ಹಕ್ಕಿಯ ರೆಕ್ಕೆ ಎಂಬ ನಂಬುಗೆ


Team Udayavani, Feb 23, 2020, 5:28 AM IST

ram-10

ಮನೆಯ ಸುತ್ತುಮುತ್ತಲಿನಲ್ಲಿ ಬರುವ ಪ್ರತಿಯೊಂದು ಹಕ್ಕಿಗೂ ಅದರದ್ದೇ ಆದ ಚೆಲುವು, ಬೆಡಗು, ಆಕರ್ಷಣೆ. ಅಶ್ವತ್ಥಮರದ ಎಲೆಗಳ ನಡುವೆ ಕುಳಿತಿರುವ ವಸಂತದ ಹಕ್ಕಿ ಕಣ್ಣಿಟ್ಟು ನೋಡಿದರೆ ಮಾತ್ರ ಕಂಡೀತು. ಹುಲ್ಲಹಸುರು ಮೈಗೆ ಮರದಲ್ಲೇ ಮೂಡಿಬಂದ ಹಣ್ಣಿನಂತಿರುವ ಶುದ್ಧ ಕೆಂಪಿನ ಹಣೆ-ಎದೆ. ಲೋಹದ ಕೆಲಸದವರು ಪಾತ್ರೆಗೆ ಬಡಿಯುವಂತಿರುವ ದೂರದ ಟುಕ್‌… ಟುಕ್‌… ಏಕತಾನವು ತಟಸ್ಥವಾಗಿ ಕುಳಿತ ಈ ಪುಟಾಣಿಯ ಕೊರಳಿಂದಲೇ ಹೊರಡುವುದೆನ್ನುವುದು ಸೂಕ್ಷ್ಮವಾಗಿ ಅದನ್ನು ಗಮನಿಸಿದಾಗಷ್ಟೇ ತಿಳಿದೀತು. ಇನ್ನು ಬಾಲ್ಕನಿಯ ಹೂಗಳ ಮೇಲೆ ಬಗ್ಗಿ, ಬಾಗಿದ ಚೂಪು ಕೊಕ್ಕನ್ನು ಹೂವಿನೊಳಗೆ ನಳಿಕೆಯಂತೆ ತುರುಕುವ, ಗುಬ್ಬಿಗಿಂತ ಸಣ್ಣ ಜೀವದ ಸೂರಕ್ಕಿ. ಕೋಮಲವಾದ ಹಳದಿ ಮೈಬಣ್ಣಕ್ಕೆ ಕಂದು-ಕೆಂಪು-ನೇರಳೆ ಮಿಶ್ರಿತ ರೆಕ್ಕೆಪುಕ್ಕ. ಕುಳಿತುಕೊಳ್ಳಲು ವ್ಯವಧಾನವಿಲ್ಲದೆ ಹಾರುತ್ತ ರಸ ಹೀರುವ ರಭಸಕ್ಕೆ ರೆಕ್ಕೆಗಳೇ ಅದೃಶ್ಯವಾದಂತೆ ಕಾಣುವುದುಂಟು.

ನಗರ ಜೀವನದಲ್ಲಿ ಮನೆ, ಶಾಲೆ, ಆಫೀಸು, ಫ್ಯಾಕ್ಟರಿ, ರಸ್ತೆ- ಇವುಗಳಿಗಷ್ಟೇ ಬದುಕು ಸೀಮಿತವೆನ್ನುವ ಪರಿಸ್ಥಿತಿಯಲ್ಲಿ ಸುತ್ತಮುತ್ತ ಎತ್ತರೆತ್ತರದ ಕಟ್ಟಡಗಳೇ ತುಂಬಿರುವಾಗ, ಪ್ರಕೃತಿಯೊಡ ನಿರುವ ಸಂಬಂಧಗಳು ತನ್ನಿಂದತಾನಾಗಿ ಸಡಿಲಾಗುತ್ತಿರುತ್ತವೆ. ಇಂಥ ಪರಿಸ್ಥಿತಿಯಲ್ಲಿ ಸುತ್ತಲಿನ ಮರಗಳ್ಳೋ, ಎತ್ತರದಲ್ಲೊಂದು ಬೆಟ್ಟದ ಶಿಖರವೋ, ದೂರದ ಸಮುದ್ರವೋ, ಪಕ್ಕದ ನದಿ-ಕೆರೆಗಳ್ಳೋ, ಹಕ್ಕಿಗಳ ಹಿಂಡೋ ಕಣ್ಣಿಗೆ ಬಿತ್ತೆಂದರೆ, ಪ್ರಕೃತಿಯೊಡನೆ ಆಪ್ತತೆಯ ತಂತು ಏರ್ಪಟ್ಟು ಮನಸ್ಸಿಗೇನೋ ನೆಮ್ಮದಿ. ಹಾಗಾಗಿಯೇ, ಮನೆ ತೋರಿಸುವಾಗ ಜನರು ಈ ಕಿಟಕಿಯಿಂದ ಸಮುದ್ರ ತೋರುತ್ತದೆ, ಗುಡ್ಡದ ತುದಿ ನೋಡಿ ಇಲ್ಲಿಂದ ಹೇಗೆ ಕಾಣ್ತದೆ, ಎಂದು ಸಮುದ್ರವನ್ನೋ, ಗುಡ್ಡವನ್ನೋ ಕ್ರಯಕೊಟ್ಟು ಕೊಂಡವರಂತೆ, ಉಕ್ಕುವ ಅಭಿಮಾನದಿಂದ ಹೇಳುವುದುಂಟು. ಪ್ರಕೃತಿಯೊಡನೆ, ಪ್ರಾಣಿಪಕ್ಷಿಗಳೊಡನೆ ಆದಿಮಾನವನಿಗಿದ್ದ ನಿಕಟಸಂಬಂಧವೇ ಇದಕ್ಕೆ ಕಾರಣವಿರಬಹುದು. ಎಷ್ಟೋ ಜಾನಪದ ಕಥೆಗಳಲ್ಲಿ, ಪುರಾಣಗಳಲ್ಲಿ ಪ್ರಾಣಿ, ಪಕ್ಷಿ, ಮರಗಿಡಗಳೊಂದಿಗೆ ಮನುಷ್ಯರು ಮಾಡುವ ಮಾತುಕತೆಯ ಪ್ರಸ್ತಾಪಗಳು, ಅವುಗಳಲ್ಲಿ ಹಲವಕ್ಕೆ ಸಲ್ಲುವ ಪೂಜಾಭಾವ- ಇವೆಲ್ಲವೂ ಈ ಸಂಬಂಧದ ಸಂಕೇತಗಳೇ.

ಚಿನ್ನದ ಬಣ್ಣದ ಸ್ವರ್ಣಪಕ್ಷಿ ಚಳಿಗಾಲಕ್ಕೆ ಬರುವ ಅಪರೂಪದ ಅತಿಥಿ. ಎಲೆಗಳ ಎಡೆಗಳಲ್ಲಿ ಹೊಳೆಯುವ ಈ ಹಕ್ಕಿಯೋ- ಬಂತು ಎನ್ನುವುದರೊಳಗೆ, ರೊಂಯ್ಯನೆ ಹಾರಿ ಕಣಾ¾ಯಕ. ಹಳದಿ ಮೈ, ಕಪ್ಪು ರೆಕ್ಕೆ, ಕಣ್ಣಸುತ್ತ ಹಿಂದಿನವರೆಗೂ ದಪ್ಪ ಕಾಡಿಗೆಯ ಗೆರೆ. ಸಿಳ್ಳು ಹಾಕಿದಂತೆ ಬೇರೆ ಬೇರೆ ಸ್ವರ ಹೊರಡಿಸುತ್ತಿದ್ದರೆ, ಯಾರೊಡನೆಯೋ ಕಷ್ಟ-ಸುಖ ಮಾತಾಡಿಕೊಂಡಂತೆ. ಬಾದಾಮಿ ಮರದಲ್ಲಿ ಕುಳಿತು ಹಣ್ಣು ತಿನ್ನುವಾಗ ಅದಕ್ಕೆ ಸಾವಿರ ಕಡೆ ದೃಷ್ಟಿ. ಸ್ವಲ್ಪವೇ ಸಪ್ಪಳಕ್ಕೆ ಹಣ್ಣು ಕೆಳಗೆ, ಹಕ್ಕಿ ಕಾಣೆ.

ವಸಂತಕಾಲದ ಕುಹೂ ಕುಹೂ
ಮನೆಯೆದುರಿನ ತಂತಿಯ ಮೇಲೆ ನಿಮಿಷಾನುಗಟ್ಟಲೆ ಕೂತಿರುವ ವೆಲ್ವೆಟಿನ ಹೊಳಪಿನ ಕಡುಕಪ್ಪು ಕಾಜಾಣಕ್ಕೆ ಎರಡು ಸೀಳುಗಳುಳ್ಳ ಉದ್ದನೆಯ ಬಾಲ. ಕಾಜಾಣದ ಕುಳಿತುಕೊಳ್ಳುವ ಗತ್ತೋ, ಯಾರ ಹೆದರಿಕೆ ನನಗೇನು ಎಂಬಂಥ ನೇರನೋಟದ ಭಂಗಿಯೋ! ಅದರ ಬಿರುಸಾದ ಒರಟು ಕೂಗಂತೂ ಬೈಗುಳಂತೆ ಕೇಳಿಸುವುದುಂಟು. ಚಿರಪರಿಚಿತ ಕಪ್ಪು-ಬಿಳುಪಿನ ಮಡಿವಾಳ ಹಕ್ಕಿ ಪುಸ್ತಕದ ಕೋಣೆಯ ಕಿಟಕಿಯ ಗಾಜನ್ನು ನಿರಾತಂಕವಾಗಿ ಕುಟ್ಟುತ್ತ, ತಲೆ ತಿರುಗಿಸುತ್ತ, ಬಾಲ ನಿಮಿರಿಸಿ ನಡೆಯುವ ಠೀವಿ ನೋಡಬೇಕು. ಒಮ್ಮೆ ಪಿರಿಪಿರಿ ಮಳೆಯ ಮಧ್ಯಾಹ್ನದಲ್ಲಿ, ಜೊಂಪು ಹತ್ತುವಾಗ, ಉದ್ದುದ್ದ ಸಿಳ್ಳಿನ ಇಂಪಾದ ಸಂಗೀತ ಸುಧೆ ಕೇಳಿ ಕಿಟಕಿಯಿಂದ ಕಿಟಕಿಗೆ ಓಡಾಡಿ ನೋಡಿದರೆ ತೆಂಗಿನಗರಿಯ ಮೇಲೆ ಪರಿಚಿತ ಮಡಿವಾಳ ಹಕ್ಕಿ.

ಮಾವಿನೆಲೆಗಳ ನಡುವೆ ಅವಿತಿದ್ದು, ಇಂಚರದಿಂದಷ್ಟೇ ಮನಸ್ಸನ್ನು ಗೆಲ್ಲುವ ಹಕ್ಕಿಯೆಂದರೆ ಕೋಗಿಲೆಯೇ ಸೈ. ಗಾತ್ರ, ಮೈಬಣ್ಣ ಕಾಗೆಯಂತಿದ್ದರೂ, ರೂಪಕ್ಕೊಂದು ಒಪ್ಪವಿದೆ. ಬೀಸಣಿಗೆ ಬಾಲ, ಹಳದಿ ಕೊಕ್ಕು, ರಕ್ತವರ್ಣದ ಕಣ್ಣುಗಳು. ಹೆಣ್ಣು ಕೋಗಿಲೆಯ ಶೃಂಗಾರ ಬೇರೆಯೇ. ಕಂದು ಮೈಯ ತುಂಬ ಬಿಳೀ ಚುಕ್ಕಿಗಳು. ಶಿಶಿರದಲ್ಲಿ ಮೌನವ್ರತವಾದರೆ, ವಸಂತ ಕಾಲಿಡುತ್ತಲೂ ಗಂಡು ಕೋಗಿಲೆಯ ಹೃದಯ ಮೀಟುವ ಕುಹೂ… ಕುಹೂ… ಅರುಣೋದಯಕ್ಕೆ ಮೊದಲೇ, ಕೆಳಗಿನ ಸ್ತರದಲ್ಲಿ ಆರಂಭವಾಗಿ, ಜ್ವರ ಏರಿದಂತೆ ಮೇಲೇರುತ್ತ ಸಾಗುವ ಉನ್ಮತ್ತ ನಾದಕ್ಕೆ ಅದೇನೋ ಸೆಳೆತ!

ಕೋಗಿಲೆಗಳ ಕೊಕ್ಕಿನಲ್ಲಿ ಗೂಡುಕಟ್ಟುವ ಹುಲ್ಲುಕಡ್ಡಿ ನೋಡಿದ್ದೇ ಇಲ್ಲ. ಕಾಗೆಯ ಗೂಡಿನಲ್ಲಿ ಮೊಟ್ಟೆಯಿಡಲು ಸಾಕಷ್ಟು ಜಾಗವಿರುವಾಗ ಯಾಕಾದರೂ ಕಷ್ಟಪಡಬೇಕು? ಅಡುಗೆಕೋಣೆಯ ಹೊರಗಿನ ಮಾವಿನಮರದಲ್ಲಿ ತರಗೆಲೆಗಳೊಂದಿಗೆ ಏಳೆಂಟು ಹ್ಯಾಂಗರುಗಳನ್ನು ನೈಲಾನು ಹಗ್ಗದಿಂದ ಬಿಗಿದು ಕಟ್ಟಿದ ಕಾಗೆಯ ಗೂಡಾದರೂ ಅದೆಷ್ಟು ವಿಶಾಲ! ಒಮ್ಮೆ, ಕಾಗೆಯಿಂದ ಉಚ್ಚಾಟನೆಗೊಂಡ ಭಯಭೀತ ಕೋಗಿಲೆಯ ಮರಿಯೊಂದು ನಡುಮನೆಗೆ ಹಾರಿಬಂದು ಮೇಜಿನಡಿ ಶರಣಾರ್ಥಿಯಾಗಿ ಅಡಗಿ ಕುಳಿತಿತ್ತು. ಗಿಳಿಗಳಿಗೋ ಕಿಟಿಕಿಯ ಕಟಕಟೆಯ ಮೇಲೆ ಕುಳಿತು ಒಳಗೆಲ್ಲ ಇಣುಕಿ ನೋಡುವ ಸಲಿಗೆ. ಕಿಟಕಿಯ ಎದುರಿನ ಮೊಂಡು ತೆಂಗಿನಮರದ ಪೊಟರೆಯಲ್ಲೇ ಅದರ ಗೂಡು. ಗಂಡು ಗಿಳಿ ಬಡಗಿಯಂತೆ ಕೊರೆಯುತ್ತ ಮನೆ ಸಿದ್ಧಪಡಿಸಿದ ಮೇಲೆ, ಹೆಣ್ಣು ಗಿಳಿಯ ಪರೀಕ್ಷಣೆಯಿಂದ ಹಿಡಿದು, ಮರಿಗಳು ಹಕ್ಕಿಗಳಾಗಿ ಹಾರಿಹೋಗುವವರೆಗಿನ ಗಿಳಿ ದಂಪತಿಗಳ ಸಂಸಾರದ ಎಲ್ಲ ವಿದ್ಯಮಾನಗಳಿಗೆ ಪ್ರೇಕ್ಷಕರಾಗುವ ಭಾಗ್ಯ! ಮೊಟ್ಟೆಯಿಟ್ಟಾಗ, ಮೊಟ್ಟೆಯೊಡೆದು ಮರಿಯಾದಾಗ, ಮರಿಗಳಿಗೆ ರೆಕ್ಕೆ ಮೂಡಿದಾಗ- ಪ್ರತಿ ಘಟ್ಟದಲ್ಲೂ ನೆಂಟರಿಷ್ಟರಿಗೆ ಕರೆ ಹೋಗಿ ಕ್ಷಣಮಾತ್ರದಲ್ಲಿ ಚೀಂ… ಚೀಕ್‌… ಸ್ವರಗಳ ಕೋಲಾಹಲ, ಹಬ್ಬದ ಸಂಭ್ರಮ.

ಬೆಳ್ಳಗಿನ ಉದ್ದಾನುದ್ದ ಬಾಲದ ರಾಜಹಕ್ಕಿ, ಉಜ್ವಲ ನೀಲಿ ಬಣ್ಣದ ಮಿಂಚುಳ್ಳಿ, ಬೀಸಣಿಗೆ ಬಾಲವನ್ನು ಬಿಡಿಸಿಕೊಂಡೇ ಸಿಳ್ಳು ಹಾಕುತ್ತ ಪೊದೆಯೊಳಗೆ ಧುಮುಕುತ್ತ ಹಾರುವ ನೊಣಹಿಡುಕ, ಕೂಪ್‌-ಕೂಪ್‌-ಕೂಪ್‌ ಎಂದು ಕೂಗುವ ತಾಮ್ರವರ್ಣದ ರೆಕ್ಕೆಯ ಕುಪ್ಪಳಕ್ಕಿ, ಕಂದು-ಕಪ್ಪು ಮೈಗೆ ಒಪ್ಪುವ ಹಳದಿ ಕೊಕ್ಕಿನಿಂದ ಹುಳಹುಪ್ಪಟೆಗಳನ್ನು ಕೆದಕಿ ತಿಂದು ಗುಂಪಿನೊಂದಿಗೆ ಭರ್ರನೆ ಹಾರಿ ಹೋಗುವ ಮೈನಾ, ಕೆಳಮುಖ ಬಾಗಿದ ಅಡಿಯಷ್ಟು ಉದ್ದದ ಕೊಕ್ಕನ್ನು ಮೇಲೆತ್ತಿ, ಮೈಲುದೂರ ಕೇಳುವ ಆರ್ತನಾದ ಹೊರಡಿಸುವ ಮಂಗಟ್ಟೆ ಹಕ್ಕಿ…ಹೇಳುತ್ತ ಹೋದರೆ ಪಟ್ಟಿ ಮುಗಿಯದು.

ಸ್ವಚ್ಛಂದವಾಗಿ ಹಾರುವ, ಆಗಸದೆತ್ತರಕ್ಕೆ ಏರುವ ಹಕ್ಕಿಯು ಕವಿಗಳೆಲ್ಲರ ಮೆಚ್ಚಿನ ರೂಪಕ. ಸ್ವಾತಂತ್ರ್ಯವನ್ನೂ, ಚಿರಜೀವನವನ್ನೂ ಸಂಕೇತಿಸುವ ಹಕ್ಕಿಗಳು ಬಹುಶಃ ಕವಿಗಳು ಬಯಸುವ ಸಹಜ ಪ್ರತಿಮೆಗಳನ್ನು ಒದಗಿಸುತ್ತವೆ. ಕೆಲವೊಮ್ಮೆ ಅವು ಮನಸ್ಸಿನೊಳಗಿನ ಮೋಡ ಕವಿದ ಭಾಗಗಳಿಗೆ ನಮ್ಮನ್ನು ಕೊಂಡೊಯ್ಯುವುದೂ ಇದೆ. ಅವುಗಳ ಹಾಡು, ಒಲವು, ಬಾಂಧವ್ಯಗಳು ಅರ್ಧಂಬರ್ಧ ನೆನಪಿರುವ ಅನಾದಿ ಕಾಲದ ಪ್ರಾಣಿಜಗತ್ತಿನ ನಿಗೂಢತೆಗಳಿಗೆ ಸೇತುವೆ ಕಲ್ಪಿಸುವಂತಿರುತ್ತವೆ.

ಮನೆಯ ಹತ್ತಿರದ ಈ ಆತ್ಮೀಯ ಹಕ್ಕಿಗಳೇ ಹಕ್ಕಿ ಮತ್ತು ಅವಳು ಎಂಬ ನನ್ನ ಕತೆಗೆ ಪ್ರೇರಣೆಯಾಗಿದ್ದವು. “ಅಬ್ಟಾ ! ನಿನ್ನ ರೆಕ್ಕೆಗೆ ಅದೆಷ್ಟು ಬಲ!’ ಹಕ್ಕಿಯು ಹೆಮ್ಮೆಯಿಂದ ಬೀಗಿತು. ನೀಲಿ ಹಸುರು ಪಾರದರ್ಶಕ ರೆಕ್ಕೆಗಳನ್ನು ಬಿಡಿಸಿ ಎತ್ತಿ ಹಿಡಿದು ಮಡಚಿತು. “ನೋಡಿಲ್ಲಿ’ ಎಂದು ಪುರ್ರನೆ ಗರಿಗೆದರಿ ಹಾರಿತು. ನೀಲ ಮುಗಿಲ ಉದ್ದಕ್ಕೂ ಕಣ್ಣ ನೋಟದ ಅಂತ್ಯದ ತನ‌ಕವೂ, ಮತ್ತೆ ಬರೇ ಚುಕ್ಕಿಯಾಗಿ ಬಾನು ನೆಲಮುಟ್ಟುವ ತನಕವೂ ಹಕ್ಕಿ ಸಾಗುತ್ತಿತ್ತು. ಹಕ್ಕಿಯ ರೆಕ್ಕೆಯ ಆ ನಂಬುಗೆಗೆ, ನಂಬುಗೆಯ ಬಲಕ್ಕೆ ಮೆಚ್ಚಿದಳು ಅವಳು. ಹೌದೆ, ಮೆಚ್ಚಿದಳೆ ಅಥವಾ ಕರುಬಿದಳೆ?
(ಅಂಕಣ ಮುಕ್ತಾಯ)

ಮಿತ್ರಾ ವೆಂಕಟ್ರಾಜ್‌

ಟಾಪ್ ನ್ಯೂಸ್

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

14-sky

Subramanya: ಕುಕ್ಕೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ

Hospital: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ

13-thirthahalli

Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿ ಬಿಟ್ಟು ವ್ಯಕ್ತಿ ನದಿಗೆ; ಶಂಕೆ

Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?

Tollywood: ʼಪುಷ್ಪ-2ʼ ಟ್ರೇಲರ್‌ನಲ್ಲಿ ಕಾಣುವ ಅರ್ಧ ತಲೆ ಬೋಳಿಸಿರುವ ಈ ನಟ ಯಾರು?

9-mng

Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?

Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

13(2)

Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ

12

Udupi: ವಿಸಿಲ್‌ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್‌ ನಿರ್ವಹಣೆ!

15-uv-fusion

Paddana-Tulu folk songs: ಮರೆಯಾಗದಿರಲಿ ಪಾಡ್ದನನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ

11

Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.