ಅತ್ತೆಯ ಉಪ್ಪಿನಕಾಯಿ ಜಗತ್ತು
Team Udayavani, May 20, 2018, 9:54 AM IST
ಉಪ್ಪಿನಕಾಯಿ ಎಂದೊಡನೆ ಬಾಯಲ್ಲಿ ನೀರೂರುತ್ತದೆ. ನಾಲಿಗೆ ಚುಳ್ ಎನ್ನುತ್ತದೆ. ಮಕ್ಕಳಿಂದ ಹಿಡಿದು ಮುದುಕರವರೆಗೆ ಉಪ್ಪಿನಕಾಯಿಯನ್ನು ಇಷ್ಟಪಡದವರು ಇರಲಾರರು. ಬಾಳೆಲೆಯ ಮೂಲೆಯಲ್ಲಿ ಉಪ್ಪಿನಕಾಯಿಗೆ ಸ್ಥಾನವಾದರೂ ಊಟಕ್ಕೆ ರುಚಿ ಕೊಡುವುದರಲ್ಲಿ ಇದಕ್ಕೆ ಅಗ್ರಸ್ಥಾನ! ಹುಳಿ, ಉಪ್ಪು, ಖಾರದ ಒಂದು ಸೊಗಸಾದ ಸಂಗಮವೇ ಉಪ್ಪಿನಕಾಯಿ. ಸಿಹಿ ಉಪ್ಪಿನಕಾಯಿಯೂ ಇದೆ. ಆದರೆ, ಉಪ್ಪಿನಕಾಯಿ ಎನ್ನುವಾಗ ಖಾರದ ಅನುಭವವೇ ಮನಸ್ಸಿಗೆ ಬರುತ್ತದೆ. ಮಜ್ಜಿಗೆ ಅಥವಾ ಮೊಸರಿನ ಜೊತೆ ಉಪ್ಪಿನಕಾಯಿಯನ್ನು ನೆಂಜಿಕೊಂಡು ಉಣ್ಣುವುದೇ ಸ್ವರ್ಗಸುಖ. ನಾನಾ ವಿಧದ, ನಾನಾ ರುಚಿಯ ಉಪ್ಪಿನಕಾಯಿಗಳಿದ್ದರೂ ಮಾವಿನಮಿಡಿ ಉಪ್ಪಿನಕಾಯಿಯೇ ಸರ್ವಶ್ರೇಷ್ಠ ಎಂಬುದು ಅನುಭವದ ಮಾತು.
ಉಪ್ಪಿನಕಾಯಿಯ ಬಳಕೆ ಇಂದು ನಿನ್ನೆಯದಲ್ಲ. ಪುರಾಣ ಕಾಲದಿಂದಲೂ ಇತ್ತು ಎಂಬುದಕ್ಕೆ ನಿದರ್ಶನವಾಗಿ ರಾಮಾಯಣಕ್ಕೆ ಸಂಬಂಧಪಟ್ಟಂತೆ ಒಂದು ಜನಪದೀಯ ವಿನೋದ ಕತೆ ಇದೆ. ಅದು ಶ್ರೀರಾಮ ಪಟ್ಟಾಭಿಷೇಕದ ಸಂದರ್ಭ. ಅರಮನೆಯಲ್ಲಿ ಪ್ರಜೆಗಳಿಗೆ ಔತಣಕೂಟದ ಏರ್ಪಾಡಾಗಿತ್ತು. ವಾನರ ಸೇನೆಯೂ ಬಂದಿತ್ತು. ಎಲ್ಲರ ಜತೆ ಸಾಲಾಗಿ ಕೂತು ಮಂಗಗಳು ಶಿಸ್ತಿನಿಂದ ಊಟ ಮಾಡುತ್ತಿದ್ದವು. ಒಂದು ಪುಟ್ಟ ಮಂಗ ಮಾವಿನಮಿಡಿ ಉಪ್ಪಿನಕಾಯಿಯನ್ನು ತಿನ್ನಲೆಂದು ಹಿಚುಕುವಾಗ ಅದರೊಳಗಿದ್ದ ಬೀಜ ಮೇಲಕ್ಕೆ ಹಾರಿತು. ಅದು ಕೂಡಲೇ “”ಎಲಾ! ಇಷ್ಟು ಸಣ್ಣ ಬೀಜಕ್ಕೆ ಎಷ್ಟು ಸೊಕ್ಕು? ಇದರಿಂದ ಹೆಚ್ಚು ಎತ್ತರಕ್ಕೆ ನಾನು ಹಾರಿ ತೋರಿಸುತ್ತೇನೆ” ಎಂದು ಹಾರಿತು. ಇದನ್ನು ನೋಡಿದ ಅದರ ಹತ್ತಿರ ಕೂತ ಮಂಗ “”ನಾನು ಇನ್ನೂ ಮೇಲಕ್ಕೆ ಹಾರಬಲ್ಲೆ” ಎಂದು ಹಾರಿತು. ಕೊನೆಗೆ ಅಲ್ಲಿದ್ದ ಎಲ್ಲ ಮಂಗಗಳೂ ಪೈಪೋಟಿಯಿಂದ ಹಾರತೊಡಗಿದವು. ಇದು ಮಂಗಗಳ ಹುಟ್ಟುಗುಣದ ಕತೆಯಾದರೂ ಉಪ್ಪಿನಕಾಯಿ ಅಂದೂ ಕೂಡ ಮುಖ್ಯ ವ್ಯಂಜನವಾಗಿತ್ತು ಎಂಬುದು ಇದರಿಂದ ಗೊತ್ತಾಗುತ್ತದೆ.
ಇಪ್ಪತ್ತು ವರ್ಷಗಳ ಹಿಂದಿನ ಮಾತು. ಆಗ ನನ್ನ ಅತ್ತೆಯೇ ಅಡುಗೆ ಮನೆಯ ಯಜಮಾನಿ. ಅವರು ಹೇಳಿದ ಕೆಲಸವನ್ನು ಮಾಡುವುದಷ್ಟೇ ನನ್ನ ಕಾರ್ಯ. ಉಪ್ಪಿನಕಾಯಿ ಹಾಕುವುದರಲ್ಲಿ ಅವರದು ಎತ್ತಿದ ಕೈ. ಅವರು ತರತರದ ಉಪ್ಪಿನಕಾಯಿ ತಯಾರಿಸುತ್ತಿದ್ದರು. ಅದರಲ್ಲೂ ಅವರು ಹಾಕುವ ಮಿಡಿ ಉಪ್ಪಿನಕಾಯಿಯ ರುಚಿ ಉಂಡವರೇ ಬಲ್ಲರು. ಅದರ ಪರಿಮಳ ಊಟದ ನಂತರ ಕೈ ತೊಳೆದರೂ ಹೋಗುತ್ತಿರಲಿಲ್ಲ.
ಉಪ್ಪಿನಕಾಯಿ ಹಾಕುತ್ತಿದ್ದುದು ಮಾರ್ಚ್ ತಿಂಗಳಲ್ಲಿಯಾದರೂ ಅದರ ತಯಾರಿ ಜನವರಿ ತಿಂಗಳಿನಿಂದಲೇ ಆರಂಭವಾಗುತ್ತಿತ್ತು. ನನ್ನ ಮನೆ ಆಗ ಉಪ್ಪಿನಕಾಯಿ ಕಾರ್ಖಾನೆಯಂತೆ ಕಂಗೊಳಿಸುತ್ತಿತ್ತು. ಆ ಸಮಯದಲ್ಲಿ ಅಟ್ಟದ ಮೇಲಿನ ಭರಣಿಗಳೆಲ್ಲ ಕೆಳಗಿಳಿಯುತ್ತಿದ್ದವು. ಅವುಗಳಲ್ಲಿ ಉಳಿದ ಹಳೆ ಉಪ್ಪಿನಕಾಯಿಯನ್ನು ಮನೆಕೆಲಸದವರಿಗೆ ಅತ್ತೆ ಹಂಚುತ್ತಿದ್ದರು. ನಂತರ ಭರಣಿಗಳನ್ನು ಚೆನ್ನಾಗಿ ತೊಳೆದು ಅವುಗಳಲ್ಲಿರುವ ಉಪ್ಪಿನಂಶ ಸಂಪೂರ್ಣ ಹೋಗಲು ಹತ್ತು-ಹದಿನೈದು ದಿನಗಳ ಕಾಲ ನೀರು ತುಂಬಿಸಿ ಇಡುತ್ತಿದ್ದರು. ಅವುಗಳನ್ನು ಮತ್ತೆ ತೊಳೆದು, ಒಣಬಟ್ಟೆಯಿಂದ ಒರೆಸಿ, ಬಿಸಿಲಲ್ಲಿ ಒಂದು ದಿನ ಇಟ್ಟು ಒಣಗಿಸುತ್ತಿದ್ದರು. “ಮಜ್ಜಿಗೆ ಭರಣಿ’ ಎಂಬ ಪುಟ್ಟ ಭರಣಿಯಿಂದ ಹಿಡಿದು “ಚೀನಿ ಭರಣಿ’ ಎಂದು ಕರೆಯಲಾಗುವ ದೈತ್ಯ ಭರಣಿಯವರೆಗೆ ಎಂಟು-ಹತ್ತು ಭರಣಿಗಳು ನಮ್ಮ ಮನೆಯಲ್ಲಿ ಸ್ಥಾನ ಪಡೆದಿದ್ದವು. ಚೀನಿ ಭರಣಿ ಎಷ್ಟು ದೊಡ್ಡದೆಂದರೆ ಅದರಲ್ಲಿ ಎರಡು ಹೆಡಿಗೆ ಮಾವಿನಮಿಡಿ ಹಿಡಿಯುತ್ತಿತ್ತು. ನುಣುಪಾದ ಮೈ ಹೊಂದಿ ಹೊಳೆಯುತ್ತಿತ್ತು. “ಇದು ಚೀನಾ ದೇಶದಲ್ಲಿ ತಯಾರಾದ ಭರಣಿ. ಇದರಲ್ಲಿ ನನ್ನ ಅತ್ತೆಯವರು ಉಪ್ಪಿನಕಾಯಿ ಹಾಕಿಡುತ್ತಿದ್ದರು. ಅತ್ತೆಯ ಅತ್ತೆಯವರೂ ಇದರಲ್ಲೇ ಉಪ್ಪಿನಕಾಯಿ ಹಾಕಿಡುತ್ತಿದ್ದರಂತೆ. “ಇದು ಎರಡು ಶತಮಾನಗಳಷ್ಟು ಹಳತು’ ಎಂದು ಅತ್ತೆ ನನ್ನ ಹತ್ತಿರ ಹೆಮ್ಮೆಯಿಂದ ಹೇಳುತ್ತಿದ್ದರು. ಮಾವ ಪೇಟೆಗೆ ಹೊರಟಾಗ ಅತ್ತೆ ಸಾಸಿವೆ, ಮೆಣಸು ತರಲು ಹೇಳುತ್ತಿದ್ದರು. ಅದು ಸ್ವಲ್ಪ$ ಪ್ರಮಾಣದಲ್ಲಿ ಅಲ್ಲ. ಕೆಜಿಗಟ್ಟಲೆ! “”ಸಣ್ಣ ಸಾಸಿವೆ ನೋಡಿ ತನ್ನಿ. ದೊಡ್ಡ, ಮಧ್ಯಮ ಗಾತ್ರದ ಸಾಸಿವೆ ಬೇಡ. ಊರಮೆಣಸೇ ಆಗಬೇಕು” ಇದು ಅತ್ತೆಯ ತಾಕೀತು. ಮಾವ ವಿಧೇಯತೆಯಿಂದ ತಲೆಯಾಡಿಸುತ್ತಿದ್ದರು. ತಂದ ಮೇಲೆ “”ಹೇಗಿದೆ ನೋಡು” ಎಂದು ಕೇಳುತ್ತಿದ್ದರು. ಅತ್ತೆ ಕಟ್ಟು ಬಿಚ್ಚಿ ಪರೀಕ್ಷಿಸಿ ಎಲ್ಲ ಸರಿಯಾಗಿದೆ ಎನ್ನುವಾಗ ಮಾವನ ಮೋರೆ ಊರಗಲವಾಗುತ್ತಿತ್ತು. ಕೆಲವೊಂದು ಸಾರಿ ಅತ್ತೆ “”ಸಾಸಿವೆ ಸರಿ ಇಲ್ಲ. ಮೆಣಸು ಹಳೆಯದು. ಬೇರೆ ತನ್ನಿ” ಎಂದು ಅವುಗಳನ್ನು ವಾಪಾಸು ಕಳುಹಿಸುತ್ತಿದ್ದದ್ದೂ ಉಂಟು. ಆಗ ಮಾವನ ಮುಖ ನೋಡಬೇಕು!
ಅತ್ತೆ ಸಾಸಿವೆಯನ್ನು ಮೊದಲು ಮೊರಕ್ಕೆ ಹಾಕಿ ಕೇರುತ್ತಿದ್ದರು. ನಂತರ ಪಾತ್ರೆಗೆ ಹಾಕಿ ತೊಳೆದು ಮರಳು, ಸಣ್ಣ ಕಲ್ಲು ಇದ್ದರೆ ಸೋಸಿ ತೆಗೆದು ಹಳೆ ಸೀರೆಯಲ್ಲಿ ಹರಡಿ ಎರಡು-ಮೂರು ಬಿಸಿಲು ಒಣಗಿಸಿ ಕಟ್ಟಿ ಇಡುತ್ತಿದ್ದರು. ಮಧ್ಯಾಹ್ನ ಊಟವಾದ ಮೇಲೆ ಮೆಟ್ಟುಕತ್ತಿಯಲ್ಲಿ ಕೂತು ಮೆಣಸಿನ ತೊಟ್ಟು ತುಂಡು ಮಾಡಲು ಕುಳಿತರೆ ಅತ್ತೆ ಮತ್ತೆ ಏಳುತ್ತಿದ್ದುದು ಮಾವ ಟೀ ಕೊಡು ಎಂದು ಕೇಳಿದಾಗಲೇ. ಈ ತೊಟ್ಟು ತೆಗೆಯುವ ಕೆಲಸವೇ ಒಂದು ವಾರ ಇರುತ್ತಿತ್ತು. ಆಮೇಲೆ ಅದನ್ನು ಬಿಸಿಲಿಗೆ ಹರಡುತ್ತಿದ್ದರು. ಅದು ಪರಪರ ಹೇಳುವಷ್ಟು ಒಣಗಿದ ಮೇಲೆ ಮಿಲ್ಲಿಗೆ ಪುಡಿ ಮಾಡಿಸಲು ಕೊಡುತ್ತಿದ್ದರು. ಈ ಸಾಸಿವೆ ಮತ್ತು ಮೆಣಸಿನ ಪುಡಿ ಉಪ್ಪಿನಕಾಯಿಗೆ ಅಲ್ಲದೆ ಇಡೀ ವರ್ಷದ ಅಡುಗೆಗೂ ಸಾಕಾಗುತ್ತಿತ್ತು.
ಫೆಬ್ರವರಿ ತಿಂಗಳ ಆರಂಭದಲ್ಲೇ ಅತ್ತೆ “”ಮಾವಿನಮರ ಹೂ ಹೋಗಿದೆಯಾ? ನೋಡಿ ಬನ್ನಿ” ಎಂದು ಮಾವನನ್ನು ಕಾಡಿಗೆ ಅಟ್ಟುತ್ತಿದ್ದರು. ಹೂ ಹೋಗಿದೆ ಎಂದು ಗೊತ್ತಾದರೆ ಸಾಕು ವಾರ ವಾರ ಅದು ಎಷ್ಟು ದೊಡ್ಡದಾಗಿದೆ ಎಂದು ತಿಳಿಯಲು ಮಾವ ಮತ್ತೆ ಕಾಡಿಗೆ ಹೋಗಬೇಕಿತ್ತು. ಹಲಸಿನ ಬೀಜದಷ್ಟು ದೊಡ್ಡ ಗಾತ್ರವಾದಾಗ ಮಾವಿನ ಮಿಡಿ ಕೊಯ್ಯಲು ರೆಡಿ. ಮಾವಿನಕಾಯಿ ಗೊರಟು ಕಟ್ಟಿದರೆ ಮಿಡಿ ಉಪ್ಪಿನಕಾಯಿಗೆ ಅಯೋಗ್ಯ. ಕೆಲವೊಮ್ಮೆ ಮಾವಿನ ಮರ ತೇರಿನಂತೆ ಹೂ ಬಿಟ್ಟರೂ ಮುಗಿಲು ಬಂತೆಂದರೆ ಹೂ ಕರಟಿ ಮಿಡಿ ಆಗುತ್ತಿರಲಿಲ್ಲ. ಆಗ ಅತ್ತೆ ಮಾಡಿದ ಪೂರ್ವ ಸಿದ್ಧತೆಗಳೆಲ್ಲ ನೀರಿನಲ್ಲಿ ಇಟ್ಟ ಹೋಮದಂತಾಗುತ್ತಿತ್ತು. ಅತ್ತೆ ದುಃಖದಿಂದ ಮುಗಿಲನ್ನು ಕಳ್ಳರಿಗೆ ಹೋಲಿಸಿ ಹೇಳುವ ಜಾನಪದ ಹಾಡೊಂದನ್ನು ಹಾಡುತ್ತಿದ್ದರು. ಅದು ಹೀಗಿದೆ.
ಮಾವಿನ ಹೂಗಿಂಗೆ ಆರ್ಬಂದೋ ಕಳ್ಳಾರು
ಮಾಯದಲ್ಲಿ ಬಪ್ಪ ದುರಿತಾವ
ದುರಿತ ಪರ್ವತಂಗಳ ಕಾಯು ನಮ್ಮೂರ ವನದುರ್ಗೆ
ಮಾವಿನಮಿಡಿ ಕೊಯ್ಯುವ ಮುನ್ನಾ ದಿನ ಮಾವ ಮರ ಹತ್ತುವುದರಲ್ಲಿ ಪರಿಣತನಾದ ಚಂದಪ್ಪನನ್ನು ಕರೆದುಕೊಂಡು ಕಾಡಿನಲ್ಲಿ ಈಗಾಗಲೇ ಗೊತ್ತುಮಾಡಿದ ಮಾವಿನಮರದ ಬಳಿಗೆ ಹೋಗುತ್ತಿದ್ದರು. ಚಂದಪ್ಪಅಲ್ಲೇ ಸುತ್ತಮುತ್ತ ಇರುವ ಬಿದಿರಮೆಳೆಯಿಂದ ಬಿದಿರನ್ನು ಕಡಿದು ಏಣಿಯಂತೆ ಮರಕ್ಕೆ ಒರಗಿಸಿ ಕಟ್ಟುತ್ತಿದ್ದ. ಮರದಲ್ಲಿ ಕೆಂಜಿರುವೆ ಇದ್ದರೆ ಅದಕ್ಕೆ ಗೆಮೆಕ್ಸಿನ್ ಎಂಬ ಪುಡಿಯನ್ನು ಕೆಂಜಿರುವೆ ಗೂಡಿಗೆ ಹಾಗೂ ಟೊಂಗೆ ಟೊಂಗೆಗೆ ಉದುರಿಸುತ್ತಿದ್ದ. ಮರುದಿನ ಸೂರ್ಯ ಹುಟ್ಟುವ ಮೊದಲೇ ಮಾವ ಚಂದಪ್ಪನೊಂದಿಗೆ ಇನ್ನೊಬ್ಬ ಸಹಾಯಕನ ಜೊತೆಗೂಡಿಕೊಂಡು ಕತ್ತಿ, ಗೋಣಿ, ಹಗ್ಗ, ಕೈಕುರುವೆ ಹಿಡಿದುಕೊಂಡು ಯುದ್ಧಕ್ಕೆ ಹೊರಡುವಂತೆ ಮಿಡಿ ಕೊಯ್ಯಲು ಹೊರಡುತ್ತಿದ್ದರು. ಚಂದಪ್ಪಸಪೂರವಾದ ಉದ್ದ ಬಿದಿರಿನ ಕೋಲಿನ ತುದಿಗೆ ಸಣ್ಣ ಕೋಲು ಕಟ್ಟಿ, ಹಿಂದಿನ ದಿನ ಏಣಿ ಕಟ್ಟಿದ್ದ ಮರ ಏರುತ್ತಿದ್ದ. ಮಾವಿನ ಮಿಡಿಗಳಿರುವ ಗೊಂಚಲಿಗೆ ಬಿದಿರುಕೋಲು ಹಾಕಿ ತನ್ನತ್ತ ಎಳೆದು ಜಾಗ್ರತೆಯಿಂದ ಗೊಂಚಲನ್ನು ತುಂಡು ಮಾಡಿ ಕೈಕುರುವೆಗೆ ತುಂಬಿಸುತ್ತಿದ್ದ.
ಕೈಕುರುವೆ ತುಂಬಿದಾಗ ಹಗ್ಗದಿಂದ ಕಟ್ಟಿ ಕೆಳಗೆ ಇಳಿಸುತ್ತಿದ್ದ. ಅದನ್ನು ಕೆಳಗೆ ನಿಂತ ಸಹಾಯಕ ಹಿಡಿದು ಅದರಿಂದ ಮಾವಿನಮಿಡಿ ತೆಗೆದು ಗೋಣಿಗೆ ತುಂಬಿಸುತ್ತಿದ್ದ. ಮರ ಇಡೀ ಖಾಲಿ ಮಾಡಿದ ಮೇಲೆಯೇ ಚಂದಪ್ಪಇಳಿಯುತ್ತಿದ್ದುದು. ಒಮ್ಮೆ ಹೀಗೆ ಏಣಿ ಕಟ್ಟಿ ಇಟ್ಟ ಮರಕ್ಕೆ ಮರುದಿನ ಯಾವುದೋ ಕಾರಣದಿಂದ ಹೋಗಲು ಆಗಿರಲಿಲ್ಲ. ಅದರ ಮರುದಿನ ಹೋದಾಗ ಯಾರೋ ಬಂದು ಎಲ್ಲ ಮಾವಿನಮಿಡಿಗಳನ್ನು ಕೊçದಿದ್ದರು. ಬೋಳು ಮರ ಕಂಡು ಮಾವ ಮತ್ತು ಕೆಲಸದವರು ತಲೆಗೆ ಕೈ ಹೊತ್ತು ಹಿಂದಿರುಗಿದ್ದರು.
ಮಾವಿನಮಿಡಿ ಮನೆಗೆ ಬರುವಾಗ ಮಧ್ಯಾಹ್ನ ಕಳೆಯುತ್ತಿತ್ತು. ಅತ್ತೆ ಸಡಗರದಿಂದ ಮಾವ ಮತ್ತು ಕೆಲಸದವರಿಗೆ ಊಟ ಬಡಿಸಿ ಗೋಣಿಯಿಂದ ಮಿಡಿಗಳನ್ನು ತೆಗೆದು ಮುಂಡಂಗಿ ಚಾಪೆ ಮೇಲೆ ಹರಡುತ್ತಿದ್ದರು. ಒಂದನ್ನು ತೆಗೆದು ಮೂಸಿ “”ಈ ಸಾರಿ ಮಿಡಿ ಬಹಳ ಚೆನ್ನಾಗಿದೆ. ಒಳ್ಳೆ ಸೊನೆ. ಜೀರಿಗೆ ಪರಿಮಳ. ಇನ್ನೂ ಸ್ವಲ್ಪ ಎಳೆಯದಿರುವಾಗ ಕೊಯಿದಿದ್ದರೆ ಒಳ್ಳೆಯದಿತ್ತು” ಎಂದು ಅಭಿಪ್ರಾಯಗಳನ್ನು ಹೇಳುತ್ತಿದ್ದರು. ನಂತರ ಅತ್ತೆ ಕಲ್ಲು ಉಪ್ಪನ್ನು ಅರೆಯುವ ಕಲ್ಲಿಗೆ ಹಾಕಿ ಕುಟ್ಟಿ ಪುಡಿ ಮಾಡುತ್ತಿದ್ದರು. ಮಾವಿನ ಮಿಡಿಯ ತೊಟ್ಟು ಮುರಿಯುವ ಕೆಲಸ ನನ್ನ ಪಾಲಿಗೆ.
ತೊಟ್ಟು ತೆಗೆದ ಮಿಡಿಗಳನ್ನು ಅತ್ತೆ ದೊಡ್ಡ ದೊಡ್ಡ ಮಣ್ಣಿನ ಮಡಕೆಗಳಿಗೆ ಸುರುವಿ ಅದಕ್ಕೆ ಪುಡಿ ಮಾಡಿದ ಉಪ್ಪು$ಬೆರೆಸಿ ಇಡುತ್ತಿದ್ದರು. ಇಷ್ಟಕ್ಕೇ ಮುಗಿಯಲಿಲ್ಲ. ಅದಕ್ಕೆ ಪ್ರತಿದಿನ ಕೈ ಹಾಕಬೇಕಿತ್ತು. ಒದ್ದೆ ಕೈ ಹಾಕಿದಿರೋ ಉಪ್ಪಿನಕಾಯಿ ಕೆಡುವುದು ಗ್ಯಾರಂಟಿ. ವಾರ ಕಳೆದಾಗ ಮಿಡಿ ಚಿರುಟಿ ಸಣ್ಣಗೆ ಆಗುತ್ತಿತ್ತು. ಹಸಿರು ಬಣ್ಣ ಹೋಗಿ ನಸುಹಳದಿ ಬಣ್ಣಕ್ಕೆ ತಿರುಗುತ್ತಿತ್ತು. ಹೀಗಾದಾಗ ಉಪ್ಪಿನಕಾಯಿ ಹಾಕಲು ಸಿದ್ಧವಾಗಿದೆ ಎಂದು ಅರ್ಥ. ಚಿರುಟಿದ ಮಿಡಿಗಳನ್ನು ಅತ್ತೆ ಬೆಳಗ್ಗೆ ಎದ್ದ ತಕ್ಷಣ ಮಡಕೆಯಿಂದ ಸೋಸಿ ತೆಗೆದು ಬೆತ್ತದ ಬುಟ್ಟಿಗೆ ಹಾಕುತ್ತಿದ್ದರು. ಮಡಕೆಯಲ್ಲಿರುವ ಮಿಡಿ ಅದ್ದಿದ ಸೊನೆಮಿಶಿತ ಉಪ್ಪು$ನೀರನ್ನು ತೆಗೆದು ಕುದಿಸಿ ತಣಿಸಿ ಇಡುತ್ತಿದ್ದರು. ಆ ಉಪ್ಪು$ನೀರು ಸಾಕಾಗದಿದ್ದರೆ ಎಂದು ಬೇರೆ ಉಪ್ಪು$ನೀರನ್ನೂ ಮಾಡುತ್ತಿದ್ದರು. ತಣಿದ ಉಪ್ಪು$ನೀರಲ್ಲಿ ಸಾಸಿವೆಯನ್ನು ನುಣ್ಣಗೆ ರುಬ್ಬುತ್ತಿದ್ದರು. ರುಬ್ಬಿದ ಸಾಸಿವೆಗೆ ಮೆಣಸಿನ ಪುಡಿ, ಇಂಗು, ಅರಸಿನ ಪುಡಿ ಸೇರಿಸಿ ಬೆರೆಸಿ ಉಪ್ಪಿನಕಾಯಿ ಹಿಟ್ಟು ತಯಾರಿಸುತ್ತಿದ್ದರು. ಈ ಹಿಟ್ಟಿಗೆ ಮಾವಿನಮಿಡಿ ಬೆರೆಸಿ ಭರಣಿಗೆ ತುಂಬಿಸಿದರೆ ಉಪ್ಪಿನಕಾಯಿ ಹಾಕುವ ಕೆಲಸ ಮುಗಿದ ಹಾಗೆ. ಆಮೇಲೆ ಬಿಳಿ ಬಟ್ಟೆಯಿಂದ ಭರಣಿಯ ಬಾಯಿಕಟ್ಟಿ ಅಟ್ಟದಲ್ಲಿ ಇಡುತ್ತಿದ್ದರು. ಹೀಗೆ ಇಟ್ಟ ಉಪ್ಪಿನಕಾಯಿ ಎರಡು ವರ್ಷದವರೆಗೂ ತಾಜಾ ಆಗಿ ಇರುತ್ತಿತ್ತು. ಅದನ್ನು ನಾವು ಯಾರೂ ಮುಟ್ಟುವ ಹಾಗೆ ಇರಲಿಲ್ಲ. ಬಡಿಸುವ ಬಾಟಲಿಯಲ್ಲಿ ಮುಗಿದಾಗ ಅತ್ತೆಯೇ ತೆಗೆಯುವ ಕ್ರಮ. ಏಕೆಂದರೆ ಎಲ್ಲರೂ ಮುಟ್ಟಿದರೆ ನೀರಪಸೆ ತಾಗಿ ಭರಣಿಗೆ ಹುಳ ಬೀಳಬಹುದೆಂಬ ಭಯ.
ಎಷ್ಟು ಜಾಗ್ರತೆ ಮಾಡಿದರೂ ಕೊಯ್ಯುವಾಗ ಕೆಲವು ಮಿಡಿಗಳು ನೆಲಕ್ಕೆ ಬೀಳುತ್ತಿದ್ದವು. ಅವುಗಳನ್ನು ಹೆಕ್ಕಿ ಪ್ರತ್ಯೇಕವಾಗಿ ಇಡುತ್ತಿದ್ದರು. ಏಕೆಂದರೆ ಅವುಗಳು ಎತ್ತರದಿಂದ ಬಿದ್ದಿರುವ ಕಾರಣ ನಜ್ಜುಗುಜ್ಜಾಗಿರುತ್ತಿದ್ದವು. ಅವುಗಳನ್ನು ಮಿಡಿ ಉಪ್ಪಿನಕಾಯಿಗೆ ಬಳಸಿದರೆ ಅಂಥ ಉಪ್ಪಿನಕಾಯಿ ಹೆಚ್ಚು ಸಮಯ ಬಾಳಿಕೆ ಬರುತ್ತಿರಲಿಲ್ಲ. ಈ ಮಿಡಿಗಳನ್ನು ನಾಲ್ಕು ತುಂಡುಮಾಡಿ ಕಡಿಭಾಗ ಎಂಬ ಹೆಸರಿನ ಉಪ್ಪಿನಕಾಯಿಯನ್ನು ಅತ್ತೆ ತಯಾರಿಸುತ್ತಿದ್ದರು. ಮಿಡಿ ಉಪ್ಪಿನಕಾಯಿ ಹಾಕಿದ ತಕ್ಷಣ ತಿನ್ನಲು ಯೋಗ್ಯವಾಗಿರುವುದಿಲ್ಲ. ಕಡಿಭಾಗ ಉಪ್ಪಿನಕಾಯಿಯನ್ನು ತಯಾರಿಸಿದ ತಕ್ಷಣ ಉಪಯೋಗಿಸಬಹುದು. ಮಿಡಿ ಉಪ್ಪಿನಕಾಯಿ ಬಳಸಬೇಕಾದರೆ ಹಾಕಿ ಕನಿಷ್ಟ ಒಂದು ತಿಂಗಳಾದರೂ ಕಳೆಯಬೇಕು. ಆಗ ಮಿಡಿಯ ಹುಳಿ ರಸಕ್ಕೆ ಸೇರಿ, ರಸದ ಖಾರ ಮಿಡಿಗೆ ಸೇರಿ ಒಂದು ಅದ್ಭುತ ರುಚಿ ನಿರ್ಮಾಣವಾಗಿರುತ್ತದೆ. ಬಲಿತ ಕಾಡುಮಾವಿನಕಾಯಿಯನ್ನು ಇಡಿಯಾಗಿ ಬೇಯಿಸಿ ಅತ್ತೆ ಹಾಕುವ “ಇಡಿಕ್ಕಾಯಿ’ ಎಂಬ ಉಪ್ಪಿನಕಾಯಿಯೂ ಬಹಳ ರುಚಿ ಇರುತ್ತಿತ್ತು. ಕಾಡುಮಾವಿನಹಣ್ಣನ್ನು ಬೇಯಿಸಿ ಸಾಸಿವೆ, ಮೆಂತೆ, ಮೆಣಸನ್ನು ಹುರಿದು ಪುಡಿಮಾಡಿ ಅರಸಿನಪುಡಿ, ಉಪ್ಪು$ ನೀರಿನೊಂದಿಗೆ ಬೆರೆಸಿ ಮಾಡಿದ ಹಣ್ಣು ಉಪ್ಪಿನಕಾಯಿ ಗಂಜಿ ಊಟಕ್ಕೆ ಹೇಳಿ ಮಾಡಿಸಿದಂತೆ ಇರುತ್ತಿತ್ತು. ಮಾವನಿಗೆ ಹಲ್ಲು ಗಟ್ಟಿ ಇರದುದರಿಂದ ಮಿಡಿ ಉಪ್ಪಿನಕಾಯಿ ತಿನ್ನಲು ಕಷ್ಟವಾಗುತ್ತದೆ ಎಂದು ಅತ್ತೆ ಬಲಿತ ಕಾಡುಮಾವಿನ ನಾಲ್ಕೂ ಬದಿ ಕೆತ್ತಿ ಬೇಯಿಸಿ “ಬೇಶಿದ ಕೆತ್ತೆ’ ಎಂಬ ಮೆತ್ತನೆಯ ಉಪ್ಪಿನಕಾಯಿಯನ್ನೂ ಮಾಡುತ್ತಿದ್ದರು. ಇದನ್ನು ಬೇಯಿಸದೆಯೆ ಮಾಡುವ ಹಸಿ ಕೆತ್ತೆ ಎಂಬ ಉಪ್ಪಿನಕಾಯಿಯೂ ದಿವ್ಯವಾಗಿತ್ತು.
ಅತ್ತೆ ಭರಣಿಗಟ್ಟಲೆ ಉಪ್ಪಿಕಾಯಿ ಹಾಕುತ್ತಿದ್ದರೂ ಮಾರಾಟದ ಉದ್ದೇಶ ಇರಲಿಲ್ಲ. ಮದುವೆಯಾಗಿ ಹೋದ ಹೆಣ್ಣುಮಕ್ಕಳಿಗೆ ಹಂಚುತ್ತಿದ್ದರು. ಅಲ್ಲದೆ ಮನೆಗೆ ಬಂದ ಅತಿಥಿಗಳು ಯಾರಾದರೂ ಅತ್ತೆಯಲ್ಲಿ “”ನಿಮ್ಮ ಉಪ್ಪಿನಕಾಯಿ ಚೆನ್ನಾಗಿದೆ” ಎಂದು ಹೇಳಿದರೆ ಸಾಕು ಅವರು ಹೋಗುವಾಗ ಬಾಟಿ ತುಂಬ ಉಪ್ಪಿನಕಾಯಿ ತುಂಬಿಸಿಕೊಟ್ಟು ಕಳುಹಿಸುತ್ತಿದ್ದರು.
ಈಗ ಉಪ್ಪಿನಕಾಯಿ ಹಾಕುವ ಸರದಿ ನನ್ನದು. ಕಾಡು ಇಡೀ ಬೋಳಾಗಿದೆ. ಮೊದಲಿ ನಂತೆ ಮಾವಿನಮರಗಳಿಲ್ಲ. ಇದ್ದರೂ ಅಲ್ಲೊಂದು ಇಲ್ಲೊಂದು. ಮರ ಹತ್ತುವವರೂ ಇಲ್ಲ. ಕೇಳಿದ ಸಂಬಳ ಕೊಟ್ಟು ಕೊಯ್ಯಿಸುವ ತಾಕತ್ತು ನಮಗೂ ಇಲ್ಲ. ಅತ್ತೆಯ ಉಪ್ಪಿನಕಾಯಿ ಜಗತ್ತು ಕಾಲಪ್ರವಾಹದಲ್ಲಿ ಕೊಚ್ಚಿ ಹೋಯಿತು ಎಂದು ನನಗೆ ಮಿಡಿ ಉಪ್ಪಿನಕಾಯಿ ಹಾಕುವ ಈ ಸಮಯದಲ್ಲಿ ಅನಿಸುತ್ತದೆ.
ಸಹನಾ ಕಾಂತಬೈಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.