ಕಳೆದು ಉಳಿಯುವ ಕಥೆಗಳು
Team Udayavani, Apr 23, 2017, 3:45 AM IST
ಕಿಟಕಿ ತೆರೆದರೆ ಇನ್ನೊಂದು ದೈತ್ಯ ಇಮಾರತೇ ಎದುರಾಗುವ ಕೋಣೆಯಲ್ಲಿ ಕತೆಗಳನ್ನು ಹೊಸೆಯುತ್ತಿದ್ದ ಕೇಶವನಿಗೆ ತಿರುಗಾಟದಲ್ಲಿ ಕತೆಗಳನ್ನು ಅರಸುವುದು ಒಂದು ಗೀಳಾದದ್ದು ಇತ್ತೀಚೆಗೇಧಿ- ಊರಿನಿಂದ ಸುಹಾಸಿನಿಯ ಕಾಗದ ಬಂದ ನಂತರ. ಉಂಡು ತಿಂದು ಚೆನ್ನಾಗಿಯೇ ಇದ್ದ ಹೈಸ್ಕೂಲಿಗೆ ಹೋಗುವ ಸುಹಾಸಿನಿಯ ಮಗ ಸುಪ್ರೀತ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಸುಹಾಸಿನಿ ಮತ್ತು ಆಕೆಯ ಗಂಡ ಮಂಜುನಾಥ ಊರವರು ಮತ್ತು ಸಂಬಂಧಿಕರ ನೆರವಿನಿಂದ ಎಲ್ಲ ಕಡೆ ಹುಡುಕಾಡಿದರು. ಕೇರಿಯವರು, ಹೈಸ್ಕೂಲ್ ಮಕ್ಕಳು ಮಾಸ್ತರಾದಿಯಾಗಿ ಎಲ್ಲರೂ, “ಈ ಹುಡ್ಗ ಹಿಂಗೆ ಮಾಡ್ತ ಅಂದೆ ನಂಬೂಕೇ ಆಗೂದಿಲ್ಲ ‘ ಎಂದು ಚಕಿತ ಸ್ಥಿತಿಯಲ್ಲಿರುವಾಗ ಅದ್ಯಾರೋ “ಶುಕ್ರವಾರ ಬೆಳಗಾ ಮುಂಚೆ ಬಾರೀಕು ಪೋರನೊಬ್ಬ ಮುಂಬೈ ದಿಕ್ಕಿಗೆ ಹೋಗುವ ಟ್ರೇನು ಹತ್ತೂದು ಕಂಡಂಗಾಗಿತ್ತು’ ಎಂದು ಅವ ಭರವಸೆಯಲ್ಲಿ ಹೇಳಿದ ಸುದ್ದಿ ಸುಹಾಸಿನಿಗೆ ತಲುಪಿ ಮಗ ಸಿಕ್ಕೇಬಿಟ್ಟ ಎನ್ನುವಷ್ಟು ಖುಶಿಯಾಗಿತ್ತು. ಕೇಶವ ಮುಂಬಯಿಯಲ್ಲಿರುವುದೇ ಅವಳ ಆ ವಿಶ್ವಾಸಕ್ಕೆ ಕಾರಣವಾಗಿತ್ತು. ಕೇಶವನಿಗೆ ಫೋನು ಹಚ್ಚಿ ಎಲ್ಲ ಕಥೆ ಹೇಳಿ, “ಹೆಂಗಾರೂ ಮಾಡಿ ಮಗನನ್ನು ಹುಡುಕು ಕೇಶು’ ಎಂದಿದ್ದಳು. ಹದಿನಾರು ವರ್ಷಗಳ ನಂತರ ಸುಹಾಸಿನಿಯ ಧ್ವನಿ ಕೇಳಿ ಕೇಶವನ ಕಿವಿಯಂಚುಗಳು ಬೆಚ್ಚಗಾಗಿದ್ದವು. ಅವಳು ಮಗ ಕಾಣೆಯಾದ ದುಃಖ ದ ಗಳಿಗೆಯಲ್ಲಿ ತನ್ನ ಸುಂದರ ನೆನಪುಗಳು ಒತ್ತರಿಸಿ ಬರುವುದನ್ನು ತಡೆಯುವುದು ಅವನಿಗೆ ಕಷ್ಟವಾಗಿತ್ತು. ಅವಳ ಧ್ವನಿ ಆರ್ತವಾದಷ್ಟೂ ತನಗೆ ಆಪ್ತವಾಗುವ ಪರಿಗೆ ತರುವಾಯ ಪರಿತಾಪ ಪಟ್ಟಿದ್ದೂ ಆಯಿತು.
ಮುಂಬೈನಂಥ ಮಹಾನಗರಿಯಲ್ಲಿ ಪತ್ತೆಯಿಲ್ಲದವರನ್ನು ಹುಡುಕುವುದು ಹೌದಾದ ಮಾತೆ? ಆದರೆ ಸುಹಾಸಿನಿಯ ವಿಶ್ವಾಸವು ಅವನ ಖಾಲಿಖಾಲಿಯಾಗಿದ್ದ ದಿನಚರಿಗೆ ಚೈತನ್ಯ ತುಂಬಿತು. ಮುಂಬಯಿಯ ಉಪನಗರವಾದ ಭಾಂಡುಪ್‌ನಲ್ಲಿದ್ದ ಕಂಪೆನಿಯು ಮುಚ್ಚಿದ್ದರಿಂದ ಕೆಲಸವನ್ನು ಕಳೆದುಕೊಂಡು ಕೇಶವ ನಿರ್ದಿಷ್ಟವಲ್ಲದ ಏನೇನೂ ಬಿಡಿಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ. ಸಮಯ ಸಿಕ್ಕಾಗ ಕಥೆಗಳನ್ನು ಬರೆಯುವ ತನ್ನ ಹಳೆಯ ಹವ್ಯಾಸವನ್ನು ಮುಂದುವರಿಸಿದ್ದ. ಸುಹಾಸಿನಿ ಫೋನು ಮಾಡಿದ ನಂತರ ಖಾವು ಗಲ್ಲಿಗಳನ್ನೂ, ರೈಲು ಹಳಿಗಳ ಪಕ್ಕದ ಜೋಪಡಿಗಳನ್ನೂ, ರಾತ್ರಿ ಸೂರಿಲ್ಲದವರ ಹಾಸಿಗೆಯಾಗಿ ಬಿಡಿಸಿಕೊಳ್ಳುವ ಫುಟ್‌ಪಾತುಗಳನ್ನೂ ಅಡ್ಡಾಡಿದ.
ನಾಪತ್ತೆಯಾದ ಮಕ್ಕಳು ಸಿಕ್ಕಾಗ ಅವರ ಪಾಲಕರು ಸಿಗುವವರೆಗೂ ಉಳಿಸುತ್ತಿದ್ದ ಡೋಂಗ್ರಿಯ ಆಶ್ರಯತಾಣಕ್ಕೂ ಹೋಗಿಬಂದ. ಪೊಲೀಸು ಸ್ಟೇಶನ್ನುಗಳಲ್ಲಿ, ರೇಲ್ವೆ ಸ್ಟೇಶನ್ನುಗಳಲ್ಲಿ, ಸಿನೆಮಾ ಹಾಲುಗಳ ಸಮೀಪ ಸುಹಾಸಿನಿ ಕಳುಹಿಸಿದ್ದ ಮಗನ ಫೋಟೋ ಅಚ್ಚು ಹಾಕಿಸಿ ಗೋಡೆಗೆ ಹಚ್ಚುವ ವ್ಯವಸ್ಥೆ ಕೂಡ ಮಾಡಿದ. ಅಂಟಿಸಿದ ಚಿತ್ರದಲ್ಲಿಯ ಚಹರೆಯ ಹುಡುಗನನ್ನು ಕಂಡವರು ತನ್ನ ಮೊಬೈಲಿಗೆ ಕರೆ ಮಾಡಬಹುದು ಎಂಬ ಹುಸಿ ನಂಬಿಕೆಯಲ್ಲಿ ಪದೇಪದೇ ಮೊಬೈಲ್ ನೋಡಿದ. ತಾನು ಕಾಯುತ್ತಿರುವುದು ಸುಹಾಸಿನಿಯ ಕರೆಗಲ್ಲವೆ? ಎಂದು ಒಳಮನಸ್ಸು ಚುಚ್ಚಿದಾಗ ಕೊರಗಿದ. ಅಂಥ ಪಾಪಪ್ರಜ್ಞೆಯೇ ಅವನನ್ನು ಇನ್ನಷ್ಟು ಹುಡುಕಾಟಕ್ಕೆಳೆಯುವಂತೆ ಮಾಡಿತ್ತು. ತಿರುಗಿದ ಗಲ್ಲಿಗಳಲ್ಲಿ ಅಲೆಯುತ್ತಿದ್ದ ಕಿಶೋರರೆಲ್ಲ ಸುಹಾಸಿನಿ ಮಗನ ಹುಲುಬೇ ಕಂಡು ಅವರನ್ನು ಮಾತಿಗೆಳೆಯುತ್ತಿದ್ದ. “ಯಾರು? ಯಾಕೆ? ಏನು?’ ಮುಂತಾಗಿ ಪೂಚ್‌ತಾಚ್ ಮಾಡುವ ಸಂಪ್ರದಾಯವಿಲ್ಲದ ಊರಿನಲ್ಲಿ ಕೇಶವನ ಆಪ್ತ ಧ್ವನಿಗೆ ಎಳೆಯರ ದೇಹ ಮತ್ತು ಮನಸುಗಳು ಸಡಿಲುಗೊಳ್ಳುತ್ತಿದ್ದವು. ಆಲಿಸುವ ಕಿವಿಗಳಿದ್ದರೆ ಉಲಿಯುವ ಧ್ವನಿಗಳಿರುತ್ತಿದ್ದವು. ಅವರ ತೆರೆದ ಮನಸಿನ ಮಾತುಗಳು ಕಥಾಸ್ವರೂಪ ಪಡೆಯುತ್ತಿದ್ದವು. ಆಗಲೇ ಕೇಶವನಿಗೆ ಸಾಮಾನ್ಯ ಫುಟ್‌ಪಾತಿನಲ್ಲಿ ನಡೆಯುವಾಗ ಥರಾವರಿ ಕಹಾನಿಗಳನ್ನು ದಾಟಾಡುತ್ತಿರುವಂತೆ ಅನಿಸಲು ಶುರುವಾಗಿದ್ದು.
ಮುಂಬಯಿಯಂಥ ಮಾಯಾನಗರಿಯಲ್ಲಿ ಕನಸು ಮತ್ತು ವಾಸ್ತವಗಳು, ಕಹಾನಿ ಮತ್ತು ಹಕೀಕತ್ತುಗಳು ಸದಾ ಮುಖಾಮುಖೀಯಾಗಿರುವುದು ಕತೆಗಾರನಾದ ಕೇಶವನಿಗೆ ತಿಳಿಯದ ಸಂಗತಿಯಾಗಿರಲಿಲ್ಲ. ಇಲ್ಲಿ ಪ್ರತಿಯೊಬ್ಬರೂ ಕತೆ ಕಟ್ಟಿಕೊಂಡೇ ಬಂದಿರುತ್ತಾರೆ ಅಥವಾ ಬಂದ ಮೇಲೆ ಕಥಾವಸ್ತು ಆಗುತ್ತಾರೆ ಎನ್ನುವುದೂ ಗೊತ್ತಿತ್ತು. ಆದರೆ ಕಲ್ಪನೆಯನ್ನೂ ಮೀರಿದ ಫುಟ್‌ಪಾತುಗಳಲ್ಲಿಯ ಬದುಕಿನ ಕತೆಗಳೆದುರು ಕಟ್ಟುಕತೆಗಳು ಚಪ್ಪೆ ಎಂಬ ಅರಿವು ಮಾತ್ರ ಹೊಸತಾಗಿತ್ತು. ಈ ಭಾಗದೌಡ್ ಜಿಂದಗಿಯಲ್ಲಿ ಪಂಚೇಂದ್ರಿಯಗಳು ಮನುಷ್ಯರನ್ನು ಮತಲಬಿಗಳನ್ನಾಗಿಸಿದರೂ ಭಾವಲೋಕಕ್ಕಿಳಿಯುವ ಇಂಥ ಕಥಾಸನ್ನಿವೇಶಗಳೇ ಅಂತಃಕರಣದಲ್ಲಿ ಒಂದಿಷ್ಟು ತೇವವನ್ನು ಉಳಿಸಿರಬಹುದು ಅನಿಸಿತ್ತು! ಕೇಶವನಿಗೆ ಹುಡುಕಾಟದಲ್ಲಿ ಪರಿಚಿತವಾದ ಮುನೀರ್‌ನಂತಹ ಮುಗ್ಧ ಬಾಲಕರ, ಇಸ್ಮಾಯಿಲ್‌ನಂಥ ಮೆಹನತಿ ಯುವಕರ ಕಣ್ಣುಗಳಲ್ಲಿ ತಾನಿನ್ನೂ ನೋಡಿರದ ಸುಹಾಸಿನಿಯ ಮಗನ ಬಿಂಬವೇ ಕಾಣುತ್ತಿತ್ತು! ಇತ್ತೀಚೆಗೆ ತಾನು ಸುಹಾಸಿನಿ ಮಗನನ್ನು ಹುಡುಕಾಡುವುದಕ್ಕಿಂತ ಕತೆಗಳ ಹಿಂದೆ ಬಿದ್ದಿರುವೆ ಎಂದೂ ಅನಿಸುತ್ತಿತ್ತು. ಪ್ರತಿಸಲ ಸುಹಾಸಿನಿ ಫೋನು ಮಾಡಿದಾಗ ಏನೂ ಸುಳಿವು ಸಿಕ್ಕಿಲ್ಲ ಎನ್ನುವ ಹಿತವಾಗದ ಮಾತು ಮೌನದÇÉೇ ಮುಗಿಯುವಾಗ ಮುನೀರ್ ಮತ್ತು ಇಸ್ಮಾಯಿಲ್‌ರಂಥವರ ಕತೆಗಳೇ ಆ ಮೌನವನ್ನು ದಾಟಿಸುತ್ತಿದ್ದವು! ಆ ಕತೆಗಳನ್ನು ಆಲಿಸುವ ಸುಹಾಸಿನಿಗೆ ಮಗನನ್ನು ಅರಸುತ್ತ ತಾನೂ ಕೇಶವನ ಜೊತೆಗೆ ಮುಂಬೈನ ಗಲ್ಲಿಗಳಲ್ಲಿ ಫುಟ್‌ಪಾತುಗಳಲ್ಲಿ ತಿರುಗುತ್ತಿದ್ದೇನೆ ಅನಿಸುವುದು. ಸಂಜೆಯಲ್ಲಿ ಚೌಪಾಟಿಗಳನ್ನು ವರ್ಣಿಸುವಾಗ ಒಮ್ಮೊಮ್ಮೆ ಕೇಶವನ ಕೈಗಳನ್ನು ಹಿಡಿದುಕೊಂಡೇ ನಡೆಯುತ್ತಿರುವ ಭಾವವೊಂದು ಸುಳಿದು, “ಶಿÂ’ ತನಗೇನಾಗಿದೆ ಎಂದು ಚಡಪಡಿಸುವಳು!
ಅಂದುಕೊಂಡಂತೆ ಆಗಿದ್ದರೆ ನಿಜಜೀವನದಲ್ಲಿ ಕೇಶವನೊಂದಿಗೆ ಹೆಜ್ಜೆ ಹಾಕಬೇಕಾಗಿತ್ತಲ್ಲವೇ ಎಂಬ ಯೋಚನೆಯಿಂದ ನವಿರಾದ ಕಂಪನವೊಂದು ಅವಳ ಮೈ ಸೋಂಕುತ್ತಿತ್ತು! ತಮ್ಮ ಪ್ರೀತಿಗೆ ಆ ಅದೃಷ್ಟ ಇರಲಿಲ್ಲವಾದರೂ ಅದು ತಾವಿಬ್ಬರೂ ಒಮ್ಮತದಲ್ಲಿ ಕೈಗೊಂಡ ಕಹಿ ನಿರ್ಣಯವಾಗಿದ್ದು ನಿಜ. ಕೇಶವನ ಬಡತನ ಮತ್ತು ತನ್ನ ಮನೆಯವರ ಒತ್ತಡ ಆ ಗಳಿಗೆಯ ವಾಸ್ತವ ಸತ್ಯಗಳಾಗಿದ್ದವು. ಕೇಶವ ಗಂಜಿಯಿಲ್ಲದಿದ್ದರೆ ಗಂಜಿ ತಿಳಿಯಾದರೂ ಕುಡಿದು ಸಂತಿಗೆ ಬಾಳ್ಳೋಣ ಎಂದು ಹೇಳುವ ಧೈರ್ಯ ಮಾಡಬಹುದಿತ್ತು. ಸುಖವೋ ದುಃಖವೋ ಹಂಚಿಕೊಂಡು ನಿನ್ನ ಜೊತೆಗೇ ಬದುಕುತ್ತೇನೆ ಎಂದು ತಾನು ಅವನಲ್ಲಿ ವಿಶ್ವಾಸ ತುಂಬಬಹುದಿತ್ತು. ಜಾತಿ-ಅಂತಸ್ತು ಮುಖ್ಯವಾದ ಸಮಾಜವು ನಮ್ಮ ನೆರವಿಗೆ ಬರುವುದು ಸಾಧ್ಯವಿಲ್ಲದ ಕಾಲದಲ್ಲಿ ತಮ್ಮ ತೀರ್ಮಾನ ಆ ಕ್ಷಣದ ಅನಿವಾರ್ಯವಾಗಿತ್ತು. ಒಳ್ಳೆಯ ನೆಂಟಸ್ತಿಕೆಯೊಂದು ಬಂದ ಸಂಭ್ರಮದಲ್ಲಿ ಮನೆಯವರು ತನ್ನನ್ನು ಆತುರವಾಗಿ ಮದುವೆ ಮಾಡಿ ಮುಗಿಸಿದ್ದು ನಮ್ಮ ಸಂಬಂಧವನ್ನು ಉಳಿಸಿಕೊಳ್ಳಲಾಗದ್ದಕ್ಕೆ ನೆಪವಾಗಲಾರದು. ಕೇಶವನ ಜೊತೆ ಬಾಳು ನಡೆಸಲಿಲ್ಲ ನಿಜ, ಆದರೆ, ಪ್ರೀತಿಯ ಭಾವವೊಂದು ಬೆಚ್ಚಗಿರುವುದು ಸುಳ್ಳೇ? ಮಗನ ಹುಡುಕಾಟದ ಸಂದರ್ಭದಲ್ಲಿ ಸುಹಾಸಿನಿ ಹೀಗೆಲ್ಲ ತನ್ನ ಅಸ್ಮಿತೆಯನ್ನು ನೆನೆಯುವಳು. ಇತ್ತ ಅಂಥ ಶೋಧದಲ್ಲಿ ಕೇಶವನೂ ಇರುವನು!
.
.
ನಸುಕೊಡೆಯುವ ಮೊದಲೇ ವಾಕಿಂಗ್ ಮತ್ತು ಮಾರ್ನಿಂಗ್ ಟೀ ನೆಪದಲ್ಲಿ ಇಸ್ಮಾಯಿಲ್‌ನ ಚಹಾ ದೂಖಾನಿಗೆ ಭೇಟಿ ನೀಡುವುದು ಕೇಶವನಿಗೆ ಇತ್ತೀಚೆಗೆ ಮಾಮೂಲಾಗಿದೆ. ಮಸಾಲಾ ಚಹಾ ಕುಡಿಯುವಾಗ ಅಲ್ಲಿ ಕೆಲಸಕ್ಕಿದ್ದ ಮುನೀರನಂಥ ಹುಡುಗರ ಕತೆಗಳೂ ಗುಡ್ ಮಾರ್ನಿಂಗ್ ಹೇಳುತ್ತಿದ್ದವು. ಎರಡು ಬಿಲ್ಡಿಂಗುಗಳ ನಡುವಿನ ಕಿರಿದಾದ ಜಾಗದಲ್ಲಿ ಇಸ್ಮಾಯಿಲ್ ಗರಂಗರಂ ವಡಾ ಪಾವ್ ಮತ್ತು ಮಿಸಳ್ ಪಾವ್ ತಯಾರಿ ನಡೆಸುತ್ತಾನೆ. ಹುಡುಗರು ಸಬ್ಜಿ ಕತ್ತರಿಸುವುದು, ಬರ್ತನ್ ತೊಳೆಯುವುದು ಮುಂತಾದ ಕೆಲಸದಲ್ಲಿ ನೆರವಾಗುತ್ತಾರೆ. ಈ ಇಸ್ಮಾಯಿಲನದೂ ಒಂದು ಕತೆಯೇ! ವಿದರ್ಭದ ಕಡೆಯವನಾದ ಅವನು ಮುಂಬೈಗೆ ಬಾರದಿದ್ದರೆ ಕತೆಯಾಗುತ್ತಿರಲಿಲ್ಲವೋ ಏನೋ. ನಾಲ್ಕು ವರ್ಷದವನಿ¨ªಾಗ ಅಂಬೇಡ್ಕರರ ಮಹಾಪರಿನಿರ್ವಾಣ ಮೇಳಕ್ಕೆ ಹೊರಟಿದ್ದ ಅಪ್ಪ ಅಮ್ಮನೊಂದಿಗೆ ಮುಂಬೈಗೆ ಬಂದಿದ್ದ. ಶಿವಾಜಿ ಪಾರ್ಕಿನಲ್ಲಿ ಸೇರಿದ್ದ ಜನಸಾಗರದ ನಡುವೆ ಕಾಣೆಯಾಗಿಬಿಟ್ಟ. ದಾದರ್ ಸ್ಟೇಶನ್ನಿನ ಫ್ಲಾಟ್‌ಪಾರ್ಮಿನಲ್ಲಿ ಅಳುತ್ತ ನಿ¨ªೆ ಹೋಗಿದ್ದ ಅವನನ್ನು ಯಾವನೋ ಎತ್ತಿಕೊಂಡು ಹೋಗಿ ಭಾವುಕಾ ಧಕ್ಕಾದ ಅಡ್ಡೆಯಲ್ಲಿ ಆಶ್ರಯ ನೀಡಿದ್ದ. ಆ ಆಶ್ರಯದಾತನು ಅವನನ್ನು ವಾಪಸ್ ಕಳಿಸುವ ಪ್ರಯತ್ನ ಮಾಡಲಿಲ್ಲ. “ಗರೀಬಿಕೇ ಕಾರಣ್ ತೇರೆ ಪಿತಾಜಿ ತುಮೆØ ಮುಂಬೈಮೆ ಚೋಡೆRà ಗಯೇ ಹೈ’ ಎಂದು ಹಳೆಯದೆಲ್ಲ ಮರೆತು ಹೋಗುವಂತೆ ಕೈಗೆ ಬರೆ ಹಾಕಿದ್ದ. ಇಸ್ಮಾಯಿಲ್ ಎಂಬ ಮರುನಾಮಕರಣವನ್ನೂ ಮಾಡಿ ತನ್ನ ದಂಧೆಗೆ ಮದತ್ ಮಾಡಲು ತರಬೇತು ನೀಡಿದ್ದ. ಇಸ್ಮಾಯಿಲನಿಗೆ ಹನ್ನೆರಡು ವರ್ಷ ಆದಾಗ ಒಂದು ನಡುರಾತ್ರಿ ಆ ಆಶ್ರಯದಾತನನ್ನು ವಿರೋಧಿ ಗ್ಯಾಂಗ್‌ನವರು ಕೊಚ್ಚಿ ಹಾಕಿದರು. ಇಸ್ಮಾಯಿಲ್ ಅಲ್ಲಿಂದ ಓಡಿ ಹಾಜಿಅಲಿ, ಖಾವು ಗಲ್ಲಿ, ಧಾರಾವಿ ಸ್ಲಂ ಏರಿಯಾಗಳಲ್ಲಿ ತಿರುಗುತ್ತ ಮತ್ತೂಮ್ಮೆ ತಬ್ಬಲಿಯಾಗಿದ್ದ. ಆದರೆ, ಅಷ್ಟರಲ್ಲಿ ಮುಂಬೈ ಅವನಿಗೆ ಬದುಕುವುದನ್ನು ಕಲಿಸಿತ್ತು. ಶುರುವಿನಲ್ಲಿ ಏನೇನೋ ಮಾಡಿಕೊಂಡಿದ್ದವನು ಈಗ ಅವನ ಪ್ರೀತಿಯ ವಡಾಪಾವ್ ಮಾಡಿ ಮಾರುವುದಕ್ಕೆ ಸೆಟಲ್ ಆಗಿ¨ªಾನೆ. ಬಡತನದಿಂದ ಮುಂಬೈಗೆ ಬಂದ ಮುನೀರನಂಥ ಹುಡುಗರಿಗೂ ಆಸರೆಯಾಗಿ¨ªಾನೆ. ಸುಹಾಸಿನಿಗೆ ಇಸ್ಮಾಯಿಲನ ಈ ಕತೆ ಹೇಳಿದಾಗ ತುಂಬಾ ನೊಂದುಕೊಂಡಿದ್ದಳು. “ಅವನಿಗೆ ಅಪ್ಪ-ಅಮ್ಮ ಮತ್ತೆ ಸಿಗ್ತಾರಾ?’ ಎಂದು ಕೇಳುವಳು.
“ಸಿಕ್ಕೇ ಸಿಗ್ತಾರೆ’ ಎಂಬುದು ಮಾತ್ರ ಇಸ್ಮಾಯಿಲನ ವಿಶ್ವಾಸವಾಗಿತ್ತು. ಕೊಲೆಯಾದ ಆಶ್ರಯದಾತನನ್ನು ರಕ್ತದ ಮಡುವಿನಲ್ಲಿ ಕಂಡ ಆಘಾತದ ಕ್ಷಣದಲ್ಲಿ ಬಾಲಕ ಇಸ್ಮಾಯಿಲನಿಗೆ ತನ್ನ ಹಳೆಯ ಹೆಸರು ತುಕಾರಾಮ್ ತೋತ್ರೆ ಎಂಬುದು ನೆನಪಾಗಿತ್ತು. ಆದರೆ ಆಯಿಬಾಬಾ ಹೆಸರಾಗಲಿ, ಇಂಥದ್ದೇ ಊರು ಎನ್ನುವುದು ಮಾತ್ರ ನೆನಪಾಗಿರಲಿಲ್ಲ. ಹೀಗಾಗಿ ಮುಂಬಯಿಯÇÉೇ ಬದುಕುಳಿಯುವುದು ಅನಿವಾರ್ಯವಾಗಿತ್ತು. ಪ್ರತಿವರ್ಷವೂ ಮಹಾಪರಿನಿರ್ವಾಣ ದಿನದಂದು ಶಿವಾಜಿ ಪಾರ್ಕಿನಲ್ಲಿ ಸಾವಿರಾರು ಜನರಿಗೆ ವಡಾಪಾವ್ ಹಂಚುತ್ತಾನೆ. ಆ ದಿನ ಮರಾಠಿಯಲ್ಲಿ “ಮಿ. ತುಕಾರಾಮ್ ತೋತ್ರೆ’ ಎಂದು ಬರೆದುಕೊಂಡ ಟಿ. ಶರ್ಟ್ ಧರಿಸುತ್ತಾನೆ. ನೆರೆದ ಲಕ್ಷಾಂತರ ಜನರಲ್ಲಿ ತನ್ನ ಆಯಿಬಾಬಾ ಕೂಡ ಇರಬಹುದಾದ ಆಸೆ ಅವನಲ್ಲಿನ್ನೂ ಜೀವಂತವಾಗಿದೆ. “ಮಿಲೇಗಾ ಸಾಬ್, ಜರೂರೂ ಮಿಲೇಗಾ, ಕ್ಯೂಂ ನಹಿ ಮಿಲೇಗಾ?’ ಎನ್ನುವ ಮಾತನ್ನು ತನ್ನ ತಂದೆ-ತಾಯಿ ಬಗ್ಗೂ ಸುಹಾಸಿನಿಯ ಮಗನ ಬಗ್ಗೂ ಒಟ್ಟಾಗಿಯೇ ಹೇಳುತ್ತಾನೆ. ಇವೆಲ್ಲವನ್ನು ಸುಹಾಸಿನಿಗೆ ಕತೆ ಮಾಡಿ ಹೇಳುವಾಗ ಬರೆದರೆ ಒಳ್ಳೆಯ ಕತೆಯಾಗುತ್ತದೆ ಎಂದು ಕೇಶವನಿಗೆ ಅನಿಸಿದೆ.
ಇಸ್ಮಾಯಿಲನ ಕತೆಯನ್ನು ಕಳೆದುಹೋಗಲು ಬಿಟ್ಟುಬಿಡಬಾರದು! ಕೆಲಸದಿಂದ ಪೂರ್ತಿ ಬಿಡುಗಡೆಯಾದಾಗ ಅವನ ಅಂತರಂಗದ ಸೂಕ್ಷ್ಮ¾ಭಾವಗಳನ್ನು ಅಕ್ಷರಗಳಲ್ಲಿ ಹಿಡಿಯುವ ಪ್ರಯತ್ನ ಮಾಡಬೇಕು. “ಬಾದ್ ಮೇ ಮಿಲೆ¤à ಹೈ’ ಎಂದು ಸದ್ಯಕ್ಕೆ ಅಲ್ಲಿಂದ ವಿದಾಯ ಹೇಳಿ ಪಕ್ಕದ ಗಲ್ಲಿಗಳಲ್ಲಿ ನಡೆದು ಹೋದ.
.
.
ಕೇಶವನ ಅಲೆದಾಟದಲ್ಲಿ ದಿನದ ಧಾವಂತವು ತಣ್ಣಗಾಗಿತ್ತು. ಇಸ್ಮಾಯಿಲನಿಗೆ ಈಗ ಬಿಡುವಾಗಿರಬಹುದು ಎಂದು ಅತ್ತ ತಿರುಗಿದ. ಕೆಲಸದ ಮಕ್ಕಳೆಲ್ಲ ಉಂಡು ಮಲಗುವ ತಯಾರಿ ನಡೆಸಿದ್ದರು. ಹೊಸ ಸಿನೆಮಾ ಬಗ್ಗೆ, ಹೊಸ ಮೊಬೈಲ್ ಬಗ್ಗೆ ಮಾತನಾಡಿಕೊಳ್ಳಲು ಅವರಿಗೆ ಪುರಸೊತ್ತು ಸಿಕ್ಕಿತ್ತು. ಇಸ್ಮಾಯಿಲ್ ಕಾಟ್ ಮೇಲೆ ಮಲಗಿ ಯಾರಿಗೋ ಫೋನ್ ಮಾಡ್ತಿದ್ದ. ಕೇಶವನನ್ನು ಕಂಡೊಡನೆ ಮಾತು ನಿಲ್ಲಿಸಿ, “ಬೈಟೋ, ರೈಟರ್ ಸಾಬ್’ ಎಂದ. ಕೇಶವನು ಬಂದಿರುವುದನ್ನು ಕಂಡ ಮಲಗಿದ್ದ ಮುನೀರ್ ಎದ್ದು, “ನನ್ನ ಕತೆ ಕೂಡ ಬರಿ’ ಎನ್ನುವಂತೆ ಸುಮ್ಮನೇ ಮುಗುಳುನಗುತ್ತ ಮತ್ತೆ ಮಲಗಿದ. ಏಕಾಂತದಲ್ಲಿರುವ ಇಸ್ಮಾಯಿಲನನ್ನು ಮಾತಿಗೆಳೆಯುವ ಸುಸಮಯವಿದು ಅನಿಸಿ ಕೇಶವ ಅವನ ಪಕ್ಕದಲ್ಲಿ ಕೂತ. ಇಸ್ಮಾಯಿಲ್ ಸಾಬ್, “”ಅಬ್ ತಕ್ ಕಾ ಕಹಾನಿ ಆಪ್ ಸುನ್ ಲಿಯಾ… ಆಗೇ ಕಾ ಕಹಾನಿ ಆಪ್ ಖುದ್ ಲಿಖ್ ಸಕ್ತೇ ಹೈ” ಎಂದ. ಕೇಶವ ಪ್ರಶ್ನಾರ್ಥಕವಾಗಿ ಅವನತ್ತ ನೋಡಿದ. “”ಆಪ್ ತೋ ಅಕೇಲೆ ಹೈ… ಕೋಯಿ ದೋ-ಏಕ್ ಬಚ್ಚೋಂಕೋ ಗೋದ್ ಮೆ ಲೇಲೋ… ಆಪಾR ಘರಮೆ ರಖೋ, ಸ್ಕೂಲ್ ಭೇಜೋ… ಫಿರ್ ದೇಖೋ, ಯೇ ಸಬ್ ಕಹಾನಿ ಸೇ ನಿಕಲಕೇ ಹಕೀಕತ್ ಬನೇಗಾ ಸಾಬ್” ಎಂದ.
ಇಸ್ಮಾಯಿಲ್ ಇದುವರೆಗಿನ ಕಹಾನಿಯ ಸ್ವರೂಪವನ್ನು ಪಲ್ಲಟಗೊಳಿದ್ದ !
.
.
ವಿಟಿ ಸ್ಟೇಶನ್ನಿಗೆ ಬಂದಾಗ ಆ ರಾತ್ರಿಯಲ್ಲೂ ಪ್ಲ್ರಾಟ್‌ಫಾರ್ಮ್ನಲ್ಲಿ ಅಷ್ಟೊಂದು ಜನರನ್ನು ನೋಡಿ ಏನೋ ಗಡಬಡ್ ಆಗಿರುವುದು ಖಾತ್ರಿಯಾಯಿತು. ಹಾಬರರ್ ಲೈನಿನ ಮಾಂಖುರ್ಡ್ ಸ್ಟೇಶನ್ನಿನ ಬಳಿ ಕುಚ್ ಲಫಡಾ ಆಗಿದೆಯಂತೆ. ಠೀಕ್ ಆಗಲು ಸಮಯ ಬೇಕಂತೆ. ಕೇಶವನಿಗೆ ಆ ಭೀಡ್‌ನಲ್ಲಿ ನೂರಾರು ಕತೆಗಳು ನಿಟ್ಟುಸಿರು ಬಿಡುತ್ತಿರುವಂತೆ ಅನಿಸಿತು. ಯಾಕೋ ಕತೆಗಳಿಂದ ಹೈರಾಣಾದವನಂತೆ ಅಜಾದ್ ಮೈದಾನ ಕಡೆ ಹೋಗಿ ಫ್ಯಾಶನ್ ಸ್ಟ್ರೀಟಿನ ಪಕ್ಕ ನಡೆದ. ತಡರಾತ್ರಿವರೆಗೂ ಝಗಮಗಿಸುವ ಬೆಳಕಿನಲ್ಲಿ ಕನಸಿನ ಲೋಕವನ್ನೇ ಸೃಷ್ಟಿಸಿದ್ದ ಫ್ಯಾಶನ್ ಸ್ಟ್ರೀಟ್ ಕತ್ತಲಲ್ಲಿ ಕುರೂಪಿಯಾಗಿ ಮಲಗಿತ್ತು. ಈಗ ಕನಸು ಕಾಣುವುದು ಅಲ್ಲಿ ಕೆಲಸಕ್ಕಿದ್ದ ಕಿಶೋರರ ಸರದಿ. ಮುಖದವರೆಗೂ ಚಾದರ ಎಳೆದು ನಿದ್ರಿಸುತ್ತಿದ್ದ ಹುಡುಗರ ಸಾಲುಗಳ ತುದಿಗೆ ಬಂದಾಗ ತಿರುಗಿ, “”ಸುಹಾಸಿನಿ ಮಗನೇ… ಸುಪ್ರೀತ್” ಎಂದು ಕೂಗಿದ. ಅಲ್ಲಿಂದ ಓವಲ್ ಗ್ರೌಂಡಿನತ್ತ ನಡೆದ. ನಟ್ಟನಡುವೆ ಬಂದು ಕೂತ. ಹಗಲಿಗೆ ಕ್ರಿಕೆಟ್ಟು , ಫುಟ್‌ಬಾಲು ಆಡುವಾಗ ನೂರಾರು ಮಕ್ಕಳಿಂದ ತುಳಿಸಿಕೊಂಡ ಈ ಮೈದಾನವು ದಣಿವಾರಿಸಿಕೊಳ್ಳುತ್ತಿದೆ. ಮೈದಾನದ ಸುತ್ತಲಿನ ರಸ್ತೆಗಳೂ ಫುಟ್‌ಪಾತುಗಳೂ ವಿರಮಿಸಿಕೊಳ್ಳುವ ತಯಾರಿ ನಡೆಸಿವೆ. ಫುಟ್‌ಪಾತುಗಳ ಮೇಲೆ ನಿ¨ªೆಹೋದವರ ಹೃದಯ ಬಡಿತಗಳೂ, ಮನದ ಮಿಡಿತಗಳೂ ನೆಲದ ಕಂಪನದ ರೂಪದಲ್ಲಿ ಕೇಶವನಿಗೆ ಗ್ರಹೀತವಾಗುತ್ತಿದೆ. ತಲೆದಾಟಿ ಹೋಗುವ ಸಾವಿರಾರು ಬೂಟುಗಾಲುಗಳ ನಡುವೆ ಮುನೀರನ ಮುಗುಳುನಗು ಇನ್ನೂ ಜಾಗರಣೆಯಲ್ಲಿರಬಹುದು.
ಇಸ್ಮಾಯಿಲ್ ಹಕೀಕತ್ತಿನ ಹಾಸಿಗೆ ಮೇಲೆ ಕಹಾನಿಗಳ ತಲೆದಿಂಬಿಟ್ಟು ಮಲಗಿರಬಹುದು. ಓ ಮುಂಬಯಿ! ನಿನ್ನ ಒಡಲು ಅದೆಷ್ಟು ದೊಡ್ಡದು! ಯಾರನ್ನೂ ನೀನು ದೂರ ತಳ್ಳುವುದಿಲ್ಲ. ಮಾನವಂತರೂ ಮವ್ವಾಲಿಗಳೂ ಕೇಡಿಗಳೂ ಒಡನಾಡಿಗಳೂ ಯಾರನ್ನೂ! ಅನಾಥರೂ ನಿನ್ನಲ್ಲಿ ತಬ್ಬಲಿಗಳಲ್ಲ. ಸೂರಿಲ್ಲದವರಿಗೆ ಫುಟ್‌ಪಾತುಗಳನ್ನೇ ಸೆರಗಂತೆ ಹಾಸಿ ಸಹಸ್ರಾರು ಜನರಿಗೆ ಆಸರೆ ನೀಡುವ ನೀನು ತಾಯಿ. ಸಕಲರನ್ನೂ ಕನಸಿನ ತೊಟ್ಟಿಲಲ್ಲಿ ತೂಗುವ ಮಹಾಮಾಯಿ.
ಎದೆಭಾರ ಹೆಚ್ಚಾಗಿ ಎದ್ದು ಕೂತ. ನೋಟ್‌ಬುಕ್ ತೆಗೆದು ಕಟುವಾಸ್ತವ ಚಿತ್ರಗಳೆಲ್ಲವೂ ಆ ಕ್ಷಣದ ಭಾವದ್ರವ್ಯವಾಗಿ ಹನಿಸಿದಂತೆ, “ಸರ್ವಾಂಚಿ ಆಯಿ ಆಮಿc ಮುಂಬಯಿ’ ಎಂಬ ಸಾಲು ಗೀಚಿದ. ಉತ್ಕಟ ಭಾವದ ಅಭಿವ್ಯಕ್ತಿಯು ಕಹಾನಿ ಮತ್ತು ಹಕೀಕತ್ತುಗಳು ಭಾಷೆಯಾಗುವ ಭಾರಕ್ಕೆ ದಣಿವು ತರಿಸುತ್ತಿವೆ ಎನಿಸಿ ಕೇಶವ ಮತ್ತೆ ನೆಲಕ್ಕೆ ಒರಗಿದ. ಮೇಲೆ ಅನಂತ ಆಕಾಶ; ಚೆÇÉಾಪಿಲ್ಲಿಯಾಗಿರುವ ಚುಕ್ಕಿಗಳನ್ನು ನೆಲಕ್ಕುದುರದಂತೆ ತಬ್ಬಿ ಹಿಡಿದಿದೆ. ಆಕಾಶದಲ್ಲೂ ಫುಟ್‌ಪಾತುಗಳಿರಬಹುದು; ಅವ್ಯಕ್ತ ಸಂವೇದನೆಗಳೂ, ಅಪೂರ್ಣ ಕತೆಗಳೂ!
ಕೇಶವನ ಆದ್ರì ಕಣ್ಣುಗಳಿಗೆ ತಾರೆಗಳು ಮಿಸುಕಾಡುತ್ತಿರುವಂತೆ ಕಂಡವು. ನಿ¨ªೆಯ ಭಾರಕ್ಕೆ ಇನ್ನೇನು ರೆಪ್ಪೆಗಳು ಮುಚ್ಚಬೇಕು, ಓವಲ್ ಗ್ರೌಂಡ್‌ನ ಪರಿಧಿಯಲ್ಲಿ ಕಾಣಿಸಿದ ಆಕೃತಿಯೊಂದು ಕೇಂದ್ರದತ್ತಲೇ ನಡೆದುಬರುವುದನ್ನು ಕಂಡು ಥಟ್ಟನೆ ಎದ್ದ. ಈ ನಡುರಾತ್ರಿ ಮೀರಿದ ಸಮಯದಲ್ಲಿ ದೂರದ ಹಿಂಬೆಳಕನ್ನು ಕುಲುಕಾಡಿಸುತ್ತ ಹತ್ತಿರವಾಗುತ್ತಿರುವವರು ಯಾರಿರಬಹುದು? “”ಮುನೀರನನ್ನು ದತ್ತು ತಗೊಂಡು ಹೊಸ ಕತೆ ಬರೀರಿ ಸಾರ್” ಎಂದಾಗ ಕಣ್ಣಲ್ಲಿ ಕನಸು ತುಂಬಿಕೊಂಡ ಮುನೀರನೆ? ಫುಟ್‌ಪಾತಿನಲ್ಲಿ ತಿರುಗುವಾಗ ಸುಹಾಸಿನಿಯ ಮಗನ ಹೆಸರು ಹಿಡಿದು ಕೂಗಿದ್ದನ್ನು ಕೇಳಿಸಿಕೊಂಡು ಅವನೇ ಹಿಂಬಾಲಿಸಿ ಬರುತ್ತಿರುವನೆ? ಹುಡುಕಾಟದಲ್ಲಿ ಅಂಡಲೆಯುತ್ತಿರುವ ತನ್ನನ್ನೇ ಯಾರಾದರೂ ಹುಡುಕುತ್ತಿರಬಹುದೆ… ಸುಹಾಸಿನಿಗೆ ಹೇಳಲು ಹೊಸ ಕತೆಯೊಂದು ತನ್ನೆದುರು ಬರುತ್ತಿದೆ ಎಂಬ ವಿಶ್ವಾಸದಲ್ಲಿ ಕೇಶವ ಆಕೃತಿ ಸ್ಪಷ್ಟವಾಗುವುದನ್ನೇ ಕಾದು ಕೂತ.
– ರಾಜೀವ ನಾರಾಯಣ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.