ಆಡು ಕಡಿಯುವ ಮುದುಕ ಹೇಳಿದ ಚೇರಮಾನ್‌ ರಾಜನ ಕತೆ


Team Udayavani, Nov 3, 2019, 4:15 AM IST

nn-10

ಚಂಡಮಾರುತವೊಂದು ಮೂಡಿ ಮರೆಯಾಗಿ ಇನ್ನೇನು ಎಲ್ಲ ನಿಚ್ಚಳವೆಂದುಕೊಳ್ಳುವಾಗಲೇ ಇನ್ನೆಲ್ಲೋ ಕಡಲ ಕೊನೆಯಲ್ಲಿ ಮೂಡಿದ ನಿರ್ವಾತವೊಂದು ಸುಳಿಗಾಳಿಯಾಗಿ ಅದರ ಕಣ್ಣಿನ ಸುತ್ತ ಗಾಳಿಯಲೆಗಳು ಸೇರಿಕೊಂಡು ಅದೂ ಬರಬರುತ್ತ ಚಂಡಮಾರುತವಾಗಿ ಹಗಲನ್ನು ಕತ್ತಲೆಯಾಗಿಸಿ, ಇರುಳನ್ನು ಬೊಬ್ಬಿರಿವ ಕಡಲ ದನಿಯನ್ನಾಗಿಸಿ, ಇದೇನು ಯಾಕೆ ನಾನಿಲ್ಲಿರುವೆ ಇಲ್ಲಿ ಹೇಗೆ ಬಂದಿರುವೆ ಎಂದು ಏನೂ ಗೊತ್ತಾಗದೆ ಇರುಳು ಮಳೆಯಲ್ಲಿ ಒಂದಿಷ್ಟು ದೂರ ನಡೆದು ಬರುತ್ತೇನೆ. ಸಹಸ್ರ ಸಹಸ್ರ ವರ್ಷಗಳಿಂದ ಬಿರುಗಾಳಿ ಮಳೆಗೂ ಕಡಲ ಅಬ್ಬರಕ್ಕೂ ಮೈಯೊಡ್ಡಿ ಮಲಗಿರುವ ಈ ದ್ವೀಪ ಸಮೂಹಗಳಿಗೆ ಬಹುಶಃ ಸಾವಿರ ವರ್ಷಗಳ ಹಿಂದೆ ವಲಸೆ ಬಂದಿರಬಹುದಾದ ಇಲ್ಲಿನ ಜನರು ಇವೆಲ್ಲ ಮಾಮೂಲಿ ಎಂಬಂತೆ ನಕ್ಕು ಮುನ್ನಡೆಯುತ್ತಾರೆ. ಇವರು ಯಾರೂ ಜಾಸ್ತಿ ಮಾತನಾಡುವುದಿಲ್ಲ, ಹಾಸ್ಯ ಚಟಾಕಿಗಳನ್ನೂ ಜಾಸ್ತಿ ಹಾರಿಸುವುದೂ ಇಲ್ಲ. ಪ್ರಶ್ನೆಗಳಿಗೆ ಕ್ಲುಪ್ತವಾಗಿ ಉತ್ತರಿಸಿ ಮುಂದೆ ನಡೆಯುತ್ತಾರೆ. ಆದರೂ ನಾನು ಬಿಡದೆ ನನ್ನ ಅಸಂಖ್ಯ ಪ್ರಶ್ನೆಗಳಿಂದ ಅವರನ್ನು ಹಿಂಬಾಲಿಸುತ್ತೇನೆ. ಅವರಿಗೆ ಕಡಲ ಈಚೆ ಕರೆಯ ನಮ್ಮಂತಹ ಮನುಷ್ಯರೆಂದರೆ ಒಂದು ಬಗೆಯ ರೇಜಿಗೆ ಅನಿಸುತ್ತದೆ. ಶತಮಾನಗಳಿಂದ ಇಲ್ಲಿನ ಜನರನ್ನು ನಾನಾ ಕಾರಣಗಳಿಗಾಗಿ ಯಾಮಾರಿಸುತ್ತ ಬಂದ ಜನಸಮೂಹವೊಂದರ ಪ್ರತಿನಿಧಿಯೆಂಬಂತೆ ಅವರಿಗೆ ನಾನು ಕಾಣಿಸುತ್ತಿರಬಹುದೆಂದು ಅನಿಸಿದಾಗ ಅದನ್ನೆಲ್ಲ ಅವರಿಗೆ ವಿವರಿಸುವುದು ಕೊಂಚ ದಣಿವಿನ ಏಕತಾನತೆಯ ಕಾರ್ಯ ಅನಿಸುತ್ತದೆ. ಸುಮ್ಮನಾಗುತ್ತೇನೆ.

ಚಂಡಮಾರುತದ ಸೆರಗಂತೆ ಬೀಸುತ್ತಿರುವ ಗಾಳಿಯ ಸಮ್ಮೊಹನಕ್ಕೆ ಸಿಕ್ಕು ತೂಗುತ್ತಿರುವ ತೆಂಗಿನ ತಲೆಗಳು. ಕೇವಲ ಇನ್ನೂರು ಮೀ. ದೂರದಲ್ಲಿ ಅಬ್ಬರಿಸುತ್ತಿರುವ ಅರಬಿ ಕಡಲಿನ ಸದ್ದು. ನಡು ರಾತ್ರಿಯ ಸಣ್ಣಗಿನ ಇರುಚಲು ಮಳೆಯಲ್ಲಿ ಸೈಕಲು ಹತ್ತಿ ಕಡಲ ದಡಕ್ಕೆ ಹೋಗಿ ಕೂರುತ್ತೇನೆ. ಅಂತಹ ಇರುಳಲ್ಲಿ ನಿಮಿಷಕ್ಕೊಮ್ಮೆ ಮಿನುಗುವ ದ್ವೀಪಸ್ತಂಭದ ಬೆಳಕಲ್ಲಿ ಫ‌ಳಕ್ಕನೆ ಹೊಳೆಯುವ ಕಡಲ ಅಲೆಗಳು. ಪಕ್ಕದಲ್ಲೆಲ್ಲಿಂದಲೋ ಕೇಳಿಸುವ ಪಿಸುಪಿಸು ಮಾತು. ಬಹುಶಃ ಗಂಡು-ಹೆಣ್ಣುಗಳಿಬ್ಬರ ಪ್ರೇಮದ ಪಿಸು ನುಡಿಗಳು. ನನ್ನ ಸದ್ದಿಗೆ ಬೆದರಿ ಅಲ್ಲಿಂದ ಎದ್ದು ನಡೆಯಲು ತೊಡಗಿದ್ದಾರೆ. ದ್ವೀಪಸ್ತಂಭದ ಬೆಳಕು ಅವರಿಬ್ಬರ ಆಕೃತಿಗಳ ಮೇಲೆ ನಿಮಿಷಕ್ಕೊಮ್ಮೆ ಬೀಳುತ್ತಿದೆ. ಒಂದಿಷ್ಟು ದೂರ ನಡೆದು ಅವರು ಒಬ್ಬರನ್ನೊಬ್ಬರಿಂದ ಬೀಳ್ಕೊಳ್ಳುತ್ತಿದ್ದಾರೆ. ಆತನ ಕೊರಳನ್ನು ಬಳಸಿ ಆಕೆ ಆತನ ತುಟಿಗಳನ್ನು ಚುಂಬಿಸುತ್ತಿದ್ದಾಳೆ. ಆತ ಕಲ್ಲಂತೆ ನಿಂತಿದ್ದಾನೆ. ಬಹುಶಃ ಆಕೆ ಅಲ್ಲಿಂದ ಮುಂದಕ್ಕೆ ಒಬ್ಬಳೇ ನಡೆಯುತ್ತಾಳೆ. ಯಾವ ಸುಳಿಗಾಳಿ ಕಡಲ ಅಲೆ ಅಬ್ಬರಗಳಿಗೂ ಕ್ಯಾರೆನ್ನದ ಮನುಷ್ಯ ವಾಸನೆಯ ಜಿಗುಟು ಪ್ರೇಮಕಾಮಗಳು ಎಂದು ಸಣ್ಣಗಿನ ನಿಟ್ಟುಸಿರೊಂದನ್ನು ಹೊರಬಿಟ್ಟು ನಾನೂ ಎದ್ದು ನಿಲ್ಲುತ್ತೇನೆ. ದೂರದಿಂದ ಕಡಲ ಮೇಲಾಗಿ ಸಾಗಿ ಬರುತ್ತಿರುವ ಮಹಾಮಳೆಯೊಂದರ ಹೆಜ್ಜೆಗುರುತುಗಳ ಸದ್ದು ಇರುಳ ಮರಳ ಮೇಲೆ ಟಪಟಪ ಸದ್ದು ಹೊರಡಿಸುತ್ತದೆ. ಸೈಕಲ್ಲು ಹತ್ತಿ ಯಾವುದೋ ಸ್ಥಳೀಯ ಹಾಡೊಂದನ್ನು ಗುಣುಗುಣಿಸುತ್ತ ಪೆಡಲು ತುಳಿಯತೊಡಗುತ್ತೇನೆ. ಇರುಳ ಮಳೆಯಲ್ಲಿ ಬೆಳಕಿಲ್ಲದ ದಾರಿಯಲ್ಲಿ ಒಬ್ಬನೇ ಸಾಗುತ್ತಿರುವ ನಾನು ನೋಡಿದವರಿಗೆ ದೆವ್ವದಂತೆ ಕಾಣಿಸುತ್ತಿರಬಹುದು ಎಂದನ್ನಿಸಿ ನಗು ಬರುತ್ತದೆ. ಯಾರೂ ಗೊತ್ತಿಲ್ಲದ ಹಾದಿಯಲ್ಲಿ ಒಬ್ಬನೇ ನಡೆಯುತ್ತಿರಬೇಕು ಎನ್ನುವ ನನ್ನ ಬಹಳ ಪುರಾತನ ಆಸೆಯೊಂದು ಇಲ್ಲಿ ಈ ಅಪರಿಚಿತ ದ್ವೀಪದಲ್ಲಿ ಆಗಗೊಡುತ್ತಿರುವುದು ಕಂಡು ಒಳಗೊಳಗೇ ಚಕಿತನಾಗುತ್ತೇನೆ.

“ಸುಮಾರು ಸಾವಿರದ ಮುನ್ನೂರು ವರ್ಷಗಳ ಹಿಂದೆ ಈ ದ್ವೀಪಗಳು ನಮಗೂ ಅಪರಿಚಿತವಾಗಿದ್ದವು’ ಎಂದು ಈ ದ್ವೀಪದ ವಯಸ್ಸಾದ ಹಾಡುಗಾರರೊಬ್ಬರು ಕತೆ ಹೇಳಿದ್ದರು. ಹಾಗೆ ನೋಡಿದರೆ ಅವರು ಮೂಲತಃ ಹಾಡುಗಾರರಲ್ಲ. ಇಲ್ಲೊಂದು ಕಡೆ ಮೂರು ದಾರಿಗಳು ಸೇರುವ ಬಳಿ ತೆಂಗಿನ ಮರವೊಂದರ ಕೆಳಗೆ ಆಗೊಮ್ಮೆ ಈಗೊಮ್ಮೆ ಬೆಳೆದ ಆಡೊಂದರ ಕೊರಳು ಕೊçದು ಕತ್ತರಿಸಿ ಸಫಾಯಿ ಮಾಡಿ ಮಾರುತ್ತಾರೆ. ಆದರೆ, ಇವರು ಮೂಲತಃ ಕಸಾಯಿಗಾರರಲ್ಲ. ಬಾಡಿಗೆಗೆ ಕೋಣೆಗಳುಳ್ಳ ಕಟ್ಟಡವೊಂದರ ಮಾಲಕರು. ತೆಂಗಿನ ಮರಗಳೂ ಇವೆ ಇವರಿಗೆ. ಜೊತೆಗೆ ಹಳೆಯ ಕಾಲದಲ್ಲಿ ಹಾಯಿ ಹಡಗುಗಳನ್ನೇರಿ ದ್ವೀಪದಿಂದ ದ್ವೀಪಗಳಿಗೆ ಸಂಚರಿಸಿ ಮಣಿಸರಕುಗಳನ್ನು ಮಾರಿ ಬದುಕುತ್ತಿದ್ದರು. ಹಾಗಾಗಿ, ವ್ಯಾಪಾರಿಗಳೂ ಕೂಡ. ಬತ್ತಲು ದೇಹ. ಒಂದು ತುಂಡು ಪಂಚೆ. ಮುಖದಲ್ಲಿ ಗೇಣುದ್ದದ ಬಿಳಿಯ ಗಡ್ಡ. ಸೊಂಟದಲ್ಲಿ ಬೆಳ್ಳಿಯ ಡಾಬು ಮತ್ತು ತುಂಡು ಪಂಚೆಗೆ ಸಿಲುಕಿಸಿಕೊಂಡ ಹಲವು ಕೋಣೆಗಳ ಕೀಲಿ ಕೈಗಳು. ಇವರ ಕೈಬೆರಳುಗಳು ಸದಾ ಏನನ್ನೋ ಎಣಿಸುತ್ತ ಇರುವಂತೆ ಚಲಿಸುತ್ತಿರುತ್ತದೆ ಮತ್ತು ಇವರ ತಲೆ ಏನನ್ನೋ ಲೆಕ್ಕ ಹಾಕುತ್ತಿರುವಂತೆ ಅಲ್ಲಾಡುತ್ತಿರುತ್ತದೆ. “ನನ್ನನ್ನು ನೋಡಿದರೆ ಎಲ್ಲರೂ ಒಬ್ಬ ಪಿಸುಣ ಮುದುಕ ಎಂದುಕೊಂಡಿದ್ದಾರೆ ಇಲ್ಲಿ. ಆದರೆ ನಾನು ನಿಜವಾಗಿಯೂ ನಾನು ಎನ್ನುವುದು ಈ ದ್ವೀಪದವರಿಗೆ ಗೊತ್ತಿಲ್ಲ’ ಎಂದು ಅವರು ನಗುತ್ತಾರೆ.

ಅವರು ಹತ್ತಿರದ ಇನ್ನೊಂದು ದ್ವೀಪದವರು. ಕಳೆದ ಮೂವತ್ತು ವರ್ಷಗಳಿಂದ ಹೊಸ ಹೆಂಡತಿಯೊಂದಿಗೆ ಈ ದ್ವೀಪದಲ್ಲಿ ಬದುಕುತ್ತಿದ್ದಾರೆ. “”ಆ ದ್ವೀಪದ ಹಳೆಯ ಹೆಂಡತಿ ನನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಹದಿನೆಂಟು ವರ್ಷ ನನಗಾಗಿ ಕಾದಳು. ಆಮೇಲೆ ನಾನೇ ಅವಳ ಬಳಿ ತೆರಳಿ, “ನನಗಾಗಿ ಕಾಯಬೇಡ. ಬೇರೆ ಮದುವೆಯಾಗು’ ಎಂದು ಮುಂದೆ ನಿಂತು ಮದುವೆ ಮಾಡಿಸಿ ಬಂದೆ. ಅವಳ ಬಳಿ ನನ್ನ ಮಗನಿದ್ದಾನೆ. ಅವಳಿಗೂ ಮಕ್ಕಳಾಗಿದ್ದಾರೆ. ಎಲ್ಲರೂ ಯಾವಾಗಲೋ ಒಮ್ಮೆ ಬಂದು ನೋಡಿ ಹೋಗುತ್ತಾರೆ. ಅವಳು ನನ್ನನ್ನು ಜೀವಕ್ಕಿಂತ ಪ್ರೀತಿಸಿದರೆ ಇವಳು ನನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾಳೆ” ಎಂದು ಎರಡನೆಯ ಹೆಂಡತಿಯನ್ನು ತೋರಿಸುತ್ತಾರೆ. ಎರಡನೆಯ ಹೆಂಡತಿಗೂ ವಯಸ್ಸಾಗಿದೆ. ಏನೂ ಗೊತ್ತಾಗದವರ ಹಾಗೆ, ಆದರೆ ಏನೋ ಒಂದು ಗೊತ್ತಾದವರ ಹಾಗೆ ನಾಚಿಕೊಂಡು ತಲೆಯ ಮೇಲಿನ ಬಟ್ಟೆಯಿಂದ ಮುಖಮುಚ್ಚಿಕೊಂಡು ನಾಚಿಕೊಳ್ಳುತ್ತಾರೆ. ಈ ವಯಸಿನಲ್ಲೂ ನಾಚಿಕೊಳ್ಳುವ ಎರಡನೆಯ ಹೆಂಡತಿಗೆ, “”ಏ ಇವಳೇ. ಇವರಿಗೊಂದು ಖಾಲಿ ಟೀ ಮಾಡಿಕೊಡು” ಎಂದು ಆಜ್ಞಾಪಿಸುತ್ತಾರೆ.

“”ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹೆಂಡತಿಯನ್ನು ತೊರೆದು ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುವ ಈಕೆಯನ್ನು ಯಾಕೆ ಮದುವೆಯಾದಿರಿ?’ ’ ಎಂದು ನಾನು ಮುಲಾಜಿಲ್ಲದೆ ಕೇಳುತ್ತೇನೆ. “”ಆ ಕಥೆ ಆಮೇಲೆ. ಈಗ ನಾವು ಈ ಲಕ್ಷದ್ವೀಪಗಳಿಗೆ ವಲಸೆ ಬಂದ ಕಥೆಯನ್ನು ಕೇಳು, ಸಾಕು” ಎಂದು ಅವರು ಮುಂದುವರಿಸುತ್ತಾರೆ.

“”ಸುಮಾರು ಸಾವಿರದ ಮುನ್ನೂರು ವರ್ಷಗಳ ಹಿಂದೆ ಕೇರಳದ ಕೊಡಂಗಲ್ಲೂರಿನಲ್ಲಿ ಚೇರಮಾನ್‌ ಎಂಬ ರಾಜನೊಬ್ಬನಿದ್ದ. ನಾವೆಲ್ಲರೂ ಆತನ ಪ್ರಜೆಗಳಾಗಿದ್ದೆವು. ಬಹಳ ಒಳ್ಳೆಯ ರಾಜ ಆತ. ಆತನ ಮಹಾರಾಣಿಯೂ ಬಹಳ ಸುಂದರಿಯಾಗಿದ್ದಳು. ಆ ರಾಜ ಅಂತಿಂತಹ ರಾಜನಲ್ಲ. ರಾಜರಿಗೆ ರಾಜ. ಆತನ ಅಂಕಿತವಿಲ್ಲದೆ ಬೇರೆ ಯಾವ ರಾಜರ ಆಜ್ಞೆಗಳೂ ಊರ್ಜಿತವಾಗುತ್ತಿರಲಿಲ್ಲ. ಆತನ ಮಹಾರಾಣಿಯೂ ಅಷ್ಟೇ. ಮಹಾರಾಜ ಆಕೆಯ ಮುಖವನ್ನಲ್ಲದೆ ಬೇರೆ ಯಾವ ಹೆಂಗಸರ ಮುಖವನ್ನೂ ನೋಡುತ್ತಿರಲಿಲ್ಲ. ಅಂತಹ ಸುಂದರಿ ಅವಳು. ಆದರೆ, ಚೆಂದದ ಹಲ್ಲುಗಳ ನಡುವೆ ಹುಳುಕು ಹಲ್ಲೊಂದಿರುವಂತೆ ಆಕೆಗೂ ಒಂದು ಹುಳುಕು ಇತ್ತು” ಎಂದು ಅವರು ರಹಸ್ಯವಾದ ನಗುವೊಂದನ್ನು ನಕ್ಕರು. ಅಂತಹ ಹುಳುಕಗಳ ಕುರಿತು ಮಹಾ ಬಲ್ಲಿದನಂತೆ ನಾನೂ ಒಂದು ನಗೆ ಚೆಲ್ಲಿದೆನು. ಅವರೂ ಅರ್ಥಗರ್ಭಿತವಾಗಿ ನನ್ನ ಹಸ್ತವನ್ನೊಮ್ಮೆ ಹಿಸುಕಿದರು. ಆಗಲೂ ಕಂಪಿಸುತ್ತಿದ್ದ ಅವರ ಕೈ ಬೆರಳುಗಳು.

“”ಆ ಚೇರಮಾನ್‌ ರಾಜನ ಸುಂದರವತಿ ಮಹಾರಾಣಿಗೆ ರಾಜನ ವಜೀರನೊಬ್ಬನ ಮೇಲೆ ತಡೆಯಲಾರದ ಪ್ರೇಮ. ವಜೀರನಿಗಾದರೋ ರಾಜನನ್ನು ಕಂಡರೆ ನಡುಗುವಷ್ಟು ಭಯ. ಆಕೆ ಕಾಡಿದಳು. ಬೇಡಿದಳು. ಕಣ್ಣೀರು ಹಾಕಿದಳು. ಆತ ಕರಗಲಿಲ್ಲ. ಹತಾಶಳೂ, ಹಠದವಳೂ ಆದ ಆ ಮಹಾರಾಣಿ ವಜೀರನ ಮೇಲೆಯೇ ಮಹಾರಾಜನಿಗೆ ದೂರು ಹೇಳಿದಳು. “ರಾಜ ಮೃಗಯಾಯಾನಕ್ಕೆ ತೆರಳಿದ್ದಾಗ ತನ್ನ ಶೀಲದ ಮೇಲೆ ವಜೀರ ಕೈ ಹಾಕಿದನು’ ಎಂದಳು. ಕ್ರುದ್ಧನಾದ ಚೇರಮಾನ್‌ ರಾಜ ಮೂರು ಬೀದಿ ಸೇರುವಲ್ಲಿ ವಜೀರನ ತಲೆ ಕಡಿಯಲು ಆಜ್ಞಾಪಿಸಿದನು. ಇನ್ನೇನು ವಜೀರನ ತಲೆ ತುಂಡಾಗಿ ಬೀಳಬೇಕು ಅಷ್ಟರಲ್ಲಿ ಪಶ್ಚಿಮದ ಆಕಾಶದಲ್ಲಿ ನಕ್ಷತ್ರವೊಂದು ತುಂಡಾಗಿ ಕೆಳಗಿಳಿಯಿತು. ಆ ತುಂಡಿನ ನಡುವಿಂದ ನೂಲಿನ ಏಣಿಯೊಂದು ಕೆಳಗಿಳಿದು ಬಂದು ವಜೀರನನ್ನು ಎತ್ತಿಕೊಂಡು ಮೇಲಕ್ಕೆ ಒಯ್ದು ನಕ್ಷತ್ರಗಳ ನಡುವೆ ಕುಳ್ಳಿರಿಸಿ ಮಾಯವಾಯಿತು. ರಾಜನಿಗೆ ಅದೆಲ್ಲಿಂದಲೋ ಆ ಹೊತ್ತಲ್ಲಿ ವೈರಾಗ್ಯ ಮೂಡಿಬಿಟ್ಟಿತು. ಅದೇ ಹೊತ್ತಲ್ಲಿ ಅರಬೀ ದೇಶದಿಂದ ಬಂದ ವ್ಯಾಪಾರಿಗಳ ಹಾಯಿ ಹಡಗೊಂದು ಕಲ್ಲಿಕೋಟೆಯ ಬಂದರಿನಲ್ಲಿ ಬೀಡುಬಿಟ್ಟಿತ್ತು. ಚೇರಮಾನ್‌ ಮಹಾರಾಜ ತನ್ನ ಭಟರನ್ನು ರಹಸ್ಯವಾಗಿ ಕರೆದು ಆರಡಿ ಮೂರಡಿ ವಿಸ್ತೀರ್ಣದ ಮರದ ಪೆಟ್ಟಿಗೆಯೊಂದನ್ನು ಆ ಹಾಯಿ ಹಡಗೊಳಗೆ ರಹಸ್ಯವಾಗಿ ಒಯ್ದಿಡಲು ಹೇಳಿದ. ಇರುಳ ಕತ್ತಲಿನಲ್ಲಿ ಆ ಹಾಯಿ ಹಡಗನ್ನೇರಿ ಪೆಟ್ಟಿಗೆಯೊಳಗೆ ಅವಿತು ಮಲಗಿಕೊಂಡ. ಆ ಹಡಗು ಹಾಯಿ ಬಿಚ್ಚಿ ಹೊರಟಾಗ ತಾನೂ ಅದರೊಳಗಿದ್ದು ಅರಬೀ ದೇಶದ ಪವಿತ್ರ ಮಕ್ಕಾವನ್ನು ತಲುಪಿದ. ಅಲ್ಲಿ ತಲುಪಿದಾಗ ಪವಿತ್ರರಾದ ಮುಹಮ್ಮದ್‌ ನಬಿ ಪ್ರವಾದಿಗಳು ಅಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಅವರ ಪಾದಗಳಿಗೆ ಬಿದ್ದ ಚೇರನ್‌ ಮಹಾರಾಜ ತನ್ನ ಮಹಾರಾಣಿಯ ವಂಚನೆಯ ಕಥೆಯನ್ನೂ, ಆಕಾಶದಲ್ಲಿ ನಕ್ಷತ್ರವೊಂದು ತುಂಡಾಗಿ ಕೆಳಗಿಳಿದು ಬಂದ ವೃತ್ತಾಂತವನ್ನೂ ಅವರಲ್ಲಿ ಅರುಹಿ ತನಗೆ ಮೋಕ್ಷ ಕರುಣಿಸಬೇಕೆಂದು ಬೇಡಿಕೊಂಡ”

“”ಇತ್ತ ಕೊಡಂಗಲ್ಲೂರಿನ ಪ್ರಜೆಗಳು ರಾಜನಿಲ್ಲದೆ ಕಂಗಾಲಾಗಿ ಆತನನ್ನು ಹುಡುಕಿಕೊಂಡು ನೆಲಮಾರ್ಗವಾಗಿ , ಜಲಮಾರ್ಗವಾಗಿ ನಾನಾ ಕಡೆಗಳಲ್ಲಿ ಸಂಚರಿಸತೊಡಗಿದರು. ಹಾಗೆ ಅರಬಿ ಕಡಲಿನ ಮೇಲೆ ಹಾಯಿ ಹಡಗನ್ನೇರಿ ಪಶ್ಚಿಮ ದಿಕ್ಕಿಗೆ ಹೊರಟು, ದಾರಿಯಲ್ಲಿ ಸುಳಿಗಾಳಿಗೆ ಸಿಲುಕಿ, ಅನ್ನ ಆಹಾರವಿಲ್ಲದೆ ಬಳಲಿ ಕೊನೆಗೆ ಜಲಸರೋವರದ ನಡುವೆ ಈಗ ನೀನು ಓಡಾಡುತ್ತಿರುವ ಈ ದ್ವೀಪ ಸಮೂಹಕ್ಕೆ ಸಾವಿರದ ಮುನ್ನೂರು ವರ್ಷಗಳ ಹಿಂದೆ ಬಂದವರು ನಾವು” ಎಂದು ಅವರು ಕಥೆ ಮುಂದುವರಿಸಿದರು. ಅಷ್ಟರಲ್ಲಿ ಅವರ ಎರಡನೆಯ ಮಡದಿ ಕೈಯಲ್ಲಿ ಚಾ ಕಪ್ಪನ್ನೂ ಬಗೆಬಗೆಯ ತಿಂಡಿಗಳನ್ನೂ ಹಿಡಿದುಕೊಂಡು ಮುಖವನ್ನು ತಲೆವಸ್ತ್ರದಲ್ಲಿ ಬಹುತೇಕ ಮುಚ್ಚಿಕೊಂಡು ಟೇಬಲ್ಲಿನ ಮೇಲೆ ಇಟ್ಟು ಮತ್ತೆ ಕೋಣೆಯೊಳಕ್ಕೆ ಮರೆಯಾದರು. ಆ ಎರಡನೆಯ ಹೆಂಡತಿ ಬಂದು ಹೋದ ಮೇಲೆ ಅಲ್ಲಿ ಒಂದು ತರಹದ ಪರಿಮಳ ಸುಳಿದು ಇವರೂ ಒಂದು ಕ್ಷಣ ಕಣ್ಣುಮುಚ್ಚಿಕೊಂಡರು. ಒಮ್ಮೆ ಕಣ್ಣು ತೆರೆದು, “ನನ್ನನ್ನು ಜೀವದಂತೆ ನೋಡಿಕೊಳ್ಳುತ್ತಾಳೆ ಇವಳು’ ಎಂದು ಮತ್ತೂಮ್ಮೆ ಕಣ್ಣು ಮುಚ್ಚಿಕೊಂಡರು. ಎಲ್ಲರೂ ಇವರ ಕುರಿತು ಆಡುಗಳನ್ನು ಕಡಿದು ಹಣ ಎಣಿಸುವ ಮುದುಕ ಎಂದು ಆಡಿಕೊಳ್ಳುತ್ತಿದ್ದರೆ ಇವರು ಎರಡನೆಯ ಹೆಂಡತಿಯ ಪರಿಮಳಕ್ಕೆ ಕವಿಯಂತೆ ಕಣ್ಣು ಮುಚ್ಚಿಕೊಂಡು ಧ್ಯಾನಿಸುತ್ತಿದ್ದರು. ಇವರು ಮೊದಲ ಹೆಂಡತಿಯನ್ನು ತ್ಯಜಿಸಲು ಬಲವಾದ ಕಾರಣಗಳಿರಬೇಕು ಎಂದು ನಾನು ಯೋಚಿಸುವ ಮೊದಲೇ ಇವರು ಚೇರಮಾನ್‌ ಮಹಾರಾಜನ ಕಥೆಯನ್ನು ಹೇಳಿ ನನ್ನ ಬಾಯಿ ಮುಚ್ಚಿಸಿದ್ದರು.

ನಾನು ಇವರ ಬಳಿ ಬಂದ ಕಾರಣ ಬೇರೆಯೇ ಇತ್ತು. ಮಣಿಸರಕು ಸಾಮಗ್ರಿಗಳ ಹಾಯಿದೋಣಿಯ ವ್ಯಾಪಾರಿಯಾಗಿದ್ದ ಇವರು ಸುಮಾರು ಅರವತ್ತು ವರ್ಷಗಳ ಹಿಂದೆ ಹಾಯಿದೋಣಿಯೊಂದರಲ್ಲಿ ಮಂಗಳೂರಿನ ಹಳೆಯ ಬಂದರಿಗೂ ಬಂದಿದ್ದರಂತೆ. ಹಾಗೆ ಬಂದವರ ಹಾಯಿದೋಣಿ ಇದೇ ತರಹದ ಸುಳಿಗಾಳಿಯೊಂದಕ್ಕೆ ಸಿಲುಕಿ ದಿಕ್ಕುಪಾಲಾಗಿ ಕಡಲ ನಡುವೆ ದಿಕ್ಕುದೆಸೆಯಿಲ್ಲದೆಯೇ ತಿಂಗಳುಗಳ ಕಾಲ ಅಲೆದು ಕೊನೆಗೆ ಬೇಪೂರಿನ ಬಂದರು ತಲುಪಿತ್ತಂತೆ. ಅದು ತಲುಪುವ ಮೊದಲೇ ಹಸಿವು ತಾಳಲಾರದೆ ಹಲವರು ಸಹವ್ಯಾಪಾರಿಗಳು ಹಾಯಿದೋಣಿಯನ್ನು ತೊರೆದು ಹಲಗೆಗಳನ್ನು ಹಿಡಿದು ಕಡಲಿಗೆ ಜಿಗಿದು ಈಜಿ ದಡ ಸೇರಿ ದಿಕ್ಕಾಪಾಲಾಗಿ ಮಾಯವಾಗಿದ್ದರು. ಹಾಗೆ ಮಾಯವಾದವರಲ್ಲಿ ನಾನು ಹುಡುಕುತ್ತಿರುವ ಪಿಂಗಾಣಿ ಬಟ್ಟಲಿನ ಮಹಾನುಭಾವರೂ ಇದ್ದಿರಬಹುದು ಎಂಬುದು ನನ್ನ ಊಹೆಯಾಗಿತ್ತು. ಆ ಅರವತ್ತು ವರ್ಷಗಳ ಹಿಂದಿನ ಘಟನೆಗೂ ನನ್ನ ಬಾಲ್ಯದ ಮಹಾನುಭಾವರ ಜೀವಿತ ಕಥೆಗೂ ಎಲ್ಲೋ ತಾಳೆ ಹೊಂದುತ್ತಿದೆ ಅನ್ನಿಸಿ ನಾನು ಇವರ ಬೆನ್ನು ಹತ್ತಿದ್ದೆ. ಅದು ಯಾವುದರ ಸುಳಿವೂ ಗೊತ್ತಿಲ್ಲದ ಇವರು ನನ್ನೊಡನೆ ತಮ್ಮ ಜೀವಿತ ಕಥೆಯನ್ನೂ ಚೇರಮಾನ್‌ ಮಹಾರಾಜನ ವೃತ್ತಾಂತವನ್ನೂ ಅರುಹಿದ್ದರು. ಅದಾದ ಮೇಲೆ ಏನಾಯಿತು ಅನ್ನುವುದು ಮುಂದಿನ ವಾರ.

ಅಬ್ದುಲ್‌ ರಶೀದ್‌

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.