ಹಳಗನ್ನಡ ಎಂದರೆ ಹಳೆಯದಲ್ಲ , ಈ ಕಾಲದ್ದು ಕೂಡ!
Team Udayavani, Jun 17, 2018, 11:25 AM IST
ಕನ್ನಡ ಸಾಹಿತ್ಯ ಪರಿಷತ್ತು 2018, ಜೂನ್ 24ರಿಂದ ಮೂರು ದಿನಗಳ ಕಾಲ ಶ್ರವಣಬೆಳಗೊಳದಲ್ಲಿ ಅಖೀಲ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದೆ. ಸಮ್ಮೇಳನದ ಸ್ವರೂಪದ ಕುರಿತ ಪರ-ವಿರೋಧ ಚರ್ಚೆಗಳೇನೇ ಇರಲಿ, “ಹಳಗನ್ನಡ’ ಎಂಬ ಶೀರ್ಷಿಕೆಯನ್ನು ಇರಿಸಿಕೊಂಡು ಈ ಕಾಲದಲ್ಲಿ ಒಂದು ಸಮ್ಮೇಳನ ನಡೆಸುತ್ತಿರುವ ಪ್ರಯತ್ನವನ್ನು ಸ್ವಾಗತಿಸಬೇಕಾಗಿದೆ. ಈ ಸಂದರ್ಭಕ್ಕಾಗಿ ಹಳಗನ್ನಡದ ಪ್ರಸ್ತುತತೆಯ ಕುರಿತು ಒಂದು ವಿಚಾರಪೂರ್ಣ ಲೇಖನ.
ಹಳಗನ್ನಡ ಎಂಬುದು ಈ ಕಾಲಕ್ಕೆ ಪ್ರಸ್ತುತವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಹಳಗನ್ನಡದ ಪ್ರಸ್ತುತತೆಯ ಬಗ್ಗೆ ನಾನು ಹಲವು ಸಮರ್ಥನೆಗಳನ್ನು ನೀಡಬಲ್ಲೆ.
1 ವಿಶ್ವದ ಎಲ್ಲ ಗ್ರಂಥಸ್ಥ ಭಾಷೆಗಳಿಗೂ ಜೀವನದಿಗಳು ಎನ್ನಬಹುದಾದ ಮಹಾಕಾವ್ಯಸಾಹಿತ್ಯದ ವಿವಿಧ ಮಾದರಿಗಳಿರುವುದು ಹಳೆಯ ಸಾಹಿತ್ಯಭಾಷೆದಲ್ಲಿಯೇ. ಹಾಗೆಯೇ ನಮ್ಮ ಕನ್ನಡ ಭಾಷೆಯಲ್ಲಿ ಅಂತಹ ಮಾದರಿಗಳಿರುವುದು ಹಳಗನ್ನಡದಲ್ಲಿಯೇ. ಆದ್ದರಿಂದ ಹಳೆಗನ್ನಡ ಭಾಷೆ, ಸಾಹಿತ್ಯಗಳ ಜ್ಞಾನ ಅನಿವಾರ್ಯ.
2 ಹಳಗನ್ನಡ ಭಾಷೆ, ಸಾಹಿತ್ಯಗಳು ಅನಂತರದ ನಡುಗನ್ನಡ, ಹೊಸಗನ್ನಡ ಭಾಷೆ-ಸಾಹಿತ್ಯಗಳಿಗೆ ಹಿಂದಿನಘಟ್ಟ. ಕರ್ನಾಟಕದ ಪರಂಪರೆಯ ಮುಖಗಳಾದ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಮಾಜ, ಧರ್ಮ, ಕಲೆ ಇವುಗಳ ಸ್ವರೂಪವನ್ನು, ಇತಿಹಾಸವನ್ನು, ಬೆಳವಣಿಗೆಯನ್ನು ಕ್ರಮವಾಗಿ ತಿಳಿಯಬೇಕಾದರೆ, ದಾಖಲಿಸಬೇಕಾದರೆ ಹಳಗನ್ನಡ ಭಾಷೆ-ಸಾಹಿತ್ಯಗಳ ಅನುಸಂಧಾನ- ಅಧ್ಯಯನಗಳು ಈಗಲೂ, ಇನ್ನು ಮುಂದೆಯೂ ತಪ್ಪದೆ ನಡೆಯುತ್ತಿರಲೇಬೇಕಾಗುತ್ತದೆ.
3 ಕರ್ನಾಟಕದ ನಾಡು-ನುಡಿಗಳ ಸುದೀರ್ಘ ಪರಂಪರೆಯ ಮಾಹಿತಿಯೆಲ್ಲ ವಿಶೇಷವಾಗಿ ಹಳಗನ್ನಡ ಭಾಷೆಯಲ್ಲಿಯೇ ಇರುವ ಗ್ರಂಥಸ್ಥ ಸಾಹಿತ್ಯವನ್ನು, ಶಾಸನ ಸಾಹಿತ್ಯವನ್ನು ಅವಲಂಬಿಸಿರುತ್ತದೆ, ಆಶ್ರಯಿಸಿರುತ್ತದೆ. ಇಂದಿಗೂ ನಮ್ಮ ನಡೆ-ನುಡಿಗಳಿಗೆ ಬೇಕಾಗುವ ಸಾಹಿತ್ಯದ ರಸಾನುಭವ, ಜ್ಞಾನಕೋಶದ ವಸ್ತುವಿವರಗಳು, ಚಿಂತನ ಕ್ರಮಗಳು, ಇತಿಹಾಸ ಪುರುಷರ ವಿಚಾರಗಳು, ಸಾಮಾಜಿಕ-ಸಾಂಸ್ಕೃತಿಕ ವಿವರಗಳು ಮತ್ತು ಮಾದರಿಗಳು, ಧರ್ಮಸೂಕ್ಷ್ಮದ ಸಂಗತಿಗಳು-ಜಿಜ್ಞಾಸೆಗಳು, ಮಾನವಿಕ ಮತ್ತು ವೈಜ್ಞಾನಿಕ ಶೋಧಗಳು, ಆಧುನಿಕ ವಿಜ್ಞಾನ ಶೋಧಗಳ ಹಳೆಯ ನೆಲೆಗಳು ಮತ್ತು ಶಾಸ್ತ್ರ ವಿಚಾರಗಳು-ಇವುಗಳ ಅಗಾಧ ಭಂಡಾರಗಳನ್ನು ಹೊರತೆಗೆಯುವವರಿಗೆ ಹಳಗನ್ನಡದಲ್ಲಿರುವ ಹಳೆಯ ಸಾಹಿತ್ಯದಲ್ಲಿ ಹೇರಳವಾಗಿ ಅವಕಾಶಗಳುಂಟು, ಆಹ್ವಾನಗಳುಂಟು.
ಹಳಗನ್ನಡ ಎಂದ ಕೂಡಲೇ ಸಾಮಾನ್ಯವಾಗಿ ಪಂಪ, ರನ್ನ, ಜನ್ನರಂಥ ಕವಿಗಳ ಕೃತಿಗಳು ಮನಸ್ಸಿಗೆ ಬರುತ್ತವೆ. ಆ ಗ್ರಂಥಗಳ ಓದು ಜೀವನಕ್ಕೆ ರಸಾಸ್ವಾದದ ಪ್ರಯೋಜನವನ್ನು ಮತ್ತು ಸಂಸ್ಕಾರವನ್ನು ಒದಗಿಸುತ್ತವೆ. ಇವೆಲ್ಲ ಸರಿಯೇ; ಆದರೆ ಹಳಗನ್ನಡದಲ್ಲಿ ಜ್ಞಾನಮೂಲವಾಗಿರುವ ಎಷ್ಟೊಂದು ಕೃತಿಗಳಿವೆ ! ಹೆಚ್ಚಿನವು ಅಚ್ಚಾಗಿವೆ. ಅಚ್ಚಾಗದಿರುವುದೂ ಸಾಕಷ್ಟು ಇರಬಹುದು. ಮುದ್ರಿತ ಕೃತಿಗಳನ್ನು ನಾವೆಷ್ಟು ಅಧ್ಯಯನ ಮಾಡಿದ್ದೇವೆ? ಹಳಗನ್ನಡ ಸಾಹಿತ್ಯದಲ್ಲಿ ಲೋಕೋಪಕಾರ ಎಂಬ ಕೃತಿಯಿದೆ. ಇದನ್ನು ಗೃಹವಿಶ್ವಕೋಶ (ಏಟಞಛಿ ಛಿncyclಟಟಚಛಿಛಜಿಚ) ಎಂದು ಹೇಳಬಹುದಾಗಿದೆ. ಇದರಲ್ಲಿ ಸಾಮಾನ್ಯಜ್ಞಾನಕ್ಕೆ ಸಂಬಂಧಿಸಿದ ಸಕಲ ಜೀವನೋಪಯೋಗಿ ಮಾಹಿತಿಗಳಿವೆ. ಅಗರಬತ್ತಿ ತಯಾರಿಸುವ ಗಂಧಯುಕ್ತಿ ಕ್ರಮ, ಗಿಡಗಳ ಕಸಿಕಟ್ಟುವುದು, ಅಡುಗೆ ಮಾಹಿತಿಗಳಂಥ ಹಲವು ವಿಚಾರಗಳು ಈ ಗ್ರಂಥದಲ್ಲಿವೆ. ಮಂಗರಸನ ಸೂಪಶಾಸ್ತ್ರ ಕೃತಿ ಪಾಕಶಾಸ್ತ್ರಕ್ಕೆ ಸಂಬಂಧಿಸಿದ್ದಾಗಿದೆ. ಸಕಲವೈದ್ಯಸಂಹಿತಾ ಸಾರಾರ್ಣವ ಎಂಬುದು ಹಳಗನ್ನಡದಲ್ಲಿರುವ ಮತ್ತೂಂದು ಮುಖ್ಯ ಗ್ರಂಥ. ಪ್ರಾಣಿವೈದ್ಯ, ಗಜವೈದ್ಯ- ಮುಂತಾದವುಗಳ ಔಷಧಿ ಬಳಕೆಯನ್ನು ನಿರ್ದೇಶಿಸುವ ಇಂಥ ಅನೇಕ ಕೃತಿಗಳಿವೆ. ಖಗೇಂದ್ರಮಣಿದರ್ಪಣ ದಲ್ಲಿ ವಿಷವೈದ್ಯವನ್ನು ನಿಭಾಯಿಸುವ ರಹಸ್ಯಗಳಿವೆ. ಇಂಥ ಪ್ರಾಚೀನ ಗ್ರಂಥಗಳನ್ನು ಓದಿ ಅರ್ಥಮಾಡಿಕೊಳ್ಳಲು ಹಳಗನ್ನಡ ಭಾಷೆ ಸಮಸ್ಯೆಯಾಗಿದೆ. ಇವತ್ತಿನ ಮಂದಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ. ಆಧುನಿಕ ವಿಜ್ಞಾನದ ಬೆಳಕಿನಲ್ಲಿ ಇಂಥ ಅಮೂಲ್ಯ ಕೃತಿಗಳ ಮಾಹಿತಿಗಳನ್ನು ಪರಿಶೀಲಿಸಿದರೆ ಈ ಕಾಲಕ್ಕೆ ಅದ್ಭುತವಾದ ಪ್ರಯೋಜನಗಳಿವೆ.
ನಮಗೆ ಅಗತ್ಯವಿರುವ ಎಲ್ಲ ಮಾಹಿತಿಗಳಿಗೆ ನಾವು ಪಾಶ್ಚಾತ್ಯ ಜ್ಞಾನಮೂಲದ ಮೇಲೆ ಅವಲಂಬಿತರಾಗಿದ್ದೇವೆ. “ನಮ್ಮಲ್ಲಿ ಏನಿದೆ’ ಎಂದು ಬಗೆದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ನಾವು ಕಷ್ಟಪಟ್ಟು ಸಂಸ್ಕೃತ ಕಲಿಯುತ್ತೇವೆ, ಇಂಗ್ಲಿಶನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ, ನಮ್ಮದೇ ಆದ ಹಳಗನ್ನಡದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಇಂಗ್ಲಿಶ್‌ನಂಥ ಭಾಷೆ ನಮಗೆ ಪೂರ್ಣ ಒಲಿಯುವುದಿಲ್ಲ. ಹಳಗನ್ನಡದ ಆಧಾರವಿಲ್ಲದೆ ಕನ್ನಡ ಕಲಿತುದರಿಂದ ಕನ್ನಡವೂ ಸರಿಯಾಗಿ ನಮ್ಮದಾಗುವುದಿಲ್ಲ !
ನಿಜವಾಗಿ ಹೇಳಬೇಕೆಂದರೆ ನಾವು ಈಗ ಬಳಸುತ್ತಿರುವುದು- ಕನ್ನಡ ಭಾಷೆಯ 10 ಶೇಕಡಾವನ್ನು ಮಾತ್ರ. ಉಳಿದ 90 ಶೇಕಡಾವನ್ನು ಕಳೆದುಕೊಂಡುಬಿಟ್ಟಿದ್ದೇವೆ. ನಾವು ವ್ಯವಹರಿಸುತ್ತಿರುವುದು ಒಂದು ರೀತಿಯ ಬೆರಕೆ ಕನ್ನಡದಲ್ಲಿ. ಇದು ಇತ್ತೀಚೆಗೆ ಅಧಿಕವಾಗುತ್ತದೆ. ಮಿಶ್ರ ಕನ್ನಡದ ಬಳಕೆಯು ದೇಸಿಭಾಷೆಯ ಸೊಬಗನ್ನು ಹಿಂದೆ ಸರಿಸುತ್ತದೆ. ಕನ್ನಡದ ಸುಂದರವಾದ ಪದಗಳು, ನುಡಿಗಟ್ಟುಗಳು ಪ್ರಸ್ತುತ ಬಳಕೆಯಲ್ಲಿಲ್ಲದ ಹಳೆಗನ್ನಡ- ನಡುಗನ್ನಡಗಳೊಂದಿಗೆ ಮರವೆಗೆ ಸರಿದುಹೋಗಿವೆ. ಹಳಗನ್ನಡದ ಅರಿವು ಇದ್ದರೆ ನಮ್ಮ ಕನ್ನಡದ ಬಳಕೆ ಎಷ್ಟೊಂದು ಸಮೃದ್ಧವಾಗಬಹುದು ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ.
5ನೆಯ ಶತಮಾನದಿಂದ 18ನೆಯ ಶತಮಾನದವರೆಗೂ ಇರುವ ಕನ್ನಡ ಮತ್ತು ಅದರ ನಂತರ ಬಳಕೆಯಾಗಿರುವ ಕನ್ನಡ- ಇವುಗಳನ್ನು ಒಮ್ಮೆ ಸರಿಯಾಗಿ ಪರಿಶೀಲಿಸಿದರೆ ಪ್ರಸ್ತುತ ಬಳಕೆಯಲ್ಲಿರುವ ಕನ್ನಡ ಎಷ್ಟೊಂದು ಪೇಲವವಾಗಿದೆ ಎಂಬುದು ಅರಿವಿಗೆ ಬರುತ್ತದೆ. ಹಳಗನ್ನಡವನ್ನು ಓದಿ, ಅರಿತರೆ ಅದರ ಆಧಾರದಲ್ಲಿ ನಡುಗನ್ನಡ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವುದು ಸುಲಭ. ಹಳಗನ್ನಡ ಮತ್ತು ನಡುಗನ್ನಡ ಅರ್ಥವಾದರೆ ಹೊಸಗನ್ನಡ ಅರಿಯುವುದು ಕಷ್ಟವೇ ಅಲ್ಲ. ಇತಿಹಾಸವನ್ನೇ ತಿಳಿಯದವನ ವರ್ತಮಾನದ ಬದುಕಿಗೆ ಏನು ಅರ್ಥವಿದೆ? ನಮ್ಮಲ್ಲಿ ಇಂಗ್ಲಿಶ್‌ಅನ್ನು ಒತ್ತಾಯದಿಂದ ಕಲಿಸುವಂತೆ ಹಳಗನ್ನಡವನ್ನು ಕಲಿಸುವ ಪ್ರಯತ್ನವೇಕೆ ನಡೆದಿಲ್ಲ?
ಹಳಗನ್ನಡವನ್ನು ಕಲಿಸುವವರಿಲ್ಲ ಎಂದು ನೀವು ಹೇಳಬಹುದು. ಇರುವವರೂ ತಪ್ಪುತಪ್ಪಾಗಿ ಕಲಿಸುವ ಸಾಧ್ಯತೆ ಇದೆಯೆಂಬುದೂ ನಿಜವೇ. ನಮ್ಮ ಶಿಕ್ಷಣ ವ್ಯವಸ್ಥೆ ಗಾಂಭೀರ್ಯವನ್ನು ಕಳೆದುಕೊಳ್ಳುತ್ತ ಬಂದಿರುವುದು ಹಳಗನ್ನಡ ಸಾಹಿತ್ಯ ಅವಜ್ಞೆಗೊಳಗಾಗಲು ಮುಖ್ಯ ಕಾರಣ.
ನಮ್ಮ ದಿನಗಳಲ್ಲಿ ಕಲಿಕೆ ಹೇಗಿತ್ತು ಎಂಬುದರ ಬಗ್ಗೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳಬಯಸುತ್ತೇನೆ. 1920-30ರ ಸುಮಾರಿಗೆ ಕನ್ನಡ ಎಂ.ಎ. ಮಾಡಿದವರೆಂದರೆ ಹಳಗನ್ನಡವನ್ನು ಚೆನ್ನಾಗಿ ಅರಗಿಸಿಕೊಂಡವರೆಂದೇ ಅರ್ಥ. ಅಷ್ಟೇ ಅಲ್ಲ , ಅನೇಕರು ತಮಿಳು, ತೆಲುಗು, ಬಂಗಾಲಿ, ಮರಾಠಿ, ಗ್ರೀಕ್‌ನಂಥ ಭಾಷೆಗಳನ್ನು ತಿಳಿದಿರುತ್ತಿದ್ದರು. ತಿಳಿದಿರುವುದೇನು, ಆಯಾ ಭಾಷೆಗಳ ಪಂಡಿತರೇ ಆಗಿರುತ್ತಿದ್ದರು. ಇವತ್ತು ಕನ್ನಡ ಎಂ.ಎ. ಮಾಡುವವರಲ್ಲಿ, “ಹಳೆಗನ್ನಡ ಬೇಕಾ?’ ಎಂಬ ಅವಜ್ಞೆ ಇದೆ. ಆದರೆ, ಆ ದಿನಗಳಲ್ಲಿ ಬಿ.ಎಂ. ಶ್ರೀಕಂಠಯ್ಯರಂಥ ಹಿರಿಯರು, “ಯಾವುದಾದರೂ ದ್ರಾವಿಡ ಭಾಷೆಯನ್ನು ಕಲಿಯತಕ್ಕದ್ದು’ ಎಂದು ವಿದ್ಯಾರ್ಥಿಗಳಿಗೆ ಸೂಚಿಸುತ್ತಿದ್ದರು.
ಆ ದಿನಗಳಲ್ಲಿ ಹಳಗನ್ನಡವೂ ಸೇರಿದಂತೆ ಪೂರ್ಣ ಕನ್ನಡವನ್ನು ತಿಳಿದಿರುತ್ತಿದ್ದರು; ಸಂಸ್ಕೃತ ಸಹಜವಾಗಿ ತಿಳಿದಿರುತ್ತಿತ್ತು; ಇಂಗ್ಲಿಶ್ ಹೊರಗಿನ ಕಲಿಕೆಯಿಂದ ಬರುತ್ತಿತ್ತು. ಇದರ ಜೊತೆಗೆ ತಮಿಳು ಅಥವಾ ತೆಲುಗು- ಯಾವುದಾದರೂ ಭಾಷೆಯ ಆಳವಾದ ಅಧ್ಯಯನ ಅನಿವಾರ್ಯವಾಗುತ್ತಿತ್ತು.
“ಇಷ್ಟೆಲ್ಲ ಕಷ್ಟಪಡುವ ಅಗತ್ಯವೇನು?’ ಎಂದು ಇಂದಿನವರು ಕೇಳಬಹುದು.
ಒಂದು ಭಾಷೆಯನ್ನು ಸಂಪೂರ್ಣ ಕಲಿತರೆ ಉಳಿದ ಭಾಷೆಗಳೂ ಬೇಗನೆ ಒಲಿಯುತ್ತವೆ ಎಂಬುದಕ್ಕೆ ದೃಷ್ಟಾಂತಗಳನ್ನೂ ಕೊಡುತ್ತೇನೆ. ನಮಗೆ ಇಂಗ್ಲಿಶ್ ಸೇರಿದಂತೆ ಬೇರೆ ಭಾಷೆಗಳ ಅನುಭವ ಯಾಕೆ ಕಡಿಮೆ ಎಂದರೆ ಕನ್ನಡವನ್ನೇ ಆಳವಾಗಿ ನಾವು ತಿಳಿದಿಲ್ಲ ! ಕ. ವೆಂ. ರಾಘವಾಚಾರ್ ನನ್ನ ಗುರುಗಳು. ಜನ್ನನ ಯಶೋಧರ ಚರಿತೆಯನ್ನು ಸಂಪಾದನೆ ಮಾಡಿದವರು. ಹೇಳಿಕೇಳಿ ಬಿ.ಎಂ. ಶ್ರೀಕಂಠಯ್ಯನವರ ಶಿಷ್ಯರಾಗಿ ಹಳೆಗನ್ನಡದ ಪ್ರಕಾಂಡ ಪಂಡಿತರಾದ ಅವರಿಗೆ ಗ್ರೀಕ್ ಕಲಿಯುವ ಮನಸ್ಸಾಯಿತು. ಕಲಿತೇಬಿಟ್ಟರು ! ಗ್ರೀಕ್‌ನ ಅನೇಕ ನಾಟಕಗಳನ್ನು ಅವುಗಳ ಮೂಲದಲ್ಲಿಯೇ ಓದಿ ಹಳಗನ್ನಡಕ್ಕೆ ಅನುವಾದಿಸಿದರು. ರಾಘವಾಚಾರ್ ಅವರ ಗ್ರೀಕ್ ಜ್ಞಾನಕ್ಕೆ ಆ ಭಾಷೆಯನ್ನು ತಿಳಿದಿದ್ದ ಇಂಗ್ಲಿಶರೂ ಬೆರಗುಪಟ್ಟಿದ್ದರಂತೆ! “ನಮಗೆ ಬೈಬಲ್ ಮೂಲಕ ಅಲ್ಪಸ್ವಲ್ಪ ಗ್ರೀಕ್ ಗೊತ್ತಿದೆ. ನಿಮಗೆ ಹೆಚ್ಚಿನ ಜ್ಞಾನ ಬೇಕಿದ್ದರೆ ಬೇರೆ ಮೂಲಗಳನ್ನು ಆಶ್ರಯಿಸಬಹುದು’ ಎಂದು ಸಲಹೆ ನೀಡಿದ್ದರಂತೆ. ಆಧುನಿಕ ಭಾಷಾವಿಜ್ಞಾನದ ಪಿತಾಮಹರೆನಿಸಿದ ಕಲ್ಕತ್ತಾ ವಿಶ್ವವಿದ್ಯಾನಿಲಯದ ಭಾಷಾಶಾಸ್ತ್ರಜ್ಞ ಸುನೀತಿ ಕುಮಾರ್ ಚಟರ್ಜಿ ದೆಹಲಿಯ ವಿಶ್ವವಿದ್ಯಾನಿಲಯ ದಕ್ಷಿಣ ಭಾರತೀಯ ಭಾಷಾ ವಿಭಾಗಕ್ಕೆ ಉಪನ್ಯಾಸಕ್ಕಾಗಿ ಬಂದಿದ್ದಾಗ ಅಲ್ಲಿ ರಾಘವಾಚಾರ್ ಅವರನ್ನು ಭೇಟಿಯಾಗುವ ಸಂದರ್ಭ ಒದಗಿಬಂತಂತೆ. ದೆಹಲಿ ವಿಶ್ವವಿದ್ಯಾನಿಲಯದ ದಕ್ಷಿಣಭಾರತೀಯ ಭಾಷಾವಿಭಾಗದ ಮುಖ್ಯಸ್ಥರು, ಸುನೀತಿ ಕುಮಾರ್ ಚಟರ್ಜಿ ಅವರೊಂದಿಗೆ, ಗ್ರೀಕ್ ಅಧ್ಯಯನ ನಡೆಸುತ್ತಿರುವ ನಮ್ಮ ವಿಭಾಗದ ಮಂದಿಗೆ ಸವಾಲಾಗಿದ್ದಂಥ ಗ್ರೀಕ್ ನಾಟಕದ ಯಾವುದೋ ಭಾಗವನ್ನು ರಾಘವಾಚಾರ್ ಲೀಲಾಜಾಲವಾಗಿ ಹಳಗನ್ನಡಕ್ಕೆ ಅನುವಾದಿಸಿದ್ದನ್ನು ಪ್ರಾಸಂಗಿಕವಾಗಿ ಹೇಳಿದ್ದರು. ಅದನ್ನು ನೆನಪಿಟ್ಟುಕೊಂಡಿದ್ದ ಸುನೀತಿ ಕುಮಾರ್ ಚಟರ್ಜಿ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ವೇದಿಕೆಯಿಂದ ಕೆಳಗಿಳಿದು ರಾಘವಾಚಾರ್ ಅವರನ್ನು ತಬ್ಬಿಕೊಂಡು “ವಿ ಆರ್ ಪ್ರೌಡ್ ಆಫ್ ಯೂ’ ಎಂದು ಅಭಿನಂದಿಸಿದರಂತೆ.
ಎಲ್. ಗುಂಡಪ್ಪರವರದ್ದು ಮನೆಮಾತು ಕನ್ನಡ. ಆದರೆ, ಅವರು ತಮಿಳಿನಲ್ಲಿ ಎಂಥ ಆಳವಾದ ವಿದ್ವತ್ತನ್ನು ಸಂಪಾದಿಸಿದರೆಂದರೆ ಅನೇಕ ತಮಿಳು ಗ್ರಂಥಗಳನ್ನು ಹಳಗನ್ನಡಕ್ಕೆ ಅನುವಾದಿಸಿದ್ದರು. ತಮಿಳುನಾಡಿನಲ್ಲಿ ತಮಿಳಿನ ಜನ ಗುಂಡಪ್ಪರವರನ್ನು ಸಂಮಾನಿಸಿದ್ದರು. ಕನ್ನಡದ ಆದ್ಯ ಕಾದಂಬರಿಕಾರರಲ್ಲೋರ್ವರಾದ ಬಿ. ವೆಂಕಟಾಚಾರ್ಯ ಅವರಿಗೆ ಬಂಗಾಲಿ ಕಲಿಯುವ ಇಚ್ಛೆಯಾಗಿತ್ತು. ಈಶ್ವರ ಚಂದ್ರ ವಿದ್ಯಾಸಾಗರರಿಗೆ ಪತ್ರಬರೆದು ಅವರಿಂದ “ಪೋಸ್ಟ್ ಟ್ಯೂಶನ್’ ಪಡೆದು ಬಂಗಾಲಿಯನ್ನು ಕಲಿತುಕೊಂಡರು.
“ವಚನ ಭಾರತ’ವನ್ನು ರಚಿಸಿದ ಎ.ಆರ್. ಕೃಷ್ಣಶಾಸ್ತ್ರಿಗಳು ಡಿ.ಎಲ್. ನರಸಿಂಹಾಚಾರ್, ಕೆ.ವಿ. ಪುಟ್ಟಪ್ಪರಂಥವರಿಗೆ ಗುರುಗಳು. ಅವರು ಬಂಗಾಲಿ ಕಲಿತು ಮೂಲಕೃತಿಗಳನ್ನು ಓದಿ ಕನ್ನಡಕ್ಕೆ ತಂದರು. ರವೀಂದ್ರನಾಥ ಠಾಗೋರರ ಪ್ರಬಂಧ ಸಂಕಲನ ನಿಬಂಧ ಮಾಲಾವನ್ನು ಓದಿ ಕನ್ನಡೀಕರಿಸುತ್ತಿರುವಾಗ ಕೆಲವೊಂದು ಅನುಮಾನ ಉಂಟಾಗಿತ್ತಂತೆ. ಪರಿಹಾರಕ್ಕಾಗಿ ರಾಮಕೃಷ್ಣ ಮಿಶನ್‌ನಲ್ಲಿದ್ದ ಬಂಗಾಲಿ ಬಲ್ಲ ಯತಿಗಳ ಬಳಿಗೆ ಹೋಗಿದ್ದರಂತೆ. ಇವರ ಮಾತುಗಳನ್ನು ಕೇಳಿ “ನಿಮ್ಮ ಬಂಗಾಲಿ ಜ್ಞಾನ ಅದ್ಭುತವಾಗಿದೆ. ಅನುವಾದ ಸರಿಯಾಗಿಯೇ ಇದೆ’ ಎಂದರಂತೆ ಅವರು. ಕೃಷ್ಣ ಶಾಸ್ತ್ರಿಗಳು ಬಂಗಾಲಿ ಭಾಷೆಯಲ್ಲಿಯೇ ಬಂಕಿಂಚಂದ್ರ ಚಟರ್ಜಿಯವರ ಕೃತಿಗಳನ್ನು ಓದಿ ಕನ್ನಡದಲ್ಲಿ ಅವರ ಕುರಿತು ಒಂದು ಕೃತಿ ಬರೆದರು.
ನಾನು ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕನಾಗಿರುವಾಗ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದವರು ಬಿ. ಕೆ. ಭೀಮಸೇನ ರಾವ್. ಹಳಗನ್ನಡದ ಆಳವಾದ ಅರಿವಿದ್ದ ಅವರು ಪಂಪಭಾರತ ಓದುವಾಗ ಹೊಳೆಯುವ ವಿಶೇಷ ಅರ್ಥಗಳನ್ನು ಮಾರ್ಜಿನ್‌ನಲ್ಲಿ ಉರ್ದುವಿನಲ್ಲಿ ಬರೆಯುತ್ತಿದ್ದುದನ್ನು ನಾನು ಕಂಡಿದ್ದೇನೆ ! ಅವರಿಗೆ ಉರ್ದು ಚೆನ್ನಾಗಿ ಬರುತ್ತಿತ್ತು.
ರಾಘವೇಂದ್ರ ರಾವ್ ಎಂಬ ಮತ್ತೋರ್ವ ಕನ್ನಡ ವಿದ್ವಾಂಸ ಹೈದರಾಬಾದ್‌ನಲ್ಲಿದ್ದರು. ಅವರು ಉರ್ದು ಮತ್ತು ಪಾರಸಿ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ್ದರು. ಉರ್ದುವಿನಲ್ಲಿ ಪದ್ಯಗಳನ್ನು ಬರೆದು ಪ್ರಸಿದ್ಧರಾಗಿದ್ದರು. ಮಹಮ್ಮದೀಯರಿಗೆ ಅವರ ಬಗ್ಗೆ ಅಪಾರ ಗೌರವಾದರಗಳಿದ್ದವು. ನಾವು ಇವತ್ತು ಭಾಷೆ ಎಂದರೆ ಕೇವಲ ಉಪಕರಣವೆಂದು ತಿಳಿದಿದ್ದೇವೆ. ಇಂಗ್ಲಿಷ್ ಭಾಷೆ ಎಂಬ ಉಪಕರಣ ಹಿಡಿದುಕೊಂಡು ಜಗತ್ತನ್ನು ಗೆಲ್ಲಬಹುದು ಎಂದು ಭಾವಿಸಿದ್ದೇವೆ. ಭಾಷೆಯ ಹಿಂದೆ ಇರುವ ಭಾವನೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಭಾಷೆಯ ಜೊತೆಗೆ ಸಂಸ್ಕೃತಿ ಇದೆ, ಇತಿಹಾಸ ಇದೆ ಎಂದು ತಿಳಿಯುವುದಿಲ್ಲ. ಒಂದು ಭಾಷೆಯ ಆಳಕ್ಕೆ ಇಳಿದರೆ ಅದೇ ಆಳದಲ್ಲಿ ಅದು ಮತ್ತೂಂದು ಭಾಷೆಯ ಸಂಸ್ಕಾರದ ಜೊತೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಕನ್ನಡದ ಆಳಕ್ಕಿಳಿದು ಹಳೆಗನ್ನಡದ ಸಣ್ತೀವನ್ನು ನಮ್ಮದಾಗಿಸಿಕೊಳ್ಳದ ಹೊರತಾಗಿ ಬೇರೆ ಭಾಷೆಗಳು, ಆ ಭಾಷೆಗಳ ಜೊತೆಗಿರುವ ಜ್ಞಾನ ನಮ್ಮದಾಗುವುದಾದರೂ ಹೇಗೆ? ಹಳೆಗನ್ನಡವನ್ನು ಕಲಿಯದಿದ್ದರೆ ಕನ್ನಡವನ್ನು ಅರಿತುಕೊಳ್ಳುವುದು ಕಷ್ಟ. ಅಷ್ಟೇ ಅಲ್ಲ, ಸಂಸ್ಕೃತ-ಇಂಗ್ಲಿಶ್ ಭಾಷಾಪ್ರೌಢಿಮೆಯೂ ನಮಗೆ ದಕ್ಕುವುದಿಲ್ಲ.
(ಮಾತುಕತೆಯ ಅಕ್ಷರ ರೂಪ : ಏಕಲವ್ಯ)
ಟಿ. ವಿ. ವೆಂಕಟಾಚಲ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.