ಒಡಲುಗೊಂಡವರ ಕತೆ
Team Udayavani, Dec 31, 2017, 6:00 AM IST
ಎದೆಬಡಿತ ಜೋರಾಗಿತ್ತು. ಮೈ ನಡುಗಲಾರಂಭಿಸಿತ್ತು. ಬಾಯಿ ಒಣಗಿ ಮಾತು ಕಳೆದು ಹೋಗಿತ್ತು. ಮುಪ್ಪಾಗಿ ಮೂಲೆಗಂಟಿ ಮಲಗಿಕೊಂಡಿದ್ದ ತಾಯಿ ನಿಂಗಮ್ಮನ ರೋದನೆ ಕಿವಿಯನ್ನು ಹೊಕ್ಕರೂ, ಆ ಕಡೆ ನೋಡದಷ್ಟು ನಿತ್ರಾಣವಾಗಿ ರಾಮ ಕುಂತುಬಿಟ್ಟಿದ್ದ. ಸ್ವಲ್ಪ ಹೊತ್ತಿನ ಮುಂಚೆ ತಳವಾರ ನಾಗ ಬಂದು ಕರೆದು ಹೋದಾಗಿನಿಂದ ಒಂದೇ ಸಮನೆ ನಿಂಗವ್ವ ಎದೆ ಬಡಿದುಕೊಂಡು ಅಳುತ್ತಿದ್ದಳು. “ಏನಾಗಕಿಲ್ಲ ಬುಡಬೇ, ನಾನೇನು ಮಾಡಬಾರದ್ದು ಮಾಡಾಕ ಹೋಗಿದ್ದಿಲ್ಲ’ ಎಂದಷ್ಟೇ ರಾಮ ಸಣ್ಣ ಧ್ವನಿಯಲ್ಲಿ ಅಂದು ಸುಮ್ಮನೆ ಕುಂತಿದ್ದ. ನಿಂಗವ್ವ ಸ್ವಲ್ಪ ಹೊತ್ತು ಅತ್ತು, ಗೊಣಗುತ್ತ ಸುಮ್ಮನೆ ಮೇಲೆ ನೋಡುತ್ತ, ಜೋರಾಗಿ ಉಸಿರಾಡುತ್ತ ಮಲಗಿಕೊಂಡಿದ್ದಳು.
ಆರೇಳು ತಿಂಗಳಿಂದ ಹಾಸಿಗೆ ಹಿಡಿದಿದ್ದ ನಿಂಗವ್ವ ನಾಲ್ಕೈದು ದಿನದಿಂದ ಒಂದು ತುತ್ತೂ ಕೂಳು ಕಾಣದೆ ಈಗಲೋ ಇನ್ನು ಸ್ವಲೊ³ತ್ತಿಗೋ ಅನ್ನುವಷ್ಟು ಮೆತ್ತಗಾಗಿದ್ದಳು. “ಈ ಮುದೇಮೂಳ ಸಾಯೋತನಕ ಈ ಮನ್ಯಾಗ ನಾ ಇರಂಗಿಲ’É ಅಂತೆØೇಳಿ ರಾಮನ ಹೆಂಡ್ತಿ ಅಂಜಿನವ್ವ ತನ್ನೆರಡು ಮಕ್ಕಳನ್ನು ಕರೆದುಕೊಂಡೋಗಿ ತವರು ಮನೆ ಸೇರಿಬಿಟ್ಟಿದ್ದಳು. ರಾಮ ತನ್ನ ಹೆಂಡತಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿ ಸೋತು ಸುಮ್ಮನೆ ಆಗಿಬಿಟ್ಟಿದ್ದ. ಗೋಡೆಗೆ ಬೆನ್ನು ಆನಿಸಿಕೊಂಡು ಕುಂತಿದ್ದ ರಾಮನಿಗೆ ತಾನು ಅಲ್ಲಿರುವ ಪರಿವೆಯೇ ಇರಲಿಲ್ಲ. ಸಂಕಟವನ್ನೇ ಕುಡಿದು ಗುಟುಕರಿಸುತ್ತ ಮನೆಯ ಜಂತಿಗಳನ್ನು ನೋಡುತ್ತಿದ್ದ. ಮಣ್ಣಿನ ಮಾಳಿಗೆಯಿಂದ ಇರುವೆಗಳು ಜಂತಿಯಿಂದ ತೀರಿಗೆ, ತೀರಿನಿಂದ ಗೋಡೆಗೆ, ಗೋಡೆಯಿಂದ ನೆಲಕ್ಕೆ, ಸಾಲು ಸಾಲಾಗಿ ಸರತಿಯಲ್ಲಿ ತಿರುಗಾಡುತ್ತಿದ್ದವು. ಮೆತ್ತಗಾಗಿದ್ದ ನಿಂಗವ್ವ ಮುಲುಗಾಡುತ್ತ ಮೆಲ್ಲಗೆ, “ಯಪ್ಪಾ… ಶಿವನೇ…!’
ಅನ್ನುತ್ತ ರಾಮನ ಕಡೆಗೆ ಒಳಮಗ್ಗಲು ಹೊರಳಿ, “ಲೋ… ಒಂದು ತುತ್ತು ಅನ್ನ ಹಾಕೋ, ಇಲ್ಲಂದ್ರ ಸತ್ತು ಹೋಗ್ತಿàನಿ’ ಅನ್ನುತ್ತ ತೇಲುಗಣ್ಣು ಮಾಡಿ ಕಣ್ಣೀರು ಸುರಿಸಿದ್ದನ್ನು ನೋಡಿ ಕರುಳು ಕಿತ್ತುಬಂದು ಜೀವ ಹೋದಷ್ಟು ಸಂಕಟಗೊಂಡ ರಾಮ. ಎದ್ದು ಕ್ಷಣಹೊತ್ತು ದಂಗುಬಡಿದವರಂತೆ ಏನನ್ನೋ ಯೋಚಿಸುತ್ತ ನಿಂತ. ರೆಪ್ಪೆ ಮಿಟುಕಿಸಿದಾಗಲೇ ಕಣ್ಣೀರು ಕಪಾಳವನ್ನು ತೋಯ್ಸಿದ್ದು ಅರಿವಿಗೆ ಬಂತು. ಮತ್ತೆ ತಾಯಿಯ ಮುಖನೋಡಿ ನಿಟ್ಟುಸಿರು ಬಿಟ್ಟ. ನಾಲಿಗೆ ಮಾತನ್ನು ನುಂಗಿಬಿಟ್ಟಿrತ್ತು. ಕ್ಷಣ ಕಳೆಯುತ್ತಿದ್ದಂತೆ ಏನೋ ಹೊಳೆಯಿತು. ದಿಗ್ಗನೆ ಕಾಲುಗಳು ಹೊಸ್ತಿಲು ದಾಟಿದವು. ಹೆಜ್ಜೆಗಳು ಗೌಡನ ಮನೆದಾರಿ ಹಿಡಿದಿದ್ದವು. ಗೋಡೆಯಿಂದ ಇಳಿಯುತ್ತಿದ್ದ ಇರುವೆಗಳು ಅವನು ಕುಂತಿದ್ದ ಜಾಗವನ್ನು ಆಕ್ರಮಿಸಿದವು.
ಒಂದು ವಾರ ಆಗಿರಬಹುದು. ರಾಮ ಗೌಡನ ಮನೆಯ ದಾರಿಯನ್ನೇ ಮರೆತಿದ್ದ. ದಿನನಿತ್ಯವು ಗೌಡನ ಮನೆಯೇ ಹೊಟ್ಟೆ ತುಂಬಿಸುತ್ತಿತ್ತು. ದನಗಳ ಸೆಗಣಿ ಬಳಿಯುವುದರಿಂದ ಹಿಡಿದು, ಕಟ್ಟಿಗೆ ಕಡಿದು ಅಡುಗೆ ಮನೆಯಲ್ಲಿ ನಿಟ್ಟು ಒಟ್ಟುವವರೆಗೂ ಈತನ ಕೆಲಸ ನಡೆಯುತ್ತಿತ್ತು. ಇದಕ್ಕೆ ಗೌಡ ಮೂರೊØತ್ತು ಊಟ ಮತ್ತು ಇಂತಿಷ್ಟು ಅಂತ ಕೂಲಿಯನ್ನು ನಿಗದಿ ಮಾಡಿದ್ದ.
ಅಲ್ಲದೆ ನಿಂಗವ್ವನು ಹಾಸಿಗೆ ಹಿಡಿದಾಗಿನಿಂದ ಆಕೆಯ ಆಸ್ಪತ್ರೆ ಖರ್ಚಿಗೆ ಅಂತ ಮುಂಗಡ ಸಾಲವನ್ನೂ ಕೊಟ್ಟಿದ್ದ. ಮತ್ತೆ ಔಷಧ, ಅದು ಇದು ಅಂತ ಸಾಲ ಹೆಚ್ಚುತ್ತಲೇ ಇತ್ತು. ಇದಕ್ಕೆ, “”ಲೇ ರಾಮ ಬರೀ ಸಾಲಕ್ಕ ಸಾಲ ಮಾಡ್ತಿಯೋ, ಅದನ್ನು ತೀರಸಾಕ ಪ್ರಯತ್ನ ಮಾಡ್ತಿಯೋ. ನಿನಗೆ ನಾನು ಎಷ್ಟಂತ ಸಾಲ ಕೊಡಬೇಕ್ಲೇ? ಮಣ್ಣಗಿಕ್ಕ ಮುದುಕಿಗೆ ಅಷ್ಟಂತ ಯಾಕ ಖರ್ಚು ಮಾಡ್ತಿ. ಇನ್ಮೆàಲೆ ಒಂದು ನಯಾ ಪೈಸೆ ರೊಕ್ಕ ಕೇಳ್ಬೇಡ” ಅಂತ ಗೌಡ ಸಿಟ್ಟಲ್ಲೇ ಜೋರಾಗಿ ಹೇಳಿ ಕಳಿಸಿದ್ದ.
.
ಮಗನ ಮದುವೆ ಮಾಡಲು ಗೌಡ ತಯಾರಿ ನಡೆಸಿದ್ದ. ಅದಕ್ಕಾಗಿ ಆಳು, ಸಂಬಳದ ಆಳುಗಳಿಗೆ ವಿಪರೀತ ಕೆಲಸ ಹಚ್ಚಿದ್ದ. ರಾಮನಿಗೆ ನಾಗ, ಹುಲುಗನನ್ನು ಕರೆದುಕೊಂಡು ಹೋಗಿ ಮದುವೆ ಅಡುಗೆಗೆ ಕಟ್ಟಿಗೆ ಕಡಿಯಲು ಹೇಳಿ ಕಳಿಸಿದ್ದ.
ಮರುದಿನ ಊರಜನ ಕೆಲಸಕ್ಕೆ ಹೋಗುವ ಹೊತ್ತಿಗಿಂತ ಮುಂಚೆ ರಾಮ ಗೌಡನ ಹೊಲಕ್ಕೆ ಹೊರಟಿದ್ದ. ಜತೆಗೆ ನಾಗ, ಹುಲುಗ ಕೊಡ್ಲಿ, ಕುಡುಗೋಲು ಹಿಡಿದು ಹೊರಟಿದ್ದರು. ನಾಗ, ಹುಲುಗ ಅದು ಇದು ಮಾತಾಡುತ್ತ, ನಕಲಿ ಮಾಡುತ್ತ ಒಬ್ಬರಿಗೊಬ್ಬರು ತಳ್ಳಾಡಿಕೊಳ್ಳುತ್ತ ನಡೆಯುತ್ತಿದ್ದರು. ಅವರ ಹಿಂದೆ ಏನನ್ನೋ ಆಲೋಚನೆ ಮಾಡುತ್ತ ಮೆಲ್ಲಗೆ ಹೆಚ್ಚೆ ಹಾಕುತ್ತ ತನ್ನೊಳಗೆ ತಾನು ಹೊರಟಿದ್ದ ರಾಮ. ಊರು ದಾಟಿ ಫರ್ಲಾಂಗು ದಾರಿ ಸಾಗಿತ್ತು. “”ಲೇ ರಾಮ, ಇರುವೆ ಸಾಯಲಾರದಂಗ ನಡೆದ್ರ ಹೆಂಗಲೇ… ಜಲ್ದಿ, ಜಲ್ದಿ ಕಾಲು ಕಿತ್ತಿಡು. ಉಂಬೋತ್ನಾ$Âಗ ಹೊಲ ಮುಟಿ¤ಯೇನು?” ಅಂತ ಅನ್ನುತ್ತಲೇ ಅವರು ಮುಂದೆ ಸಾಗುತ್ತಿದ್ದರು. ಅವರ ಮಾತು ಕಿವಿಗೆ ಬಿದ್ದ ತಕ್ಷಣ ಎಚ್ಚೆತ್ತವನಂತೆ ರಾಮ ದಡದಡ ಹೆಜ್ಜೆ ಇಡಲಾರಂಭಿಸಿದನು. ನಾಲ್ಕೆಜ್ಜೆ ಸಾಗುತ್ತಿದ್ದಂತೆ ರಸ್ತೆಯ ಪಕ್ಕದ ಹೊಲದಿಂದ ಇದ್ದಕ್ಕಿದ್ದಂತೆ ಜೋರಾಗಿ ಶಬ್ದ ಬಂದು ಅಪ್ಪಳಿತು. ಆ ಕಡೆ ತಿರುಗಿ ನೋಡುವಷ್ಟರಲ್ಲಿ ಹೊಲದ ಬದುವಿನಿಂದ ರಸ್ತೆಗೆ ಹಾರಿ ಇವರ ಮೈ ಮೇಲೆಯೇ ಬಂದಂತಾಯ್ತು.
ಒಬ್ಬರಿಗೊಬ್ಬರು ಚೀರಿಕೊಳ್ಳುತ್ತ, ಹೆದರಿ ದೂರ ಓಡಿ ನಿಂತುಕೊಂಡರು. ಮೈ ಮರೆತು ನಡೆದುಕೊಂಡು ಹೋಗುತ್ತಿದ್ದ ರಾಮ ಜೋರಾಗಿ ಕಿರುಚುತ್ತ, ಅದನ್ನು ಗದರಿಸುತ್ತ ಓಡಿ ರಸ್ತೆಯ ಬದಿಗೆ ನಿಂತ. ಮೈ ನಡುಗಲಾರಂಭಿಸಿತ್ತು. ಮೈ, ಕೈ ಕೂದಲು ನೆಟ್ಟಗೆ ನಿಂತು ಕ್ಷಣದಲ್ಲಿಯೇ ಮೈ ಬೆವರೊಡೆದು ಬಿಟ್ಟಿತ್ತು. ಗೂಳಿ ತನ್ನ ರಭಸ ಕಮ್ಮಿ ಮಾಡಿಕೊಳ್ಳದೆ ಊರ ಕಡೆಗೆ ಓಡಲಾರಂಭಿಸಿತು. ಸ್ವಲ್ಪ ದೂರದಲ್ಲಿದ್ದ ನಾಗ, ಹುಲುಗ ಒಳಗಡೆ ಭಯವಿದ್ದರೂ ಅದನ್ನು ದೂರಮಾಡಿಕೊಂಡು ಜೋರಾಗಿ ನಗುತ್ತ ಇವನತ್ತ ಬಂದು ಇನ್ನೂ ಜೋರಾಗಿ ನಗುತ್ತ ಬೆನ್ನಿಗೆ ಒಂದೇಟು ಬಡಿದು, ಅವನನ್ನು ಹಿಡಿದು ಅಲುಗಾಡಿಸಿದಾಗಲೇ ರಾಮನಿಗೆ ಪ್ರಜ್ಞೆ ಬಂದಂತಾಗಿ ಮೆಟ್ಟಿಬಿದ್ದವರಂತೆ ಗಾಬರಿಗೊಂಡು, “ಥೂ ಇವನೌವ್ವನ. ಊರಾಗ ಇದನ್ನ ಯಾರೂ ಬಗ್ಗಿಸೋರೆ ಇಲ್ದಂಗಾತು ನೋಡು. ಸ್ವಲ್ಪದರಾಗ ತಪ್ಪಿಸಿಕೊಳ್ಳದಿದ್ರ ನನ್ನ ತೂರಿ ಒಗಿತಿತ್ತು’ ಎನ್ನುತ್ತ ಭಯದ ಬಿಂದಿಗೆ ಹೊತ್ತವರಂತೆ ಹೆಜ್ಜೆ ಹಾಕತೊಡಗಿದನು. ನಾಲ್ಕೆಜ್ಜೆ ಮುಂದೆ ಮುಂದೆ ಅವರಿಬ್ಬರು ನಡೆಯುತ್ತಿದ್ದರು.
ದಾರಿ ಒಂದು ಫರ್ಲಾಂಗು ಸರಿದಿರಬಹುದು. ಬೆನ್ನ ಹಿಂದಿನಿಂದ ಮೆಲ್ಲಗೆ ಕೇಳಿ ಬರುತ್ತಿದ್ದ ಶಬ್ದ ಜೋರಾಗಿ ಕೇಳಿಸತೊಡಗಿತು. ಅದು ಹತ್ತಿರ ಬರುತ್ತಿದ್ದಂತೆ ಮೂರು ಜನ ರಸ್ತೆಯ ಬದಿಗೆ ಸರಿದು ಅದಕ್ಕೆ ದಾರಿಬಿಟ್ಟು ಮುಂದೆ ನೋಡುತ್ತಲೇ ನಡೆಯುತ್ತಿದ್ದರು. ಇದ್ದಕ್ಕಿದ್ದಂತೆ ರಾಮನ ಬಳಿಗೆ ಬಂದು ಶಬ್ದ ಕಡಿಮೆ ಮಾಡಿಕೊಂಡು ಗಾಡಿ ನಿಂತಿತು. ರಾಮ ಹೌಹಾರಿದಂತೆ ಹೆದರಿ ತಿರುಗಿನೋಡಿದ. ಏನು ಮಾತಾಡಬೇಕೆಂಬುದು ತಿಳಿಯದೆ ಕ್ಷಣಹೊತ್ತು ದಂಗಾಗಿ ಆತನ ಮುಖವನ್ನು ನೋಡುತ್ತಲೇ ನಿಂತ.
“”ಗಾಡಿ ಹತ್ತಲೇ ರಾಮ. ರೇಷ್ಮೆ ಹುಳುಗಳಿಗೆ ತಪ್ಪಲು ಕೊಯ್ದು ಹಾಕೊದೈತಿ” ಗಾಡಿ ಎಕ್ಸ್‌ಲೀಟರ್ ತಿರುವುತ್ತಲೇ ಪಂಪಣ್ಣ ಅಂದ. ತಡವರಿಸುತ್ತ, “”ಇಲ್ಲಪ್ಪೋ ಧಣಿ, ಗೌಡ್ರ ಹೊಲಕ್ಕ ಹೊಂಟೀನಿ, ಕಟ್ಟಿಗೆ ಕಡಿಯೋದೈತಿ” ರಾಮ ಅನ್ನುತ್ತಿದ್ದಂತೆ ಮಾತು ಕಸಿದುಕೊಂಡು, “”ಲೇ, ಅರವು ಇಲ್ಲದವೆ°à, ನಿನಿಗೆ ರೊಕ್ಕ ಕೊಡಕಾರನೇ ಹೇಳಿನೋ ಇÇÉೋ. ನಾ ಕರದಾಗ ಕೆಲಸಕ್ಕ ಬರಬೇಕಂತ. ಈಗ ಅಲ್ಲಿ ಹೋಕೀನಿ, ಇಲ್ಲಿ ಹೋಕೀನಿ ಅಂತಾ ರಾಗ ತೆಗೀತಿಯೇನು? ಈಗ ಗಾಡಿ ಹತ್ತತ್ಯಾ ಏನಂಬತಿ” ಜೋರು ಜಬರಿಸಿದ ಪಂಪಣ್ಣನ ದನಿಗೆ ರಾಮನ ಎದೆ ಧಸ್ಸಕ್ಕೆಂದಿತು. ಕುಗ್ಗಿ ಹೋದಂತಾಗಿ ಏನೂ ಮಾತಾಡಲಾಗದೆ ಸುಮ್ಮನೆ ತಲೆಬಗ್ಗಿಸಿ ನಿಂತುಬಿಟ್ಟ. ಊರಲ್ಲಿ ಪಂಪಣ್ಣ ಬೆಳೆಸಿಕೊಂಡಿದ್ದ ವರ್ಚಸ್ಸಿನ ಅರಿವು ಇದ್ದ ನಾಗ, ಹುಲುಗರ ಬಾಯಿ ಏಳದಂತೆ ಬಿಗಿಯಾಗಿ ಮುಚ್ಚಿಕೊಂಡು ಬಿಟ್ಟಿದ್ದವು. ಮುಂದಡಿ ಇಡಲಾರದೆ ಒಂದೆಜ್ಜೆ ಹಿಂದೆ ಸರಿದು ರಾಮನನ್ನೇ ನೋಡುತ್ತ ಅವರಿಬ್ಬರೂ ನಿಂತೇ ಬಿಟ್ಟಿದ್ದರು. ಏನು ಮಾಡಬೇಕೆಂದು ತೋಚದೆ ರಾಮ ಮೆಲ್ಲಗೆ ಹೆಜ್ಜೆ ಇಡುತ್ತ ಹತ್ತಿರಬಂದು ಗೋಣು ಎತ್ತಿ ನೋಡಿದ. ಮುಖ ಗಂಟು ಹಾಕಿಕೊಂಡು ಕಣ್ಣು ಬಿಡುತ್ತ, ಎಕ್ಸ್‌ಲೀಟರ್ ತಿರುವುತ್ತ ಗಾಡಿಯ ಮೇಲೆ ಕುಂತಿದ್ದ ಪಂಪಣ್ಣ ವೀರಭದ್ರ ದೇವರು ಮೈಮೇಲೆ ಬಂದ ಪೂಜಾರಿಯಂತೆ ಕಂಡು ಹೆದರಿಕೊಂಡವರಂತೆ ಸುಮ್ಮನೆ ಗಾಡಿಯೇರಿ ಕುಂತ.
ಸೂರ್ಯ ಮುಳುಗಿ ತಾಸೊತ್ತಾಗಿತ್ತು. ಮೆಲ್ಲಗೆ ಕತ್ತಲು ಬಂಗಾರದ ಬಣ್ಣವನ್ನು ನುಂಗುವಂತೆ ಇಳಿಯುತ್ತಿತ್ತು. ಕಾಲು ಚಾಚಿಕೊಂಡು ಗೋಡೆಗೊರಗಿ ಬಾಗಿಲಕಡೆ ಮುಖಮಾಡಿಕೊಂಡು ರಾಮ ಕುಂತಿದ್ದ. ದೂರದಲ್ಲಿ ಯಾರೋ ಬರುತ್ತಿದ್ದದು ಕಂಡಿತು. ದಿಟ್ಟಿಸಿ ನೋಡುತ್ತಿದ್ದಂತೆ ಮೆಲ್ಲಗೆ ನಾಗ ಬರುತ್ತಿದ್ದುದು ಸ್ಪಷ್ಟವಾಯಿತು. ಸಣ್ಣಗೆ ಎದೆಯೊಳಗೆ ಗಾಬರಿಯಾಗುತ್ತಿತ್ತು. ಸೀದಾ ರಾಮನ ಅಂಗಳಕ್ಕೆ ಬಂದ ನಾಗ, “”ಲೇ ರಾಮ, ಗೌಡ್ರು ಕರೀರಿತಾರ ಬಾ” ಎಂದ. ಗಾಬರಿ ಜಾಸ್ತಿಯಾಗಿ ಭಯ ಹೆಚ್ಚುತ್ತಲೇ ಇತ್ತು. ತಡವರಿಸುತ್ತ, “”ಎದಕ ನಾಗಣ್ಣ?” ಎಂದು ಕೇಳುತ್ತ ಕುಂತಲ್ಲಿಂದ ಎದ್ದು ಅಂಗಳಕ್ಕೆ ಬಂದ.
“”ಯಾರಿಗೊತ್ತಲೇ? ಗೌಡ ಅವನ್ನ ಕರಕಂಬೋಗು ಅಂದ, ಅದಕ್ಕಾ ಬಂದೆ” ಎಂದ. “”ಹೌದಾ ಬರಿ¤ನಣ್ಣಾ…!” ಎಂದು ಒಂದೆರಡು ಹೆಜ್ಜೆ ಮುಂದೆ ಇಟ್ಟನು. ಏನೋ ನೆನಪಾದವನಂಗೆ ಹಿಂದಕ್ಕೆ ತಿರುಗಿ ನಿಂಗವ್ವನ ಕಡೆ ನೋಡಿದನು. ನಾಗ ಬೀಡಿ ಸೇದುತ್ತ¤ ನಾಲ್ಕೆಜ್ಜೆ ಮುಂದೆ ಇದ್ದನು. ಹಿಂದಿನಿಂದ ರಾಮ ಜೋತಾಡಿಕೊಂಡು ನಡೆಯುತ್ತಿದ್ದನು. ಜೋರಾಗಿ ನಾಗ, “”ಯಾಕಲೇ ರಾಮ, ಧಣಿ ಸಿಟ್ಟಿಗೆ ಬಂದಂಗಿತ್ತು” ಅಂತ ಅನ್ನುತ್ತ ಹೆಜ್ಜೆ ನಿಧಾನಿಸಿದ. ರಾಮ ಏನೂ ಮಾತಾಡದೆ ಸುಮ್ಮನೆ ನಡೆಯುತ್ತಿದ್ದನು. ಮನಸ್ಸಿನೊಳಗೆ ಭಯ ಜೋರಾಗಿ ಎದ್ದಿತ್ತು. ಧಣಿ ಮುಂದೆ ಏನು ಹೇಳಬೇಕೆಂದು ತಿಳಿಯದೆ ಒ¨ªಾಡುತ್ತಿದ್ದನು.
ರಾಮ ಮೆತ್ತಗಾಗಿಬಿಟ್ಟಿದ್ದ. ಹೆಜ್ಜೆ ಹೆಜ್ಜೆಗಳು ಒಜ್ಜೆಯಾಗಿಬಿಟ್ಟಿದ್ದವು. ಮೆಲ್ಲಗೆ ಬರುತ್ತಿದ್ದ ರಾಮನಿಗೆ ತನ್ನ ಜೀವ ಕಣ್ಣಿಗೆ ಕಾಣಿಸುತ್ತಿತ್ತು. ಗೌಡನ ಮನೆಗೆ ಸಮೀಪಿಸುತ್ತಿದ್ದಂತೆ ಕೈಕಾಲುಗಳು ಸತವು ಕಳೆದುಕೊಂಡು ಆ ಕಡೆ ಈ ಕಡೆ ಎಳೆದಾಡುತ್ತಿದ್ದವು. “”ಲೇ ಹುಚ್ಚು ಸೂ… ಮಕಾÛ, ನಮ್ಮ ಮನೆ ಎತ್ತು, ಕಣ್ಣಿ ಹರಕೊಂಡು ಬೇರೆಯವರ ಹೊಲ ಮೇಯಾಕ ಹೊಕ್ಕಾತಿ ಅಂದ್ರ ಏನಲೇ ಅದು. ಗೌಡನ ಬಾಳೇವು ಬಂದೋಬಸ್ತ್ ಇÇÉಾಂತಾ ತಿಳಿದಿರೇನು?” ಎಂದು ಆಳುಗಳನ್ನು ಗದರಿಸುತ್ತಿದ್ದುದು ಕಿವಿಗೆ ಬಡಿದ ತಕ್ಷಣ ಮೆಟ್ಟಿಬಿದ್ದ ರಾಮ ದಡಬಡ ಹೆಜ್ಜೆ ಇಟ್ಟು ಗೌಡನ ಮನೆಯಂಗಳಕ್ಕೆ ಬಂದು ನಿಂತ. ಮನೆಯ ತಲಬಾಗಿಲ ಅಕ್ಕಪಕ್ಕದಲ್ಲಿದ್ದ ದೊಡ್ಡ ಕಟ್ಟೆಯ ಮೇಲೊಂದರಲ್ಲಿ ಕುಂತು ಕಣ್ಣುಗಳನ್ನು ಅಗಲಿಸಿ ಇವನನ್ನು ನೋಡಿದ ತಕ್ಷಣ ರಾಮನಿಗೆ ಗೌಡನ ಮುಖ ಗುದ್ದಬಾಕು ಹಿಡಿದುಕೊಂಡು ಚೀರಾಡುತ್ತಿದ್ದ ಕರಿಯಮ್ಮನ ಪೂಜಾರಿಯನ್ನೇ ನೆನಪಿಸಿತ್ತು. ಕರಿಯಮ್ಮ ಮೈಮೇಲೆ ಬಂದಾಳಂತ ಊರವರೆಲ್ಲ ಹೆದರಿ ದೂರ ಸರಿದು ನಿಲ್ಲುವಂತೆ. ರಾಮ ಒಂದೆರಡು ಹೆಜ್ಜೆ ಹಿಂದೆ ಸರಿದು ಕಂಬದ ಮರೆಗೆ ನಿಂತನು.ಹುಲುಗ, ನಿಂಗ ನಿಂತಿದ್ದ ಕಡೆಗೆ ನಾಗ ಹೋಗಿ ನಿಂತುಕೊಂಡನು. ಸಣ್ಣಗೆ ಮೌನ ಕುಣಿಯುತ್ತಿತ್ತು.
“”ಏನ್‌ಲೇ ಹಲ್ಕಟ್ ಸೂ… ಮಗನೆ, ಹೊಟ್ಟೆಗೆ ಅನ್ನ ತಿಂತಿಯೋ ಇÇÉಾ ಸಗಣಿ ತಿಂತಿಯೋ? ನಾಳೆ ಬೆಳಕು ಹರಿಯುದರೊಳಗೆ ನಾನು ಕೊಟ್ಟಿರೊ ಸಾಲ ಚುತ್ತ ಮಾಡಿ ಎಲ್ಲಿಗಾರ ಆಳಾಗೋಗು” ಸಿಟ್ಟಲ್ಲೇ ಅವನನ್ನು ತಿವಿಯುವವನಂತೆ ಗೌಡ ದಿಟ್ಟಿಸುತ್ತ ಅಂದ.
ರಾಮನಿಗೆ ಸಂಕಟ ಹೆಚ್ಚಾಗಿ ಮುಖ ಮುದುಡಿಕೊಂಡು ಬಗ್ಗಿದ್ದ ಗೋಣು ಮೇಲೇಳಲೇ ಇಲ್ಲ. ಅಮ್ಮಂದು ಅಮ್ಮಗಾದ್ರ, ಮೊಮ್ಮಗಳಿಗೆ ಮಿಂಡ್ರ ಚಿಂತೆ ಅಂತೆ, ನಿನಿಗೆ ಮುಕಾÛಗ ತೆಗವು ಮಾಡತೈತೆ ಅದಕ್ಕಾ…! ರಾಮ ಸಿಡಿಲು ಬಡಿದವರಂತೆ ಕರಗಿ ಬಿಟ್ಟಿದ್ದ. ನಾಲಗೆ ಮಿಸುಕಾಡದೆ ಅಡಗಿ ಬಿಟ್ಟಿತ್ತು. ಹುಲುಗ, ನಾಗ, ನಿಂಗ ಏನೂ ಮಾತಾಡದೆ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತ, ಒಮ್ಮೊಮ್ಮೆ ರಾಮನ ಮುಖವನ್ನು, ಗೌಡನ ಮುಖವನ್ನು ನೋಡುತ್ತ ನಾಲಿಗೆ ಕಚ್ಚಿಕೊಂಡು ಸಂಕಟ ಪಡುತ್ತ ನಿಂತು ಕೊಂಡಿದ್ದರು. ಸಿಡಿಲಿನ ನಂತರದ ನಿಶ್ಶಬ್ದವನ್ನು ಸೀಳಿ ಭಯ ರಾಮನಲ್ಲಿ ಸದ್ದು ಮಾಡುತ್ತಿತ್ತು. ಮನೆ ಒಳಗಿನಿಂದ ಏನೋ ಶಬ್ದ ಬಂದಂತಾಯಿತು. ಎಲ್ಲರೂ ಆ ಕಡೆ ತಿರುಗಿ ನೋಡಿದರು. ಪಡಸಾಲೆಯಲ್ಲಿದ್ದ ಗೌಡಸಾನಿಯ ಕೈಯಿಂದ ಅಡಕಲ ಗಡಿಗೆಯೊಂದು ಬಿದ್ದು ಒಡೆದು ಸದ್ದು ಮಾಡಿತ್ತು. ಇದ್ದಕ್ಕಿದ್ದಂತೆ ರಾಮನಿಗೆ ತನ್ನವ್ವ ನೆನಪಿಗೆ ಬಂದಳು.
ಕಣ್ಣುಗಳನ್ನು ತುಂಬಿಕೊಂಡೇ, “”ನಮೌ¾ವ್ವಗ ಬಾಳ ಹೆಚ್ಚು ಕಮ್ಮಿ ಆಗಿತ್ತಪ್ಪೊ ಧಣಿ”
“”ಅದಕ್ಕಾ… ಪಂಪಣ್ಣ ದಣಿತಾಕ… ಹೋಗಲೆ… ಅವನತಾಕ ದುಡಿ ಹೋಗು. ಇನ್ಮುಂದೆ ನನ್ನ ಮನ್ಯಾಗಾ ನೀನು ದುಡಿಯದೆ ಬ್ಯಾಡ. ಅವನಿಗೈತ್ಯಾ, ನನಿಗೈತ್ಯಾ ನೋಡೆ ಬುಡುತು°” ಎಂದು ಬಿರುಸಿಲೆ ಕುಂತಲ್ಲಿಂದ ಎದ್ದು ದಡದಡ ಹೆಜ್ಜೆಯಿಡುತ್ತ ಮನೆ ಒಳಕ್ಕೆ ನಡೆದನು. ಗೌಡಸಾನಿ ಮುಖ ಸಣ್ಣಗೆ ಮಾಡಿಕೊಂಡೇ ಕೆಳಗೆ ಬಿದ್ದು ಚೆಲ್ಲಿದ್ದ ಅನ್ನವನ್ನು ಬಳಿಯುತ್ತಿದ್ದಳು. ರಾಮನಿಗೆ ಮತ್ತು ನಿಂಗವ್ವನಿಗೆ ಅನ್ನ ಕೊಡಲಾಗಲಿಲ್ಲವಲ್ಲ ಎಂದು ಒಳಗೇ ಮರುಗುತ್ತ ರಾಮನ ಕಡೆಗೆ ನೋಡದೆ ಅಡುಗೆ ಮನೆಯತ್ತ ಹೆಜ್ಜೆ ಸರಿಸಿದಳು.
.
ಒಂದೆ ಸಮನೆ ಮುದುಕಿ ನಿಂಗವ್ವ ವದರುತ್ತಿದ್ದಳು. ವದರಿ ವದರಿ ದನಿ ಉಡುಗಿ ಹೋಗಿತ್ತು. ದೇಹವೆಂಬ ದೇಹವೇ ಒಣಗಿದ ಕಟಗಿಯಂತಾಗಿತ್ತು. ಹೊಟ್ಟೆ ಎಂಬುದು ಬೆನ್ನಿಗಂಟಿ ಜೋರಾಗಿ ಕೂಗಲು ಕಸುವು ಇಲ್ಲದಂತಾಗಿತ್ತು. ಕಣ್ಣೀರು ನಿಲ್ಲದೆ ಸಮಾನವಾಗಿ ಹರಿಯುತ್ತಿತ್ತು.
ನಾಲ್ಕೈದು ದಿನದಿಂದಲೂ ಒಂದು ಅಗಳು ಅನ್ನ ಕಾಣದೆ ಕಬ್ಬಕ್ಕಿಯಂತೆ ಬಾಯಿ ಬಿಡುತ್ತಿದ್ದಳು. ಒಂದು ತುತ್ತು ಅನ್ನ ಹಾಕಲಾಗದೆ ಕಂಗಾಲಾಗಿ ರಾಮ, ತಾಯಿಯ ಮುಂದೆ ಕುಂತು ಬಿಕ್ಕಿ ಬಿಕ್ಕಿ ಅಸಹಾಯಕನಂತೆ ಅಳುತ್ತಿದ್ದನಷ್ಟೆ. ಈಚೆಗೆ ತಾಯಿ ಹಾಸಿಗೆ ಹಿಡಿದಾಗಿನಿಂದ ಇಬ್ಬರಿಗೆ ಗೌಡನ ಮನೆಯೇ ಅನ್ನ ಒದಗಿಸುತ್ತಿತ್ತು. ಗೌಡಸಾನಿಯಂತೂ ಸ್ವಂತ ಮಗನಂತೆ ರಾಮನನ್ನು ಕಾಣುತ್ತಿದ್ದಳು. ಅವನ ಹೊಟ್ಟೆ ತುಂಬಿಸಿ ನಿಂಗವ್ವನಿಗೂ ಕಟ್ಟಿ ಕೊಡುತ್ತಿದ್ದಳು.
ಇದ್ದಕ್ಕಿದಂತೆ ರಾಮ ಎದ್ದು ಹೊರಟನು, ಮುದುಕಿ ಕಣ್ಣಿನಿಂದಲೇ ಏನೋ ಸನ್ನೆ ಮಾಡಿದಂತೆ ಕಾಣಿಸಿತು. “ಇವತ್ತು ಏನರಾ ಆಗ್ಲಿ. ಒಂದು ದಾರಿ ಮಾಡ್ತಿನಿ’ ಅನ್ನುತ್ತ ಒಳ ಹೋಗಿ ಒಂದು ಚೊಂಬು ಗಡಿಗೆಯಿಂದ ನೀರು ತುಂಬಿಕೊಂಡು ಗಟಗಟ ಅಂತ ಕುಡಿದು ಡಣಕ್ಕನೆ ಇಟ್ಟು, ದಡಬಡ ಹೆಜ್ಜೆಹಾಕಿ ಅಂಗಳ ದಾಟಿದ. ತಲೆಯ ತುಂಬ ಏನೇನೋ ಆಲೋಚನೆಗಳು ಹೊಕ್ಕವು. ಏನು ಮಾಡಬೇಕೆಂದು ತಿಳಿಯದೆ ಮನಸ್ಸು ಗೊಂದಲಗೊಂಡುಬಿಟ್ಟಿತ್ತು. ಒಮ್ಮೆ ಪಂಪಣ್ಣ, ಮತ್ತೂಮ್ಮೆ ಗೌಡ. ಅವನಿಗೆ ದಾರಿ ಅÇÉಾಡುವಂತೆ ಕಾಣುತ್ತಿತ್ತು. ಸ್ವಲ್ಪ ದೂರ ಸಾಗುತ್ತಿದ್ದಂತೆ ಗೌಡಸಾನಿ ನೆನಪಾದಳು. ಗೌಡನ ಮನೆದಾರಿ ಹಿಡಿಯಲು ಮನಸ್ಸು ಹಿಂಜರಿಯುತ್ತಿತ್ತು. ಸಣ್ಣಗೆ ಧೈರ್ಯ ತಂದುಕೊಂಡು ಆ ಕಡೆಯೇ ನಡೆಯತೊಡಗಿದ. ಬೇಡ ಬೇಡವೆಂದರೂ, ಮರೆಯಲು ಪ್ರಯತ್ನಿಸುತ್ತಿದ್ದರೂ ಗೌಡನ ಮಾತು ಮನಸ್ಸನ್ನು ಗಿರ್ ಅನ್ನಿಸುತ್ತಿತ್ತು. ಆಲೋಚನೆ ಮಾಡುತ್ತಲೇ ಪ್ರಜ್ಞೆತಪ್ಪಿ ನಡೆಯುತ್ತಿದ್ದ. ಗೌಡನ ಮನೆಯಂಗಳಕ್ಕೆ ಬಂದಾಗಲೇ ಮೈಮೇಲೆ ಖಬರು ಬಂದಂತಾಯಿತು. ಸ್ವಲ್ಪ ನಿಂತು ಆ ಕಡೆ ಈ ಕಡೆ ನೋಡಿದ. ಯಾರೂ ಕಾಣಲಿಲ್ಲ. ಗೌಡನ ಸುಳಿವು ಇರಲಿಲ್ಲ. ಸಣ್ಣಗೆ ಕೆಮ್ಮಿ ಮತ್ತೆ ಕಣ್ಣಾಡಿಸಿದ. ಯಾರೂ ಕಾಣಲಿಲ್ಲ. ಸಣ್ಣ ದನಿಯಲ್ಲಿ “”ಯವ್ವಾ… ಯವ್ವಾ… ಯವ್ವಾ ಗೌಡಸಾನಿ…” ಕೂಗಿದ. “”ಯಾರು?” ಅಂತ ದನದ ಅಂಕಣದಲ್ಲಿ ಕಸಗೂಡಿಸುತ್ತಿದ್ದ ಗಂಗವ್ವ ಹೊರಬಂದು ನೋಡಿ, “”ಅಯ್ನಾ ಯಣ್ಣ ನೀನಾ! ಗೌಡಸಾನಿ ಗುಡಿಗೆ ಹೋಗ್ಯಾಳ. ಈಗ ಬರ್ತಾಳ ತಡಿಯಣ್ಣ” ಎಂದಳು. “”ಹೌದೇನವ್ವಾ?” ಎಂದಷ್ಟೆ ಅಂದು ಸುಮ್ಮನೆ ನಿಂತ ರಾಮ. “”ಹೂnನಣ್ಣ. ನಾಕೈದು ದಿಸ ಆತು, ನೀನು ಮನೆಕಡೆ ಬರಲಾರದಕ್ಕ ಸಗಣಿ, ಕಸ ಬಳಿಯೋ ಕೆಲಸ ನನ್ನ ಮೇಲೇ ಬಿದ್ದೆ„ತಿ ನೋಡು” ಎನ್ನುತ್ತ ತನ್ನ ಕಾಯಕ ಮುಂದುವರಿಸಿದಳು. ರಾಮ ಏನೂ ಮಾತಾಡಲು ಮನಸ್ಸಿಲ್ಲದೆ ಸುಮ್ಮನೆ ಕಟ್ಟೆಯ ತುದಿಗೆ ಬಂದು ಕುಂತ.
ಮನಸ್ಸು ಒಳ ಒಳಗೆ ಚಡಪಡಿಸುತ್ತಿತ್ತು. ಎದೆ ಒಜ್ಜೆ ಎನಿಸಿ ಮಲಗಬೇಕೆನಿಸುತ್ತಿತ್ತು. ಕುಂತಲ್ಲೇ ಈ ಕೈ ಒಮ್ಮೆ ಆ ಕೈ ಒಮ್ಮೆ ಊರಿ ಏದುರಿಸಿ ಬಿಡುತ್ತ ಕಂಬಕ್ಕೆ ಆನಿಕೊಂಡು ದಾರಿಯುದ್ದಕ್ಕೂ ಕಣ್ಣು ಚಾಚಿ ನೋಡುತ್ತಿದ್ದ. ಕಣ್ಣು ಮಸುಕಾದಂತೆನಿಸಿ ಕತ್ತಲೆ ಇಳಿದಂತಾಗಿ ರೆಪ್ಪೆ ಮುಚ್ಚಿದ. ಸ್ವಲ್ಪ ಹೊತ್ತಿನಲ್ಲಿ ಯಾರೋ ಬಂದ ಸಪ್ಪಳವಾಯಿತು. ದಿಗ್ಗನೆ ಎಚ್ಚೆತ್ತು ನೋಡಿದ. ಅವಸರವಾಗಿ ಕಟ್ಟೆಯಿಂದಿಳಿದು ದೂರ ಸರಿದು ನಿಂತ.
“”ಏನೊÉà ರಾಮ ನಿಮ್ಮವ್ವ ಹೆಂಗದಳಾ?” ಎಂದು ಕೇಳುತ್ತ ಕೈಯೊಳಗಿನ ತಟ್ಟೆಯಲ್ಲಿನ ಸಕ್ಕರೆ ಪ್ರಸಾದವನ್ನು ಕೊಟ್ಟಳು. ರಾಮನಿಗೆ ತಡೆಯಲಾಗಲಿಲ್ಲ. ಕಣ್ಣೀರು ದಳದಳನೇ ಇಳಿದೇ ಬಿಟ್ಟವು. ಮತ್ತೆ ಮರುಮಾತಾಡದೆ ಗೌಡಸಾನಿ ಒಳನಡೆದಳು. ರಾಮ ಅಲ್ಲಿಯೇ ನಿಂತಿದ್ದನು. ದೇವರ ಜಗಲಿಮೇಲೆ ತಟ್ಟೆ ಇಟ್ಟು ಬಂದಳು. ತಲಬಾಗಿಲ ಮುಂದಿನ ಮೆಟ್ಟಿಲ ಮೇಲೆ ನಿಂತು, “”ನಾಕೈದು ದಿನದಿಂದ ಎಲ್ಲಿಗೆ ಹಾಳಾಗೋಗಿದ್ಯಲೋ. ಕೆಲ್ಸಕ್ಕೂ ಬಂದಿಲ್ಲ, ಉಂಬಾಕಾ ಬಂದಿಲ್ಲ? ನಿಮ್ಮವ್ವಗರ ಉಂಬಾಕಿಕ್ಕಿಯೋ ಇÇÉಾ?” ಅವನ ದೈನ್ಯ ಸ್ಥಿತಿಯನ್ನು ಕಂಡಿದ್ದರಿಂದಲೇ ಕೇಳಿದಳು. “”ಇಲ್ಲಮ್ಮೊà… ಯವ್ವಾ” ಎಂದಷ್ಟೆ ನುಡಿದು ಸುಮ್ಮನೆ ತಲೆಬಗ್ಗಿಸಿ ನಿಂತ.
“”ಅಯ್ಯೋ ನಿನ್ನ ಬಾಯಕ ಕಸಹಾಕ. ಆ ಮುದೇ ಜೀವನಾ ಕೊಲ್ಲುತೀಯಲ್ಲಲೋ. ಸ್ವಲ್ಪ ತಡಿ ಹಂಗಾರ” ಎನ್ನುತ್ತ ಗೌಡಸಾನಿ ಪಟಪಟ ನೀರಿಗೆ ಒದೆಯುತ್ತ ಒಳಹೋದಳು. ನಿಂತಲ್ಲಿ ನಿಲ್ಲಲಾಗದೆ ಒ¨ªಾಡುತ್ತ ಕಟ್ಟೆಯನ್ನೇ ಆಸರೆ ಮಾಡಿಕೊಂಡು ನಿಂತ. ಮೆಲ್ಲಗೆ ಗೌಡನ ಮಾತು ನೆನಪಿಗೆ ಬಂದು ಎದೆಬಡಿತ ಜೋರಾಗಿತ್ತು.
“”ತಗಾ ಜಲ್ದಿ ಹೋಗಿ ನಿಂಗವ್ವಗ ಉಂಬಾಕಿಕ್ಕಿ, ನೀನೂ ಉಣ್ಣು” ಎಂದು ಹಳೆ ಅಲ್ಯುಮಿನಿಯಂ ಡಬರಿಯನ್ನು ಕೈಗಿತ್ತಳು. ರಾಮನಿಗೆ ಹೋದ ಉಸಿರು ತಿರುಗಿದಂತಾಯ್ತು.
“”ಆತವ್ವಾ… ಗೌಡಸಾನಿ” ಎಂದಷ್ಟೆ ನುಡಿದು ಅವಸರ ಅವಸರವಾಗಿ ಮನೆ ದಾರಿ ಹಿಡಿದ.
ಸುಡುವ ಬಿಸಿಲಿಗೆ ನೆಲ ಕಾದ ಅಂಚಿನಂತಾಗಿತ್ತು. ರಾಮ ಅಂಗಳಕ್ಕೆ ಬರುತ್ತಲೇ ಗಾಬರಿಯಾದ ಕಟ್ಟಿರುವೆಗಳು ಗುಂಪು ಗುಂಪಾಗಿ ಬಾಗಿಲ ದಾಟಿ ಹೋಗುವದನ್ನು, ಬರುವುದನ್ನು ಮಾಡುತ್ತಿದ್ದವು. ಭಯದಿಂದಲೇ ಓಡಿ ನಿಂಗವ್ವನ ಬಳಿಗೆ ಬಂದ. ಎದೆ ಒಡೆದು “ಯವ್ವಾ’ ಎಂದು ಜೋರಾಗಿ ಚೀರಿ ಹೌಹಾರಿ ನಿಂತುಬಿಟ್ಟ. ಕೈಯಲ್ಲಿದ್ದ ಅನ್ನದ ಡಬರಿ ಜಾರಿಬಿದ್ದು ಅನ್ನವೆಲ್ಲ ಚೆಲ್ಲಿ ಹರಡಿಹೋಯಿತು. ಕಣ್ಣು ಕತ್ತಲಾಗಿ ದಸಕ್ಕೆಂದು ಕುಸೆಕುಂತನು. ಮಟ ಮಟ ಮಧ್ಯಾಹ್ನವಾಗಿತ್ತು. ಮಂದಿ, ಮಕ್ಕಳ ಸುಳಿವೇ ಇರಲಿಲ್ಲ. ಕ್ಷಣ ಹೊತ್ತಿನಲ್ಲಿ ಗುಂಪು ಗುಂಪಾಗಿದ್ದ ಇರುವೆಗಳು ನೆಲದ ಪಾಲಾಗಿದ್ದ ಅನ್ನಕ್ಕೆ ಮುತ್ತಿಗೆ ಹಾಕಿದ್ದವು.
– ನಂದೀಶ್ವರ ದಂಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.