ಇರಾನ್ ದೇಶದ ಕತೆ: ಕಿಯಾನ್ ಮತ್ತು ರಾಜ
Team Udayavani, Oct 13, 2019, 4:35 AM IST
ಒಬ್ಬ ವ್ಯಾಪಾರಿಗೆ ಕಿಯಾನ್ ಎಂಬ ಮಗನಿದ್ದ. ವ್ಯಾಪಾರಿ ಕುರಿ, ಕೋಳಿ, ಹಸು ಮುಂತಾದ ಸಾಕು ಪ್ರಾಣಿಗಳನ್ನು ಮಾರಾಟ ಮಾಡಿ ಬಂದ ಸಂಪಾದನೆಯಲ್ಲಿ ಜೀವನ ಸಾಗಿಸುತ್ತಿದ್ದ. ಅವನು ಒಂದು ದಿನ ಇದ್ದಕ್ಕಿದ್ದಂತೆ ತೀರಿಕೊಂಡ. ಬಳಿಕ ಕಿಯಾನ್ ವೃತ್ತಿಯನ್ನು ಮುಂದುವರೆಸಿದ. ಒಂದು ದಿನ ಕುರಿಗಳನ್ನು ಮಾರಲು ಅವನು ಅರಮನೆಗೆ ಹೋಗಿದ್ದ. ಅಲ್ಲಿ ಸುಂದರಿಯಾದ ರಾಜಕುಮಾರಿಯನ್ನು ನೋಡಿದ. ಅವಳನ್ನು ಮದುವೆಯಾಗಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿದ. ಮನೆಗೆ ಬಂದು ತಾಯಿಯೊಂದಿಗೆ, “”ನೀನು ರಾಜನ ಬಳಿಗೆ ಹೋಗಿ ಅವನ ಮಗಳೊಂದಿಗೆ ನನ್ನ ಮದುವೆಯನ್ನು ಮಾಡುವಂತೆ ಕೋರಿ, ದಿನ ನಿಶ್ಚಯಿಸಿ ಬರಬೇಕು” ಎಂದು ಹೇಳಿದ. ಕಿಯಾನ್ ತಾಯಿ ರಾಜನ ಬಳಿಗೆ ಹೋದಳು. ಮಗನ ಇಚ್ಛೆಯನ್ನು ಹೇಳಿದಳು. ರಾಜನಿಗೆ ನಗು ಬಂತು. “”ನಿನ್ನ ಮಗನಿಗೆ ವಿದ್ಯೆಯಿಲ್ಲ. ನಿಮ್ಮ ಮನೆಯಲ್ಲಿ ಚಿನ್ನದ ಗಟ್ಟಿಗಳಿಲ್ಲ. ಯಾವ ಸುಖ ಸಿಗುತ್ತದೆಂದು ನಿಮ್ಮಂತಹ ಬಡವರ ಮನೆಗೆ ನನ್ನ ಮಗಳನ್ನು ಮದುವೆ ಮಾಡಿಕೊಡಲಿ? ಕನಸು ಕಾಣುವುದಕ್ಕೂ ಮಿತಿಯಿರಬೇಕು. ಹೋಗು ಹೋಗು” ಎಂದು ಹೇಳಿದ.
ತಾಯಿ ಮನೆಗೆ ಬಂದು ನಡೆದುದನ್ನು ಮಗನಿಗೆ ಹೇಳಿದಳು. “”ರಾಜನ ಮನಸ್ಸಿಗೆ ಹಿತವಾಗುವಷ್ಟು ಚಿನ್ನದ ಗಟ್ಟಿಗಳನ್ನು ಸಂಪಾದನೆ ಮಾಡಿ ರಾಜಕುಮಾರಿಯ ಕೈ ಹಿಡಿಯುತ್ತೇನೆ” ಎಂದು ಹೇಳಿ ತನ್ನ ಅದೃಷ್ಟವನ್ನು ಹುಡುಕುತ್ತ ಕಿಯಾನ್ ಮನೆಯಿಂದ ಹೊರಟ. ತುಂಬ ಊರುಗಳನ್ನು ಸುತ್ತಾಡಿದ. ಏನೂ ಪ್ರಯೋಜನವಾಗಲಿಲ್ಲ. ಒಂದು ಮರದ ಕೆಳಗೆ ಮಲಗಿಕೊಂಡು ತನಗೆ ಅದೃಷ್ಟ ಖುಲಾಯಿಸುವ ದಾರಿ ತೋರಿಸುವವರು ಒಬ್ಬರೂ ಸಿಗಲಿಲ್ಲ ಎಂದು ತನ್ನಲ್ಲೇ ಹೇಳಿಕೊಂಡು ದುಃಖೀಸಿದ. ಮರುಕ್ಷಣವೇ ಪಾದದ ತನಕ ಗಡ್ಡ ಇಳಿಬಿಟ್ಟಿದ್ದ ಒಬ್ಬ ವೃದ್ಧ ಅವನೆದುರು ಕಾಣಿಸಿಕೊಂಡ. “”ನನ್ನನ್ನು ಕರೆದೆಯಾ?” ಎಂದು ಕೇಳಿದ. ಕಿಯಾನ್ ಅಚ್ಚರಿಯಿಂದ, “”ಇಲ್ಲ, ನಿಮ್ಮನ್ನು ಕರೆದಿಲ್ಲ, ನೀವು ಯಾರೆಂದು ನನಗೆ ಗೊತ್ತಿಲ್ಲ” ಎಂದು ಕಣ್ಣರಳಿಸಿದ.
“”ನನಗೆ ಅದೃಷ್ಟದ ದಾರಿ ತೋರಿಸುವವರಿಲ್ಲವೆಂದು ಮನಸ್ಸಿನಲ್ಲಿ ಯೋಚಿಸಿದೆಯಲ್ಲ. ಮನಸ್ಸನ್ನು ಓದುವ ಜ್ಞಾನ ನನಗಿದೆ. ಅಂತಹ ದಾರಿ ತೋರಿಸುವ ಕರುಣಾಳು ನಾನು. ಬಾ ನನ್ನ ಜೊತೆಗೆ” ಎಂದು ವೃದ್ಧನು ಅವನನ್ನು ಕರೆದ. ಕಿಯಾನ್ ಅವನೊಂದಿಗೆ ಹೊರಟುನಿಂತ. ಆಗ ಅವನು ತನ್ನ ಕೈಯಲ್ಲಿರುವ ಬೆತ್ತದಿಂದ ಎದುರಿನ ಮರವನ್ನು ಸ್ಪರ್ಶಿಸಿದ. ಮರುಕ್ಷಣವೇ ಮರವು ಮಾಯವಾಗಿ ಒಂದು ಅರಮನೆ ಕಾಣಿಸಿತು. ವೃದ್ಧನು ಅವನೊಂದಿಗೆ ಅರಮನೆಯೊಳಗೆ ಹೋದ. ಅರಮನೆಯಲ್ಲಿ ಒಬ್ಬ ಯುವತಿ ಇದ್ದಳು. ಅವಳು ವೃದ್ಧನಿಗೆ ತಿಳಿಯದಂತೆ ಕಿಯಾನ್ ಜೊತೆಗೆ, “”ನಿನ್ನನ್ನು ನೋಡಿದರೆ ಅಮಾಯಕನ ಹಾಗೆ ಕಾಣುತ್ತೀಯಾ. ಈ ವೃದ್ಧನು ಒಬ್ಬ ದುಷ್ಟ ಜಾದೂಗಾರ. ನಿನ್ನಂತಹ ಯುವಕರಿಗೆ ಅದೃಷ್ಟದ ದಾರಿ ತೋರಿಸುವುದಾಗಿ ಹೇಳಿ ಕರೆತರುತ್ತಾನೆ. ಜಾದೂ ಆಟಗಳನ್ನು ಕಲಿಸುತ್ತಾನೆ. ಬಳಿಕ ಒಂದು ಪ್ರಾಣಿಯಾಗಿ ಮಾಡಿ ಬೇರೆಯವರಿಗೆ ಮಾರಾಟ ಮಾಡುತ್ತಾನೆ. ಪ್ರಾಣಿಯಾದವರು ತಪ್ಪಿಸಿಕೊಂಡು ಮರಳಿ ಬರುತ್ತಾರೆ. ಅವರನ್ನು ಇನ್ನೊಂದು ಪ್ರಾಣಿಯಾಗಿ ಬದಲಾಯಿಸಿ ಜೀವನವಿಡೀ ಮಾರುತ್ತಲೇ ಇರುತ್ತಾನೆ. ನೀನು ಅವನಿಂದ ಪಾರಾಗಲು ಒಂದು ಉಪಾಯ ಮಾಡು. ಅವನು ಏನು ಕಲಿಸಿದರೂ ತಲೆಗೆ ಹತ್ತದ ಹೆಡ್ಡನಂತೆ ವರ್ತಿಸು. ಆಗ ನಿನ್ನನ್ನು ಬಿಟ್ಟುಬಿಡುತ್ತಾನೆ” ಎಂದು ರಹಸ್ಯವಾಗಿ ಹೇಳಿದಳು.
ವೃದ್ಧನು ಜಾದೂ ಆಟಗಳನ್ನು ಕಿಯಾನ್‌ಗೆ ಕಲಿಸಲು ಪ್ರಯತ್ನ ಮಾಡಿದ. ಆದರೆ ಅವನು ಮನಸ್ಸಿನಲ್ಲಿಯೇ ಆಟದ ಗುಟ್ಟುಗಳನ್ನು ಕಲಿತುಕೊಂಡ. ವೃದ್ಧನ ಮುಂದೆ ಹೆಡ್ಡನ ಹಾಗೆ ವರ್ತಿಸಿದ. ಅವನಿಗೆ ಪಾಠ ತಲೆಗೆ ಹತ್ತುವುದಿಲ್ಲವೆಂದು ಭಾವಿಸಿದ ವೃದ್ಧನು ಕಡೆಗೆ ಬೇಸರದಿಂದ ಅವನನ್ನು ಮನೆಯಿಂದ ಹೊರಗೆ ಓಡಿಸಿದ. ಕಿಯಾನ್ ನೆಟ್ಟಗೆ ಮನೆಗೆ ಬಂದ. ತಾಯಿಯೊಂದಿಗೆ, “”ನಾಳೆ ಬೆಳಗ್ಗೆ ನೀನು ಅಂಗಳದಲ್ಲಿ ನೋಡಿದಾಗ ಒಂದು ಕೊಬ್ಬಿದ ಕುರಿ ನಿಂತಿರುತ್ತದೆ. ಅದನ್ನು ಪೇಟೆಗೆ ತೆಗೆದುಕೊಂಡು ಹೋಗಿ ನೂರು ಬಂಗಾರದ ಗಟ್ಟಿಗಳಿಗೆ ಮಾರಾಟ ಮಾಡು. ಆದರೆ ಒಂದು ವಿಷಯ ಮರೆಯಬಾರದು. ಕುರಿಯ ಕೊರಳಿನಲ್ಲಿ ಒಂದು ತಾಯತ ಇರುತ್ತದೆ. ಅದನ್ನು ನೆನಪಿನಲ್ಲಿ ಬಿಚ್ಚಿ ತರಬೇಕು” ಎಂದು ಹೇಳಿದ. ಮರುದಿನ ಬೆಳಗಾಗುವಾಗ ಜಾದೂ ಮಂತ್ರದ ಬಲದಿಂದ ತಾನೇ ಒಂದು ಕುರಿಯಾಗಿ ನಿಂತುಕೊಂಡ.
ತಾಯಿ ಕುರಿಯನ್ನು ತೆಗೆದುಕೊಂಡು ಹೋಗಿ ಒಬ್ಬ ಶ್ರೀಮಂತನಿಗೆ ಮಾರಾಟ ಮಾಡಿ ಚಿನ್ನದ ಗಟ್ಟಿಗಳೊಂದಿಗೆ ಮನೆಗೆ ಬಂದಳು. ಕುರಿಯಿಂದ ಬಿಚ್ಚಿ ತಂದಿದ್ದ ತಾಯತವನ್ನು ನೋಡಿದಾಗ ಅದು ಒಂದು ಇಲಿಮರಿಯಾಗಿ ಬದಲಾಯಿಸಿತು. ಅವಳ ಕೈಯಿಂದ ಜಿಗಿದು ಒಳಗೆ ಹೋಗುವಾಗ ಇಲಿಯ ಸ್ಥಾನದಲ್ಲಿ ಕಿಯಾನ್ ಇರುವುದನ್ನು ನೋಡಿದಳು. “”ಇದೆಲ್ಲ ಏನು?” ಎಂದು ವಿಸ್ಮಯದಿಂದ ಕೇಳಿದಳು.
“”ರಾಜಕುಮಾರಿ ಯನ್ನು ಮದುವೆಯಾಗಬೇಕಿದ್ದರೆ ಚಿನ್ನದ ಗಟ್ಟಿಗಳನ್ನು ಗಳಿಸಬೇಕು ತಾನೆ? ಅದಕ್ಕಾಗಿ ಕಲಿತುಬಂದ ವಿದ್ಯೆ ಇದು. ದಿನಕ್ಕೊಂದು ಪ್ರಾಣಿಯಾಗುತ್ತೇನೆ. ನೀನು ಕುತ್ತಿಗೆಯಲ್ಲಿರುವ ತಾಯತವನ್ನು ತೆಗೆದು ಮಾರಾಟ ಮಾಡಿ ಬರಬೇಕು. ನನ್ನನ್ನು ಖರೀದಿಸಿದವರ ಬಳಿಯಿಂದ ಮಾಯವಾಗಿ ನಿನ್ನ ಬಳಿಗೆ ಬರುತ್ತೇನೆ. ಆದರೆ ತಾಯತವನ್ನು ಬಿಚ್ಚಲು ಮರೆತರೆ ನಾನು ಮನುಷ್ಯನಾಗುವುದಿಲ್ಲ” ಎಂದು ಹೇಳಿದ ಕಿಯಾನ್.
ಹೀಗೆ ಕಿಯಾನ್ ದಿನವೂ ಒಂದು ಪ್ರಾಣಿಯಾಗುತ್ತಿದ್ದ. ತಾಯಿ ಅದನ್ನು ಮಾರಾಟ ಮಾಡಿ ಚಿನ್ನದ ಗಟ್ಟಿಗಳನ್ನು ತರುತ್ತಿದ್ದಳು. ಒಂದು ದಿನ ಅವನು ಉತ್ತಮ ಜಾತಿಯ ಕುದುರೆಯಾದ. ತಾಯಿ ಮಾರಾಟಕ್ಕೆ ಪೇಟೆಗೆ ಒಯ್ದಿಳು. ಆಗ ಕಿಯಾನ್‌ಗೆ ಜಾದೂ ಕಲಿಸಿದ್ದ ವೃದ್ಧ ಬರುತ್ತ ಇದ್ದ. ಕುದುರೆಯನ್ನು ನೋಡಿದಾಗ ಅವನಿಗೆ ಅದರಲ್ಲಿರುವ ಮೋಸ ಅರ್ಥವಾಯಿತು. ಕಿಯಾನ್ ತನಗೆ ಚಳ್ಳೇಹಣ್ಣು ತಿನ್ನಿಸಿರುವುದನ್ನು ಊಹಿಸಿಕೊಂಡ. ಅವನ ತಾಯಿಯ ಬಳಿಗೆ ಬಂದು ಕುದುರೆಯ ಬೆಲೆ ವಿಚಾರಿಸಿದ. ಅವಳು ಹೇಳಿದ ಬೆಲೆಗಿಂತ ಇಮ್ಮಡಿಯಾಗಿ ಚಿನ್ನದ ಗಟ್ಟಿಗಳನ್ನು ನೀಡಿದ. ಅದನ್ನು ಕಂಡು ಅವಳಿಗೆ ಆದ ಸಂತೋಷದಲ್ಲಿ ಕುದುರೆಯ ಕೊರಳಿನಿಂದ ತಾಯತ ಬಿಚ್ಚಲು ಮರೆತೇಹೋಯಿತು. ವೃದ್ಧ ಕುದುರೆಯ ಬೆನ್ನ ಮೇಲೆ ಕುಳಿತು ಓಡಿಸುತ್ತ ನೆಟ್ಟಗೆ ತನ್ನ ಮನೆಗೆ ಕರೆತಂದ.
ವೃದ್ಧನು ಕೆಲಸದವರನ್ನು ಕರೆದ. ಒಂದು ದುಷ್ಟ ಕುದುರೆಯನ್ನು ಹಿಡಿದು ತಂದಿರುವುದಾಗಿ ತೋರಿಸಿದ. “”ನಿರ್ದಯೆಯಿಂದ ಇದಕ್ಕೆ ಹೊಡೆಯಿರಿ. ಹೊಲ ಉಳುಮೆ ಮಾಡಲು, ಹೇರು ಎಳೆಯಲು ಬಳಸಿ. ಆದರೆ ಸಾಯುವ ವರೆಗೂ ಆಹಾರ, ನೀರು ಕೊಡಬೇಡಿ” ಎಂದು ಕಟ್ಟಪ್ಪಣೆ ಮಾಡಿದ. ಅವರು ನಾನಾ ರೀತಿಯಿಂದ ಕುದುರೆಗೆ ಹಿಂಸೆ ನೀಡತೊಡಗಿದರು. ಕೆಲವು ದಿನಗಳು ಕಳೆದವು. ವೃದ್ಧನ ಮನೆಯಲ್ಲಿದ್ದ ಯುವತಿ ಬಿಸಿಲಿಗೆ ಬಸವಳಿದಿದ್ದ ಕುದುರೆಯನ್ನು ನೋಡಿದಳು. ಕನಿಕರದಿಂದ ಅದರ ಮುಂದೆ ಕಲಗಚ್ಚು ತಂದಿಟ್ಟಳು. ಅದನ್ನು ಕುಡಿಯುವಾಗ ಅದರ ಕೊರಳಿನಲ್ಲಿ ತಾಯತವನ್ನು ಕಂಡು ಕುತೂಹಲದಿಂದ ಬಿಚ್ಚಿದಳು.
ಮರುಕ್ಷಣವೇ ಕುದುರೆ ಕಿಯಾನ್ ಆಗಿ ಬದಲಾಯಿತು. ಯುವತಿ ಅಚ್ಚರಿಯಿಂದ ನೋಡುತ್ತಿದ್ದಾಗ ವೃದ್ಧ ಓಡೋಡಿ ಬಂದು ಅವನನ್ನು ಹಿಡಿಯಲು ಯತ್ನಿಸಿದ. ಅಷ್ಟರಲ್ಲಿ ಕಿಯಾನ್ ಒಂದು ಗುಬ್ಬಚ್ಚಿಯಾಗಿ ಬದಲಾಯಿಸಿ ಫುರ್ರನೆ ಹಾರಿದ. ವೃದ್ಧನೂ ಬಿಡಲಿಲ್ಲ. ಡೇಗೆಯ ರೂಪ ತಳೆದು ಅದನ್ನು ಬೆನ್ನಟ್ಟಿದ. ಆಗ ರಾಜನು ತನ್ನ ಕುಮಾರಿಯೊಂದಿಗೆ ವಿಹರಿಸಲು ಉದ್ಯಾನಕ್ಕೆ ಬಂದಿದ್ದ. ಕಿಯಾನ್ ಒಂದು ಸುಂದರ ಗುಲಾಬಿಯಾಗಿ ರಾಜಕುಮಾರಿಯ ಮುಡಿಗೇರಿ ಕುಳಿತ. ವೃದ್ಧನು ಒಬ್ಬ ಫಕೀರನಾಗಿ ರಾಜನ ಮುಂದೆ ಬಂದ. ರಾಜನು ಅವನಿಗೆ ವಂದಿಸಿ ಫಕೀರನಿಗೆ ಏನಾದರೂ ಭಿಕ್ಷೆ ನೀಡುವಂತೆ ಸೇವಕರಿಗೆ ಹೇಳಿದ.
ಫಕೀರನು, “”ನನಗೆ ಭಿಕ್ಷೆ ಬೇಡ. ರಾಜಕುಮಾರಿಯ ಮುಡಿಯಲ್ಲಿ ದುಷ್ಟನೊಬ್ಬ ಗುಲಾಬಿಯಾಗಿ ಕುಳಿತಿದ್ದಾನೆ. ಅವನನ್ನು ತೆಗೆದು ರಾಜಕುಮಾರಿಯನ್ನು ರಕ್ಷಿಸಲು ಅವಕಾಶ ಮಾಡಿಕೊಡಿ” ಎಂದು ಕೇಳಿದ. ರಾಜನು ಸಮ್ಮತಿಸಿದ. ಫಕೀರನು ಗುಲಾಬಿಯನ್ನು ತೆಗೆದ ಕೂಡಲೇ ಅದು ಅವನ ಕೈಯಿಂದ ನುಣುಚಿಕೊಂಡು ಪಚ್ಚೆಯ ಹರಳಾಗಿ ರಾಜಕುಮಾರಿಯ ಪಾದಗಳ ಮೇಲೆ ಬಿದ್ದಿತು. ಫಕೀರನು ಹರಳನ್ನು ಆರಿಸಲು ಹೋದಾಗ ಅದೊಂದು ದಾಳಿಂಬೆ ಹಣ್ಣಾಯಿತು. ಹಣ್ಣನ್ನು ಫಕೀರನು ಹಿಡಿದುಕೊಂಡ. ಅದು ಅವನ ಕೈಯಿಂದ ಸಿಡಿದು ನೆಲಕ್ಕೆ ಬಿದ್ದು ಒಳಗಿನ ಕಾಳುಗಳು ನೆಲದ ತುಂಬ ಹರಡಿಕೊಂಡವು. ಫಕೀರ ಒಂದು ಹುಂಜವಾಗಿ ಕಾಳುಗಳನ್ನು ನುಂಗಲು ಮುಂದಾದ. ಆಗ ಕಿಯಾನ್ ಒಂದು ನರಿಯಾಗಿ ಹುಂಜದ ಮೇಲೆರಗಿ ತಟಕ್ಕನೆ ಹಿಡಿದು, ಕೊರಳು ಮುರಿದು ಕೊಂದುಹಾಕಿದ. ಬಳಿಕ ನಿಜರೂಪದಲ್ಲಿ ಬಂದು ರಾಜನ ಕಾಲಿಗೆರಗಿದ.
ರಾಜನು ಅಚ್ಚರಿಯಿಂದ, “”ಇದೆಲ್ಲ ಏನು, ಸತ್ತ ಫಕೀರನು ಯಾರು?” ಎಂದು ಕೇಳಿದ. “”ಇವನೊಬ್ಬ ಮಹಾ ಮಾಯಾವಿ. ರಾಜ್ಯದ ಯುವಕರನ್ನು ಜಾದೂ ಕಲಿಸುವುದಾಗಿ ಹೇಳಿ ಕರೆದುಕೊಂಡು ಹೋಗಿ ಪ್ರಾಣಿಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದ” ಎಂದು ನಡೆದ ಕತೆಯನ್ನು ಹೇಳಿದ. ರಾಜನಿಗೆ ತುಂಬ ಸಂತೋಷವಾಯಿತು. “”ನಿನ್ನ ಸಾಹಸದಿಂದ ಒಬ್ಬ ಮೋಸಗಾರನ ಅಂತ್ಯವಾಯಿತು. ನೀನು ಅವನ ಗುಟ್ಟು ತಿಳಿಯಲು ಸಹಾಯ ಮಾಡಿದ ಯುವತಿ ಅವನ ಬಂಧನದಲ್ಲಿದ್ದಳಲ್ಲವೆ? ಅವಳನ್ನು ಕೂಡ ಕರೆದುಕೊಂಡು ಬಾ. ನನ್ನ ಮಗಳ ಜೊತೆಗೆ ಅವಳನ್ನೂ ಹೆಂಡತಿಯಾಗಿ ಸ್ವೀಕರಿಸು. ಮುಂದೆ ಈ ರಾಜ್ಯದ ರಾಜನಾಗಿ ನೀನೇ ಆಳಬೇಕು” ಎಂದು ಹೇಳಿದ. ಕಿಯಾನ್ ರಾಜನ ಮಾತಿನಂತೆಯೇ ನಡೆದುಕೊಂಡು ಸುಖವಾಗಿದ್ದ.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.