ಘಾನಾ ದೇಶದ ಕತೆ: ಬುದ್ಧಿ ಕಲಿತ ರಾಜಕುಮಾರಿ
Team Udayavani, May 6, 2018, 6:00 AM IST
ದೇಶವನ್ನಾಳುವ ದೊರೆಗೆ ಒಬ್ಬಳೇ ಮಗಳಿದ್ದಳು. ಅವಳ ಮೈ ಬಣ್ಣ ಹಾಲಿನಂತೆ ಬೆಳ್ಳಗೆ ಇತ್ತು. ತಲೆಗೂದಲು ಸೊಂಟದ ತನಕ ಇಳಿಬೀಳುತ್ತಿತ್ತು. ಮುಖ ಚಂದ್ರನಂತೆ ಉರುಟಾಗಿತ್ತು. ಅವಳು ಮಾತನಾಡಿದರೆ ಕೋಗಿಲೆಯ ದನಿಯಂತೆ ಇಂಪಾಗಿತ್ತು. ಎಲ್ಲ ಸೌಂದರ್ಯವನ್ನೂ ಒಟ್ಟುಗೂಡಿಸಿಕೊಂಡಿದ್ದ ರಾಜಕುಮಾರಿಗೆ ತನಗಿಂತ ಚೆಲುವೆಯರಿಲ್ಲ ಎಂಬ ಅಹಂಕಾರ ನೆತ್ತಿಗೇರಿತ್ತು. ಅವಳಿಗೆ ದೊರೆ ಮದುವೆ ಮಾಡಲು ಮುಂದಾದಾಗ ಸುಲಭವಾಗಿ ಅವಳು ಸಮ್ಮತಿಸಲಿಲ್ಲ. “”ನನ್ನಂತಹ ಸೌಂದರ್ಯವತಿ ಯಾರೋ ಒಬ್ಬ ಗಂಡಸಿನ ಕೈ ಹಿಡಿಯಬಾರದು. ಅವನು ಜಗತ್ತಿನಲ್ಲೇ ಎಲ್ಲರಿಗಿಂತ ದೊಡ್ಡ ಧನವಂತನಾಗಿರಬೇಕು” ಎಂದು ಷರತ್ತು ಹಾಕಿದಳು.
ಆದರೂ ದೊರೆಯ ಪ್ರಯತ್ನದಿಂದ ಹಲವು ದೇಶಗಳಿಂದ ರಾಜಕುಮಾರರು ವಧೂ ಪರೀಕ್ಷೆಗಾಗಿ ಅರಮನೆಗೆ ಬಂದರು. ಬಂದವರ ಮುಂದೆ ನಿಂತು ರಾಜಕುಮಾರಿಯು ಗರ್ವದಿಂದ, “”ನಿಮ್ಮ ಬಳಿ ಎಷ್ಟು ಚಿನ್ನವಿದೆ, ಎಷ್ಟು ಹಣ ರಾಶಿ ಬಿದ್ದಿದೆ?” ಎಂದು ಕೇಳುತ್ತಿದ್ದಳು. ಒಬ್ಬನು, “”ರಾಜಕುಮಾರಿ, ನಿನ್ನ ದೇಹವನ್ನು ಮುಚ್ಚುವಷ್ಟು ಬಂಗಾರ ನನ್ನ ಅರಮನೆಯಲ್ಲಿದೆ. ನಾವು ಜೀವನವಿಡೀ ಸುಖವಾಗಿ ಬದುಕಲು ಅವಶ್ಯವಿರುವಷ್ಟು ಹಣವೂ ಇದೆ” ಎಂದು ಹೇಳಿದ. ಅವಳು ತಾತ್ಸಾರದಿಂದ ನಕ್ಕಳು. “”ನೀನು ಒಬ್ಬ ಭಿಕ್ಷುಕ. ನಿನ್ನ ಬಳಿ ಇರುವ ಬಂಗಾರ ನನ್ನೊಬ್ಬಳನ್ನು ಮುಚ್ಚುವಷ್ಟೇ ಇದೆಯಲ್ಲವೆ? ಆದರೆ ಈಗ ನನ್ನಲ್ಲಿ ಇರುವ ಒಡವೆಗಳ ರಾಶಿಯಲ್ಲಿ ನಿನ್ನನ್ನೂ ನಿನ್ನ ಪ್ರಜೆಗಳನ್ನೂ ಹೂಳಬಹುದು. ಬದುಕಲು ಮಾತ್ರ ಹಣ ಬೇಕಾಗುವುದಲ್ಲ. ನನಗೆ ಹಣದ ರಾಶಿಯೇ ಹಾಸಿಗೆಯಾಗಬೇಕು. ನಾನು ಸ್ನಾನ ಮಾಡಲು ಪನ್ನೀರು ತುಂಬುವ ಹಂಡೆಯೂ ಬಂಗಾರದ್ದೇ ಆಗಿರಬೇಕು. ಅರಮನೆಯ ಕಂಭಗಳು, ಗೋಡೆಗಳು, ಪೀಠೊಪಕರಣಗಳು ಎಲ್ಲವೂ ಎಲ್ಲವೂ ಬಂಗಾರದಿಂದ ತಯಾರಾಗಿರಬೇಕು” ಎಂದು ಹೇಳಿದಳು. ಅವಳ ಉತ್ತರ ಕೇಳಿದ ರಾಜಕುಮಾರ, “”ಕ್ಷಮಿಸು ರಾಜಕುಮಾರಿ, ನನ್ನ ಪ್ರಜೆಗಳ ಹಿತಕ್ಕೆ ಖರ್ಚು ಮಾಡಿ ಏನಾದರೂ ಉಳಿದರೆ ಮಾತ್ರ ನಾನು ನನ್ನ ಸುಖಕ್ಕೆ ಬಳಸುತ್ತೇನೆ. ನನ್ನ ಪಾಲಿಗೆ ಅವರ ಸುಖಕ್ಕಿಂತ ಹೆಚ್ಚಿನ ಬಂಗಾರವೇ ಇಲ್ಲ” ಎಂದು ಹೇಳಿ ಹೊರಟುಹೋದ.
ರಾಜಕುಮಾರಿಯ ಸೌಂದರ್ಯದ ಕುರಿತು ತಿಳಿದುಕೊಂಡು ಅವಳನ್ನು ಮದುವೆಯಾಗಲು ಬಂದ ಸಾಲು ಸಾಲು ರಾಜಕುಮಾರರನ್ನೂ ಅವಳು ಅವಮಾನಿಸಿ ಹಿಂದೆ ಕಳುಹಿಸಿದಳು. ಇದರಿಂದ ಅವಳ ಕೈ ಹಿಡಿಯಲು ಯಾರೂ ಮುಂದೆ ಬಾರದ ಸ್ಥಿತಿಯುಂಟಾಯಿತು. ದೊರೆಯು ಮಗಳಿಗೆ ಮದುವೆಯಾಗಲಿಲ್ಲ ಎಂದು ಕಳವಳದಲ್ಲಿದ್ದ. ಆದರೆ ರಾಜಕುಮಾರಿಯು, “”ಅಪ್ಪಾ$, ನಮ್ಮ ಕೋಶಾಗಾರದಲ್ಲಿ ಬಂಗಾರ ತುಂಬುತ್ತಲೇ ಇರಬೇಕು. ಅದಕ್ಕಾಗಿ ಪ್ರಜೆಗಳ ಮೇಲೆ ಇನ್ನಷ್ಟು ತೆರಿಗೆಗಳನ್ನು ವಿಧಿಸಿ. ಬೇರೆ ದೇಶಗಳ ಮೇಲೆ ದಂಡೆತ್ತಿ ಹೋಗಿ ಯುದ್ಧ ಮಾಡಿ ಗೆದ್ದು ಕಪ್ಪವನ್ನು ಸಂಗ್ರಹಿಸಿ” ಎಂದು ಕೋರಿಕೊಂಡಳು. ಈ ವಿಷಯ ಕೇಳಿ ಪ್ರಜೆಗಳಿಗೂ ನೆರೆಹೊರೆಯ ರಾಜರಿಗೂ ಕಳವಳವುಂಟಾಯಿತು. ರಾಜಕುಮಾರಿಯ ಅಪೇಕ್ಷೆಯಿಂದ ಎಲ್ಲರಿಗೂ ತೊಂದರೆಯಾಗುತ್ತದೆಂದು ಚಿಂತೆಗೊಳಗಾದರು.
ಆಗ ಬಡ ಯುವಕನೊಬ್ಬ ಎಲ್ಲರೂ ಸೇರಿದ ಸಭೆಯಲ್ಲಿ ಎದ್ದು ನಿಂತ. “”ಈ ಸಮಸ್ಯೆಗೆ ನಾನು ಪರಿಹಾರ ತಂದುಕೊಡುತ್ತೇನೆ. ನನಗೆ ಈ ಕೆಲಸಕ್ಕೆ ಫಕೀರನೊಬ್ಬ ನೆರವಾಗುತ್ತಾನೆ. ಅವನ ಮಾಯೆಯಿಂದ ಒಂದು ಅರಮನೆಯನ್ನು ಸೃಷ್ಟಿಸುತ್ತೇನೆ. ಅದರಲ್ಲಿ ಇರುವ ಎಲ್ಲ ವಸ್ತುಗಳೂ ಬಂಗಾರದ್ದೇ ಆಗಿರುತ್ತದೆ. ನಾನು ಏನು ಮಾಡುತ್ತೇನೋ ನೀವೇ ನೋಡುವಿರಂತೆ” ಎಂದು ಹೇಳಿದ. ಎಲ್ಲರೂ, “”ಅಷ್ಟು ಮಾಡಪ್ಪ, ನಿನಗೆ ಪುಣ್ಯ ಬರುತ್ತದೆ” ಎಂದು ಹರಸಿ ಕಳುಹಿಸಿದರು.
ಯುವಕ ಫಕೀರನ ಸಹಾಯದಿಂದ ಬಂಗಾರದ ಕುದುರೆಯ ಮೇಲೆ ಕುಳಿತುಕೊಂಡು ರಾಜಕುಮಾರಿಯ ಬಳಿಗೆ ಹೊರಟ. ಬಂಗಾರದ ಎಳೆಗಳಿಂದ ತಯಾರಿಸಿದ ಉಡುಪುಗಳನ್ನು ಧರಿಸಿದ್ದ. ಕಾಲುಗಳಲ್ಲಿ ಬಂಗಾರದ ಹಾಳೆಗಳಿಂದ ಸಿದ್ಧವಾದ ಪಾದರಕ್ಷೆಗಳಿದ್ದವು. ಅವನು ಅರಮನೆಯೊಳಗೆ ಕಾಲಿಡುವಾಗಲೇ ಇಡೀ ಅರಮನೆ ಬೆಳದಿಂಗಳಿನ ಕಾಂತಿಯಿಂದ ಬೆಳಗಿತು. ರಾಜಕುಮಾರಿಗಂತೂ ಹಿಡಿಸಲಾಗದ ಸಂತಸವಾಯಿತು. ಇಷ್ಟೊಂದು ಬಂಗಾರದಿಂದ ಅಲಂಕೃತನಾದ ಒಬ್ಬ ರಾಜಕುಮಾರನೂ ಅವಳನ್ನು ಕಾಣಲು ಬಂದಿರಲಿಲ್ಲ. ಆದರೂ ಅವಳು, “”ನಿನ್ನ ಬಳಿ ಎಷ್ಟು ಬಂಗಾರದ ರಾಶಿಯಿದೆ?” ಎಂದು ಕೇಳಿದಳು. ಯುವಕನು, “”ನನ್ನ ಅರಮನೆಯು ಪೂರ್ಣವಾಗಿ ಬಂಗಾರದಿಂದಲೇ ನಿರ್ಮಾಣಗೊಂಡಿದೆ. ಬಂಗಾರವೇ ಇಡೀ ಅರಮನೆಯಲ್ಲಿ ತುಂಬಿಕೊಂಡಿದೆ” ಎಂದು ಹೇಳಿದ. ರಾಜಕುಮಾರಿ ಇದು ಸತ್ಯವೇ ಎಂದು ಪರೀಕ್ಷಿಸಲು ಸೇವಕರನ್ನು ಕಳುಹಿಸಿದಳು. ಅವರು ಕೂಡ ಯುವಕ ತೋರಿಸಿದ ಅರಮನೆಯನ್ನು ನೋಡಿಬಂದರು. “”ರಾಜಕುಮಾರಿ, ಅವನ ಮಾತಿನಲ್ಲಿ ಎಳ್ಳಿನಷ್ಟೂ ಸಟೆಯಿಲ್ಲ” ಎಂದು ಹೇಳಿದರು.
ತನಗೆ ಅದೃಷ್ಟ ದೇವತೆ ಈ ಯುವಕನ ರೂಪದಲ್ಲಿ ಒಲಿದಿರುವಳೆಂದು ರಾಜಕುಮಾರಿ ಹಿರಿ ಹಿರಿ ಹಿಗ್ಗಿದಳು. ದೊರೆಯನ್ನು ಕರೆದಳು. ತಾನು ಈ ಯುವಕನ ಕೈ ಹಿಡಿಯುವುದಾಗಿ ಹೇಳಿದಳು. ದೊರೆ ಸಂತೋಷದಿಂದ ಅವನೊಂದಿಗೆ ಮಗಳ ಮದುವೆಯನ್ನು ನೆರವೇರಿಸಿದ. ರಾಜಕುಮಾರಿ ಗಂಡನ ಜೊತೆಗೆ ಅರಮನೆಗೆ ಬಂದಳು. ಅಂಗಳದಲ್ಲಿ ನಿಂತು ಅದರ ವೈಭವವನ್ನು ಕಂಡು ಸಂತೋಷಪಟ್ಟಳು. ಬಳಿಕ, “”ಇದೇನು, ಅರಮನೆಯಲ್ಲಿ ಸೇವಕರು ಒಬ್ಬರೂ ಕಾಣಿಸುವುದಿಲ್ಲ, ಎಲ್ಲಿಗೆ ಹೋಗಿದ್ದಾರೆ?” ಎಂದು ಕೇಳಿದಳು. “”ಇಲ್ಲಿ ಸೇವಕರಿಲ್ಲ. ಅರಮನೆಯೊಳಗೆ ನೊಣ ಕೂಡ ನುಸುಳಲು ಸ್ಥಳವಿಲ್ಲ. ಎಲ್ಲವೂ ಬಂಗಾರದಿಂದ ತುಂಬಿದೆ. ಅಲ್ಲದೆ ಅವರಿಗೆ ವೇತನ ಕೊಡುವಾಗ ಸಂಪತ್ತು ಕರಗುತ್ತದೆ. ಆದ್ದರಿಂದ ಸೇವಕರಿಗೆ ಸ್ಥಾನವಿಲ್ಲ” ಎಂದ ಯುವಕ.
ಅಂಗಳದಲ್ಲಿ ನಿಂತ ರಾಜಕುಮಾರಿಗೆ ದಾಹವಾಯಿತು. “”ಕುಡಿಯಲು ನೀರು ಬೇಕು” ಎಂದು ಕೇಳಿದಳು. ಯುವಕ ಅವಳ ಮುಂದೆ ಬಂಗಾರದ ಹೂಜಿಯನ್ನು ತಂದಿಟ್ಟ. “”ರಾಜಕುಮಾರಿ ಈ ಹೂಜಿಯನ್ನು ನೋಡು. ಎಷ್ಟೊಂದು ಕಲಾತ್ಮಕವಾಗಿದೆ. ಇದನ್ನು ನೋಡಿ ದಾಹ ತಣಿಸಿಕೋ” ಎಂದು ಹೇಳಿದ. ಅವಳಿಗೆ ಸಿಟ್ಟು ಬಂತು. “”ನನಗೆ ದಾಹವಷ್ಟೇ ಅಲ್ಲ, ಹಸಿವೂ ಆಗುತ್ತದೆ. ಅದಕ್ಕೆ ಬಂಗಾರದ ತಟ್ಟೆ ತಂದಿಟ್ಟರೆ ಹಸಿವು ಅಡಗುವುದೆ? ಕುಡಿಯಲು ನೀರಿಲ್ಲದಿದ್ದರೆ ದಾಹ ಅಡಗದು, ಅನ್ನ ಸಿಗದಿದ್ದರೆ ಹಸಿವು ನೀಗದು” ಎಂದು ಕೂಗಿದಳು.
“”ರಾಜಕುಮಾರಿ, ನಿನ್ನ ಬಳಿಗೆ ಬಂದ ಅಷ್ಟೊಂದು ಮಂದಿಯ ಬಳಿ ನೀನು ಕುಡಿಯಲು ನೀರಿದೆಯೇ, ಉಣ್ಣಲು ಆಹಾರವಿದೆಯೇ ಕೇಳಿದವಳಲ್ಲ. ಕೇವಲ ಬಂಗಾರದ ಬಗೆಗೆ ಮಾತ್ರ ಕೇಳಿದ್ದೆ. ನಿನ್ನ ದೃಷ್ಟಿಯಲ್ಲಿ ಬಂಗಾರವೇ ಪ್ರಧಾನವಾಗಿತ್ತು. ಇಲ್ಲಿ ಬಂಗಾರ ಬಿಟ್ಟರೆ ಬೇರೆ ಏನೂ ಇಲ್ಲ. ಅದರಿಂದಲೇ ಬದುಕಿಕೋ” ಎಂದ ಯುವಕ.
ಹಸಿವು, ದಾಹಗಳಿಂದ ನೆಲಕ್ಕೆ ಕುಸಿಯುವ ಸ್ಥಿತಿಯಲ್ಲಿದ್ದ ರಾಜಕುಮಾರಿಗೆ ತನ್ನ ತಪ್ಪಿನ ಅರಿವಾಯಿತು. ಓಡಿ ಬಂದು ಯುವಕನನ್ನು ತಬ್ಬಿಕೊಂಡಳು. “”ಬದುಕಲು ಮುಖ್ಯ ಏನೆಂಬುದು ನನಗೀಗ ಅರ್ಥವಾಯಿತು. ನನಗೆ ನೆಮ್ಮದಿಯ ಜೀವನ ಬೇಕು. ಒಂದು ಚೂರು ಬಂಗಾರ ಕೂಡ ಖಂಡಿತ ಬೇಡ” ಎಂದು ಅತ್ತುಬಿಟ್ಟಳು. ಬಂಗಾರದ ಅರಮನೆ ಮಾಯವಾಯಿತು. ಅಲ್ಲಿ ಎಲ್ಲ ಸೌಕರ್ಯವೂ ಇರುವ ಯುವಕನ ಮನೆ ಕಾಣಿಸಿಕೊಂಡಿತು. ರಾಜಕುಮಾರಿ ಅದರಲ್ಲಿ ಯುವಕನೊಂದಿಗೆ ಸುಖವಾಗಿದ್ದಳು.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.