ಪಾದುಕೆಯೇ ಪ್ರಧಾನ
Team Udayavani, Oct 6, 2019, 5:07 AM IST
ಇವತ್ತು ಮುಂಬೈ ಲೋಕಲ್‌ರೈಲು ಹತ್ತುವಾಗ ಒಂದು ಚಪ್ಪಲಿ ಜಾರಿ ಕೆಳಗೆ ಬಿದ್ದಾಗ ಏನು ಮಾಡಲೂ ತೋಚದೆ ಮತ್ತೂಂದು ಚಪ್ಪಲಿಯನ್ನೂ ತೆಗೆದು ಬಿಸಾಡಿ ಬರೀ ಕಾಲಿನಲ್ಲಿ ನಡೆದು ಮನೆ ಸೇರಿದಾಗ, ದಾರಿ ಉದ್ದಕ್ಕೂ ಎಲ್ಲರೂ ನನ್ನ ಕಾಲನ್ನೇ ದಿಟ್ಟಿಸುತ್ತಿದ್ದಾರೇನೋ ಎಂದು ಮುಜುಗರವಾಗಿತ್ತು. ಆದರೆ ಅದೇ ಚಿಕ್ಕಂದಿನಲ್ಲಿ ಎಲ್ಲರೂ ಬರೀ ಕಾಲಿನಲ್ಲಿ ನಡೆಯುವಾಗ ನಾನೊಬ್ಬಳೇ ಚಪ್ಪಲಿ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾಗಲೂ ಸಂಕೋಚವೆನಿಸಿತ್ತು.
ನಾನು ಚಿಕ್ಕವಳಿದ್ದಾಗ ನಮ್ಮ ತಂದೆಯ ಅತೀ ಮುದ್ದಿನ ಮಗಳಾಗಿದ್ದರಿಂದ ನನಗೆ ಬಿಳಿ ಬಣ್ಣದ ಕ್ಯಾನ್‌ವಾಸ್ ಶೂಸ್ ತೆಗೆಸಿ ಕೊಟ್ಟಿದ್ದರು. ಅಂದಿನ ದಿನದಲ್ಲಿ ಹೆಣ್ಣುಮಕ್ಕಳಿಗೆ ಕಾಲಿಗೆ ಗೆಜ್ಜೆ ತೆಗೆಸಿ ಕೊಡುತ್ತಿದ್ದರೇ ಹೊರತು ಶೂಸ್ ತೆಗೆಸಿ ಕೊಡುವುದು ಬಹಳ ಅಪರೂಪವಾಗಿತ್ತು. ನಾನು ಶಾಲೆಗೆ ಹೋದ ಮೊದಲನೆಯ ದಿನ ನನ್ನ ಅಮ್ಮ ನನ್ನನ್ನು ಸಿಂಗರಿಸಿ ಕಾಲಿಗೆ ಶೂಸ್ ಹಾಕಿ ಕಳಿಸಿದ್ದಳು. ಹಳ್ಳಿಯ ಶಾಲೆ. ಇಡೀ ಶಾಲೆಯಲ್ಲಿ ನಾನೊಬ್ಬಳೇ ಕಾಲಿಗೆ ಶೂಸ್ ಧರಿಸಿದ್ದು. ಪ್ರತಿಯೊಬ್ಬ ಮಕ್ಕಳ ಕಣ್ಣೂ ನನ್ನ ಶೂಸ್‌ನ ಮೇಲೇ ಇತ್ತು.
ಶಾಲೆಯ ಬೆಲ್ಲು ಹೊಡೆದು ಹೊರಗೆ ಅಂಗಳದಲ್ಲಿ ಪ್ರಾರ್ಥನೆ ಮುಗಿಸಿ ಶಾಲೆಯ ಒಳ ಹೊಕ್ಕಾಗ ನಮ್ಮ ಪರಿಚಯದ ಹಿರಣ್ಣಯ್ಯ ಮಾಸ್ತರರು, “”ಬೂಟು ಹೊರಗೆ ತೆಗೆದಿಟ್ಟು ಬಾ ಮಗೂ” ಎಂದು ಹೇಳಿದ್ದರು. ಅಂಜುತ್ತಂಜುತ್ತಲೇ ಹೋಗಿ ಬೂಟು ಕಳಚಿ ಬಾಗಿಲ ಬಳಿ ಇಟ್ಟು ಬಂದಿದ್ದಾರೆ. ಮಧ್ಯಾಹ್ನ ಊಟದ ಬೆಲ್ಲು ಹೊಡೆಯುತ್ತಿದ್ದಂತೆಯೇ ಎಲ್ಲ ಮಕ್ಕಳು ಮನೆಯತ್ತ ಓಡಿದ್ದರು. ಅದೇ ಶಾಲೆಯಲ್ಲಿ ಓದುತ್ತಿದ್ದ ನನ್ನ ದೊಡ್ಡಮ್ಮನ ಮಕ್ಕಳು ನನ್ನ ಇರುವನ್ನೂ ಲಕ್ಷಿಸದೆ ಮನೆಗೆ ಊಟಕ್ಕೆ ಓಡಿದ್ದರು. ಬಾಗಿಲ ಬಳಿ ನನ್ನ ಶೂಸ್ ನನಗಾಗಿ ಕಾಯುತ್ತಿತ್ತು. ಅದುವರೆಗೆ ನಾನು ಎಂದೂ ನನ್ನ ಶೂಸನ್ನು ನಾನಾಗಿಯೇ ಹಾಕಿಕೊಂಡಿರಲಿಲ್ಲ. ಪ್ರತಿಬಾರಿಯೂ ಅಮ್ಮನೇ ಹಾಕುತ್ತಿದ್ದಳು. ಆ ಶೂಸನ್ನು ಹೇಗೆ ಹಾಕಿಕೊಳ್ಳಬೇಕೆಂದು ಪರದಾಡುತ್ತಿದ್ದಾಗ, ಕೆಲವು ಮಕ್ಕಳು ಮನೆಯಲ್ಲಿ ಊಟ ಮುಗಿಸಿ ಪುನಃ ಶಾಲೆಗೆ ಬಂದಾಗಿತ್ತು. ನಂತರ ಶೂಸನ್ನು ಕೈಯಲ್ಲಿ ಹಿಡಿದುಕೊಂಡು ಅಳುತ್ತ ಮನೆ ತಲುಪಿದ್ದಾರೆ. ಅದರ ನಂತರ ಪ್ರತಿದಿನ ಮನೆಯಲ್ಲಿ ಅಮ್ಮನಿಂದ ಬೈಗುಳ ತಿಂದರೂ ಶಾಲೆಗೆ ಶೂಸ್ ಹಾಕಿಕೊಂಡು ಹೋಗಲಿಲ್ಲ. ಬೇರೆ ಮಕ್ಕಳಂತೆ ನಾನೂ ಬರೀ ಕಾಲಿನಲ್ಲಿಯೇ ಶಾಲೆಗೆ ಹೋದೆ.
ಪ್ರಾಥಮಿಕ ಶಿಕ್ಷಣದ ನಂತರ ಹಳ್ಳಿಯಿಂದ ಪರವೂರಿಗೆ ಬಂದಿದ್ದಾರೆ.
ಮಾಧ್ಯಮಿಕ ಶಾಲೆಗೆ ಹೋಗುವ ಸಂಭ್ರಮದಲ್ಲಿ ನನ್ನ ತಂದೆ ಶಾಲೆಗೆ ಹೋಗುವ ಹಿಂದಿನ ದಿನ ಪೇಟೆಗೆ ಕರೆದುಕೊಂಡು ಹೋಗಿ, ಕಾಲಿಗೆ ಚಪ್ಪಲಿ, ಒಂದು ಛತ್ರಿ ಮತ್ತು ಬುತ್ತಿ ತೆಗೆದುಕೊಂಡು ಹೋಗಲು ಒಂದು ಅಲ್ಯುಮಿನಿಯಂ ಉಗ್ಗ ತೆಗೆಸಿ ಕೊಟ್ಟಿದ್ದರು. ಐದನೆಯ ತರಗತಿಯ ಮೊದಲನೆಯ ದಿನ ಖುಷಿಯಿಂದ ಚಪ್ಪಲಿ ಧರಿಸಿ ಛತ್ರಿ, ಉಗ್ಗ ಸಮೇತ ಶಾಲೆಯ ಮೆಟ್ಟಲು ಹತ್ತಿ¨ªೆ. ಸುಮಾರು ನೂರಕ್ಕಿಂತಲೂ ಹೆಚ್ಚು ಮಕ್ಕಳಿದ್ದ ಆ ಹೆಣ್ಣುಮಕ್ಕಳ ಶಾಲೆಯಲ್ಲಿ ನನ್ನೊಬ್ಬಳ ಹೊರತು ಬೇರೆ ಯಾರೂ ಚಪ್ಪಲಿ ಧರಿಸಿರಲಿಲ್ಲ. ಶಾಲೆಯ ಮುಂಬಾಗಿಲಿನ ಹೊರಗೇ ಚಪ್ಪಲಿ ಕಳಚಿಟ್ಟು ತರಗತಿಗೆ ಹೋಗಬೇಕಾಗಿತ್ತು.
ಶಾಲೆಯ ಶಿಕ್ಷಕಿಯರೂ ತಮ್ಮ ಚಪ್ಪಲಿಯನ್ನು ಹೊರಗಡೆಯೇ ತೆಗೆದಿಡುತ್ತಿದ್ದರು. ಶಿಕ್ಷಕಿಯರ ಚಪ್ಪಲಿಯ ನಡುವೆ ಆಗ ತಾನೇ ಹೊಸದಾಗಿ ಕೊಂಡ ನನ್ನ ಕಂದು ಬಣ್ಣದ ಪುಟ್ಟ ಚಪ್ಪಲಿ ಎಲ್ಲರನ್ನೂ ಆಕರ್ಷಿಸಿತ್ತು. ಪ್ರತಿಯೊಬ್ಬರೂ ಆ ಚಪ್ಪಲಿ ಯಾರದೆಂದು ವಿಚಾರಿಸುತ್ತಿದ್ದರು. ಆ ಚಪ್ಪಲಿಯಿಂದಾಗಿ ಬಹು ಬೇಗನೇ ನಾನು ಶಾಲೆಯಲ್ಲಿ ಎಲ್ಲರಿಗೂ ಪರಿಚಿತಳಾಗಿದ್ದಾರೆ.
ಶಾಲೆಯಿಂದ ನಮ್ಮ ಮನೆಗೆ ಸುಮಾರು ಎರಡು ಕಿ. ಮೀ. ದೂರವಿತ್ತು. ನನ್ನ ಚಪ್ಪಲಿಯ ಮೇಲೆ ನನ್ನ ಗೆಳತಿಯರದ್ದೂ ಕಣ್ಣು. ಎಲ್ಲರೂ, “ನನಗೆ ಸ್ವಲ್ಪ ಹೊತ್ತು ಹಾಕಿಕೊಳ್ಳಲು ಕೊಡೇ’ ಎಂದು ಬೇಡುತ್ತಿದ್ದರು. ನಾನೂ ದಾನಶೂರ “ಕರ್ಣಿ’ಯಂತೆ ಜಂಭದಿಂದ ಪ್ರತಿಯೊಬ್ಬರಿಗೂ ಸ್ವಲ್ಪ ಹೊತ್ತು ಹಾಕಿಕೊಳ್ಳಲು ಕೊಡುತ್ತಿದ್ದಾರೆ. ಸ್ವಲ್ಪ ದೂರ ಸೀತಾ, ಸ್ವಲ್ಪ ದೂರ ನಾಗಮ್ಮ, ಸ್ವಲ ದೂರ ರತ್ನಾ- ಹೀಗೆ ಹಂಚಿಕೊಂಡು ದಾರಿಯಲ್ಲಿ ನಡೆಯುತ್ತಿ¨ªೆವು. ಒಂದು ದಿನ ನಾವು ಶಾಲೆಯಿಂದ ಹಿಂತಿರುಗುತ್ತಿದ್ದಾಗ ನನ್ನ ತಂದೆ ಸೈಕಲ್ಲಿನಲ್ಲಿ ಹಾದು ಹೋದರು. ನನ್ನ ಚಪ್ಪಲಿ ನಾಗಮ್ಮನ ಕಾಲಿನಲ್ಲಿ ಇದ್ದುದನ್ನು ಅವರು ಅಷ್ಟು ಬೇಗ ಗಮನಿಸಿದ್ದರು. ಮನೆಗೆ ಹೋಗುತ್ತಿದ್ದಂತೆಯೇ ವಿಚಾರಣೆ ಶುರುವಾಯಿತು.
“ಪಾಪ, ನಾಗಮ್ಮನ ಹತ್ತಿರ ಚಪ್ಪಲಿಯಿಲ್ಲ, ಅದಕ್ಕೇ ಸ್ವಲ್ಪ ಹಾಕಿಕೊಳ್ಳಲು ಕೊಟ್ಟೆ ‘ ಎಂದು ನನ್ನ ಕೃತ್ಯವನ್ನು ಎಷ್ಟೇ ಸಮರ್ಥಿಸಿಕೊಳ್ಳಲು ನೋಡಿದರೂ ನನ್ನ ತಂದೆಯ ಬೈಗುಳದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. “”ಏನು, ನಾರಾಯಣ ಶೆಟ್ಟರಿಗೆ ತಮ್ಮ ಮಗಳಿಗೆ ಚಪ್ಪಲಿ ತೆಗೆಸಿ ಕೊಡುವಷ್ಟು ದುಡ್ಡಿಲ್ಲವಂತಾ?” ಎಂದು ಕೋಪದಿಂದ ಕೂಗಾಡಿದ್ದರು. ಅಂದಿನಿಂದ ಚಪ್ಪಲಿ ಹಾಕಿಕೊಳ್ಳಲು ಮರೆತು ಹೋದಂತೆ ನಟಿಸಿ ಬರೀ ಕಾಲಿನಲ್ಲಿಯೇ ಶಾಲೆಗೆ ಹೋಗುತ್ತಿದ್ದಾರೆ.
ಮೈಸೂರಿನಲ್ಲಿ ಕಾಲೇಜಿಗೆ ಸೇರಿದ ನಂತರವೇ ಕಾಲಿಗೆ ಚಪ್ಪಲಿ ಕಡ್ಡಾಯವಾಗಿ ಹಾಕಲು ಶುರುವಾಗಿದ್ದು. ಮೈಸೂರಿನಲ್ಲಿ ಮಾರ್ಕೆಟ್ ರಸ್ತೆಯಲ್ಲಿ ಒಂದು ಚಪ್ಪಲಿ ಅಂಗಡಿ ಕಾಲೇಜು ಹುಡುಗಿಯರಿಗಾಗಿಯೇ ಶುರುವಾಗಿತ್ತು. ಬಣ್ಣ ಬಣ್ಣದ ತೆಳುವಾದ ಚಪ್ಪಲಿಗಳು. ಬೆಲೆ ಕೇವಲ ಏಳು ರೂಪಾಯಿ. ಆಗಿನ್ನೂ ಮ್ಯಾಚಿಂಗ್ ಚಪ್ಪಲಿ ಧರಿಸುವ ಫ್ಯಾಶನ್ ಆರಂಭವಾಗಿರಲಿಲ್ಲವಾದರೂ ಸಂಜೆಯ ಹೊತ್ತು ಆ ಅಂಗಡಿ ಕಾಲೇಜು ಹುಡುಗಿಯರಿಂದ ತುಂಬಿ ತುಳುಕುತ್ತಿತ್ತು. ಅದೇ ಸಮಯದಲ್ಲಿ ಬಾಟಾದವರ ಹವಾಯಿ ಚಪ್ಪಲಿಗಳೂ ಜನ್ಮ ತಾಳಿದ್ದರಿಂದ ಮುಂದೆ ಸಾಮಾನ್ಯವಾಗಿ ಎಲ್ಲರ ಕಾಲಿನಲ್ಲಿಯೂ ಚಪ್ಪಲಿಗಳು ಶೋಭಿಸತೊಡಗಿದವು. ಆದರೆ ಯಾವಾಗಲೂ ಒಂದು ಚಪ್ಪಲಿ ಹಳೆಯದಾಗಿ ಕಿತ್ತುಹೋದ ನಂತರವೇ ಹೊಸ ಚಪ್ಪಲಿ ತೆಗೆದುಕೊಳ್ಳುತ್ತಿದ್ದುದು. ಮದುವೆಯಾಗಿ ಮುಂಬೈಗೆ ಬಂದ ನಂತರವೂ ಒಂದೇ ಜೊತೆ ಚಪ್ಪಲಿಯ ಸೂತ್ರಕ್ಕೇ ಅಂಟಿಕೊಂಡಿದ್ದಾರೆ. ಒಮ್ಮೆ ಸಹೋದ್ಯೋಗಿಗಳ ಜೊತೆಗೆ ಗೆಳತಿಯೊಬ್ಬಳ ಮದುವೆಗೆ ಹೋಗಿದ್ದಾಗ, ನನ್ನ ಉತ್ತರಭಾರತೀಯ ಗೆಳತಿ ಉಷಾ, “”ನೀವು ದಕ್ಷಿಣ ಭಾರತೀಯರು ಒಳ್ಳೆಯ ಜರಿ ಸೀರೆ ಉಡುತ್ತೀರಿ, ಮೈ ತುಂಬಾ ಒಡವೆ ಹಾಕಿಕೊಳ್ಳುತ್ತೀರಿ, ಆದರೆ ಚಪ್ಪಲಿ ಮಾತ್ರ ಹಳೆಯದನ್ನೇ ಹಾಕಿ ಕೊಳ್ಳುತ್ತೀರಿ” ಎಂದು ಕಮೆಂಟ್ ಹೊಡೆದಾಗ, ನನ್ನ ಕಣ್ಣು ನಮ್ಮ ಗುಂಪಿನಲ್ಲಿದ್ದ ಎಲ್ಲರ ಚಪ್ಪಲಿಯತ್ತ ಹೊರಳಿತ್ತು. ಅವಳ ಹೇಳಿಕೆ ಸರಿಯಾಗಿದೆ ಎಂದು ಮನಸ್ಸು ಒಪ್ಪಿಕೊಂಡಿತ್ತು ! ಇದು ಬಹಳ ವರ್ಷ ಹಿಂದಿನ ಮಾತು.
ಈಗ ದಕ್ಷಿಣ ಭಾರತೀಯರೂ ಮ್ಯಾಚಿಂಗ್‌ನ ತಂತ್ರವನ್ನು ಅರಿತಿದ್ದಾರೆ.
ಚಪ್ಪಲಿಯ ಬಗೆಗೆ ಇಷ್ಟೆಲ್ಲ ಬರೆದರೂ ಚಿಕ್ಕವಳಿದ್ದಾಗ ನಡೆದ ಒಂದು ಘಟನೆ ಯಾವಾಗಲೂ ಮನಸ್ಸನ್ನು ಚುಚ್ಚುತ್ತಿರುತ್ತದೆ. ಬೇಸಿಗೆ ರಜದಲ್ಲಿ ಅಜ್ಜನ ಮನೆಗೆ ಹೋಗಿದ್ದಾಗ ಒಂದು ದಿನ ಸಂಜೆ ನನ್ನ ಅಜ್ಜಿ ನನ್ನನ್ನು ಕರೆದುಕೊಂಡು ಎರಡು ಮೈಲಿ ದೂರದಲ್ಲಿದ್ದ ಸಂಬಂಧಿಕರ ಮನೆಗೆ ಹೋಗಿದ್ದರು. ಮಾರನೆಯ ದಿನ ಮಧ್ಯಾಹ್ನ ಊಟ ಮುಗಿಸಿ ಮನೆಗೆ ಹೊರಟಿ¨ªೆವು. ಅಲ್ಲಿಂದ ಅಜ್ಜನ ಮನೆಗೆ ಯಾವುದೇ ವಾಹನ ಸೌಕರ್ಯವಿರಲಿಲ್ಲ. ಬೇಸಿಗೆಯ ರಣಬಿಸಿಲು. ನೆಲ ಕಾದು ದೋಸೆಹಂಚಿನಂತಾಗಿತ್ತು. ನನ್ನ ಕಾಲಿನಲ್ಲಿ ಚಪ್ಪಲಿ ಇತ್ತು. ದೊಡ್ಡಮ್ಮ ಬರಿಗಾಲಿನಲ್ಲಿ ನಡೆಯುತ್ತಿದ್ದರು. ನನ್ನ ಕರುಳು ಚುರುಕ್ ಎಂದಿತ್ತು.
“”ದೊಡ್ಡಮ್ಮ, ನೀವು ನನ್ನ ಚಪ್ಪಲಿ ಹಾಕಿಕೊಳ್ಳಿ” ಎಂದು ಎಷ್ಟು ಬೇಡಿಕೊಂಡರೂ ಅವರು ಒಪ್ಪಲೇ ಇಲ್ಲ. “”ನನಗೆ ಅದೆಲ್ಲ ಹಾಕಿ ಅಭ್ಯಾಸ ಇಲ್ಲ ಮಗಾ, ಬೇಗ ಬೇಗ ನಡೆದರೆ ಇನ್ನು ಐದು ನಿಮಿಷದಲ್ಲಿ ಮನೆ ಸೇರುತ್ತೇವೆ” ಎಂದು ಹೇಳುತ್ತಲೇ ಬೆವರುತ್ತ ದಾಪುಗಾಲು ಹಾಕಿದ್ದರು. ಮನೆ ಸೇರುತ್ತಿದ್ದಂತೆಯೇ ಬಾವಿಕಟ್ಟೆಯಲ್ಲಿ ಕಾಲು ತೊಳೆದು, ಒಳಗೆ ಚಾವಡಿಯಲ್ಲಿದ್ದ ಒಂದು ಚೂರು ಬೆಲ್ಲ ಬಾಯಿಗೆ ಹಾಕಿಕೊಂಡು ತಣ್ಣೀರು ಕುಡಿದು ನೆಲದ ಮೇಲೆ ಒರಗಿದ್ದ ದೊಡ್ಡಮ್ಮನ ಮುಖ ಈಗಲೂ ಕಣ್ಣೆದುರಿಗೆ ಬರುತ್ತದೆ.
– ರಮಾ ಉಡುಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.