ಸಂಗೀತ ಕಲಿಕೆ ಎಂಬ ಮಂತ್ರೋಪಾಸನೆ
Team Udayavani, Mar 18, 2018, 7:30 AM IST
ದೊಡ್ಡ ಹಿಮಪರ್ವತವೊಂದು ನಿಮ್ಮ ಕಣ್ಣ ಮುಂದಿದೆ. ನಿಮಗೆ ಬೇಕಾದದ್ದು ಆ ಹೊತ್ತಿನ ದಾಹವನ್ನು ಇಂಗಿಸುವಂಥ ಬೊಗಸೆ ನೀರು. ನಿಮ್ಮ ದಾಹವು ಆ ಬೊಗಸೆ ನೀರಿಗೆ ಇಂಗಿ ನೀವು ಸಂತೃಪ್ತರಾದರೆ ನಿಮಗೂ ಮತ್ತು ಆ ಹಿಮಪರ್ವತಕ್ಕೂ ಮತ್ತೆ ಸಂಬಂಧವಿಲ್ಲ. ಒಂದು ವೇಳೆ ದಾಹ ಇಂಗಲಿಲ್ಲವಾದರೆ, ಮತ್ತು ಆ ದಾಹವು ನಿರಂತರವಾಗಿದ್ದರೆ ಒಂದು ದಿನ ನೀವು ಮತ್ತೂಂದು ಹಿಮಪರ್ವತವಾಗಿಬಿಡುತ್ತೀರಿ. ಹೇಗಿದ್ದರೂ ಆ ಹಿಮಪರ್ವತದ ಮೈಯ ಹಿಮವು ನೀರಾಗಿ ಹರಿಯುವುದು ನಿಲ್ಲುವುದಿಲ್ಲ ಮತ್ತು ಮತ್ತಷ್ಟು ಹಿಮವು ಅಲ್ಲಿ ಹುಟ್ಟಿ ನೀರಾಗುವುದೂ ನಿಲ್ಲುವುದಿಲ್ಲ. ನಾವಂದುಕೊಳ್ಳಬೇಕಾದದ್ದು, ತೀರ್ಮಾನಿಸಬೇಕಾದದ್ದು ಇಷ್ಟೆ. ನಾವು ಆ ಪರ್ವತದ ನೀರನ್ನು ಬದುಕಲು ಬಳಸಬೇಕೆಂದಿದ್ದೇವೆಯೊ ಅಥವಾ ಆ ನೀರನ್ನು ನಾವು ಸತತ ಕುಡಿಯುತ್ತ ಮತ್ತೂಂದು ಹಿಮಪರ್ವತವಾಗಿ ಬೆಳೆಯಬೇಕು ಎಂದಿದ್ದೇವೆಯೋ. ಸಾಂಕೇತಿಕವಾಗಿ ಗುರು ಮತ್ತು ಶಿಷ್ಯರ ಮುಖಾಮುಖೀಯು ಹೀಗಿರುತ್ತದೆ. ಗುರುವೊಬ್ಬ ಹಿಮಪರ್ವತ ಮತ್ತು ಶಿಷ್ಯ ಆ ಪರ್ವತದ ಎದುರು ನೀರಡಿಕೆಗಾಗಿ ನಿಂತ ಸಾಮಾನ್ಯ. ನೀರಡಿಕೆ ನಿಂತಲ್ಲಿ ಶಿಷ್ಯನೂ ನಿಲ್ಲುತ್ತಾನೆ. ಗುರು ಬೆಳೆಯುತ್ತಲೇ ಹೋಗುತ್ತಾನೆ.
ಮುಖ್ಯವಾಗಿ ಶಾಸ್ತ್ರೀಯ ಸಂಗೀತದಲ್ಲಿ ಶಿಷ್ಯನಾಗಬಯಸುವವನಿಗೂ ಶಾಸ್ತ್ರೀಯ ಸಂಗೀತವನ್ನು ಕಲಿಯಬಯಸುವವನಿಗೂ ಇದೇ ವ್ಯತ್ಯಾಸ. ಕಲಿಯುವವನ ಆಸಕ್ತಿ ಕಲಿಯುವುದರಲ್ಲಿರುತ್ತದೆ. ಕಲಿತು ತನ್ನ ಶಾಸ್ತ್ರಸಂಪತ್ತಿನ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದರಲ್ಲಿರುತ್ತದೆ ಮತ್ತು ಈ ಸಂದರ್ಭದಲ್ಲಿ ಕಲಿಯುವ ದಾಹವು ಮುಗಿದು ಕಲಿಯುವ ಪ್ರಕ್ರಿಯೆಗೆ ಮುಕ್ತಾಯವೂ ಇರುತ್ತದೆ.
ಆದರೆ, ಶಿಷ್ಯನು ಯಾವಾಗಲೂ ಶಿಷ್ಯನಾಗಿಯೇ ನಿಲ್ಲುತ್ತಾನೆ ಮತ್ತು ಗುರುವಿನಷ್ಟು ಬೆಳೆದರೂ ಶಿಷ್ಯನಾಗಿಯೇ ನಿಲ್ಲುತ್ತಾನೆ. ಮಗಳ ಕಂಕುಳಲ್ಲಿ ಹಸುಗೂಸನ್ನು ನೋಡಿದ ಅಮ್ಮ ಹೇಳುತ್ತಾಳಲ್ಲ, “ನೀನು ಅಮ್ಮನಾದರೂ ನನಗೆ ನೀನು ಮಗಳೇ!’ ಹಾಗೆ. ಶಿಷ್ಯ ಗುರುವಾಗುತ್ತಾನೆ. ಅಲ್ಲೊಂದು ಗುರುತ್ವ ಬರುತ್ತದೆ ಅಷ್ಟೆ, ಆ ಗುರುಸ್ಥಾನದ ನಶ್ವರತೆಯು “ನಿಜ’ವಾಗಿ ನಿಲ್ಲುವುದೇ ಶಿಷ್ಯವೃತ್ತಿಯ ಪರಂಪರೆಯ ಮೇಲೆ.
ಈ ಪರಂಪರೆ ಎನ್ನುವುದು ಬಹುತೇಕ ಸಂದರ್ಭದಲ್ಲಿ ಘರಾನೆಯ ಪರ್ಯಾಯವಾಗಿಬಿಡುವುದು ಮತ್ತು ವ್ಯಕ್ತಿಕೇಂದ್ರಿತವಾಗಿಬಿಡುವುದು ಬೇಸರದ ಸಂಗತಿ. ಶಾಸ್ತ್ರೀಯ ಸಂಗೀತದ ಪರಂಪರೆಯೆಂದರೆ ಅದು ಶಾಸ್ತ್ರೀಯ ಸಂಗೀತದ್ದು. ಇಲ್ಲಿ ಪರಂಪರೆಯು ಸಂಗೀತದ ಪರ್ವತಗಳನ್ನು ಹುಟ್ಟಿಸುತ್ತದೆ. ಇನ್ನು ಆ ಪರ್ವತಗಳ ಶಕ್ತಿಯ ಮೇಲೆ ಘರಾನೆಗಳು, ಉತ್ತರದಾಯಿತ್ವದ ಸಾಮರ್ಥ್ಯ ಇತ್ಯಾದಿ ನಿರ್ಧಾರವಾಗುತ್ತದೆ.
ಇನ್ನು ಪರಂಪರೆಯನ್ನು ಅಭ್ಯಾಸ ಮಾಡಿಯೇ ಶಿಷ್ಯನಾಗುವವನು ಗುರುವನ್ನು ಅರಸಿ ಹೋಗುತ್ತಾನೆ ಎಂದೇನಿಲ್ಲ. ಯಾವುದೋ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಕ್ಕೆ ಮೊದಲ ಬಾರಿಗೆ ಹೋಗಿ ಸಂಗೀತದ ನಿಜವಾದ ಅನುಭವವನ್ನು ಪಡೆದ ವ್ಯಕ್ತಿಯೊಬ್ಬನಿಗೆ ಇದ್ದಕ್ಕಿದ್ದಂತೆ ಸಂಗೀತ ಕಲಿಯಬೇಕು ಎನ್ನಿಸಿ ಸಿಕ್ಕಿದ ಸಂಗೀತಮೇಷ್ಟ್ರನ್ನು ಹಿಡಿದು ಸಂಗೀತದ ಮೂಲಪಾಠಗಳನ್ನು ಹೇಳಿಸಿಕೊಳ್ಳಲು ಶುರುಮಾಡುವ ಜನರ ಸಂಖ್ಯೆಯೇ ನಿಜವಾಗಿ ಹೆಚ್ಚು. ಕೊನೆಗೆ ಸಂಗೀತದಲ್ಲಿ ಬೆಳೆದು ಸಂಗೀತವನ್ನೂ ಶ್ರೀಮಂತಗೊಳಿಸುವ ಮಹಾನುಭಾವರನ್ನು ಅವತಾರವೆಂದೇ ಹೇಳಬಹುದು.
ನನ್ನ ಗುರುಗಳಾದ ಪಂಡಿತ್ ಸಂಜೀವ್ ಕೊರ್ತಿಯವರ ವಿದೇಶಯಾತ್ರೆಯ ಸಂದರ್ಭದ ವಿಷಯವಿದು. ಸುಮಾರು ಎಂಟು ದಿನಗಳ ಅವರ ಆ ಯಾತ್ರೆಯಲ್ಲಿ ಆ ದೇಶದಲ್ಲಿಯೇ ಉಳಿದುಕೊಂಡಿದ್ದ ಅವರ ಶಿಷ್ಯನಿಗೆ ಗುರುಗಳನ್ನು ಕಂಡು ಅತೀ ಉತ್ಸಾಹ. ಹೊಟ್ಟೆಪಾಡಿಗೆ ಅಲ್ಲೆಲ್ಲೊ ಇದ್ದು ಬೆಂಗಳೂರಿಗೆ ಬಂದಾಗಲೆಲ್ಲ ಶಿಷ್ಯವೃತ್ತಿಯನ್ನು ಕಾಪಾಡಿಕೊಳ್ಳುತ್ತ ಸಿಕ್ಕಷ್ಟನ್ನು ಕಲಿತು ಸಿಕ್ಕಿದುದರಲ್ಲಿ ತೃಪ್ತನಾಗುತ್ತ ತನ್ನ ಜ್ಞಾನದ ವಿಚಾರದಲ್ಲಿ ತನ್ನ ಹಣೆಬರಹವು ಇಷ್ಟೆ ಎಂದು ತನ್ನ ಭಾಗ್ಯವನ್ನು ಹಳಿದುಕೊಳ್ಳುತ್ತ ಇದ್ದ ಅವರ ಶಿಷ್ಯನಿಗೆ ಈಗ ಹೀಗೆ ಒದಗಿಬಂದ ಈ ಎಂಟು ದಿನಗಳ ಗುರುವಿನ ಸಾಂಗತ್ಯ ಮತ್ತು ಸಾಹಚರ್ಯ ಎಂಬುದೊಂದು ಅಸಾಧಾರಣ ಸಂಗತಿ. ಗುರುವಿನ ಯಾತ್ರೆ ಶುರುವಾಗುವುದಕ್ಕಿಂತ ತಿಂಗಳುಗಟ್ಟಲೆ ಮುಂಚಿತವಾಗಿಯೇ ಈ ಶಿಷ್ಯೋತ್ತಮನು ತನ್ನ ಅನುಮಾನಗಳನ್ನು, ತಾನು ಕಲಿಯಬಯಸುವ ರಾಗಗಳನ್ನೆಲ್ಲ ಪಟ್ಟಿ ಮಾಡಿಟ್ಟುಕೊಂಡು ಸಿದ್ಧನಾಗಿದ್ದವನಿಗೆ, ಗುರುವನ್ನು ಕಂಡ ಕೂಡಲೇ ಆ ಪಟ್ಟಿಯನ್ನು ತೋರಿಸುವುದಿರಲಿ, ಆ ಪಟ್ಟಿಯಲ್ಲಿರುವ ಒಂದೇ ಒಂದು ಅನುಮಾನವನ್ನೂ ಕೇಳುವ ಮನಸ್ಸಾಗಲಿಲ್ಲ.
ಒಂದು ಬಗೆಯಲ್ಲಿ, ಸಾವಿರಾರು ಬಿಳಲುಗಳನ್ನು ಭೂಮಿಗೆ ಚೆಲ್ಲಿ ನಿಂತ ಆಲದ ಮರದ ಎದುರು ನಿಂತು ಬಿಳಲು ಎಂದರೇನೆಂದು ಅರ್ಥಮಾಡಿಸಿ ಎಂಬ ಪ್ರಶ್ನೆಯಂತೆ, ಗುರುವಿನ ಎದುರು ಕೇಳಬೇಕು ಎಂದೆನ್ನಿಸಿದ ಪ್ರಶ್ನೆಗಳ ಪಟ್ಟಿಗೆ ಯಾವ ಅರ್ಥವೂ ಇಲ್ಲವೆನ್ನಿಸಿ ಆ ಶಿಷ್ಯನಿಗೆ ಇನ್ನಿಲ್ಲದ ಗುರುಭಯ, ಗಾಬರಿ. ಅತ್ತ ಗುರುಗಳದ್ದು ಯಾವತ್ತಿನಂತೆ ಪ್ರಸನ್ನ, ಶಾಂತ ಮತ್ತು ನಿರ್ಲಿಪ್ತಸ್ಥಿತಿ.
ಜೀವನದಲ್ಲೂ ಸತ್ಯವೇ ಆದರೂ, ಸಂಗೀತದಲ್ಲಿ ಕಲಿಯುವಿಕೆ ಎಂಬುದಕ್ಕೆ ಬಹಳ ಮುಖವಿದೆ. ಆಧುನಿಕ ಜಗತ್ತಿನ ದೃಷ್ಟಿಯಲ್ಲಿ ಭಾರತೀಯ ಸಂಗೀತದ ಕಲಿಯುವ ಹಂತವು ಬಹಳ ಕಠಿಣ ಅಥವಾ ಬಹಳ ಒರಟಾದ ಪದ್ಧತಿ ಎಂದು ಮೇಲ್ನೋಟಕ್ಕೆ ಕಂಡರೂ ಆ ಪದ್ಧತಿಯು ಕಲಿಯುವಿಕೆಯ ಹಂತಗಳನ್ನು ಮೀರುತ್ತ ಶರೀರ ಮತ್ತು ಮನಸ್ಸಿನ ಮೇಲೆ ಆವಿರ್ಭಾವವಾಗುವ ಸಂಗೀತದ ಎಲ್ಲ ಅಂಶಗಳೂ ಒಂದು ಶಿಷ್ಯನೊಳಗಿನ ಸಾಧಕನನ್ನು ಪ್ರೇರೇಪಿಸುತ್ತದೆ.
ಪಂಡಿತ್ ಸಂಜೀವ್ ಕೊರ್ತಿಯವರ ಆ ವಿದೇಶ ಪ್ರವಾಸದಲ್ಲಿ, ಆ ಶಿಷ್ಯ ಕಾಯುತ್ತ ಹೋದ. ಅಲ್ಲಿ ಗುರುಗಳು ಶಿಷ್ಯನನ್ನು ಕಾಯಿಸಲಿಲ್ಲ. ಬದಲಾಗಿ ಸಾಧಕನಾಗುವ ಏಣಿಯನ್ನು ಅವನ ಮುಂದೆ ತೆರೆದಿಟ್ಟರು. ಪ್ರವಾಸದುದ್ದಕ್ಕೂ ಪಕ್ಕದಲ್ಲಿ ಕುಳ್ಳಿಸಿರಿಕೊಂಡು ಅವನೆದುರು ಗುರುಗಳು ನುಡಿಸುತ್ತಿದ್ದರೇ ಹೊರತು, ಅಥವಾ ತಾವು ನುಡಿಸುವ ನಡುವೆ ಆತನಿಗೆ ನುಡಿಸಲು ಅವಕಾಶ ಮಾಡಿ ಪರಮಪ್ರೀತಿಯಿಂದ ಅವನನ್ನು ತಿದ್ದುತ್ತಿದ್ದರೇ ಹೊರತು ಅವನಂದುಕೊಂಡಂತೆ ಹೊಸರಾಗ ಎಂದೇನೂ ಹೇಳಿಕೊಡಲಿಲ್ಲ. ಅವರು ನುಡಿಸುತ್ತಿದ್ದ ರಾಗಗಳನ್ನು ಇವನೂ ನುಡಿಸಬೇಕಾಗಿತ್ತು, ಆಲಿಸಬೇಕಾಗಿತ್ತು, ಅರ್ಥ ಮಾಡಿಕೊಳ್ಳಬೇಕಾಗಿತ್ತು ಮತ್ತು ಈ ಗುರುಶಿಷ್ಯ ಸಾಹಚರ್ಯವನ್ನು ಆನಂದಿಸಬೇಕಾಗಿತ್ತು. ಅವನು ತೀರಾ ಭಾವುಕನಾಗಿ ಒಂದು ವಿಷಯವನ್ನು ಹೀಗೆ ಆಗಾಗ ಹಂಚಿಕೊಳ್ಳುತ್ತಾನೆ. ಗುರುಗಳು ಹೊರಡುವ ಕೊನೆಯ ದಿನದ ದೀರ್ಘವಾದ ಒಂದು ಕಾರಿನ ಪ್ರಯಾಣದಲ್ಲಿ ಅವನತ್ತ ನೋಡಿ ಝಪ್ ತಾಳವನ್ನು ಕೈಯಲ್ಲಿ ಮತ್ತು ಬೋಲ್‌ಗಳ ಮೂಲಕ ತೋರಿಸುತ್ತ, ತಾಳವನ್ನು ಹಾಗೆ ನಿರಂತರ ಕಾಯ್ದುಕೊಳ್ಳಲು ಹೇಳಿ ಆತನಿಗೊಂದು ಅತ್ಯಂತ ಆಪ್ಯಾಯಮಾನವಾದ ಎರಡು ಸುಂದರ ಮತ್ತಷ್ಟೇ ಕ್ಲಿಷ್ಟವಾದ ಬಂದಿಶ್‌ಗಳನ್ನು ಹೇಳಿಕೊಟ್ಟರಂತೆ! ಆ ಸಂದರ್ಭದಲ್ಲಿ ಕೆಲವೇ ನಿಮಿಷಗಳಲ್ಲಿ ಅವರು ಹಾಗೆ ಕಲಿಸಿದ ಆ ಎರಡು ಬಂದಿಶ್‌ಗಳು ತನ್ನ ಜೀವನದ ಗಾಯತ್ರೀ ಮಂತ್ರ ಎಂದು ಭಾವಿಸುತ್ತಾನೆ ಆ ಮಿತ್ರ!
ಸರಿಯಾದ ಗುರುವಿನಿಂದ ಮಂತ್ರದ ಉಪದೇಶಕ್ಕಾಗಿ ಕಾಯುವ ಮಂತ್ರೋಪಾಸಕನಂತೆ, ಸಂಗೀತ ಸಾಧಕನೂ ಹೌದು. ತೃಪ್ತಿ ಮತ್ತು ಜೀವನ ಇವೆರಡೂ ಒಂದೇ ಕಾಲಘಟ್ಟದ ರಾಗದ ಹಾದಿಯಲ್ಲಿ ಸುಲಭಕ್ಕೆ ಸಿಗುವುದಿಲ್ಲ ! ಗುರುವೇ ದಿಕ್ಕು ಮತ್ತು ದಾರಿ.
ಕಣಾದ ರಾಘವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.