ಮೂರನೆಯ ತೀರ


Team Udayavani, Mar 1, 2020, 5:52 AM IST

kate

ಒಂದು ಪುಟ್ಟ ದೋಣಿಯನ್ನು ಕೂಡಲೇ ತಯಾರಿಸಬೇಕು; ಆದರೆ, ಬಲಿಷ್ಠವಾಗಿರಬೇಕು. ಸುದೀರ್ಘ‌ ಪ್ರಯಾಣಕ್ಕೆ ಅನುಕೂಲವಾಗುವಂತಿರಬೇಕು. ಮೂವ್ವತ್ತು-ನಲ್ವತ್ತು ವರ್ಷಗಳ ಕಾಲ ಹಾಳಾಗುವಂತಿರಬಾರದು. ಇಬ್ಬರು ಮೂವರು ಒಟ್ಟಿಗೆ ಪ್ರಯಾಣಿಸುವಂತಿರಬೇಕು.”

ಅಪ್ಪ ತನ್ನ ಒಂದಿಬ್ಬರು ಗೆಳೆಯರೊಂದಿಗೆ ಮಾತನಾಡುತ್ತಿದ್ದ. ಈಗ ಅದರ ಆವಶ್ಯಕತೆ ಏನಿದೆ ಎನ್ನುವುದು ನನಗೆ ತಿಳಿದಿರಲಿಲ್ಲ; ಕೇಳಿದರೆ ಆತ ಹೇಳುವವನೂ ಅಲ್ಲ. “”ಅವೆಲ್ಲ ನಿನಗೇಕೆ? ನಿನ್ನ ಬಳಿಯಲ್ಲಿ ಹೇಳುವ ವಿಷಯವನ್ನು ನಾನಾಗಿಯೇ ಹೇಳಿಬಿಡುತ್ತೇನೆ. ಅಲ್ಲಿಯವರೆಗೆ ನೀನು ಕೇಳಬಾರದು” ಎನ್ನುವುದು ಆತನ ಸಿದ್ಧ ಉತ್ತರವಾಗಿರುತ್ತಿತ್ತು. ಹಿಂದಿನ ಅನುಭವಗಳು ಇದನ್ನು ನನಗೆ ಕಲಿಸಿವೆ. ನನ್ನಪ್ಪ ಕರ್ತವ್ಯನಿಷ್ಠ. ನನ್ನ ಪರಿಚಯಸ್ಥ ಇತರ ವ್ಯಕ್ತಿಗಳಿಗೆ ಹೋಲಿಸಿದರೆ, ಆತ ನೇರ ಮಾತಿನವನು; ಹೆಚ್ಚು ನಗುವವನೂ ಅಲ್ಲ, ಹಾಗಂತ ಸದಾ ಮುಖ ಗಂಟುಹಾಕಿಕೊಂಡಿರುವವನೂ ಅಲ್ಲ; ಶಾಂತ ಸ್ವಭಾವದವನು ಹೆಚ್ಚಿನ ಸಂದರ್ಭಗಳಲ್ಲಿ. ಮನೆಯಲ್ಲಿ ಅಮ್ಮನದ್ದೇ ಆಡಳಿತ. ಏಕೆಂದರೆ, ಅಪ್ಪ ದುಡಿಯುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ; ಮನೆಯ ಜವಾಬ್ದಾರಿಯಂತೂ ಆತನಿಗೆ ಇರಲೇ ಇಲ್ಲ. ಹಾಗಾಗಿ, ದಿನದ ಬಹು ಸಮಯಗಳಲ್ಲಿ ಆಕೆ ನನ್ನನ್ನು, ತಂಗಿಯನ್ನು ಹಾಗೂ ಅಣ್ಣನನ್ನು ಬೈಯುತ್ತಲೇ ಇರುತ್ತಾಳೆ; ಯಜಮಾನಿಯಲ್ಲವೆ!

“”ದೋಣಿ ತಯಾರಿಸುವುದಕ್ಕೆ ಹೇಳಿದ್ದೀರಂತೆ! ಮೀನುಗಾರಿಕೆ ನಮ್ಮ ಕಸುಬಲ್ಲ. ದೋಣಿ ತಯಾರಿಸಿಕೊಂಡು ಏನು ಮಾಡುತ್ತೀರ?”

ಅಮ್ಮ ಕೇಳಿದ ಪ್ರಶ್ನೆಗೆ ಅಪ್ಪ ಉತ್ತರಿಸಲಿಲ್ಲ. ಬದಲಿಗೆ, ಸಮೀಪದಲ್ಲಿಯೇ ಇದ್ದ ನನ್ನ ಮುಖವನ್ನು ನೋಡಿದ, ನಾನೇ ಅಮ್ಮನಿಗೆ ವರದಿಗಾರನಾಗಿದ್ದಿರಬಹುದು ಎನ್ನುವ ದೃಷ್ಟಿಯಿಂದ. ನಾನು ಮುಖ ತಗ್ಗಿಸಿದೆ, ಅಪರಾಧಿಯಂತೆ; ಆದರೆ, ಅಪ್ಪ ಏನೂ ಉತ್ತರಿಸಲಿಲ್ಲ.

ನಮ್ಮ ಮನೆ, ನದಿಯಿಂದ ಸುಮಾರು ಒಂದೂವರೆ ಕಿ. ಮೀ. ದೂರದಲ್ಲಿತ್ತು. ಮೀನುಗಾರಿಕೆ ಮಾಡುವುದಿದ್ದರೆ, ಇಷ್ಟು ದೂರದಲ್ಲಿ ಇದ್ದುಕೊಂಡು ಸಾಧ್ಯವಿಲ್ಲ; ನಸುಕಿನಲ್ಲಿಯೇ ನೀರಿಗಿಳಿಯಬೇಕಾಗುತ್ತದೆ. ಅಷ್ಟಕ್ಕೂ ನಮ್ಮ ವಂಶಕ್ಕೂ ಮೀನುಗಾರಿಕೆಗೂ ಯಾವುದೇ ರೀತಿಯ ಸಂಬಂಧವಿರಲಿಲ್ಲ. ವಿಶೇಷವೆಂದರೆ, ನಮ್ಮೂರಿನಲ್ಲಿ ನದಿಯು ಆಳವಾಗಿತ್ತು, ಶಾಂತವಾಗಿತ್ತು ಮತ್ತು ಅದರ ಇನ್ನೊಂದು ತೀರವನ್ನು ಕಾಣುವುದು ಅಸಾಧ್ಯ ಎನ್ನುವಷ್ಟು ವಿಶಾಲವಾಗಿತ್ತು.

ಆ ದಿನವನ್ನು ನಾನೆಂದಿಗೂ ಮರೆಯಲಾರೆ. ಬೆಳಿಗ್ಗೆಯೇ ನನ್ನ ಅಪ್ಪನ ಸ್ನೇಹಿತರು “ದೋಣಿ ಸಿದ್ಧವಾಗಿದೆ’ ಎಂದು ಹೇಳುತ್ತ ಮನೆಗೆ ಬಂದಿದ್ದರು. ವಿಷಯವನ್ನು ತಿಳಿದು ಅಪ್ಪನು ಸಂತೋಷವನ್ನು ವ್ಯಕ್ತಪಡಿಸಲೂ ಇಲ್ಲ; ಇತರ ಭಾವವನ್ನು ಹೊರಹಾಕಲೂ ಇಲ್ಲ; ಎಂದಿನ ರೀತಿಯಲ್ಲಿ ತಟಸ್ಥ ಭಾವದಲ್ಲಿಯೇ ಇದ್ದ. ಒಳಗೆ ಹೋಗಿ ತನ್ನ ಸಾಮಾನ್ಯ ಉಡುಗೆಯನ್ನು ತೊಟ್ಟು, ಅವರೊಂದಿಗೆ ಹೊರಡುವುದಕ್ಕೆ ಸಿದ್ಧನಾಗಿ ಹೊರಬಂದ. ಜೊತೆಯಲ್ಲಿ ಯಾವುದೇ ವಸ್ತುವನ್ನೂ ತೆಗೆದುಕೊಳ್ಳಲಿಲ್ಲ. ಅಮ್ಮ ಜೋರಾಗಿ ಕೂಗಾಡಿ, ರಂಪ-ರಾದ್ಧಾಂತ ಎಬ್ಬಿಸುತ್ತಾಳೆ ಎಂದು ಭಾವಿಸಿದ್ದೆ; ಹಾಗೇನೂ ಆಗಲಿಲ್ಲ.

“”ಇದೇ ಕೊನೆಯ ತೀರ್ಮಾನವೆ? ಒಂದು ವೇಳೆ ದೂರದ ಪ್ರಯಾಣ ಕೈಗೊಳ್ಳುವುದೇ ಅಂತಿಮವಾಗಿದ್ದರೆ, ದೂರವೇ ಇದ್ದುಬಿಡಿ, ಹಿಂದಿರುಗಿ ಬರಲೇಬೇಡಿ.”

ಬಹಳ ಕಠಿಣವಾಗಿತ್ತು ಅಮ್ಮನ ಮಾತುಗಳು. ಆ ಮಾತಿಗೂ ಅಪ್ಪ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಆತ ನನ್ನ ಕಡೆಗೆ ವಾತ್ಸಲ್ಯದ ನೋಟ ಬೀರಿದ ಮತ್ತು ತನ್ನೊಂದಿಗೆ ಬರುವಂತೆ ಸನ್ನೆ ಮಾಡಿದ. ಅಮ್ಮ ನನ್ನ ಕೈಯನ್ನು ಹಿಡಿದು ತಡೆದಳು; ಆದರೆ, ನಾನು ಕೊಸರಿಕೊಂಡು ಅಪ್ಪನ ಜೊತೆಯಲ್ಲಿ ಹೆಜ್ಜೆ ಹಾಕಿದೆ. ದೋಣಿ ವಿಹಾರದ ಅನುಭವವನ್ನು ಪಡೆಯುವ, ಅದೂ ಅಪ್ಪನೊಂದಿಗೆ ನದಿಯಲ್ಲಿ ಸಂಚರಿಸುವ ಅವಕಾಶವನ್ನು ಹೊಂದುವ ಬಯಕೆ ನನ್ನದಾಗಿತ್ತು.

ಕುತೂಹಲ ತಡೆಯಲಾರದೇ ಪ್ರಶ್ನಿಸಿದೆ, “”ಅಪ್ಪಾ, ನನ್ನನ್ನೂ ನಿಮ್ಮೊಂದಿಗೆ ದೋಣಿಯಲ್ಲಿ ಕರೆದುಕೊಂಡು ಹೋಗುತ್ತೀರಾ?”ಆದರೆ, ಅಪ್ಪ ನನ್ನತ್ತ ಕೇವಲ ಮುಗುಳ್ನಗೆ ಬೀರಿದ. “ಇಲ್ಲ’ವೆಂದು ಹೇಳುವ ರೀತಿಯಲ್ಲಿ ತಲೆಯನ್ನು ಆಡಿಸಿದ, ಪ್ರೀತಿಯಿಂದ ನನ್ನ ತಲೆಯನ್ನು ನೇವರಿಸಿದ, “ಮನೆಗೆ ಹೋಗು’ ಎಂದು ಕಣ್ಸನ್ನೆ ಮಾಡಿದ. ಅಪ್ಪನೆಂದರೆ ನನಗೆ ಭಯ. ಆತ ಹಾಗೆ ಸೂಚಿಸುತ್ತಿದ್ದಂತೆಯೇ ನಾನು ಅಲ್ಲಿಂದ ಮನೆಯ ಕಡೆಗೆ ಹೆಜ್ಜೆ ಹಾಕಿದೆ, ಸ್ವಲ್ಪ ದೂರ ಬಂದು ಪೊದೆಯೊಂದರ ಹಿಂದೆ ಅವಿತುಕೊಂಡು ಅಪ್ಪನತ್ತ ನೋಡಿದೆ. ಅಪ್ಪನ ಬೆನ್ನು ಕಾಣುತ್ತಿತ್ತು. ಅಪ್ಪ ದೋಣಿಯನ್ನು ಏರಿದ, ಕೈಯಲ್ಲಿ ಹುಟ್ಟನ್ನು ಹಿಡಿದುಕೊಂಡ, ಅದನ್ನು ನದಿಯ ನೀರಿನೊಳಗೆ ಇಳಿಸುತ್ತಿದ್ದಂತೆಯೇ, ದೋಣಿ ಮೊಸಳೆಯ ರೀತಿಯಲ್ಲಿ ನೀರಿನ ಮೇಲೆ ನಿಧಾನವಾಗಿ ಚಲಿಸತೊಡಗಿತು, ಅದರ ಆಕಾರ ಸಣ್ಣದಾಗುತ್ತ ಹೋಯಿತು, ಸ್ವಲ್ಪ ಹೊತ್ತಿನಲ್ಲಿಯೇ ದೋಣಿ ಕಣ್ಮರೆಯಾಯಿತು, ಸುತ್ತಲೂ ನಿಶ್ಯಬ್ದ. ಜೋರಾಗಿ ಅತ್ತುಬಿಟ್ಟೆ.

ಒಂದೆರಡು ದಿನ ಕಳೆಯುವಷ್ಟರಲ್ಲಿ, ಅಪ್ಪ ಮರಳಿ ಬರಬಹುದು ಎಂದುಕೊಂಡಿದ್ದೆ. ಆದರೆ, ಹಾಗಾಗಲಿಲ್ಲ. ಆತ ದೋಣಿಯಲ್ಲಿ ಕುಳಿತು ಒಂದಿಷ್ಟು ದೂರ ಸಂಚರಿಸುತ್ತಿದ್ದ. ಮತ್ತೆ ಹಿಂದಿರುಗುತ್ತಿದ್ದ. ಆದರೆ ನೆಲದ ಮೇಲೆ ಹೆಜ್ಜೆಯಿಡುತ್ತಿರಲಿಲ್ಲ. ಮತ್ತೆ ದೂರಕ್ಕೆ ಹೊರಟುಹೋಗುತ್ತಿದ್ದ; ಒಟ್ಟಿನಲ್ಲಿ “ಹುಟ್ಟು’ಗೆ ವಿಶ್ರಾಂತಿ ನೀಡುತ್ತಿರಲಿಲ್ಲ. ನೀರಿನ ಮೇಲೆ ವಿಹರಿಸುತ್ತಲೇ ಇದ್ದ.

“ಏನಾಯ್ತು?’, “ಅವನ್ಯಾಕೆ ಹಾಗೆ ಮಾಡಿದ?’, “ತಲೆ ಕೆಟ್ಟಿದೆಯೇ?’, “ಮನೆಯಲ್ಲಿ ಜಗಳ ಮಾಡಿಕೊಂಡನೇ?’ ನೂರಾರು, ಸಾವಿರಾರು ಪ್ರಶ್ನೆಗಳು… ಸಂಬಂಧಿಕರು, ನೆರೆಹೊರೆಯವರು, ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದರು. ಅಮ್ಮ ಆ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರಲಿಲ್ಲ; ಶಾಂತಳಾಗಿ ವ್ಯವಹರಿಸುತ್ತಿದ್ದಳು. ಕೊನೆಗೆ ಬಹುತೇಕ ಎಲ್ಲರೂ ಒಂದು ನಿರ್ಧಾರಕ್ಕೆ ಬಂದಿದ್ದರು. ಅವರಲ್ಲಿ ಒಬ್ಬ ಹೇಳಿಯೂಬಿಟ್ಟ , “”ಆತನಿಗೆ ಹುಚ್ಚು ಹಿಡಿದಿರಬಹುದು.”

“”ಆತ ದೇವರಿಗೆ ಯಾವುದೋ ಹರಕೆ ಹೊತ್ತುಕೊಂಡಿರಬಹುದು, ಅದನ್ನು ತೀರಿಸುವ ಸಲುವಾಗಿ ಹೀಗೆ ವರ್ತಿಸುತ್ತಿರಬಹುದು ಅಥವಾ, ಆತನಿಗೆ ಯಾವುದಾದರೂ ಮಾನಸಿಕ ಕಾಯಿಲೆ ಉಂಟಾಗಿರಬಹುದು” ಮತ್ತೂಬ್ಬ ಅಭಿಪ್ರಾಯಪಟ್ಟ.

ನಾಲ್ಕಾರು ದಿನಗಳು ಕಳೆದವು. ನದಿಯ ಎರಡೂ ದಡಗಳ ನಿವಾಸಿಗಳು ಹಾಗೂ ಪರಿಚಿತ ವ್ಯಕ್ತಿಗಳ ಅಭಿಪ್ರಾಯದ ಪ್ರಕಾರ, ಅಪ್ಪ ಒಬ್ಬ ಪರಿತ್ಯಾಗಿಯ ರೀತಿಯಲ್ಲಿ ವರ್ತಿಸುತ್ತಿದ್ದ. ಆತ ಎಂದಿಗೂ ದೋಣಿಯನ್ನು ಬಿಟ್ಟು ಕೆಳಕ್ಕೆ ಇಳಿಯುತ್ತಿರಲಿಲ್ಲ. ಉದ್ದೇಶರಹಿತವಾಗಿ ಸಂಚರಿಸುತ್ತಿದ್ದ. ಎಲ್ಲರಿಗೂ ಆಡಿಕೊಳ್ಳುವ ವಸ್ತುವಾಗಿಬಿಟ್ಟಿದ್ದ.

“”ಎಲ್ಲಿಗೆ ಹೋಗುತ್ತಾರೆ! ಬಹುಶಃ ದೋಣಿಯಲ್ಲಿ ಒಂದಿಷ್ಟು ಆಹಾರಪದಾರ್ಥಗಳನ್ನು ಇಟ್ಟುಕೊಂಡಿರಬಹುದು. ಅದು ಖಾಲಿಯಾಗುತ್ತಿದ್ದಂತೆಯೇ ಮನೆಗೆ ಬಂದೇ ಬರುತ್ತಾರೆ. ಎಷ್ಟು ದಿನ ಉಪವಾಸವಿರಬಲ್ಲರು! ಅಂಥ ಪರಿಸ್ಥಿತಿ ಬಂದಾಗಲೇ ಮನೆಯ ನೆನಪಾಗೋದು, ಸಿಟ್ಟು ಇಳಿಯೋದು…” ಅಮ್ಮ ಆಗಾಗ ಹೇಳುತ್ತಲೇ ಇದ್ದಳು. ಸಮಾಧಾನ ಮಾಡುವುದಕ್ಕೆ, ವಿಷಯ ತಿಳಿದುಕೊಳ್ಳುವುದಕ್ಕೆ ಮನೆಗೆ ಬಂದವರೂ ಅಮ್ಮನ ಈ ಮಾತಿಗೆ ಗೋಣುಹಾಕಿ ಹೋಗುತ್ತಿದ್ದರು.

ಆದರೆ, ಅವರಿಗೆಲ್ಲಿ ಗೊತ್ತಿತ್ತು ಸತ್ಯ! ಅಪ್ಪನ ಅಸಲಿ ಭೋಜನ ವ್ಯವಸ್ಥೆಯ ಗುಟ್ಟು! ಅಪ್ಪನ ಬಳಿಯಲ್ಲಿ ಇದಕ್ಕೆ ಒಂದು ರಹಸ್ಯ ವ್ಯವಸ್ಥೆ ಇತ್ತು. ಅದು ನಾನು! ಹೌದು, ನಾನು ಪ್ರತಿದಿನವೂ ಕದ್ದುಮುಚ್ಚಿ ಆತನಿಗೆ ಆಹಾರವನ್ನು ಒದಗಿಸುತ್ತಿದ್ದೆ.

ಆತ ದೋಣಿಯೇರಿ ಹೊರಟ ಮೊದಲ ದಿನದ ಸಂಜೆಯ ಸಮಯದಲ್ಲಿ ನಾನು, ನನ್ನಣ್ಣ ಮತ್ತು ತಂಗಿ, ನದಿಯ ತಟಕ್ಕೆ ಹೋಗಿ ಅಪ್ಪನಿಗಾಗಿ ನಿರೀಕ್ಷಿಸುತ್ತ ಕುಳಿತಿದ್ದೆವು. ಆತನಿಗೆ ಏನೂ ತೊಂದರೆಯಾಗದಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದೆವು. ಅಪ್ಪನ ಆಗಮನದ ನಿರೀಕ್ಷೆಯಲ್ಲಿ ತುಂಬಾ ಸಮಯವನ್ನು ಅಲ್ಲಿಯೇ ಕಳೆದರೂ ಅಪ್ಪ ಬರಲೇ ಇಲ್ಲ. ನಿರಾಸೆಯಿಂದ ನಾವೆಲ್ಲ ಮನೆಗೆ ಹಿಂದಿರುಗಿದೆವು. ಮಾರನೆಯ ದಿನ ನಾನು ನಾಲ್ಕಾರು ಚಪಾತಿ, ಬಾಳೆಗೊನೆ, ಇನ್ನಿತರ ಕೆಲವು ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಒಬ್ಬನೇ ನದಿಯ ದಡದ ಬಳಿಗೆ ಹೋದೆ.

ಒಂದು ತಾಸಿನ ಕಾಲ ಅಲ್ಲಿಯೇ ದುಃಖದಿಂದ, ಬೇಸರದಿಂದ ಕುಳಿತಿದ್ದೆ. ಆಗಲೇ ಅಪ್ಪನ ದೋಣಿ ದೂರದಲ್ಲಿ ಕಾಣಿಸಿಕೊಂಡಿತು. ದಡದ ಕಡೆಗೇ ಅದು ಬರುತ್ತಿತ್ತು. ಕ್ಷಣ ಕಾಲದ ನಂತರ ಅದು ಸ್ವಲ್ಪ ದೂರದಲ್ಲಿ ನಿಂತುಕೊಂಡಿತು. ಅಪ್ಪ ನನ್ನನ್ನು ನೋಡಿದ. ನಾನೂ ಆತನತ್ತ ಕೈಬೀಸಿ ಕರೆದೆ. ಆದರೆ, ದೋಣಿ ಮತ್ತೆ ನನ್ನತ್ತ ಚಲಿಸಲಿಲ್ಲ. ನಾನೇ ಆಹಾರ ಪದಾರ್ಥಗಳ ಗಂಟನ್ನು ಎತ್ತರಕ್ಕೆ ಹಿಡಿದು ಆತನಿಗೆ ತೋರಿಸಿದೆ. ಆಗಲೂ ಆತ ನನ್ನತ್ತ ಮುಂದುವರಿಯಲಿಲ್ಲ ಅಥವಾ ನನಗೆ ಯಾವುದೇ ಸೂಚನೆಯನ್ನು ನೀಡಲಿಲ್ಲ. ಆಗ ನಾನು ಆಹಾರದ ಗಂಟನ್ನು ಆತನಿಗೆ ಮತ್ತೂಮ್ಮೆ ತೋರಿಸಿ, ಅದನ್ನು ಅಲ್ಲಿಯೇ ಸಮೀಪದಲ್ಲಿದ್ದ ಒಂದು ಬಂಡೆಯ ಪೊಟರೆಯಲ್ಲಿ ಇರಿಸಿ ಬಂದುಬಿಟ್ಟೆ. ಮಾರನೆಯ ದಿನವೂ ಅದೇ ಸಮಯಕ್ಕೆ ಅಲ್ಲಿಗೆ ಹೋಗಿ ನೋಡಿದೆ. ಆಹಾರದ ಗಂಟು ಅಲ್ಲಿರಲಿಲ್ಲ. ನನ್ನೊಂದಿಗೆ ತೆಗೆದುಕೊಂಡು ಬಂದಿದ್ದ ಇನ್ನೊಂದಿಷ್ಟು ಆಹಾರ ಪದಾರ್ಥವನ್ನು ಆ ಪೊಟರೆಯಲ್ಲಿ ಇಟ್ಟು ಹಿಂದಿರುಗಿದೆ. ಇದೇ ರೀತಿಯಲ್ಲಿ ಪ್ರತಿದಿನವೂ ಮನೆಯಿಂದ ಆಹಾರ ಪದಾರ್ಥಗಳನ್ನು ಕದ್ದು, ನಾನು ಅಪ್ಪನಿಗೆ ತಲುಪಿಸುತ್ತಿದ್ದೆ. ಅಮ್ಮನಿಗೆ ಈ ವಿಷಯ ತಿಳಿದಿಲ್ಲವೆಂದು ನನಗೆ ಒಳಗೊಳಗೇ ಸಂತೋಷವಾಗುತ್ತಿತ್ತು. ನನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅಪ್ಪನಿಗಾಗಿ ನಾನು ಇಷ್ಟೂ ಮಾಡದಿದ್ದರೆ ಹೇಗೆ! ಆದರೆ, ಕೆಲವು ದಿನಗಳ ನಂತರ ನನಗೆ ಗೊತ್ತಾಯಿತು, ಕದಿಯುವುದಕ್ಕೆ ಅನುಕೂಲವಾಗುವ ಸ್ಥಳದಲ್ಲಿ ಅಮ್ಮನೇ ಈ ಆಹಾರ ಪದಾರ್ಥಗಳನ್ನು ತಂದು ಇಡುತ್ತಿದ್ದಳು ಎನ್ನುವುದು. ಹಾಗಿದ್ದರೆ, ಅಮ್ಮನಿಗೆ ಅಪ್ಪನ ಮೇಲೆ ಕೋಪವಿಲ್ಲವೆ!

ಅಪ್ಪ ಮನೆಗೆ ಬಾರದೇ ಅನೇಕ ದಿನಗಳು ಕಳೆದ ನಂತರ, ತನಗೆ ಸಹಾಯಕ್ಕೆಂದು ಅಮ್ಮ ತನ್ನ ಅಣ್ಣನನ್ನು ಕರೆಯಿಸಿಕೊಂಡಳು. ಅಪ್ಪ ಬೇಗ ಮನೆಗೆ ಹಿಂದಿರುಗುವಂತೆ ಆಗಲಿ ಎಂದು, ಪುರೋಹಿತರನ್ನು ಕರೆಯಿಸಿ, ವಿಶೇಷ ಪೂಜೆಗಳನ್ನು ನಡೆಸಿದಳು. ಒಂದಿಬ್ಬರು ಪೊಲೀಸಿನವರನ್ನು ಕರೆಯಿಸಿ, ನದಿಯ ತೀರದ ಉದ್ದಕ್ಕೂ ಅವರು ಹುಡುಕಾಡುವಂತೆ ಹೇಳಿ, ಅಪ್ಪನನ್ನು ಬೆದರಿಸುವ ಪ್ರಯತ್ನವನ್ನೂ ಮಾಡಿದಳು. ಕೆಲವು ಪತ್ರಿಕೆಯವರೂ ಆಗಮಿಸಿ ಅಪ್ಪನ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿಕೊಂಡು ಹೋದರು. ಆದರೆ, ಇಂತಹ ಯಾವುದೇ ಸಂದರ್ಭಗಳಲ್ಲಿಯೂ ಅಪ್ಪ ಮಾತ್ರ ಕಣ್ಣಿಗೆ ಬೀಳಲೇ ಇಲ್ಲ.

ಅಪ್ಪನಿಲ್ಲದ ಮನೆಗೆ, ಜೀವನಕ್ಕೆ ನಾವು ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ. ಆದರೆ, ಅದು ಅಷ್ಟು ಸುಲಭವಲ್ಲ. ಯಾರೂ ಕಣ್ಣಿಗೆ ಬೀಳದ ಸಂದರ್ಭಗಳಲ್ಲಿ ಅಮ್ಮ ಒಬ್ಬಳೇ ಗಂಟೆಗಟ್ಟಲೆ ಒಂದೆಡೆ ಕುಳಿತು ಅಳುತ್ತಿರುವುದನ್ನು, ನಾನು ಆಕಸ್ಮಿಕವಾಗಿ ನೋಡಿಬಿಟ್ಟರೆ ಏನೂ ಆಗೇ ಇಲ್ಲ ಎನ್ನುವಂತೆ ಸೀರೆಯ ಸೆರಗಿನಿಂದ ಕಣ್ಣೊರೆಸಿಕೊಂಡು ನಗುವ ಹುಸಿ ಪ್ರಯತ್ನ ನಡೆಸುವುದನ್ನು ಅನೇಕ ಬಾರಿ ಗಮನಿಸಿದ್ದೇನೆ. ಆದರೆ, ಅಪ್ಪ ಏಕೆ ಹೀಗೆ? ಆತ ಏನನ್ನು ಬಯಸುತ್ತಿದ್ದಾನೆ? ನಮ್ಮಿಂದ ಆಗಿರುವ ತಪ್ಪಾದರೂ ಏನು? ಮತ್ತೆ ನೂರಾರು ಪ್ರಶ್ನೆಗಳು ಮನಸ್ಸಿನಲ್ಲಿಯೇ ಗಿರಕಿಹೊಡೆಯುತ್ತಿದ್ದವು. ಒಂದೆರಡು ಬಾರಿ ಅಮ್ಮನನ್ನು ಈ ಕುರಿತಾಗಿ ಕೇಳಿದ್ದರೂ ಉತ್ತರ ಮಾತ್ರ ನನಗೆ ಸಿಕ್ಕಿರಲಿಲ್ಲ.

ನನಗೂ ಅರ್ಥವಾಗುತ್ತಿಲ್ಲ… ಅಪ್ಪ ಇಷ್ಟೊಂದು ಕಷ್ಟವನ್ನು ಹೇಗೆ ಸಹಿಸಿಕೊಳ್ಳುತ್ತಿದ್ದಾನೆ! ಹಗಲು-ರಾತ್ರಿ, ಬಿಸಿಲು-ಮಳೆ, ಸೆಖೆ-ಚಳಿ, ವಾತಾವರಣದ ಇತರ ಎಲ್ಲ ಏರುಪೇರುಗಳಿಗೆ ಆತ ಹೇಗೆ ಹೊಂದಿಕೊಳ್ಳುತ್ತಿದ್ದಾನೆ! ಅದೂ ಅಷ್ಟೊಂದು ಕಡಿಮೆ ಪ್ರಮಾಣದ ಬಟ್ಟೆಗಳನ್ನು ಧರಿಸಿಕೊಂಡು! ದಿನದ ಮೇಲೆ ದಿನ, ವಾರದ ಮೇಲೆ ವಾರ, ತಿಂಗಳ ಮೇಲೆ ತಿಂಗಳು, ವರ್ಷದ ಮೇಲೆ ವರ್ಷ ಸವಾರಿ ಮಾಡುತ್ತಲೇ ಇದ್ದವು. ಆದರೆ, ಅಪ್ಪ ಇವ್ಯಾವುಗಳ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿರುವಂತೆ ಕಾಣಲಿಲ್ಲ. ಆತ ನೆಲದ ಮೇಲೆ ಸಂಚರಿಸುತ್ತಿದ್ದುದನ್ನು ಯಾರೂ ನೋಡಿರಲಿಲ್ಲ. ಕೆಲವರು ಹೇಳುತ್ತಿದ್ದ ಪ್ರಕಾರ, ರಾತ್ರಿಯ ಹೊತ್ತಿನಲ್ಲಿ ಆತ ತನ್ನ ದೋಣಿಯನ್ನು ದ್ವೀಪಗಳ ಬಳಿಯಲ್ಲಿ ಲಂಗರುಹಾಕಿ ನಿಲ್ಲಿಸಿಕೊಳ್ಳುತ್ತಿದ್ದ; ದೋಣಿಯಲ್ಲಿಯೇ ನಿದ್ರಿಸುತ್ತಿದ್ದ. ಆತ ಒಂದು ಬೆಂಕಿಕಡ್ಡಿಯನ್ನು ಗೀರಿದ ಲಕ್ಷಣವೂ ಕಂಡುಬರುತ್ತಿರಲಿಲ್ಲ; ಬೆಂಕಿಯನ್ನು ಆತ ಬಳಸುತ್ತಲೇ ಇರಲಿಲ್ಲ; ನಾನು ಬಂಡೆಯ ಪೊಟರೆಯಲ್ಲಿ ಇಟ್ಟುಬರುತ್ತಿದ್ದ ಆಹಾರದಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಆತ ತೆಗೆದುಕೊಂಡು ಹೋಗುತ್ತಿದ್ದ. ಆದರೆ, ಅದು ಒಬ್ಬ ವ್ಯಕ್ತಿಯ ಜೀವನಕ್ಕೆ ಖಂಡಿತವಾಗಿಯೂ ಸಾಕಾಗುತ್ತಿರಲಿಲ್ಲ. ದೋಣಿಯನ್ನು ಚಲಾಯಿಸುವುದಕ್ಕಾದರೂ ಶಕ್ತಿ ಬೇಡವೆ? ನದಿಯ ಪ್ರವಾಹದಿಂದ ಆತ ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳುತ್ತಿದ್ದ? ಎಲ್ಲವೂ ಯಕ್ಷ ಪ್ರಶ್ನೆಗಳೇ!

ತಂಗಿಯ ವಿವಾಹ ನಿಶ್ಚಯವಾಯಿತು. ಅಮ್ಮ ಅಳಿಯನಾಗುವ ವ್ಯಕ್ತಿಗೆ ನೇರವಾಗಿಯೇ ಹೇಳಿದಳು, “”ನಾವು ಇದನ್ನು ಸಂಭ್ರಮದ ರೀತಿಯಲ್ಲಿ ನಡೆಸುವುದು ಸಾಧ್ಯವಿಲ್ಲ. ನಮ್ಮ ಮನಸ್ಸು ನೊಂದಿದೆ. ಹಾಗೆಂದು, ಮಗಳ ವಿವಾಹ ನಡೆಸದೇ ಇರುವುದೂ ಸಾಧ್ಯವಾಗದು. ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಸರಳವಾಗಿ ವಿವಾಹ ಮಾಡಿಕೊಡುತ್ತೇವೆ.” ತಂಗಿಯ ಕೈಹಿಡಿಯುವುದಕ್ಕೆ ಮುಂದೆ ಬಂದ ವ್ಯಕ್ತಿಯೂ ಇದಕ್ಕೆ ಒಪ್ಪಿಕೊಂಡ. ವಿವಾಹ ಕಾರ್ಯ ಮುಗಿಯಿತು. ಈ ಎಲ್ಲ ಸಂದರ್ಭಗಳಲ್ಲಿಯೂ ನನಗೆ, ನನ್ನ ಮನೆಯ ಇತರ ಸದಸ್ಯರಿಗೆ ಅಪ್ಪನದ್ದೇ ಚಿಂತೆ. “ಅದು ಹೇಗೆ ದೋಣಿಯಲ್ಲಿಯೇ, ಎರಡು ತೀರಗಳ ನಡುವೆ ಬದುಕು ನಡೆಸುತ್ತಿದ್ದಾನೆಯೋ!’

ನಾನು ಕೆಲವೊಮ್ಮೆ ಅಪ್ಪನಿಗಾಗಿ ಕೆಲವು ಬಟ್ಟೆಗಳನ್ನು ಬಂಡೆಯ ಪೊಟರೆಯ ಬಳಿ ಇಟ್ಟುಬಂದಿದ್ದೂ ಇದೆ. ಆದರೆ, ಆತ ಅದನ್ನು ಸ್ವೀಕರಿಸಿರಲಿಲ್ಲ. ನಾನು ಮನಸ್ಸಿನಲ್ಲಿಯೇ ಅಪ್ಪನ ಚಿತ್ರವನ್ನು ಚಿತ್ರಿಸಿಕೊಳ್ಳುತ್ತಿದ್ದೆ. ಎಣ್ಣೆಯನ್ನೇ ಕಾಣದ ತಲೆಗೂದಲು, ಕತ್ತರಿಸಿಕೊಳ್ಳದ ಗಡ್ಡದ ಕೂದಲು, ಬೆಳೆದಿರಬಹುದಾದ ಉಗುರುಗಳು, ಸ್ನಾನವನ್ನೇ ಮಾಡದ ದೇಹ, ಬಹುತೇಕ ನಗ್ನ ಶರೀರ, ಬದಲಿಸಿಕೊಳ್ಳದ ಬಟ್ಟೆಗಳು…
ಸಾಧು-ಸನ್ಯಾಸಿಯಂತಹ ರೂಪ ಸೃಷ್ಟಿಯಾಗುತ್ತಿತ್ತು. ಹಾಗೆಯೇ ಇದ್ದರೂ ಇರಬಹುದು.

ಕೆಲವೊಮ್ಮೆ ಅನ್ನಿಸುತ್ತಿತ್ತು, ಅಪ್ಪನಿಗೆ ನಮ್ಮ ಬಗ್ಗೆ ಯಾವುದೇ ಭಾವನೆಗಳೇ ಇಲ್ಲವೇ, ಪ್ರೀತಿಯೇ ಇಲ್ಲವೆ? ನಮ್ಮ ಬಗ್ಗೆ ಆತನಿಗೆ ಏನೂ ಅನ್ನಿಸುವುದೇ ಇಲ್ಲವೆ? ಇದ್ದರೂ ಇದ್ದಿರಬಹುದು. ಆದರೆ, ನಾನು ಮಾತ್ರ ಅಪ್ಪನನ್ನು ತುಂಬಾ ಹಚ್ಚಿಕೊಂಡಿದ್ದೇನೆ. ದಿನದ ಪ್ರತಿಯೊಂದು ಕ್ಷಣವನ್ನೂ ಆತನ ನೆನಪಿನಲ್ಲಿಯೇ ಕಳೆಯುತ್ತೇನೆ. ನನ್ನ ಯಾವುದಾದರೂ ಒಳ್ಳೆಯ ಕೆಲಸವನ್ನು ಕಂಡು ಯಾರಾದರೂ ಹೊಗಳಿದಾಗ ಹೇಳುತ್ತೇನೆ, “”ಇದಕ್ಕೆಲ್ಲ ಅಪ್ಪನೇ ಕಾರಣ; ಆತನೇ ನನಗೆ ಇಂತಹ ಒಳ್ಳೆಯ ಗುಣಗಳನ್ನು ಕಲಿಸಿದವನು. ಎಲ್ಲ ಗೌರವವೂ ಅಪ್ಪನಿಗೇ ಸಲ್ಲಬೇಕು” ಆದರೆ ಇವುಗಳೆಲ್ಲವೂ ಸತ್ಯದಿಂದ ತುಂಬಿರುವಂತೆ ಕಂಡುಬರುವ ಅಪ್ಪಟ ಸುಳ್ಳುಗಳಾಗಿದ್ದವು.

ಈ ಮಧ್ಯೆ, ನನ್ನ ತಂಗಿಗೆ ಗಂಡು ಮಗು ಜನಿಸಿತು. ಆಕೆ ತನ್ನ ಕರುಳಿನ ಕುಡಿಯನ್ನು ಅದರ ಅಜ್ಜ (ನನ್ನ ಹಾಗೂ ಆಕೆಯ ಅಪ್ಪ)ನಿಗೆ ತೋರಿಸಲೇಬೇಕೆಂದು ಒಂದು ದಿನ ಹಠ ಹಿಡಿದಳು. ಹಾಗಾಗಿ, ನಾವೆಲ್ಲರೂ ಆ ದಿನ ನದಿಯ ತೀರಕ್ಕೆ ಹೋದೆವು. ತಂಗಿಯ ಗಂಡನೂ ಜೊತೆಯಲ್ಲಿದ್ದ. ಆಕೆ ಮಗುವನ್ನು ಎತ್ತರಕ್ಕೆ ಹಿಡಿದಿದ್ದಳು. ತಂಗಿಯ ಗಂಡ ಮಗುವಿಗೆ ಬಿಸಿಲು ಬೀಳಬಹುದು ಎನ್ನುವ ಕಾರಣದಿಂದ ಕೊಡೆಯನ್ನು ಹಿಡಿದಿದ್ದ. ನಾವೆಲ್ಲರೂ ಒಟ್ಟಾಗಿ ಜೋರಾದ ಧ್ವನಿಯಲ್ಲಿ “”ಅಪ್ಪ… ಅಪ್ಪ…” ಎಂದು ಕೂಗಿದೆವು. ಬಹಳ ಕಾಲ, ಬಹಳ ಬಾರಿ. ಆದರೆ, ಏನೂ ಪ್ರಯೋಜನವಾಗಲಿಲ್ಲ. ತಂಗಿ ಜೋರಾಗಿ ರೋದಿಸತೊಡಗಿದಳು. ಎಲ್ಲರೂ ಒಬ್ಬರ ತೋಳಿನಲ್ಲಿ ಮತ್ತೂಬ್ಬರು ಮುಖ ಮುಚ್ಚಿಕೊಂಡು ಅತ್ತೆವು. ಅಪ್ಪ ಅಷ್ಟೊಂದು ಕಠಿಣ ಹೃದಯಿಯಾಗಿಬಿಟ್ಟನೆ?

ನನ್ನ ತಂಗಿ ಮತ್ತು ಆಕೆಯ ಗಂಡ ದೂರದ ತಮ್ಮ ಊರಿಗೆ ಹೋಗಿಬಿಟ್ಟರು. ನನ್ನ ಅಣ್ಣನೂ ಕೆಲಸವನ್ನು ಹುಡುಕಿಕೊಂಡು ಒಂದು ನಗರಕ್ಕೆ ಹೊರಟುಹೋದ. ಸಮಯದಲ್ಲಿ ಪರಿವರ್ತನೆ ! ಅದೃಷ್ಟದಲ್ಲಿ ಬದಲಾವಣೆ ! ಕೊನೆಗೆ ನನ್ನ ಅಮ್ಮನೂ ಮಗಳೊಂದಿಗೆ ಇರುವುದಕ್ಕೆ ಹೊರಟುಹೋದಳು. “”ನೀನೂ ಬರುವುದಿದ್ದರೆ ಬಾ…” ಅಮ್ಮ ಹಾಗೂ ತಂಗಿ ಇಬ್ಬರೂ ನನ್ನನ್ನು ಕರೆದರು. ಹೇಗೆ ತಾನೇ ಹೋಗಲಿ, ಅಪ್ಪನನ್ನು ಬಿಟ್ಟು! ನಾನೊಬ್ಬನೇ ಉಳಿದುಬಿಟ್ಟೆ.

ವಿವಾಹ ಮಾಡಿಕೊಳ್ಳುವ ಗೊಡವೆಗೆ ನಾನು ಹೋಗಲಿಲ್ಲ. ಆ ಬಗ್ಗೆ ಯೋಚಿಸಲೂ ಇಲ್ಲ. ಎಲ್ಲ ದುರದೃಷ್ಟವೂ ನನಗೇ ಜೋತುಬಿದ್ದಿವೆ ಎನ್ನಿಸುತ್ತಿತ್ತು ಕೆಲವೊಮ್ಮೆ. ಅಪ್ಪನಿಗೆ ಒಂದಲ್ಲ ಒಂದು ದಿನ ನನ್ನ ಆವಶ್ಯಕತೆ ಬಂದೇ ಬರುತ್ತದೆ ಎನ್ನುವ ಹುಚ್ಚು ವಿಶ್ವಾಸ. ಅಪ್ಪ ದೋಣಿಯನ್ನು ತಯಾರಿಸಿದ್ದು ಯಾಕೆ, ಆತ ಏಕೆ ದೋಣಿಯಲ್ಲಿಯೇ ಕಾಲ ಕಳೆಯುತ್ತಿದ್ದಾನೆ, ನಮ್ಮಿಂದಾದ ಅಪರಾಧವಾದರೂ ಏನು… ಮುಂತಾದ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಳ್ಳುವ ಕುತೂಹಲ. ಆದರೆ, ಯಾರಿಂದ? ದೋಣಿಯನ್ನು ತಯಾರಿಸಿಕೊಟ್ಟವನಿಗೆ ಅಪ್ಪ ಕಾರಣವನ್ನು ತಿಳಿಸಿದ್ದನಂತೆ. ಆದರೆ, ಆಗ ನಾನು ಚಿಕ್ಕವನಾಗಿದ್ದೆ. ಈಗ ದೊಡ್ಡವನಾಗಿದ್ದೇನೆ. ಆದರೆ, ದೋಣಿಯನ್ನು ಅಪ್ಪನಿಗೆ ತಯಾರಿಸಿಕೊಟ್ಟಿದ್ದ ವ್ಯಕ್ತಿ ತನ್ನ ಇಹಲೋಕದ ಯಾತ್ರೆಯನ್ನು ಮುಗಿಸಿಬಿಟ್ಟಿದ್ದಾನೆ. ಇತರ ಯಾರಿಗೂ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಹಾಗಿದ್ದರೆ, ನನ್ನ ಅಪರಾಧವಾದರೂ ಏನು? ಅಪ್ಪನೂ ಯಾವತ್ತೂ ನನ್ನಿಂದ ದೂರವುಳಿಯಬೇಕಾದ ಮತ್ತು ನಾನು ಯಾವತ್ತೂ ಅಪ್ಪನ ಅನುಪಸ್ಥಿತಿಯಲ್ಲಿಯೇ ಬದುಕಬೇಕಾದ ಅನಿವಾರ್ಯತೆ ಏಕೆ?

ಕಾಲ ಸರಿದುಹೋಗುತ್ತಿತ್ತು. ನಾನು ವೃದ್ಧನಾಗಿದ್ದೆ. ವಯೋಸಹಜ ಸಮಸ್ಯೆಗಳು ಒಂದೊಂದಾಗಿ ನನ್ನನ್ನು ಆಕ್ರಮಿಸತೊಡಗಿದ್ದವು. ರೋಗಗಳು ನನ್ನತ್ತ ಮುಖಮಾಡಿದ್ದವು. ಮೊಣಕಾಲು ಆಗಾಗ ಮಾತನಾಡುತ್ತಿತ್ತು. ತಲೆ ಮತ್ತು ಗಡ್ಡದ ಕೂದಲುಗಳು ಬೆಳ್ಳಗಾಗಿದ್ದವು. ಹಾಗಿದ್ದರೆ, ನನ್ನಪ್ಪ ನನಗಿಂತಲೂ ವೃದ್ಧನಲ್ಲವೆ! ಆತನಿಗೆ ನನಗಿಂತಲೂ ಅಧಿಕ ಸಮಸ್ಯೆಗಳು ಇರಬೇಕಲ್ಲವೆ! ಆದರೂ ಆತ ನೀರಿನ ಮೇಲೆಯೇ ದೋಣಿಯನ್ನು ನಡೆಸುತ್ತ, ಎರಡು ತೀರಗಳ ನಡುವೆಯೇ ಸಂಚರಿಸುತ್ತ, ಹೇಗೆ ಕಾಲ ಕಳೆಯುತ್ತಿದ್ದಾನೆ? ಆತ ಯಾಕೆ ಹಾಗೆ ಮಾಡುತ್ತಿದ್ದಾನೆ? ನದಿಯಲ್ಲಿ ಸ್ವಲ್ಪ ದೂರಕ್ಕೆ ಹೋದರೆ ದೊಡ್ಡ ಜಲಪಾತ. ಒಂದು ವೇಳೆ ಅಪ್ಪ ಅದರತ್ತ ಸಾಗಿದರೆ ಎಲ್ಲವೂ ಅನರ್ಥವಾಗಿಬಿಡುತ್ತದೆ. ನೀರಿನ ರಭಸದಿಂದ ಅಪ್ಪ ಹೇಗೆ ಬಚಾವಾಗುತ್ತಿದ್ದಾನೆ? ನಾನೇಕೆ ಹೀಗೆ ಒಂಟಿಯಾಗಿ, ಅಪ್ಪನನ್ನು ನೆನಪಿಸಿಕೊಳ್ಳುತ್ತ ಅಲೆಯುತ್ತಿದ್ದೇನೆ? ನನಗೆ ಹುಚ್ಚೇನೂ ಹಿಡಿದಿಲ್ಲ ತಾನೇ? ಇಷ್ಟು ವರ್ಷಗಳಲ್ಲಿ ನಮ್ಮ ಮನೆಯಲ್ಲಿ ಯಾರೂ ನನ್ನನ್ನು ಈ ಶಬ್ದದಿಂದ ಕರೆದಿಲ್ಲ. ಯಾಕೆಂದರೆ, ಯಾರೂ ಹುಚ್ಚರಲ್ಲ ಅಥವಾ ಎಲ್ಲರೂ ಹುಚ್ಚರೇ.

ನದಿಯ ತೀರದಲ್ಲಿ ಸಂಚರಿಸುತ್ತಿದ್ದೆ. ಒಮ್ಮೆಗೇ ಜೋರಾಗಿ ಗಾಳಿ ಬೀಸಿತು. ಅಲೆಗಳು ಎದ್ದು ಕುಣಿದಾಡಲಾರಂಭಿಸಿದವು. ಕೊನೆಗೂ, ಬಹುದೂರದಲ್ಲಿ ಅಪ್ಪನ ದೋಣಿ ಕಾಣಿಸಿತು. ನಾನು ನನ್ನ ಅಂಗಿಯನ್ನು ಬಿಚ್ಚಿ, ಬಾವುಟದ ರೀತಿಯಲ್ಲಿ ಬೀಸತೊಡಗಿದೆ. ಆ ದೋಣಿ ನನ್ನ ಕಡೆಗೇ ಬರಲಾರಂಭಿಸಿತು. ಸ್ವಲ್ಪ ಸಮಯದಲ್ಲಿಯೇ ದೋಣಿಯಲ್ಲಿದ್ದ ಅಪ್ಪ ಕಾಣಿಸಿದ. ದೋಣಿಯ ಹಿಂಬದಿಯಲ್ಲಿ ಇನ್ಯಾವುದೋ ಒಂದು ಅಸ್ಪಷ್ಟ ಆಕೃತಿ! ಅಪ್ಪನಿಗೆ ಹೇಳಲೇಬೇಕು ಎಂದುಕೊಂಡಿದ್ದ ಕೆಲವು ಮಾತುಗಳನ್ನು ನಾನು ಜೋರಾದ ಧ್ವನಿಯಲ್ಲಿ, ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಗಟ್ಟಿಯಾಗಿ ಹೇಳಿದೆ.

“”ಅಪ್ಪ, ನೀವು ದೋಣಿಯಲ್ಲಿ ವಾಸಿಸುವುದಕ್ಕೆ ಆರಂಭಿಸಿ ಬಹಳ ಸಮಯ ಕಳೆದುಹೋಗಿದೆ. ನೀವು ಮುದುಕರಾಗಿಬಿಟ್ಟಿದ್ದೀರಿ. ಹಿಂದಿರುಗಿ ಬಂದುಬಿಡಿ. ಇನ್ನೂ ನೀವು ಹಠ ಮಾಡಬೇಕಾದ ಆವಶ್ಯಕತೆ ಇಲ್ಲ. ಬೇಕಿದ್ದರೆ, ನಿಮ್ಮ ಬದಲಿಗೆ ನಾನು ಹೊರಟುಹೋಗುತ್ತೇನೆ, ನಿಮ್ಮದೇ ದೋಣಿಯಲ್ಲಿ. ನೀವು ಬಯಸಿದರೆ, ಇದೇ ಕ್ಷಣ ನಿಮ್ಮ ಸ್ಥಾನವನ್ನು ನಾನು ಅಲಂಕರಿಸುತ್ತೇನೆ. ನೀವು ಹಿಂದಿರುಗಿ ಬಂದುಬಿಡಿ…”

ಅಪ್ಪನಿಗೆ ನನ್ನ ಮಾತುಗಳು ಕೇಳಿಸಿದ್ದಿರಬಹುದು. ಆತ ತನ್ನ ದೋಣಿಯ ದಿಕ್ಕನ್ನು ಬದಲಿಸಿದ್ದ. ದೋಣಿ ಈಗ ನನ್ನ ಕಡೆಗೆ ಧಾವಿಸುತ್ತಿತ್ತು. ಬಹುಶಃ ಆತ ನನ್ನ ಅಹವಾಲನ್ನು ಸ್ವೀಕರಿಸಿದ್ದಿರಬಹುದು. ಆದರೆ, ದೋಣಿ ನನ್ನನ್ನು ಸಮೀಪಿಸುತ್ತಿದ್ದಂತೆಯೇ ನಾನು ಗಾಬರಿಯಾದೆ, ಭಯಭೀತನಾದೆ, ಅಲ್ಲಿಂದ ಓಡತೊಡಗಿದೆ. ಏಕೆಂದರೆ, ಅಪ್ಪ ನನಗೆ ಅನ್ಯ ಗ್ರಹದ ಜೀವಿಯಂತೆ ಕಂಡುಬಂದಿದ್ದ. ದೋಣಿಯ ಹಿಂದೆ ಇನ್ಯಾವುದೋ ಆಕೃತಿ ಭಯಹುಟ್ಟಿಸುವ ರೀತಿಯಲ್ಲಿ ಕುಳಿತಿತ್ತು.

ಅಪ್ಪನ ಬಳಿಯಲ್ಲಿ ಕೂಡಲೇ ಕ್ಷಮೆ ಕೇಳಿಬಿಡಬೇಕು, ನಾನು ಆತನಿಗೆ ನೀಡಿದ ಭರವಸೆಯನ್ನು ಕುರಿತು… ಭಯಾನಕ ದೃಶ್ಯವನ್ನು ನೋಡಿದ ಸಂದರ್ಭದಲ್ಲಿ ಉಂಟಾಗುವಂತೆ, ನನ್ನ ಶರೀರ ತಣ್ಣಗಾಗತೊಡಗಿತ್ತು. ನಾನು ಹಾಸಿಗೆ ಹಿಡಿದೆ. ಇದಾದ ನಂತರ ಅಪ್ಪನನ್ನು ಯಾರೂ ನೋಡಿಲ್ಲವಂತೆ. ಇಷ್ಟೆಲ್ಲ ಆದ ಮೇಲೆಯೂ ನಾನು ಒಬ್ಬ ಮನುಷ್ಯನೆ? ನಾನು, ಯಾರೂ ಎಂದಿಗೂ ಆಗಬಾರದ ವ್ಯಕ್ತಿ. ನಾನು, ಯಾವತ್ತೂ ಶಾಂತವಾಗಿರಬೇಕಾದ, ಮಾತನಾಡಲೇಬಾರದ ವ್ಯಕ್ತಿ. ನನಗೆ ಗೊತ್ತು ಬಹಳ ತಡವಾಗಿಹೋಗಿದೆ. ನಾನೀಗ ಪ್ರಯಾಣಿಸಬೇಕಾಗಿದ್ದು, ಅಪ್ಪನ ದೋಣಿಯಲ್ಲಿ ಕುಳಿತು ನೀರಿನ ಕೆಳಭಾಗಕ್ಕೆ. ಏಕೆಂದರೆ, ನದಿಯ ಮೂರನೇ ತೀರವಿರುವುದು ಅದರ ಆಳವಾದ ತಳಭಾಗದಲ್ಲಿ.

ನಾಗ ಎಚ್‌. ಹುಬ್ಳಿ

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.