ಕತೆ: ಕಳೆದು ಹೋದ ಶಾಲು


Team Udayavani, Feb 23, 2020, 5:37 AM IST

ram-12

ಅವನು ಕಲ್ಲನ್ನೇ ನೋಡುತ್ತ ಕೂತುಕೊಂಡಿದ್ದಾನೆ. ತದೇಕಚಿತ್ತದಿಂದ ನೋಡುತ್ತಿರುವ ಅವನಿಗೆ ಅದು ಏನೇನೋ ಆಗಿ ಕಾಣುತ್ತಿದೆ. ಅವನು ಅವೊತ್ತು ಮಾತ್ರ ಹಾಗೆ ಕೂತು ನೋಡುತ್ತಿರಲಿಲ್ಲ. ಸಾವಿರಾರು ಸಲ ಅದನ್ನು ನೋಡಿದ್ದಾನೆ. ಸಾವಿರ ಸಲವೂ ಸಾವಿರ ರೀತಿ ಕಂಡಿದೆ. ಮೊನ್ನೆ ಅಂದರೆ ನಿನ್ನೆ ಮಳೆ ಸುರಿದಿತ್ತಲ್ಲ ; ಅದರ ಹಿಂದಿನ ದಿನ ಬಿಸಿಲೋ ಬಿಸಿಲು. ಮಳೆ ಹೋಗಿ ಮುಗಿಲು ಸೇರಿಕೊಂಡಿತು ಎಂದು ಮಾತಾಡಿಕೊಳ್ಳುತ್ತಿದ್ದರು ಜನ. ರಣ ಬಿಸಿಲು. ನೋಡ್ತಾ ಕೂತಿದ್ದ. ಆ ಕಲ್ಲು ನವಿಲಾಗಿ ಹಾರಿ ಹೋಯಿತು. ಹೋಗಿ ಮುಗಿಲಿನ ಒಳಗಡೆ ಸೇರಿಕೊಂಡಿತು. ಅವನು ನೋಡುತ್ತ ಇರುವ ಕಲ್ಲು ಅಲ್ಲೇ ಇದೆ. ಆದರೆ, ನವಿಲಾಗಿ ಹೋಗಿದ್ದೂ ಅದೇ ಕಲ್ಲು. ಇವೊತ್ತು ಮಳೆ ಬರುವ ಸೂಚನೆ ಇದೆ. ಆದರೆ, ಖಾತ್ರಿ ಇಲ್ಲ.

ಅಲ್ಲೇ ಕೂತಿದ್ದಾನೆ. ಇವೊತ್ತು ಕಲ್ಲು ಕಲ್ಲು ಮಾತ್ರ ಆಗಿದೆ. ಅದನ್ನೇ ನೋಡ್ತಾ ಇದ್ದವನು, ಬಲಗೈಗೆ ಏನೋ ತಾಗಿದಂತಾಗಿ ತಿರುಗಿದನು. ಒಂದು ದಪ್ಪ ರಟ್ಟಿನ ಪೊಟ್ಟಣ. ಒಂದು ಅಡಿ ಉದ್ದ, ಒಂದು ಅಡಿ ಅಗಲ ಅರ್ಧ ಅಡಿ ಎತ್ತರ ಇದೆ. ಕಪ್ಪು ಬಣ್ಣದ್ದು. ಅದರ ಮೇಲೆ ನಿಜದ್ದೇನೋ ಎನ್ನುವ ಹಾಗೆ, ಈಗಷ್ಟೇ ಗಿಡದಿಂದ ಕೀಳಲ್ಪಟ್ಟಿದೆಯೇನೋ ಎಂಬಂತೆ ಕಡುಗೆಂಪು ಗುಲಾಬಿ ಹೂವಿನ ಚಿತ್ರವನ್ನು ಅಂಟಿಸಲಾಗಿದೆ. ವಿಳಾಸ ಇಲ್ಲ. ಅವನಿಗೆ ಆಶ್ಚರ್ಯ. ಯಾರು ತಂದಿಟ್ಟರು ಇದನ್ನು- ಎಂದು ಸುತ್ತಮುತ್ತ ನೋಡುತ್ತಿದ್ದಾನೆ. ಯಾರೂ ಕಾಣುತ್ತಿಲ್ಲ. ಕಲ್ಲಿನ ದಿಕ್ಕಿನ ಕಡೆಯಿಂದ ಒಂದು ಹೆಣ್ಣಿನ ನಗುವಿನ ಶಬ್ದ ತೇಲಿಬಂದು ಅವನ ಕಿವಿಗೆ ಮೆತ್ತಿಕೊಂಡಿತು. ಆದರೆ, ಯಾರೂ ಕಾಣಲಿಲ್ಲ. ಏನಪ್ಪ ಇದು ವಿಚಿತ್ರ ಎಂದು ಗಾಬರಿಗೊಂಡ. ಪಕ್ಕದಲ್ಲಿದ್ದ ಮರದಿಂದ ಯಾವುದೋ ಒಂದು ಹಕ್ಕಿ ಹಾರಿ ಹೋಯಿತು. ಏನೇನೋ ವಿಚಿತ್ರ ಭಾವನೆಗಳು ಅವನ ಮನಸ್ಸಿನಲ್ಲಿ ಓಡತೊಡಗಿದವು.

ಸ್ವಲ್ಪ ಹೊತ್ತು ಕಳೆದ ನಂತರ ತನ್ನ ಕುತೂಹಲವನ್ನು ತಡೆದುಕೊಳ್ಳಲಾಗದೆ ಆ ಪೊಟ್ಟಣವನ್ನು ಅಲ್ಲೇ ಸಮೀಪದಲ್ಲಿದ್ದ ಒಂದು ಚೂಪನೆಯ ಕಲ್ಲನ್ನು ತೆಗೆದುಕೊಂಡು ಅದರ ಮೇಲೆ ನೇರ ಗೀರನ್ನು ಎಳೆದು ಹರಿದ. ಒಳಗಡೆ ಒಂದು ಶಾಲು. ಪೂರ್ಣ ಉಣ್ಣೆಯದು. ಅವನು ಸ್ಥಳೀಯ ಮಾರುಕಟ್ಟೆಯಲ್ಲಿ ಕಂಡಿಲ್ಲದಂತಹದ್ದು. ಅವನು ನೋಡುತ್ತ ಕುಳಿತಿದ್ದನಲ್ಲ ಕಲ್ಲನ್ನು ಅದೇ ಬಣ್ಣದ್ದು. ಶಾಲಿನ ಎಡಗಡೆಯ ಅಂಚಿನಲ್ಲಿ ಪೊಟ್ಟಣದ ಹೊರಕವಚದ ಮೇಲೆ ಇದ್ದಂಥ ಹೂವಿನ ಹೆಣಿಗೆಯ ಚಿತ್ತಾರ. ತುಂಬಾ ಮೋಹಕವಾಗಿದೆ. ಉಣ್ಣೆಯ ಶಾಲಿಗೆ ಆ ಹೂವು ಒಂದು ಅದ್ಭುತ ಶಕ್ತಿಯನ್ನು ತಂದುಕೊಟ್ಟಿದೆ. ಮತ್ತೆ ಅರೆಗಳಿಗೆಯಲ್ಲೇ ಅವನಿಗೆ ಆಶ್ಚರ್ಯವೋ ಆಶ್ಚರ್ಯ! ಅರೆ, ಕನಸಲ್ಲಿ ಕಳೆದು ಹೋಗಿದ್ದ ಶಾಲು ವಾಸ್ತವದಲ್ಲಿ! ಅದು ಯಾವುದೋ ಪೌರಾಣಿಕ ಸಿನಿಮಾಗಳಲ್ಲಿಯೋ ಕತೆಗಳಲ್ಲಿಯೋ ದೇವರು ಪ್ರತ್ಯಕ್ಷವಾಗಿ ಬಂದು ಕೇಳಿದ ವರವನ್ನು ಕೊಟ್ಟು ಮಾಯವಾಗುತ್ತಲ್ಲ, ಹಾಗೆ ಈ ಶಾಲು ಕನಸಲ್ಲಿ ಕಂಡದ್ದು ವಾಸ್ತವದಲ್ಲಿ ಬಂದಿದೆ ಎಂದುಕೊಂಡ. ಒಂದು ವಾರದ ಹಿಂದೆ ಒಂದು ರಾತ್ರಿ ಪಡಸಾಲೆಯಲ್ಲಿ ಮಲಗಿದ್ದ. ಅವನ ಅಮ್ಮ ಪಕ್ಕದ ಮಂಚದ ಮೇಲೆ ಮಲಗಿದ್ದರು. ಅಪ್ಪ ಹೊರಗಡೆ ಹಜಾರದಲ್ಲಿ ಮಲಗಿದ್ದರು. ರಾತ್ರಿಯ ಊಟಕ್ಕೆ ಮಾಡಿದ್ದ ಕೌಜದ ಹಕ್ಕಿಯ ಸಾರಿನ ಘಮಲು ಇಡೀ ಮನೆಯನ್ನು ಆವರಿಸಿಕೊಂಡಿತ್ತು. ರಾತ್ರಿಯ ನಿಶ್ಶಬ್ದತೆಯನ್ನು ಬೆಕ್ಕಿನ ಮಿಯಾಂವ್‌ ಮಿಯಾಂವ್‌ ಶಬ್ದ ಸೀಳುತ್ತಿತ್ತು.

ಹನ್ನೆರಡು ಮುಕ್ಕಾಲರ ಸಮಯ. ಅವನಿಗೆ ಒಂದು ಕನಸು ಬಿತ್ತು. ಅದು-ಒಂದು ದೊಡ್ಡ ಶಹರ. ಮೆಟ್ರೋ ರೈಲು ಬಂದು ಒಂದೂ ಒಂದೂವರೆ ವರ್ಷ ಆಗಿತ್ತು. ಮೆಟ್ರೋ ಬರುವುದಕ್ಕೂ ಮೊದಲು ಇದ್ದಂತಹ ಮರಗಳು, ಉದ್ಯಾನವನಗಳು, ದೇವಸ್ಥಾನ ಮತ್ತು ಪ್ರಾರ್ಥನಾ ಮಂದಿರಗಳು, ಕೆರೆ, ಕೋಟೆ, ಮಹಲುಗಳು ಫೋಟೋ ಕಟ್ಟಿನ ಒಳಗಡೆ ಸೇರಿಕೊಂಡಿದ್ದಾವೆ. ಮಾಳಿಗೆನೇ ಇಲ್ಲದಂಥ ಗಗನಚುಂಬಿ ಕಟ್ಟಡಗಳು ಸೂರ್ಯನನ್ನೇ ಮುಚ್ಚಿ ಹಾಕಿವೆ. ಆ ಶಹರಕ್ಕೆ ಒಂದು ಮದುವೆಗೆಂದು ಬಂದಿದ್ದಾನೆ. ಬೆಳಗ್ಗೆ ಹತ್ತು ಗಂಟೆ. ಎರಡನೆಯ ಸಾಲಿನಲ್ಲಿ ಕೂತಿದ್ದಾನೆ. ಇದ್ದಕ್ಕಿದ್ದ ಹಾಗೆ ಅವನಿಗೆ ತಾನು ರಾತ್ರಿ ಹೊದ್ದುಕೊಂಡು ಬಂದಿದ್ದ ಶಾಲು ನೆನಪಾಯಿತು. ತನ್ನ ಬ್ಯಾಗಿನ ಒಳಗೆಲ್ಲ ಹುಡುಕಾಡಿದ. ಕಾಣಲಿಲ್ಲ. ಅರೆ, ಏನಾಯ್ತು ಎಂದು ಗಲಿಬಿಲಿಗೊಂಡ. ನೆನಪಿಸಿಕೊಂಡ. ಎಲ್ಲಿ ಅದನ್ನು ಮರೆತುಬಿಟ್ಟಿದ್ದು ಎಂದು ಸ್ಪಷ್ಟವಾಗಲಿಲ್ಲ. ತನ್ನ ಮೈಯನ್ನು ಬೆಳಗಿನ ಚಳಿಯಲ್ಲಿ ಬೆಚ್ಚಗೆ ಮಾಡಿದ್ದ, ರಕ್ಷಿಸಿದ್ದ, ಅವನ ಸ್ನೇಹಿತನಂತೆಯೇ ಇದ್ದ ಶಾಲು ಕಳೆದುಹೋಗಿದೆ. ಅರೆ, ಏನಾಯ್ತು ಎಂದು ಮತ್ತೂಮ್ಮೆ ಜ್ಞಾಪಿಸಿಕೊಂಡ. ಅವನು ಅವನ ಊರಿನಿಂದ ಹೊರಟವನು ಮುಂದಿನ ನಿಲ್ದಾಣದಲ್ಲಿ ಇಳಿದು ಮತ್ತೂಂದು ಬಸ್ಸನ್ನು ಹಿಡಿಯಬೇಕಾಗಿತ್ತು. ಬಸ್ಸಿನಿಂದ ಇಳಿದವನು ನಿಲ್ದಾಣದಲ್ಲಿ ಆಗಲೇ ಅವನು ಹೋಗುವ ಶಹರಕ್ಕೆ ಹೊರಟು ನಿಂತಿದ್ದ ಬಸ್ಸನ್ನು ನೋಡಿದನು. ಸೀದಾ ಆ ಬಸ್ಸಿನ ಒಳಗಡೆ ಹೋದವನು ಎಡಗಡೆಯ ಕಿಟಕಿ ಪಕ್ಕದ ಖಾಲಿ ಇದ್ದ ಸೀಟಿನ ಮೇಲೆ ತನ್ನ ಬ್ಯಾಗನ್ನು ಇಟ್ಟು ಕೂತ. ಸ್ವಲ್ಪ ಹೊತ್ತಿನ ಬಳಿಕ ಅವನು ಕುಳಿತಿದ್ದ ಬಸ್ಸಿನಲ್ಲಿನ ಪ್ರಯಾಣಿಕರು ತಮ್ಮತಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದರು- ಈ ಬಸ್ಸು ಹೊರಡಲು ತಡವಾಗುತ್ತದೆ ಎಂದು. ಅದೇ ಹೊತ್ತಿಗೆ ಪಕ್ಕದಲ್ಲಿ ಇನ್ನೊಂದು ಬಸ್ಸು ಬಂದು ನಿಂತಿತು. ಇದು ಅವನು ಹೋಗುತ್ತಿದ್ದ ಊರಿಗೆ ಹೋಗುತ್ತಿದ್ದುದರಿಂದ ಮತ್ತು ಅದು ಬೇಗನೇ ಹೋಗಬಹುದೆಂದು ಭಾವಿಸಿ ದಡದಡನೇ ಇಳಿದು ಆ ಬಸ್ಸನ್ನು ಹತ್ತಿಕೊಂಡು ಕುಳಿತ. ಇವನು ಕುಳಿತ ಒಂದು ನಿಮಿಷಕ್ಕೆನೇ ಅವನು ಮೊದಲು ಕುಳಿತಿದ್ದ ಬಸ್ಸು ಹೊರಟೇ ಬಿಟ್ಟಿತು.

“ಅರೆ ಇವ°! ಇದು ಜಲ್ದಿ ಹೋಗುತ್ತೆ ಅಂಥ ಅದನ್ನು ಬಿಟ್ಟು ಇದಕ್ಕೆ ಬಂದರೆ ಈಗ ಇದಕ್ಕಿಂಥ ಮೊದಲು ಅದೇ ಹೋಯ್ತಲ್ಲ’ ಎಂದು ಬಸ್ಸನ್ನು, ಚಾಲಕನನ್ನು ಬೈಯ್ದುಕೊಂಡ. ನಿರ್ವಾಹಕ ಬಂದ ಬಳಿಕ ಅವನಿಂದ ಹಣವನ್ನು ಕೊಟ್ಟು ಟಿಕೆಟ್‌ ಪಡೆದುಕೊಂಡ. ಬಸ್ಸು ಹೊರಟಿತು. “ಅರೆ ಶಾಲು ! ಥೋ ಅಲ್ಲೇ ಬಿಟ್ಟು ಬಂದೆ’ ಎಂದುಕೊಂಡು ಗಲಿಬಿಲಿಗೆ ಒಳಗಾದ. “ಸರ್‌, ಇದಕ್ಕಿಂತ ಮೊದಲು ಒಂದು ಬಸ್ಸು ಹೋಯ್ತಲ್ಲ ಅದರಲ್ಲಿ ನನ್ನದೊಂದು ಶಾಲನ್ನು ಬಿಟ್ಟಿದ್ದೇನೆ ಮುಂದಿನ ಸ್ಟಾಪಲ್ಲಿ ಸಿಗಬಹುದಾ?’ ಎಂದು ಕೇಳಿದ ನಿರ್ವಾಹಕನನ್ನು. “ಹೌದಾ! ಥೋ’ ಎಂದವನು, “ಬಸ್ಸು ಸಿಗುವುದಿಲ್ಲ. ಟಿ.ಸಿ. ನಂಬರ್‌ ಕೊಡುತ್ತೀನಿ, ಕೇಳಿ. ಆ ಬಸ್ಸಿನ ಕಂಡಕ್ಟರ್‌ನ್ನು ಕೇಳುತ್ತಾರೆ, ಇದ್ದರೆ ಇಸಕೊಂಡು ಇಟ್ಟುಕೊಳ್ಳುತ್ತಾರೆ’ ಎಂದು ಸಮಾಧಾನದ ಮಾತನ್ನು ಹೇಳಿದ. ತನ್ನ ಮೊಬೈಲ್‌ ಫೋನ್‌ ಮೂಲಕ ಮುಂದಿನ ನಿಲ್ದಾಣದ ಅಧಿಕಾರಿಯ ಬಳಿ ಮಾತಾಡಿ, ಫೋನ್‌ ಅನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡ. ಅವನು ಕುಳಿತಿದ್ದ ಪ್ರಯಾಣ ಮಾಡುತ್ತಿದ್ದ ಬಸ್ಸು ಮುಂದಿನ ನಿಲ್ದಾಣದೊಳಗಡೆ ಹೋಗುತ್ತಿದ್ದ ಹಾಗೆ, ಇಳಿಯಲು ಬಾಗಿಲ ಬಳಿ ಬಂದ. ಆಶ್ಚರ್ಯಕರ ರೀತಿಯಲ್ಲಿ ಆ ಬಸ್ಸು ಇನ್ನೂ ಅಲ್ಲಿಯೇ ನಿಂತಿತ್ತು. ಅದರ ಕಡೆ ಧಾವಿಸಿದ. ಆ ಬಸ್ಸನ್ನು ಹತ್ತಿ ಹುಡುಕಿದ. ಎಲ್ಲೂ ಕಾಣಲಿಲ್ಲ. ಆ ಬಸ್ಸಿನ ನಿರ್ವಾಹಕ, “ಏನ್ರಿ ಹುಡುಕುತ್ತಿದ್ದೀರಾ?’ ಎಂದ. “ನನ್ನ ಶಾಲು ಇಟ್ಟಿದ್ದೆ ಇಲ್ಲಿ’ ಎಂದ. “ಯಾವ ಶಾಲೂ ಇರಲಿಲ್ಲವಲ್ಲ, ಮೇಲಾಗಿ ನೀವು ನಮ್ಮ ಬಸ್ಸಿನಲ್ಲಿ ಬಂದ ಹಾಗೆ ಕಾಣಲಿಲ್ಲ’ ಎಂದ. ಇಡೀ ಬಸ್ಸು ಖಾಲಿ ಇದ್ದುದರಿಂದ ಪ್ರಯಾಣಿಕರ್ಯಾರೋ ತೆಗೆದುಕೊಂಡು ಹೋಗಿರಬಹುದೆಂದುಕೊಂಡ. “ಸರ್‌, ಪ್ರಯಾಣಿಕರೆಲ್ಲ ಎಲ್ಲಿ, ಯಾರೂ ಕಾಣಾ¤ ಇಲ್ಲ, ಎಲ್ಲ ಇಳಿದು ಹೋದ್ರಾ?’ ಕೇಳಿದ.

“ಡ್ರೈವರ್‌ನ ಹೆಂಡತಿ ಸತ್ತು ಹೋದಳಂತೆ. ಅದಕ್ಕೆ ಡ್ರೈವರ್‌ ಇಲ್ಲಿಯೇ ನಿಲ್ಲಿಸಿ ತನ್ನ ಊರಿಗೆ ಹೋದ. ಇನ್ನೇನು ಹೊಸ ಡ್ರೈವರ್‌ ಬರುತ್ತಾನೆ, ಫೋನ್‌ ಮಾಡಿದೆ’ ಎಂದ ನಿರ್ವಾಹಕ. ಎಲ್ಲ ಇಳಿದು ಬೇರೆ ಬಸ್ಸಿಗೆ ಹೋದರು ಎಂದವನು, ಮತ್ತೆ, “ಆದರೆ ನಿಮ್ಮ ಶಾಲನ್ನು ನೋಡಿದ ಹಾಗೆ ಕಾಣಲಿಲ್ಲ ಕಣಿÅ’ ಎಂದ. ಅವನು ಪ್ರಯಾಣ ಮಾಡುತ್ತಿದ್ದ ಬಸ್ಸಿನಿಂದ ಹಾರನ್ನಿನ ಶಬ್ದ. “ಬೇಗ ಬನ್ನಿ, ಟೈಮಾಗ್ತಿದೆ’ ಎಂದು ಕೂಗಿದ ಆಚೆ ಬಸ್ಸಿನ ಡ್ರೈವರ್‌. “ಶಾಲು ಶಾಲು’ ಎಂದು ಥಟಾರನೆ ಎದ್ದ. ಅವನು ಎದ್ದ ರಭಸಕ್ಕೆ , ಶಬ್ದಕ್ಕೆ ಇವನ ಪಕ್ಕದಲ್ಲಿ ಮಲಗಿದ್ದ ಇವನ ಅಮ್ಮ ಬೆಚ್ಚಿಬಿದ್ದು ಎದ್ದು ಕೂತು, “ಸ್ವಪ್ನಗಿಪ್ನ ಬಿತ್ತೇನೋ, ಅದೇನೋ ಶಾಲು ಶಾಲು ಅಂತಿದ್ದೇಯಲ್ಲೋ’ ಎಂದರು.

“ಅರೆ! ಕನಸಲ್ಲಿ ಕಂಡಂತಹ ಶಾಲು. ನಿಜಜೀವನದಲ್ಲಿ. ಏನು ವೈಚಿತ್ರ್ಯ!’ ಎಂದುಕೊಂಡ. ಅದನ್ನು ಸಂಪೂರ್ಣ ಹರವಿದ. ಒಂದು ಕಾಗದದ ತುಣುಕು ಅದರೊಳಗಿಂದ ಕೆಳಗೆ ಬಿದ್ದಿತು. ಅದನ್ನು ಎತ್ತಿಕೊಂಡ. ಅದರಲ್ಲಿ ಹೀಗೆ ಬರೆದಿತ್ತು- ಸಂಜೆ ಸಿಹಿನೀರು ಹೊಂಡದ ಬಳಿ. ಸೂರ್ಯ ಮುಳುಗಿ ಬೆಳ್ಳಿ ಚುಕ್ಕಿ ಕಾಣುವಾಗ – ಇದೇನಪ್ಪ ಇದು ಯಾವುದೋ ಸಿನಿಮಾ ನೋಡಿದ ಹಾಗೆ ಆಗ್ತಿದೆ ಎಂದುಕೊಂಡ. ಆದರೂ ಮತ್ತೂಮ್ಮೆ ಸುತ್ತಮುತ್ತ ನೋಡಿದ, ಯಾರೂ ಕಾಣಲಿಲ್ಲ. ಎದ್ದು ಆಟೋ ಒಂದನ್ನು ಹಿಡಿದು ಮನೆಕಡೆ ಹೋದ. ಮನೆಗೆ ಹೋಗಿ ಮುಖವನ್ನು ತೊಳೆಯುವಾಗ, “ಅರೆ ನನ್ನ ಶಾಲು’ ಎಂದು ನೆನಪಿಸಿಕೊಂಡ. “ಥೋ! ಆಟೋದಲ್ಲಿ ಬಿಟ್ಟು ಬಂದಿದ್ದೀನಿ’ ಎಂದು ಕೊಂಡವನೆ, ಸೀದಾ ಹೊರನಡೆದ. “ಪಕ್ಕದ ಓಣಿಯ ಅಂಗಡಿಯವನ ಬಳಿ ಈಗ ಒಂದು ಆಟೋ ಬಂತಲ್ಲ, ಯಾವ ಕಡೆ ಹೋಯಿತು?’ ಎಂದು ಕೇಳಿದ. “ಅರಳೀಕಟ್ಟೆ ಕಡೆ’ ಎಂದ. ಸರಸರನೆ ಅರಳೀಕಟ್ಟೆ ಕಡೆ ನಡೆದ ದಾಪುಗಾಲು ಇಟ್ಟುಕೊಂಡು. ಅಲ್ಲಿ ನಾಲ್ಕಾರು ಆಟೋಗಳು ನಿಂತಿದ್ದವು. ತನ್ನ ಮನೆಯ ದಿಕ್ಕನ್ನು ಅಲ್ಲಿದ್ದವರಿಗೆ ತೋರಿಸಿ, “ಈಗಷ್ಟೇ ಒಂದು ಆಟೋ ಹೋಯ್ತಲ್ಲ, ಯಾವ ಕಡೆ ಹೋಯಿತು?’ ಎಂದು ಕೇಳಿದ. “ಬಸ್‌ಸ್ಟ್ಯಾಂಡಿನ ಕಡೆ ಹೋಯಿತು, ಯಾಕೆ?’ ಎಂದು ಕೇಳಿದರು. “ಅದರಲ್ಲಿ ಒಂದು ಲಗೇಜನ್ನು ಬಿಟ್ಟು ಇಳಿದಿದ್ದೆ, ಅದಕ್ಕೆ’ ಎಂದ. ಅಲ್ಲಿದ್ದವರು ಆ ಆಟೋದವನ ಫೋನ್‌ ನಂಬರನ್ನು ಕೊಟ್ಟರು. ಅವರಿಂದ ಅದನ್ನು ಇಸಕೊಂಡು, ತನ್ನ ಮೊಬೈಲ್‌ನಿಂದ ಆ ನಂಬರಿಗೆ ಫೋನ್‌ ಮಾಡಿದ. ರಿಂಗ್‌ ಆಯಿತು- “ಸರ್‌ ಈಗ ಸ್ವಲ್ಪಹೊತ್ತಿನ ಮುಂದೆ ನಿಮ್ಮ ಆಟೋದಲ್ಲಿ ಬಂದೆನಲ್ಲ, ಅದರಲ್ಲಿ ಶಾಲನ್ನೇನಾದರೂ ಬಿಟ್ಟಿದ್ದೇನಾ?’ ಅಂತ ಕೇಳಿದ. “ಹಿಂದಿನ ಸೀಟಲ್ಲಿ ನೋಡಿಲ್ಲ, ತಡೀರಿ ನೋಡಿ ಹೇಳ್ತೀನಿ’ ಎಂದು ಹೇಳಿ, “ಹೌದುರೀ, ಶಾಲು ಇದೆ’ ಎಂದ.

“ಹೌದಾ, ಓಹ್‌ ಸದ್ಯ, ನೀವೀಗ ಎಲ್ಲಿದ್ದೀರಾ ಹೇಳಿ, ನಾನೇ ಅಲ್ಲಿಗೆ ಬರುತ್ತೀನಿ’ ಎಂದ. ಅವನು ಹೇಳಿದ ವಿಳಾಸಕ್ಕೆ ನೇರ ಮತ್ತೂಂದು ಆಟೋವನ್ನು ಹಿಡಿದು ಹೋದ. ಅಲ್ಲಿ ಸುಮಾರು ಆಟೋಗಳು ಇದ್ದವು, ತಾನು ಹೋಗಿದ್ದ ಆಟೋವನ್ನು ಮತ್ತು ಅದರ ಚಾಲಕನನ್ನು ಪತ್ತೆಹಚ್ಚಿ ನೇರ ಅಲ್ಲಿಗೆ ಹೋದ. “ಥ್ಯಾಂಕ್ಸಪ್ಪ ಡ್ರೈವರಣ್ಣ, ಸದ್ಯ ಶಾಲು ಆಟೋದಲ್ಲಿಯೇ ಇತ್ತಲ್ಲ’ ಎಂದು, ತನ್ನ ಶಾಲನ್ನು ಕೇಳಿದ.

“ಅರೆ! ಈಗಿನ್ನೂ ಬಂದು ಈಸಕೊಂಡು ಹೋದ್ರಲ್ರಿ, ಮತ್ತೆ ಬಂದಿದ್ದೀರಾ?’ ಎಂದ. “ಸರ್‌, ನಾನೇ ಶಾಲು ಕಳೆದುಕೊಂಡಿರೋದು, ಈಗತಾನೆ ಫೋನ್‌ ಮಾಡಿದ್ದೆನಲ್ಲ, ಅದು ನಾನೇ, ಬೇಕಾದರೆ ಫೋನ್‌ ನಂಬರ್‌ ಚೆಕ್‌ ಮಾಡಿಕೊಳ್ಳಿ’ ಎಂದು ತನ್ನ ಮೊಬೈಲ್‌ ಫೋನ್‌ ಅನ್ನು ತೋರಿಸಿದ. “ಸರಿನಪ್ಪ, ಇಲ್ಲ ಅಂದವರ್ಯಾರು, ನೀನೇ ತಾನೆ ಬಂದು ಇಸಕೊಂಡು ಹೋದವನು ಐದು ನಿಮಿಷದ ಮುಂಚೆ, ಈಗ ಮತ್ತೆ ಬಂದಿದ್ದೀರಾ, ನಿಮ್ಮದೊಳ್ಳೆ’ ಎಂದ.

“ಅರೆ! ಫೋನ್‌ ಮಾಡಿ ಇಪ್ಪತ್ತು ನಿಮಿಷಕ್ಕೆ ಬಂದಿದ್ದೀನಿ. ಮಧ್ಯೆ ಯಾವುದೋ ಒಂದು ಹೆಣ ತೆಗೆದುಕೊಂಡು ಹೋಗ್ತಾ ಇದ್ದರು, ಅದಕ್ಕೆ ಸ್ವಲ್ಪ ತಡವಾಯಿತು ಅಷ್ಟೆ’ ಎಂದ. “ಹೋಗ್ರಿ ಹೋಗ್ರಿ ಯಾರಿಗೆ ಕತೆ ಕಟ್ಟುತ್ತಿದ್ದೀರಾ ಇಲ್ಲಿ, ನಾನೇ ನನ್ನ ಕೈಯಾರೆ ಕೊಟ್ಟಿದ್ದೀನಿ. ನೀವೇ ಬಂದಿದ್ರಿ. ಈಗ ಮತ್ತೆ ಬಂದಿದ್ದೀರಾ’ ಎಂದು ಜೋರು ಮಾಡಿದ. “ಅರೆ ನಾನ್ಯಾವಾಗ ಬಂದದ್ದು!’ ಎಂದು ಹೇಳಿದ ಅವನಿಗೆ ಮತ್ತೆ ಮುಂದಕ್ಕೆ ಮಾತೇ ಹೊರಡದ ಹಾಗೆ ಆಯಿತು.

ಮಳೆ ಒಂದೊಂದೇ ಹನಿ ಬೀಳಲು ಶುರುವಾಯಿತು. ಒಂದು ಗಂಟೆ ಸುರಿದ ಮಳೆ ಸುಮ್ಮನಾಯಿತು. ಮಳೆನೇ ಬಂದಿಲ್ಲವೆನೋ ಎಂಬಂತೆ. ಸೂರ್ಯ ಮುಳುಗುವ ಹೊತ್ತಾಯಿತು. ಸಿಹಿನೀರ ಹೊಂಡದ ಕಡೆ ಹೊರಟ. ಸೂರ್ಯ ತನ್ನ ರಂಗನ್ನು ಚೆಲ್ಲಿ ಪಶ್ಚಿಮ ದಿಕ್ಕಿನಲ್ಲಿ ಮುಳುಗತೊಡಗಿತು. ಅರ್ಧಗಂಟೆ ಆಯಿತು. ಬಣ್ಣ ಕರಗಿ, ಆಕಾಶವನ್ನೆಲ್ಲ ಕಪ್ಪು ಆವರಿಸಿಕೊಳ್ಳತೊಡಗಿತು. ಬೆಳ್ಳಿ ಬಣ್ಣದ ನಕ್ಷತ್ರ ನಿಧಾನ ಕಾಣಿಸಿಕೊಳ್ಳುತ್ತ ಮಿನುಗತೊಡಗಿತು. ಗಾಳಿ ಸಿಹಿನೀರ ಹೊಂಡದಲ್ಲಿನ ನೀರ ಮೇಲೆ ಹಾದು ತಣ್ಣಗೆ ಅವನ ಕೆನ್ನೆಯ ಸವರಿತು.

“ತಾನು ಯಾಕೆ ಬಂದೆ, ಯಾರಿಗಾಗಿ ಬಂದೆ, ಇದೆಲ್ಲ ಏನು’ ಎಂದು ಕ್ಷಣ ತನಗೆ ತಾನೇ ನಾಚಿಕೆಪಟ್ಟುಕೊಂಡನು. ತಕ್ಷಣ ಚೀಟಿಯಲ್ಲಿದ್ದ ದ್ದನ್ನು ನೆನಪಿಸಿಕೊಂಡ. ಒಂದು ಗಂಟೆ ಚಡಪಡಿಸುತ್ತ ಅಡ್ಡಾಡಿದ- ಯಾರಾದರು ಬರುವರಾ ಎಂದು. ಯಾರೂ ಕಾಣಲಿಲ್ಲ. ಎರಡು ಬಿಳಿಯ ಬಾತುಗಳು ನೀರಮೇಲೆ ತೇಲಿಕೊಂಡು ಹೋಗುತ್ತಿದ್ದವು. ವಾಪಸು ತಿರುಗಿಕೊಂಡು ನಡೆದ. ಎದುರಿಗೆ ಒಂದು ಜೋಡಿ ಹಾದು ಹೋಯಿತು. ಜೋಡಿಯ ಒಂದು ವ್ಯಕ್ತಿ ಶಾಲನ್ನು ಹೊದ್ದುಕೊಂಡಿತ್ತು. ಆ ವ್ಯಕ್ತಿ, “ಈ ಶಾಲಿನ ಅಂಚಿನಲ್ಲಿ ಆ ಹೂವು ಎಷ್ಟು ಮೋಹಕವಾಗಿದೆ. ಅಂದರೆ ಆಹಾ ಥೇಟ್‌ ನಿನ್ನ…’ ಮುಂದಿನ ಮಾತುಗಳನ್ನು ನಗು ತುಂಬಿಕೊಂಡಿತು. ನಗು ಅವನಿಗೆ ಕಲ್ಲಿನ ಬಳಿ ತಾನು ಕೇಳಿಸಿಕೊಂಡ ನಗುವನ್ನು ನೆನಪಿಸಿತು.

ಅವನಿಗೆ ಇವರ ಈ ಮಾತುಗಳು ಅಸ್ಪಷ್ಟವಾಗಿ ಕೇಳುತ್ತಿದ್ದವು- ಅವನು ದೂರ ದೂರ ಸಾಗಿದರೂ.

ಎಚ್‌.ಆರ್‌. ರಮೇಶ

ಟಾಪ್ ನ್ಯೂಸ್

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Bar-Associatin

Wine Merchants: ನಾಳೆಯ ಮದ್ಯ ಮಾರಾಟ ಬಂದ್‌ ನಿರ್ಧಾರ ವಾಪಸ್‌ ಪಡೆದ ಅಸೋಸಿಯೇಷನ್‌

vital

Vitla: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

ಹೊಸ ಸೇರ್ಪಡೆ

Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ

Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.