ಇಂದು ವಿಶ್ವ ನೃತ್ಯ ದಿನ: ಕಾವ್ಯಕನ್ನಿಕೆ ನಾಟ್ಯ ಲೀಲೆ
Team Udayavani, Apr 29, 2018, 6:00 AM IST
ಯಾರಿದು ಕಾವ್ಯಕನ್ನಿಕೆ? ಕೆಲವು ಸಮಯದ ಹಿಂದೆ ಅಂತರಾಷ್ಟ್ರೀಯ ಮಹಿಳಾ ದಿನಕ್ಕಾಗಿ ನಾನು ಭಾರತೀಯ ಸಾಂಸ್ಕೃತಿಕ ನಿರ್ದೇಶನಾಲಯಕ್ಕಾಗಿ ಸಿದ್ಧಪಡಿಸಿದ ಕನ್ನಡ ಕವಯತ್ರಿಯರ ಕವನಗಳ ನೃತ್ಯ ಪ್ರಸ್ತುತಿಯಿದು. ಕಳೆದ ನಾಲ್ಕು ವರ್ಷಗಳಲ್ಲಿ “ಕಾವ್ಯಕನ್ನಿಕೆ’ ಯೊಡನೆ ಕುಣಿದಾಡುತ್ತ ವಿವಿಧ ಜನರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಮಕ್ಕಳಿಗೆ, ವಿಶ್ವವಿದ್ಯಾಲಯಗಳ ವಿಭಾಗಗಳ ಮಂದಿಗೆ, ನರ್ಸಿಂಗ್ ವಿದ್ಯಾರ್ಥಿಗಳಿಗೆ- ಹೀಗೆ ವಿವಿಧ ವರ್ಗಗಳಿಗೆ ಕವಯತ್ರಿಯರ ಅಂದರೆ ಮಹಿಳೆಯರ ಸಂವೇದನೆಗಳನ್ನು ತಲುಪಿಸುವ ಪ್ರಯತ್ನ ಮಾಡಿದ್ದೇನೆ. ಈ ಪ್ರಯತ್ನದಲ್ಲಿ ನನಗಾದ ಅನುಭವಗಳು ವಿಶ್ವ ನೃತ್ಯದಿನವಾದ ಇಂದು ಮತ್ತೆ ನನಗೆ ನೆನಪಿಗೆ ಬರುತ್ತಿವೆ.
“ಕಾವ್ಯಕನ್ನಿಕೆ’ಯನ್ನು ನಾನು ಯಾವಾಗಲೂ ಆರಂಭಿಸುವುದು ನಮ್ಮ ಪ್ರಪ್ರಥಮ ಕವಯತ್ರಿ ಅಕ್ಕಮಹಾದೇವಿಯ ವಚನದಿಂದ. ಅಕ್ಕನ ಗಂಡು ಗಂಡಾದೆಡೆ ಹೆಣ್ಣಿನ ಸೂತಕ ಎಂಬ ವಚನದಲ್ಲಿ ಬರುವ ಚೆನ್ನ ಮಲ್ಲಿಕಾರ್ಜುನನೆಂಬ ಗರುವಂಗೆ ಜಗವೆಲ್ಲ ಹೆಣ್ಣು ನೋಡಾ ಎಂಬ ಸಾಲನ್ನು ಅಭಿನಯಿಸಿ, ನಂತರ ಅದರ ಬಗ್ಗೆ ವಿವರಿಸಿ ನಾನು ನಿಲ್ಲಿಸಿದಾಗ ಒಬ್ಬ ಶಾಲಾ ಬಾಲಕಿ ಕೇಳಿದ್ದಳು, “”ಮೇಡಂ, ದೇವರೇ ಗಂಡು, ಪ್ರಪಂಚವೆಲ್ಲ ಹೆಣ್ಣು ಎನ್ನೋ ಬದಲು ದೇವರು ಹೆಣ್ಣು , ಪ್ರಪಂಚವೆಲ್ಲ ಗಂಡು ಅಂತ ಏಕೆ ಹೇಳಿಲ್ಲ. ಅಂದ್ರೆ ಮತ್ತೆ ಗಂಡು-ಹೆಣ್ಣುಗಳ ನಡುವೆ ಮೇಲು-ಕೀಳು ಇರಬೇಕು ಅಂತ ಒಪ್ಪಿಕೊಂಡ ಹಾಗೆಯೇ ಅಲ್ಲವೆ?”
ಈ ಪ್ರಶ್ನೆ ನನ್ನಲ್ಲಿ ಬೆರಗು ಮೂಡಿಸಿತ್ತು. ಆಮೇಲೆ ಹುಡುಕಿ “”ದಾಸಪಂಥದಲ್ಲಿ ಒಬ್ಬರು, ಭಕ್ತ ಗಂಡು, ದೇವರು ಹೆಣ್ಣು ಎಂಬಂತೆಯೂ ಬಿಂಬಿಸಿ¨ªಾರೆ. ಒಟ್ಟಿನಲ್ಲಿ ಗಂಡು-ಹೆಣ್ಣು ಎಂಬ ಭೇದ ಮಾನಸಿಕವಾಗಿ ಭಕ್ತಿಯ ದೃಷ್ಟಿಯಿಂದ ಭಕ್ತರ ಸಾಧನೆಗೆ ಅಡ್ಡಿಯಾಗಬಾರದೆಂಬ ಅರಿವು ಇಲ್ಲಿ ನಮಗೆ ಮುಖ್ಯ” ಎಂದು ಆ ಬಾಲಕಿಗೆ ವಿವರಿಸಿ¨ªೆ.
ಅದಾದ ಮೇಲೆ ನಾನು ಸಾಮಾನ್ಯವಾಗಿ ತೆಗೆದುಕೊಳ್ಳುತ್ತಿದ್ದದ್ದು ವೈದೇಹಿಯವರ ಶಿವನ ಮೀಯಿಸುವ ಹಾಡು. ನೃತ್ಯಕ್ಕೆ ಸುಲಭವಾಗಿ ಒದಗಿ ಬರುವ ಹಾಡು. ಸೂಕ್ಷ್ಮವಾಗಿ ಓದಿದರೆ ಮಾತ್ರ ಅರ್ಥವಾಗುವ ಭಾವ, ನೃತ್ಯದ ಅಭಿನಯದ ಮೂಲಕ ಸ್ಪಷ್ಟವಾಗುತ್ತದೆ. ಎÇÉೆÇÉೋ ತಿರುಗಿ, ಎಷ್ಟೋ ಮಹಿಳೆಯರೊಡನೆ ಸರಸವಾಡಿ ಬರುವ ಶಿವನನ್ನು ಮೃದುವಾಗಿಯೇ ಚುಚ್ಚುವ, ತನ್ನ “ಆದ್ರìಗರ್ವ’ದಿಂದಲೇ ಮೌನವಾಗಿ ಪ್ರತಿಭಟಿಸುವ “ಗೌರಿ’ಯ ಕತೆ. ಈ ಕತೆ ವಿವಾಹೇತರ ಸಂಬಂಧಗಳ ಬಗೆಗಾದ್ದರಿಂದ ನನಗೆ ಮಕ್ಕಳು-ಪ್ರೌಢಶಾಲಾ ವಿದ್ಯಾರ್ಥಿಗಳ ಎದುರಿಗೆ ಪ್ರಸ್ತುತಪಡಿಸುವಾಗ ಇದರ ಆವಶ್ಯಕತೆಯಿಲ್ಲವೇನೋ ಎಂಬ ಭಾವವಿತ್ತು. ಬೇರೆಡೆ ಇದನ್ನು ನೋಡಿದ್ದ ಅಧ್ಯಾಪಕಿಯೊಬ್ಬರು ತಮ್ಮ ಶಾಲೆಯಲ್ಲಿ ಇದನ್ನು ಏಕೆ ಅಲ್ಲಿ ಮಾಡಲಿಲ್ಲ ಎಂದು ಅಚ್ಚರಿ ಪಟ್ಟರು. ನಾನು ಮಕ್ಕಳಿಗೆ ಅದನ್ನು ಮಾಡುವುದರ ಔಚಿತ್ಯದ ಬಗ್ಗೆ ಅನುಮಾನಿಸಿದಾಗ ಅವರು ಹೇಳಿದ್ದು , “”ಮೇಡಂ, ನೀವು ಮನೋವೈದ್ಯರು. ಲೈಂಗಿಕ ಶಿಕ್ಷಣ ಎಂದರೆ ಕೌಟುಂಬಿಕ ಜೀವನ ಶಿಕ್ಷಣ- Family life education ಎನ್ನುವವರು. ಮಕ್ಕಳಲ್ಲೂ ಮನೆಗಳಲ್ಲಿ ಇಂತಹ ಸಮಸ್ಯೆಗಳಿರುವ ಅಪ್ಪ-ಅಮ್ಮಂದಿರು ಇರಬಹುದು ಅಥವಾ ತಮ್ಮ ಮುಂದಿನ ಜೀವನಕ್ಕೆ ಯಾವುದನ್ನು ಮಾಡಬಾರದು ಎಂಬುದನ್ನು ಕಲಿಯಬಹುದು. ಇಂಥ ಸಂದರ್ಭಗಳಲ್ಲಿ ಅಮ್ಮಂದಿರ ನೋವು ಏನು ಅಂತ ಅರ್ಥ ಮಾಡಿಕೊಳ್ಳಬಹುದು. ಹಾಗಾಗಿ, ಒಬ್ಬ ಶಿಕ್ಷಕಿಯಾಗಿ ನನಗನ್ನಿಸುವುದು ಇದನ್ನು ಮಕ್ಕಳಿಗೂ ವಿವರಿಸುವುದು ಕೌಟುಂಬಿಕ ಜೀವನ ಶಿಕ್ಷಣದ ಒಂದು ಭಾಗ ಎಂದೇ ನಾನು ಭಾವಿಸುತ್ತೇನೆ!”. ಅವರ ಮಾತು ಹೌದೆನ್ನಿಸಿತು. ಅವರ ಈ ಮಾತನ್ನೇ ಅನುಸರಿಸಿ ಪ್ರೌಢಶಾಲಾ ವಿದ್ಯಾರ್ಥಿಗಳ ಮುಂದೆಯೂ ಶಿವನ ಮೀಯಿಸುವ ಹಾಡು ಪ್ರಸ್ತುತಗೊಂಡಿತು.
“ಕಾವ್ಯಕನ್ನಿಕೆ’ಯಲ್ಲಿ ಸಾಮಾನ್ಯವಾಗಿ ಎಲ್ಲ ಮಹಿಳೆಯರೂ, ಹುಡುಗಿಯರೂ ತಮ್ಮ ಜಾತಿ-ವರ್ಗ-ಅಂತಸ್ತು ಇವುಗಳನ್ನು ಮರೆತು ಇಷ್ಟಪಡುವ ಗಂಡಸರು ಹುಬ್ಬೇರಿಸುವ, ಆದರೆ ಕೊನೆಯಲ್ಲಿ ಎಲ್ಲರೂ ನಕ್ಕುಬಿಡುವ ಎರಡು ಹಾಡುಗಳಿವೆ. ಎರಡೂ ಕವಿತೆಗಳೂ ಕವಯತ್ರಿ ಪ್ರತಿಭಾ ನಂದಕುಮಾರ್‌ರವರದ್ದು. ಮೊದಲನೆಯದು ನಾವು ಗಂಡಸರಲ್ಲ ಎಂಬ ಕವಿತೆ. ಈ ಕವಿತೆಯನ್ನು ನರ್ತಿಸುವಾಗೆಲ್ಲ
ನನ್ನಲ್ಲಿ ಪ್ರತಿಬಾರಿಯೂ ವಿವಿಧ ವಿಚಾರಗಳು ಮೂಡುತ್ತವೆ. ಯಾವುದಾದರೊಂದು ಅಸಹಾಯಕತೆಯ ಸಂದರ್ಭದಲ್ಲಿ, ಕಷ್ಟದ ಸಮಯದಲ್ಲಿ, ನಮಗೆ “ನಾನು ಗಂಡಸಾಗಿದ್ದರೆ’ ಎಂಬ ಯೋಚನೆ ಮೂಡಿರಬಹುದಷ್ಟೆ. ಎಷ್ಟೋ ಬಾರಿ ಹಾವು ಬಂದಿತೆನ್ನಿ. “ಯಾರಾದ್ರೂ ಗಂಡಸರನ್ನು ಕರೆಯಿರಿ’ ಎಂದು ಕೂಗುತ್ತೇವೆ. ಅಥವಾ ರಾತ್ರಿ ಹುಡುಗಿಯೊಬ್ಬಳೇ ಹೊರಹೋಗಿ ಬರಬೇಕು, ಅಣ್ಣ /ತಮ್ಮನೊಬ್ಬ ಅವಳಿಗೆ ಜೊತೆಯಿದ್ದರೆ ಎಲ್ಲರಿಗೂ ಸಮಾಧಾನ. ಆದರೆ, ಗಂಡಸರಾದರೂ ನಮ್ಮ ಚಂದಮಾಮ-ಅಮರ ಚಿತ್ರಕಥೆಗಳ ರಾಜರಂತೆ-ವೀರರಂತೆ ಕತ್ತಿ/ಬಿಲ್ಲು-ಬಾಣ ತೆಗೆದುಕೊಂಡೇ ಓಡಾಡುತ್ತಾರೆಯೆ? ಹಾಗಾಗಿ, ಸ್ತ್ರೀಯರು ಹೇಗೆ ಕೋಲಿನಿಂದ ಹಾವು ಹೊಡೆಯಬಹುದೋ ಅಥವಾ ಯಾರಾದರೂ ಹಾವು ಹಿಡಿಯುವವನನ್ನು ಕರೆದು ಹಿಡಿಸಬಹುದೋ, ಗಂಡಸರೂ ಅಷ್ಟೇ ಮಾಡಬಹುದು! ಇಲ್ಲಿ ಬಲು ಮುಖ್ಯವಾಗುವುದು “ನಾನು ಗಂಡಸು’ ಎಂಬ ಆತ್ಮವಿಶ್ವಾಸ. ನೋಡಲು ಹೇಗೇ ಇರಲಿ, ಏನೇ ಸಾಮರ್ಥ್ಯ ಇಲ್ಲದಿರಲಿ, ಯಾವ ಓದೂ ಇಲ್ಲದಿರಲಿ, ಗಂಡಸಾದ ಕೂಡಲೇ “ಧೈರ್ಯ’ ತಲೆದೋರುತ್ತದೆ ಎಂಬ ಅಂಶ. “ನಾನು ಗಂಡಸಾಗಿದ್ದರೆ’ ಎಂಬ ಭಾವನೆ ಮೂಡುವುದು ಸುಖ-ಸೌಲಭ್ಯ ಹೊಂದಿದವನು ಎಂಬ ಹಿನ್ನೆಲೆಯಿಂದ. ದೃಷ್ಟಿ ವಿಶಾಲವಾಗಿ ನಮ್ಮ ಸುತ್ತಮುತ್ತಲ ಪ್ರಪಂಚಕ್ಕೆ ತೆರೆದುಕೊಂಡರೆ ಯಾವ ವ್ಯಕ್ತಿಗೂ ಹೆಂಗಸೆಂಬ ಕೀಳರಿಮೆ, ಗಂಡಸೆಂಬ ಮೇಲರಿಮೆ ಮೂಡಲು ಸಾಧ್ಯವಿಲ್ಲ. ಹಾಗೆಯೇ “ಮಹಿಳೆಯರನ್ನು ಶೋಷಿಸುವ, ಅತ್ಯಾಚಾರ ಮಾಡುವ, ಜೂಜಾಡುವ-ಕುಡಿಯುವ ಕೆಟ್ಟ ಪುರುಷನಾಗುವ ಬದಲು “ನಾವು ಹೆಂಗಸರು’ ಎಂಬುದು ಈ ಕವಿತೆ ನಮಗೆ ನೀಡುವ ಹಲವು ಸಂದೇಶಗಳಲ್ಲಿ ಒಂದು ಎಂದು ನನಗನ್ನಿಸುತ್ತದೆ.
ಪ್ರತಿಭಾ ನಂದಕುಮಾರ್‌ರವರದ್ದೇ ಆದ ಇನ್ನೊಂದು ಜನಪ್ರಿಯ ಕವಿತೆ ಅಡುಗೆ ಮಾಡುವುದೆಂದರೆ. ಇದರಲ್ಲಿ ಮಳೆ ತನ್ನ ಯಾರ್ಯಾರ ಮೇಲಿನ ಆಕ್ರೋಶ, ಸಿಟ್ಟು-ದ್ವೇಷ-ದುಃಖ ಎಲ್ಲವನ್ನೂ “ಸಿಪ್ಪೆ ಸುಲಿದು ಕತ್ತರಿಸಿ, ಜಜ್ಜಿ , ಮಸೆದು, ಗಸಗಸನೆ ಕಡೆದು’ ಎತ್ತಿ ತಟ್ಟೆಗೆ ಹಾಕುತ್ತಾಳೆ. ತಿನ್ನುವವರು “ರುಚಿ, ರುಚಿ’ ಎಂದು ತಿನ್ನುತ್ತಾರೆ! ಮಹಿಳೆಯರಿಗೆ ಮಹಿಳೆಯರ ಮೇಲೆ ಸಹಾನುಭೂತಿ (ಛಿಞಟಚಠಿಜy) ಹುಟ್ಟಿಸುವ, ಪುರುಷರಿಗೆ “ಅಡುಗೆ ಎಂದರೆ ಇಷ್ಟು ಕಷ್ಟವೇ?’ ಎಂದು ಅಚ್ಚರಿ ಮೂಡಿಸುವ ಕವಿತೆ ಇದು. ನನ್ನ ಬಳಿ ಹಲವರು ಪ್ರತಿಬಾರಿ ಉಪನ್ಯಾಸ ಪ್ರಾತ್ಯಕ್ಷಿಕೆಯಲ್ಲಿ ಇದನ್ನು ಮಾಡಿದ ನಂತರ ಬಂದು ಕೇಳುತ್ತಾರೆ “”ಏನು ಮೇಡಂ? ನಿಮ್ಮನೆಗೆ ಊಟಕ್ಕೇ ಅಂತ ಬಂದರೆ ನೀವು ಹೀಗೇ ಅಡಿಗೆ ಮಾಡಿ ಹಾಕೋದಾ?” ಅದಕ್ಕೆ ನಾನೆನ್ನುತ್ತೇನೆ “”ನಾನೊಬ್ಬಳೇ ಅಲ್ಲ, ಎಲ್ಲ ಮಹಿಳೆಯರೂ ಅಷ್ಟೆ. ಅಡಿಗೆ ಮನೆಗೇ ಮಾತ್ರ ಸೀಮಿತಗೊಳಿಸಿ, ಅವಳು ಮಾಡುವ ಅಡಿಗೆಗೆ ಯಾವ ಬೆಲೆಯನ್ನೂ ನೀಡದೆ ಸುಮ್ಮನೇ ತಿಂದು ಮಾಯವಾದ್ರೆ ಎಲ್ಲರೂ ಇದನ್ನೇ ಮಾಡೋದು”. ಇದು ಈ ನೃತ್ಯದಿಂದಾದ ಪರಿಣಾಮ !
“ಕಾವ್ಯಕನ್ನಿಕೆ’ ಎಂದ ಮೇಲೆ “ಅಮ್ಮ’ನನ್ನು ಬಿಟ್ಟುಬಿಟ್ಟರೆ ಹೇಗೆ? ಕಾವ್ಯಕನ್ನಿಕೆಯ ಕವಿತೆಗಳಲ್ಲಿ ಎಲ್ಲ ಕಣ್ಣಿನಲ್ಲಿಯೂ ನೀರು ತರಿಸುವಂತೆ ಮಾಡುವ, ಪುರುಷರು-ಮಹಿಳೆಯರು- ಮಕ್ಕಳು ಎಲ್ಲರನ್ನೂ ತಟ್ಟುವ ಸಂವೇದನಾಶೀಲ ಕತೆ ರೂಪಾ ಹಾಸನ ಅವರ ಅಮ್ಮನಾಗುವುದೆಂದರೆ, “ಬೆಣ್ಣೆ ಕಾಯಿಸಿ ತುಪ್ಪ ಮಾಡುವಂಥ’ ಸಾಮಾನ್ಯ ಅಡಿಗೆ ಮನೆಯ ಕೆಲಸಕ್ಕೂ ಅಮ್ಮನಾಗುವುದಕ್ಕೂ ಇರುವ ಸಾಮ್ಯದ ಬಗೆಗಿನ ಕವಿತೆಯಿದು. ಬೆಣ್ಣೆ ಕಾದು ತುಪ್ಪವಾಗುವ ಹದಕ್ಕಾಗಿ, ಅದರ ಸದ್ದಿಗಾಗಿ ಧ್ಯಾನಿಸಿ ಕಾಯಬೇಕು. ಆಗ ಮಾತ್ರ ಹದವಾದ-ರುಚಿಯಾದ ತುಪ್ಪ. ಅಮ್ಮನಾಗುವುದೆಂದರೆ ಇದೇ ಎನ್ನುತ್ತದೆ ಕವಿತೆ. ಇಲ್ಲಿ ಪ್ರತಿಬಾರಿ ಮಾಡುತ್ತ ಮಾಡುತ್ತ ಅರ್ಥ ವಿಸ್ತಾರವಾಗತೊಡಗುತ್ತದೆ. “ಅಮ್ಮನಾಗುವುದೆಂದರೆ’ ಎನ್ನುವುದು ಸರಿಯಾದ ಸಮಯದಲ್ಲಿ ಬಸಿರಾಗುವುದರಿಂದ ಆರಂಭಿಸಿ, ಹಡೆಯುವ ಸುಖ-ದುಃಖ, ಮಕ್ಕಳಿಗೆ ಅಮ್ಮನಾಗುವ ಸಂತಸ-ಕಷ್ಟ , ಹದಿಹರೆಯದ ಮಕ್ಕಳನ್ನು ನಿಭಾಯಿಸುವ ಜವಾಬ್ದಾರಿ-ಜಾಣ್ಮೆ ಇಂಥ ಭಾವಗಳು ಹೊಳೆಯುತ್ತಾ, ಹರಿಯುತ್ತಾ ಹೋಗುತ್ತದೆ.
ಒಬ್ಬ ಮನೋವೈದ್ಯೆಯಾಗಿ, ಮಾನವತಾವಾದಿಯಾಗಿ ನಾನು ವ್ಯಕ್ತಿಯಾಗಿ ಗಂಡು-ಹೆಣ್ಣು ಇಬ್ಬರನ್ನೂ ಗೌರವಿಸುವುದು ಮುಖ್ಯವೆಂದು ಭಾವಿಸುತ್ತೇನೆ. ನನ್ನ ವೃತ್ತಿಯಲ್ಲಿ ಹಲವು ಸ್ತ್ರೀವಾದಿಗಳಾದ ಪುರುಷರನ್ನೂ, ಸ್ತ್ರೀವಿರೋಧಿಗಳಾದ ಮಹಿಳೆಯರನ್ನೂ ನೋಡಿ ಬಲ್ಲೆ. ಹೀಗಿರುವಾಗ ನನ್ನ ಮಟ್ಟಿಗೆ ಸ್ತ್ರೀಪರವಾದ ಸಂವೇದನೆಗಳ-ಸಮಸ್ಯೆಗಳ ಅರಿವು ಸ್ತ್ರೀ-ಪುರುಷರಿಬ್ಬರಿಗೂ ಬೇಕು ಎಂಬುದು ನಿರ್ವಿವಾದ. “ಕಾವ್ಯಕನ್ನಿಕೆ’ಯ ಆಶಯವನ್ನು ಸಮಗ್ರವಾಗಿ ಕಟ್ಟಿಕೊಡುವ ಕವಿತೆ ಕವಯತ್ರಿ ವಿಜಯಾ ಶ್ರೀಧರ್‌ರವರ ಸೂರ್ಯಮುಖೀ. ಇಲ್ಲಿ ಅಂತರ್ಮುಖೀಯಾಗಿ, ಅಧೋಮುಖೀಯಾಗಿರುವ ಸಖೀಗೆ ಇನ್ನೊಬ್ಬ ಗೆಳತಿ ಕೇಳುತ್ತಾಳೆ “”ಬಾಲ್ಯದಲ್ಲಿ ಅಪ್ಪನಾಸರೆ, ತಾರುಣ್ಯದಲ್ಲಿ ಪತಿಯಾಸರೆ, ಮುದಿಯಾದಾಗ ಮಗನಾಸರೆ ಎಂದು ಬರೆದ ಗಂಡಿಗೆ, ಬಾಲ್ಯದಲ್ಲಿ ಅಮ್ಮನಾಸರೆ, ತಾರುಣ್ಯದಲ್ಲಿ ಮಡದಿಯಾಸರೆ, ಮುದಿಯಾದಾಗ ಮಗಳಾಸರೆ ಬೇಡವೇನೆ ಕೇಳೇ ಸಖೀ!”. ಹಾಗೆಯೇ ಹೇಳುತ್ತಾಳೆ “ಹೆಣ್ಣು ಗಂಡಿಗಾಸರೆ, ಗಂಡು ಹೆಣ್ಣಿಗಾಸರೆ, ಎಲ್ಲರಿಗೂ ಅರಿವೇ ಆಸರೆ ಆಗದಿದ್ದರೆ ಎಲ್ಲವೂ ಸೆರೆ! ಹಾಗಾಗಿಯೇ “ಅರಿವಿಗೆ ಕಣ್ಣು ತೆರೆವ ಸೂರ್ಯಮುಖೀಯಾಗು’ ಎಂದು ಕರೆಯಿಡುತ್ತದೆ ಕವಿತೆ.
ಕೇವಲ ಪ್ರಾತಿನಿಧಿಕವಾಗಿಯೇ ಆಯ್ದಿದ್ದರೂ ಕಾವ್ಯಕನ್ನಿಕೆಯಲ್ಲಿ ಮಾಡುವ ಕವಿತೆಗಳು ನನಗೆ ಒಂದು ಸತ್ಯದ ದರ್ಶನ ಮಾಡಿಸಿವೆ. ಅದೆಂದರೆ ಪ್ರತಿಯೊಂದು ಕವಿತೆಯೂ ಒಂದು ಚಿತ್ರದಂತೆ. ತೂಗು ಹಾಕಿರುವ ಚಿತ್ರಪಟವೊಂದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದ ಭಾವನೆಗಳನ್ನು ಮೂಡಿಸಬಹುದೋ ಅಥವಾ ಒಬ್ಬ ವ್ಯಕ್ತಿಯಲ್ಲಿಯೇ ಆತನ ಮನಸ್ಸಿನ ಸ್ಥಿತಿಗೆ ಅನುಗುಣವಾಗಿ ಭಿನ್ನ ಭಿನ್ನ ಭಾವಗಳನ್ನು ಹುಟ್ಟಿಸಬಹುದೋ ಹಾಗೆಯೇ ಪ್ರತಿಯೊಂದು ಕವಿತೆಯೂ ಮನಸ್ಸನ್ನು ಪ್ರಚೋದಿಸಬಹುದು. ಮನಸ್ಸಿನ ದುಃಖ ಹೊರ ಬೀಳುವ ದಾರಿ, ಸ್ಫೂರ್ತಿ ಕೊಡುವ ಪ್ರಚೋದನೆ, ಸಹಾಯ ಬೇಡುವ ಧೈರ್ಯ, ಸಹಾನುಭೂತಿ ಬೆಳೆಸಿಕೊಳ್ಳುವ ಪ್ರವೃತ್ತಿ, ನಗುವ ಮೂಲಕ ಕಷ್ಟವನ್ನು ಎದುರಿಸುವ -ಸಹನೀಯಗೊಳಿಸಿಕೊಳ್ಳುವ ಮನೋಭಾವ ಈ ಎಲ್ಲವನ್ನೂ “ಕಾವ್ಯಕನ್ನಿಕೆ’ಯ ಮೂಲಕ ನಾನು ಪ್ರೇಕ್ಷಕರಲ್ಲಿ ಪ್ರೇರೇಪಿಸಿದ್ದೇನೆ, ನಾನೂ ಅನುಭವಿಸಿದ್ದೇನೆ. ನೃತ್ಯ-ಕಾವ್ಯಗಳು ಜೊತೆಗೂಡಿ ಸಾಮಾಜಿಕ ಸ್ವಾಸ್ಥ್ಯವನ್ನು ತಮ್ಮ ಗುರಿಯಾಗಿಸಿಕೊಳ್ಳುವ ದಾರಿ ಹೀಗಿರಬಹುದೇನೋ ಎಂಬ ಚಿಂತನೆ ನನ್ನದು. ವಿಶ್ವ ನೃತ್ಯ ದಿನ ಸಮಾಜದೊಂದಿಗೆ, ಇತರ ಕಲೆಗಳೊಂದಿಗೆ, ಆರೋಗ್ಯದೊಂದಿಗೆ ಬೆಸೆದು ನೃತ್ಯ-ಪ್ರಯೋಗಗಳನ್ನು ನಡೆಸಲು ಪ್ರೇರಣೆ ನೀಡಲಿ.
ಕೆ. ಎಸ್. ಪವಿತ್ರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.