ಸಂಸ್ಕಾರದ ಮೂರು ಮಜಲುಗಳು
Team Udayavani, May 14, 2017, 3:45 AM IST
ಯು. ಆರ್. ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿಯ ನಾಯಕ ಪ್ರಾಣೇಶಾಚಾರ್ಯರು ಪಾತ್ರ ಬೆಳವಣಿಗೆಯಿಲ್ಲದ ಒಬ್ಬ ಚಪ್ಪಟೆ ವ್ಯಕ್ತಿಯಲ್ಲ ಎನ್ನುವುದೇ ಅವರನ್ನು ಸ್ವಾರಸ್ಯಕರ ಕಥಾನಾಯಕನನ್ನಾಗಿ ಮಾಡುವುದು. ಚಪ್ಪಟೆ ಪಾತ್ರವೆಂದರೆ ಆರಂಭದಿಂದ ಅಂತ್ಯದ ತನಕ ಒಂದೇ ಸ್ವಭಾವವನ್ನು ಹೊಂದಿಕೊಂಡು, ಯಾವ ಆಂತರಿಕ ಬೆಳವಣಿಗೆಯೂ ಇಲ್ಲದಂಥ ವ್ಯಕ್ತಿಯನ್ನು ಸೂಚಿಸುವಂಥದು. ಪ್ರಾಣೇಶಾಚಾರ್ಯರು ಹಾಗಲ್ಲ. ಕಾದಂಬರಿಯೊಳಗಿನ ಘಟನೆಗಳು ತೆಗೆದುಕೊಳ್ಳುವುದು ಬರೇ ಒಂದೆರಡು ದಿನಗಳನ್ನು ಮಾತ್ರ. ಆದರೆ ಅಷ್ಟರಲ್ಲಿ ಆಚಾರ್ಯರ ಬದುಕು ಅÇÉೋಲ ಕÇÉೋಲವಾಗಿ ಕೊನೆಯಲ್ಲಿ ಅದು ಕವಲು ದಾರಿಯಲ್ಲಿ ಬಂದು ನಿಂತಿರುತ್ತದೆ. ಪ್ರಾಣೇಶಾಚಾರ್ಯರು ಸಂಸ್ಕಾರದ ಮೂರು ಮಜಲುಗಳನ್ನು ಹಾದು ಬರುವ ಪ್ರಕ್ರಿಯೆಯೊಂದನ್ನು ಕಾದಂಬರಿ ನಮಗೆ ತೋರಿಸಿಕೊಡುತ್ತದೆ: ಧರ್ಮ, ಭಕ್ತಿ ಮತ್ತು ಅಸ್ತಿತ್ವ ಎಂದು ಸಂಕ್ಷಿಪ್ತವಾಗಿ ಇವುಗಳನ್ನು ಹೆಸರಿಸಬಹುದು.
ದೂರ್ವಾಸಪುರದ ಬ್ರಾಹ್ಮಣರ ಅಗ್ರಹಾರದಲ್ಲಿ ಬೀದಿಯ ಆಚೀಚೆ ಒಟ್ಟು ಹತ್ತು ಮನೆಗಳು. ಅವುಗಳಲ್ಲಿ ಒಂದು ಕೊನೆಗೆ ಎಲ್ಲಕ್ಕಿಂತ ದೊಡ್ಡದಾದ ಮನೆ ನಾರಣಪ್ಪನದು. ಉಳಿದ ಮನೆಗಳು ಗರುಡಾಚಾರ್ಯ, ಲಕ್ಷ್ಮಣಾಚಾರ್ಯ, ದುರ್ಗಾಭಟ್ಟ (ಈತನೊಬ್ಬನೇ ಸ್ಮಾರ್ತ, ಉಳಿದವರೆಲ್ಲ ಮಾಧ್ವರು) ಮುಂತಾದವರದು; ಅವರಲ್ಲಿ ಪ್ರಾಣೇಶಾಚಾರ್ಯರದೂ ಒಂದು ಮನೆ. ಇಡೀ ಅಗ್ರಹಾರಕ್ಕೆ ನಾರಣಪ್ಪ ಮತ್ತು ಪ್ರಾಣೇಶಾಚಾರ್ಯರು ಎರಡು ಧ್ರುವಗಳ ಹಾಗೆ: ನಾರಣಪ್ಪ ಧರ್ಮಭ್ರಷ್ಟನಾಗಿ ಬದುಕುತ್ತಿದ್ದರೆ, ಪ್ರಾಣೇಶಾಚಾರ್ಯರು ಧರ್ಮ ಪರಿಪಾಲಕರಾಗಿ¨ªಾರೆ. ನಾರಣಪ್ಪ ಇಡೀ ಅಗ್ರಹಾರಕ್ಕೆ ಒಂದು ಸಮಸ್ಯೆ; ಪ್ರಾಣೇಶಾಚಾರ್ಯರು ಅಗ್ರಹಾರಕ್ಕೆ ಗುರುಸಮಾನರು. ಕಾದಂಬರಿಯಲ್ಲಿ ಇಂಥದೊಂದು ಧ್ರುವೀಕರಣವಿದೆ. ಇದರ ನಡುವಿನ ಜನರೇನೂ ಉತ್ತಮರಲ್ಲ ಎನ್ನುವುದು ನಾರಣಪ್ಪ ಬ್ರಾಹ್ಮಣ್ಯವನ್ನು ಹೀಯಾಳಿಸುವುದಕ್ಕೆ ಒಂದು ಕಾರಣ ಒದಗಿಸುತ್ತದೆ. ನಾರಣಪ್ಪ ತಾನು ಕೆಟ್ಟುದಲ್ಲ, ಅಗ್ರಹಾರದ ಯುವಕರನ್ನೂ ಕೆಡಿಸುತ್ತಾನೆ: ಗರುಡಾಚಾರ್ಯರ ಮಗ ಶ್ಯಾಮನನ್ನು ಮಿಲಿಟರಿ ಸೇರಲು ಪ್ರೋತ್ಸಾಹಿಸುತ್ತಾನೆ, ಲಕ್ಷ್ಮಣಾಚಾರ್ಯರ ಅಳಿಯ ಶ್ರೀಪತಿಯನ್ನು ಇತರ ಹೆಣ್ಣುಗಳ ಸಂಗಕ್ಕೆ ಇಳಿಸುತ್ತಾನೆ. ಈ ಕುರಿತು ಗರುಡ ಮತ್ತು ಲಕ್ಷ್ಮಣರ ದೂರನ್ನು ಕೇಳಿ ಸಾಕಾಗಿ ಒಂದು ದಿನ ಪ್ರಾಣೇಶಾಚಾರ್ಯರು ಸ್ವತಃ ನಾರಣಪ್ಪನ ಮನೆಗೆ ಹೋಗಿ ಅವನನ್ನು ಎದುರಿಸಿದರೆ, ಅವನು ಬ್ರಾಹ್ಮಣಧರ್ಮವನ್ನೇ ಜರೆದ: “”ಇನ್ನು ನಿಮ್ಮ ಶಾಸ್ತ್ರ ನಡೆಯೋದಿಲ್ಲ. ಮುಂದೆ ಬರೋದು ಕಾಂಗ್ರೆಸ್ಸು. ಪಂಚಮರನ್ನು ದೇವಸ್ಥಾನದೊಳಕ್ಕೆ ಬಿಡಬೇಕು” (ಸಂಸ್ಕಾರ, ವಿಶ್ವಕನ್ನಡ ಸಮ್ಮೇಳನ ಆವೃತ್ತಿ, 1982, ಪು. 21) ಎಂದು ಮುಂತಾಗಿ. “”ಕೊನೆಯಲ್ಲಿ ಗೆÇÉೋದು ನಾನೋ, ನೀವೋ? ನೋಡುವ ಆಚಾರ್ಯರೆ, ಎಷ್ಟು ದಿನ ಈ ಬ್ರಾಹ್ಮಣ್ಯ ಉಳಿಯುತ್ತೆ ಅಂತ? ಈ ಬ್ರಾಹ್ಮಣ್ಯದ ಮರ್ಯಾದೇನೆಲ್ಲ ನಾನು ಬೇಕಾದರೆ ಒಂದು ಹೆಣ್ಣಿನ ಸುಖಕ್ಕೆ ಸುಳಿದು ಹಾಕಿಬಿಡ್ತೇನೆ. ನೀವಿನ್ನು ಹೊರಡಿ. ಹೆಚ್ಚಿಗೆ ಮಾತಾಡಿ ನಿಮ್ಮನ್ನ ನೋಯಿಸೋಕ್ಕೆ ಇಷ್ಟವಿಲ್ಲ” (ಪು. ಅದೇ) ಎನ್ನುತ್ತಾನೆ.
ಇಂಥ ನಾರಣಪ್ಪ ಪ್ಲೇಗಿನಿಂದ ಸತ್ತು ಅವನ ಶವಸಂಸ್ಕಾರವನ್ನು ಯಾರು ಮಾಡಬೇಕು ಎನ್ನುವ ಪ್ರಶ್ನೆಯೊಂದಿಗೆ ಸಂಸ್ಕಾರ ಮೊದಲಾಗುತ್ತದೆ. ಗರುಡ ಮತ್ತು ಲಕ್ಷ್ಮ¾ಣ ಅವನ ದೂರದ ಬಂಧುಗಳು, ಆದರೆ ಅವರು ಮುಂದೆ ಬರುವುದಿಲ್ಲ. ಜಾತಿಗೆಟ್ಟ ಇಂಥವನ ಶವಸಂಸ್ಕಾರ ಯಾರು ಮಾಡಬೇಕು? ಪ್ರಾಣೇಶಾಚಾರ್ಯರು ಧರ್ಮಶಾಸ್ತ್ರಗಳನ್ನು ಹುಡುಕುತ್ತಾರೆ. ತಾರುಣ್ಯದÇÉೇ ಕಾಶಿಗೆ ಹೋಗಿ ವೇದ ವೇದಾಂತ, ತರ್ಕಶಾಸ್ತ್ರಗಳನ್ನು ಕಲಿತು ಬಂದವರು ಅವರು, ದಕ್ಷಿಣದÇÉೆಲ್ಲ ಪಂಡಿತರೆಂದು ಹೆಸರು ಪಡೆದವರು. ಆದರೂ ಅವರಿಗೆ ಉತ್ತರ ಹೊಳೆಯುವುದಿಲ್ಲ, ಗ್ರಂಥಗಳಲ್ಲೂ ದೊರಕುವುದಿಲ್ಲ. ನಿನ್ನ ಮಗನ ಹಿತರಕ್ಷಣೆ ಮಾಡುತ್ತೇನೆಂದು ನಾರಣಪ್ಪನ ತಾಯಿಗೆ ಅವರು ಮಾತು ಕೊಟ್ಟಿದ್ದರು; ನಾರಣಪ್ಪ ಒಳ್ಳೆಯವನಾಗಲಿ ಎಂದು ಪ್ರಾರ್ಥಿಸಿದ್ದರು, ಉಪವಾಸ ಮಾಡಿದ್ದರು. ಕೊನೆಗೂ ನಾರಣಪ್ಪನ ರಾಕ್ಷಸ ಸ್ವಭಾವದೆದುರು ತಮ್ಮ ಸನಾತನ ಧರ್ಮದ ತಪಸ್ಸೇ ಗೆಲ್ಲುತ್ತದೆ ಎಂಬ ಭರವಸೆ ಇರಿಸಿಕೊಂಡಿದ್ದರು. ಆದರೆ ನಾರಣಪ್ಪ ಸುಧಾರಿಸಲಿಲ್ಲ, ಮಾತ್ರವಲ್ಲ, “”ಬದುಕಿ¨ªಾಗ ಹೇಗೋ ಹಾಗೆ ಈಗ ಸತ್ತು ನನ್ನ ಬ್ರಾಹ್ಮಣ್ಯದ ಸತ್ವ ಪರೀಕ್ಷೆ ಮಾಡುತ್ತಿ¨ªಾನೆ” (ಪು. ಅದೇ).
ಧರ್ಮಪರೀಕ್ಷೆಯಲ್ಲಿ ಸೋತ ಆಚಾರ್ಯರು ಭಕ್ತಿಯ ಮೊರೆಹೋಗುತ್ತಾರೆ. ಹೊಳೆಯ ಆಚೆ ಬದಿಯÇÉೊಂದು ಮಾರುತಿ ಗುಡಿಯಿದೆ. ಪ್ರತಿದಿನವೂ ಸ್ನಾನ ಮಾಡಿ ಗುಡಿಗೆ ಹೋಗಿ ಮಾರುತಿಯನ್ನು ಗಂಧ-ಹೂವು-ತುಳಸಿಗಳಿಂದ ಅಲಂಕರಿಸಿ ಪೂಜೆ ಮಾಡಿ ಬರುವುದು ಅವರು ಬಹುಕಾಲದಿಂದ ನಡೆಸಿಕೊಂಡು ಬಂದ ಪದ್ಧತಿ. ಆಚಾರ್ಯರು ಹೀಗೆ ಮಾರುತಿ ಮುಂದೆ ಕಣ್ಣು ಮುಚ್ಚಿ ಕುಳಿತು ಧ್ಯಾನಿಸಿ ತನ್ನೆಲ್ಲ ಸಂಕಟಗಳನ್ನು ನಿವೇದಿಸಿ ಬೇಡಿಕೊಳ್ಳುವುದು; “ಆಗಲಿ ಎಂದು ನಿನ್ನ ಆಜ್ಞೆಯಾದರೆ ಬಲಗಡೆಯ ಪ್ರಸಾದವನ್ನು ನೀಡಪ್ಪ; ಶವ ಸಂಸ್ಕಾರ ನಿಷೇಧವಾದರೆ ಎಡಗಡೆಯ ಪ್ರಸಾದವನ್ನು ದಯಪಾಲಿಸಪ್ಪ. ಅಲ್ಪಮತಿಯಾದ್ದರಿಂದ ಆಪದ್ಧರ್ಮವೇನೆಂದು ಅರಿಯದೆ ನಿನ್ನ ಬಳಿ ಬಂದೆ’ (ಪು. 55). ಹೀಗೆ ಹೂವಿನ ಪ್ರಸಾದ ಎಡಗಡೆಗೆ ಬೀಳುತ್ತದೋ ಬಲಗಡೆಗೆ ಬೀಳುತ್ತದೋ ಎಂದು ಕಾಯುತ್ತಾರೆ.
ಆಚಾರ್ಯರದು ಶುದ್ಧಾಂಗ ಭಕ್ತಿ; ಅದು ಭಾರತೀಯ ಭಕ್ತಿಪಂಥದ ಯಾವ ಆದರ್ಶ ಭಕ್ತನಿಗೂ ಕಮ್ಮಿಯಲ್ಲ ಎನ್ನುವುದು ಅನಂತಮೂರ್ತಿಯವರು ನೀಡುವ ವರ್ಣನೆಯಿಂದ ಗೊತ್ತಾಗುತ್ತದೆ. ಆಚಾರ್ಯರು ತಮ್ಮ ಇಷ್ಟದೈವದ ಎದುರು ಆರ್ತರಾಗುತ್ತಾರೆ, ಆದ್ರìರಾಗುತ್ತಾರೆ, ಹಟ ಮಾಡುತ್ತಾರೆ, ಕೋಪಿಸುತ್ತಾರೆ, ಬೈಯುತ್ತಾರೆ ಕೂಡ. “ಕಾಡಿದರು, ದೇವರನ್ನು ಒಲಿಸುವ ಪ್ರೇಮಭಾವದ ಕೀರ್ತನೆಗಳನ್ನು ಹಾಡಿದರು. ಮಗುವಾದರು. ಹೆಂಡತಿಯಾದರು.
ತಾಯಿಯಾದರು… ಆಳೆತ್ತರದ ಮಾರುತಿ ಅಂಗೈ ಮೇಲೆ ಲಕ್ಷ¾ಣನ ಪ್ರಾಣವನ್ನುಳಿಸುವ ಸಂಜೀವಿನಿ ಮೂಲಿಕೆಯುಳ್ಳ ಪರ್ವತವನ್ನೆತ್ತಿ ನಿಶ್ಚಲ ನಿಂತ. ಉದ್ದಂಡ ಎರಗಿ ಪ್ರಾಣೇಶಾಚಾರ್ಯರು ಹಲುಬಿದರು. ಸಂಜೆಯಾಯಿತು. ಕತ್ತಲಾಯಿತು. ನೀಲಾಂಜನದ ಬೆಳಕಿನಲ್ಲಿ ಪುಷ್ಪಾಲಂಕೃತ ಮಾರುತಿ ಜಗ್ಗಲಿಲ್ಲ; ಎಡಪ್ರಸಾದವನ್ನೂ ಕೊಡಲಿಲ್ಲ, ಬಲಪ್ರಸಾದವನ್ನೂ ಕೊಡಲಿಲ್ಲ ‘ (ಪು. 64). ಆಚಾರ್ಯರಿಗೆ ತಟ್ಟನೆ ಮನೆಯಲ್ಲಿ ನಿಸ್ಸಹಾಯಕಳಾಗಿರುವ ಹೆಂಡತಿಯ ನೆನಪಾಗಿ, ಅವಳಿಗೆ ಔಷಧ ಕುಡಿಸಲೆಂದು ಎದ್ದು ನಡೆದರು. ಈ ಭಕ್ತನ ಹತಾಶೆಯ ಸ್ಥಿತಿಯÇÉೇ ಅವರಿಗೆ ಚಂದ್ರಿ ಸಿಕ್ಕಿದುದು;
ಕಾಲಾಂತರದ ದೈಹಿಕ ಮತ್ತು ಭಾವನಾತ್ಮಕ ಅಗತ್ಯಗಳ್ಳೋ ಎಂಬಂತೆ ಅವಳ ಜತೆ ಜಾತಿ ನೀತಿಗಳನ್ನು ಮತ್ತು ತಾವೇ ನಂಬಿಕೊಂಡು ಬಂದಿದ್ದ ತತ್ವಗಳನ್ನು ಮೀರಿ ಸಮಾಗಮವೂ ನಡೆದುದು.
ಆಚಾರ್ಯರ ಮೂರನೆಯ ಮಜಲು ಅಲ್ಲಿಂದ ಆರಂಭವಾಗುತ್ತದೆ: ಅದು ಅಸ್ತಿತ್ವವಾದಿ ಮಜಲು, ಭಕ್ತಿಯಿಂದ ವ್ಯಕ್ತಿಯ ಕಡೆಗೆ. “ತಾನೇ ತನಗೆ ಅಪರಿಚಿತನಾಗಿಬಿಟ್ಟಂತಾಗಿ ಕಣ್ಣು ಬಿಟ್ಟು ಆಚಾರ್ಯರು ಯೋಚಿಸಿದರು. ಎಲ್ಲಿದ್ದೇನೆ? ಇಲ್ಲಿಗೆ ಹೇಗೆ ಬಂದೆ? ಇದು ಯಾವ ಕತ್ತಲು? ಇದು ಯಾವ ಕಾಡು? ಇವಳು ಯಾರು?’ (ಪು. 69). ಚಂದ್ರಿ ನಾರಣಪ್ಪನ ಶವವನ್ನು ಉರಿಸಲು ರಹಸ್ಯವಾಗಿ ಬಂಗಡೆ ಬ್ಯಾರಿಗೆ ಒಪ್ಪಿಸಿ ಊರಿಂದ ಹೊರಟು ಹೋಗುತ್ತಾಳೆ. ಆಚಾರ್ಯರ ಅವಸ್ಥೆ ಹೇಳತೀರದು. ಅವರಿಗೆ ತಾನು ಪ್ರಥಮ ಬಾರಿಗೆ ಅತಂತ್ರನಾದ ಭಾವ ಕಾಡತೊಡಗುತ್ತದೆ. ಇದೇ ಅಸ್ತಿತ್ವವಾದಿಗಳು ಹೇಳುವ ಅನಾಥ ಪ್ರಜ್ಞೆ. ಅಷ್ಟರಲ್ಲಿ ಪ್ಲೇಗಿಗೆ ಬಲಿಯಾದ ತಮ್ಮ ಪತ್ನಿಯ ಶವಕ್ಕೆ ಸಂಸ್ಕಾರ ಮಾಡಿ ನಿಜಕ್ಕೂ ಏಕಾಂಗಿಯಾಗಿ ಆಚಾರ್ಯರು “ಕಾಲು ಕೊಂಡಲ್ಲಿಗೆ ‘ ಹೋಗುವುದೆಂದು ಪೂರ್ವಾಭಿಮುಖರಾಗಿ ಊರು ತೊರೆದು ನಡೆಯುವಾಗ ಅವರ ಮನಸ್ಸಿನಲ್ಲಿ ಬರುವ ಯೋಚನೆಗಳನ್ನು ಗಮನಿಸಿ: “ನನ್ನ ಬಾಳು ಅತ್ತಲಿಗೋ ಇತ್ತಲಿಗೋ ಎಂದು ನಿರ್ಧರಿತವಾಗಬೇಕಾಗಿದ್ದ ಗಳಿಗೆಯಲ್ಲಿ ಚಂದ್ರಿಯ ಜತೆ ಸಂಭೋಗಿಸುವ ನಿಶ್ಚಯ ಆಗಿಬಿಟ್ಟಿತು. ಸ್ವಾಧೀನ ತಪ್ಪಿದರೂ ನಿಶ್ಚಯ ಮಾಡುವ ಜವಾಬ್ದಾರಿ ನನ್ನ ಮೇಲೆಯೇ ಇತ್ತು. ಮನುಷ್ಯನ ನಿಶ್ಚಯಕ್ಕೆ ಬೆಲೆಯಿರುವುದು ಹೀಗೆ ಸ್ವಾಧೀನ ತಪ್ಪುವುದು ಸಾಧ್ಯವಿರುವುದರಿಂದಲೇ ಹೊರತಾಗಿ ನಿಶ್ಚಯ ನೀರು ಕುಡಿದಷ್ಟು ಸರಾಗವಾದ್ದರಿಂದಲ್ಲ. ನಮ್ಮ ನಿಶ್ಚಯದ ಮೂಲಕ ನಮ್ಮನ್ನು ನಾವು ರೂಪಿಸಿಕೊಳ್ಳುತ್ತೇವೆ, ಈ ಘಟಕ್ಕೊಂದು ವ್ಯಕ್ತಿತ್ವದ ರೂಪುರೇಷೆ ತರುತ್ತೇವೆ… ಯಾವುದರ ವಿರುದ್ಧ ಹೋರಾಡುತ್ತ ಬಂದೆನೋ ಅದೇ ನಾನಾಗಿಬಿಟ್ಟೆ. ಯಾಕೆ? ಯಾಕೆ? ಎಲ್ಲಿ, ಹೇಗೆ, ಸೋತೆ? ಹುಡುಕಲು ಹೋದರೆ ಮತ್ತೆಲ್ಲ ಗಂಟುಕಟ್ಟಿಕೊಂಡುಬಿಡುತ್ತದೆ… ನೋಡಹೋದರೆ ಒಂದಕ್ಕಿನ್ನೊಂದು ಗಂಟುಹಾಕಿಕೊಂಡಿದೆ’ (ಪು. 100-101). ಹೀಗೆ ಸಾಗುತ್ತದೆ ಆಚಾರ್ಯರ ಅಸ್ತಿತ್ವವಾದಿ ತೊಳಲಾಟ.
ಕಾದಂಬರಿಯ ಕೊನೆಯಲ್ಲಿ ಆಚಾರ್ಯರು ದೂರ್ವಾಸಪುರಕ್ಕೆ ಮರಳಿ, ಅಗ್ರಹಾರದ ಬ್ರಾಹ್ಮಣರೆದುರು ಎಲ್ಲವನ್ನೂ ಬಿಚ್ಚಿಡುವ ನಿರ್ಧಾರ ಮಾಡುತ್ತಾರೆ. ಇದೊಂದು ಬಹಳ ಗುರುತರವಾದ ನಿರ್ಧಾರ. ಕೇವಲ ಆಚಾರ್ಯರ ಸ್ವಂತವನ್ನು ಮಾತ್ರ ಬಾಧಿಸುವುದಲ್ಲ, ಅಲ್ಲಿನ ಸಮಾಜವನ್ನೂ ಬಾಧಿಸುವಂಥದು. ಮುಂದೆ ಆಚಾರ್ಯರು ಏನು ಮಾಡಲಿ¨ªಾರೆ ಎನ್ನುವುದು ನಮಗೆ ತಿಳಿಯುವುದಿಲ್ಲ. ಅವರ ಹಲವು ಧೋರಣೆಗಳು ಖಂಡಿತಕ್ಕೂ ಬದಲಾಗಿರುತ್ತವೆ ಹಾಗೂ ಇದು ಅವರ ವರ್ತನೆಗಳ ಮೇಲೆ ಪರಿಣಾಮ ಬೀರದೆ ಇರಲಾರದು. ಅನಂತಮೂರ್ತಿಯವರ ಮುಂದಿನ ಕಾದಂಬರಿ ಭಾರತೀಪುರವನ್ನು ಸಂಸ್ಕಾರದ ಮುಂದಿನ ಭಾಗವೆಂದು ಹಾಗೂ ಅದರ ನಾಯಕ ಜಗನ್ನಾಥನನ್ನು ಆಚಾರ್ಯರ ಮುಂದಿನ ರೂಪವೆಂದು ತಿಳಿದುಕೊಂಡರೆ, ನಾರಣಪ್ಪ ವಾದಿಸುವ ಯಾವ ಪಂಚಮರ ದೇವಳಪ್ರವೇಶವನ್ನು ಆಚಾರ್ಯರು ಅಸಂಬದ್ಧ ಪ್ರಲಾಪವೆಂದು (ಪು. 21) ಕರೆಯುತ್ತಾರೋ ಅದುವೇ ಜಗನ್ನಾಥ ಊರಿಗೆ ತರಬೇಕೆಂದಿರುವ ಕ್ರಾಂತಿಯ ಮೊದಲ ಹೆಜ್ಜೆಯಾಗುವುದು ಕಂಡುಬರುತ್ತದೆ. (ಅನಂತಮೂರ್ತಿಯವರ ಸಂಸ್ಕಾರ, ಭಾರತೀಪುರ ಮತ್ತು ಅವಸ್ಥೆಗಳನ್ನು ತ್ರಿವಳಿ ಕಾದಂಬರಿಗಳೆಂದು ಪರಿಗಣಿಸಬೇಕೆಂದು ಮೊದಲು ಹೇಳಿದವರು ಕೆ. ವಿ. ಸುಬ್ಬಣ್ಣ.) ಜಗನ್ನಾಥನ ತುಮುಲದಲ್ಲಿ ಕೂಡ ಅಸ್ತಿತ್ವವಾದಿ ಚಿಂತನೆಗಳು ಕಂಡುಬರುತ್ತವೆ ಎನ್ನುವುದು ಕುತೂಹಲದ ಸಂಗತಿ. ವ್ಯಕ್ತಿ ಕೇವಲ ವ್ಯಕ್ತಿಯಲ್ಲ, ಸಮಾಜದ ಸೃಷ್ಟಿ , ಆದ್ದರಿಂದ ಆತನ ನಿಶ್ಚಯಗಳಿಗೆ ಸಾಮಾಜಿಕ ಪರಿಣಾಮಗಳಿರುತ್ತವೆ, ಇರಬೇಕು ಎನ್ನುವ ಫ್ರೆಂಚ್ ಅಸ್ತಿತ್ವವಾದಿ ಸಾತೃìವಿನ ನೆಲೆಯೇ ಅನಂತಮೂರ್ತಿಯವರದ್ದು ಕೂಡ.
– ಕೆ. ವಿ. ತಿರುಮಲೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.