ಅಳಿದ ಗೋಪುರದ ಉಳಿದ ಪ್ರಶ್ನೆಗಳು
Team Udayavani, Jul 16, 2017, 2:50 AM IST
ಇತ್ತೀಚೆಗೆ ಇಂಗ್ಲೆಂಡಿನಲ್ಲಿ ಲಂಡನ್‌ನ ಪಶ್ಚಿಮಕ್ಕೆ, ಉತ್ತರ ಕೆನ್‌ಸಿಂಗ್ಟನ್‌ನಲ್ಲಿ 24 ಮಹಡಿಯ 220 ಅಡಿ ಎತ್ತರದ ಗ್ರೇನ್‌ಫೆಲ್ ಟವರ್ ಅಗ್ನಿದುರಂತಕ್ಕೆ ಒಳಗಾಗಿ ಭಗ್ನಗೊಂಡಿತು. ಅವಶೇಷಗಳನ್ನು ಕೆದಕಿ ನೋಡಿದರೆ ಎಷ್ಟೊಂದು ಕುತೂಹಲಕರ ಸಂಗತಿಗಳಿವೆ ! ನಾವು ಕೂಡ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕೆ?
ಆರೋಗ್ಯ ಮತ್ತು ಸುರಕ್ಷೆ (Health and Saftey) ಎಂಬೆರಡು ಶಬ್ದಗಳು ಜೋಡಿಯಾಗಿಯೇ ಬ್ರಿಟನ್‌ನಲ್ಲಿ ಕೇಳಿ ಬರುತ್ತವೆ; ಈ ಜೋಡಿ ಶಬ್ದಗಳನ್ನು ಆಂಗ್ಲರು ಬಳಸಿದಷ್ಟು ಇನ್ಯಾರೂ ಬಳಸುತ್ತಾರೆಂದು ಅನಿಸುವುದಿಲ್ಲ . ಸಣ್ಣ ಮಕ್ಕಳ ಸಣ್ಣ ಶಾಲೆ ಇರಲಿ, ದೊಡ್ಡವರ ದೊಡ್ಡ ಕಚೇರಿ ಇರಲಿ, ಆಸ್ಪತ್ರೆ ಇರಲಿ ಅಥವಾ ಮನೆ ಇರಲಿ ಅಲ್ಲ , ನೆಲ - ಜಲ- ವಾಯುವಿನ ಮೇಲಿನ ಯಾವ ತರಹದ ಪ್ರಯಾಣವೇ ಇರಲಿ, ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಯ್ದಿರಿಸುವ ನೂರು ನಿಯಮಗಳು, ಕಾನೂನುಗಳು ಮತ್ತು ಮುನ್ನೆಚ್ಚರಿಕೆಗಳು ಅಲ್ಲಿ ತುಂಬಿರುತ್ತವೆ. ಸುರಕ್ಷೆ ಎಂದರೆ ಬರಿಯ ಪುಸ್ತಕದ ಶಬ್ದ ಅಲ್ಲ ಅಥವಾ ಹಿರಿಯರೋ ಹೆತ್ತವರೊ ಕಿರಿಯರಿಗೆ ಹೇಳುವ ಬುದ್ಧಿಯ ಮಾತಲ್ಲ. ಆಂಗ್ಲರ ಮಟ್ಟಿಗೆ ಆರೋಗ್ಯ ಮತ್ತು ಸುರಕ್ಷತೆ ಎನ್ನುವುದು ಒಂದು ಯೋಚನಾ ಕ್ರಮ; ಬಾಲರಿಗೂ ವೃದ್ಧರಿಗೂ ಈ ಯೋಚನಾಕ್ರಮ ರಕ್ತಗತ ಎನ್ನುವಷ್ಟು ಸಹಜ. ದಶಕಗಳಿಂದ ಶತಮಾನಗಳಿಂದ ವಿಕಾಸಗೊಂಡ ಇಂತಹ ಯೋಚನಾಕ್ರಮ ಆಂಗ್ಲರನ್ನು ಎಚ್ಚರದಲ್ಲಿಡುತ್ತದೆ.
ಅವರು ರಸ್ತೆಯಲ್ಲಿ ನಡೆಯುತ್ತಿರಲಿ, ವಾಹನ ಚಲಾಯಿಸುತ್ತಿರಲಿ, ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರಲಿ ಅಥವಾ ತೋಟದಲ್ಲಿ ಕೆಲಸ ಮಾಡುತ್ತಿರಲಿ; ಅಪಾಯ ಹತ್ತಿರ ಸುಳಿಯದಂತೆ ಸಹಜವಾಗಿ ಜಾಗ್ರತೆ ವಹಿಸುತ್ತಾರೆ. ಅಪಾಯ ಎನ್ನುವ ಶಬ್ದದ ವ್ಯಾಖ್ಯಾನ ಇವರ ನಿಘಂಟಿನಲ್ಲಿ ಅತ್ಯಂತ ಸೂಕ್ಷ್ಮವಾದ ಅಪಘಾತವೂ ಅಥವಾ ಸಣ್ಣದಾದ ಆಕಸ್ಮಿಕವೂ ಹೌದು; ಅಥವಾ ಮಾರಣಾಂತಿಕ ಪರಿಣಾಮದ್ದೂ ಇರಬಹುದು. ಕಚೇರಿಯÇÉೊಬ್ಬ ಎಡವಿ ಬಿದ್ದರೂ ಅದು ಗಂಭೀರ ಚರ್ಚೆಗೆ ಎಡೆ ಮಾಡಿಕೊಡುತ್ತದೆ. ಮತ್ತೆ ಅದರ ಹಿಂದಿನ ಕಾರಣಗಳ ಪರಿಶೀಲನೆ ಆಗುತ್ತದೆ. ಮನೆಯ ಅಥವಾ ಕಚೇರಿಯ ಪ್ರತಿ ಕೊಠಡಿಯಲ್ಲೂ ಹೊಗೆ ಶೋಧಕ ಅಥವಾ ಅಗ್ನಿ ಕರೆಗಂಟೆ ಇರುತ್ತದೆ. ಈ ಕರೆಗಂಟೆಯ ಕೆಲಸ ಹೊಗೆಯ ಸಾಮೀಪ್ಯದಲ್ಲಿ ಜೋರಾಗಿ ಶಬ್ದ ಮಾಡುವುದು. ಇದು ಬಡಿದುಕೊಳ್ಳಲು ಮನೆಗೆ ಬೆಂಕಿ ಹತ್ತಿ ಉರಿಯಬೇಕೆಂದಿಲ್ಲ, ಅಡುಗೆ ಮನೆಯಲ್ಲಿ ಭಾರತೀಯ ಶೈಲಿಯ ಅಡುಗೆಯ ಒಗ್ಗರಣೆಯಿಂದ ಹೊಮ್ಮುವ ಹೊಗೆಯೇ ಸಾಕು. ಸಭೆ-ಸಮಾರಂಭವಿರಲಿ, ಸಂಗೀತ ಕಚೇರಿ ಇರಲಿ ಅಥವಾ ದೊಡ್ಡ ಮೈದಾನದಲ್ಲಿ ನಡೆಯುತ್ತಿರುವ ಕ್ರೀಡೆ ಇರಲಿ, ಕಾರ್ಯಕ್ರಮ ಆರಂಭ ಆಗುವ ಪೂರ್ವದಲ್ಲಿ ವ್ಯವಸ್ಥಾಪಕರು ಸೂಚನೆ ಕೊಡುತ್ತಾರೆ, ಆ ಸ್ಥಳಕ್ಕೆ ಎÇÉಾದರೂ ಬೆಂಕಿ ಬಿದ್ದರೆ ತುರ್ತು ನಿರ್ಗಮನ ಮಾರ್ಗಎಲ್ಲಿ ಎಲ್ಲಿ ಇವೆ ಎಂದು. ಹೊಸದಾಗಿ ಚಾಲಕನ ಪರವಾನಿಗೆ ಪಡೆಯಲು ವಾಹನ ಚಲನೆಯ ಸಿದ್ಧಾಂತಗಳನ್ನು, ನಿಯಮಗಳನ್ನು, ರಸ್ತೆ ಸೂಚನೆಗಳನ್ನು ಚೆನ್ನಾಗಿ ಅಭ್ಯಸಿಸಿ ಲಿಖೀತ ಪರೀಕ್ಷೆಯಲ್ಲಿ ಮೊದಲು ಪಾಸಾಗಬೇಕು ಮತ್ತೆ ಕಟ್ಟುನಿಟ್ಟಾದ ಪ್ರಾಯೋಗಿಕ ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗಿರಬೇಕು. ಒಟ್ಟಿನಲ್ಲಿ ನಮ್ಮ ಜೀವಕ್ಕೂ ಇತರರ ಜೀವಕ್ಕೂ ಇರುವ ಬೆಲೆಯನ್ನು ತರಗತಿಯಲ್ಲಿ ಪಾಠಗಳನ್ನು ಹೇಳಿಸಿಕೊಳ್ಳದೆಯೇ ಸಹಜವಾಗಿ ಪ್ರತಿಯೊಬ್ಬರಿಗೂ ಮನವರಿಕೆ ಆಗುವ ಹಾಗೆ ವಾತಾವರಣ ಮತ್ತು ವ್ಯವಸ್ಥೆಗಳು ಕೆಲಸ ಮಾಡುತ್ತವೆ.
ದುರಂತವೂ ಮಹಾನ್
ಆಂಗ್ಲರ ಮನಸ್ಸಿನ ಮೂಲೆ ಮೂಲೆಯಲ್ಲಿ, ಬದುಕಿನ ಹೆಜ್ಜೆ ಹೆಜ್ಜೆಯಲ್ಲಿ ಹಾಸುಹೊಕ್ಕಾಗಿರುವ ಸುರಕ್ಷತೆಯ ಪಾಠಗಳ ತಿಳುವಳಿಕೆಗಳ ಮೂಲ ಅಥವಾ ಇಂತಹ ಯೋಚನಾಕ್ರಮ ಇವರ ಸಂಸ್ಕೃತಿಯಲ್ಲಿ ನುಸುಳಿದ್ದು ಹೇಗೆ ಎಂದು ಹುಡುಕಹೊರಟರೆ 16ನೆಯ ಶತಮಾನದ ಲಂಡನ್‌ನ ಮಹಾನ್ ಅಗ್ನಿದುರಂತ ನಮ್ಮ ಗಮನ ಸೆಳೆಯುತ್ತದೆ. ತಮ್ಮ ಮೇಲೆ ತೀವ್ರ ಪರಿಣಾಮ ಬೀರಿದ ಎಲ್ಲವನ್ನೂ ಮಹಾನ್ ಎಂಬ ವಿಶೇಷಣದೊಂದಿಗೆ ದಾಖಲಿಸುತ್ತಾರೆ. ಹಾಗಾಗಿ ಆಗಿಹೋದ ಕೆಲವು ದುರಂತಗಳೂ ಅವರ ಚರಿತ್ರೆಯಲ್ಲಿ ಮಹಾನ್ ಎಂದು ಕರೆಸಿಕೊಳ್ಳುತ್ತದೆ. 1666ರಲ್ಲಿ ಬೇಕರಿಯೊಂದರಲ್ಲಿ ಹುಟ್ಟಿಕೊಂಡ ಬೆಂಕಿಯ ಕಿಡಿ ಲಂಡನ್ ನಗರವನ್ನು ಹಬ್ಬಿತು. ಅದು ಬೇಸಿಗೆಯ ದಿನವಾದ್ದರಿಂದ ಮತ್ತೆ ಮರದಿಂದ ಕಟ್ಟಿದ ಒಂದಕ್ಕೊಂದು ತಾಗಿಕೊಂಡಿರುವ ಮನೆಗಳು ಹಾಗೂ ಒಣಗಾಳಿ ಎಲ್ಲವೂ ಪೂರಕವಾಗಿ ನಾಲ್ಕು ದಿನಗಳ ಕಾಲ ಬೆಂಕಿ ಅವಿರತವಾಗಿ ಉರಿಯಿತು. ಲಂಡನ್‌ನ ದೊಡ್ಡ ಭಾಗವನ್ನು ಬೂದಿ ಮಾಡಿತು. ಸುಮಾರು ಒಂದು ಲಕ್ಷ ಜನರು ಮನೆ ಕಳೆದುಕೊಂಡರು, ಜೀವ ಕಳೆದುಕೊಂಡವರ ಲೆಕ್ಕವೇ ಸಿಗಲಿಲ್ಲ . 1667ರಲ್ಲಿ ಲಂಡನ್ ನಗರದ ಪುನರ್ನಿರ್ಮಾಣ ಆರಂಭ ಆಯಿತು. ಆಗ ಮನೆಯೊಂದು ಸುರಕ್ಷಿತವಾಗಿರಬೇಕಿದ್ದರೆ ಹೇಗೆ ಕಟ್ಟಬೇಕು ಯಾವುದರಿಂದ ಕಟ್ಟಬೇಕು ಎನ್ನುವ ಚರ್ಚೆಗಳು ಶುರು ಆದವು. ಮತ್ತೆ ಕಾಯಿದೆಯ ರೂಪದಲ್ಲಿ ದಾಖಲೆಗೊಂಡವು.
ಇದಕ್ಕೆ 1667ರ ಮನೆ ಪುನರ್ನಿರ್ಮಾಣ ಕಾಯಿದೆ ಎಂದೇ ಹೆಸರಾಯಿತು. ಯಾವ ಮನುಷ್ಯನೂ, ಬಡವನಿರಲಿ ಶ್ರೀಮಂತನಿರಲಿ ಕಲ್ಲು ಅಥವಾ ಇಟ್ಟಿಗೆಯಲ್ಲದೇ ಬೇರೆ ವಸ್ತುವಿನಿಂದ ಮನೆ ಕಟ್ಟ ಬಾರದೆಂದು ಅಂದು ಕಾಯಿದೆ ಬರೆಯಲಾಯಿತು. ಈ ಕಾಯಿದೆಯನ್ನು ಉಲ್ಲಂ ಸಿ ಮನೆ ಮರುನಿರ್ಮಾಣ ಮಾಡಿದ್ದರೆ ಅವನ್ನು ಕೆಡವಲಾಯಿತು. ಇಂದು ಲಂಡನ್‌ನಲ್ಲಿ ಕಾಣಸಿಗುವುದು ಕಲ್ಲಿನ ಅಥವಾ ಕೆಂಪು ಇಟ್ಟಿಗೆಯ ಕಟ್ಟಡಗಳೇ. ಸುಮಾರು 13,000 ಮನೆಗಳು ಭಸ್ಮವಾದವು. ಜನರ ಮಧ್ಯೆ ವಾದ-ವಿವಾದಗಳೂ ಆರಂಭ ಆಗಿದ್ದವು. ಯಾರ ಮನೆ ಯಾವ ಜಾಗದಲ್ಲಿತ್ತು, ಯಾವ ಜಗದಲ್ಲಿ ಮನೆ ಮರುನಿರ್ಮಾಣಕ್ಕೆ ಯಾರು ಎಷ್ಟು ಕೊಡಬೇಕು ಎಂದೆಲ್ಲ. ಇಂತಹ ವಿವಾದಗಳನ್ನು ಬಗೆಹರಿಸಲು ಬೆಂಕಿ ನ್ಯಾಯಾಲಯವನ್ನು ಸ್ಥಾಪಿಸಲಾಯಿತು. ದುರಂತ ನಡೆದ ಹತ್ತುವರ್ಷಗಳ ವರೆಗೂ ಕೆಲವು ವ್ಯಾಜ್ಯಗಳು ನಡೆಯುತ್ತಲೇ ಇದ್ದವು. ಮನೆಗಳಿಗೆ ವಿಮೆಯನ್ನು ಶುರುಮಾಡಲು ಇದೆ ಸಕಾಲ ಎಂದು ವೈದ್ಯನೊಬ್ಬ ತನ್ನ ವೃತ್ತಿ ಬಿಟ್ಟು ಹೊಸ ಉದ್ಯಮದ ಅವಕಾಶವನ್ನು ಕಂಡುಕೊಂಡ. ಹೀಗೆ 1667ರಲ್ಲಿ ಬ್ರಿಟನ್‌ನಲ್ಲಿ ಮೊದಲ ಬಾರಿಗೆ ವಿಮಾ ಸಂಸ್ಥೆ ಸ್ಥಾಪಿತವಾಯಿತು. ಇಂದಿನ ಬ್ರಿಟನ್‌ನಲ್ಲಿ ಬಗೆ ಬಗೆಯ ವಿಮೆ ವ್ಯಾಪಾರ ಇದೆ. ಮನೆಗೆ, ಮನುಷ್ಯರಿಗೆ, ಸಾಕುಪ್ರಾಣಿಗಳಿಗೆ, ವಾಹನಗಳಿಗೆ, ಪ್ರಯಾಣಕ್ಕೆ, ಆರೋಗ್ಯಕ್ಕೆ, ರಜೆಗೆ ಎಲ್ಲದಕ್ಕೆ. 1666 ನಂತರ ಸುರಕ್ಷತೆಯ ಬಗ್ಗೆ ಯೋಚಿಸುವುದು ಆರಂಭ ಆಯಿತು ಮತ್ತು ಆ ನಿಟ್ಟಿನಲ್ಲಿ ಕಾಯಿದೆಗಳು ವಿಕಾಸಗೊಂಡವು. ಅಗ್ನಿಶಾಮಕ ದಳಗಳು ಅಸ್ತಿತ್ವಕ್ಕೆ ಬಂದವು. ಅಗ್ನಿ ದುರಂತವೊಂದು ಹೇಗೆ ಸುರಕ್ಷತೆಯ ಪಾಠ ಮತ್ತು ಯೋಚನಾ ಕ್ರಮದ ವಿಕಸನಕ್ಕೆ ಕಾರಣ ಆಯಿತು ಮತ್ತೆ ಆಂಗ್ಲ ಸಂಸ್ಕೃತಿಯ ಭಾಗ ಆಯಿತು ಎನ್ನುವುದು ಈಗ ಇತಿಹಾಸ. ಕಳೆದ ವರ್ಷ 1666ರ ಲಂಡನ್ ಮಹಾನ್ ಅಗ್ನಿಯ 350ನೆಯ ವರ್ಷಾಂತಿಕವನ್ನು ಆಚರಿಸಿದರು, ನವ ಬ್ರಿಟನ್ನಿನ ಮೇಲೆ ಆ ದುರಂತ ಬೀರಿದ ಪರಿಣಾಮ ಅಮರ ಎಂದು ಆಂಗ್ಲರು ನಂಬುತ್ತಾರೆ.
ಗ್ರೇನ್‌ಫೆಲ್ ಗೋಪುರ ಬಿಗ್‌ಫೇಲ್!
ಲಂಡನ್ ಮಟ್ಟಿಗೆ ಅಗ್ನಿ ಅಪಘಾತ ಬರಿಯ ಹಳೆಯ ಸ್ಮರಣೆ ಮಾತ್ರ ಅಲ್ಲ ವರ್ತಮಾನದ ಸತ್ಯವೂ ಹೌದು ಎಂಬಂತೆ ಇತ್ತೀಚೆಗೆ ಗ್ರೇನ್ ಫೆಲ್ ಗೋಪುರ (Grenfell Tower) ಬೆಂಕಿಯಲ್ಲಿ ಉರಿದು ಹೋಗಿದೆ. ಆಪತ್ಕಾಲದಲ್ಲಿ ತುರ್ತು ಕರೆಯೊಂದು ಹೋದಾಗ ನಿಮಿಷಗಳಲ್ಲಿ ಬಂದುನಿಲ್ಲುವ ಅಗ್ನಿಶಾಮಕ ದಳಗಳು ಮತ್ತು ಇತರ ಸಹಾಯಗಳು ಬೆಚ್ಚಿಬೀಳುವಂತೆ 24 ಮಹಡಿಗಳ ಕಟ್ಟಡವೊಂದು ಪೂರ್ತಿಯಾಗಿ ಬೆಂಕಿಯಲ್ಲಿ ಕರಟಿಹೋಗಿ ಹಲವು ಪ್ರಶ್ನೆಗಳನ್ನು ಕೇಳುತ್ತಿದೆ. ಶತಮಾನಗಳಿಂದ ವಿಕಸನಗೊಂಡ ಸುರಕ್ಷೆ ಎನ್ನುವ ಯೋಚನಾಕ್ರಮ, ಅದರ ಆಧಾರದ ಮೇಲೆ ನಿಂತ ಕಾಯಿದೆಗಳು, ಕಾಯಿದೆಯ ಪಾಲಿಕೆಯ ಬಗ್ಗೆ ಉಲ್ಲಂಘನೆಯ ಮೇಲೋ ತೀವ್ರ ನಿಗಾ ಇಡುವ ಅಧಿಕಾರಿಗಳು, ವ್ಯವಸ್ಥೆಗಳು ಎಲ್ಲವೂ ಗ್ರೇನ್ ಫೆಲ್ ಟವರ್‌ನ ಬದುಕುಳಿದ ನಿವಾಸಿಗಳಿಗೆ ಮತ್ತೆ ಅಲ್ಲಿ ಅಪಘಾತ ಪೂರ್ವದಲ್ಲಿ ಬದುಕುತ್ತಿದ್ದ 600 ನಿವಾಸಿಗಳನ್ನು ಬಲ್ಲವರಿಗೆ ಮತ್ತೆ ಪ್ರತಿದಿನ ಆ ಕಟ್ಟಡವನ್ನು ನೋಡುತ್ತಿದ್ದವರಿಗೆ ನಿರರ್ಥಕವಾಗಿ ಕಾಣಿಸುತ್ತಿವೆ. ಇಷ್ಟು ಎತ್ತರದ ಇಷ್ಟು ಮಹಡಿಗಳ ಮತ್ತು ಕಳೆದ ವರ್ಷವಷ್ಟೇ ಸುಮಾರು ಹತ್ತು ಮಿಲಿಯನ್ ಪೌಂಡ್‌ಗಳ ವೆಚ್ಚದಲ್ಲಿ ನವೀಕರಣಗೊಂಡ ಕಟ್ಟಡ ಇಷ್ಟು ಸುಲಭವಾಗಿ ದಹಿಸಿ ಹೋಗಬಹುದೇ? ಇದು ಯಾರ ಕಣ್ಣುತಪ್ಪಾ ಕೈತಪ್ಪಾ ಅಥವಾ ಕಿಸೆಯ ತಪ್ಪಾಅಥವಾ ಯಾರಿಂದಲೂ ಊಹಿಸಲಾಗದ ತಡೆಯಲಾಗದ ಒಂದು ಅಪೂರ್ವ ಆಕಸ್ಮಿಕವಾ? ನಲವತ್ತು ಅಗ್ನಿಶಾಮಕ ವಾಹನಗಳು, ಇನ್ನೂರು ಅಗ್ನಿಶಾಮಕ ಸಿಪಾಯಿಗಳು ತಮ್ಮ ಶಕ್ತಿಮೀರಿ ಹೋರಾಡಿ ಬದುಕಿಸಲ್ಪಟ್ಟ ಜನರು ಹೆಚ್ಚಾ? ಅಥವಾ ಅಸುನೀಗಿದವರು ಹೆಚ್ಚಾ?- ಹೀಗೆ ಉತ್ತರಿಸಲಾಗದ ಪ್ರಶ್ನೆಗಳ ಬೆಳೆಯುತ್ತಿರುವ ಪಟ್ಟಿ ಈ ಅಪಘಾತದ ಗಾಢತೆಯನ್ನೂ ಪ್ರಕ್ಷುಬ್ಧತೆಯನ್ನೂ ತೋರಿಸುತ್ತದೆ. 127 ಮನೆಗಳಿರುವ ಕಟ್ಟಡದ ಪ್ರತಿಮನೆಯೂ ಸಿಮೆಂಟು ಬ್ಲಾಕ್‌ಗಳಿಂದ ಕಟ್ಟಿದ್ದು; ಸಿಮೆಂಟಿನಿಂದ ಕಟ್ಟಿದ ಕೋಣೆಗಳು ಅರಗಿನಮನೆಯಂತೆ ಬೆಂಕಿಯನ್ನು ಆಕರ್ಷಿಸುವುದಿಲ್ಲ . ಯಾವ ಕಾರಣಕ್ಕೆ ಬೆಂಕಿ ಶುರು ಆದರೂ ಅಷ್ಟು ವೇಗವಾಗಿ ಕಟ್ಟಡವನ್ನು ಆವರಿಸುವುದು ಆಶ್ಚರ್ಯಕರ. ಈ ಘಟನೆಯ ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಗ್ನಿಶಾಮಕ ದಳದವರ ಪ್ರಕಾರ, ಒಂದು ಮನೆಯೊಳಗೆ ಹತ್ತಿಕೊಂಡ ಬೆಂಕಿ ಆ ಮನೆಯ ಹೊರಗೋಡೆಗೆ ಹರಡಿದೆ. ಬೆಂಕಿ ಮೊದಲು ಶುರುವಾದ ಮನೆಯನ್ನು ಬಹುತೇಕ ಸುಟ್ಟು ಬೇರೆಡೆ ಹಬ್ಬುವ ಮೊದಲು ಬಹುಮಹಡಿ ಕಟ್ಟಡ ಹೊರಗೋಡೆಯ ಮೂಲಕ ಕ್ಷಿಪ್ರವಾಗಿ ಇಡೀ ಕಟ್ಟಡವನ್ನು ಆವರಿಸಿದೆ. ಕಟ್ಟಡದೊಳಗಿನ ಮೆಟ್ಟಿಲು ಮಾರ್ಗದಲ್ಲಿ ಕಣ್ಣು ಕಟ್ಟುವಷ್ಟು, ಉಸಿರಾಡಲಾಗದಷ್ಟು ದಟ್ಟ ಕಪ್ಪು$ಹೊಗೆ ತುಂಬಿ ಮೇಲಿನಿಂದ ಕೆಳಗಿಳಿಯುವ ಪ್ರಯತ್ನಗಳನ್ನು ನಿಷ್ಪ್ರಯೋಜಕಗೊಳಿಸಿದೆ. ದುರಂತದಲ್ಲಿ ಮಡಿದವರ ಲೆಕ್ಕ ದಿನೇ ದಿನೇ ಏರುತ್ತಿದೆ ಹಾಗೂ ಸತ್ತವರ ಒಟ್ಟು ಸಂಖ್ಯೆ ಸಿಗಲಾರದು ಎಂದೂ ಹೇಳುತ್ತಾರೆ. ಸುಟ್ಟು ಹೋದ ಎಷ್ಟೋ ಜೀವಗಳ ಗುರುತು ಹಿಡಿಯಲು ಡಿಎನ್‌ಎ ವಿಶ್ಲೇಷಣೆಗೂ ಸಿಗದಷ್ಟು ಧ್ವಂಸವಾಗಿವೆ. ಹತ್ತನೆಯ ಮಹಡಿಯಲ್ಲಿದ್ದ ಮಗುವನ್ನು ಹಿಡಿದ ತಾಯಿಯೊಬ್ಬಳು ಕೆಳಗೆ ಬರಲಾಗದೆ, ಅಲ್ಲಿಂದಲೇ ಕೆಳಗಿರುವವರನ್ನು ಕೂಗಿ ಕರೆದು ತನ್ನ ಮಗುವನ್ನು ಕೆಳಕ್ಕೆ ಎಸೆದಿ¨ªಾಳೆ. ಈ ಅವಘಡದ ವಿದ್ರಾವಕ ಕಥೆಗಳೆಲ್ಲವೂ ಇಂದು ಬರಿಯ ಅಸ್ಥಿಪಂಜರದಂತೆ ನಿಂತಿರುವ ಕಟ್ಟಡ ಹಂದರದಲ್ಲಿ ಹುದುಗಿ ಕುಳಿತಿವೆ.
ಅಭಿವೃದ್ಧಿ ಹೊಂದಿದ, ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ, ಸುರಕ್ಷತೆಯ ಕಾವಲಿನಲ್ಲಿರುವ ದೇಶದಲ್ಲಿ ನಡೆದ ಈ ಘಟನೆಯ ಅತಿ ಹತ್ತಿರದಲ್ಲಿರುವವರಿಗೆ ದುಗುಡ ಮತ್ತು ಆಕ್ರೋಶವನ್ನೂ , ದೂರದಿಂದ ಸುದ್ದಿ ಕೇಳಿದ ಓದಿದವರಲ್ಲಿ ಮೌನವನ್ನೂ ಮತ್ತೆ ಉತ್ತರಿಸಬೇಕಾದ ನಗರಸಭೆ, ಸರಕಾರಗಳಿಗೆ ನಡುಕವನ್ನೂ ತಂದಿದೆ. ಈಗಿನ ಲಂಡನ್‌ನ ಮೇಯರ್ ಸಾದಿಕ್ ಖಾನ್ ಹೋದಲ್ಲಿ ಬಂದಲ್ಲಿ ಪ್ರತಿಭಟನೆಯ ಕೂಗುಗಳನ್ನು ಕೇಳಬೇಕಾಗುತ್ತಿದೆ. ರಾಜಕೀಯ ಅತಂತ್ರತೆಯಲ್ಲಿ ಈಗಾಗಲೇ ತೊಳಲಾಡುತ್ತಿರುವ ಪ್ರಧಾನಿ ಥೆರೆಸಾ ಮೇ ಕಷ್ಟದ ಪ್ರಶ್ನೆಗಳನ್ನು ಎದುರಿಸಬೇಕಾಗಿದೆ.
ಬೆಂಕಿ ಅಪಘಾತದ ಹಿಂದಿನ ಕಾರಣಗಳು ಶೀಘ್ರದಲ್ಲಿ ಬಯಲಾಗಲಿ ಎಂದು ಪ್ರಧಾನಿ ಮೇ ತನಿಖೆಯ ಆದೇಶ ನೀಡಿ¨ªಾರೆ. ಪಶ್ಚಿಮ ಲಂಡನ್ ಭಾಗದಲ್ಲಿರುವ ಈ ಕಟ್ಟಡ ನಗರಸಭೆಯ ಆಡಳಿತಕ್ಕೆ ಒಳಪಟ್ಟಿದೆ ಮತ್ತೆ ಇಂಗ್ಲೆಂಡ್‌ನ ಅತ್ಯಂತ ಅವಕಾಶ ವಂಚಿತರು ಎಂದು ಗುರುತಿಸಲ್ಪಟ್ಟವರಿಗಾಗಿ ಮೀಸಲಿರಿಸಲಾಗಿದೆ. ಈ ಕಟ್ಟಡದ ನಿರ್ವಹಣೆಯನ್ನು ನಗರಸಭೆ ಹೊರಗುತ್ತಿಗೆ ನೀಡಿದೆ. ಕಟ್ಟಡ ನಿರ್ವಹಣೆಯ ಬಗ್ಗೆ ಅಲ್ಲಿನ ವಾಸಿಗಳಿಗೆ ಅಸಮಾಧಾನ ಇದ್ದರೂ ಸದ್ಯಕ್ಕೆ ಗ್ರೇನ್ ಫೆಲ್ ಬಹುಮಹಡಿ ಕಟ್ಟಡದ ಗೋಡೆಗೆ ಮುಚ್ಚಿದ ಹವಾಮಾನ ನಿರೋಧಕ (Cladding) ತನಿಖೆಯ ಕೇಂದ್ರವಾಗಿದೆ. ತನಿಖೆ ಮುಗಿಯಲು ಕೆಲವು ತಿಂಗಳುಗಳು ಬೇಕಾದರೂ ಕಟ್ಟಡ ನಿರ್ಮಾಣದಲ್ಲಿ ಬಳಸಲಾದ ನಿರೋಧಕದ ಮುಚ್ಚಿಗೆ ಕೀಳು ದರ್ಜೆಯ ಅಲ್ಯೂಮಿನಿಯಂ ಸಂಯುಕ್ತ ವಸ್ತುವಿನಿಂದ ಮಾಡಿದ್ದು (Aluminum Composite Material) ಮತ್ತು ಅದು ಬೇಗ ಬೆಂಕಿ ಹಿಡಿಯುವ ವಸ್ತು ಎಂಬುದು ಬೆಳಕಿಗೆ ಬಂದಿದೆ. ಈ ನಿರೋಧಕ ಮುಚ್ಚಿಗೆಯಲ್ಲಿ ಅಲ್ಯೂಮಿನಿಯಂ ಹೊರ ಹಾಳೆಗಳ ನಡುವೆ ಪ್ಲಾಸ್ಟಿಕ್ ಇರುತ್ತದೆ. ಇದರ ಬಳಕೆ ಜಗತ್ತಿನ ಹಲವು ಬಹುಮಹಡಿ ಕಟ್ಟಡಗಳಲ್ಲಿ ಆಗಿದೆ. ಮತ್ತೆ ಅಂತಹ ಕಟ್ಟಡಗಳಲ್ಲಿ ಬೆಂಕಿ ಹತ್ತಿದಾಗ ಬಹಳ ವೇಗವಾಗಿ ಹಬ್ಬಿದ ಅನೇಕ ಉದಾಹರಣೆಗಳು ಇವೆ. ಆ ಕಾರಣಕ್ಕಾಗಿ ಎತ್ತರದ ಕಟ್ಟಡಗಳಿಗೆ ಇದನ್ನು ಬಳಸುವುದು ಕೆಲವು ದೇಶಗಳಲ್ಲಿ ನಿಷೇಧಿಸಿ¨ªಾರೆ. ಇಂತಹ ವಸ್ತುವೊಂದನ್ನು ಇಷ್ಟು ಎತ್ತರದ ಕಟ್ಟಡದಲ್ಲಿ ಬಳಸಲು ಪರವಾನಿಗೆ ಹೇಗೆ ಸಿಕ್ಕಿತು, ಅನುಮತಿ ಕೊಟ್ಟವರು ಯಾರು ಎನ್ನುವುದು ತನಿಖೆಯ ಮೂಲಕ ಪತ್ತೆ ಆಗಬೇಕಾಗಿದೆ. ಕಟ್ಟಡವನ್ನು ನವೀಕರಿಸುವ ಗುತ್ತಿಗೆದಾರರು ನಿವಾಸಿಗಳಿಗೆ ತೋರಿಸಿ ಒಪ್ಪಿಗೆ ಪಡೆದ ನಿರೋಧಕ ಮುಚ್ಚಿಗೆಯ ವಸ್ತು ಬೇರೆ. ನಂತರ ನಿಜವಾಗಲೂ ಬಳಸಿದ ಮುಚ್ಚಿಗೆಯ ವಸ್ತು ಬೇರೆ. ಮಾಧ್ಯಮಗಳು ಲಂಡನ್ ಬೀದಿಗಳಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರ ಮುಂದೆ ಮೈಕ್ ಹಿಡಿದಾಗ ಕೇಳಿಬರುವ ಪ್ರಶ್ನೆಯೂ ಅದೇ, ದಿನಪತ್ರಿಕೆಗಳಲ್ಲಿ, ದೂರದರ್ಶನದ ಚರ್ಚೆಗಳಲ್ಲಿನ ಅಭಿಪ್ರಾಯವೂ ಒಂದೇ; ನಿರ್ಬಂಧಿಸಲ್ಪಟ್ಟ ಅಪಾಯಕಾರಿ ವಸ್ತುವಿನಿಂದ ಮಾಡಿದ ನಿರೋಧಕ ಹಾಳೆಗಳನ್ನು ಗ್ರೇನ್ ಫೆಲ್ ಗೋಪುರದ ಗೋಡೆಯಲ್ಲಿ ಬಳಸಲು ಅನುಮತಿ ಎಲ್ಲಿಂದ ಸಿಕ್ಕಿತು ಎಂದು. ದಿನಪತ್ರಿಕೆಗಳು ಬ್ರಿಟನ್ನಿನ ಇನ್ನೆಷ್ಟು ಕಟ್ಟಡಗಳಲ್ಲಿ ಇದೇ ನಿರೋಧಕ ಮುಚ್ಚಿಗೆಯನ್ನು ಬಳಸಲಾಗಿದೆ ಎಂದು ಹುಡುಕಿ “ಕೊಲೆಗಡುಕ ನಿರೋಧಕ ಮುಚ್ಚಿಗೆಯಲ್ಲಿ ಬ್ರಿಟನ್ನಿನ 30,000 ಕಟ್ಟಡಗಳು’ ಎನ್ನುವ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿ¨ªಾರೆ. ಇಲ್ಲಿಯ ತನಕ ಯಾವ ಅಧಿಕಾರಿಯೂ, ಪರಿಣಿತರೂ ಗ್ರೇನ್ ಫೆಲ್ ಗೋಪುರದಲ್ಲಿ ಬಳಸಿದ ನಿರೋಧಕ ಮುಚ್ಚಿಗೆಯ ವಸ್ತುವಿನ ಬಳಕೆಯ ಪರವಾಗಿ ವಾದಿಸದೆ ವಿವಾದಾಸ್ಪದ ಮುಚ್ಚಿಗೆಯ ವಸ್ತುವಿನ ಬಳಕೆಯ ಬಗ್ಗೆ ಒಮ್ಮುಖವಾದ ಅಭಿಪ್ರಾಯಗಳೇ ಬರುತ್ತಿವೆ. ಸುರಕ್ಷತೆಯನ್ನು ಕಾಪಾಡುವ ಹೊಣೆಹೊತ್ತ ಕಾಯಿದೆ ಕಾನೂನುಗಳ ಬಿಗಿಯ ನಡುವೆಯೂ ಆಗುವ ವೈಫಲ್ಯ ಮತ್ತೆ ಅದರ ಪರಿಣಾಮ ಎಷ್ಟು ಭೀಕರ ಎನ್ನುವುದು ಗ್ರೇನ್ ಫೆಲ್ ಗೋಪುರ ಮತ್ತೆ ತಿಳಿಸಿಕೊಟ್ಟಿದೆ. ಮಹಾನ್ ಬೆಂಕಿ ದುರಂತದಿಂದ ಪಾಠ ಕಲಿತು, ಜನಸಾಮಾನ್ಯರ ಬದುಕು ಸ್ವಸ್ಥ ಮತ್ತು ಸುರಕ್ಷಿತವಾಗಿರಲು ಪಟ್ಟ ಪ್ರಯತ್ನಗಳು, ಕಟ್ಟಿದ ವ್ಯವಸ್ಥೆಗಳು, ಬರೆದ ಕಾಯಿದೆಗಳು ಬ್ರಿಟನ್‌ನ ಅದೆಷ್ಟೋ ದುರಂತಗಳನ್ನು ಅನಾಮಿಕವಾಗಿ ತಪ್ಪಿಸಿದ್ದರೂ, ತನ್ನ ರಕ್ಷಣೆಗೆ ಮಾತ್ರ ಬರಲಿಲ್ಲವಲ್ಲ ಎಂಬ ನೋವಿನಲ್ಲಿ ಗ್ರೇನ್ ಫೆಲ್ ಗೋಪುರ ಭಗ್ನವಾಗಿ ನಿಂತಿದೆ.
ಭಾರತಕ್ಕೂ ಪಾಠವೇ !
ರಾಷ್ಟ್ರೀಯ ಅಪರಾಧ ದಾಖಲಾತಿ ಕೇಂದ್ರದ ಅಂಕಿಅಂಶದ ಪ್ರಕಾರ 2001 ರಿಂದ 2014ರ ವರೆಗೆ ಭಾರತದಲ್ಲಿ ಪ್ರತಿದಿನಕ್ಕೆ ಸರಾಸರಿ 59 ಜನರು ಬೆಂಕಿ ಅಪಘಾತದಲ್ಲಿ ಪ್ರಾಣಕಳೆದುಕೊಳ್ಳುತ್ತಾರೆ. ಇದು ವಿದ್ಯುತ್ ಶೋರ್ಟ್ ಸರ್ಕ್ನೂಟ್‌ನಿಂದ ಇರಬಹುದು, ಪಟಾಕಿಯಿಂದ ಇರಬಹುದು ಅಥವಾ ರಸ್ತೆ ಅಪಘಾತದಲ್ಲಿ ಬಸ್ಸಿಗೆ ಬೆಂಕಿ ಹಿಡಿದು ಇರಬಹುದು ಅಥವಾ ದಂಗೆಯಲ್ಲಿ ಹೊತ್ತಿದ ಕಿಡಿ ಇರಬಹುದು ಅಥವಾ ಇನ್ನೇನೋ ಕಾರಣ ಇರಬಹುದು. ಕಳೆದ ವರ್ಷದ ಏಪ್ರಿಲ್ ಅಲ್ಲಿ ಕೇರಳದ ಕೊಲ್ಲಮ್ ದೇವಸ್ಥಾನದಲ್ಲಿ ನಡೆದ ಅಗ್ನಿದುರಂತದಲ್ಲಿ ನೂರಕ್ಕಿಂತ ಹೆಚ್ಚು ಜನರ ಜೀವಹಾನಿ ಆಗಿದ್ದು ನೆನಪಿರಬಹುದು. ಇಷ್ಟು ದೊಡ್ಡ ದುರಂತ ಅಲ್ಲದಿದ್ದರೆ ದಿನನಿತ್ಯ ನಡೆಯುವ ಸಣ್ಣಪ್ರಮಾಣದ ಬೆಂಕಿ ಅಪಘಾತ ಆಧಾರಿತ ಜೀವಹಾನಿಗಳು ನಮ್ಮ ಗಮನಕ್ಕೆ ಬಾರದಿರುವಷ್ಟು ಸಾಮಾನ್ಯ ವಿಚಾರವಾಗಿ ಬಿಟ್ಟಿದೆ. ಕಳೆದ 20 ವರ್ಷಗಳಲ್ಲಿ ಬೆಂಕಿ ಅವಘಡದಲ್ಲಿ ಜೀವ ಕಳೆದುಕೊಂಡವರ ಲೆಕ್ಕ ನೋಡಿದರೆ ಅಪಘಾತದ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆದದ್ದಕ್ಕೆ ಆಧಾರ ಸಿಗುವುದಿಲ್ಲ. ಇದರ ಅರ್ಥ- ಅಪಘಾತಗಳು ನಮಗೆ ಪಾಠ ಕಲಿಸುವುದಿಲ್ಲ ಎಂದೇ ಆಗುತ್ತದೆ. ಅಗ್ನಿ ಅಪಘಾತ ಇರಲಿ ಅಥವಾ ಇನ್ಯಾವುದೇ ಅಪಘಾತ ನಡೆಯದೆ ಇರಬೇಕಾದರೆ ಮುನ್ನೆಚ್ಚರಿಕೆ ಬೇಕು. ಅದಕ್ಕಿಂತ ಮುಖ್ಯವಾಗಿ ಅಪಘಾತಗಳ, ಮುಂಜಾಗ್ರತೆಯ ಮತ್ತು ಸುರಕ್ಷತೆಯಬಗ್ಗೆ ತಿಳುವಳಿಕೆ ಬೇಕು. ಅಪಾಯದಿಂದ ನಮ್ಮನ್ನು ದೂರ ಇಡಲು ಮುಂಜಾಗ್ರತೆಗಳು, ಕಾಯಿದೆಗಳು ಬಹಳಷ್ಟು ಇವೆ. ಆದರೆ, ಅನುಷ್ಠಾನದಲ್ಲಿ ಸೋತಿವೆ. ಮತ್ತೆ ಅದಕ್ಕಿಂತ ಪೂರ್ವದಲ್ಲಿ ನಮ್ಮ ಮನಸ್ಸಿನಲ್ಲಿ ಸುರಕ್ಷತೆಯ ಕಲ್ಪನೆ ಅಥವಾ ಯೋಚನೆಗೆ ಜಾಗ ಪಡೆಯುವಲ್ಲಿ ವಿಫಲ ಆಗಿವೆ. ಕಟ್ಟಡ ಹೇಗೆ ಕಟ್ಟಬೇಕು, ರಸ್ತೆಯಲ್ಲಿ ವಾಹನ ಹೇಗೆ ಓಡಿಸಬೇಕು, ಅಡುಗೆ ಒಲೆ ಹೊತ್ತಿಸುವಾಗಿನ ಜಾಗ್ರತೆ ಏನು, ಪಟಾಕಿ ಹೇಗೆ ಹಚ್ಚಬೇಕು- ಹೀಗೆ ದೈನಂದಿನ ಬದುಕಿನ ಎಲ್ಲ ಆಯಾಮಗಳಲ್ಲಿ ಸುರಕ್ಷತೆಯ ಬಗೆಗಿನ ಯೋಚನೆ ಅಗತ್ಯ. ಅಪಘಾತ ತಡೆಗೆ ಸಾವಿರ ಕಾನೂನುಗಳನ್ನು, ಕಾನೂನು ಮೀರಿದವರಿಗೆ ಶಿಕ್ಷೆಗಳನ್ನೂ ಪುಸ್ತಕದಲ್ಲಿ ಬರೆದಿರಬಹುದು. ಆದರೆ, ಸುರಕ್ಷತೆ ಎನ್ನುವ ಯೋಚನಾ ಕ್ರಮ ನಮ್ಮ ಮನಸ್ಸಿನೊಳಗೆ ಆಳವಾಗಿ ಮನೆ ಮಾಡಿದಾಗ ಮಾತ್ರ ಅಪಘಾತಗಳು ಕಡಿಮೆ ಆಗಬಹುದು. ಅಪಘಾತಗಳು ಪಾಠ ಕಲಿಸದ ಒಂದು ದಿವ್ಯ ನಿರ್ಲಕ್ಷÂದ ಹೊತ್ತಿನಲ್ಲಿ ತೀರಾ ಇತ್ತೀಚಿಗೆ ಭಾರತದಿಂದ ದೂರದ ಲಂಡನ್ ನಗರದಲ್ಲಿ ಅಗ್ನಿ ದುರಂತವೊಂದು ನಡೆದಿದೆ.
– ಯೋಗೀಂದ್ರ ಮರವಂತೆ,ಬ್ರಿಸ್ಟಲ್, ಇಂಗ್ಲೆಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.