ಅಲ್ಲಿ ನೋಡಲಾ, ತಿಮಿಂಗಿಲ!
Team Udayavani, Mar 19, 2017, 3:50 AM IST
ಬೆಳಿಗ್ಗೆ ಆರು ಗಂಟೆಗೆ ಸೂರ್ಯ ಹುಟ್ಟುವ ಮುನ್ನವೇ ಎದ್ದು ತಯಾರಾಗಿದ್ದೆವು. ಹೊಟ್ಟೆ ತೊಳಸಬಾರದೆಂದು ಮಾತ್ರೆ ನುಂಗಿದ್ದೇನೋ ಹೌದಾದರೂ ಈಗ ಒಂದು ಗಂಟೆಯ ಪಯಣದಲ್ಲಿ ದೋಣಿಯ ಹೊಯ್ದಾಟದಲ್ಲಿ, ಮಾತ್ರೆಯೇನೂ ಪರಿಣಾಮ ಬೀರಿದಂತೆ ಕಾಣಲಿಲ್ಲ. ಬೀಸುತ್ತಿದ್ದ ಗಾಳಿಗೆ, ಅಲೆಗಳ ರಭಸಕ್ಕೆ ದೋಣಿ ಅತ್ತಿತ್ತ ಹೊಯ್ದಾಡಿದಂತೆ ನನ್ನ ಹೊಟ್ಟೆ ತೊಳಸುತ್ತಿತ್ತು, ತಲೆಯೂ ಸುತ್ತುತ್ತಿತ್ತು. ಯಾಕಾದರೂ ಈ “ವೇಲ್ ವಾಚಿಂಗ್’ಗೆ ಬಂದೆನೋ ಎಂದು ಗಟ್ಟಿಯಾಗಿ ಕಣ್ಣು ಮುಚ್ಚಿ ಕುಳಿತಿದ್ದೆ, ಅಷ್ಟರಲ್ಲಿ ಮಕ್ಕಳ ಕೂಗು, “ಅಲ್ಲಿ, ವೇಲ…!’ ಎದ್ದೋ ಬಿದ್ದೋ ಎಲ್ಲರೂ ದೋಣಿ ತುದಿಗೆ ನಿಂತು ನೋಡುತ್ತಿದ್ದರೆ ನಾನು ಕೂತಲ್ಲಿಂದಲೇ ಅತ್ತ ದೃಷ್ಟಿ ಬೀರಿದೆ. ನೀಲ ಸಮುದ್ರದ ನಡುವೆ ಇದ್ದಕ್ಕಿದ್ದಂತೆ ದೊಡ್ಡ ಕಾರಂಜಿಯಂತೆ ನೀರು ಚಿಮ್ಮಿತು. ಕೆಲವೇ ನಿಮಿಷಗಳಲ್ಲಿ ಮೊದಲ ಸಮುದ್ರ ದೈತ್ಯನ ದರ್ಶನದ ಭಾಗ್ಯ ದೊರಕಿತು. ಆ ನಂತರ ಒಂದಲ್ಲ, ಮೂರು ನಮ್ಮೆದುರು ಹಾರಿ, ತಮ್ಮ ಹೊಳೆವ ಅಗಾಧ ಮೈಸಿರಿ ಪ್ರದರ್ಶಿಸಿ ಮಿಂಚಿ ಮರೆಯಾದವು. ಬಾಲವೆತ್ತಿ ಅವು ನೀರೊಳಗೆ ಡೈವ್ ಮಾಡಿದ್ದಂತೂ ಅದ್ಭುತವೇ ಸರಿ. ಅದನ್ನೆಲ್ಲಾ ನೋಡುತ್ತ ಆವರೆಗಿನ ಹೊಟ್ಟೆ ತೊಳೆಸುವಿಕೆ, ತಲೆ ತಿರುಗುವಿಕೆ ಎಲ್ಲಾ ಮಾಯ!
ಶ್ರೀಲಂಕಾದ ದಕ್ಷಿಣ ಕರಾವಳಿಯ ಮಿರಿಸ್ಸಾ ಎಂಬ ಪುಟ್ಟ ಪಟ್ಟಣದಿಂದ ಹೊರಟ ಸುಮಾರು ನೂರು ಜನರಿದ್ದ ನಮ್ಮ ದೋಣಿ ಒಂದೂವರೆ ತಾಸು ಸಾಗಿ, ಹಿಂದೂ ಮಹಾಸಾಗರದ ಡೊಂಡ್ರಾ ಪಾಯಿಂಟ್ ಎಂಬ ಜಾಗಕ್ಕೆ ಬಂದಿತ್ತು. ನಾವು ಹೊರಟಿದ್ದು ವೇಲ್ ವಾಚಿಂಗ್ ಅಥವಾ ಸಮುದ್ರ ಸಫಾರಿಗೆ. ಅಂದರೆ ವನ್ಯಪ್ರಾಣಿಗಳನ್ನು ಹೇಗೆ ಕಾಡಿನಲ್ಲಿ ಸ್ವತ್ಛಂದವಾಗಿ ವಿಹರಿಸುವುದನ್ನು ನೋಡಲು ಜೀಪಿನಲ್ಲಿ ಸಫಾರಿ ಕೈಗೊಳ್ಳುತ್ತೇವೋ ಅಂತೆಯೇ ಮುಖ್ಯವಾಗಿ ತಿಮಿಂಗಿಲ ಮತ್ತು ಇನ್ನಿತರ ಜಲಚರಗಳನ್ನು ಕಾಣಲು ಈ ಕಡಲ ಪ್ರವಾಸ (ಪ್ರಯಾಸ)! ತಿಮಿಂಗಿಲಗಳನ್ನು ನೋಡಿದ್ದಾಯ್ತು. ಹಾಗೆಯೇ ಮರಳಿ ಬರುವಾಗ ಡಾಲ್ಫಿನ್‌ಗಳ ಗುಂಪು ಪಕ್ಕದಲ್ಲಿ ಈಜುತ್ತಾ ಕುಣಿದಾಡಿದರೆ ದೊಡ್ಡ ಆಮೆ ತೇಲುವಂತೆ ಕಾಣಿಸಿತು. ಅಂತೂ ನಮ್ಮ ಸಮುದ್ರ ಸಫಾರಿ ಸಕ್ಸೆಸ್!
ಕಡಲ ದೈತ್ಯ
ಭೂಮಿಯ ಮೇಲಿನ ಅತೀ ದೊಡ್ಡ ಪ್ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು ವಯಸ್ಕ ನೀಲಿ ತಿಮಿಂಗಿಲ. ಉದ್ದ ನೂರು ಅಡಿಯಿದ್ದು ಸುಮಾರು ಅರವತ್ತು ಆನೆಗಳಷ್ಟು ತೂಕವಿರುತ್ತದೆ. ಅದರ ಹೃದಯ ಕಾರಿನಷ್ಟು ಗಾತ್ರವಿದ್ದು ಹೃದಯಬಡಿತವನ್ನು ಎರಡು ಮೈಲಿ ದೂರದಿಂದ ಕೇಳಬಹುದು. ಬರೀ ನಾಲಿಗೆಯೇ ಆನೆಯಷ್ಟು ದೊಡ್ಡದಾಗಿರುತ್ತದೆ. ಸರಿಯಾದ ವಾತಾವರಣದಲ್ಲಿ ಎಂಬತ್ತರಿಂದ ತೊಂಬತ್ತು ವರ್ಷಗಳ ಕಾಲ ಬದುಕುವ ಸಾಮರ್ಥ್ಯ ಹೊಂದಿವೆ. ಸಮುದ್ರಮಾರ್ಗವಾಗಿ ಧ್ರುವ ವಲಯ ಮತ್ತು ಸಮಭಾಜಕ ವಲಯಕ್ಕೆ ಹೀಗೆ ಸಾವಿರಾರು ಮೈಲಿ ದೂರ ಪಯಣಿಸುತ್ತವೆ. ಕಲುಷಿತಗೊಳ್ಳುತ್ತಿರುವ ಪರಿಸರ, ಹವಾಮಾನ ವೈಪರೀತ್ಯ ಮತ್ತು ಮೀನು ಹಿಡಿಯುವ ಬಲೆ, ದೊಡ್ಡ ಹಡಗುಗಳಿಗೆ ಸಿಲುಕಿ ಈ ಕಡಲ ದೈತ್ಯರ ಸಂಖ್ಯೆ ಇಳಿಮುಖವಾಗಿದೆ (ಸುಮಾರು ಎರಡೂವರೆ ಲಕ್ಷದಿಂದ ಹತ್ತುಸಾವಿರಕ್ಕೆ ). ತನ್ನಷ್ಟಕ್ಕೆ ತಾನಿರುವ ಈ ತಿಮಿಂಗಿಲಗಳನ್ನು ಶತಶತಮಾನಗಳಿಂದಲೂ ನಾನಾ ಕಾರಣಗಳಿಗಾಗಿ ಬೇಟೆಯಾಡಲಾಗುತ್ತದೆ. ಮೋಜಿಗಾಗಿ ಬೇಟೆಯ ಜತೆ ಇದರ ಮಾಂಸಕ್ಕೆ ಅಪೂರ್ವ ಶಕ್ತಿ ಇದೆ ಎಂಬ ನಂಬಿಕೆಯೂ ಇದೆ. ಎಣ್ಣೆ, ರುಚಿಕರ ಮಾಂಸ, ಜಠರದಿಂದ ರಾಸಾಯನಿಕ ಸಂಗ್ರಹಿಸಿ ಸುಗಂಧದ್ರವ್ಯ ಹೀಗೆ ಇವುಗಳ ಉಪಯೋಗ ಹಲವಾರು ಎನ್ನುವುದಕ್ಕಿಂತ, ಮನುಷ್ಯರ ದುರಾಸೆಗೆ ಕೊನೆಯಿಲ್ಲ ಎನ್ನುವುದೇ ಸೂಕ್ತ. ಹೀಗೆ ಸತತ ಬೇಟೆಯಿಂದ ಅನೇಕ ಜಾತಿಯ ತಿಮಿಂಗಿಲಗಳು ಅಳಿವಿನ ಅಂಚನ್ನು ತಲುಪಿವೆ. 1986ರಲ್ಲಿ ಈ ಬೇಟೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಬಂಧ ವಿಧಿಸಿದರೂ ಜಪಾನ್ ಮತ್ತು ನಾರ್ವೆಗಳಲ್ಲಿ ಮುಂದುವರೆದಿದೆ. ಹಾಗಾಗಿ, ಶ್ರೀಲಂಕಾ ಎಂಬ ಪುಟ್ಟ ದೇಶವನ್ನು ತಿಮಿಂಗಿಲ ಮತ್ತು ಡಾಲ್ಫಿನ್‌ಗಳ ಸಂರಕ್ಷಣಾ ತಾಣವೆಂದು 1979ರಲ್ಲಿ ಘೋಷಿಸಲಾಗಿದೆ. ಇಪ್ಪತ್ತೇಳು ಜಾತಿಯ ತಿಮಿಂಗಿಲಗಳು ಇಲ್ಲಿವೆ ಎಂಬುದಾಗಿ ಹೇಳಲಾಗಿದೆ. ಅವುಗಳಲ್ಲಿ ಬ್ಲೂವೇಲ್, ಹಂಪ್ ಬಾಕ್, ಸ್ಪರ್ಮ್ ವೇಲ್ ಮತ್ತು ಪೈಲಟ್ ವೇಲ್‌ಗಳನ್ನು ಸಾಮಾನ್ಯವಾಗಿ ಕಾಣಬಹುದು. ಶ್ರೀಲಂಕಾದ ಸಮುದ್ರದ ನಿರ್ದಿಷ್ಟ ಪ್ರದೇಶಗಳಲ್ಲಿ ಕಡಲಕಳೆ, ಸಣ್ಣ ಚಿಪ್ಪುಜೀವಿಗಳು ಹೇರಳವಾಗಿದ್ದು ಇದು ತಿಮಿಂಗಿಲಗಳ ಮುಖ್ಯ ಆಹಾರ. ಹೀಗಾಗಿ, ಇಲ್ಲಿ ಇವುಗಳನ್ನು ಕಾಣಲು ಸಾಧ್ಯ. ನವೆಂಬರ್‌ನಿಂದ ಏಪ್ರಿಲ್‌ವರೆಗೆ ಸಮುದ್ರದಲ್ಲಿ ಇವುಗಳನ್ನು ಕಾಣಬಹುದು. ಬೇರೆ ಸಮಯದಲ್ಲಿ ಅಲ್ಲಲ್ಲಿ ಕಂಡರೂ ಮಾನ್ಸೂನ್‌ನಿಂದಾಗಿ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚು ಮತ್ತು ದೋಣಿಯಲ್ಲಿ ಪಯಣಿಸುವುದು ಅಪಾಯಕಾರಿ.
ಸಫಾರಿಯಲ್ಲಿ ಕಾಣುವುದೇನು?
ದೋಣಿಯಲ್ಲಿ ಕುಳಿತು ಸಮುದ್ರದಲ್ಲಿ ಹೋಗುವುದೇನೋ ಸರಿ, ಆದರೆ ಅವುಗಳನ್ನು ಗುರುತಿಸುವುದು ಹೇಗೆ? ಬೃಹತ್ ಗಾತ್ರವಾದರೂ ಇವುಗಳನ್ನು ಹುಡುಕುವುದು ಸುಲಭಸಾಧ್ಯವಲ್ಲ. ಆದ್ದರಿಂದ ಪ್ರತೀ ದೋಣಿಯಲ್ಲೂ ಎಲ್ಲಿ, ಯಾವಾಗ ಎಂದು ತೋರಿಸುವ ಅನುಭವಿ ಗೈಡ್‌ಗಳಿರುತ್ತಾರೆ. ತಾಳ್ಮೆಯಿಂದ ವಿಶಾಲ ಜಲರಾಶಿಯನ್ನು ಕಣ್ಣಿಂದ ಅಳೆಯುತ್ತ ಈ ದೈತ್ಯರ ಸುಳಿವಿಗಾಗಿ ಮೈಯೆಲ್ಲಾ ಕಣ್ಣಾಗಿ ಕಾಯುತ್ತಾರೆ.ಹಾಗೆ ಕಾಣುವ ಮೊದಲ ಸುಳಿವು, ಸಮುದ್ರದಲ್ಲಿ ಕಾರಂಜಿ! ಇದಕ್ಕೆ ವೈಜ್ಞಾನಿಕ ವಿವರಣೆ ಹೀಗಿದೆ. ತಿಮಿಂಗಿಲಗಳು ಸಸ್ತನಿಗಳು. ಹಾಗಾಗಿ, ಶ್ವಾಸಕೋಶಗಳ ಮೂಲಕವೇ ಇವುಗಳ ಉಸಿರಾಟ. ಗಾಳಿಯನ್ನು ಉಸಿರಾಡಲು ಇವು ನೀರಿನಿಂದ ಹೊರಬರುತ್ತವೆ. ಇತರ ಸಸ್ತನಿಗಳ ಹಾಗೆ ಉಸಿರಾಟಕ್ಕೆ ನೆರವಾಗಲು ಮೂಗಿಲ್ಲ, ಬಾಯಲ್ಲಿ ಸಾಧ್ಯವಿಲ್ಲ.ಆದರೆ, ವಿಶೇಷವಾದ ಊದುರಂಧ್ರವನ್ನು ಹೊಂದಿವೆ. ನೀರಿನಿಂದ ಹೊರಬಂದಾಗ ಶ್ವಾಸಕೋಶಗಳ ಒಳಗಿನ ಬೆಚ್ಚಗಿನ ಗಾಳಿ ಮತ್ತು ಸುತ್ತಲಿನ ನೀರು ಊದುರಂಧ್ರದ ಮೂಲಕ (ಸುಮಾರು ಒಂಬತ್ತು ಮೀಟರ್ ಎತ್ತರಕ್ಕೆ) ಹೊರಚಿಮ್ಮುತ್ತದೆ. ಇದು ವೇಲ್ ಸಫಾರಿಯಲ್ಲಿ ಸಮುದ್ರದಲ್ಲಿ ಗಮನಿಸಬೇಕಾದ ಮೊದಲ ಅಂಶ. ಇದಾದ ಸ್ವಲ್ಪ ಹೊತ್ತಿನಲ್ಲಿ ಮೂರು-ನಾಲ್ಕು ಬಾರಿ ನೀರಿನಿಂದ ಹೊರಗೆ-ಒಳಗೆ ಹೋಗಿ ಬಂದು ಉಸಿರಾಡುತ್ತವೆ. ಪ್ರತೀ ಅರ್ಧ ಗಂಟೆಗೊಮ್ಮೆ ಈ ರೀತಿ ಉಸಿರಾಟ ನಡೆಯುತ್ತದೆ. ಸಾಮಾನ್ಯವಾಗಿ ಎರಡು-ಮೂರರ ಗುಂಪಿನಲ್ಲಿ ಕಾಣುವ ಇವುಗಳನ್ನು ಮೈಯ ಆಕಾರ ಮತ್ತು ಹಿಂಭಾಗದ ಬಾಲದ ರಚನೆಯ ಮೇಲೆ ಯಾವ ಜಾತಿ ಎಂದು ಗುರುತಿಸಲಾಗುತ್ತದೆ.
ಪಾಲಿಸಬೇಕಾದ ನಿಯಮಗಳು
ಈ ರೀತಿ ವೇಲ್ ವಾಚಿಂಗ್ ಹೋಗುವಾಗ ಸರ್ಕಾರದ ಲೈಸೆನ್ಸ್ ಪಡೆದ ಅಧಿಕೃತ ಸಂಸ್ಥೆಯೊಂದಿಗೆ ಹೋಗಬೇಕು. ದೋಣಿಯಲ್ಲಿ ಕೂರುವ ಮುನ್ನ ಲೈಫ್ ಜಾಕೆಟ್ ಧರಿಸುವುದು ಕಡ್ಡಾಯ. ಸಹಜವಾಗಿ ಸಮುದ್ರದಲ್ಲಿ ಚಲಿಸುವ ತಿಮಿಂಗಿಲಗಳ ದಾರಿಗೆ ಅಡ್ಡವಾಗಿ ಅಥವಾ ತೀರಾ ಸಮೀಪವಾಗಿ ದೋಣಿ ಹೋಗುವಂತಿಲ್ಲ. ಕನಿಷ್ಠ ಐವತ್ತು ಮೀಟರ್ ದೂರ ಕಾಪಾಡಲೇಬೇಕು. ಇವು ಕಂಡಾಗ, ಇಂಜಿನ್ ಸದ್ದು, ಗಲಾಟೆ ಮತ್ತು ಜೋರಾದ ಚಲನೆ ಇರಬಾರದು. ಆದಷ್ಟೂ ನಿಶಬ್ದವಾಗಿ ದೂರದಿಂದ ಅವುಗಳನ್ನು ನೋಡಿ ಸಂತೋಷಿಸುವುದಷ್ಟೇ! ಸದ್ದು ಹೆಚ್ಚಾದಾಗ ಬೆದರಿ ಬೇರೆಡೆ ಧಾವಿಸುತ್ತವೆ. ಹಾಗೆಯೇ ಮುಟ್ಟಲು ಯತ್ನಿಸುವುದು, ತೀರಾ ಸಮೀಪಕ್ಕೆ ಹೋಗುವುದು ಅವುಗಳಿಗೂ- ನಮಗೂ ಅಪಾಯಕಾರಿ.
ಬೇಟೆಯ ಬದಲು ಈ ರೀತಿ ಸುರಕ್ಷಿತ ವೇಲ್ ಸಫಾರಿ ಅವುಗಳ ಬಗ್ಗೆ ಜನಜಾಗೃತಿ ಮೂಡಿಸುವ ಮತ್ತು ಸಂರಕ್ಷಣೆಗೆ ಧನಸಹಾಯ ಒದಗಿಸುವ ಉತ್ತಮ ಮಾರ್ಗ ಎಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬರಿಗೆ ನಾಲ್ಕರಿಂದ ಆರು ತಾಸುಗಳ ಈ ಸಫಾರಿಗೆ ಬೆಳಗಿನ ತಿಂಡಿಯೂ ಸೇರಿದಂತೆ ವಿಧಿಸುವ ಶುಲ್ಕ ಒಬ್ಬರಿಗೆ ಆರು ಸಾವಿರ ಸಿಂಹಳ ರೂಪಾಯಿಗಳು. ಪ್ರಪಂಚದ ಇನ್ನಿತರ ದೇಶಗಳಾದ ಕೆನಡಾ, ನ್ಯೂಜಿಲಾಂಡ್ ಮತ್ತು ಯುರೋಪ್‌ಗ್ಳಲ್ಲಿ ವೇಲ್ ವಾಚಿಂಗ್ ರೂಢಿಯಲ್ಲಿದ್ದರೂ ದರ ತೀರಾ ಹೆಚ್ಚು ಮತ್ತು ಇಷ್ಟು ಸುಲಭವಾಗಿ ಕಾಣಸಿಗುವುದಿಲ್ಲ. ಶ್ರೀಲಂಕಾದಲ್ಲಿಯೂ ಕಡಿಮೆ ದುಡ್ಡಿಗೆ, ಸುರಕ್ಷಾ ಕ್ರಮ ಅನುಸರಿಸದೇ ಮೋಸ ಮಾಡುವವರೂ ಇ¨ªಾರೆ. ಹಾಗಾಗಿ, ಎಚ್ಚರಿಕೆ ಅಗತ್ಯ. ಜಗತ್ತಿನ ಅತೀ ದೊಡ್ಡ ಪ್ರಾಣಿಗಳನ್ನು ಅವುಗಳ ಸಹಜ ನೆಲೆಯಲ್ಲಿ ನೋಡುವುದು ಖಂಡಿತವಾಗಿ ಅಪೂರ್ವ ಅನುಭವ. ಜತೆಗೆ ತೀರದಿಂದ ಸಮುದ್ರದ ಒಳಭಾಗಕ್ಕೆ ದೋಣಿಯಲ್ಲಿ ಪ್ರಯಾಣಿಸುವಾಗ ಸಮುದ್ರ ಮತ್ತು ಈ ಜಲಚರಗಳ ಬಗ್ಗೆ ಅಂಕಿ ಅಂಶಗಳ ಸಮೇತ ಸಾಕಷ್ಟು ವಿವರಣೆ ನೀಡುವುದರಿಂದ ಶೈಕ್ಷಣಿಕವಾದದ್ದೂ ಹೌದು.
ಡಾ. ಕೆ. ಎಸ್. ಚೈತ್ರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.