ಅರಳಿ ನಗುತಲಿದೆ ಸೂರ್ಯಕಾಂತಿ
Team Udayavani, Sep 23, 2018, 6:00 AM IST
ನಮಗೆ ಬೇಕಾಗಿದ್ದಾರೆ
ದೀಪ ಹಚ್ಚುವವರು
ಮಾತ್ರವಲ್ಲ
ಬತ್ತಿ ಹೊಸೆಯುವವರು
ಎಣ್ಣೆ ಹೊಯ್ಯುವವರು
ಗಾಳಿಗಡ್ಡವಾಗುವವರು
ಕೂಡ
ಸುಮಾರು ಎರಡು ವರುಷಗಳ ಹಿಂದೆ ತಮ್ಮ “ಮುಖಗೋಡೆ’ಯಲ್ಲಿ ಸ್ನೇಹಿತರು ಯಾರೋ ರವಿಶಂಕರ ಒಡ್ಡಂಬೆಟ್ಟು ಅವರ ಈ ಮೇಲಿನ ಅರ್ಥಪೂರ್ಣ ಹನಿಗವಿತೆಯನ್ನು ಹಂಚಿಕೊಂಡಿದ್ದರು. ಇದನ್ನೋದಿದ ತತ್‌ಕ್ಷಣ ನನಗೆ ಮಿಂಚು ಹೊಡೆದಂತಾಗಿ ಇದರ ಗೂಡಾರ್ಥದೊಳಗೇ ಕಳೆದುಹೋದೆ.
ಆವಾಗಲೇ ನನಗೆ ರವಿಶಂಕರ ಒಡ್ಡಂಬೆಟ್ಟು ಅವರ ಇನ್ನಿತರ ಬರಹಗಳ ಕುರಿತು ಅಪಾರ ಆಸಕ್ತಿ ಮೂಡಿದ್ದು! ಅವರ ಬರಹಗಳನ್ನು ಹೆಚ್ಚು ಓದಿಲ್ಲವಾದರೂ, ಕಣ್ಣು ಹಾಯಿಸಿದ ಒಂದಿಷ್ಟು ಕವಿತೆಗಳಲ್ಲಿ ನನಗೆ ಅಪಾರ ಜೀವನ ಪ್ರೀತಿ, ಅಲ್ಪದರಲ್ಲಿಯೇ ಮಹತ್ತರವನ್ನು ಸಾರುವ ಕುಶಲತೆ, ಹೇಳಬೇಕಾದ್ದನ್ನು ನಾಜೂಕಾಗಿ ಆದರೆ ಸ್ಪಷ್ಟ ಧ್ವನಿಯಲ್ಲಿ ದಾಟಿಸುವ ಬದ್ಧತೆ, ತನ್ನ ಸುತ್ತಮುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುವ ಸಹೃದಯತೆ, ಸಹಜೀವಿಯ ಸಂಕಷ್ಟಕ್ಕೆ ಮರುಗುವ ಮಾನವೀಯತೆ, ಸ್ತ್ರೀಯ ಮನಸಿನ ವಿಶಾಲತೆಯನ್ನು ಮತ್ತವಳ ಮಹಣ್ತೀವನ್ನು ಸಾರುವ ಮನೋವೈಶಾಲ್ಯ, ದುಗುಡವನ್ನು ಬಚ್ಚಿಟ್ಟು, ಬದುಕಿಗಾಗಿ ನಗುವ ಜೀವಂತಿಕೆ, ತಿಳಿಹಾಸ್ಯದ ಮೂಲಕವೇ ದಿಬ್ಬದಂಥ ಕಷ್ಟಕ್ಕೆ ಗುನ್ನ ಹಾಕುವಂಥ ಚಾಕಚಕ್ಯತೆ – ಹೀಗೆ ಹನಿಹನಿ ಸೇರಿ ಹಳ್ಳವಾಗಿ, ಅದೇ ನದಿಯಾಗಿ ಧುಮ್ಮುಕ್ಕಿ ಹರಿದು ಸುವಿಶಾಲ ಸಾಗರವನ್ನು ಸೇರುವ ಪರಿಯನ್ನು ಇವರ ಕವಿತೆಯಲ್ಲಿ ನೋಡಿದ್ದೇನೆ. ಉದಾಹರಣೆಯಾಗಿ ಇಲ್ಲೊಂದಿಷ್ಟು ಅವರ ಹನಿ ಮುತ್ತುಗಳಿವೆ…
ಕಷ್ಟವೆಂದರೆ
ಬದುಕಿನ ಒಂದು ಬಗೆ
ಹೇನಿಗೆ ಹೆದರಿ
ತಲೆ ಬೋಳಿಸಿದರೆ ಹೇಗೆ?
.
ಶಿಲ್ಪಿಯ ಉಳಿಯ ಏಟಿಗೆ
ಹೆದರದ ಕಲ್ಲು
ಮೂರ್ತಿಯಾಯಿತು
ಹೆದರಿದ್ದು
ಚಪ್ಪಡಿಯಾಯಿತು
.
ಹೆಣ್ಣೆ, ನಿನ್ನ ಮನಸ್ಸನ್ನು ಕವಿತೆಗೇಕೆ ಹೋಲಿಸುವರೆಂದು ನನಗೆ ಗೊತ್ತು
ಓದಬಲ್ಲವರಿಗೆ ಹಲವರ್ಥ ಸು#ರಿಸಿ ಬರದವರಿಗೆ ಒಗಟಾಗಿರುವೆ
ಆದರೆ ಬೇಸರದ ಸಂಗತಿಯೆಂದರೆ ಇಂಥ ಅದ್ಭುತ ಪ್ರತಿಭೆಯ ಪರಿಚಯ ಸಾಹಿತ್ಯ ಕ್ಷೇತ್ರದಲ್ಲಿ ಸರಿಯಾದ ರೀತಿಯಲ್ಲಿ ಈವರೆಗೂ ಆಗದೇ ಹೋಗಿದ್ದು; ಇವರ ಬರಹಗಳಿಗೆ ಸಿಗಬೇಕಾಗಿದ್ದ ಮನ್ನಣೆ ದಕ್ಕದೇ ಹೋಗಿದ್ದು ! ಆದರೆ, ಲೇಖಕನಿಗೆ ಇದಾವುದರ ಗೊಡವೆಯಿರಲಿಲ್ಲ, ಆತನಿಗೆ ಅವನ ಬರಹವೇ ಪ್ರಪಂಚ, ದಕ್ಕಿದ್ದು ಪ್ರಾಪ್ತಿ ಮಿಕ್ಕಿದ್ದು ತನಗೆ ಮೀರಿದ್ದು ಎಂಬಂತೆ ತಣ್ಣಗೆ ಬರೆದು ಹಬ್ಬುತಲಿದ್ದರು ಎಂದೆನಿಸಿತು ಅವರ ಈ ಕೆಳಗಿನ ಹವಿಗವನವನ್ನೋದಿ…
ನಮ್ಮ ತಂಬಿಗೆಯ
ಗಾತ್ರದಷ್ಟೆ
ನಮಗೆ ದಕ್ಕುವುದು
ಉಳಿದದ್ದು ಕಡಲಲ್ಲಿ
ಮಿಕ್ಕುವುದು
ಅದಕ್ಕೇಕೆ ನಾವು
ಬಿಕ್ಕುವುದು?
ದುರದೃಷ್ಟವಶಾತ್ ರವಿಶಂಕರ ಒಡ್ಡಂಬೆಟ್ಟು ಅವರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಅರ್ಥಪೂರ್ಣ, ಸುಂದರ ಬರಹಗಳ ಮೂಲಕ ಅವರ ಕೃತಿಗಳನ್ನು ಆಸ್ಥೆಯಿಂದ ಓದುವ ಸಹೃದಯ ಓದುಗರ ಮಾನಸದಲ್ಲಿ ಚಿರಸ್ಥಾಯಿಯಾಗಿರುತ್ತಾರೆ. ಅವರದೇ ಮತ್ತೂಂದು ಸುಂದರ ಹನಿಗವಿತೆ-
ಚಿಟ್ಟೆಯನ್ನು ಮಗು ನೋಡುತ್ತಿದೆ
ಮಗುವನ್ನು ಚಿಟ್ಟೆ ನೋಡುತ್ತಿದೆ
ಎರಡು ಜೋಡಿ ಕಣ್ಣುಗಳಲ್ಲೂ ಬೆರಗು
ಸುತ್ತಲಿನ ಪ್ರಕೃತಿ ಮೌನದಲ್ಲಿ ಅದ್ದಿ
ಹೋಗಿದೆ
ಇಲ್ಲಿರುವಂತೆಯೇ ಅವರ ಸಮಗ್ರ ಸಾಹಿತ್ಯವನ್ನೋದಿ ಬೆರಗಾಗುವ ಓದುಗನನ್ನು ಮೇಲಿನಿಂದಿಣುಕಿ ಲೇಖಕನೂ ಬೆರಗಾಗುತ್ತಿರಬಹುದೇನೋ!
ಕಡ್ಡಿಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ
ಒಂದುಗೂಡಿಸಿ ದಾರ ಕಟ್ಟಿ ಹಿಡಿಸೂಡಿ
ಮಾಡುವವರೆ ಇಲ್ಲವಾಗಿದೆ
ಅವರ ರಚನೆಯ ಈ ಹನಿಗವನದಂತೆಯೇ, ಆಗೀಗ ಸದ್ದಿಲ್ಲದೇ ಪ್ರಕಟಗೊಂಡಿದ್ದ, ಕೆಲವೊಂದು ಬೆಳಕು ಕಾಣದೇ ಅವರ ಜೋಳಿಗೆಯೊಳಗೇ ಮಗುಮ್ಮಾಗಿದ್ದುಬಿಟ್ಟಿದ್ದ ಬಿಡಿಬರಹಗಳನ್ನೆಲ್ಲ ಒಂದೊಂದಾಗಿ ಒಟ್ಟು ಸೇರಿಸಿ, ಸೂರ್ಯಕಾಂತಿ ಎನ್ನುವ ಇವರ ಸಮಗ್ರ ಸಾಹಿತ್ಯ ಸಂಕಲನವನ್ನು ಹೊರ ತರಲಾಗುತ್ತಿದೆ. ಈ ಸತ್ಕಾರ್ಯವನ್ನು “ಸಾಹಿತ್ಯ ಲಹರಿ ವಾಟ್ಸಾಪ್ ಬಳಗ’ದ ಸದಸ್ಯರೆಲ್ಲರೂ ಸೇರಿ ನೆರವೇರಿಸುತ್ತಿ¨ªಾರೆ.
ಅರ್ಥಪೂರ್ಣ ಹನಿಗವಿತೆಗಳ ಮೂಲಕ ರವಿಶಂಕರ ಒಡ್ಡಂಬೆಟ್ಟು ನಮ್ಮ ನಡುವೆ ಜೀವಂತವಿದ್ದಾರೆ, ಅಲ್ಲವೆ?
ಸೂರ್ಯಕಾಂತಿ (ರವಿಶಂಕರ್ ಒಡ್ಡಂಬೆಟ್ಟು – ಸಮಗ್ರ ಸಾಹಿತ್ಯ)
ಸಂ.: ಜ್ಯೋತಿ ಮಹಾದೇವ್, ಕವಿತಾ ಅಡೂರು
ಪ್ರ.: ಸಾಹಿತ್ಯ ಲಹರಿ ವಾಟ್ಸಾಪ್ ಬಳಗ, ಸಮೂಹ ಪ್ರಕಾಶನ, ರಾಗದೀಪ, ನಂದಿಲ ವಠಾರ, ಬೊಳುವಾರು, ಪುತ್ತೂರು, ದಕ್ಷಿಣಕನ್ನಡ (ಮೊಬೈಲ್: 9480482328)
ಮೊದಲ ಮುದ್ರಣ: 2018
ತೇಜಸ್ವಿನಿ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.