಂತ್ರದಲ್ಲಿ ಹಾಕಿದಾಗ ಯಾವ ಧ್ವನಿಯೂ ಬರಲಿಲ್ಲ. ಆದರೆ ನರಿಯ ಕಾಳುಗಳಿಂದ ಗಟ್ಟಿ ದನಿ ಕೇಳಿಸಿತು. ಕರಡಿ, “”ಇದೇನು ನರಿಯಣ್ಣ, ನನ್ನ ಧಾನ್ಯದಿಂದ ಯಾವ ಸದ್ದೂ ಬರುತ್ತ ಇಲ್ಲ, ಆದರೆ ನಿನ್ನ ಧಾನ್ಯದಿಂದ ಗರಗರ ಅನ್ನುವ ಧ್ವನಿ ಬರುತ್ತಿದೆಯಲ್ಲ?” ಎಂದು ಕೇಳಿತು ಕರಡಿ. “ಬರೇ ಶ್ರಮಪಟ್ಟರೆ ಸಾಲದು. ಅನುಭವವೂ ಬೇಕು. ಧಾನ್ಯದೊಂದಿಗೆ ಅರ್ಧ ಚೀಲ ಮರಳು ಸೇರಿಸಿಕೊಂಡು ಯಂತ್ರಕ್ಕೆ ಹಾಕಿದರೆ ಹೀಗೆಯೇ ಧ್ವನಿ ಬರುತ್ತದೆ, ಹಿಟ್ಟು ಬಹು ರುಚಿಕರವೂ ಆಗುತ್ತದೆ” ಎಂದಿತು ನರಿ. ಕರಡಿ ತನ್ನ ಜೊಳ್ಳಿಗೆ ಮರಳು ಬೆರೆಸಿ ಹುಡಿ ಮಾಡಿಸಿಕೊಂಡು ಹೋಯಿತು. ಹಿಟ್ಟಿನಿಂದ ತಯಾರಿಸಿದ ಗಂಜಿ ಕಪ್ಪುಕಪ್ಪಾಗಿತ್ತು. ತಿನ್ನಲು ಸಾಧ್ಯವಾಗಲಿಲ್ಲ.

ಕರಡಿ ನರಿಯ ಗವಿಗೆ ಬಂದಿತು. ನರಿ ತನ್ನ ಹಿಟ್ಟಿನಿಂದ ರುಚಿಕರವಾದ ಗಂಜಿ ತಯಾರಿಸಿ ಕುಡಿಯುತ್ತ ಕುಳಿತಿತ್ತು. ಅದರ ಬಣ್ಣ ಬೆಳ್ಳಗಿತ್ತು. ಕರಡಿ ಅಚ್ಚರಿಯಿಂದ,””ನರಿಯಣ್ಣ, ಇದೇನು ನಿನ್ನ ಮನೆಯ ಹಿಟ್ಟು ಇಷ್ಟೊಂದು ಬೆಳ್ಳಗಿದೆ. ಆದರೆ ನನ್ನ ಮನೆಯಲ್ಲಿ ಹಿಟ್ಟಿನ ಬಣ್ಣವೂ ಕಪ್ಪಗಿತ್ತು, ಗಂಜಿ ಕುಡಿಯಲು ರುಚಿಯೂ ಇರಲಿಲ್ಲ. ಅದೇಕೆ ಹಾಗಾಯಿತು?” ಎಂದು ಕೇಳಿತು. ನರಿ ನಗುತ್ತ, “”ಅಯ್ಯೋ ಮಂಕೇ, ಗಂಜಿ ಮಾಡುವ ಮೊದಲು ಹಿಟ್ಟನ್ನು ತೊಳೆಯಬೇಕೆಂಬ ಪರಿಜ್ಞಾನವಿಲ್ಲದಿದ್ದರೆ ಆಗುವುದು ಹೀಗೆಯೇ. ನಾನು ಮೊದಲು ಹಿಟ್ಟಿನ ಚೀಲವನ್ನು ನದಿಗೆ ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿರಿಸಿ ತಿಕ್ಕಿ ತಿಕ್ಕಿ ತೊಳೆದ ಕಾರಣ ಈ ಬಗೆಯ ಬಣ್ಣ ಬಂದಿದೆ” ಎಂದು ಕರಡಿಯನ್ನು ಮೂದಲಿಸಿತು.

ಕರಡಿಗೆ ಈಗಲೂ ನರಿಯ ಮಾತಿನಲ್ಲಿ ಅನುಮಾನ ಬರಲಿಲ್ಲ. ಹಿಟ್ಟು ತುಂಬಿದ ಚೀಲಗಳನ್ನು ನದಿಗೆ ತೆಗೆದುಕೊಂಡು ಹೋಗಿ ತೊಳೆಯಲು ಪ್ರಯತ್ನ ಮಾಡಿತು. ಹಿಟ್ಟೆಲ್ಲವೂ ಕೊಚ್ಚಿಕೊಂಡು ಹೋಯಿತು. ಕರಡಿ ತಲೆಯ ಮೇಲೆ ಕೈಯಿಟ್ಟುಕೊಂಡು ಅಳುತ್ತ ಹೊರಟಿತು. ಆಗ ಎದುರಿನಿಂದ ಒಂದು ತೋಳ ಬರುತ್ತ ಇತ್ತು. ಅದು ಕರಡಿಯನ್ನು ಮಾತನಾಡಿಸಿ ದುಃಖದ ಕಾರಣ ಕೇಳಿತು. ಕರಡಿ ನಡೆದ ಕತೆಯನ್ನೆಲ್ಲ ವಿವರಿಸಿತು.

ತೋಳ ಬೇಸರದಿಂದ, “”ಆ ಕೆಟ್ಟ ನರಿ ಕಾಡಿನಲ್ಲಿರುವ ಯಾರನ್ನೂ ಬಿಡದೆ ವಂಚಿಸಿದೆ. ಉಳಿದವನು ನೀನೊಬ್ಬನೇ, ನಿನಗೂ ಈಗ ಮೋಸವಾಗಿದೆ. ಇನ್ನು ಹೀಗಿರಬಾರದು. ನಾನು ನಿನಗೆ ಬಾರ್ಲಿಯಿಂದ ತಯಾರಿಸಿದ ರುಚಿಯಾದ ಪಾಯಸವನ್ನು ಕೊಡುತ್ತೇನೆ. ಇದನ್ನು ತೆಗೆದುಕೊಂಡು ನರಿಯ ಗವಿಗೆ ಹೋಗಿ ಪಾಠ ಕಲಿಸಿ ಬರಬೇಕು” ಎಂದು ಏನು ಮಾಡಬೇಕೋ ಅದನ್ನೆಲ್ಲ ಕಿವಿಯಲ್ಲಿ ಹೇಳಿತು. ಅದು ಕೊಟ್ಟ ಪಾಯಸ ತೆಗೆದುಕೊಂಡು ಕರಡಿ ನರಿಯ ಬಳಿಗೆ ಹೋಯಿತು. ನರಿ ಹುಬ್ಬೇರಿಸಿ, “”ನಾನು ಹೇಳಿದಂತೆ ಮಾಡಿದೆ ತಾನೆ? ಮತ್ತೆ ಮತ್ತೆ ನನ್ನ ಬಳಿಗೆ ಬರುವುದು ನನಗೆ ಸರಿಯೆನಿಸುವುದಿಲ್ಲ” ಎಂದು ಕೋಪ ತೋರಿಸಿತು.

“”ನೀನು ಹೇಳಿಕೊಟ್ಟ ಉಪಾಯದಿಂದ ಎಲ್ಲವೂ ಸರಿಯಾಯಿತೆಂದು ಕೃತಜ್ಞತೆ ಹೇಳಲು ಬಂದೆ. ಮಾತ್ರವಲ್ಲ, ನನ್ನ ಅಜ್ಜಿ ಬಾರ್ಲಿ ಹಿಟ್ಟಿನಿಂದ ತಯಾರಿಸುತ್ತಿದ್ದ ಪಾಯಸ ಮಾಡಿ ನಿನಗಾಗಿ ತಂದಿದ್ದೇನೆ, ತಿಂದು ನೋಡು” ಎಂದು ಕರಡಿ ಪಾತ್ರೆಯನ್ನು ನರಿಯ ಮುಂದಿಟ್ಟಿತು. ಪಾಯಸದ ಪರಿಮಳಕ್ಕೆ ಮನಸೋತ ನರಿ ಎಲ್ಲವನ್ನೂ ತಿಂದು ಪಾತ್ರೆಯನ್ನು ನೆಕ್ಕಿ ಶುಚಿಗೊಳಿಸಿತು. ಬಳಿಕ, “”ಇದನ್ನು ತಯಾರಿಸುವ ಪಾಕ ವಿಧಾನ ಹೇಗೆ?” ಎಂದು ಕೇಳಿತು.

“ಬಹು ಸುಲಭ. ಹಿಟ್ಟಿನಿಂದ ಗಂಜಿ ತಯಾರಿಸಿ ಮಣ್ಣಿನ ಮಡಕೆಯಲ್ಲಿ ತುಂಬಬೇಕು. ಮಡಕೆಯನ್ನು ಒಲೆಯಿಂದ ನೇರವಾಗಿ ಕೊಂಚ ಎತ್ತರದಲ್ಲಿ ತೂಗಾಡಿಸಿ ಪಾತ್ರೆಯ ಮೇಲೆ ಕುಳಿತು ಬಾಲವನ್ನು ಪಾತ್ರೆಗಿಳಿಸಬೇಕು. ಬಾಲದಲ್ಲಿರುವ ಕೊಬ್ಬು ಕರಗಿ ಪಾತ್ರೆಗಿಳಿದಾಗ ರುಚಿಕರವಾದ ಪಾಯಸ ತಯಾರಾಗುತ್ತದೆ. ನೋಡು, ಅದರಿಂದಾಗಿ ನನ್ನ ಬಾಲ ಹೇಗೆ ಚಿಕ್ಕದಾಗಿದೆ” ಎಂದು ಕರಡಿ ಮೋಟು ಬಾಲವನ್ನು ತೋರಿಸಿತು.

ನರಿ ಪಾಯಸ ಮಾಡಲು ಸಿದ್ಧತೆ ನಡೆಸಿತು. ಮಡಕೆಯಲ್ಲಿ ಗಂಜಿಯನ್ನು ತುಂಬಿಸಿ ಒಲೆಯಿಂದ ಮೇಲಕ್ಕೆ ತೂಗಾಡಿಸಿ ಪಾತ್ರೆಯ ಮೇಲೆ ಕುಳಿತುಕೊಂಡು ಬಾಲವನ್ನು ಒಳಗಿಳಿಸಿತು. ನರಿಯ ಭಾರ ತಾಳಲಾಗದೆ ಪಾತ್ರೆ ತಟಕ್ಕನೆ ಒಡೆಯಿತು. ಗಂಜಿಯೊಂದಿಗೇ ನರಿ ನೇರವಾಗಿ ಉರಿಯುವ ಒಲೆಗೆ ಬಿದ್ದು ಸತ್ತೇಹೋಯಿತು.

-ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.