ನಾಳೆ ಎಂಬ ಹೊಸಹರ್ಷದ ಮೊದಲ ದಿನ
Team Udayavani, Dec 31, 2017, 6:55 AM IST
ಕಾರ್ಯಕ್ರಮ
ಸಂಜೆ ಆರೂವರೆಗೆ ಕಾರ್ಯಕ್ರಮ, ಆರೂಕಾಲರ ಹಾಗೆ ಬಂದರೆ ಸಾಕು ಎಂದಿದ್ದರು. ಆದರೂ ಈ ಹೊಸವರ್ಷ ಎಂಬ ಇಸಮಿಗೆ ಮಾಡಲು ಬೇರೆ ಕೆಲಸ ಇರಲಿಲ್ಲವೋ ಏನೋ ಅದು ಆರಕ್ಕೇ ಬಂದು ಬಿಟ್ಟಿತು. ಬಂದರೆ ಇಲ್ಲಿ ಏನೂ ಅಂದರೆ ಏನೂ ಇರಲಿಲ್ಲ. ಗಾಳಿಯೊಂದು ಹಾರಿ ಬಂದು ಮರದ ಮೇಲೆ ಕುಳಿತುಕೊಂಡು ಬಾಯಲಿದ್ದ ಮಾತನೊಂದ
ತಿನ್ನತೊಡಗಿತು. ನಿರ್ಜನ ವೇದಿಕೆ. ಮೇಜಿನ ಮೇಲೆ ಹೊದೆಸಿದ್ದ ಬಣ್ಣ ಬಣ್ಣದ ಪಟ್ಟೆ ಪಟ್ಟೆ ಜಮಖಾನೆಯ ಮೇಲೆ ಹೋದ ವಾರವಷ್ಟೆ ಮಹಿಳಾ ಮಂಡಳದಲ್ಲಿ ಬಾಯಕ್ಕ ನ ತಂಗಿಯ ಮಗಳು ದೀನಳಾಗಿ ಕೂತು ಎರಡು ಬಿಗಿ ಜಡೆ ಅಲ್ಲಾಡಿಸುತ್ತ
ಪೂಜಿಸಲೆಂದೆ ಹೂಗಳ ತಂದೆ ಹಾಡಿದ್ದಳು. ಅವಳಿಗೆ ಬಹುಮಾನ ಸಿಗಲಿಲ್ಲ ಎಂದು ರಾಶಿ ಜನರಿಗೆ ಬೇಜಾರಾಗಿತ್ತು
ರೇಶನ್ ಅಂಗಡಿಯಲ್ಲಿ, ಚಂದ್ರಶಾಲೆಯಲ್ಲಿ ಎಲ್ಲ ಕಡೆ ಸಿಕ್ಕವರೂ ಅದನ್ನೇ ಹೇಳಿ ಹೇಳಿ ಬಾಯಕ್ಕನಿಗೆ ಬಹುಮಾನ ಬರದಿದ್ದುದರ ಬಗ್ಗೆಯೇ ಅಭಿಮಾನ ಉಕ್ಕತೊಡಗಿತು. ಮೇಜಿನ ನಡುವಿನ ಆ ಹೂದಾನಿ, ಹಿಂದೊಮ್ಮೆ ವಿಜ್ಞಾನವು ವರವೋ ಶಾಪವೋ ಎಂಬ ಚರ್ಚಾಸ್ಪರ್ಧೆಯ ದಿನ ಒಬ್ಬರು ಜೋರಾಗಿ ಮೇಜು ಕುಟ್ಟಿದಾಗ ಅಡ್ಡ ಬಿದ್ದು ಸಣ್ಣ ಚೆಕ್ಕೆ ಹಾರಿ ಹೋಗಿ, ಅದರ ಒಂದು ಬಿಳಿ ಎಸಳು ಬಾಯಿ ಮೊಂಡಾಗಿದೆ. ಅದು ಸಭಿಕರಿಗೆ ತೋರದಂತೆ ತಿರುಗಿಸಿ ಇಟ್ಟಿದ್ದಾರೆ. ಅದರಲ್ಲಿ ತುಸು ಜಾಸ್ತಿಯೇ ಕಿಸಿದುಕೊಂಡ ದಾಸಾಳಕ್ಕೆ ನಿಜಕ್ಕೂ ಹೇಳಿಕೊಳ್ಳುವಂಥ ಖುಶಿಯಿಲ್ಲ. ಏಕೆಂದರೆ, ಅದಕ್ಕೆ ನೀರು ಹಾಕಿ ದಿನಾಲೂ ಮುಟ್ಟಿ ಮಾತಾಡಿಸುತ್ತಿದ್ದ ಬೇಬಿ ಯಾಕೋ ಈಚೆ ನಗುತ್ತಲೇ ಇಲ್ಲ.
ನಿನ್ನ ಕ್ಲಾಸ್‌ಮೇಟುಗಳೆಲ್ಲ ನೋಡು ಎಷ್ಟು ಮುಂದೆ ಹೋದರು ನೀನು ಮಾತ್ರ ಹೀಗೆ ಎಂದು ತಾಯಿ ಜರೆದು ಜರೆದು,
ಗೆಳತಿಯರು ಬಂದಾಗ “ಬೇಬಿಗೆ ಅಭ್ಯಾಸ ಉಂಟು, ಬರುವುದಿಲ್ಲ’ ಎಂದು ಬಾಗಿಲಲ್ಲೆ ನಿಂತು ಸುಳ್ಳು ಹೇಳಿ ಅವರೆಲ್ಲರನ್ನು
ಸಾಗಹಾಕಿದಾಗ ಬೇಬಿ ಹಿಂದಿನ ಬಾಗಿಲಿಂದ ನೈಟಿಯಲ್ಲೆ ಮಾಯವಾದಳು. ಅವಳ ಅಪ್ಪನಿಗೆ ಸ್ಟಾಂಡಿನಲ್ಲಿ ಯಾವುದೇ
ಬಸ್ಸು ರಿವರ್ಸಿನಲ್ಲಿ ಬರುತ್ತಿದ್ದರೂ ಅದರಿಂದ ಬೇಬಿ ಇಳಿದು ಬರುತ್ತಾಳೆ ಎಂಬಂತೆ ಬಾಗಿಲಿಗೆ ಧಾವಿಸುತ್ತಾನೆ, ಇಡೀ
ಬಸ್ಸು ಖಾಲಿಯಾದರೂ ಮಿಕಿಮಿಕಿ ನೋಡುತ್ತ ನಿಲ್ಲುತ್ತಾನೆ.
ವೇದಿಕೆಯೆದುರು ಸಾಲಾಗಿ ಇಡಲಾದ ಕೆನೆ ಬಣ್ಣದ ಪ್ಲಾಸ್ಟಿಕ್ ಕುರ್ಚಿಗಳು ಇನ್ನೂ ಮೃದುವಾಗಿವೆ ಬಿಸಿಲಿಗೆ ಹಣ್ಣಾಗಿ. ಕೂತರೆ ಅವುಗಳ ಕಾಲುಗಳು ಸಂಧಿವಾತವಾದಂತೆ ಕಂಪಿಸಿ ಚೊಟ್ಟೆಯಾಗಿ ಮಡಿಸಿ, ಕೂತ ನಾಮಾಂಕಿತರನ್ನು
ಧರೆಗುರುಳಿಸಬಹುದು. ಅವುಗಳನ್ನು ಮಹಾಲಸಾ ಟೆಂಪೋದಲ್ಲಿ ತರುವಾಗ ಒಂದರ ಮೇಲೊಂದರ ಮೇಲೊಂದರ
ಮೇಲೊಂದು ಇಟ್ಟ ಕುರ್ಚಿಗಳ ಕುತುಬ್‌ಮಿನಾರ್‌ನ ಮೇಲೆ ಇಲೆಕ್ಟ್ರಿಶನ್ ಮಣಿಭದ್ರ ರಾವಣನ ಸಭೆಯಲ್ಲಿ ಸ್ವಂತ ಬಾಲದ
ಸುರುಳಿ ಸಿಂಹಾಸನದ ಮೇಲೆ ಕೂತ ಆಂಜನೇಯನಂತೆ ವಿರಾಜಮಾನನಾಗಿದ್ದನು. ಬೆಂಗಳೂರಿಗೆ ಬಾ ಬಾ ಊಬರ್
ಓಲಾ ನಡೆಸು ಎಂದು ಗೆಳೆಯರು ಕರೆದರೂ ಇಲ್ಲಾ ಹರ್ಗಿಸ್ ಇಲ್ಲಾ , ಅಲ್ಲಿ ಸೌಂದಾಳೆ ಮಡ್ಲೆ ಇತ್ಯಾದಿ ಪ್ರಾಣದೇವರಂಥ ಮೀನು ಸಿಗುವುದಿಲ್ಲಾ , ಅಲ್ಲಿ ಅಘನಾಶಿನಿ ಇಲ್ಲಾ , ಅಲ್ಲಿ ಸಮುದ್ರ ಇಲ್ಲಾ ಅದೆಂಥ ಬೊಡ್ಡು ಊರು ಎಂದು ಪಟ್ಟು ಹಿಡಿದು ಇಲ್ಲೇ ಉಳಿದವನು, ಬಾಯಲ್ಲಿ ಟೆಸ್ಟರ್ ಅಡ್ಡ ಕಚ್ಚಿ ವಿದ್ಯುತ್ ತಂತಿಗಳ ನಗ್ನ ತುದಿಯನ್ನು ಆರಾಮ್‌ಶೀರ್ ಮುಟ್ಟಿ ವೇದಿಕೆಗೆ ಚಕ್ ಪಕ್ ಚಕ್ ಪಕ್ ಚಕ್ ಪಕಾ ಚಕ್ ಅಲಂಕಾರ ಮಾಡುವಾಗ ಪ್ಯಾಂಟಿನ ಜೇಬಿನ ಮೊಬೈಲು ಪಾನೀದಾ ಪಾನೀದಾ ಎಂದು ಗರಗುಡುತ್ತ ಬಡಕೊಂಡರೂ ತೆಗೆಯುವುದಿಲ್ಲ. ಏಕೆಂದರೆ ಗೊತ್ತುಂಟು ಅದು ಅವಳ ಕರೆ “ನೀನು ಬೆಂಗಳೂರಿಗೆ ಹೋಗಿ ಸೆಟಲ್ ಆಗುವವನಿದ್ದರೆ ಮಾತ್ರ ನನ್ನ ಪ್ರೇಮ ಶಾಶ್ವತ’ ಎನ್ನುತ್ತಾಳೆ. ವೀಡಿಯೋ ಕಾಲ್ ಬೇರೆ ಅದು ಅದರಲ್ಲಿ ಬೇರೆಯೇ ಕಾಣುತ್ತಾಳೆ ಹೆದರಿಸುವವಳಂತೆ ಆಸ್ಪತ್ರೆಯ ಬೆಡ್ ಮೇಲೆ ಕೂತವಳಂತೆ. ಮುಖಕ್ಕೂ ಮಾತಿಗೂ ತಾಳೆ ಆಗುವುದಿಲ್ಲ. ಕಾರ್ಯಕ್ರಮ ಮಧ್ಯರಾತ್ರಿಯ ನಂತರವೂ ಮುಂದುವರೆಯುವುದರಿಂದ ಕರೆಂಟು ಹೋಗದಂತೆ ಉಸ್ತುವಾರಿ ವಹಿಸಲಾಗಿದೆ. ಆದರೆ ಒಂದು ವಿನಂತಿ ಇದೆ. ದಯವಿಟ್ಟು ಸ್ಪೀಕರುಗಳ ಅಬ್ಬರ ಕಡಿಮೆ ಮಾಡಿ. ಲಕ್ಷಾಂತರ ಕೊಟ್ಟು ಕಾರವಾರದಿಂದ ತರಿಸಿದ್ದೀರಿ ಅಂತ ದೈತ್ಯರಂತೆ ಅವು ಊಳಿಡಬೇಕಾಗಿಲ್ಲ. ಏಕೆಂದರೆ ಈ ಇಡೀ ಊರಿನ ಹೆಚ್ಚಿನ ಮನೆಗಳ ತುಂಬ ಹಿರಿಯ ನಾಗರಿಕರೇ ಇದ್ದಾರೆ. ಆಸ್ಪತ್ರೆಗಳಲ್ಲೂ ಅವರೇ ಇದ್ದಾರೆ. ನೋಡಿಕೊಳ್ಳಲು ಬಂದುಳಿದು ಕೊಂಡವರೂ ವಯಸ್ಸಾದವರೇ. ಯಾವ ಮನೆಯ ಹಿತ್ತಿಲ ಒಣಗು ತಂತಿಯ ಮೇಲೂ ಬಣ್ಣ ಬಣ್ಣದ ಯುವ ಉಡುಪುಗಳು ಕಾಣದೇ ದಶಕಗಳಾಗಿವೆ. ವೃದ್ಧಾಶ್ರಮ ಅಂತ ಬೇರೆ ಮಾಡಬೇಕಾಗೇ ಇಲ್ಲ.
ಊರ ತುಂಬ ಟೆಂಪೋ ಟ್ರಾವಲರ್, ಟೂರಿಸ್ಟ ವ್ಯಾನುಗಳು, ಕಪ್ಪು ಕನ್ನಡಕದ ದೊಡ್ಡ ಕುಂಡೆಯ ಕಾರುಗಳು, ಸೀಟು ಹಿಂದೆ ಜರುಗಿಸಿ ಈಗಷ್ಟೆ ನಿದ್ದೆಗೆ ಜಾರಿದ ಚಾಲಕರು. ಕ್ರಿಸ್‌ಮಸ್ ರಜೆಯಾದ್ದರಿಂದ ಹಿಂದೆ ಮುಂದೆ ನೋಡದೆ ಕಂಡ ಕಂಡಲ್ಲಿ ನಿಂತುಬಿಟ್ಟ ಒಪ್ಪಂದದ ಮೇಲಿನ ಎಷ್ಟೆಲ್ಲ ಶಾಲಾ ಪ್ರವಾಸದ ಬಸ್ಸುಗಳು.
ಹಿತ್ತಲಲ್ಲಿ ನಡುಗು ಕೈಗಳಲ್ಲಿ ಬೆತ್ತವ ಚಬ್ಬೆ ಹಿಡಿದು ಕೊಕ್ಕೆಯಿಂದ ಕಣಗಿಲೆಯ ಕತ್ತು ಹಿಡಿಯಲು ಮತ್ತೆ ಮತ್ತೆ ಪ್ರಯತ್ನಿಸುವ
ತುಳಸಜ್ಜಿಗೆ ಹಿಗ್ಗು… ಊರ ತುಂಬ ದಂಡು ದಂಡಾಗಿ ಹಕ್ಕಿಗಳಂತೆ ಚಲಿಸುತ್ತಿರುವ ಪ್ರವಾಸಿ ವಿದ್ಯಾರ್ಥಿಗಳ ಕಂಡು ಎಲ್ಲಿ ನೋಡಿದರಲ್ಲಿ ನಾನಾ ಬಣ್ಣದ ನಮ್‌ನಮೂನೆಯ ಸಮವಸ್ತ್ರಗಳು, ರಿಬ್ಬನ್ನುಗಳು, ಹೊಳಪುಗಣ್ಣಿನ ಮಕ್ಕಳು. ಆ ಕಂಗಳ ತುಂಬ ಮಣಿಸರಗಳ ಅಂಗಡಿ ಶಂಖ, ಚಿಪ್ಪು , ಸಾಫ್ಟಿ , ಕಾಲಪುರುಷನ ಉದುರಿಬಿದ್ದ ಹಲ್ಲುಗಳಂಥ ರಾಶಿ ರಾಶಿ ಫಳಫಳ ಕಾನುì, ಅಲೆ ಅಲೆಯಾಗಿ ಕರೆವ ಮುಗಿಯದ ಸಮುದ್ರ. ಊರಿನ ಅಜ್ಜ ಅಜ್ಜಿಯರಿಗೆ ಅಮ್ಮ ಅಪ್ಪರಿಗೆ ದೊಡ್ಡಪ್ಪ ಚಿಕ್ಕಮ್ಮರಿಗೆ ಮಾಮ ಮಾಮಿಯರಿಗೆ ವಿಚಿತ್ರ ಹಿಗ್ಗು ತಮ್ಮದೇ ಮಕ್ಕಳು ಮರಿಮಕ್ಕಳು ಶಾಲೆ ಮುಗಿಸಿ ಮರಳಿ ಊರಿಗೆ ಕೇರಿಗೆ
ಮನೆಗೆ ಕೋಣೆಗೆ ಮಡಿಲಿಗೆ ಬಂದಂತೆ. ಮತ್ತೆ ಮತ್ತೆ ಹೇಳುತ್ತಾರೆ ಬನ್ನಿ ಬನ್ನಿ ಟೆರೇಸ್ ಮೇಲೆ ಖಾಲಿ ಉಂಟು ಗಾಳಿ ಉಂಟು,
ಬಚ್ಚಲುಂಟು ನೀರುಂಟು ಬಟ್ಟೆ ಒಗೆಯುವ ಕಲ್ಲುಂಟು, ಇಲ್ಲೇ ಉಳಿದುಕೊಳ್ಳಿ , ಇಲ್ಲಿಂದ ಎಲ್ಲ ಸಮೀಪ, ಬೇಕಿದ್ರೆ ಲಗೇಜು ಇಲ್ಲಿಡಿ. ಕೂಗುತ್ತಾರೆ-ಸಮುದ್ರ ಎಚ್ಚರ… ಮುಂದೆ ಹೋಗಬೇಡಿ… ಅಲೆಗಳು ಸೆಳೆದೊಯ್ಯುತ್ತಾವೋ… ಹುಷಾರು… ಹುಷಾರು…
– ಜಯಂತ ಕಾಯ್ಕಿಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಪಾಟ್ನಾ-ಗುಜರಾತ್ ಟೈ
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.