ಏಕಾಕಿಗೆ ಎಲ್ಲಿಯ ಸಂತಸ!


Team Udayavani, May 13, 2018, 6:00 AM IST

x-5.jpg

ಜೀವಜಗತ್ತಿನಲ್ಲಿ ಮೊದಲು ಕಾಣಿಸಿಕೊಂಡ “ಅಮೀಬಾ’ ಎಂಬ ಏಕಾಣು, ಏಕಕೋಶ ಜೀವಿಯು ತನ್ನನ್ನೇ ತಾನು ವಿಭಜಿಸಿಕೊಂಡು ಬಹುಕೋಶ ಜೀವಿಯಾಗಿ ಬೆಳೆಯುವುದಂತೆ. ಸೃಷ್ಟಿಯಲ್ಲಿ ವಿಭಜನೆಯು ಬೆಳವಣಿಗೆಯ, ವಿಸ್ತಾರಗೊಳ್ಳುವ ದಾರಿಯಾಗಿದೆ. ಬೆಳವಣಿಗೆ ಎಂದರೆ ಸ್ವವಿಭಜನೆಗೊಳ್ಳುವುದೇ. ಮನೋಜೀವಿಯಾದ ಮನುಷ್ಯರು ಮಾನಸಿಕ ಮಟ್ಟದಲ್ಲಿ ಇಂಥದೇ ಬೆಳವಣಿಗೆಯನ್ನು ಸಾಧಿಸುವುದಕ್ಕಾಗಿ ತಮ್ಮ ಮನಸ್ಸನ್ನು ವಿಭಜಿಸಿಕೊಳ್ಳಬೇಕಾಯಿತು! ಆ ವಿಭಜನೆಯೇ “ನಾನು-ನೀನು’ ಎಂಬ ಎರಡು ಹೋಳುಗಳು! ಸ್ವ-ಪ್ರಜ್ಞೆಯ ಎರಡು ದಳಗಳು. ನಮ್ಮ ಮೆದುಳಿನಲ್ಲೇ ಎರಡು ಭಾಗಗಳಿವೆ, ಎಡ-ಬಲ, ಇವು ನಿರ್ವಹಿಸುವ ಕಲಾಪಗಳೂ ಭಿನ್ನವಾಗಿವೆ ಎಂಬ ಮಾತು ಬೇರೆ. ಏಕೆಂದರೆ “ಎರಡು’ ಎನ್ನುವುದು ಮೊದಲು ಮನಸ್ಸಿಗೆ ಹೊಳೆಯದೆ; ಮೆದುಳಿನಲ್ಲೇ ಆಗಲಿ, ಎಲ್ಲೇ ಆಗಲಿ- ಆ “ಎರಡು’ ನಮಗೆ ಕಂಡುಬರುವುದು ಹೇಗೆ? ಹೊಳೆಯುವ ಮನಸ್ಸೂ ಮೆದುಳಿನ ಭಾಗವೇ ಎಂದೊಪ್ಪಿದರೂ “ಹೊಳಹು’ ಎನ್ನುವಾಗ, ಪ್ರಜ್ಞಾಪೂರ್ವಕವಾದ ನಮ್ಮ ಚಿಂತನೆಗಿಂತ ಬೇರೆಯಾದ, ಯಾವ ಹಂಗೂ ಇಲ್ಲದೆ ತನ್ನ ತಾನೇ ಇರುವ ಪ್ರಜ್ಞೆಯ ವಿಲಾಸವನ್ನು ಸೂಚಿಸುತ್ತೇವಲ್ಲವೆ? ಅದಿರಲಿ. “ನಾನು-ನೀನು’ ಎಂದಾಗ “ನೀನು’ ಎನ್ನುವಲ್ಲಿ ನಮ್ಮ ಪ್ರಜ್ಞಾಪೂರ್ವಕತೆಯನ್ನು ಮೀರಿದ ಈ ಹೊಳಹಿನ ಬದಿಯನ್ನು ಸಂಕೇತಿಸುತ್ತೇವೆ. “ನಾನು-ನೀನು’ ಎಂಬ ವಿಭಜನೆ ಇಲ್ಲದೆ ಯಾವ ಹುಡುಕಾಟವೂ ಇಲ್ಲ. ಹುಡುಕಾಟವಿಲ್ಲದೆ ಬೆಳವಣಿಗೆಯ ಯಾವ ಸಾಧ್ಯತೆಯೂ ಇಲ್ಲ. ಆದುದರಿಂದಲೇ ಉಪನಿಷತ್ತಿನಲ್ಲಿ ಜೀವಸೃಷ್ಟಿಯ ಬಗೆಗೆ ಚಿಂತಿಸುವಾಗ ಸವೈ-ನೈವ-ರೇಮೇ, ಏಕಾಕೀ ನ ರಮತೇ, ತತಃ ದ್ವಿತೀಯಂ ಐತ್ಛತ್‌- ಎಂದರು. ಅವನಿಗೆ ಸಂತಸವಿರಲಿಲ್ಲ, ಏಕಾಕಿಗೆ ಸಂತಸವೆಲ್ಲಿ ಬಂತು? ಆದುದರಿಂದ ತನ್ನ ಸಂತಸಕ್ಕಾಗಿ ಎರಡನೆಯ ಜೀವವೊಂದನ್ನು ಬಯಸಿದ- ಎಂದು ಈ ನುಡಿಯ ಅರ್ಥ. ಎರಡನೆಯ ಜೀವವನ್ನು ಬಯಸಿದ ಬಯಕೆಯೇ ಆ ಎರಡನೆಯ ಜೀವವನ್ನು ಸೃಷ್ಟಿಸಿತು! ಅಂದರೆ ತನ್ನನ್ನೇ ತಾನು ವಿಭಜಿಸಿಕೊಂಡು ಎರಡನೆಯ ಜೀವವನ್ನು ಪಡೆಯಿತು. ತನ್ನನ್ನು ವಿಭಜಿಸಿಕೊಳ್ಳುವ, ಇನ್ನೊಬ್ಬರ ಮೇಲೆ ನಮ್ಮ ವ್ಯಕ್ತಿತ್ವವನ್ನು ಹೇರುವ ಕ್ರಿಯೆಯು ಸಂತಸದ ಕ್ರಿಯೆ ಎಂದು ನಾವು ಇಲ್ಲಿ ತಿಳಿದಿದ್ದೇವೆ. ಈ ತಿಳಿವಳಿಕೆಗಿಂತ ಪೂರ್ತಿ ಬೇರೆಯಾದ ತಿಳಿವಳಿಕೆ ಇದು. ಸ್ವ-ವಿಭಜನೆಯು ನಿಜವಾದ ಸಂತಸ ಎಂಬ ಒಳನೋಟ! ಅಲ್ಲದೆ- ಎರಡನೆಯವನೆಂದಾಗ ತನ್ನ ಒಳಮನವನ್ನು ಗುರುತಿಸಬಲ್ಲ ಇನ್ನೊಬ್ಬ , ಹಾಗೆ ಗುರುತಿಸಿ ತನ್ನ ಸಂತಸವನ್ನು ಹೆಚ್ಚಿಸಬಲ್ಲ ಇನ್ನೊಬ್ಬ , ತನ್ನನ್ನು ತಾನು ತನ್ನೊಳಗೆ ಅನುಭವಿಸುವಂತೆ ತನ್ನ ಹೊರಗಿಂದಲೂ ಅನುಭವಿಸಬಲ್ಲ ಇನ್ನೊಂದು ಜೀವ, ತನ್ನ ಪ್ರತಿ-ರೂಪ, ಎಂಬೆಲ್ಲ ಅರ್ಥ ತರಂಗಗಳೂ ಹುಟ್ಟಿಕೊಂಡು ಉಪನಿಷತ್ತಿನ ಈ ನೆಲೆ, ತಣ್ತೀಜ್ಞಾನದ ನೆಲೆ ಮಾತ್ರವಲ್ಲ ಕಲೆಯ ನೆಲೆಯೂ ಆಗಿಬಿಟ್ಟಿತು. ಕವಿ-ಸಹೃದಯ ತಣ್ತೀ ಈ ನೆಲೆಯಿಂದಲೇ ಹುಟ್ಟಿಕೊಂಡಿತು. ತನ್ನನ್ನು ತಾನು ಅನುಭವಿಸುವುದೆಂದರೆ ಸೂಕ್ಷ್ಮವಾಗಿ ಅದು ಅಹಂಕಾರವೂ ಆಗಿಬಿಡಬಹುದು. ಸ್ವಸಮರ್ಥನೆಯೂ ಆಗಬಹುದು. ಇದು ಪೆಡಸಾದ ಸ್ಥಿತಿ. ಸ್ವ-ಸಮರ್ಥನೆಯು ರಸಾಲವಾದ ಸ್ಥಿತಿ ಅಲ್ಲ. ರಸವು ವಿ-ರಸವಾದ ಸ್ಥಿತಿ. ಸ್ವ-ಅನುಭವವು ರಸಾಲ ಸ್ಥಿತಿಯಾಗಿಯೇ ಉಳಿಯಬೇಕಾದರೆ ತನ್ನಂತೇ ಇರುವ ಇನ್ನೊಂದು ವ್ಯಕ್ತಿತ್ವ , ಇನ್ನೊಂದು ಮನಸ್ಸು ಎದುರಿಗಿರಬೇಕು; ಅದಕ್ಕೆ ತನ್ನ ಮನದ ಎಲ್ಲ ಸೂಕ್ಷ್ಮಗಳೂ ಅರ್ಥವಾಗುವಂತಿರಬೇಕು. ತನ್ನ ಅಹಂಕಾರ, ತನ್ನ ಸಮರ್ಥನೆ ಅದಕ್ಕೆ ಅರ್ಥವಾದಾಗ ತಾನು ನಾಚಬೇಕು. ಕಲಾವಿದನೊಬ್ಬ ನಿರ್ವಹಿಸುವ “ಪಾತ್ರ’ದಂತೆ! ಕಲಾವಿದನ ಅಹಂಕಾರವನ್ನು “ಪಾತ್ರ’ವು ನಿರಾಸಗೊಳಿಸುವುದು! ಪಾತ್ರದ ಅಹಂಕಾರವನ್ನು ಮೆರೆಯಿಸುವಲ್ಲಿ ಕಲಾವಿದನ ಅಹಂಕಾರವು ವಿನೀತವಾಗಿ ಕೃತಾರ್ಥವಾಗುವುದು!

“ಪುರುಷ ತಣ್ತೀ’ವನ್ನು ವರ್ಣಿಸುವಲ್ಲಿ, ಅದಕ್ಕೆ ಸಾವಿರ ಮುಖ, ಸಾವಿರ ಕಣ್ಣು , ಸಾವಿರಾರು ಕಾಲುಗಳು ಎಂಬ ವರ್ಣನೆಯನ್ನು ಕೇಳುತ್ತೇವೆ-ವೇದಗಳಲ್ಲಿ. ಇದು ನೂರಾರು ಪಾತ್ರಗಳನ್ನು ನಿರ್ವಹಿಸುವ ಕಲಾವಿದ-ಕಲಾವಿದೆಯರ ವರ್ಣನೆಯಂತೆಯೇ ಕೇಳಿಸುತ್ತದೆ. ಇದು ಸಾಧ್ಯತೆ. ಗೀತೆಯಲ್ಲಿ ಕೃಷ್ಣನ ನುಡಿಯೊಂದು ನೆನಪಾಗುವುದು. ಯೇ ಯಥಾ ಮಾಂ ಪ್ರಪದ್ಯಂತೇ ತಾನ್‌ ತಥೈವ ಭಜಾಮ್ಯಹಂ ಎಂಬ ನುಡಿ. ಯಾರು ಹೇಗೆ ಯಾವ ರೀತಿ-ಬಗೆಗಳಲ್ಲಿ ಯಾವ ದಾರಿಯಲ್ಲಿ ನನಗೆ ಸಮ್ಮುಖರಾಗುವರು ಆ ದಾರಿಯಲ್ಲಿಯೇ ನಾನು ಅವರಿಗೆ ಅಭಿಮುಖವಾಗುವೆನು- ಎಂಬ ಮಾತು! ಈ ಮಾತು ಒಂದು ರೀತಿಯಲ್ಲಿ; ನಿಮ್ಮ ನಡೆಯನ್ನು ಅನುಕರಿಸುವ ಇಷ್ಟವುಳ್ಳವನು ನಾನು ಎಂದಂತೆಯೂ ಕೇಳಿಸುತ್ತದೆ. ನೀವು ಕೇಳಬಯಸುವ ರಾಗವನ್ನು ಹಾಡುವೆ, ನೀವು ನೋಡಬಯಸುವ ಪಾತ್ರವನ್ನು ಮಾಡುವೆನೆನ್ನುವ ಕಲಾವಿದರಂತೆ ಸ್ವಲ್ಪ ಮುಂದುವರಿದು ಹೇಳುವುದಾದರೆ- ಆ ಇನ್ನೊಂದು ಜೀವದ ವಿರಹವನ್ನು ಕೃಷ್ಣ ಅನುಭವಿಸುತ್ತಿರುವಂತಿದೆ ಎಂದೂ ಹೇಳಬಹುದು. ಅಲ್ಲಮ ತನ್ನೊಂದು ವಚನದಲ್ಲಿ ವಿರಹದಲಿ ಉತ್ಪತ್ತಿಯಾದವರ ಮಾಯದ ಬೇಳುವೆ ಹತ್ತಿತ್ತಲ್ಲಾ ಎಂದಾಡಿದ್ದಾನೆ. ಅಪೂರ್ವವಾದ ಮಾತು! ಮಿಲನದಲ್ಲಿ ಉತ್ಪತ್ತಿ ಲೋಕದಲ್ಲಿ ಎಲ್ಲರಿಗೆ ಅರ್ಥವಾಗುವ ಮಾತಾದರೆ “ವಿರಹದಲಿ ಉತ್ಪತ್ತಿ’ ಎಂಬುದಿದು ಮನಸ್ಸಿನ ಸಂದರ್ಭದಲ್ಲಿ ಭಾವಸಂದರ್ಭದಲ್ಲಿ, ಕಲೆಯ ಸಂದರ್ಭದಲ್ಲಿ ಮಾತ್ರ ಅರ್ಥವಾಗುವ ಮಾತು; ಅರ್ಥವಿರುವ ಮಾತು. ಒಂದು ಪಾತ್ರಕ್ಕಾಗಿ ಹಂಬಲಿಸುವ ಕಲಾವಿದ, ಆ ಪಾತ್ರದಲ್ಲಿ ತನ್ನ ಹೊಸ ಹುಟ್ಟನ್ನು ಕಾಣಬಯಸುವ ಕಲಾವಿದ-ಕಲಾವಿದೆ ಅದರ ವಿರಹದಲ್ಲಿ ಉತ್ಪತ್ತಿಯಾಗುವವರಲ್ಲವೆ? ಒಂದು ರಾಗದ ಸಾಕ್ಷಾತ್ಕಾರಕ್ಕಾಗಿ ಬದುಕನ್ನೇ ಮುಡಿಪಿಡುವ ಗಾಯಕ-ಗಾಯಕಿ, ಒಂದು ದೊಡ್ಡ ಧ್ಯೇಯಕ್ಕಾಗಿ ಬದುಕುವ ವ್ಯಕ್ತಿ ಅದರ ವಿರಹದಲ್ಲೇ, ಅದರ ಹಂಬಲದಲ್ಲೇ ತಮ್ಮ ವ್ಯಕ್ತಿತ್ವವನ್ನೇ ಇನ್ನೊಮ್ಮೆ ಉಂಟುಮಾಡಿಕೊಳ್ಳುವರಲ್ಲವೆ? ಅದರ ವಿರಹವೇ ಅದು ರೂಪುಗೊಳ್ಳುವ ಗರ್ಭವಲ್ಲವೆ? ನಮ್ಮ ಆರ್ಷ ಚಿಂತನೆಯಲ್ಲಿ ಬಂದ “ಮಾನಸಪುತ್ರ’ ಎಂಬ ಪರಿಕಲ್ಪನೆಯನ್ನು ತನ್ನ ಸೂಕ್ಷ್ಮತೆಯಿಂದ ತನ್ನದೇ ಭಾಷೆಯಲ್ಲಿ “ವಿರಹದಲಿ ಉತ್ಪತ್ತಿಯಾದವರು’ ಎಂದು ಅಲ್ಲಮ ಹೇಳುತ್ತಿದ್ದಾನೆ. ಒಂದೇ ಮನಸ್ಸು “ನಾನು-ನೀನು’ ಎಂದು ಎರಡಾಗಿ ಸ್ವ-ವಿಭಜನೆಗೊಳ್ಳದೆ ಈ ಯಾವ ಸಾಧ್ಯತೆಗಳೂ ಹೊರಹೊಮ್ಮದು ಎಂಬುದೊಂದು ಅಚ್ಚರಿಯೇ ಸೈ.

“ನಾನು-ನೀನು’ ಎಂಬ ವಿಭಜನೆಯನ್ನು ಬೇಂದ್ರೆಯವರು ನಾಲ್ಕಾಗಿ ಕಂಡರು. ನಾನು-ನೀನುವಿಗೆ ಆನು-ತಾನುಗಳು ಸೇರಿ ನಾಲ್ಕು ತಂತಿಯಾದವು. ನಾಲ್ಕು ಆದಾಗ ಅದೊಂದು ಗುಂಪು. “ಗೆಳೆಯರ ಗುಂಪು’. ನಾಲ್ಕರ ಪರಿಕಲ್ಪನೆಯ ಬೇಂದ್ರೆ ಸಹಜವಾಗಿ ಗುಂಪಿನ ಕವಿ. ಅವರು ಗೆಳೆಯರ ಗುಂಪಿನ ರೂವಾರಿಯಾದದ್ದು ಆಶ್ಚರ್ಯವಲ್ಲ. ಆದರೆ ಗುಂಪಿನಲ್ಲೂ ಬೇಂದ್ರೆಯವರ ಹೃದಯದ ಸಖನೆಂದರೆ ಮಧುರ ಚೆನ್ನರು. “ಮಧುರ ಚೆನ್ನ’ ಎಂದರೆ ಹಲಸಂಗಿ ಚೆನ್ನಮಲ್ಲಪ್ಪ. ಆದರೆ “ಮಧುರ ಚೆನ್ನ’ ಎನ್ನುವಲ್ಲಿ “ಮಧುರ’ ಎಂದರೆ ಬೇಂದ್ರೆಯವರು ಮತ್ತು “ಚೆನ್ನ’ ಎಂದರೆ ಚೆನ್ನಮಲ್ಲಪ್ಪ. ಮಧುರ ಗೀತ ಎಂಬ ದೀರ್ಘ‌ ಕವನವನ್ನು ಚೆನ್ನಮಲ್ಲಪ್ಪನವರು ಬೇಂದ್ರೆಯವರನ್ನು ಕುರಿತೇ ಬರೆದರು. ಅದರಲ್ಲಿ ಹೀಗೆ ಹಾಡಿದರು.

ಜನರಾಡಿಕೊಳಬಹುದು ನನಗು ನಿನಗೂ ಕೂಡೆ
ಅವರೇನು ಬಲ್ಲರೋ ಒಳ ನಿದಾನ
ನನಗೆ ನೀನತಿ ಮಧುರ, ನಿನಗೆ ನಾ ಬಲು ಚೆನ್ನ
ಹೀಗೆಂತಲೇ ನಾವು “ಮಧುರ ಚೆನ್ನ’ 
ಇದ್ದದ್ದು ಬೆಳೆದೀತು ಇಲ್ಲದ್ದು ದುಃಸಾಧ್ಯ
ಹೆಚ್ಚು ಪ್ರಿಯರಾರೆಂದು ಎಣಿಸಿಕೊಂಡೆ
ಇದೆಲ್ಲ ಗೆಳೆಯರಲಿ ಮುದ್ದಿನವ ನೀನೊಬ್ಬ
ಯಜ್ಞಕ್ಕೆ ನಿನ್ನನ್ನೆ ಆಯ್ದುಕೊಂಡೆ
ಪ್ರಾಯಃ ಎಲ್ಲೆಡೆಯ ಕಾವ್ಯೇತಿಹಾಸದಲ್ಲಿ ಈರ್ವರ ಹೆಸರು ಸೇರಿಕೊಂಡು ಕಾವ್ಯನಾಮವೊಂದು ರೂಪುಗೊಂಡದ್ದು ಇದೊಂದೇ. “ಮಧುರ ಚೆನ್ನ’ ಎಂಬ ಈ ಕಾವ್ಯನಾಮ! ಪ್ರಾಯಃ ವಚನಕಾರರ ಕಾಲದಲ್ಲಿ ಬಸವಣ್ಣ-ಅಲ್ಲಮರ ಸಂಬಂಧ ಕೆಲಮಟ್ಟಿಗೆ ಹೀಗಿತ್ತೆನ್ನಬಹುದು. ಆ ಇತಿಹಾಸದ ಪ್ರಭಾವದಿಂದಲೇ “ಮಧುರ ಚೆನ್ನ’ ರೂಪುಗೊಂಡಿದೆ. ನಾನು-ನೀನು ಎನ್ನುವ ವಿಭಜನೆಯು ಇಲ್ಲಿ ಮಿಲನೋನ್ಮುಖವಾಗಿದೆ! ಬೇಂದ್ರೆಯವರ ಪ್ರತಿಭೆಗೆ ಕಷ್ಟದ ದಿನಗಳೂ ಇದ್ದವು. ಆ ದಿನಗಳನ್ನು ನೋಡಿದ ಚೆನ್ನಮಲ್ಲಪ್ಪನವರು ಮಂಗಲ ಸಪ್ತಕಂ ಎಂಬ ಏಳು ಹಾಡುಗಳ ಬುಟ್ಟಿಯೊಂದನ್ನು ಹೆಣೆದರು. ಆ ಹಾಡಿನಲ್ಲಿ, “”ಅಣ್ಣ ದತ್ತನ ಬಗೆಯ ಬೇಗೆಯನು ತಣಿಸೈ”, “”ಮಿತ್ರ ದತ್ತನ ಮನದ ಮೈಲಿಗೆಯ ಮಾಣಿಸೈ”, “”ಮುದ್ದು ದತ್ತನ ಬಗೆಯ ಬೇಟೆಯನ್ನಾಡಿಂದು” ಇತ್ಯಾದಿ ಪ್ರಾರ್ಥನೆಗಳಿವೆ. ಕೊನೆಯಲ್ಲಿ ಅಲ್ಲಮನಿಗೊಂದು ಪ್ರಾರ್ಥನೆ ಇದೆ:

ಗುಹೇಶ್ವರನ ಗುಹೆಯ ಗುಹ್ಯಂವಚನವ ನುಡಿದ
ಅಲ್ಲಮ ಪ್ರಭುದೇವ ನಿನ್ನ ನುಡಿಯ
ಗುಹ್ಯ ಜ್ಯೋತಿಯನೆನ್ನ ಅಣ್ಣ ದತ್ತನ ಬಗೆಯ
ಬಿಲದ ಬರ್ದಿಲದಲ್ಲಿ ಬೆಳಗಿಸೊಡೆಯ
ಬೇಂದ್ರೆಯವರಲ್ಲಿ ಅಲ್ಲಮನ ಮಾತು ಮತ್ತೂಮ್ಮೆ ಕೇಳುವಂತಾಗಲಿ ಎಂಬ ಆಶಯದ ಈ ಮಾತು, “”ನಾನು-ನೀನು” ಎಂಬ ಕಲ್ಪನೆಯ “ನೀನು’ ಎನ್ನುವಲ್ಲಿ ಸಾಹಿತ್ಯದ ಪರಂಪರೆಯನ್ನೂ ಒಳಗೊಳ್ಳುವ ನೂತನ ವಿಧಾನವಾಗಿದೆ. “ನೀನು’ವಿನ ವಿಸ್ತಾರಕ್ಕೆ ಕೊನೆ ಇಲ್ಲ. ನನಗೆ ಕುತೂಹಲದ ಸಂಗತಿ ಎಂದರೆ, ಗೋಪಾಲಕೃಷ್ಣ ಅಡಿಗರ ಪ್ರಸಿದ್ಧವಾದ ಒಳತೋಟಿ ಎಂಬ ಕವನದ ನಾಯಕನ ಹೆಸರು “ಮಧುರ’ ಎನ್ನುವುದು! “”ಹೋಳಾಗುತಿರೆ ಬಾಳು ಗೋಳಿಡುತಿರುವ ಮಧುರನೊಳತೋಟಿ ಹಾಡಾಗಿ ಹರಿವುದಿಲ್ಲಿ”, “”ಕೋಮಲತೆ ಸಾರ್ದುದು ಮಧುರನ ಹೃದಯಕೆ ಆದರೇನ ಕಟ ಸ್ಥಿರತೆ ಸಂಯಮ ಶಕ್ತಿ ಬಾರದಾಯ್ತು”-ಇತ್ಯಾದಿ ಸಾಲುಗಳಿವೆ ಅಲ್ಲಿ. ಏಕೆ ಈ ಹೆಸರು? ಇದು ರಮ್ಯ ಸಂದರ್ಭವನ್ನು ಸೂಚಿಸುವುದೆ? ಅದಾಗಲೇ ಮಧುರ ಚೆನ್ನರು ಪ್ರಸಿದ್ಧರಾಗಿದ್ದರು. ಅವರ “ಮಧುರ ಗೀತ’ವೂ ಪ್ರಸಿದ್ಧವಾಗಿತ್ತು. ಅಲ್ಲದೆ “ಒಳತೋಟಿ’ಯನ್ನೂ “ಮಧುರ ಗೀತ’ವನ್ನೂ ಹೋಲಿಸುವುದು ಕೂಡ ಸಾಧ್ಯ. “ಮಧುರ ಗೀತ’ವು ಹೆಚ್ಚು ಆಧ್ಯಾತ್ಮಿಕವಾಗಿದ್ದರೂ ಅಲ್ಲಿಯೂ “ಒಳತೋಟಿ’ ಇದೆ. ಎರಡು ಗೀತಗಳೂ ಆತ್ಮಕಥನಗಳಾಗಿವೆ. ಆದರೆ ಚೆನ್ನಮಲ್ಲಪ್ಪನವರ ಕವಿತೆ, ಪ್ರೀತಿಯ ಸಾಧನೆಯನ್ನು ಎತ್ತಿ ಹೇಳುತ್ತ, ಬೇಂದ್ರೆಯವರನ್ನು “ಮಧುರ’ನೆಂದು ಕರೆದು ಆತ್ಮಸಂಗಾತಿಯನ್ನಾಗಿ ನೋಡುತ್ತದೆ. ದಂಪತಿಗಳ ಪ್ರೇಮ-ಕಾಮದ ಪರಿಭಾಷೆಯಲ್ಲಿ ಮಾತಾಡುತ್ತದೆ. ಆದುದರಿಂದಲೇ “ಮಧುರ’ ಎಂದು ಅನ್ವರ್ಥವಾಗಿ ಕರೆಯುತ್ತದೆ. 

“”ಹೊಚ್ಚ ಹೊಸ ದಿನದಲ್ಲಿ ಮೊಟ್ಟಮೊದಲಿನ ಮುದ್ದಿ
ಗಾರು ಮುಂದರಿಯ ಬೇಕಿಬ್ಬರೊಳಗೆ
ಅಚ್ಚ ದಂಪತಿಗಳಲಿ?” ಅಂತು ಇಂತೂ ಒಮ್ಮೆ
ಅಂತರಂಗದ ಆಸೆ ಬಂತು ಹೊರಗೆ” – ಎಂಬಂಥ ಸಾಲುಗಳಿವೆ. 
ತನ್ನನ್ನು ತಾನು ಸ್ತ್ರೀಪಾತ್ರವೆಂದು ಚೆನ್ನಮಲ್ಲಪ್ಪನವರು ಬಗೆದಿರುವುದಕ್ಕೂ ಕವನದಲ್ಲಿ ಸಾಕ್ಷಿ ಇದೆ. ಅಂದರೆ, “ನೀನು’ ಎನ್ನುವ ಪರಿಕಲ್ಪನೆ ಯಾವೆಲ್ಲ ದಿಕ್ಕಿನಲ್ಲಿ ಸಾಗಬಹುದೋ ಅವೆಲ್ಲವನ್ನೂ ಒಳಗೊಳ್ಳುವಂತೆ ಇದೆ “ಮಧುರ ಗೀತ’.
ಇದಕ್ಕಿಂತ ಭಿನ್ನವಾಗಿ “ಒಳತೋಟಿ’ಯಲ್ಲಿ ಬಾಲ್ಯ-ಯೌವನಗಳ ವಿಷಮತೆ ಕಾಣಿಸುತ್ತದೆ. ದೇಹ-ಮನಸ್ಸುಗಳ ವಿರುದ್ಧ ಸೆಳೆತಗಳು ಕಾಣಿಸುತ್ತವೆ. ಮುಗ್ಧತೆಯು ನಾಶವಾಗುವ ಚಿತ್ರವಿದೆ. ತನ್ನ ನೆಲೆಯನ್ನೇ ತಾನು ಇನ್ನೂ ಕಂಡಿಲ್ಲದ ಉದ್ವಿಗ್ನ ಭಾವವೊಂದಿದೆ. “ಮಧುರ ಗೀತ’ದಲ್ಲಿ ಭಗವದ್ಗೀತೆಯ ಅನೇಕ ಉಲ್ಲೇಖಗಳಿದ್ದರೆ, “ಒಳತೋಟಿ’ಯಲ್ಲಿ ಕೋಲರಿಜ್‌ ಕವಿಯ ಒಂದೇ ಉಲ್ಲೇಖವಿದೆ. ಆ ಉಲ್ಲೇಖವಿದು:
ನಾವು ಪಡೆವುದು ನಾವು ಕೊಡುವನಿತನೇ ನಮ್ಮ
ಜೀವನದೊಳೇ ಬಾಳುತಿಹುದು ಪ್ರಕೃತಿ-
ಎಂದು ಕವಿಕೋಲರಿಜನುಸುರಿದಾ ಸವಿನುಡಿಯೆ
ಬಂದು ಮೊರೆಯುವುದವನ ಕರ್ಣಗಳಲಿ
ಕೋಲರಿಜನ ಈ ಮಾತು, ಬೇಂದ್ರೆಯವರ “ಕಲ್ಪವೃಕ್ಷ ವೃಂದಾವನಂಗಳಲಿ’ ಕವಿತೆಯಲ್ಲಿ “”ಪಡೆದ ಬಾಳನೇ ಬಯಸಿದಂತೆ ಇತ್ತು” ಎಂದು ಪಡಿನುಡಿಗೊಂಡಿದೆ. “ಒಳತೋಟಿ’ಯ ನಾಯಕನಿಗೆ ಬೇಂದ್ರೆಯವರ ಈ ಸಾಲು ಕೂಡ ಖಂಡಿತವಾಗಿ ಗೊತ್ತು. ಆದರೆ, ಕೋಲರಿಜ್‌ ನುಡಿ “ಸವಿನುಡಿ’ಯೇ ಆದರೂ ಅದರ ಸವಿ, ಅನುಭವಕ್ಕೆ ಬರುವ ಹಂತ, ಮಧುರನಿಗೆ ಇನ್ನೂ ಬಂದಿಲ್ಲ. ಬಂದಿಲ್ಲವಾಗಿ ತನ್ನ ಮಧುರತೆಯ ಜತೆಗೇ ತನ್ನ ತಿಕ್ಕಾಟ ನಡೆದಿದೆ!
ಗೋಪಾಲಕೃಷ್ಣ ಅಡಿಗರೊಳಗೆ ದ. ರಾ. ಬೇಂದ್ರೆ ಯಾವಾಗಲೂ ಇದ್ದರು. ನಾನಾ ರೂಪಗಳಲ್ಲಿ, ವಿನ್ಯಾಸಗಳಲ್ಲಿ ಇದ್ದರು. ಆದರ್ಶವಾಗಿ, ಮೀರಲೇಬೇಕಾದ ಗೆರೆಯಾಗಿ, ಇವರ ಪ್ರಭಾವದಿಂದ ಹೇಗೆ ತಪ್ಪಿಸಿಕೊಳ್ಳಬಹುದೆಂಬ ಆಳದ ಚಿಂತೆಯಾಗಿ, ಕನ್ನಡವನ್ನು ಹೇಗೆ ಮಿಡಿದರು ಎಂಬ ವಿಸ್ಮಯವಾಗಿ, ತನ್ನ ಕೃತಾರ್ಥತೆಯ ಹಿಂದೆಯೂ ಇರುವ ಕಾಣದ ಕೈಯಾಗಿ ಬೇಂದ್ರೆ ಇದ್ದರು. “”ಒಳತೋಟಿ”ಯ ಸಾಲುಗಳ ಮೂಲಕ ಹೇಳಬಹುದಾದರೆ, “”ನೆಲದ ಹಗೆ ತಾಳಲಾರದೆ ಮುಗಿಲನೇರಿದ ತಾರೆ”ಯಾಗಿ ಇದ್ದರು. ಇದ್ದು, “”ಅಕೃತಾರ್ಥರೆದೆಯಾಳದಲಿ ಕಿರು ಬೆಳಕ ಕುದುರಿಸು”ತ್ತಿದ್ದರು. “”ಮಧುರ” ಬೇರೆ ಯಾರೂ ಅಲ್ಲ. ಅಡಿಗರೊಳಗೆ ಅಡಗಿದ ಬೇಂದ್ರೆಯವರೇ !

ಲಕ್ಷ್ಮೀಶ ತೋಳ್ಪಾಡಿ

ಟಾಪ್ ನ್ಯೂಸ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.