ಇರಾನ್ ದೇಶದ ಕತೆ: ರಾಜಕುಮಾರಿಯ ಒಗಟು
Team Udayavani, Jun 23, 2019, 5:00 AM IST
ಒಂದು ದೇಶದ ರಾಜಕುಮಾರಿ ಸುಂದರಿಯೂ ಬಲು ಜಾಣೆಯೂ ಆಗಿದ್ದಳು. ಅವಳ ಹೆಸರು ಬಂಗಾರದ ಗುಲಾಬಿ. ವಯಸ್ಸಿಗೆ ಬಂದಿದ್ದರೂ ಅವಳು ಮದುವೆಯಾಗಲು ಒಪ್ಪಿಕೊಂಡಿರಲಿಲ್ಲ. ಇದರಿಂದ ರಾಜನಿಗೆ ತುಂಬ ದುಃಖವಾಗಿತ್ತು. ಮಗಳೊಂದಿಗೆ, “”ಮುಂದೆ ಈ ದೇಶದ ಸಿಂಹಾಸನವೇರಿ ಪ್ರಜೆಗಳನ್ನು ಪಾಲಿಸುವ ಹೊಣೆ ನಿನ್ನ ಗಂಡನ ಮೇಲಿದೆ. ನನಗೂ ವಯಸ್ಸಾಗಿದೆ. ನೀನು ಮದುವೆಯಾಗಲು ಯಾಕೆ ನಿರಾಕರಿಸುತ್ತಿರುವೆ?” ಎಂದು ಕೇಳಿದ. ರಾಜಕುಮಾರಿಯು, “”ನಾನು ಮದುವೆಯಾಗುವ ವ್ಯಕ್ತಿ ಬಡವನೂ ಆಗಿರಬಹುದು. ಆದರೆ ಅವನು ಅಸಾಮಾನ್ಯ ಸಾಹಸಿಯಾಗಿರಬೇಕು ಎಂಬ ಬಯಕೆ ನನ್ನದು. ನಾನು ಒಂದು ಒಗಟು ಹೇಳುತ್ತೇನೆ. ಅವನು ಇದಕ್ಕೆ ಉತ್ತರ ಹೇಳಬೇಕು. ಅದು ಸರಿಯಿದ್ದರೆ ನಾನು ಅವನ ಕೈಹಿಡಿಯುತ್ತೇನೆ” ಎಂದು ಹೇಳಿದಳು. ರಾಜನು ತನ್ನ ಮಗಳು ಹೇಳುವ ಒಗಟನ್ನು ಬಿಡಿಸಿದವರಿಗೆ ಅವಳನ್ನು ಕೊಟ್ಟು ಮದುವೆ ಮಾಡಿ ರಾಜ್ಯದ ಅಧಿಕಾರವನ್ನು ಒಪ್ಪಿಸುವುದಾಗಿ ಡಂಗುರ ಸಾರಿಸಿದ.
ರಾಜಕುಮಾರಿಯ ಕೈಹಿಡಿಯಲು ಹಲವು ರಾಜಕುಮಾರರು ಮುಂದೆ ಬಂದರು. ಅವಳು, “”ಬಂಗಾರದ ಗುಲಾಬಿಯ ಪಕ್ಕದಲ್ಲಿ ಬಣ್ಣದ ಗುಲಾಬಿಯಿರಬೇಕು ಅಂದರೆ ಏನು?” ಎಂದು ಕೇಳಿದಳು. “”ಇಷ್ಟೆ ತಾನೆ?” ಎಂದು ಕೆಲವರು ಬಣ್ಣದ ಗುಲಾಬಿಗಳನ್ನು ಗಾಡಿಗಳಲ್ಲಿ ಹೇರಿ ತಂದು ರಾಶಿ ಹಾಕಿದರು. ಇದು ಸರಿಯಾದ ಉತ್ತರವೆಂದು ರಾಜಕುಮಾರಿ ಒಪ್ಪಿಕೊಳ್ಳಲಿಲ್ಲ. ಅನೇಕರು ಹಲವು ವಿಧದಿಂದ ಉತ್ತರ ಹೇಳಲು ಯತ್ನಿಸಿದರೂ ರಾಜಕುಮಾರಿಗೆ ಸಮಾಧಾನ ಸಿಗಲಿಲ್ಲ.
ರಾಜ್ಯದ ಮೂಲೆಯಲ್ಲಿ ಕುರಿ ಮೇಯಿಸುವ ಒಬ್ಬ ಯುವಕ ಇದ್ದ. ಬರಗಾಲದ ಬವಣೆಯಿಂದ ಅವನ ಕುರಿಗಳೆಲ್ಲ ಸತ್ತುಹೋಗಿದ್ದವು. ಬದುಕಲು ಬೇರೆ ದಾರಿ ಇರಲಿಲ್ಲ. ಹಳ್ಳಿಯಲ್ಲಿ ನಡೆಯುವ ಮದುವೆಗಳಿಗೆ ಹೋಗಿ ಒಗಟುಗಳನ್ನು ಹೇಳಿ ಮನರಂಜಿಸಿ ಒಂದಷ್ಟು ಹಣ ಸಂಪಾದಿಸುತ್ತಿದ್ದ. ಆಗ ಯಾರೋ ಅವನಿಗೆ ರಾಜಕುಮಾರಿಯ ಒಗಟನ್ನು ಹೇಳಿದರು. “”ತುಂಬ ಬುದ್ಧಿವಂತನ ಹಾಗೆ ಕಾಣಿಸುತ್ತಿರುವೆ. ನೀನೇಕೆ ಈ ಒಗಟಿಗೆ ಉತ್ತರ ಹುಡುಕಿ ಅವಳ ಕೈ ಹಿಡಿಯಬಾರದು?” ಎಂದು ಕೇಳಿದರು. ಯುವಕ ತಲೆ ತುರಿಸಿಕೊಂಡ. ಉತ್ತರ ಹೊಳೆಯಲಿಲ್ಲ. ಹಳ್ಳಿಯಲ್ಲೊಬ್ಬ ಕುಶಾಗ್ರ ಮತಿಯಿರುವ ಮುದುಕನಿದ್ದ. ಅವನ ಬಳಿಗೆ ಹೋಗಿ ಒಗಟಿಗೆ ಉತ್ತರ ಕೇಳಿದ.
ಮುದುಕನು, “”ಇದು ಸುಲಭವಾದ ಒಗಟಲ್ಲ. ಇದರೊಳಗೆ ಏನೋ ಒಂದು ಗೂಢಾರ್ಥವಿದೆ. ಇಲ್ಲಿಂದ ತುಂಬ ದೂರದಲ್ಲಿ ಒಂದು ಸುಂದರವಾದ ಕೊಳವಿದೆ. ಅದಲ್ಲಿ ತುಂಬ ಮೀನುಗಳು ವಾಸವಾಗಿವೆ. ಈ ಮೀನುಗಳಲ್ಲಿ ದೊಡ್ಡ ಗಾತ್ರದ ಒಂದು ಮೀನಿಗೆ ಮನುಷ್ಯರಂತೆ ಮಾತನಾಡಲು ಗೊತ್ತಿದೆ. ಉಪಾಯವಾಗಿ ಅದನ್ನು ಹಿಡಿದುಕೊಂಡರೆ ಉತ್ತರ ಸಿಗಬಹುದು” ಎಂದು ಹೇಳಿದ.
ಯುವಕ ಬುತ್ತಿ ಕಟ್ಟಿಕೊಂಡು ತುಂಬ ದಿನಗಳ ಕಾಲ ಹಗಲಿರುಳೂ ನಡೆಯುತ್ತ ಆ ಕೊಳವನ್ನು ತಲುಪಿದ. ಬುತ್ತಿಯಿಂದ ಒಂದು ರೊಟ್ಟಿ ತೆಗೆದು ನೀರಿಗೆ ಇಳಿಸಿದ. ಬಣ್ಣಗಳಿಂದ ಹೊಳೆಯುತ್ತಿದ್ದ ದೊಡ್ಡ ಮೀನೊಂದು ರೊಟ್ಟಿ ತಿನ್ನುವ ಆಸೆಯಲ್ಲಿ ಬಳಿಗೆ ಬಂದಾಗ ಅದನ್ನು ತಟಕ್ಕನೆ ಹಿಡಿದುಕೊಂಡ. ಮೀನು ಮನುಷ್ಯರಂತೆ ಮಾತನಾಡುತ್ತ, “”ಯಾಕೆ ನನ್ನನ್ನು ಹಿಡಿದುಕೊಂಡೆ?” ಎಂದು ಕೇಳಿತು.
“”ನನಗೆ ನಿನ್ನನ್ನು ಕೊಲ್ಲುವ ಉದ್ದೇಶವಿಲ್ಲ. ಆದರೆ ರಾಜಕುಮಾರಿಯ ಒಂದು ಒಗಟಿಗೆ ಉತ್ತರ ಬೇಕು” ಎಂದು ಯುವಕ ಒಗಟನ್ನು ಮೀನಿಗೆ ಹೇಳಿದ. ಅದು, “”ಇದರ ಉತ್ತರ ನನಗೆ ಗೊತ್ತಿಲ್ಲ. ನೀನು ಸ್ವಲ್ಪ ಮುಂದಕ್ಕೆ ಹೋಗು. ಅಲ್ಲೊಂದು ದೊಡ್ಡ ಮರವಿದೆ. ಮರದಲ್ಲಿರುವ ಗೂಡಿನಲ್ಲಿ ಬಂಡೆಯಷ್ಟು ದೊಡ್ಡ ಗಾತ್ರದ ಮೊಟ್ಟೆಯಿದೆ. ಆಕಾಶದಷ್ಟು ಅಗಲದ ರೆಕ್ಕೆಯಿರುವ ಹಕ್ಕಿಯೊಂದು ಈ ಮೊಟ್ಟೆಯನ್ನಿರಿಸಿ ಆಹಾರ ತರಲು ಹೋಗಿದೆ. ಒಂದು ಹೆಬ್ಟಾವು ಮರವನ್ನೇರಿ ಮೊಟ್ಟೆಯನ್ನು ನುಂಗಲು ಸಿದ್ಧವಾಗಿದೆ. ನೀನು ಮೊಟ್ಟೆಯನ್ನು ಅದರಿಂದ ಉಳಿಸಿದರೆ ನಿನಗೆ ಒಗಟಿನ ಉತ್ತರ ಸಿಗಬಹುದು” ಎಂದು ಹೇಳಿತು.
ಯುವಕ ಮರದ ಬಳಿಗೆ ಹೋದ. ಭಾರೀ ಗಾತ್ರದ ಹೆಬ್ಟಾವು ಮೊಟ್ಟೆಯನ್ನು ನುಂಗಲು ಮುಂದಾಗಿತ್ತು. ಅದನ್ನು ಓಡಿಸಿ ಅವನು ಮೊಟ್ಟೆಯನ್ನು ಕಾಪಾಡಿದ. ಆಹಾರ ತರಲು ಹೋದ ಪಕ್ಷಿಯು ಮರಳಿ ಬಂದಿತು. ಯುವಕನಿಂದ ತನ್ನ ಮೊಟ್ಟೆ ಉಳಿದುದನ್ನು ತಿಳಿದು ಸಂತೋಷಪಡುತ್ತ, “”ಉಪಕಾರಕ್ಕೆ ಪ್ರತ್ಯುಪಕಾರ ಮಾಡುವುದು ಜೀವಿಗಳ ಧರ್ಮ. ನನ್ನಿಂದ ಏನು ಸಹಾಯ ಬೇಕು?” ಎಂದು ಕೇಳಿತು. ಯುವಕ, “”ರಾಜಕುಮಾರಿಯ ಒಗಟಿಗೆ ಉತ್ತರ ಬೇಕು” ಎಂದು ಹೇಳಿದ.
ಪಕ್ಷಿಯು, “”ಇಲ್ಲಿಂದ ಅನತಿ ದೂರದಲ್ಲಿ ಒಂದು ಕೋಟೆಯಿದೆ. ಅದರೊಳಗೆ ಒಂದು ಪಿಶಾಚಿಯು ವಾಸವಾಗಿದೆ. ರಾತ್ರೆ ಪಿಶಾಚಿ ಬೇಟೆಯಾಡಲು ಹೋಗುತ್ತದೆ. ನಾನು ನಿನ್ನನ್ನು ಕೋಟೆಯ ಬಳಿಗೆ ಕರೆದುಕೊಂಡು ಹೋಗುತ್ತೇನೆ. ಕೋಟೆಯೊಳಗೆ ಹೋಗಲು ಬಾಗಿಲುಗಳಿಲ್ಲ. ಗೋಡೆಯನ್ನು ಹತ್ತಿ ಒಳಗೆ ಹಾರಬೇಕು. ಅಲ್ಲಿ ನಿನ್ನ ಒಗಟಿಗೆ ಉತ್ತರ ಹೇಳುವ ವ್ಯಕ್ತಿ ಸಿಗುವುದು ಖಚಿತ. ನನ್ನ ಒಂದು ಗರಿಯನ್ನು ನಿನಗೆ ಕೊಡುತ್ತೇನೆ. ನನ್ನಿಂದ ಏನಾದರೂ ಸಹಾಯ ಬೇಕಿದ್ದರೆ ಆ ಗರಿಯನ್ನು ಸುಡಬೇಕು. ಅದರ ವಾಸನೆ ನನ್ನ ಮೂಗಿಗೆ ತಲುಪಿದ ತಕ್ಷಣ ಓಡಿಬರುತ್ತೇನೆ” ಎಂದು ಹೇಳಿತು. ಅವನನ್ನು ಬೆನ್ನ ಮೇಲೆ ಕೂಡಿಸಿಕೊಂಡು ಹಾರುತ್ತ ಕೋಟೆಯ ಬಳಿಗೆ ಬಂದಿತು.
ಯುವಕನು ಕೋಟೆಯ ಗೋಡೆಯನ್ನು ಕತ್ತಲಿನಲ್ಲಿಯೇ ಹತ್ತಿ ಒಳಗಿಳಿದ. ಕೋಟೆಯೊಳಗೆ ಪಂಜರಗಳಲ್ಲಿ ಬಂದಿಗಳಾಗಿ ಸುಂದರಿಯರಾದ ತುಂಬ ಮಂದಿ ಯುವತಿಯರು ರೋದಿಸುತ್ತ ಇದ್ದರು. ಅವರು ಅವನನ್ನು ಕಂಡು, “”ಯಾಕೆ ಇಲ್ಲಿಗೆ ಬಂದೆ? ಬೆಳಗಾಗುವಾಗ ಪಿಶಾಚಿ ಬಂದರೆ ನಿನ್ನ ಕತೆ ಮುಗಿದುಹೋಗುತ್ತದೆ” ಎಂದರು. ಯುವಕನು, “”ನಾನು ರಾಜಕುಮಾರಿಯ ಒಗಟಿಗೆ ಉತ್ತರ ಹುಡುಕಲು ಬಂದಿದ್ದೇನೆ. ನಿಮ್ಮಲ್ಲಿ ಒಬ್ಬರಿಗೆ ಅದರ ಉತ್ತರ ಗೊತ್ತಿದೆ. ಇದನ್ನು ಹೇಳಿದರೆ ಹೋಗಿಬಿಡುತ್ತೇನೆ” ಎಂದು ಹೇಳಿದ.
ಈ ಯುವತಿಯರಲ್ಲಿ ಒಬ್ಬಳು, “”ಈ ಒಗಟಿಗೆ ಉತ್ತರ ಗೊತ್ತಿರುವುದು ನನಗೊಬ್ಬಳಿಗೆ ಮಾತ್ರ. ಆದರೆ ನೀನು ಮೊದಲು ಅಲ್ಲಿರುವ ದೊಡ್ಡ ಮರವನ್ನೇರಿ ಅದರ ಕೊಂಬೆಗಳೊಳಗೆ ಅಡಗಿಸಿಟ್ಟ ಒಂದು ಕೊಂಬನ್ನು ಹುಡುಕಿ ಕೆಳಗೆ ತರಬೇಕು. ಬೆಳಗಾಗುವಾಗ ಪಿಶಾಚಿ ಗರ್ಜಿಸುತ್ತ ಬರುತ್ತದೆ. ಏನೂ ಭಯಪಡದೆ ಆ ಕೊಂಬನ್ನು ಕೈಯಿಂದ ಮುರಿದು ಹಾಕಬೇಕು” ಎಂದು ಹೇಳಿದಳು. ಯುವಕನು ಮರವೇರಿ ಕೊಂಬನ್ನು ಹುಡುಕಿ ಕೆಳಗೆ ತಂದ. ಅಷ್ಟರಲ್ಲಿ ಬೆಳಕು ಹರಿಯಿತು. ಪರ್ವತಾಕಾರದ ಪಿಶಾಚಿಯು ಗರ್ಜಿಸುತ್ತ ಬಂದಿತು. ಯುವಕನು ಧೈರ್ಯದಿಂದ ಕೊಂಬನ್ನು ಮುರಿದು ಹಾಕಿದ.
ಪಿಶಾಚಿಯು ನೆಲಕ್ಕೆ ಬಿದ್ದು ವಿಲಿವಿಲಿ ಒದ್ದಾಡತೊಡಗಿತು. ಯುವಕನೊಂದಿಗೆ, “”ಅಯ್ನಾ ಮನುಷ್ಯನೇ, ನನ್ನ ಜೀವ ಅಡಗಿದ್ದ ಕೊಂಬನ್ನು ಮುರಿದು ಹಾಕಿ ಸಾಯುವ ಸ್ಥಿತಿಗೆ ತಂದುಹಾಕಿದೆ. ನೆಗಾಲದಲ್ಲಾದರೂ ಒಂದು ಉಪಕಾರ ಮಾಡು. ತುಂಡಾಗಿರುವ ಕೊಂಬುಗಳನ್ನು ಅಕ್ಕಪಕ್ಕದಲ್ಲಿ ತಂದಿಡು” ಎಂದು ಬೇಡಿಕೊಂಡಿತು. ಯುವಕ ಹಾಗೆ ಮಾಡಲು ಮುಂದಾದ. ಆಗ ಪಂಜರದೊಳಗಿದ್ದ ಯುವತಿಯು, “”ಕೊಂಬುಗಳನ್ನು ಒಟ್ಟಿಗೆ ಇಡಬೇಡ. ಹಾಗೆ ಮಾಡಿದರೆ ಪಿಶಾಚಿ ಮೇಲೆದ್ದು ನಿನ್ನನ್ನು ಕೊಲ್ಲುತ್ತದೆ. ವಿರುದ್ಧವಾದ ಎರಡು ದಿಕ್ಕುಗಳಲ್ಲಿ ಹೊಂಡ ತೋಡಿ ಕೊಂಬಿನ ತುಂಡುಗಳನ್ನು ಅದರೊಳಗಿರಿಸಿ ಮಣ್ಣು ಮುಚ್ಚಿಬಿಡು” ಎಂದು ಕೂಗಿಕೊಂಡಳು. ಯುವಕ ಹಾಗೆಯೇ ಮಾಡಿದ. ಪಿಶಾಚಿಯು ಪ್ರಾಣ ಕಳೆದುಕೊಂಡಿತು.
ಯುವಕನು, “”ಎಲ್ಲ ಯುವತಿಯರನ್ನೂ ಪಂಜರದೊಳಗಿಂದ ಬಿಡುಗಡೆ ಮಾಡಬೇಕಿದ್ದರೆ ನನ್ನ ಒಗಟಿಗೆ ಉತ್ತರ ಸಿಗಬೇಕು” ಎಂದು ಹೇಳಿದ. ಆಗ ಅವನಿಗೆ ಪಿಶಾಚಿಯನ್ನು ಕೊಲ್ಲಲು ನೆರವಾದ ಯುವತಿಯು, “”ನನ್ನನ್ನು ರಾಜಕುಮಾರಿಯ ಬಳಿಗೆ ಕರೆದುಕೊಂಡು ಹೋಗು. ಒಗಟಿಗೆ ಉತ್ತರ ನಾನು ಹೇಳುತ್ತೇನೆ. ಹಾಗೆಯೇ ಬೇರೆ ಬೇರೆ ರಾಜ್ಯಗಳ ಈ ರಾಜಕುಮಾರಿಯರನ್ನೂ ಅವರವರ ರಾಜ್ಯಕ್ಕೆ ತಲುಪಲು ಸಹಾಯ ಮಾಡು” ಎಂದು ಹೇಳಿದಳು. ಯುವಕನು ಪಕ್ಷಿಯ ಗರಿಯನ್ನು ಸುಟ್ಟ. ಪಕ್ಷಿಯು ಹಾರುತ್ತ ಬಂದು ರಾಜಕುಮಾರಿಯರನ್ನು ಅವರ ರಾಜ್ಯಗಳಿಗೆ ಹೊತ್ತುಕೊಂಡು ಹೋಗಿ ಬಿಟ್ಟುಬಂದಿತು. ಬಳಿಕ ಯುವಕನನ್ನು ಯುವತಿಯೊಂದಿಗೆ ರಾಜಕುಮಾರಿಯ ಬಳಿಗೆ ಕರೆತಂದಿತು.
ಯುವತಿಯನ್ನು ಕಂಡ ಕೂಡಲೇ ರಾಜಕುಮಾರಿಯು ಹರ್ಷಾತಿರೇಕದಿಂದ ಬಳಿಗೆ ಓಡಿಬಂದು ಬಿಗಿಯಾಗಿ ಅಪ್ಪಿಕೊಂಡಳು. “”ನನ್ನ ತಂಗಿ, ಬಣ್ಣದ ಗುಲಾಬಿ ಅಂತೂ ಬಂದೆಯಾ? ಹೇಗೆ ಬಂದೆ, ಯಾರು ಕರೆತಂದರು?” ಎಂದು ಕೇಳಿದಳು. ಯುವತಿ ಯುವಕನ ಕಡೆಗೆ ಕೈ ತೋರಿಸಿದಳು. ರಾಜಕುಮಾರಿಯು ಅವನನ್ನು ಅಭಿನಂದಿಸಿ ದಳು. “”ಹೌದು. ಇದೇ ನನ್ನ ಒಗಟು. ನಾನು ಬಂಗಾರದ ಗುಲಾಬಿ, ಇವಳು ಬಣ್ಣದ ಗುಲಾಬಿ. ನಾವಿಬ್ಬರೂ ಅವಳಿ ಮಕ್ಕಳು. ತಂಗಿಯನ್ನು ಯಾವುದೋ ದುಷ್ಟಶಕ್ತಿ ಅಪಹರಿಸಿ ಕೊಂಡೊಯ್ದ ದಿನದಿಂದಲೂ ಅವಳಿಗಾಗಿ ಪರಿತಪಿಸುತ್ತಿದ್ದೆ. ಅವಳು ಮರಳಿ ಬರುವ ವರೆಗೂ ಮದುವೆಯಾಗುವುದಿಲ್ಲವೆಂದು ನಿರ್ಧರಿಸಿದ್ದೆ. ನನ್ನ ದುಃಖವನ್ನು ನೀಗಿಸಿದ ನಿನ್ನನ್ನು ನಾವಿಬ್ಬರೂ ಮದುವೆಯಾಗುತ್ತೇವೆ” ಎಂದು ಹೇಳಿದಳು. ಯುವಕ ಅವರನ್ನು ಮದುವೆಯಾದ. ಮುಂದೆ ಸಿಂಹಾಸನವನ್ನೇರಿ ಆ ರಾಜ್ಯವನ್ನಾಳಿದ.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.